ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಸಿಪಿಐ(ಎಂ) ಅಭ್ಯರ್ಥಿ ಡಾ. ಅನಿಲ್ ಕುಮಾರ್

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರಕ್ಕೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಅಭ್ಯರ್ಥಿಯಾಗಿ ಡಾ. ಅನಿಲ್ ಕುಮಾರ್ ಆಯ್ಕೆಯಾಗಿದ್ದು, ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಅವರು ವಿವರಣೆ ನೀಡಿದರು;

ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರ ಜನರಿಗೆ ಸಂಕಷ್ಟ ಉಂಟುಮಾಡುವ ಜನವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿವೆ. ವಿಧಾನಸಭೆಯಲ್ಲಿ ಜನರ ಪರವಾಗಿ ಧ್ವನಿ ಎತ್ತುವವರಿಲ್ಲ. ಸಿಪಿಐ(ಎಂ) ಪಕ್ಷ ಗೆಲುವು ಕಂಡರೆ ಮಾತ್ರ ದುಡಿಯುವ ವರ್ಗಗಳ ಪರವಾಗಿ ವಿಧಾನಸೌಧದಲ್ಲಿ ಧ್ವನಿ ಮೊಳಗಲಿದೆ. ಬಾಗೇಪಲ್ಲಿ ಕ್ಷೇತ್ರದಲ್ಲಿ ಈ ಬಾರಿ ನಮ್ಮ ಪಕ್ಷ ಗೆಲವು ಸಾಧಿಸಲಿದೆ. ಪಕ್ಷದ ಅಭ್ಯರ್ಥಿಯಾಗಿ ಜನಪರ ವೈದ್ಯ ಡಾ. ಅನಿಲ್ ಕುಮಾರ್ ಆವುಲಪ್ಪ ಅವರು ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಜನರು ಈ ಹಿಂದಿನಿಂದಲೂ ಸಿಪಿಐ(ಎಂ) ಬಗ್ಗೆ ಅಪಾರ ಪ್ರೀತಿ ತೋರುತ್ತಿದ್ದಾರೆ. ರಾಜ್ಯದಲ್ಲಿ ಜನರ ಪರವಾಗಿ ಧ್ವನಿಮೊಳಗಿಸಲು ಬಾಗೇಪಲ್ಲಿ ಜನತೆ ಜೊತೆಯಾಗಬೇಕು. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದವರು ಚುನಾಯಿತರಾಗಿದ್ದು, ಅಭಿವೃದ್ಧಿ ಮಾತ್ರ ಸಾಧ್ಯವಾಗಿಲ್ಲ. ಜನರು ಭ್ರಮನಿರಸನಗೊಂಡಿದ್ದಾರೆ. ಮಾಜಿ ಶಾಸಕ  ಜಿ.ವಿ.ಶ್ರೀರಾಮರೆಡ್ಡಿ ಬಾಗೇಪಲ್ಲಿ ಕ್ಷೇತ್ರದಲ್ಲಿ ಸಿಪಿಐ(ಎಂ) ಪಕ್ಷಕ್ಕೆ ಬುನಾದಿ ಹಾಕಿದ್ದವರು.  ಕ್ಷೇತ್ರದಲ್ಲಿ ಕಾಂಗ್ರೆಸ್ ಬಗ್ಗೆ ಇರುವ ಅತೃಪ್ತಿ ಸಿಪಿಐ(ಎಂ) ಬಗ್ಗೆ ಇರುವ ಒಲವು ಪಕ್ಷದ ಗೆಲುವಿಗೆ ಕಾರಣವಾಗಲಿದೆ. ರಾಜ್ಯದ ಅಭಿವೃದ್ಧಿಗೆ ಮತ್ತು ಸೌಹಾರ್ದಕ್ಕೆ ಬಿಜೆಪಿ ಮಾರಕವಾಗಿದೆ ಎಂದು ಯು. ಬಸವರಾಜ ಹೇಳಿದರು.

ಡಾ. ಅನಿಲ್ ಕುಮಾರ್ ಮಾತನಾಡಿ, ‘ದೆಹಲಿಯ ವಿಜ್ಞಾನ ಭವನದ ಸ್ನಾತಕೋತ್ತರ ಪದವಿ ಪಡೆದಾಗ ಎಷ್ಟು ಸಂತೋಷವಾಗಿತ್ತೊ ಅದಕ್ಕಿಂತ ಹೆಚ್ಚು ಸಂತೋಷ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾಗಿರುವುದಕ್ಕೆ ಆಗುತ್ತಿದೆ. ಸಿಪಿಐ(ಎಂ) ಬೆಂಬಲದಿಂದ ಸಮಾಜದ ಸಮಸ್ಯೆಗಳಿಗೆ ಚಿಕಿತ್ಸೆ ಮಾಡುವ ಅವಕಾಶ ದೊರೆಯುತ್ತಿದೆ ಎಂದು ತಿಳಿಸಿದರು.

ಬಾಗೇಪಲ್ಲಿಯಲ್ಲಿ ಸಿಪಿಐ(ಎಂ) ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಅವರ ಕಾಲಾವಧಿಯಲ್ಲಿ ಅಭಿವೃದ್ಧಿ ಕೆಲಸವಾಗಿವೆ. ಅದರ ಹೊರತಾಗಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕಿನ 49 ಹಳ್ಳಿಗಳಲ್ಲಿ ಇಲ್ಲಿಯವರೆಗೂ ಒಬ್ಬರೂ ಪದವಿ ಪಡೆದಿಲ್ಲ. ಜನರ ಆರೋಗ್ಯ, ಶಿಕ್ಷಣದ ಪರವಾಗಿ ಕೆಲಸ, ದುಡಿಯುವ ವರ್ಗಗಳ ಆತ್ಮಗೌರವ ಹೆಚ್ಚಿಸುವ ಕೆಲಸ ಮಾಡಲಾಗುವುದು, ಜನ ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಸಿಪಿಐ(ಎಂ) ಭದ್ರಕೋಟೆ: ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ಸಿಪಿಐ(ಎಂ) ಪಕ್ಷದ ಭದ್ರಕೋಟೆ ಅಂತಲೇ ಖ್ಯಾತಿ ಪಡೆದಿದೆ. ರಾಜ್ಯದಲ್ಲಿ ಪಕ್ಷಕ್ಕೆ ಹಳ್ಳಿಹಳ್ಳಿಗಳಲ್ಲಿಯೂ ಕಾರ್ಯಕರ್ತರಿರುವ ಕ್ಷೇತ್ರ ಬಾಗೇಪಲ್ಲಿ. 1980ರ ದಶಕದಿಂದ ಇಲ್ಲಿಯವರೆಗೂ ಸಿಪಿಐ(ಎಂ)ನ ಕೆಂಬಾವುಟ ಗಟ್ಟಿಯಾಗಿ ನೆಲೆಯೂರಿದೆ. 1983ರಲ್ಲಿ ಎ.ವಿ. ಅಪ್ಪಾಸ್ವಾಮಿರೆಡ್ಡಿ ಮೊದಲ ಬಾರಿ ಶಾಸಕರಾಗಿ ಗೆಲ್ಲುವ ಜನತೆ ಪರವಾದ ಕೆಲಸಗಳಿಗೆ ಮುನ್ನುಡಿ ಬರೆದರು.

ಆ ನಂತರದಲ್ಲಿ ಜಿ.ವಿ.ಶ್ರೀರಾಮರೆಡ್ಡಿಯವರು 1982ರಲ್ಲಿ ಬಾಗೇಪಲ್ಲಿಯಲ್ಲಿ ಪೂರ್ಣಾವಧಿ ಕಾರ್ಯಕರ್ತರಾಗಿ ಬಂದರು. ಅವರು 1985ರಲ್ಲಿ ಸಿಪಿಐ(ಎಂ) ಅಭ್ಯರ್ಥಿಯಾದರು. ಶ್ರೀರಾಮರೆಡ್ಡಿ ಅವರು ಎಂಟು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು. ಎರಡು ಬಾರಿ(1994, 2004) ಶಾಸಕರಾಗಿ ಗೆಲುವು ಸಾಧಿಸುವ ಮೂಲಕ ಇಂದಿಗೂ ಜನಮಾನಸದಲ್ಲಿ ಶಾಸಕರೆಂದರೆ ಶ್ರೀರಾಮರೆಡ್ಡಿ ಅವರಂತೆ ಇರಬೇಕೆಂದು ದಾಖಲಿಸಿಕೊಂಡಿದ್ದರು.

dr anil kumar cpim1

ಪ್ರಜಾವೈದ್ಯ ಡಾ. ಅನಿಲ್ ಕುಮಾರ್: ಬಾಗೇಪಲ್ಲಿಯಲ್ಲಿ ಪೀಪಲ್ಸ್ ಆಸ್ಪತ್ರೆ ನಡೆಸುವ ಡಾ. ಅನಿಲ್ ಕುಮಾರ್ ಆವುಲಪ್ಪ ತಾಲ್ಲೂಕಿನಲ್ಲಿ ‘ಪ್ರಜಾವೈದ್ಯ’ ಎಂದೇ ಪರಿಚಿತರಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕಿನ 200 ಗ್ರಾಮಗಳಲ್ಲಿ ಕೋವಿಡ್ ಪ್ರಥಮ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಿದರು.

ಆರೋಗ್ಯ ವ್ಯವಸ್ಥೆಯತ್ತ ಜನ ಬರುವುದಕ್ಕೆ ಬದಲಾಗಿ ಜನರತ್ತ ಆರೋಗ್ಯ ವ್ಯವಸ್ಥೆ ತೆರಳಬೇಕು ಎನ್ನುವ ಮಹತ್ವದ ತಾತ್ವಿಕ ನಿಲುವನ್ನು ಆಧಾರವಾಗಿರಿಸಿಕೊಂಡು ಗ್ರಾಮಗಳಲ್ಲಿ ಸ್ವಯಂಸೇವಕರ ತಂಡಗಳನ್ನು ಕಟ್ಟಿ ಆ ಮೂಲಕ ಗುರುತರ ಸೇವೆ ಸಲ್ಲಿಸುತ್ತಿರುವ ಡಾ. ಅನಿಲ್ ಕುಮಾರ್ ಅವರಿಗೆ, ಈ ಮಹತ್ವದ ಕಾರ್ಯಕ್ಕೆ ಅನೇಕ ಸಾರ್ವಜನಿಕ ಸೇವಾ ಸಂಸ್ಥೆಗಳು ಮತ್ತು ಜನಪರ ಸಂಘಟನೆಗಳು ಬೆನ್ನೆಲುಬಾಗಿ ನಿಂತಿವೆ. ಈ ಅನುಭವವನ್ನು ರಾಜ್ಯದ ಇತರೆಡೆಯೂ ವಿಸ್ತರಿಸಿದ ಅವರು ವಿಶೇಷವಾಗಿ ಪಶ್ಚಿಮಘಟ್ಟದಲ್ಲಿರುವ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮುಂತಾದ ಜಿಲ್ಲೆಗಳ ಆದಿವಾಸಿ ಸಮುದಾಯಗಳ ನಡುವೆಯೂ ವೈದ್ಯಕೀಯ ಸೇವೆ ನೀಡಿದ್ದಾರೆ.

ಸಮಾಜದ ವಿವಿಧ ರಂಗಗಳಲ್ಲಿ ತಮ್ಮದೇ ಆದ ವಿಶಿಷ್ಟ ಸೇವೆ ಮತ್ತು ಕೊಡುಗೆಗಳನ್ನು ನೀಡಿರುವ ಸಾಧಕರಿಗೆ ಮಾಧ್ಯಮ ಸಂವಹನ ಕ್ಷೇತ್ರದ ಸಂಸ್ಥೆಯಾದ ಭಾರತದ ಸಾರ್ವಜನಿಕ ಸಂಬಂಧಗಳ ಮಂಡಳಿ(ಪಿ.ಸಿ.ಆರ್.ಐ.) ಕೊಡುವ ಪ್ರತಿಷ್ಟಿತ ‘ಚಾಣಕ್ಯ ಪ್ರಶಸ್ತಿ’ ಇವರಿಗೆ ಲಭಿಸಿದೆ.

Leave a Reply

Your email address will not be published. Required fields are marked *