ಕೆಲವು ನಿರ್ದಿಷ್ಟ ವಿಭಾಗಗಳ ಫಲಾನುಭವಿಗಳಿಗೆ ನಗದು ವರ್ಗಾವಣೆ ಮಾಡುವ ಯೋಜನೆಗಳನ್ನು ರದ್ದುಗೊಳಿಸಬೇಕೆಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಇತ್ತೀಚೆಗೆ ಹೇಳಿರುವುದಕ್ಕೆ ಸೂಕ್ತವಾಗಿಯೇ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗದು ಅನುಕೂಲ ಕೊಡುವ ಬದಲು ಸರ್ಕಾರಗಳು ಕಾಯಂ ಆಸ್ತಿ ಸೃಷ್ಟಿಗೆ ಗಮನ ಕೇಂದ್ರೀಕರಿಸಬೇಕೆಂದು ಸಿಜೆಐ ಅಭಿಪ್ರಾಯ ಪಟ್ಟಿದ್ದಾರೆ. ಸಮಾಜವಾದಿ ಸರಕಾರಗಳು ಜನ ಕಲ್ಯಾಣಕ್ಕೆ ಕೈಗೊಂಡ ಉಪಕ್ರಮಗಳನ್ನು ಎದುರಿಸಲೆಂದೇ ಬಂಡವಾಳಶಾಹಿ ಪ್ರಜಾಪ್ರಭುತ್ವಗಳ ಪ್ರತಿಕ್ರಿಯೆಯಾಗಿ ಯುದ್ಧೋತ್ತರ ಕಾಲದಲ್ಲಿ ಕಲ್ಯಾಣ ರಾಜ್ಯದ ಚಿಂತನೆ ಹುಟ್ಟಿಕೊಂಡಿತು ಎನ್ನುವುದನ್ನು ನೆನಪಿಸಿ ಕೊಳ್ಳಬಹುದಾಗಿದೆ. ಆಧುನಿಕ ಪ್ರಜಾಪ್ರಭುತ್ವಗಳು, ಅದರಲ್ಲೂ ವಿಶೇಷವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕಲ್ಯಾಣ ರಾಜ್ಯದ ಪರಿಕಲ್ಪನೆಯ ಸಾರವೇ ಇದಾಗಿದೆ.
ಟಾರ್ಗೆಟೆಡ್ ನಗದು ವರ್ಗಾವಣೆಗಳು ಆ ಯೋಜನೆಗಳ ಫಲವಾಗಿಯೇ ವಿಕಾಸಗೊಂಡಿದ್ದಾಗಿದೆ. ಕೆಲವು ಸಂದರ್ಭಗಳಲ್ಲಿ ಅದು ಕೆಲವು ವಿರೂಪಗಳ ಸ್ವರೂಪವನ್ನು ಪಡೆದುಕೊಂಡಿರುವುದು ಹೌದು. ಆದರೆ, ಇಂಥ ನಗದು ವರ್ಗಾವಣೆಗಳಿಗೆ ಸಾರ್ವತ್ರಿಕ ಅಂಗೀಕಾರ ದೊರೆತಿದ್ದರೂ ಹೀಗಾಗಿದೆ. ಯುದ್ಧೋತ್ತರ ಪ್ರಜಾಪ್ರಭುತ್ವಗಳಲ್ಲಿ ಇಂಥ ನಗದು ಅನುದಾನಗಳು ಬಜೆಟ್ ಪ್ರಕ್ರಿಯೆಯ ಅವಿಭಾಜ್ಯ ಭಾಗ್ಯ ಎಂಬುದನ್ನು ಅಂಗೀಕರಿಸಲಾಗಿದೆ. ಬಂಡವಾಳಶಾಹಿ ಪ್ರಭುತ್ವಗಳ ಸಾಂವಿಧಾನಿಕ ಯೋಜನೆಗಳಲ್ಲಿ ಮೂರು ಅಂಗಗಳಾದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ನಡುವಿನ ಅಧಿಕಾರಗಳ ಪ್ರತ್ಯೇಕತೆಯು ಸ್ಪಷ್ಟವಾಗಿದೆ. ಅಧಿಕಾರಗಳ ನಿಖರ ಪ್ರತ್ಯೇಕತೆಯು ಸಾಂವಿಧಾನಿಕ ವ್ಯವಸ್ಥೆಯ ಅತ್ಯಗತ್ಯ ವಿಶೇಷಾಧಿಕಾರವಾಗಿದೆ. ಯಾಕೆಂದರೆ ಈ ಅಂಗಗಳು ತಡೆ ಮತ್ತು ಸಮತೋಲನದ (ಚೆಕ್ಸ್ ಆ್ಯಂಡ್ ಬ್ಯಾಲೆನ್ಸ್) ತತ್ವವನ್ನು ಖಾತರಿಪಡಿಸುತ್ತದೆ.
ಎರಡನೇ ವಿಶ್ವ ಯುದ್ಧದ ಹಿನ್ನೆಲೆಯಲ್ಲಿ ಬರೆಯಲಾದ ಭಾರತೀಯ ಸಂವಿಧಾನದಲ್ಲಿ ಬಜೆಟ್ ರೂಪಿಸುವುದು ಶಾಸಕಾಂಗದ ವಿಶೇಷ (ಎಕ್ಸ್ ಕ್ಲ್ಯೂಸಿವ್) ಅಧಿಕಾರವಾಗಿದೆ. ರಾಜಕೀಯ ಕಾರ್ಯಾಂಗ ಪ್ರಸ್ತಾಪಿಸಿರುವಂತೆ ಅನುಮೋದನೆಗೆ ಒಳಪಟ್ಟು ಅದು ನಡೆಯುತ್ತದೆ. ಚುನಾವಣೆ ಪ್ರಕ್ರಿಯೆಯ ಸಂದರ್ಭದಲ್ಲಿ ಇಂಥ ಭವಿಷ್ಯದ ಬಜೆಟ್ ಪ್ರಸ್ತಾಪನೆಗಳ ವಿಶಾಲ ರೂಪರೇಷೆ ಒದಗಿಸುವುದು ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಆಳಗೊಳಿಸುತ್ತದೆ ಮತ್ತು ಸಮೃದ್ಧಗೊಳಿಸುತ್ತದೆ ಎನ್ನುವುದನ್ನು ಹೇಳದಿರಲಾಗದು. ಆದ್ದರಿಂದ, ಕಾರ್ಯಾಂಗ ಮತ್ತು ಶಾಸಕಾಂಗದ ವಿಶೇಷಾಧಿಕಾರದಲ್ಲಿ ಹಸ್ತಕ್ಷೇಪ ಮಾಡುವುದು ನ್ಯಾಯಾಂಗವನ್ನು ಮೀರಿದ್ದಾಗಿದೆ.
ಸಿಜೆಐ ಆ ಗೆರೆಯನ್ನು ದಾಟಿರುವುದು ಸುಸ್ಪಷ್ಟವಾಗಿದೆ
ಈ ಕ್ಷಣದಲ್ಲಿ ನಮ್ಮನ್ನು ಆಳುತ್ತಿರುವ ಕೋಮುವಾದಿ-ಕಾರ್ಪೊರೇಟ್ ಅಪವಿತ್ರ ಕೂಟದ ನೀತಿಯ ದಿಕ್ಕು ಹಾಗೂ ತೀವ್ರ ಕೇಂದ್ರೀಕರಣವನ್ನು ಗಮನಿಸಿದಾಗ, ಇಂಥ ಒಂದು ಉಲ್ಲಂಘನೆಯು ಸಾಂವಿಧಾನಿಕ ವ್ಯವಸ್ಥೆಯನ್ನು ಮೀರುತ್ತದೆ ಹಾಗೂ ಅಧಿಕಾರಗಳ ಪರಸ್ಪರ ಪ್ರತ್ಯೇಕತೆ ಮತ್ತು ಸಮತೋಲನವನ್ನು ಅಸ್ತವ್ಯಸ್ತಗೊಳಿಸುತ್ತದೆ.
ಆದ್ದರಿಂದ, ಸಿಜೆಐ ಟಿಪ್ಪಣಿಯು ಸಾಂವಿಧಾನಿಕ ವ್ಯವಸ್ಥೆಗೇ ಭಾರಿ ಏಟು ನೀಡುತ್ತದೆ. ಈಗ ನಾವು ನೋಡುತ್ತಿರುವುದೂ ಅದನ್ನೇ. ಹಿಂದುತ್ವ ಸಿದ್ಧಾಂತದ ಮೇರೆ ಮೀರಿದ ಒತ್ತುವರಿಯಿಂದಾಗಿ ಇಂಥ ಉಲ್ಲಂಘನೆಗಳನ್ನು ದಿನದಿನವೂ ಅನುಭವಿಸುತ್ತಿದ್ದೇವೆ. ವಾಸ್ತವವಾಗಿ, ಹಿಂದುತ್ವದ ಆಕ್ರಮಣದಿಂದಾಗಿ ವಿಶೇಷವಾಗಿ ಕಾರ್ಯಾಂಗವು ಭಾರಿ ಒತ್ತಡದಲ್ಲಿದೆ. ಹಾಗೂ ಇತರ ಎರಡು ಅಂಗಗಳನ್ನು ಸವೆಸುತ್ತಿದೆ. ಈ ಪ್ರಕ್ರಿಯೆಯಿಂದಾಗಿ ನ್ಯಾಯಾಂಗ ಸಹಿತ ಎಲ್ಲ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳು ನಾಶವಾಗದಿದ್ದರೂ ದುರ್ಬಲಗೊಳ್ಳಲು ಕಾರಣವಾಗುತ್ತಿರುವುದಂತೂ ನಿಜ.
ಎಸ್ ಐ ಆರ್
ಸಿಜೆಐ ಅವರ ಪ್ರಸ್ತುತ ಧೋರಣೆಯು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮುಂದುವರಿಸಲು ಭಾರತ ಚುನಾವಣೆ ಆಯೋಗ ಕೈಗೊಂಡ ನಿರ್ಧಾರದಿಂದ ನಿರೋಧಿಸುವ ಸರ್ವೋನ್ನತ ನ್ಯಾಯಾಲಯದ ವಾದಕ್ಕೆ ತೀವ್ರ ತದ್ವಿರುದ್ಧವಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ವಿನ್ಯಾಸ ಮತ್ತು ವಿಧಾನದ ಪರಿಣಾಮವಾಗಿ ಆರು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳ (ಯುಟಿ) 1 ಕೋಟಿ 70 ಲಕ್ಷ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಇಡೀ ಪ್ರಕ್ರಿಯೆ ಪೂರ್ಣಗೊಂಡಾಗ ಡಿಲೀಟ್ ಆಗುವ ಮತದಾರರ ಸಂಖ್ಯೆಯೆಷ್ಟೆಂಬುದರ ಸೂಚನೆ ಇದಾಗಿದೆ. ಮತದಾನದ ಹಕ್ಕು ಒಂದು ಸಾಂವಿಧಾನಿಕ ಹಕ್ಕು ಎನ್ನುವುದನ್ನು ಸ್ವತಃ ಸುಪ್ರೀಂ ಕೋರ್ಟ್ ಅಂಗೀಕರಿಸಿದೆ ಎನ್ನುವುದನ್ನು ಗಮನಿಸುವುದು ಮುಖ್ಯ. ಆದ್ದರಿಂದ, ಸಾಂವಿಧಾನಿಕ ಸಂಸ್ಥೆಗಳ ಸ್ವಾತಂತ್ರ್ಯವನ್ನು ಕುಂದಿಸುವ ಪ್ರಕ್ರಿಯೆಯಿಂದಾಗಿ ಇನ್ನೊಂದು ಸಾಂವಿಧಾನಿಕ ಸಂಸ್ಥೆಯಾದ ಚುನಾವಣೆ ಆಯೋಗದ ವಿಶೇಷಾಧಿಕಾರದಲ್ಲಿ ಮಧ್ಯಪ್ರವೇಶಿಸುವುದರಿಂದ ನ್ಯಾಯಾಂಗವು ದೂರ ಉಳಿಯುವಂತಾಗಿದೆ.
ಆದರೆ, ಆಸಕ್ತಿದಾಯಕ ಅಂಶವೆಂದರೆ, ಹೆಸರುಗಳನ್ನು ಡಿಲೀಟ್ ಮಾಡುವ ವಿಧಾನ ಮತ್ತು ವಿನ್ಯಾಸವು ಅಮಿತ್ ಷಾ ಅವರ ಯೋಜನೆಯಂತೆ ಕಾಣಿಸುತ್ತಿದ್ದು, ಈಗ ರಾಜಕೀಯ ಕಾರ್ಯಾಂಗದ ಒಂದು ಪ್ರಮುಖ ಮುಂಚೂಣಿಯಾಗಿದೆ. ಅದು `ಡಿಟೆಕ್ಟ್, ಡಿಲೀಟ್ ಮತ್ತು ಡಿಪೋರ್ಟ್’ (ಪತ್ತೆ ಹಚ್ಚು, ತೆಗೆದುಹಾಕು ಮತ್ತು ಗಡಿಪಾರು ಮಾಡು) ಎಂಬ ಅದೇ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಮತದಾರರ ಪಟ್ಟಿಯಲ್ಲಿ ನುಸುಳುಕೋರರೇ ತುಂಬಿದ್ದಾರೆ ಎಂಬ ಹಿಂದುತ್ವದ ಅಪಪ್ರಚಾರವನ್ನು ಅದು ಪ್ರತಿಬಿಂಬಿಸುತ್ತದೆ. ದಾಖಲೆಯಿಲ್ಲದ ಪ್ರತಿಯೊಬ್ಬ ನಾಗರಿಕರೂ ನುಸುಳುಕೋರರು ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ.
ಸಂಸತ್ತು ಸಹಜೀಕರಿಸಿದಂತೆ (ಆ್ಯಕ್ಚುವಲೈಸ್) ಸಂವಿಧಾನವು ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ಮೂಲಕ ನಿರ್ಧರಿಸಿರುವಂತೆ ಪೌರತ್ವವನ್ನು ನಿರ್ಧರಿಸುವುದು ಕೇಂದ್ರ ಗೃಹ ಸಚಿವಾಲಯ ನೇತೃತ್ವದ ಪ್ರಕ್ರಿಯೆಯೇ ಎನ್ನುವ ವಾಸ್ತವತೆಯ ಹೊರತಾಗಿಯೂ ಇದಾಗುತ್ತಿದೆ. ಆದರೆ, ಇಡೀ ಎಸ್‌ಐಆರ್ ಪ್ರಕ್ರಿಯೆಗೆ ಕೇಂದ್ರ ಗೃಹ ಸಚಿವರ ಅವಾಸ್ತವಿಕವಾದ ಯೋಜನೆಗಳ ಊಹೆಗಳು ತಳಹದಿಯಾಗಿದೆ.
ಸುಪ್ರೀಂ ಕೋರ್ಟ್ ನ ನಿರಾಕರಣೆ ಅಪಾಯದ ಕರೆಗಂಟೆ
ಇದು ಚುನಾವಣೆ ಆಯೋಗದ ಹಠ ಮಾತ್ರವಲ್ಲ, ಸುಪ್ರೀಂ ಕೋರ್ಟ್ ನ ನಿರಾಕರಣೆಯೂ ಅಪಾಯದ ಕರೆಗಂಟೆಯಾಗಿದೆ. ಎಸ್‌ಐಆರ್ ಪ್ರಕ್ರಿಯೆಗೆ ವ್ಯಾಪಕ ವಿರೋಧ ವ್ಯಕ್ತವಾಗಿರುವ ನಡುವೆ, ಪ್ರಜೆಗಳ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ನ್ಯಾಯಸಮ್ಮತ ರೀತಿಯಲ್ಲಿ ಮಧ್ಯಪ್ರವೇಶ ಮಾಡುವಂತೆ ರಾಜಕೀಯ ಪಕ್ಷಗಳು ನ್ಯಾಯಾಂಗದ ಮೊರೆ ಹೋಗಿವೆ. ಆದರೆ, ಪ್ರಜೆಗಳ ನಿರ್ಧಾರದ ಹಕ್ಕನ್ನು ಕಿತ್ತುಕೊಳ್ಳುವ ಚುನಾವಣೆ ಆಯೋಗದ ಪ್ರಯತ್ನವನ್ನು ಪ್ರಶ್ನಿಸುವುದು ಒತ್ತಟ್ಟಿಗಿರಲಿ, ನಿರ್ಣಾಯಕ ಮಧ್ಯಪ್ರವೇಶ ಮಾಡಲು ಯಾವುದೇ ಸಕಾರಣವಿಲ್ಲದೇ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಇದರ ಪರಿಣಾಮವಾಗಿ, ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲು, ಜನತಾ ಪ್ರಾತಿನಿಧ್ಯ ಕಾನೂನು ಸೂಚಿಸಿರುವ ಫಾರ್ಮ್ 7ರ ಅಸಹ್ಯಕರ ದುರುಪಯೋಗ ಆಗುತ್ತಿರುವುದನ್ನು ನಾವು ನೋಡಬೇಕಾಗಿದೆ. ಇದರ ಫಲಿತಾಂಶ ನಿರೀಕ್ಷಿತವೇ ಆಗಿದೆ: ಪಟ್ಟಿಯಿಂದ ಹೊರತುಪಡಿಸಲಾದ ಬಹುತೇಕ ಮತದಾರರು ಧಾರ್ಮಿಕ ಅಲ್ಪಸಂಖ್ಯಾತರೇ ಆಗಿದ್ದಾರೆ.
ಹಿಂದುತ್ವ ದೃಷ್ಟಿಕೋನವು ವಿವಿಧ ಅಂಗಗಳಲ್ಲಿ ನುಸುಳಿದೆ ಎನ್ನುವುದರ ಸ್ಪಷ್ಟ ಸೂಚನೆ ಇದಾಗಿದೆ. ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರನ್ನು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ವರ್ಣಿಸಿರುವುದರಲ್ಲಿ ನಾವಿದನ್ನು ಕಾಣಬಹುದಾಗಿದೆ. ಲೋಕಸಭೆಯಲ್ಲಿ ರಾಹುಲ್ ಮಧ್ಯಪ್ರವೇಶ ಮಾಡುತ್ತಿರುವುದರಿಂದ ಅವರು ರಾಷ್ಟ್ರೀಯ ಭದ್ರತೆಗೆ ಅತಿ ದೊಡ್ಡ ಅಪಾಯ ಎಂದು ರಿಜಿಜು ಹೇಳಿದ್ದಾರೆ. ಇದು ಸ್ವತಂತ್ರ ಶಾಸಕಾಂಗ ತತ್ವದ ಖುಲ್ಲಂಖುಲ್ಲಾ ನಿರಾಕರಣೆಯಾಗಿದೆ. ಯಾಕೆಂದರೆ ವಿಪಕ್ಷ ನಾಯಕರ ಸ್ಥಾನವು (ಎಲ್‌ಒಪಿ) ಶಾಸಕಾಂಗದ ಸ್ವಾತಂತ್ರ್ಯವನ್ನು ಸಂಕೇತಿಸುವ ಒಂದು ಅಗತ್ಯ ಸ್ಥಾನವಾಗಿದೆ.
ಆದ್ದರಿಂದ, ವಿವಿಧ ಅಂಗಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುವತ್ತ ಹಿಂದುತ್ವ ಪ್ರಕ್ರಿಯೆ ಹೊರಟಿರುವುದು ಸೂರ್ಯನ ಬೆಳಕಿನಷ್ಟೇ ಸ್ಪಷ್ಟ. ಇದು ಶೀಘ್ರದಲ್ಲೇ ರಾಷ್ಟ್ರದ ಜನತೆ ಮತ್ತು ಜನತಾಂತ್ರಿಕ ಜಾತ್ಯತೀತ ಗಣರಾಜ್ಯಕ್ಕೆ ಮಾರಕ ಅಪಾಯತರುವ ರಾಜಕೀಯ ಪ್ರಕ್ರಿಯೆಯ ನವ ಫ್ಯಾಸಿಸ್ಟ್ ಲಕ್ಷಣಗಳನ್ನು ತಾಳಲಿದೆ. ಅಂಗಗಳ ಅಧಿಕಾರಗಳನ್ನು ಮೊಟಕುಗೊಳಿಸುತ್ತಿರುವುದನ್ನು ನಾವು ಅಪ್ಪಿಕೊಳ್ಳಬೇಕಾಗುತ್ತದೆ. ಅದು ಕ್ರಮೇಣ ನಮ್ಮ ಸಾಂವಿಧಾನಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶ ಮಾಡುತ್ತದೆ.
ಪೀಪಲ್ಸ್ ಡೆಮಾಕ್ರಸಿ ಸಂಪಾದಕೀಯ (26.02.2026)
-ಕನ್ನಡಕ್ಕೆ: ವಿಶ್ವ
