ಗೌರವಾನ್ವಿತ ನ್ಯಾಯಮೂರ್ತಿಗಳೇ, ಕಾರ್ಮಿಕರು ಹುಳುಗಳಂತೆ ಸಾಯಬೇಕೆ?

ಗಣರಾಜ್ಯೋತ್ಸವ ದಿನದ ಮುಂಜಾನೆ, ಕೋಲ್ಕತಾದ ಹೊರವಲಯದಲ್ಲಿರುವ ಆನಂದಪುರದಲ್ಲಿರುವ ನಸಿರಾಬಾದ್ ಗೋದಾಮು ಸಂಕೀರ್ಣದಲ್ಲಿ ಕಾರ್ಮಿಕರು ಸುಟ್ಟು ಕರಕಲಾದ ಘೋರ ಘಟನೆ ನಡೆಯಿತು. ಜನವರಿ 29ರ ಹೊತ್ತಿಗೆ ಸಾವಿನ ಸಂಖ್ಯೆ 21ಕ್ಕೆ ಏರಿತ್ತು. ಮಾಧ್ಯಮಗಳ ಇತ್ತೀಚಿನ ವರದಿಗಳ ಪ್ರಕಾರ ಮೃತರ ಸಂಖ್ಯೆ 31ಕ್ಕೇರಿದೆ. ಜನವರಿ 29ರ ಹೊತ್ತಿಗಾಗಲೇ ಇನ್ನೂ ಸುಮಾರು 28 ಕಾರ್ಮಿಕರು ನಾಪತ್ತೆಯಾಗಿದ್ದರಿಂದ ಆರಂಭದಲ್ಲಿನ ಅಂಕಿಸಂಖ್ಯೆಗಳು ತೀರಾ ಕೀಳಂದಾಜಾಗಿತ್ತು ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ತಾತ್ಕಾಲಿಕ ರಾತ್ರಿ ಆಶ್ರಯತಾಣವಾಗಿ ಬಳಕೆಯಾಗುತ್ತಿದ್ದ ಗೋದಾಮು ಬೆಂಕಿ ಹೊತ್ತಿ ಉರಿದಿದ್ದು ಘೋರವಾಗಿತ್ತು. ಪಶ್ಚಿಮ ಬಂಗಾಳದ ನೆರೆಯ ಜಿಲ್ಲೆಗಳಿಂದ ಬಂದ ವಲಸೆ ಕಾರ್ಮಿಕರು ರಾತ್ರಿ ವೇಳೆ ಮಲಗಿದ್ದಾಗ ಹೊರಗಿನಿಂದ ಬೀಗ ಹಾಕಲಾಗಿತ್ತು. ಹೊರಗೆ ಹೋಗಲಾಗದೆ ಉಸಿರುಗಟ್ಟಿ ಅವರು ಪ್ರಾಣ ಕಳೆದು ಕೊಂಡಿದ್ದಾರೆ ಎನ್ನುವುದು ಈ ಪ್ರಕರಣದ ಅತ್ಯಂತ ಕ್ರಿಮಿನಲ್ ಆಯಾಮವಾಗಿದೆ.

ಆಧುನಿಕ ಕಾಲದ ಗುಲಾಮತನದ ಕಟು ವಾಸ್ತವತೆ

ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಮೊಮೊ ಎಂಬ ತಿನಿಸಿನ ರಾಷ್ಟ್ರವ್ಯಾಪಿ ಬ್ರಾಂಡ್ ಆಗಿರುವ ವಾವ್ ಮೊಮೊ ಉತ್ಪಾದನಾ ಘಟಕದಲ್ಲಿ ಈ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆಧುನಿಕ ಕಾಲದ ಗುಲಾಮತನದ ಕಟು ವಾಸ್ತವತೆಯನ್ನು ಈ ಘಟನೆ ಬಯಲಿಗೆ ತರುತ್ತದೆ. ಇಂಥ ಬ್ರಾಂಡ್‌ಗಳ ಅಮಾನುಷ ಆಚರಣೆಗಳನ್ನು ಬಹಿರಂಗಗೊಳಿಸುತ್ತದೆ. ಇಂಥವು ಒಂದು ಸರಳ ಅವಘಡದ ಸಾವುಗಳಲ್ಲ. ಆದರೆ, ಸೂಪರ್‌ ಪ್ರಾಫಿಟ್‌ ಗಾಗಿ ಅನುಸರಿಸಲಾಗುವ ಅಮಾನವೀಯ ಆಚರಣೆಯಿಂದಾಗುವ ಸಾಂಸ್ಥಿಕ ಕೊಲೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ನಿಯಮಿತ ಕೆಲಸದ ಅವಧಿ, ಓವರ್‌ಟೈಮ್ ಪರಿಹಾರ ಮತ್ತು ಸಂಘ ಕಟ್ಟಿಕೊಳ್ಳುವ ಹಕ್ಕುಗಳ ಬಗೆಗಿನ ಸಂಪೂರ್ಣ ಅಗೌರವವನ್ನು ಇದು ಸೂಚಿಸುತ್ತದೆ. ಇಎಸ್‌ಐ ಮತ್ತು ಪ್ರಾವಿಡೆಂಟ್ ಫಂಡ್ ಸಹಿತ ಕಾರ್ಮಿಕರ ಸಾಮಾಜಿಕ ಭದ್ರತಾ ರಕ್ಷಣೆಗಳನ್ನು ನಿರಾಕರಿಸುವ ಮೂಲಕ ಅವರ ಕುಟುಂಬಗಳು ಯಾವುದೇ ಸುರಕ್ಷತೆಯಿಲ್ಲದೆ ಪರದಾಡುವಂತಾಗಿದೆ. ಅನೌಪಚಾರಿಕ ಕಾರ್ಮಿಕರು ಅಗ್ನಿಶಾಮಕ ವ್ಯವಸ್ಥೆ, ತುರ್ತು ನಿರ್ಗಮನ ಮತ್ತು ಮೂಲಭೂತ ವೆಂಟಿಲೇಶನ್ ಸೌಲಭ್ಯಗಳಿಲ್ಲದೆ ಸಾವಿನ ಜಾಲಕ್ಕೆ ಸಿಲಿಕುವ ಬಲವಂತಕ್ಕೆ ಒಳಗಾಗುವುದರ ಪರಿಣಾಮ ಇದಾಗಿದೆ. ಆದ್ದರಿಂದ, ಮೂಲಸೌಕರ್ಯ ಮತ್ತು ನಿಯಮಗಳಿಲ್ಲದಿರುವುದರಿಂದ ಈ ದುರಂತವು ಒಂದು ಸಾಂಸ್ಥಿಕ ಕೊಲೆಯಾಗಿದೆ. ಈ ದುರಂತದ ಗಹನತೆ ಅಲ್ಲಿಗೇ ನಿಲ್ಲುವುದಿಲ್ಲ. ತಪ್ಪಿತಸ್ಥರನ್ನು ಬಂಧಿಸಲು ಅಧಿಕಾರಿಗಳು ಕಿರುಬೆರಳನ್ನೂ ಎತ್ತಿಲ್ಲ. ದುರಂತ ಸಂಭವಿಸಿ ಸಾಕಷ್ಟು ಕಾಲ ಕಳೆದರೂ ಗೋದಾಮಿನ ಮಾಲಿಕನನ್ನು ಪೊಲೀಸರು ಬಂಧಿಸಿಲ್ಲ. ಘಟನಾ ಸ್ಥಳಕ್ಕೆ ಬೇಲಿ ಹಾಕುವ ಮೂಲಕ ದುರಂತದ ಮಟ್ಟವನ್ನು ಮುಚ್ಚಿಹಾಕಲು ರಾಜ್ಯ ಸರ್ಕಾರ ತನ್ನಿಂದಾದ ಕೆಲಸ ಮಾಡಿದೆ.

ಕಾರ್ಮಿಕ ಇಲಾಖೆಯ ಕ್ರಿಮಿನಲ್ ನಿರ್ಲಕ್ಷ್ಯ

ಪರಿಸರ ನಿಯಮಗಳನ್ನು ಉಲ್ಲಂಘಿಸಲು ಮತ್ತು ಲ್ಯಾಂಡ್‌ಫಿಲ್ ಸ್ಥಳಗಳು ಹಾಗೂ ರಾಮ್‌ಸರ್ ತಾಣ ಎಂದು ಕರೆಯಲಾಗುವ ಅಂತಾರಾಷ್ಟ್ರೀಯ ನಿಯೋಜಿತ ವೆಟ್‌ಲ್ಯಾಂಡ್‌ ಗಳನ್ನು ಒತ್ತುವರಿ ಮಾಡಿಕೊಳ್ಳಲು ಟಿಎಂಸಿ ನೇತೃತ್ವದ ರಾಜ್ಯ ಸರ್ಕಾರವು ಕಾರ್ಪೊರೇಟ್ ಕಂಪನಿಗಳೊಂದಿಗೆ ಶಾಮೀಲಾಗಿರುವುದು ನಿಸ್ಸಂಶಯವಾಗಿದ್ದು, ಈ ಪ್ರಕರಣದಲ್ಲಿ ಅದರ ಪಾಲೂ ಪ್ರಮುಖವಾಗಿದೆ. ಈ ನಡುವೆ, ಕಡ್ಡಾಯ ತಪಾಸಣೆ ಮತ್ತು ಅಗ್ನಿಶಾಮಕ ವ್ಯವಸ್ಥೆಗಳನ್ನು ಪರಿಶೀಲಿಸುವಲ್ಲಿ ಕಾರ್ಮಿಕ ಇಲಾಖೆಯ ಕ್ರಿಮಿನಲ್ ನಿರ್ಲಕ್ಷ್ಯವು ಈ ಜಾಗವನ್ನು ಕಾರ್ಮಿಕರಿಗೆ ಸಾವಿನ ತಾಣವನ್ನಾಗಿ ಪರಿವರ್ತಿಸಿದೆ. ಇಂಥ ಸಾಂಸ್ಥಿಕ ಸಾವುಗಳಿಗೆ ರಾಜ್ಯದ ಕಾರ್ಮಿಕ ಇಲಾಖೆಯನ್ನು ಹೊಣೆಗಾರರನ್ನಾಗಿ ಮಾಡಬೇಕು ಎನ್ನುವುದು ಸ್ಪಷ್ಟ.

ಕಾರ್ಮಿಕರಿಗೆ ಇಂಥ ದಯನೀಯ ಪರಿಸ್ಥಿತಿಗಳು ಪಶ್ಚಿಮ ಬಂಗಾಳಕ್ಕೆ ಮಾತ್ರ ಸೀಮಿತ ಎಂದುಕೊಳ್ಳುವುದು ಖಂಡಿತವಾಗಿಯೂ ತಪ್ಪು. ಇದೇ ರೀತಿಯ ಕೆಲಸದ ಪರಿಸ್ಥಿತಿಗಳು ಮತ್ತು ವೃತ್ತಿ ಸಂಬಂಧಿ ಆರೋಗ್ಯದ ವಿನಾಶಕಾರಿ ವಾಸ್ತವತೆ ಬಹುತೇಕ ರಾಜ್ಯಗಳಲ್ಲಿವೆ. ಇದು ಪ್ರಮುಖವಾಗಿ ಒಂದು ವರ್ಗ ಪ್ರಶ್ನೆಯೇ ಆಗಿದೆ.‌

ಸಿಜೆಐ ಅವರ ಪದಗಳು ಕಠೋರವಾಗಿದ್ದವು

ದುಡಿಯುವ ವರ್ಗಕ್ಕೆ ವಿರುದ್ಧವಾದ ವಾಸ್ತವತೆಯನ್ನು ಮುಚ್ಚಿಹಾಕಲೋ ಎನ್ನುವಂತೆ ಜನವರಿ 29ರಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸುಪ್ರೀಂ ಕೋರ್ಟ್ ನಲ್ಲೇ ಪೆಣ್ ತೊಳಿಲಲಾರ್ ಸಂಘಂ ವರ್ಸಸ್ ಭಾರತ ಒಕ್ಕೂಟದ ಪ್ರಕರಣದಲ್ಲಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ಸಂದರ್ಭದಲ್ಲಿ ಹೀಗೆಂದರು: “ಟ್ರೇಡ್ ಯೂನಿಯನ್‌ಗಳ ಕಾರಣದಿಂದ ಭಾರತದಲ್ಲಿ ಎಷ್ಟು ಕಾರ್ಖಾನೆಗಳು ಮುಚ್ಚಿವೆ? ಈ ಎಲ್ಲ ವಾಸ್ತವತೆಗಳನ್ನು ನಾವು ತಿಳಿದುಕೊಳ್ಳೋಣ. ಈ ಝಂಡಾ ಯೂನಿಯನ್‌ಗಳ ಕಾರಣದಿಂದಾಗಿ ದೇಶದ ಎಲ್ಲ ಸಾಂಪ್ರದಾಯಿಕ ಕೈಗಾರಿಕೆಗಳು ದೇಶದಾದ್ಯಂತ ಮುಚ್ಚಿವೆ. ಅವರಿಗೆ ಕೆಲಸ ಮಾಡುವುದು ಇಷ್ಟವಿಲ್ಲ. ದೇಶದಲ್ಲಿ ಕೈಗಾರಿಕಾ ಬೆಳವಣಿಗೆ ನಿಲ್ಲಿಸಲು ಈ ಟ್ರೇಡ್ ಯೂನಿಯನ್ ನಾಯಕರು ಬಹುತೇಕವಾಗಿ ಜವಾಬ್ದಾರರಾಗಿದ್ದಾರೆ”.

ಅವರ ಪದಗಳು ಕಠೋರವಾಗಿದ್ದವು, ಸುಸ್ಪಷ್ಟವಾಗಿತ್ತು ಮತ್ತು ದೇಶದಲ್ಲಿನ ದುಡಿಯುವ ವರ್ಗ-ವಿರೋಧಿ ವಾತಾವರಣವನ್ನು ಪ್ರದರ್ಶಿಸುವಂತಿತ್ತು. ತೀರಾ ಕಮ್ಮಿ ಕೂಲಿಗೆ ದುಡಿಯುವ ಒತ್ತಡಕ್ಕೆ ಒಳಗಾದ ಮತ್ತು ವಾವ್ ಮೊಮೊ ಫ್ಯಾಕ್ಟರಿಯಂಥ ಸಿಹಿ ತಿನಿಸು ಅಂಗಡಿಗಳಲ್ಲಿ ಸಾವಿನ ಜಾಲಕ್ಕೆ ಸಿಲುಕಿದ ಬಡ ವಲಸೆ ಕಾರ್ಮಿಕರು `ಕೆಲಸ ಮಾಡಲು ಇಷ್ಟವಿಲ್ಲದಿರುವುದರಿಂದ’ ಅವಿಶ್ರಾಂತವಾಗಿ ದುಡಿಯುತ್ತಾರೆಯೇ?

ಜಸ್ಟಿಸ್ ಸೂರ್ಯ ಕಾಂತ್ ಅವರು ತಮ್ಮ ವರ್ಗ ಪೂರ್ವಗ್ರಹಕ್ಕೆ ದ್ರೋಹ ಬಗೆದಿದ್ದಾರೆನ್ನುವುದು ನಿಜಕ್ಕೂ ವಿಷಾದದ ಸಂಗತಿ. ವಾಸ್ತವತೆಗೆ ಅವರು ಕುರುಡರಾಗಿರುವುದು ಅವರ ಮಾತುಗಳಿಂದ ತಿಳಿಯುತ್ತದೆ. ಲೇಬರ್ ಬ್ಯೂರೋದ `ಭಾರತದಲ್ಲಿ ಕೈಗಾರಿಕಾ ವಿವಾದಗಳು, ರಿಟ್ರೆಂಚ್ ಮೆಂಟ್‌ಗಳು ಮತ್ತು ಲೇಆಫ್‌ಗಳು’ ವರದಿಯು ಕೈಗಾರಿಕಾ ಸ್ಥಗಿತತೆಗೆ ಅತ್ಯಂತ ಹೆಚ್ಚು ಸಮಗ್ರ ಮತ್ತು ವಸ್ತುನಿಷ್ಠ ಮೂಲವಾಗಿದೆ, ಕೈಗಾರಿಕಾ ವಿವಾದಗಳಲ್ಲಿ ಗಣನೀಯ ಇಳಿಕೆಯಾಗಿದೆ ಎಂದು ಬ್ಯೂರೋದ ಅಂಕಿಅಂಶ ಹೇಳಿದೆ. 2023ರಲ್ಲಿ ಕಳೆದ 17 ವರ್ಷಗಳಲ್ಲೇ ಅತಿ ಕಡಿಮೆ ಕೈಗಾರಿಕಾ ವ್ಯಾಜ್ಯಗಳು ದಾಖಲಾಗಿವೆ. 2023ರ ವೇಳೆ 30 ವಿವಾದಗಳು ಮಾತ್ರವೇ ವರದಿಯಾಗಿವೆ ಎನ್ನುತ್ತದೆ. 2006ಕ್ಕೆ ಹೋಲಿಸಿದರೆ ಇದು ತೀರಾ ವ್ಯತಿರಿಕ್ತವಾಗಿದೆ. ಆ ವರ್ಷ ಅತಿ ಹೆಚ್ಚು 432 ಪ್ರಕರಣಗಳು, 2008ರಲ್ಲಿ 421 ಮತ್ತು 2007ರಲ್ಲಿ 389 ವ್ಯಾಜ್ಯಗಳು ದಾಖಲಾಗಿದ್ದವು.

ಸಂಘಗಳ ಇರುವಿಕೆ ದುರ್ಬಲವಿರುವ ರಾಜ್ಯಗಳಲ್ಲೇ ಮುಚ್ಚುವಿಕೆ ಹೆಚ್ಚು

ಇನ್ನೊಂದೆಡೆ, ಕೈಗಾರಿಕೆಗಳ ಮುಚ್ಚುವಿಕೆಯ ವಿದ್ಯಮಾನದ ವಿಚಾರವನ್ನು ತೆಗೆದುಕೊಂಡರೆ ಸಂಘಟನೆಗಳ ಇರುವಿಕೆ ತುಂಬಾ ದುರ್ಬಲ ಅಥವಾ ಕನಿಷ್ಠವಾಗಿರುವ ರಾಜ್ಯಗಳಲ್ಲೇ ಕೈಗಾರಿಕೆಗಳ ಮುಚ್ಚುವಿಕೆ-ಕಾನೂನುಬದ್ಧ ಹಾಗೂ ಕಾನೂನುಬಾಹಿರ ಎರಡೂ ಸೇರಿ- ಅಧಿಕವಾಗಿರುವುದನ್ನು ಈ ವರದಿ ಬಹಿರಂಗ ಪಡಿಸುತ್ತದೆ. ಇನ್ನೂ ಆಸಕ್ತಿದಾಯಕ ವಿಷಯವೇನೆಂದರೆ ವಿಲೀನ, ಪರಿವರ್ತನೆ, ಬರ್ಖಾಸ್ತು ಅಥವಾ 2013ರ ಕಂಪನಿ ಕಾನೂನುಗಳಡಿ ರದ್ದುಮಾಡಿದ್ದು ಸೇರಿದಂತೆ 2,04,268 ಕಂಪನಿಗಳನ್ನು ಮುಚ್ಚಲಾಗಿದೆ ಎಂದು ಲೋಕಸಭೆಗೆ ಇತ್ತೀಚೆಗೆ ನೀಡಿದ ಲಿಖಿತ ಉತ್ತರದಲ್ಲಿ ಭಾರತ ಸರಕಾರವೇ ತಿಳಿಸಿದೆ. ಇಷ್ಟು ಮಾತ್ರವಲ್ಲದೆ ದಿವಾಳಿಗೆ ಸಂಬAಧಿಸಿದ ಭಾರತೀಯ ಇನ್ಸಾಲ್ವೆನ್ಸಿ ಮತ್ತು ಬ್ಯಾಂಕ್ರಪ್ಸಿ ಮಂಡಳಿಯ ಅಂಕಿಅಂಶಗಳು ಕೂಡ ಕೈಗಾರಿಕೆಗಳ ಮುಚ್ಚುವಿಕೆಗೆ ಕಾರಣ ಮತ್ತು ಲಕ್ಷಣಗಳನ್ನು ಮತ್ತು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಸಾಲ ವಸೂಲಾತಿಯ ಶೇಕಡಾವಾರನ್ನು ಸಮರ್ಥಿಸುತ್ತವೆ.

ಆದ್ದರಿಂದ, ಸಿಜೆಐ ಮಾಡಿದ ಟಿಪ್ಪಣಿಗಳು ಸಂಪೂರ್ಣ ಆಧಾರರಹಿತವಾದದ್ದಾಗಿದೆ. ಟ್ರೇಡ್ ಯೂನಿಯನ್‌ಗಳು ಒಳಗೊಂಡ ಕೈಗಾರಿಕಾ ವ್ಯಾಜ್ಯಗಳು ಕೈಗಾರಿಕಾ ಘಟಕಗಳ ಮುಚ್ಚುವಿಕೆಗೆ ಕಾರಣವಲ್ಲ. ಅದಕ್ಕೆ ತದ್ವಿರುದ್ಧವಾಗಿ, ಪ್ರಸ್ತುತ ನವ ಉದಾರವಾದಿ ವ್ಯವಸ್ಥೆಯೊಳಗಿನ ಆಂತರಿಕ ಬಿಕ್ಕಟ್ಟು ಮತ್ತು ಆರ್ಥಿಕತೆಯ ಎಗ್ಗಿಲ್ಲದ ಕೇಂದ್ರೀಕರಣ ಮತ್ತು ಹಣಕಾಸೀಕರಣವೇ ಇದಕ್ಕೆ ಕಾರಣವಾಗಿದೆ. ಅದು ಎಂಎಸ್‌ಎಂಇ ವಲಯ ಮತ್ತು ಇಡಿಯಾಗಿ ಉತ್ಪಾದನಾ ವಲಯವನ್ನು ತೀವ್ರವಾಗಿ ಬಾಧಿಸುತ್ತದೆ. ಅದರ ಫಲವಾಗಿ ಕೈಗಾರಿಕೆಗಳು ಮುಚ್ಚುತ್ತಿವೆ.

ಆರ್ಥಿಕತೆಯಲ್ಲಿ ಒಟ್ಟಾರೆ ಬೇಡಿಕೆಯ ಕೊರತೆಯಿಂದಾಗಿ

ಇತ್ತೀಚಿನ ಆರ್ಥಿ ಸಮೀಕ್ಷೆ ಮತ್ತು ಬಜೆಟ್ ಪರಿಶೀಲನೆ ಹಾಗೂ ಮುನ್ನೋಟಗಳು ಕೂಡ ಕೈಗಾರಿಕೆಗಳ ಬಿಕ್ಕಟ್ಟಿನ ಕಾರಣಗಳನ್ನು ಎತ್ತಿ ಹಿಡಿದಿವೆ. ಆರ್ಥಿಕತೆಯಲ್ಲಿ ಒಟ್ಟಾರೆ ಬೇಡಿಕೆಯ ಕೊರತೆಯಿಂದಾಗಿ ಕೈಗಾರಿಕೆಗಳು ಅಸಹನೀಯ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ ಎಂದು ಅವುಗಳು ಹೇಳಿವೆ.

ತೀವ್ರ ಅಸಮಾನತೆ ಮತ್ತು ಆರ್ಥಿಕತೆಯ ಉದ್ಯೋಗರಾಹಿತ್ಯ ಬೆಳವಣಿಗೆಯು ದುಡಿಮೆಗಾರರನ್ನು ಹತಾಶೆಯತ್ತ ತಳ್ಳುತ್ತಿದೆ. ಆನಂದಪುರ ದುರಂತವು ಈ ದುರಂತಮಯ ಪರಿಸ್ಥಿತಿಗೆ ಒಂದು ಸಂಕೇತವಾಗಿದೆ. ಈ ವಾಸ್ತವತೆಯನ್ನು ಗುರುತಿಸುವ ಬದಲಿಗೆ ಕಾರ್ಯಾಂಗವು ಸಾಮೂಹಿಕ ಪ್ರತಿಭಟನೆಗಳು, ಸಾಮೂಹಿಕ ಚೌಕಾಶಿ ಮತ್ತು ಸಾಮಾಜಿಕ ಭದ್ರತಾ ಜಾಲದ ರಕ್ಷಣೆ ಇಲ್ಲದಿರುವುದನ್ನು ಖಾತರಿಪಡಿಸಲು ಪ್ರಯತ್ನಿಸುತ್ತಿದೆ.

ವಾಸ್ತವವಾಗಿ, ಸಂವಿಧಾನದ ಆರ್ಟಿಕಲ್ 19 (1) (ಸಿ)ಯಡಿ ಪ್ರದತ್ತವಾಗಿರುವ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಒಂದು ರಕ್ಷಣಾತ್ಮಕ ಅಂಗವಾಗಿ ನ್ಯಾಯಾಂಗವು ಅಧಿಕೃತವಾಗಿ ಮುಂದೆ ಬರಬೇಕಿದೆ. ಸಂವಿಧಾನದ ಈ ವಿಧಿಯು ನಾಗರಿಕರು ಒಂದೆಡೆ ಸೇರುವ ಹಾಗೂ ಸಂಘ ಕಟ್ಟಿಕೊಳ್ಳುವ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ.

ಹೊಸ ಕಾರ್ಮಿಕ ಸಂಹಿತೆಗಳ ಕುರಿತು ಕೇಂದ್ರ ಸರಕಾರ ಆಗಲೇ ಅಧಿಸೂಚನೆ ಹೊರಡಿಸಿರುವುದರಿಂದ, ದಾಳವು ಇನ್ನೂ ಹೆಚ್ಚಾಗಿ ಕಾರ್ಮಿಕರ ವಿರುದ್ಧವೇ ಉರುಳಿದೆ. ಕಾರ್ಪೊರೇಟ್‌ಗಳಿಗೆ ಇನ್ನೂ ಅಧಿಕ ಅನುಕೂಲಕರ ಪರಿಸ್ಥಿತಿಯನ್ನು ಅದು ನಿರ್ಮಿಸಲಿದೆ. ಸಾಮೂಹಿಕ ಪ್ರತಿಭಟನೆ ಮತ್ತು ಚೌಕಾಶಿಯ ಪ್ರತಿಯೊಂದು ಸಾಧ್ಯತೆಯನ್ನು ಅದು ಅಳಿಸಿ ಹಾಕಲಿದೆ. ಒಂದು ಗೌರವಯುತ ಮಾನವ ಅಸ್ತಿತ್ವವಿಲ್ಲದೆ ನಮ್ಮ ದುಡಿಮೆಗಾರರು ಹುಳುಗಳಂತೆ ಸಾಯಲು ಬಿಡಬೇಕೇ ಎನ್ನುವುದೇ ಪ್ರಶ್ನೆಯಾಗಿದೆ.

(ಫೆಬ್ರವರಿ 5, 2026)

ಅನುವಾದ: ವಿಶ್ವ

Leave a Reply

Your email address will not be published. Required fields are marked *