ಜೀವಹಿಂಡುವ ಬೆಲೆಯೇರಿಕೆ

Prakash_karat
ಪ್ರಕಾಶ್ ಕಾರಟ್

ಒಂದೆಡೆಯಲ್ಲಿ ಬೆಳವಣಿಗೆ ದರ ಕುಸಿಯುತ್ತಿದ್ದು, ಆರ್ಥಿಕ ಹಿಂಜರಿತದ ಪರಿಸ್ಥಿತಿ ಇರುವಾಗದೇಶ ಹಣದುಬ್ಬರದ ಬಲೆಯಲ್ಲಿ ಸಿಲುಕಿಕೊಳ್ಳುತ್ತಿದೆ. ಇವೆಲ್ಲ ಸರ್ಕಾರದ್ದೇ ನೀತಿಗಳ ದುಷ್ಫಲ. ಮೇ 4 ರಿಂದೀಚೆಗೆ ಇಂಧನಗಳ ಬೆಲೆ 24 ಸಲ ಏರಿಕೆಯಾಗಿದೆ. ಜೂನ್‌ನಲ್ಲಿ 22ರ ವರೆಗೆ 12 ಬಾರಿ ಏರಿಸಲಾಗಿದೆ. ಕೋವಿಡ್‌ನಂತಹ ಬಿಕ್ಕಟ್ಟಿನ ಸಮಯದಲ್ಲೂ ಬಿಜೆಪಿ ಸರ್ಕಾರಕ್ಕೆ ಕಾರ್ಪೊರೇಟ್ ವಲಯ ಮತ್ತು ಸೂಪರ್ಶ್ರೀಮಂತರನ್ನು ಬೆಳೆಸುತ್ತಲೇ, ತನ್ನ ಆದಾಯ ಸಂಗ್ರಹಕ್ಕೆ ಜನರನ್ನು ಸುಲಿಗೆ ಮಾಡುವುದೇ ಬೇಕಾಗಿದೆ. ಇದರ ವಿರುದ್ಧ ಹೋರಾಟ, ತ್ವರಿತವಾಗಿ ಎಲ್ಲರಿಗೂ ಉಚಿತ ಲಸಿಕೆಗಾಗಿ ಹೋರಾಟ, ಉಚಿತ ಆಹಾರ ಕಿಟ್ ಸರಬರಾಜು, ಉದ್ಯೋಗ ಖಾತರಿ ಯೋಜನೆಗಳ ವಿಸ್ತರಣೆ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಕೇಂದ್ರೀಯ ತೆರಿಗೆಗಳ ಕಡಿತ ಸಹಿತ ಬೆಲೆಯೇರಿಕೆಗೆ ಕಡಿವಾಣಕ್ಕೆ ಕ್ರಮಗಳಿಗಾಗಿ ಹೋರಾಟ ಇವೆಲ್ಲ ಜೊತೆ ಜೊತೆಯಾಗಿ ಸಾಗುವುದು ಅಗತ್ಯ.

ಎರಡನೇ ಅಲೆಯ ವೇಳೆಯಲ್ಲಿ ಕೋವಿಡ್-19 ಮಹಾಸೋಂಕಿನಿಂದ ಉಂಟಾದ ಅಪಾರ ಸಾಮೂಹಿಕ ಸಂಕಟಗಳು ಹಾಗೂ ಸಾವುಗಳ ಪೀಡೆ ಮೋದಿ ಸರ್ಕಾರದ ನೀತಿಗಳಿಂದಾಗಿ ಇನ್ನಷ್ಟು ಪಟ್ಟು ಹೆಚ್ಚಾಗುತ್ತಿದೆ. ನಿರುದ್ಯೋಗ, ಆದಾಯ ಕುಸಿತ ಮತ್ತು ಹಸಿವಿನಿಂದ ಜನರು ಕಂಗಾಲಾಗಿದ್ದಾರೆ. ಈ ಎಲ್ಲವುಗಳ ಮೇಲೆ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಅಗತ್ಯ ಸಾಮಗ್ರಿಗಳ ಬೆಲೆಯೇರಿಕೆಯ ಭಾರ ಜನರನ್ನು ನಜ್ಜುಗುಜ್ಜುಗೊಳಿಸುತ್ತಿದೆ. ಇವೆಲ್ಲ ಸರ್ಕಾರದ ನೀತಿಗಳ ದುಷ್ಫಲ.

2021ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 2.2 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಮೇ ತಿಂಗಳಲ್ಲಿ ನಿರುದ್ಯೋಗ ದರ ಶೇಕಡ 12ಕ್ಕೆ ತಲುಪಿತು. (ಮೂಲ:ಸಿಎಂಐಇ). ಗೃಹ ಬಳಕೆಯ ಮಟ್ಟಗಳು ಹೊಸ ಪಾತಾಳಕ್ಕೆ ತಲುಪಿವೆ. ಉಚಿತ ಆಹಾರ ಕೇಂದ್ರಗಳ ಮುಂದಿನ ಉದ್ದವಾಗುತ್ತಿರುವ ಸರದಿ ಸಾಲುಗಳೇ ಹಸಿವಿನ ಪ್ರಮಾಣ ಹೆಚ್ಚಾಗುತ್ತಿರುವುದರ ದ್ಯೋತಕವಾಗಿದೆ.

priceris-call him antinationa l
ಅತ್ಯುತ್ತಮ ಅಂಶವೆಂದರೆ ಒಂದು ಶಬ್ದವನ್ನೂ ಅವನು ಉಸುರಲಾರ. “ಅವನು ಧೈರ್ಯ ಮಾಡಿದರೆ ಅವನನ್ನು ದೇಶ-ವಿರೋಧಿ ಎನ್ನೋಣ” ವ್ಯಂಗ್ಯಚಿತ್ರ: ಮಜುಲ್, ಫಸ್ಟ್‌ಪೋಸ್ಟ್

ಇಂಥದ್ದೊಂದು ಸಮಯದಲ್ಲೇ ಕೇಂದ್ರ ಸರ್ಕಾರ ಜನತೆಯ ಮೇಲೆ ಕ್ರೂರ ಬೆಲೆಯೇರಿಕೆಯ ಭಾರವನ್ನು ಹೊರಿಸುತ್ತಿದೆ. ಡೀಸೆಲ್ ಮತ್ತು ಪೆಟ್ರೋಲ್‌ನ ಸತತ ಬೆಲೆಯೇರಿಕೆ ಪ್ರಸಕ್ತ ಹಣದುಬ್ಬರಕ್ಕೆ ಮುಖ್ಯ ಕಾರಣವಾಗಿದೆ. ಮೇ 4ರಿಂದೀಚೆಗೆ ಇಂಧನಗಳ ಬೆಲೆ 24 ಸಲ ಏರಿಕೆಯಾಗಿದೆ. ಜೂನ್‌ನಲ್ಲಿ 22ರ ವರೆಗೆ 12 ಬಾರಿ ಏರಿಸಲಾಗಿದೆ. ಏಳು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೆಟ್ರೋಲ್ 100 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಬೆಂಗಳೂರು, ಮುಂಬೈ, ಹೈದರಾಬಾದ್‌ನಂಥ ಮಹಾನಗರಗಳಲ್ಲಿ ನೂರರ ಗಡಿ ದಾಟಿದೆ.

ಪೆಟ್ರೋಲ್ ಉತ್ಪನ್ನಗಳ ಮೇಲೆ ಕೇಂದ್ರೀಯ ಅಬಕಾರಿ ಸುಂಕ ಮತ್ತು ಇತರ ತೆರಿಗೆಗಳಲ್ಲಿ ಭಾರಿ ಏರಿಕೆಯೇ ಈ ಬೆಲೆಯೇರಿಕೆಗೆ ಮುಖ್ಯ ಕಾರಣವಾಗಿದೆ. ಈ ತೆರಿಗೆಗಳ ಪಾಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಶೇಕಡ 55ರಿಂದ 58ರಷ್ಟಿದೆ. ಇದರ ಪರಿಣಾಮವಾಗಿ 2014-15ರಿಂದ ಸರ್ಕಾರಕ್ಕೆ ಪೆಟ್ರೋಲಿಯಂ ಉತ್ಪನ್ನಗಳಿಂದ ಆದಾಯದಲ್ಲಿ 138%ದಷ್ಟು ಅಪಾರ ಏರಿಕೆಯಾಗಿದೆ.

ಗಗನಕ್ಕೇರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆಗಳು ಸಾರಿಗೆ ವೆಚ್ಚಗಳನ್ನು ಮತ್ತು ವಿವಿಧ ಲಾಗುವಾಡುಗಳ ವೆಚ್ಚಗಳನ್ನು ಏರಿಸಿದ್ದರಿಂದ ಅಗತ್ಯ ವಸ್ತುಗಳ ಬೆಲೆಗಳ ಮೇಲೆ ದುಷ್ಪರಿಣಾಮ ಬೀರಿವೆ.

ಒಂದೆಡೆಯಲ್ಲಿ ಬೆಳವಣಿಗೆ ದರ ಕುಸಿಯುತ್ತಿದ್ದು, ಆರ್ಥಿಕ ಹಿಂಜರಿತದ ಪರಿಸ್ಥಿತಿ ಇರುವಾಗ,  ದೇಶ ಹಣದುಬ್ಬರದ ಬಲೆಯಲ್ಲಿ ಸಿಲುಕಿಕೊಳ್ಳುತ್ತಿದೆ. 2021 ಮೇ ಮಾಸದಲ್ಲಿ ಸಗಟು ಬೆಲೆ ಸೂಚ್ಯಂಕ ಹತ್ತಿರ ಹತ್ತಿರ ಶೇಕಡ 13ರಷ್ಟಿತ್ತು (12.94%). ಇದು 11 ವರ್ಷಗಳಲ್ಲೇ ಅತಿ ಹೆಚ್ಚಿನ ದರವಾಗಿದೆ. ಈ ಅವಧಿಯಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಶೇಕಡ 6.3ರಷ್ಟು ಏರಿಕೆಯಾಗಿದೆ. ಅಕ್ಕಿ, ಖಾದ್ಯ ತೈಲ, ಬೇಳೆ ಕಾಳುಗಳು, ತರಕಾರಿಗಳು ಮತ್ತು ಮೊಟ್ಟೆಯ ಬೆಲೆಗಳು ಗಗನಕ್ಕೇರಿವೆ. ಖಾದ್ಯ ತೈಲ ಬೆಲೆಗಳಲ್ಲಿ ಶೇಕಡ 60ರಷ್ಟು ಏರಿಕೆಯಾಗಿದೆ. ಪಂಪ್‌ಸೆಟ್ ಮತ್ತು ಟ್ರ್ಯಾಕ್ಟರ್‌ಗಳಿಗೆ ಬಳಸುವ ಡೀಸೆಲ್ ಬೆಲೆಯೇರಿಕೆಯಿಂದ ರೈತರು ಕಂಗಾಲಾಗಿದ್ದಾರೆ.

Microsoft Word - New Microsoft Office Word Document
ನೋಡು, ಎಷ್ಟೊಂದು ಸುಲಭ! ವ್ಯಂಗ್ಯಚಿತ್ರ: ಸುರೇಂದ್ರನ್, ದಿ ಹಿಂದು

ಅಬಕಾರಿ ಸುಂಕ ಏರಿಕೆಗಳ ಪರಿಣಾಮವಾಗಿ 2014-15ರಿಂದ ಸರ್ಕಾರಕ್ಕೆ ಪೆಟ್ರೋಲಿಯಂ ಉತ್ಪನ್ನಗಳಿಂದ ಆದಾಯದಲ್ಲಿ 138% ದಷ್ಟು ಅಪಾರ ಏರಿಕೆಯಾಗಿದೆ. 2021ರ ಫೆಬ್ರವರಿವರೆಗೆ ಅಡುಗೆ ಅನಿಲ ಸಬ್ಸಿಡಿ ಇಳಿಕೆಯಿಂದಾಗಿ ಸಬ್ಸಿಡಿ ಮೊತ್ತ ರೂ. 22,635 ಕೋಟಿಯಿಂದ ರೂ.3559ಕ್ಕೆ ಇಳಿದಿದೆ.

ಸಬ್ಸಿಡಿಯಲ್ಲಿ ಗಣನೀಯ ಕಡಿತ ಮಾಡಿರುವುದರಿಂದ ಅಡುಗೆ ಅನಿಲ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. 2019-20ರಲ್ಲಿ ಅಡುಗೆ ಅನಿಲಕ್ಕೆ ನೀಡಿದ ನೇರ ನಗದು ಸಬ್ಸಿಡಿ ಮೊತ್ತ 22,635 ಕೋಟಿ ರೂಪಾಯಿ. 2021ರ ಫೆಬ್ರವರಿ ವರೆಗೆ ಅದು ಕೇವಲ 3,559 ಕೋಟಿ ರೂಪಾಯಿಗೆ ಇಳಿದಿದೆ. ಇದರ ಪರಿಣಾಮವಾಗಿ ಇಡೀ ಭಾರ ಗ್ರಾಹಕರ ಮೇಲೆ ಬಿದ್ದಿದೆ. ಬೆಲೆಯೇರಿಕೆ ನಿಯಂತ್ರಿಸಲು ಮೋದಿ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಅಡುಗೆ ಎಣ್ಣೆಗಳ ಸಹಿತ ಅನೇಕ ವಸ್ತುಗಳ ಬೆಲೆಗಳ ಮೇಲಿನ ನಿಯಂತ್ರಣ ತೆಗೆದು ಹಾಕುವ ಸಲುವಾಗಿ ಕೇಂದ್ರ ಸರ್ಕಾರ ಈಗಾಗಲೇ ಅಗತ್ಯ ವಸ್ತುಗಳ ಕಾನೂನನ್ನು ದುರ್ಬಲಗೊಳಿಸಿದೆ. ದೊಡ್ಡ ವರ್ತಕರ ಅಕ್ರಮ ದಾಸ್ತಾನು ಮತ್ತು ಸಟ್ಟಾಬಾಜಿ ವ್ಯವಹಾರಗಳಿಂದಾಗಿ ಅವರಿಗೆ ಅಡುಗೆ ಎಣ್ಣೆಯಿಂದ ಸೂಪರ್ ಲಾಭವಾಗುತ್ತಿದೆ. ಅಗತ್ಯ ವಸ್ತುಗಳ ಕಾನೂನು ತಿದ್ದುಪಡಿ ಮಾಡಿರುವುದರ ಜನ-ವಿರೋಧಿ ಅಂಶ ಇದರಿಂದ ಬಯಲಾಗಿದೆ. ಹೊಸ ಕೃಷಿ ಕಾನೂನುಗಳ ಜೊತೆಯಲ್ಲೇ ಈ ತಿದ್ದುಪಡಿಯನ್ನೂ ಮಾಡಲಾಗಿತ್ತು.

ತೆರಿಗೆಗಳನ್ನು ಇಳಿಸಿ ಇಂಧನ ಬೆಲೆಗಳನ್ನು ಇಳಿಸಲು ಸಾಧ್ಯವಿಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಇತ್ತೀಚೆಗೆ ಹೇಳಿದ್ದಾರೆ. ಆ ತೆರಿಗೆ ಹಣ ಕಲ್ಯಾಣ ಯೋಜನೆಗಳು ಮತ್ತು ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ ಬೇಕು ಎಂದವರು ಹೇಳಿದ್ದಾರೆ. ಆದರೆ, ಕಾರ್ಪೊರೇಟ್ ತೆರಿಗೆಗಳನ್ನು ಕಡಿತ ಮಾಡುವ ಮೂಲಕ ಬೊಕ್ಕಸಕ್ಕೆ 1.45 ಲಕ್ಷ ಕೋಟಿ ರೂಪಾಯಿ ನಷ್ಟ ಮಾಡಿದ್ದು ಇದೇ ಸರ್ಕಾರ ಎನ್ನುವುದನ್ನು ಮರೆಯಬಾರದು. ಅಷ್ಟು ಮಾತ್ರವಲ್ಲದೆ ಕಾರ್ಪೊರೇಟ್ ಕಂಪೆನಿಗಳಿಗೆ ಬಹಳಷ್ಟು ರಿಯಾಯಿತಿ ಹಾಗೂ ವಿನಾಯಿತಿಗಳನ್ನೂ ಸರ್ಕಾರ ನೀಡಿದೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸುಂಕ ಮತ್ತು ಸೆಸ್‌ಗಳನ್ನು ತೆಗೆದು ಹಾಕುವುದರಿಂದ ಆಗುವ ಯಾವುದೇ ನಷ್ಟವನ್ನು ಕಾರ್ಪೊರೇಟ್ ತೆರಿಗೆ ದರವನ್ನು 2019ರ ಪೂರ್ವದ ದರಕ್ಕೆ ಮತ್ತೆ ತರುವ ಮೂಲಕ ಸರಿಹೊಂದಿಸಬಹುದು. ಸೂಪರ್-ಶ್ರೀಮಂತ ಜನರ ಮೇಲೆ ಸಂಪತ್ತು ತೆರಿಗೆ ಹೇರಿದರೆ ಸಾಕಷ್ಟು ಆದಾಯ ಸಂಗ್ರಹವಾಗುತ್ತದೆ ಎನ್ನುವುದನ್ನು ಗಮನಿಸಬೇಕು.

ಆದರೆ ಬಿಜೆಪಿ ಸರ್ಕಾರಕ್ಕೆ ಕಾರ್ಪೊರೇಟ್ ವಲಯ ಮತ್ತು ಸೂಪರ್-ಶ್ರೀಮಂತರನ್ನು ಬೆಳೆಸುವುದು ಹಾಗೂ ಬಿಕ್ಕಟ್ಟಿನ ಸಮಯದಲ್ಲಿ ಆದಾಯ ಸಂಗ್ರಹಕ್ಕೆ ಜನರನ್ನು ಸುಲಿಗೆ ಮಾಡುವುದೇ ಬೇಕಾಗಿದೆ. ಬೆಲೆಯೇರಿಕೆಯ ಮೂಲಕ ಜನರ ಮೇಲೆ ಹೊರಿಸಿರುವ ಅಸಹನೀಯ ಹೊರೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಎಡಪಕ್ಷಗಳು ಜೂನ್ 16ರಿಂದ 30ರ ವರೆಗೆ ದೇಶದಾದ್ಯಂತ ಬೆಲೆಯೇರಿಕೆ ವಿರುದ್ಧ ಆಂದೋಲನ ನಡೆಸುತ್ತಿವೆ. ಹಣದುಬ್ಬರ ತಡೆಯಲು ಕ್ರಮಗಳನ್ನು ಕೈಗೊಳ್ಳುವಂತೆ ಅವು ಒತ್ತಾಯಿಸಿವೆ.

price-ris-chanrt vikas mantra16062 1
ಬೆಲೆಯೇರಿಕೆಗಳ ಬಾಣಲೆಯಲ್ಲಿ     “ವಿಕಾಸ ಮಂತ್ರದ ಉಚ್ಛಾರಣೆ ಮಾಡುತ್ತಾ ಇರು, ನೋವು ಅನಿಸುವುದೇ ಇಲ್ಲ!     ವ್ಯಂಗ್ಯಚಿತ್ರ: ಸತೀಶ್ ಆಚಾರ್ಯ, ನ್ಯೂಸ್‌ಸ್ಟಿಂಗ್

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರೀಯ ಅಬಕಾರಿ ಸುಂಕ ಮತ್ತು ಇತರ ತೆರಿಗೆಗಳ  ಕಡಿತ, ಅಡುಗೆ ಅನಿಲದ ಸಬ್ಸಿಡಿ ಮರುಸ್ಥಾಪನೆ, ಅಗತ್ಯ ವಸ್ತುಗಳ ಕಾನೂನು ಬಳಕೆ ಹಾಗೂ ಖಾದ್ಯ ತೈಲದ ಸಟ್ಟಾಬಾಜಿ ವ್ಯವಹಾರ ನಡೆಸುವವರ ವಿರುದ್ಧ ಕಠಿಣ ಕ್ರಮದ ಮೂಲಕ ಬೆಲೆ ನಿಯಂತ್ರಣಕ್ಕೆ ಕ್ರಮ ಇವು ಎಡಪಕ್ಷಗಳ ಬೇಡಿಕೆಯಾಗಿವೆ. ಬೇಳೆ ಕಾಳುಗಳು, ಅಡುಗೆ ಎಣ್ಣೆ, ಸಕ್ಕರೆ, ಚಹಾ ಪುಡಿ ಸಹಿತ ಆಹಾರ ಕಿಟ್ ಒಳಗೊಂಡಂತೆ ಎಲ್ಲರಿಗೂ 10 ಕೆಜಿ ಉಚಿತ ಆಹಾರ ಧಾನ್ಯ ಪೂರೈಕೆ, ಆದಾಯ ತೆರಿಗೆ ವ್ಯಾಪ್ತಿಗೆ ಬರದ ಕುಟುಂಬಗಳಿಗೆ ಆರು ತಿಂಗಳ ಕಾಲ ಮಾಸಿಕ 7,500 ರೂಪಾಯಿ ನೇರ ವರ್ಗಾವಣೆ ಮೊದಲಾದವೂ ಆಂದೋಲನದ ಇತರ ಪ್ರಮುಖ ಬೇಡಿಕೆಗಳಾಗಿವೆ.

ತ್ವರಿತವಾಗಿ ಎಲ್ಲರಿಗೂ ಉಚಿತ ಲಸಿಕೆಗಾಗಿ ಹೋರಾಟ, ಉಚಿತ ಆಹಾರ ಕಿಟ್ ಸರಬರಾಜು, ಉದ್ಯೋಗ ಖಾತರಿ  ಯೋಜನೆಗಳ ವಿಸ್ತರಣೆ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಕೇಂದ್ರೀಯ ತೆರಿಗೆಗಳ ಕಡಿತ ಸಹಿತ ಬೆಲೆಯೇರಿಕೆಗೆ ಕಡಿವಾಣಕ್ಕೆ ಕ್ರಮಗಳಿಗಾಗಿ ಹೋರಾಟ ಇವೆಲ್ಲ ಜೊತೆ ಜೊತೆಯಾಗಿ ಸಾಗುವುದು ಅಗತ್ಯ.

ಅನು: ವಿಶ್ವ

Leave a Reply

Your email address will not be published. Required fields are marked *