ಭಾರತದ ಸಂವಿಧಾನಿಕ ವ್ಯವಸ್ಥೆಯ ಮೇಲೆ ಬೆಟ್ಟದಷ್ಟು ದಾಳಿಗಳು

ಈ ಮೋದಿ-2 ಸರಕಾರ ಭಾರತೀಯ ಗಣತಂತ್ರದ ಸಂವಿಧಾನಿಕ ವ್ಯವಸ್ಥೆಯ ಮೇಲೆ ಬಹುವಿಧ ದಾಳಿಗಳನ್ನು ನಡೆಸುತ್ತಿದೆ. ಇದರ ಪರಿಣಾಮಗಳು, ಜಮ್ಮು ಮತ್ತು ಕಾಶ್ಮೀರಕ್ಕೆ ಅದರ ರಾಜ್ಯದ ದರ್ಜೆಯನ್ನು ವಂಚಿಸಿದ ರೀತಿಯಲ್ಲಿ ಮಾತ್ರವೇ ಅಲ್ಲ, ಭಾರತದ ಸಂವಿಧಾನ ನೀಡಿರುವ ಖಾತ್ರಿಗಳ ಮೇಲೆ ಒಂದು ಗಂಭೀರ ದಾಳಿಯಾಗಿದೆ. ಈ ರಾಜ್ಯವನ್ನು ಏಕಾಂಗಿಯಾಗಿಸಿದ್ದು, ಸಂಪರ್ಕದ ಹಾದಿಗಳ ನಿಷೇಧ, ಸಾರ್ವಜನಿಕ ಸಾರಿಗೆ ಕಾರ್ಯನಿರ್ವಹಿಸದಿರುವುದು, ಅಂಗಡಿಗಳು, ಶಾಲೆಗಳು ಮುಚ್ಚಿರುವುದು, ಸಾಮಾನ್ಯ ಜೀವನವನ್ನು, ವಿಶೇಷವಾಗಿ ಕಾಶ್ಮೀರ ಕಣಿವೆಯಲ್ಲಿ, ಅಸ್ತವ್ಯಸ್ತಗೊಳಿಸಿವೆ. ಪರಿಸ್ಥಿತಿ ಸಾಮಾನ್ಯವಾಗಿದೆ ಎಂದು ಸಾರಿದ್ದರೂ, ನೆಲಮಟ್ಟದಲ್ಲಿನ ವಾಸ್ತವತೆ ಸಂಪೂರ್ಣವಾಗಿ ತದ್ವಿರುದ್ಧವಾಗಿದೆ, ಅಂತರ್ರಾಷ್ಟ್ರೀಯ ಮಾಧ್ಯಮಗಳು ಮತ್ತು ದೇಶೀ ಮಾಧ್ಯಮಗಳ ವಿಭಾಗಗಳೂ ಈ ಬಗ್ಗೆ ವರದಿ ಮಾಡುತ್ತಿವೆ.

ಕೇಂದ್ರ ಗೃಹಮಂತ್ರಿಗಳು ನಮ್ಮ ಸಂವಿಧಾನದ ಮೂಲಭೂತ ಲಕ್ಷಣಗಳನ್ನು ಉಲ್ಲಂಘಿಸುವ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಒಂದು ರಾಷ್ಟ್ರ, ಒಂದು ಭಾಷೆಯ ಮೇಲಿನ ಅವರ ಟಿಪ್ಪಣಿಗಳಿಗೆ ವ್ಯಾಪಕ ವಿರೋಧ ಸೃಷ್ಟಿಯಾಗಿರುವುದರಿಂದ, ಅವರು ಅದನ್ನು ಹಿಂತೆಗೆದುಕೊಳ್ಳಲೇ ಬೇಕಾಗಿ ಬಂದಿದೆ. ಈಗ ಅವರು ಭಾರತದಲ್ಲಿ ಬಹುಪಕ್ಷ ವ್ಯವಸ್ಥೆಯ ಅಗತ್ಯವನ್ನು ಪ್ರಶ್ನಿಸುತ್ತಿದ್ದಾರೆ. ಹೀಗೆ ಪ್ರಜಾಪ್ರಭುತ್ವ, ಜಾತ್ಯತೀತತೆ, ಒಕ್ಕೂಟ ತತ್ವ, ಮಾನವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳ ಮೇಲೆ ದಾಳಿಗಳು ಮುಂದುವರೆಯುತ್ತಿವೆ ಎಂದು ಸಿಪಿಐ(ಎಂ) ಪೊಲಿಟ್‌ ಬ್ಯುರೊ ಮೋದಿ-೨ ಸರಕಾರದ ಬಗ್ಗೆ ಕಟು ಟೀಕೆ ಮಾಡಿದೆ.

ಸಪ್ಟಂಬರ್ ೧೮ ಮತ್ತು ೧೯ರಂದು ನವದೆಹಲಿಯಲ್ಲಿ ಸಭೆ ಸೇರಿದ ಪೊಲಿಟ್‌ ಬ್ಯುರೊ ಪ್ರಸಕ್ತ ಬೆಳವಣಿಗೆಗಳನ್ನು ಚರ್ಚಿಸಿದ ನಂತರ ಪ್ರಕಟಿಸಿರುವ ಹೇಳಿಕೆಯಲ್ಲಿ ಈ ಟೀಕೆ ವ್ಯಕ್ತಗೊಂಡಿದೆ.

ಎನ್‌ ಆರ್‌ ಸಿ, ಎನ್‌ ಪಿ ಆರ್, ವಿ ಪಿ ಮುಂತಾದ ಅನಗತ್ಯ ದುಬಾರಿ ಪ್ರಕ್ರಿಯೆಗಳನ್ನು ನಿಲ್ಲಿಸಬೇಕು, ಸಬ್ಸಿಡಿ ದರಗಳಲ್ಲಿ ಆಹಾರಧಾನ್ಯ ನೀಡಿಕೆಗಳನ್ನು ಹೆಚ್ಚಿಸಬೇಕು, ಅರಣ್ಯ ಹಕ್ಕುಗಳ ಕಾಯ್ದೆಯ ಜಾರಿಯಾಗಬೇಕು ಮತ್ತು  ಕಾನೂನು ಉಲ್ಲಂಘಿಸುವವರಿಗೆ ರಕ್ಷಣೆ ನಿಲ್ಲಬೇಕು ಎಂದೂ ಪೊಲಿಟ್‌ ಬ್ಯುರೊ ಆಗ್ರಹಿಸಿದೆ.

ಪೊಲಿಟ್‌ಬ್ಯುರೊ ಚರ್ಚಿಸಿದ ಇತರ ವಿಷಯಗಳ ಕುರಿತಾಗಿ ಮಾಡಿರುವ ಟಿಪ್ಪಣಿಗಳನ್ನು ಈ ಮುಂದೆ ಕೊಡಲಾಗಿದೆ.

ಎನ್‌ಆರ್‌ಸಿ, ಎನ್‌ಪಿಆರ್, ಇವಿಪಿ ಮುಂತಾದ ಅನಗತ್ಯ ದುಬಾರಿ ಪ್ರಕ್ರಿಯೆಗಳನ್ನು ನಿಲ್ಲಿಸಬೇಕು:

ಬಿಜೆಪಿ ಆಳ್ವಿಕೆಯ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ತಂತಮ್ಮ ರಾಜ್ಯಗಳಲ್ಲೂ ರಾಷ್ಟ್ರೀಯ ಪೌರ ದಾಖಲೆ(ಎನ್.ಆರ್.ಸಿ.)ಗೆ ಆಗ್ರಹಿಸಿದ್ದಾರೆ. ಎನ್.ಆರ್.ಸಿ. ಅಸ್ಸಾಂ ಒಪ್ಪಂದದ ಭಾಗವಾಗಿತ್ತು, ಆದ್ದರಿಂದ ಅಸ್ಸಾಂ ರಾಜ್ಯಕ್ಕಷ್ಟೇ ನಿರ್ದಿಷ್ಟವಾಗಿತ್ತು. ಈ ಪ್ರಕ್ರಿಯೆಯನ್ನು ಸುಪ್ರಿಂ ಕೋರ್ಟಿನ ನಿರ್ದೇಶನದ ಅಡಿಯಲ್ಲಿ ನಡೆಸಲಾಯಿತು. ಸುಮಾರು 20 ಲಕ್ಷ ಜನಗಳನ್ನು ಅಸ್ಸಾಂನ ಎನ್.ಆರ್.ಸಿ.ಯಲ್ಲಿ ಕೈಬಿಡಲಾಗಿದೆ. ಯಾವುದೇ ನೈಜ ಭಾರತೀಯ ನಾಗರಿಕರನ್ನು ಹೊರಗಿಡಲು ಸಾಧ್ಯವಿಲ್ಲ. ಹೊರಗಿಡಲಾದ ಎಲ್ಲರ ಮನವಿಗಳನ್ನು ಪರಿಶೀಲಿಸಲೇ ಬೇಕು ಮತ್ತು ಅದರ ನ್ಯಾಯನಿರ್ಣಯವನ್ನು ಒಂದು ನ್ಯಾಯಾಂಗ ಪ್ರಾಧಿಕಾರ ಯಾವುದೇ ತಾರತಮ್ಯವಿಲ್ಲದೆ ಮಾಡಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.

ಈ ಸರಕಾರ ರಾಷ್ಟ್ರೀಯ ಜನಸಂಖ್ಯಾ ದಾಖಲೆ(ಎನ್.ಪಿ.ಆರ್.)ಯ ತಯಾರಿಯನ್ನು ಪುನರುಜ್ಜೀವನಗೊಳಿಸಿದೆ. ಎಪ್ರಿಲ್ 2020ರಿಂದ ಸಪ್ಟಂಬರ್ 30, 2020ರ ವರೆಗೆ ಒಂದು ಮನೆ-ಮನೆ ಗಣನೆ ನಡೆಸಲಾಗುವುದು ಎಂದು ಒಂದು ಗಝೆಟ್ ಅಧಿಸೂಚನೆ ಪ್ರಕಟಿಸಿದೆ. ಎನ್.ಪಿ.ಆರ್.ನ್ನು 2003ರಲ್ಲಿ ವಾಜಪೇಯಿ ಸರಕಾರದ ಅವಧಿಯಲ್ಲಿ ಪೌರತ್ವ ಕಾಯ್ದೆ ಮತ್ತು ನಿಯಮಗಳನ್ನು ತಿದ್ದುಪಡಿ ಮಾಡಿ ಆರಂಭಿಸಲಾಗಿತ್ತು. ಇದು ಸರಕಾರ ಬದಲಾದ ನಂತರವೂ ಮುಂದುವರೆದಿತ್ತು. ಆದರೆ ಆಧಾರ್ ಪ್ರಶ್ನೆ ಬಂದಾಗ ಮತ್ತು ಅದರ ಜಾರಿ ಆರಂಭವಾದಾಗ, ಎನ್.ಪಿ.ಆರ್ ಅನಗತ್ಯ ಪುನರಾವರ್ತನೆ ಎಂದು ಅದನ್ನು ಕೈಬಿಡಲಾಯಿತು. ಅದಕ್ಕೆ ಈಗ ಮತ್ತೆ ಜೀವ ತುಂಬುತ್ತಿರುವುದು ವಿಚಿತ್ರವಾಗಿದೆ. ಇದನ್ನು ಈ ಎನ್.ಆರ್.ಪಿ. ಯ ಆಧಾರದಲ್ಲಿ ಒಂದು ಅಖಿಲ ಭಾರತ ಎನ್.ಆರ್.ಸಿ.ಯನ್ನು ತಯಾರಿಸಲಿಕ್ಕಾಗಿ ಮಾಡಲಾಗುತ್ತಿದೆ.

ಇದೇ ಸಮಯದಲ್ಲಿ ಚುನಾವಣಾ ಆಯೋಗವು ಚುನಾಯಿಸುವವರ ದೃಢೀಕರಣ ಪ್ರಕ್ರಿಯೆ(ಇ.ವಿ.ಪಿ.) ಎಂಬುದನ್ನು ಪ್ರಕಟಿಸಿದೆ, ಮತ್ತು ಮತದಾರರು ಆನ್‌ಲೈನ್ ದಾಖಲಾತಿ ನಡೆಸಬೇಕು ಎಂದು ಹೇಳಿದೆ. ಇದು ಬಹುಪಾಲು ಗ್ರಾಮೀಣ ಮತ್ತು ಒಳನಾಡು ಪ್ರದೇಶಗಳ ಭಾಗಗಳಲ್ಲಿ ಸಾಧ್ಯವಿಲ್ಲದ ಪ್ರಕ್ರಿಯೆ ಮತ್ತು ಇದು ಮತದಾರರನ್ನು ಹೊರಗಿಡುವ ಒಂದು ಪ್ರಕ್ರಿಯೆಗೆ ದಾರಿ ಮಾಡಿಕೊಡುತ್ತದೆ. ಈಗಾಗಲೇ ಎಲ್ಲ ಮತದಾರರಿಗೂ ಇಪಿಐಸಿ ಕಾರ್ಡುಗಳನ್ನು ನೀಡಲಾಗಿದ್ದು, ಅದರೊಂದಿಗೆ ಫೋಟೋ ಇರುವ ಚುನಾವಣಾ ಪಟ್ಟಿಗಳೂ ಇವೆ. ಆದ್ದರಿಂದ ಈ ಇ.ವಿ.ಪಿ. ಕಸರತ್ತೂ ಕೂಡ ನಿರ್ದಿಷ್ಟವಾಗಿ ಗುರಿಮಾಡುವ ಉದ್ದೇಶದಿಂದಲೇ ಬರುತ್ತಿರುವಂತೆ ಕಾಣುತ್ತಿದೆ.

ಇದರೊಂದಿಗೇ, ಗೃಹಮಂತ್ರಿಗಳು ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಮಸೂದೆ (ಸಿ.ಎ.ಬಿ.)ಯನ್ನು ಪಾಸು ಮಾಡಲಾಗುವುದು ಎಂದೂ ಪ್ರಕಟಿಸಿದ್ದಾರೆ. ಈ ಮೂಲಕ ಅವರು ಎನ್.ಆರ್.ಸಿ. ಪಟ್ಟಿಯಲ್ಲಿ ಹೆಸರು ಇರದ ಮುಸ್ಲಿಮೇತರರಿಗೆ ಪೌರತ್ವವನ್ನು ಕೊಡಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ, ಅತ್ತ ಮುಸ್ಲಿಮರಿಗೆ, ಅವರು ನಮ್ಮ ದೇಶದಲ್ಲಿಯೇ ಹುಟ್ಟಿರುವ ಮತ್ತು ತಲೆಮಾರುಗಳಿಂದ ವಾಸಿಸುತ್ತಿರುವ ನೈಜ ಪೌರರಾಗಿದ್ದರೂ, ಅದನ್ನು ನಿರಾಕರಿಸಲಾಗುವುದು.

ಈ ನಾಲ್ಕೂ ಪ್ರಕ್ರಿಯೆಗಳನ್ನು ಒಟ್ಟಾಗಿ ನೋಡಿದಾಗ, ಅವು ಕೆಲವು ಜನವಿಭಾಗಗಳ ಮೇಲೆ ಗುರಿಯಿಟ್ಟು ಧ್ರುವೀಕರಣವನ್ನು ತೀಕ್ಷ್ಣಗೊಳಿಸುವುದಕ್ಕಾಗಿಯೇ ಎಂಬುದರ ಸ್ಪಷ್ಟ ಸೂಚನೆಯಾಗಿದೆ. ಧರ್ಮದ ಆಧಾರದಲ್ಲಿ ಪೌರತ್ವವನ್ನು ನೀಡುವುದು ಭಾರತೀಯ ಸಂವಿಧಾನದ ಮೂಲ ಬುನಾದಿಗಳ ಉಲ್ಲಂಘನೆಯಾಗುತ್ತದೆ. ಏಕೆಂದರೆ ನಮ್ಮ ಸಂವಿಧಾನ ಪೌರತ್ವವನ್ನು ಮಾತ್ರವಲ್ಲ, ಮೂಲಭೂತ ಹಕ್ಕುಗಳನ್ನು ಕೂಡ ಜಾತಿ, ಪಂಥ ಅಥವ ಲಿಂಗದ ತಾರತಮ್ಯವಿಲ್ಲದೆ ನೀಡುತ್ತದೆ.

ಇವೆಲ್ಲವೂ ಅನಗತ್ಯ ಕಸರತ್ತುಗಳು. ಏಕೆಂದರೆ ದೇಶದಲ್ಲಿ ಆಧಾರ್ ಕಾರ್ಡ್‌ಗಳನ್ನು ಸಾರ್ವತ್ರಿಕಗೊಳಿಸಲಾಗಿದೆ. ಇ.ಪಿ.ಐ.ಸಿ.ಗಳು ಮತ್ತು ಫೋಟೋಗಳು ಇರುವ ಮತದಾರ ಪಟ್ಟಿಗಳು ದೇಶದ ಎಲ್ಲ ಮತದಾರರ ಪಟ್ಟಿಯನ್ನು ಹೊಂದಿವೆ, ಇವನ್ನು ಪ್ರತಿವರ್ಷ ಪರಿಷ್ಕರಿಸಲಾಗುತ್ತಿದೆ. ಇವೆಲ್ಲವೂ ಇರುವಾಗ, ಎನ್.ಆರ್.ಸಿ.ಯನ್ನು ಅಸ್ಸಾಂನ ಆಚೆಗೂ ವಿಸ್ತರಿಸುವ, ಎನ್.ಪಿ.ಆರ್. ಗಣತಿ ನಡೆಸುವ, ಇ.ವಿ.ಪಿ.ಯಿಂದ ಚುನಾವಣಾ ಪಟ್ಟಿಗಳನ್ನು ಪುನರಾವರ್ತಿಸುವ ಮಾತುಗಳನ್ನು ಒಂದೇ ಕಾಲದಲ್ಲಿ ಆಡುತ್ತಿರುವುದು ಹಾಗೂ ಸಿ.ಎ.ಬಿ.ಯನ್ನು ಪಾಸು ಮಾಡುವ ಆಶ್ವಾಸನೆ ಇವೆಲ್ಲವೂ ಆರೆಸ್ಸೆಸ್‌ನ ಕೋಮುವಾದಿ ವೋಟ್ ಬ್ಯಾಂಕನ್ನು ಕ್ರೋಡೀಕರಿಸಲು ದೇಶದಲ್ಲಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸುವ ಪ್ರಯತ್ನಗಳನ್ನು ಸೂಚಿಸುತ್ತವೆ.

ಆಧಾರ್, ಇ.ಪಿ.ಐ.ಸಿ. ಇತ್ಯಾದಿ ವ್ಯವಸ್ಥೆಗಳು ಈಗಾಗಲೇ ಅಸ್ತಿತ್ವದಲ್ಲಿ ಇರುವಾಗ ಈ ಸರಕಾರ ಆರಂಭಿಸಿರುವ ಈ ಹೊಸ ಪ್ರಕ್ರಿಯೆಗಳು ಸಾವಿರಾರು ಕೋಟಿ ರೂ.ಗಳನ್ನು ವ್ಯಯಿಸುವ ಅನಗತ್ಯ ಪುನರಾವರ್ತನೆ. ಆರ್ಥಿಕ ಹಿಂಜರಿತದ ಸಮಯದಲ್ಲಿ ದೇಶ ಇಂತಹ ಅನಗತ್ಯ ಪುನರಾವರ್ತನೆಗೆ ಅಗಾಧ ವೆಚ್ಚಗಳನ್ನು ಭರಿಸಲಾರದು, ಇವನ್ನು ನಿಲ್ಲಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ ಬ್ಯುರೊ ಆಗ್ರಹಿಸಿದೆ.

ಸಬ್ಸಿಡಿ ದರಗಳಲ್ಲಿ ಆಹಾರಧಾನ್ಯ ನೀಡಿಕೆಗಳನ್ನು ಹೆಚ್ಚಿಸಬೇಕು:

ಸರಕಾರೀ ಗೋದಾಮುಗಳಲ್ಲಿ ಆಹಾರಧಾನ್ಯಗಳ ದಾಸ್ತಾನು, ವರದಿಗಳ ಪ್ರಕಾರ, ಆಗಸ್ಟ್ 19, 2019ರಂದು 713 ಲಕ್ಷ ಟನ್‌ಗಳಷ್ಟು ಅತ್ಯುನ್ನತ ದಾಖಲೆ ಮಟ್ಟದಲ್ಲಿ ಇದೆ. ಎಲ್ಲ ವರದಿಗಳೂ ನಿಜ ಆದಾಯಗಳು ಇಳಿದಿವೆ, ಅಪೌಷ್ಟಿಕತೆ ಹೆಚ್ಚುತ್ತಿದೆ ಎಂದು ಸೂಚಿಸುತ್ತಿವೆ, ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನ 119 ದೇಶಗಳಲ್ಲಿ 103ನೇ ಸ್ಥಾನದಲ್ಲಿದೆ. ಹಸಿವು ಒಂದು ದೊಡ್ಡ ಸಂಖ್ಯೆಯಲ್ಲಿ ಜನಗಳನ್ನು ಬಾಧಿಸುತ್ತಿದೆ ಎಂಬುದು ಸ್ಪಷ್ಟ.

ಆದ್ದರಿಂದ ಸರಕಾರ ಪ್ರತಿಕುಟುಂಬಕ್ಕೆ ಕನಿಷ್ಟ 35 ಕೆಜಿ ಆಹಾರಧಾನ್ಯಗಳನ್ನು ಸಬ್ಸಿಡಿ ದರಗಳಲ್ಲಿ ನೀಡುವುದಾಗಿ ಪ್ರಕಟಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹಿಸಿದೆ.

ಅರಣ್ಯ ಹಕ್ಕುಗಳ ಕಾಯ್ದೆಯ ಜಾರಿಯಾಗಬೇಕು:

ಈಗ ನಡೆಯುತ್ತಿರುವ ಸುಪ್ರಿಂ ಕೋರ್ಟ್ ವಿಚಾರಣೆಗಳಲ್ಲಿ ೨೩ ಲಕ್ಷ ಆದಿವಾಸಿ ಕುಟುಂಬಗಳ ಮೇಲೆ ಒಕ್ಕಲೆಬ್ಬಿಸುವ ಬೆದರಿಕೆಯ ಕತ್ತಿ ತೂಗುತ್ತಿದೆ. ಆದರೆ ಈ ಸರಕಾರ ನ್ಯಾಯಾಲಯಗಳಲ್ಲಿ ತಮ್ಮ ಹಕ್ಕುಗಳನ್ನು ಘೋಷಿಸಿರುವ ಈ ಆದಿವಾಸಿಗಳ ರಕ್ಷಣೆಯ ವಿಚಾರವನ್ನು ಕೈಗೆತ್ತಿಕೊಂಡಿಲ್ಲ, ಅವರ ರಕ್ಷಣೆಯ ವಾದವನ್ನು ಮುಂದಿಡಲು ಒಬ್ಬ ಹಿರಿಯ ಕಾನೂನು ಪ್ರತಿನಿಧಿಯನ್ನು ಕಳಿಸಿಲ್ಲ.

ಅರಣ್ಯ  ಹಕ್ಕುಗಳ ಕಾಯ್ದೆಯನ್ನು ಯಾವುದೇ ರೀತಿಯಲ್ಲಿ ದುರ್ಬಲಗೊಳಿಸದೆ ಜಾರಿಗೊಳಿಸಬೇಕು ಎಂದು ಪೊಲಿಟ್‌ಬ್ಯುರೊ ಆಗ್ರಹಿಸಿದೆ.

ಕಾನೂನು ಉಲ್ಲಂಘಿಸುವವರಿಗೆ ರಕ್ಷಣೆ ನಿಲ್ಲಬೇಕು:

ಅಮಾಯಕ ಜನಗಳನ್ನು ಗುಂಪುಗಳು ಬಡಿದು ಹಾಕುವ, ಸಾಯಿಸುವ ಪ್ರಕರಣಗಳಲ್ಲಿ, ಈ ಸರಕಾರ ಮತ್ತು ಅದರ ಏಜೆನ್ಸಿಗಳು ಅಪರಾಧಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವ ಸಾಧನಗಳಾಗುತ್ತಿವೆ. ಮಹಿಳೆಯರ ಮೇಲೆ ಬಲಾತ್ಕಾರವೂ ಸೇರಿದಂತೆ ಹಿಂಸಾಚಾರಗಳ ಆರೋಪಿಗಳಿಗೆ ರಕ್ಷಣೆ ನೀಡಲಾಗುತ್ತಿದೆ. ಮಹಿಳೆಯರ ಮೇಲೆ ಅತ್ಯಾಚಾರಗಳೊಂದಿಗೇ, ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೂ ದಾಳಿಗಳು ಅಭೂತಪೂರ್ವ ರೀತಿಯಲ್ಲಿ ಹೆಚ್ಚುತ್ತಿವೆ. 2016ರಿಂದ ಈ ಸರಕಾರ ಮಹಿಳೆಯರ ವಿರುದ್ಧ ಅಪರಾಧಗಳ ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ತಪ್ಪಿತಸ್ಥರನ್ನು ಕಾನೂನಿನ ಪ್ರಕಾರ ಶಿಕ್ಷಿಸಬೇಕು, ಈ ಮೋದಿ ಸರಕಾರ ಇಂತಹ ಕ್ರಿಮಿನಲ್‌ಗಳಿಗೆ ಪೋಷಣೆ ಒದಗಿಸುವುದನ್ನು ನಿಲ್ಲಿಸಬೇಕು ಎಂದು ಪೊಲಿಟ್‌ಬ್ಯುರೊ ಆಗ್ರಹಿಸಿದೆ.

ಜನಗಳ ಮೇಲೆ ಹೆಚ್ಚೆಚ್ಚು ಆರ್ಥಿಕ ಹೊರೆಗಳು:

ದೇಶದಲ್ಲಿ ಅಭೂತಪೂರ್ವ ಆರ್ಥಿಕ ಮಂದಗತಿ  ಆರ್ಥಿಕ ಹಿಂಜರಿತದ ಅಂಚಿಗೆ ಬರುತ್ತಿದೆ, ದೊಡ್ಡ ಪ್ರಮಾಣದಲ್ಲಿ ಉದ್ಯೋಗನಷ್ಟಗಳಾಗುತ್ತಿವೆ, ಲಕ್ಷಾಂತರ ಮಂದಿಯನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ, ಮುಂದುವರೆಯುತ್ತಿರುವ ಕೃಷಿ ಸಂಕಟ ಇವೆಲ್ಲವೂ ಜನಗಳ ಮೇಲೆ ಹೆಚ್ಚೆಚ್ಚು ಸಂಕಟಗಳನ್ನು ಹೇರುತ್ತಿವೆ.

ಇವುಗಳ ವಿರುದ್ಧ ಅಖಿಲ ಭಾರತ ಪ್ರತಿಭಟನೆಗಳನ್ನು ಸಂಘಟಿಸಲು ಮತ್ತು ಪರಿಹಾರಗಳನ್ನು ಆಗ್ರಹಿಸಲು ಎಡಪಕ್ಷಗಳು ಸಪ್ಟಂಬರ್ 20ರಂದು ಒಂದು ಅಖಿಲ ಭಾರತ ಸಮಾವೇಶಕ್ಕೆ ಕರೆ ನೀಡಿವೆ. ಈ ಸಮಾವೇಶದಲ್ಲಿ ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್) ಲಿಬರೇಶನ್, ಆರ್‌ ಎಸ್‌ ಪಿ ಮತ್ತು ಎ ಎಫ್‌ ಬಿ ಒಂದು ಅಖಿಲ ಭಾರತ ಜಂಟಿ ಕಾರ್ಯಕ್ರಮಕ್ಕೆ ಕರೆ ನೀಡಲಿವೆ.

ಕೊಲ್ಕತ ಪ್ಲೀನಂನ ನಿರ್ಣಯಗಳ ಜಾರಿಯ ಪರಾಮರ್ಶೆ:

ಕೇಂದ್ರ ಸಮಿತಿಯ ನಿರ್ಣಯದಂತೆ, ಪೊಲಿಟ್‌ಬ್ಯುರೊ ಡಿಸೆಂಬರ್ ೨೦೧೫ರಲ್ಲಿ ಕೊಲ್ಕತಾದಲ್ಲಿ ನಡೆದ ಸಂಘಟನಾ ಪ್ಲೀನಂನ ನಿರ್ಣಯಗಳ ಜಾರಿಯ ಬಗ್ಗೆ ಎಲ್ಲ ರಾಜ್ಯಗಳು ಕಳಿಸಿರುವ ವರದಿಗಳ ಆಧಾರದಲ್ಲಿ ಒಂದು ವರದಿಯನ್ನು ಚರ್ಚಿಸಿತು. ಈ ಚರ್ಚೆಗಳ ಆಧಾರದಲ್ಲಿ ಪೊಲಿಟ್‌ಬ್ಯುರೊ ಒಂದು ವರದಿಯನ್ನು ತಯಾರಿಸುತ್ತದೆ. ಇದನ್ನು ಅಕ್ಟೋಬರ್ 2 ರಿಂದ 4ರ ವರೆಗೆ ನವದೆಹಲಿಯಲ್ಲಿ ನಡೆಯುವ ಪಕ್ಷದ ಕೇಂದ್ರ ಸಮಿತಿಯ ಸಭೆ ಪರಿಶೀಲಿಸಿ ಅಂಗೀಕರಿಸುತ್ತದೆ.

Leave a Reply

Your email address will not be published. Required fields are marked *