![]()

ಭಾರತದ ಅಗ್ರಗಣ್ಯ ಇತಿಹಾಸಕಾರರಲ್ಲಿ ಒಬ್ಬರಾದ, ಇತಿಹಾಸ ಬರವಣಿಗೆಯಲ್ಲಿ ಪ್ರಗತಿಪರ ಮೌಲ್ಯಗಳ ಧ್ವನಿಯಾಗಿದ್ದ ಡಾ. ಕೆ.ಎನ್. ಪಣಿಕ್ಕರ್ (1936–2026) ಅವರು ಸೋಮವಾರ ತಿರುವನಂತಪುರದಲ್ಲಿ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ಕೇರಳ ಐತಿಹಾಸಿಕ ಸಂಶೋಧನಾ ಮಂಡಳಿಯು ಅವರ 90ನೇ ಜನ್ಮದಿನವನ್ನು ಆಚರಿಸಲು ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಏಪ್ರಿಲ್ 26, 1936 ರಂದು ಗುರುವಾಯೂರಿನಲ್ಲಿ ಜನಿಸಿದ ಡಾ. ಪಣಿಕ್ಕರ್ ಅವರು ವೈಜ್ಞಾನಿಕ, ಜಾತ್ಯತೀತ ಮತ್ತು ವಸ್ತುನಿಷ್ಠ ಐತಿಹಾಸಿಕ ವಿದ್ವತ್ತಿಗೆ ಅಚಲವಾದ ಬದ್ಧತೆಗಾಗಿ ವ್ಯಾಪಕವಾಗಿ ಗೌರವಿಸಲ್ಪಟ್ಟವರು. ತಮ್ಮ ಶೈಕ್ಷಣಿಕ ಮತ್ತು ಸಾರ್ವಜನಿಕ ಜೀವನದುದ್ದಕ್ಕೂ, ಹಿಂದುತ್ವ ಶಕ್ತಿಗಳು ಭಾರತೀಯ ಇತಿಹಾಸವನ್ನು ಕೋಮುವಾದೀಕರಣಗೊಳಿಸುವ ಮತ್ತು ಐತಿಹಾಸಿಕ ಸಂಶೋಧನೆಯ ಮೇಲೆ ಸೈದ್ಧಾಂತಿಕ ಅಧಿಪತ್ಯವನ್ನು ಹೇರುವ ಪ್ರಯತ್ನಗಳನ್ನು ಅವರು ತೀವ್ರವಾಗಿ ವಿರೋಧಿಸಿದರು. ಕೋಮುವಾದಿ ಗುಂಪುಗಳಿಂದ ನಿರಂತರ ಟೀಕೆ ಮತ್ತು ಬೆದರಿಕೆಗಳನ್ನು ಎದುರಿಸಿದರೂ, ಅವರು ಶೈಕ್ಷಣಿಕ ಸ್ವಾತಂತ್ರ‍್ಯ ಮತ್ತು ಭಾರತೀಯ ಇತಿಹಾಸ ಲೇಖನದ ಜಾತ್ಯತೀತ ಅಡಿಪಾಯಗಳನ್ನು ಸಮರ್ಥಿಸುವಲ್ಲಿ ದೃಢರಾಗಿ ಉಳಿದರು.
ದಶಕಗಳ ಅವಧಿಯಲ್ಲಿ, ಪಣಿಕ್ಕರ್ ಅವರು ಇತಿಹಾಸಕಾರ, ಬುದ್ಧಿಜೀವಿ, ಸಾಂಸ್ಕೃತಿಕ ಕಾರ್ಯಕರ್ತ ಮತ್ತು ಶಿಕ್ಷಣ ತಜ್ಞರಾಗಿ ಅಸಾಧಾರಣ ಕೊಡುಗೆಗಳನ್ನು ನೀಡಿದರು. ರಾಜಸ್ಥಾನ ವಿಶ್ವವಿದ್ಯಾಲಯ ಮತ್ತು ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆಯಂತಹ ಸಂಸ್ಥೆಗಳಲ್ಲಿ ಬೋಧಿಸಿದ ನಂತರ, ಅವರು 1972 ರಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವನ್ನು ಸೇರಿದರು. ಅಲ್ಲಿ ಅವರು ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ನಂತರ ಸೆಂಟರ್ ಫಾರ್ ಹಿಸ್ಟಾರಿಕಲ್ ಸ್ಟಡೀಸ್ ಮುಖ್ಯಸ್ಥರು ಮತ್ತು ಸ್ಕೂಲ್ ಆಫ್ ಸೋಷಿಯಲ್ ಸೈನ್ಸಸ್ ಡೀನ್ ಸೇರಿದಂತೆ ಪ್ರಮುಖ ಶೈಕ್ಷಣಿಕ ಸ್ಥಾನಗಳನ್ನು ಅಲಂಕರಿಸಿದರು.
ಅವರು ಕಾಲಡಿ ಯ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಯಾಗಿ (2000-2004) ಮತ್ತು ನಂತರ ಕೇರಳ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷರಾಗಿ (2007-2011) ಸೇವೆ ಸಲ್ಲಿಸಿದರು. ಅವರು ಕೇರಳ ಐತಿಹಾಸಿಕ ಸಂಶೋಧನಾ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು. ಅವರು 2008 ರಲ್ಲಿ, ದೇಶದ ವೃತ್ತಿಪರ ಇತಿಹಾಸಕಾರರ ಅತಿದೊಡ್ಡ ಸಂಸ್ಥೆಯಾದ ಇಂಡಿಯನ್ ಹಿಸ್ಟರಿ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಚುನಾಯಿತರಾದರು. ಅವರು ಕೇರಳ ಇತಿಹಾಸ ಕಾಂಗ್ರೆಸ್‌ನ ಸಂಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.
ಅವರ ವಿದ್ವತ್ತು ಡಿ.ಡಿ. ಕೊಸಾಂಬಿ ಮತ್ತು ದೇಬಿಪ್ರಸಾದ್ ಚಟ್ಟೋಪಾಧ್ಯಾಯ ಅವರ ಮಾರ್ಕ್ಸ್ವಾದಿ ಸಂಪ್ರದಾಯಗಳಿಂದ ಆಳವಾಗಿ ಪ್ರಭಾವಿತವಾಗಿತ್ತು ಮತ್ತು ಅವರು ಸಾಂಸ್ಕೃತಿಕ ಮತ್ತು ಐತಿಹಾಸಿಕ ಅಧ್ಯಯನಗಳಲ್ಲಿ ಚಾರಿತ್ರಿಕ ಭೌತವಾದದ ತತ್ವಗಳನ್ನು ನಿರಂತರವಾಗಿ ಅನ್ವಯಿಸಿದರು.
ಇತಿಹಾಸವನ್ನು ವಿರೂಪಗೊಳಿಸುವ ಮತ್ತು ಐತಿಹಾಸಿಕ ಸತ್ಯಗಳನ್ನು ಪುರಾಣಗಳು ಮತ್ತು ಕೋಮುವಾದಿ ನಿರೂಪಣೆಗಳೊಂದಿಗೆ ಬದಲಾಯಿಸುವ ಪ್ರಯತ್ನಗಳನ್ನು ಬಯಲಿಗೆಳೆಯುವಲ್ಲಿ ಡಾ. ಪಣಿಕ್ಕರ್ ನಿರ್ಣಾಯಕ ಪಾತ್ರ ವಹಿಸಿದ್ದರು. ಅಂತಹ ಸೈದ್ಧಾಂತಿಕ ಹಸ್ತಕ್ಷೇಪಗಳಿಗೆ ಅವರ ದೃಢವಾದ ವಿರೋಧದಿಂದಾಗಿ, ಬಲಪಂಥೀಯ ಪ್ರಾಬಲ್ಯದ ಅವಧಿಗಳಲ್ಲಿ ಅವರು ಮತ್ತು ಅವರ ಸಂಶೋಧನೆಯನ್ನು ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯಂತಹ ಸಂಸ್ಥೆಗಳಿಂದ ಹೆಚ್ಚಾಗಿ ದೂರವಿಡಲಾಯಿತು.
ಮಲಬಾರ್ ದಂಗೆಯ ಕುರಿತಾದ ಅವರ ಕಾರ್ಯವು ವಿಶೇಷವಾಗಿ ಮಹತ್ವಪೂರ್ಣವಾಗಿತ್ತು, ಅದನ್ನು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಸಾಮ್ರಾಜ್ಯಶಾಹಿ ವಿರೋಧಿ ಮತ್ತು ಕೃಷಿ ದಂಗೆ ಎಂಬ ಅದರ ಸರಿಯಾದ ಐತಿಹಾಸಿಕ ಸಂದರ್ಭದಲ್ಲಿ ಇರಿಸಿತು. ಪುನ್ನಪ್ರ-ವಯಲಾರ್ ದಂಗೆ ಮತ್ತು ಕಯ್ಯೂರ್ ಘಟನೆಯಂತಹ ಐತಿಹಾಸಿಕ ಹೋರಾಟಗಳನ್ನು ರಾಷ್ಟ್ರೀಯ ಸ್ವಾತಂತ್ರ್ಯ ಚಳವಳಿಯ ನಿರೂಪಣೆಯಿಂದ ತೆಗೆದುಹಾಕುವ ಬಿಜೆಪಿ ನೇತೃತ್ವದ ಸರ್ಕಾರದ ಪ್ರಯತ್ನಗಳನ್ನು ಅವರು ತೀವ್ರವಾಗಿ ವಿರೋಧಿಸಿದರು.
ಡಾ. ಪಣಿಕ್ಕರ್ ಅವರು ತಮ್ಮ ಜೀವನದುದ್ದಕ್ಕೂ, ಎಡಪಂಥೀಯ ಮತ್ತು ಪ್ರಗತಿಪರ ಚಳುವಳಿಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಭಾರತದಲ್ಲಿ ಶಿಕ್ಷಣ, ಸಂಸ್ಕೃತಿ ಮತ್ತು ಸಾರ್ವಜನಿಕ ಪ್ರವಚನದ ಕೋಮುವಾದೀಕರಣವನ್ನು ವಿರೋಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು 1990 ರಿಂದ 1997 ರವರೆಗೆ, ಜನಸಂಸ್ಕೃತಿ (ದೆಹಲಿ) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದಾಗ, ಅದು ಸಂಸ್ಥೆಯನ್ನು ಹೊಸ ಬದಲಾವಣೆಗಳು, ಪ್ರಗತಿ ಮತ್ತು ವಿಶಿಷ್ಟವಾದ ಕಾರ್ಯಶೈಲಿಯತ್ತ ಸಾಗಲು ಸಶಕ್ತಗೊಳಿಸಿದ ಸುವರ್ಣ ಅವಧಿಯಾಗಿತ್ತು.
ಅವರು ವಸಾಹತುಶಾಹಿ ಭಾರತದ ಸಾಂಸ್ಕೃತಿಕ ಮತ್ತು ಬೌದ್ಧಿಕ ಇತಿಹಾಸದ ಬಗ್ಗೆ ವ್ಯಾಪಕವಾಗಿ ಬರೆದಿದ್ದಾರೆ. ಅವರ ಪ್ರಕಟಣೆಗಳಲ್ಲಿ ಬ್ರಿಟಿಷ್ ಡಿಪ್ಲೊಮಸಿ ಇನ್ ನಾರ್ತ್ ಇಂಡಿಯಾ (British Diplomacy in North India)- (1968), “ಅಗೈನೆಸ್ಟ್ ಲಾರ್ಡ್ ಅಂಡ್ ಸ್ಟೇಟ್: ರಿಲಿಜನ್ ಅಂಡ್ ಪೆಸೆಂಟ್ ಅಪ್ರೈಸಿಂಗ್ಸ್ ಇನ್ ಮಲಬಾರ್, 1836–1921” (Against Lord and State: Religion and Peasant Uprisings in Malabar, 1836-1921) -(1989), ಕಲ್ಚರ್ ಅಂಡ್ ಕಾನ್ಶಿಯಸ್ನೆಸ್ ಇನ್ ಮಾಡರ್ನ್ ಇಂಡಿಯಾ (Culture and Consciousness in Modern India)- (1970), ನ್ಯಾಷನಲ್ ಅಂಡ್ ಲೆಫ್ಟ್ ಮೂವ್ಮೆಂಟ್ಸ್ ಇನ್ ಇಂಡಿಯಾ (National and Left Movements in India)- (1980), ಮತ್ತು ಕಮ್ಯುನಲಿಸಮ್ ಇನ್ ಇಂಡಿಯಾ: ಹಿಸ್ಟರಿ, ಪಾಲಿಟಿಕ್ಸ್ ಅಂಡ್ ಕಲ್ಚರ್ (Communalism in India: History, Politics and Culture)- (1991) ಸೇರಿವೆ. ಅವರು ಪೆಸೆಂಟ್ ಪ್ರೊಟೆಸ್ಟ್ ಅಂಡ್ ರೆವೋಲ್ಟ್ಸ್ ಇನ್ ಮಲಬಾರ್ (Peasant Protests and Revolts in Malabar)- (1990) ಮತ್ತು ಟುವರ್ಡ್ಸ್ ಫ್ರೀಡಮ್, 1940: ಎ ಡಾಕ್ಯುಮೆಂಟರಿ ಹಿಸ್ಟರಿ ಆಫ್ ದಿ ಫ್ರೀಡಮ್ ಸ್ಟ್ರಗಲ್ (Towards Freedom, 1940: A Documentary History of the Freedom Struggle) ಎಂಬ ಎರಡು ಮೂಲ ಸಂಪುಟಗಳನ್ನು ಸಂಕಲಿಸಿದ್ದಾರೆ.
ಡಾ.ಪಣಿಕ್ಕರ್ ಅವರ ನಿಧನವು ಭಾರತದ ಜಾತ್ಯಾತೀತ, ವಸ್ತುನಿಷ್ಠ ಮತ್ತು ವೈಜ್ಞಾನಿಕ ಚರಿತ್ರೆ ಬರವಣಿಗೆಯ ಪರಂಪರೆಗೆ ಬಹುದೊಡ್ಡ ನಷ್ಟ ಎಂದು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿಯು ತನ್ನ ಸಂತಾಪವನ್ನು ವ್ಯಕ್ತಪಡಿಸಿದೆ.
