ಕೋವಿಡ್‌ಗೆ ಬಲಿಯಾದವರ ಕುಟುಂಬಗಳಿಗೆ ವಿಪತ್ತು ನಿರ್ವಹಣಾ ಕಾಯ್ದೆಯ ಪ್ರಕಾರ ಪರಿಹಾರ: ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹ

ಕೇಂದ್ರ ಸರಕಾರ ಕೋವಿಡ್ ಮಹಾಸೋಂಕನ್ನು ನಿಭಾಯಿಸಲು ವಿಪತ್ತು ನಿರ್ವಹಣಾ ಕಾಯ್ದೆಯ ಮೊರೆ ಹೋಗಿದೆ. ಈ ಕಾಯ್ದೆಯ ಪ್ರಕಾರ ಒಂದು ವಿಪತ್ತಿಗೆ ಬಲಿಯಾದವರಿಗೆ ಪರಿಹಾರ ಒದಗಿಸಬೇಕು. ಆದರೆ ಈ ರೀತಿ ಅನುಕಂಪದ ಪಾವತಿಗಳು ಸರಕಾರದ ಹಣಕಾಸಿನ ಮೇಲೆ ತೀವ್ರ ಒತ್ತಡಗಳನ್ನು ತರುತ್ತವೆ ಎಂದು ಅದು ಹೇಳುತ್ತಿದೆ. ಕೇಂದ್ರ ಸರಕಾರದ ಈ ತಿಳುವಳಿಕೆಯನ್ನು ತಿರಸ್ಕರಿಸುವುದಾಗಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ. ಈ ಮಹಾಸೋಂಕಿಗೆ ಬಲಿಯಾದವರ ಕುಟುಂಬಗಳಿಗೆ ಅನುಕಂಪದ ಮೇಲೆ ಪರಿಹಾರ ಕೊಡುವುದು ಒಂದು ಮೂಲ ಮಾನವೀಯ ಅಗತ್ಯ ಎಂದು ಅದು ಹೇಳಿದೆ.

ಇದು ಸರಕಾರದ ಹಣಕಾಸಿನ ಮೇಲೆ ತೀವ್ರ ಒತ್ತಡಗಳನ್ನು ಉಂಟು ಮಾಡುತ್ತದೆ ಎಂದು ಮೇಲ್ನೋಟಕ್ಕೆ ಸರಿಯೆನಿಸಬಹುದಾದ ತರ್ಕ. ಆದರೆ ಸರಕಾರ ವಿತ್ತೀಯ ಕೊರತೆಯ ಮಟ್ಟಗಳನ್ನು ಸದಾ ಕಾಪಾಡಿಕೊಳ್ಳಬೇಕೆಂಬ ತನ್ನ ಖಯಾಲಿಗೆ ಅಂಟಿಕೊಳ್ಳುವುದನ್ನು ಇಂತಹ ದೊಡ್ಡ ಪ್ರಮಾಣದ ಬಿಕ್ಕಟ್ಟಿನ ಸಮಯದಲ್ಲಾದರೂ ಕೈಬಿಡುವುದಾದರೆ, ಈ ಪರಿಹಾರಕ್ಕೆ ಅಗತ್ಯವಾದ ಸಂಪನ್ಮೂಲಗಳನ್ನು ಎತ್ತುವುದು ಸಾಧ್ಯವಿದೆ. ಇಂತಹ ಮಹಾ ಅನಾಹುತದ ಸಮಯದಲ್ಲಿ ಇಂತಹ ಹಣಕಾಸು ಮೂಲಭೂತವಾದಕ್ಕೆ ಯಾವುದೇ ಅರ್ಥವಿಲ್ಲ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಅಭಿಪ್ರಾಯ ಪಟ್ಟಿದೆ.

ಕಳೆದ ಒಂದು ವರ್ಷದಲ್ಲಿ ಕೋಟ್ಯಂತರ ಜನಗಳು ತಮ್ಮ ಜೀವನಾಧಾರಗಳನ್ನು ಕಳಕೊಂಡಿದ್ದಾರೆ, ಬದುಕುಳಿಯಲು ಹೆಣಗುತ್ತಿದ್ದಾರೆ. ಅವರಿಗೆ ಅತ್ಯಂತ ಅಸಮರ್ಪಕವಾದ ಆರೋಗ್ಯ ಸೌಕರ್ಯಗಳು, ಜೀವ ಉಳಿಸುವ ಔಷಧಿಗಳ ಕೊರತೆ ಮುಂತಾದವುಗಳಿಂದಾಗಿ ಈ ಮಹಾಸೋಂಕಿನೊಂದಿಗೆ ಸೆಣಸುವಲ್ಲಿಯೂ ಸಿಗುತ್ತಿರುವ ನೆರವು ಅತ್ಯಲ್ಪವೇ. ಕೋಟ್ಯಂತರ ದಿನಗೂಲಿ ಕಾರ್ಮಿಕರು ಬದುಕುಳಿಯಲು ಆಧಾರವಾಗಿರುವ ಅನೌಪಚಾರಿಕ ವಲಯ ಸಂಪೂರ್ಣವಾಗಿ ಧ್ವಂಸವಾಗಿದೆಯೆಂದೇ ಹೇಳಬೇಕಾಗುತ್ತದೆ. ಈ ಹಿಂದೆ ನೋಟುರದ್ಧತಿ ಮತ್ತು ಜಿಎಸ್‌ಟಿಯಿಂದ ಆರಂಭವಾಗಿದ್ದ ಈ ವಲಯದ ಅಳಿವಿನ ಮೇಲೆ ಈಗ ಈ ಮಹಾಸೋಂಕು ಬಂದೆರಗಿದೆ.

ಇಂತಹ ಸನ್ನಿವೇಶದಲ್ಲಿ, ಈ ಮಹಾಸೋಂಕಿಗೆ ಬಲಿಯಾದವರ ಕುಟುಂಬಗಳಿಗೆ ಅನುಕಂಪದ ಮೇಲೆ ಪರಿಹಾರ ಕೊಡುವುದು ಒಂದು ಮೂಲ ಮಾನವೀಯ ಅಗತ್ಯ ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ವಿಪತ್ತು ನಿರ್ವಹಣಾ ಕಾಯ್ದೆಯ ಉಪಬಂಧಗಳ ಪ್ರಕಾರ ಕೋವಿಡ್ ಮಹಾಸೋಂಕಿಗೆ ಬಲಿಯಾಗಿ ಜೀವ ಕಳಕೊಂಡವರ ಕುಟುಂಬಗಳಿಗೆ ಅನುಕಂಪದ ಪರಿಹಾರವನ್ನು ಕೊಡಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸಿದೆ.

Leave a Reply

Your email address will not be published. Required fields are marked *