ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಾರ್ವಜನಿಕ ಹೂಡಿಕೆಯ ಭಾರಿ ಹೆಚ್ಚಳವಿಲ್ಲದೆ ಉದ್ಯೋಗ ಸೃಷ್ಟಿಯಾಗಲಿ, ಜನರ ಖರೀದಿ ಸಾಮರ್ಥ್ಯದ ಬೆಳವಣಿಗೆಯಾಗಲಿ ಸಾಧ್ಯವಾಗದು: ಸಿಪಿಐ(ಎಂ) ಪೊಲಿಟ್‍ ಬ್ಯುರೊ

ಆರ್ಥಿಕ ಚೇತರಿಕೆ ನಡೆಯುತ್ತಿದೆ ಎಂಬ ಸರ್ಕಾರದ ಎಲ್ಲಾ ಪ್ರಚಾರ ಮತ್ತು ದಾವೆಗಳ ಹೊರತಾಗಿಯೂ, ಕೈಗಾರಿಕಾ ಉತ್ಪಾದನೆಯ ಸೂಚ್ಯಂಕವು(ಐಐಪಿ) ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ. ಇದು ಜನರ ಖರೀದಿ ಸಾಮರ್ಥ್ಯ ನಿರಂತರವಾಗಿ ಕುಸಿಯುತ್ತಿದೆ ಎಂಬುದರ ಸೂಚನೆಯಾಗಿದೆ. ಇದರ ಜೊತೆಗೆ ಉದ್ಯೋಗಹೀನತೆಯ ದರವು ಹೆಚ್ಚುತ್ತಲೇ ಇದೆ. ಹಣದುಬ್ಬರ ಏರುತ್ತಲೇ ಇದೆ. ಇಂತಹ ಸನ್ನಿವೇಶದಲ್ಲಿ ಉದ್ಯೋಗ ಸೃಷ್ಟಿಸುವ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಾರ್ವಜನಿಕ ಹೂಡಿಕೆಯಲ್ಲಿ ಭಾರಿ ಹೆಚ್ಚಳವಾಗಬೇಕು ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‌ ಬ್ಯುರೊ ಆಗ್ರಹಿಸಿದೆ, ಅದಿಲ್ಲದೆ ಉದ್ಯೋಗ ಸೃಷ್ಟಿಯಾಗಲಿ ಅಥವಾ ಜನರ ಖರೀದಿ ಸಾಮರ್ಥ್ಯಗಳ ಬೆಳವಣಿಗೆಯಾಗಲಿ ಸಂಭವಿಸಲಾರದು ಎಂದು ಅದು ಹೇಳಿದೆ.

ಡಿಸೆಂಬರ್ 27-28ರಂದು ನವದೆಹಲಿಯಲ್ಲಿ ಸಭೆ ಸೇರಿದ ಪೊಲಿಟ್‌ ಬ್ಯುರೊ ಇತ್ತೀಚಿನ ಬೆಳವಣಿಗೆಗಳನ್ನು ವಿಮರ್ಶಿಸುತ್ತ ನೀಡಿರುವ ಹೇಳಿಕೆಯಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಈ ಹೇಳಿಕೆಯ ಪೂರ್ಣಪಾಟವನ್ನು ಈ ಮುಂದೆ ಕೊಡಲಾಗಿದೆ:

ಅರ್ಥವ್ಯವಸ್ಥೆ: ಭಾರತದ ಅರ್ಥವ್ಯವಸ್ಥೆಯಲ್ಲಿ ಆಗುತ್ತಿರುವ ಕುಸಿತದ ಪರಿಸ್ಥಿತಿಗಳ ಬಗ್ಗೆ ಪೊಲಿಟ್ ಬ್ಯೂರೋ ತನ್ನ ಕಳವಳ ವ್ಯಕ್ತಪಡಿಸಿದೆ. ಆರ್ಥಿಕ ಚೇತರಿಕೆ ನಡೆಯುತ್ತಿದೆ ಎಂಬ ಸರ್ಕಾರದ ಎಲ್ಲಾ ಪ್ರಚಾರ ಮತ್ತು ದಾವೆಗಳ ಹೊರತಾಗಿಯೂ, ಭಾರತದ ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸುವಲ್ಲಿ ಹೂಡಿಕೆಗಳು ಬೆಳೆಯುತ್ತಿಲ್ಲ.

ಕೈಗಾರಿಕಾ ಉತ್ಪಾದನೆಯು ಅಕ್ಟೋಬರ್‌ನಲ್ಲಿ ಶೇಕಡಾ 4 ರಷ್ಟು ಕುಗ್ಗಿತು, 3 ತಿಂಗಳಲ್ಲಿ ಎರಡನೇ ಬಾರಿ ಕುಗ್ಗಿದೆ. ವರ್ಷದಿಂದ ವರ್ಷದ ದತ್ತಾಂಶಗಳು ತಯಾರಿಕಾ ವಲಯದ ಉತ್ಪನ್ನದಲ್ಲಿ ಗಮನಾರ್ಹವಾದ 5.4 ಶೇಕಡಾ ಕುಸಿತವನ್ನು ತೋರಿಸುತ್ತಿವೆ. ಕೈಗಾರಿಕಾ ಉತ್ಪಾದನೆಯ ಸೂಚ್ಯಂಕವು(ಐಐಪಿ) ಅಕ್ಟೋಬರ್‌ನಲ್ಲಿ 129.6 ಇತ್ತು, ಇದು ಸೆಪ್ಟೆಂಬರ್ 2021 ರ ನಂತರದ ಅತ್ಯಂತ ಕಡಿಮೆ ಸೂಚ್ಯಂಕ. ಬಾಳಿಕೆ ಬರುವ ಗ್ರಾಹಕ ವಸ್ತುಗಳ ಉತ್ಪಾದನೆಯು 15.3% ಮತ್ತು ಉಳಿದ ಬಳಕೆ ಉತ್ಪನ್ನಗಳ ಉತ್ಪಾದನೆಯು 13.4% ರಷ್ಟು ಕುಗ್ಗಿದೆ. ಇದು ಜನರ ಖರೀದಿ ಸಾಮರ್ಥ್ಯ ನಿರಂತರವಾಗಿ  ಕುಸಿಯುತ್ತಿದೆ ಎಂಬುದರ ಸೂಚನೆಯಾಗಿದೆ.

ಬೆಳೆಯುತ್ತಿರುವ ನಿರುದ್ಯೋಗ: ಉದ್ಯೋಗಹೀನತೆಯ ದರವು ಹೆಚ್ಚುತ್ತಲೇ ಇದೆ. ಇನ್ನೂ ಕೆಟ್ಟ ಸಂಗತಿಯೆಂದರೆ, ಇದರೊಂದಿಗೇ ಕಾರ್ಮಿಕ ಭಾಗವಹಿಸುವಿಕೆ ದರ ಮತ್ತು ಉದ್ಯೋಗ ದರದಲ್ಲಿಯೂ ಕುಸಿತ ಉಂಟಾಗಿದೆ. ನಿರುದ್ಯೋಗ ದರ ನವೆಂಬರ್‌ನ 8% ಕ್ಕೆ ಹೋಲಿಸಿದರೆ ಡಿಸೆಂಬರ್‌ನಲ್ಲಿ 8.8% ಕ್ಕೆ ಏರಿದೆ. ನಗರ ನಿರುದ್ಯೋಗ ಶೇಕಡಾ 9.6% ಕ್ಕೆ ಏರಿದೆ ಮತ್ತು ಗ್ರಾಮೀಣ ನಿರುದ್ಯೋಗ  7.8% ಕ್ಕೆ ಏರಿದೆ.

ಬೆಲೆ ಏರಿಕೆ: ಹಣದುಬ್ಬರ ಏರುತ್ತಲೇ ಇದೆ. ಆಹಾರ ಹಣದುಬ್ಬರವು ಜನರ ಜೀವನೋಪಾಯದ ಮೇಲೆ ಹೆಚ್ಚಿನ ಸಂಕಟಗಳನ್ನು ಹೇರುತ್ತಲೇ ಇದೆ.

ಉದ್ಯೋಗ ಸೃಷ್ಟಿಸುವ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಾರ್ವಜನಿಕ ಹೂಡಿಕೆಯಲ್ಲಿ ಭಾರಿ ಹೆಚ್ಚಳವಾಗಬೇಕು ಎಂದು ಪೊಲಿಟ್‌ ಬ್ಯುರೊ ಆಗ್ರಹಿಸುತ್ತದೆ, ಅದಿಲ್ಲದೆ ಉದ್ಯೋಗ ಸೃಷ್ಟಿಯಾಗಲಿ ಅಥವಾ ಜನರ ಖರೀದಿ ಸಾಮರ್ಥ್ಯಗಳ ಬೆಳವಣಿಗೆಯಾಗಲಿ ಸಂಭವಿಸಲಾರದು.

ಆಹಾರ ಭದ್ರತಾ ಕಾಯಿದೆಯೊಂದಿಗೆ ಪಿಎಂಜಿಕೆಎವೈ ವಿಲೀನ: 2013 ರ ಆಹಾರ ಭದ್ರತಾ ಕಾಯಿದೆ(ಎಫ್‍ಎಸ್‍ಎ)ಯಡಿಯಲ್ಲಿ 2023 ರಲ್ಲಿ ಸುಮಾರು 2/3 ಭಾಗದಷ್ಟು ನಮ್ಮ ಜನರಿಗೆ ‘ಉಚಿತ’ ಪಡಿತರವನ್ನು ಒದಗಿಸುವುದಾಗಿ ಹೇಳಿರುವುದು ದೇಶವನ್ನು ಬಾಧಿಸುತ್ತಿರುವ ಹಸಿವಿನ ಭೀತಿಯನ್ನು ಬೇರೆ ರೀತಿಯಲ್ಲಿ ನಿವಾರಿಸಲು ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಂಡಂತಾಗಿದೆ. ಭಾರತದಲ್ಲಿ ಹಸಿವು “ಬಹಳ ಗಂಭೀರ” ಎಂದು ವರ್ಣಿಸಿರುವ  ಜಾಗತಿಕ ಹಸಿವು ಸೂಚ್ಯಂಕವನ್ನು ಮೋದಿ ಸರ್ಕಾರವು ಬಹಳ ಅಬ್ಬರದಿಂದ ನಿರಾಕರಿಸಿದರೂ, ಅದೇ ಸತ್ಯ.

81.35 ಕೋಟಿ ಜನರಿಗೆ 5 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲಾಗುವುದು, ಆದರೆ ಈಗ ಅವರಿಗೆ ಆಹಾರ ಭದ್ರತಾ ಕಾಯಿದೆಯಡಿಯಲ್ಲಿ ಕೊಡುತ್ತಿರುವ 5 ಕೆಜಿ ಆಹಾರ ಧಾನ್ಯಗಳನ್ನು ಸಬ್ಸಿಡಿ ದರ ರೂ.3/ಕೆಜಿ ಅಕ್ಕಿ, ರೂ. 2/ಕೆಜಿ ಗೋಧಿಯನ್ನು ಮತ್ತು ರೂ.1/ಕೆಜಿ ಯಲ್ಲಿ ಧಾನ್ಯಗಳನ್ನು ನಿರಾಕರಿಸಲಾಗುವುದು. ಇದರ ಪರಿಣಾಮವಾಗಿ, ಪೌಷ್ಠಿಕಾಂಶದ ಅಗತ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಿರುವ 5 ಕೆಜಿ ಸಬ್ಸಿಡಿ ಆಹಾರ ಧಾನ್ಯಗಳನ್ನು ಸರಿದೂಗಿಸಲು, ಜನರು ಗೋಧಿಗೆ ಕೆಜಿಗೆ ರೂ.30+ ಮತ್ತು ಅಕ್ಕಿಗೆ ರೂ. 40 ತೆರಬೇಕಾದ ಮುಕ್ತ ಮಾರುಕಟ್ಟೆಗೆ ಹೋಗಬೇಕಾಗುತ್ತದೆ, ಇದು ಬದುಕುಳಿಯಲು ಹೆಣಗಾಡುತ್ತಿರುವ ಕೋಟಿಗಟ್ಟಲೆ ಕುಟುಂಬಗಳಿಗೆ ಒಂದು ಕ್ರೂರ ಹೊಡೆತವಾಗಿದೆ.

ಪಿಎಂಜಿಕೆಎವೈ(ಪ್ರಧಾನ ಮಂತ್ರಿ ಗರೀಬ್‍ ಕಲ್ಯಾಣ ಅನ್ನ ಯೋಜನಾ) ಅಡಿಯಲ್ಲಿ ಉಚಿತ 5 ಕೆಜಿ ಮತ್ತು ಎಫ್‌ಎಸ್‌ಎ ಅಡಿಯಲ್ಲಿ ಸಬ್ಸಿಡಿ ದರದಲ್ಲಿ 5 ಕೆಜಿ ಎರಡನ್ನೂ ಮುಂದುವರಿಸಬೇಕು ಎಂದು ಪೊಲಿಟ್‍ ಬ್ಯೂರೋ ಆಗ್ರಹಿಸುತ್ತದೆ.

ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸುವುದು: ಆಳುವ ಪಕ್ಷದ ಸಂಸದರೊಬ್ಬರು ಮುಸ್ಲಿಂ ಅಲ್ಪಸಂಖ್ಯಾತರ ಮೇಲೆ ಹಿಂಸಾತ್ಮಕ ಕ್ರಿಮಿನಲ್ ಹಲ್ಲೆಗಳನ್ನು ನಡೆಸಬೇಕು ಎಂದು ಉದ್ರೇಕಕಾರಿ ಕರೆ ನೀಡಿರುವುದು ಸಂಪೂರ್ಣವಾಗಿ ಖಂಡನೀಯ. ವಿಚಿತ್ರವೆಂದರೆ, ಅಧಿಕಾರಿಗಳು ಸ್ವಯಂಪ್ರೇರಿತವಾಗಿ ಇದನ್ನು ಗಮನಕ್ಕೆ ತೆಗೆದುಕೊಂಡು ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಬದಲು ಈ ಭಾಷಣದ ವಿರುದ್ಧ ‘ದೂರು’ ಬಂದರೆ ಮಾತ್ರ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.  ಇದು ಇಂತಹ ವಿಷಕಾರಿ ದ್ವೇಷ, ಹಿಂಸೆ ಮತ್ತು ಭಯೋತ್ಪಾದನೆಯನ್ನು ಹರಡುವ ಜನರಿಗೆ  ಬಹಿರಂಗವಾಗಿಯೇ ನೀಡಿರುವ ಪೋಷಣೆ ಮತ್ತು ರಕ್ಷಣೆಯಾಗಿದೆ.

ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ದ್ವೇಷ ಅಪಾಯಕಾರಿಯಾಗಿ ತೀವ್ರಗೊಳ್ಳುತ್ತಿರುವ ವರದಿಗಳು ಹೆಚ್ಚುತ್ತಿವೆ. ಕ್ರಿಶ್ಚಿಯನ್ ಅಲ್ಪಸಂಖ್ಯಾತರ ಮೇಲಿನ ದಾಳಿಯ ನಿದರ್ಶನಗಳೂ ಬೆಳೆಯುತ್ತಿವೆ.

ಮೌಲಾನಾ ಆಜಾದ್ ರಾಷ್ಟ್ರೀಯ ಫೆಲೋಶಿಪ್(MANF) ಹೆಸರಿನಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಫೆಲೋಶಿಪ್‌ಗಳ ಯೋಜನೆಯನ್ನು ರದ್ದುಗೊಳಿಸಲಾಗಿದೆ. MANF ಹಲವಾರು ಇತರ ವಿದ್ಯಾರ್ಥಿವೇತನ ಯೋಜನೆಗಳನ್ನು ಅತಿಕ್ರಮಿಸುವುದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಸಂಸತ್ತಿಗೆ ತಿಳಿಸಿದೆ. ಇದು ಸ್ಪಷ್ಟವಾಗಿ ತಪ್ಪಾಗಿದೆ. ಹಲವಾರು  ರಾಜ್ಯಗಳಲ್ಲಿ ಮುಸ್ಲಿಮರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರನ್ನು ಒಬಿಸಿ ಎಂದು ಪರಿಗಣಿಸಲಾಗುವುದಿಲ್ಲ. ಈ ವಿದ್ಯಾರ್ಥಿ ವೇತನ ಯೋಜನೆಯನ್ನು ಮರುಸ್ಥಾಪಿಸಬೇಕು.

ನ್ಯಾಯಾಂಗ: ನ್ಯಾಯಾಂಗದಲ್ಲಿ ನೇಮಕಾತಿ ಮತ್ತು ವರ್ಗಾವಣೆಗಳಲ್ಲಿ ಸರ್ಕಾರಕ್ಕೆ ಪ್ರಾಬಲ್ಯ ಪಡೆಯುವ ಪ್ರಯತ್ನಗಳನ್ನು ಮೋದಿ ಸರ್ಕಾರವು ತೀವ್ರಗೊಳಿಸಿದೆ, ಇದು ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ, ಕೊಲಿಜಿಯಂ ವ್ಯವಸ್ಥೆ ಮತ್ತು ಸುಪ್ರೀಂ ಕೋರ್ಟ್ ಅಸಿಂಧುಗೊಳಿಸಿರುವ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗದ (ಎನ್‌ಜೆಎಸಿ) ನಡುವೆ ಘರ್ಷಣೆಗೆ ಕಾರಣವಾಗುತ್ತಿದೆ.

ನ್ಯಾಯಾಂಗ ನೇಮಕಾತಿಗಳ ಮೇಲೆ ಕಾರ್ಯಾಂಗದ ನಿಯಂತ್ರಣ ಪಡೆಯುವ ಮೋದಿ ಸರ್ಕಾರದ ಎಲ್ಲಾ ಪ್ರಯತ್ನಗಳನ್ನು ಸಿಪಿಐ(ಎಂ) ಬಲವಾಗಿ ಪ್ರತಿರೋಧಿಸುತ್ತದೆ ಮತ್ತು ವಿರೋಧಿಸುತ್ತದೆ. ನ್ಯಾಯಾಂಗದ ಸ್ವಾತಂತ್ರ್ಯವನ್ನು ಯಾವುದೇ ರಾಜಿಗಿಳಿಯದೆ ಎತ್ತಿ ಹಿಡಿಯಬೇಕು.

ಭೀಮಾ ಕೋರೆಗಾಂವ್ ಬಂಧಿತರನ್ನು ಬಿಡುಗಡೆ ಮಾಡಿ: 2018 ರ ಜನವರಿ 1 ರಂದು ಭೀಮಾ ಕೋರೆಗಾಂವ್‌ನಲ್ಲಿ ನಡೆದ ಜಾತಿ ಹಿಂಸಾಚಾರದ ತನಿಖೆ ನಡೆಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪುಣೆ ನಗರದಿಂದ 30 ಕಿಮೀ ದೂರದಲ್ಲಿ ಆಯೋಜಿಸಲಾದ ಎಲ್ಗಾರ್ ಪರಿಷತ್ ಕಾರ್ಯಕ್ರಮವು ಹಿಂಸಾಚಾರದಲ್ಲಿ ಯಾವುದೇ ಪಾತ್ರವನ್ನು ಹೊಂದಿಲ್ಲ ಎಂದು ಪ್ರಮಾಣ ಮಾಡಿ ಒಪ್ಪಿಕೊಂಡಿದ್ದಾರೆ.

ಹೀಗಾಗಿ, ಈ ಸಂಬಂಧ ಬಂಧಿಸಿರುವ ಎಲ್ಲಾ ಯು.ಎ.ಪಿ.ಎ. ಬಂಧಿತರನ್ನು ತಕ್ಷಣವೇ ಬೇಷರತ್ತಾಗಿ ಬಿಡುಗಡೆ ಮಾಡಬೇಕು.

ಸಹಕಾರಿ ಮಸೂದೆ: ಒಕ್ಕೂಟ ತತ್ವದ ಮೇಲೆ ದಾಳಿ: ಸಿಪಿಐ(ಎಂ) ಬಹು ರಾಜ್ಯ ಸಹಕಾರಿ ಸಂಘಗಳ ತಿದ್ದುಪಡಿ ಮಸೂದೆ 2022 ಅನ್ನು ಒಕ್ಕೂಟತತ್ವ ಮತ್ತು ರಾಜ್ಯಗಳ ಹಕ್ಕುಗಳ ಮೇಲಿನ ದಾಳಿ ಎಂದು ಬಲವಾಗಿ ವಿರೋಧಿಸುತ್ತದೆ. ಸಹಕಾರ ಸಂಘಗಳು ರಾಜ್ಯ ಪಟ್ಟಿಯಲ್ಲಿರುವ ವಿಷಯವಾಗಿದೆ. ಈ ಪ್ರಸ್ತಾವಿತ ಮಸೂದೆಯು ರಾಜ್ಯ ಕಾನೂನುಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಸಹಕಾರಿ ಸಂಘಗಳ ಮೇಲೆ ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಹೇರುವ ನಗ್ನ ಪ್ರಯತ್ನವಾಗಿದೆ. ಇದು ಸಹಕಾರಿ ಸಂಘಗಳ ಮೇಲೆ ಹಿಡಿತ ಸಾಧಿಸುವ ನಡೆಯಲ್ಲದೆ ಬೇರೇನೂ ಅಲ್ಲ. ಇದು ಚುನಾಯಿತ ರಾಜ್ಯ ಸರ್ಕಾರಗಳ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಒಕ್ಕೂಟ ತತ್ವದ ಮೇಲೆ ನಡೆಸಿರುವ ಆಕ್ರಮಣವಾಗಿದೆ.

ತ್ರಿಪುರಾ: ತ್ರಿಪುರಾದಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಿಪಿಐ(ಎಂ) ಮತ್ತು ಇತರ ವಿರೋಧಿ ಶಕ್ತಿಗಳ ವಿರುದ್ಧ ಆಡಳಿತಾರೂಢ ಬಿಜೆಪಿ ತನ್ನ ಹಿಂಸಾತ್ಮಕ ದಾಳಿಯನ್ನು ತೀವ್ರಗೊಳಿಸಿದೆ.

ಸಿಪಿಐ(ಎಂ), ಎಡಪಕ್ಷಗಳು ಮತ್ತು ಕಾಂಗ್ರೆಸ್ ಪಕ್ಷಗಳು ಒಟ್ಟಾಗಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ಮತ್ತು ಬಿಜೆಪಿ ಸರ್ಕಾರದ ದಬ್ಬಾಳಿಕೆಯಿಂದ ನಾಶವಾಗುತ್ತಿರುವ ಕಾನೂನಿನ ಆಳ್ವಿಕೆಯನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿವೆ.

ವಿಧಾನಸಭಾ ಚುನಾವಣೆಯನ್ನು ಒಂದು ಪ್ರಹಸನದ ಮಟ್ಟಕ್ಕೆ  ಇಳಿಸುವುದನ್ನು ತಡೆಯಲು ಚುನಾವಣಾ ಆಯೋಗವು ತಾನೇ ಮುಂದಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಬೇಕಾದರೆ ತ್ರಿಪುರಾದಲ್ಲಿ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಸಂಪೂರ್ಣವಾಗಿ ಮರುಸ್ಥಾಪಿಸಬೇಕು.

ಕೇಂದ್ರ ಸಮಿತಿಯ ಸಭೆ: ಸಿಪಿಐ(ಎಂ) ಕೇಂದ್ರ ಸಮಿತಿಯು ಜನವರಿ 28-30, 2023 ರಂದು ಕೋಲ್ಕತ್ತಾದಲ್ಲಿ ಸಭೆ ಸೇರಲಿದೆ.

Leave a Reply

Your email address will not be published. Required fields are marked *