ಖಾಸಗಿತನದ ಹಕ್ಕು ಭಾರತೀಯ ಸಂವಿಧಾನದ ಕಲಮು 21ರ ಅಡಿಯಲ್ಲಿ ರಕ್ಷಣೆ ಪಡೆದಿರುವ ಒಂದು ಮೂಲಭೂತ ಹಕ್ಕು ಎಂದು ಹೇಳಿರುವ ದೇಶದ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಸಿಪಿಐ(ಎಂ) ಪೊಲಿಟ್ಬ್ಯುರೊ ಸ್ವಾಗತಿಸಿದೆ. ಈ ಹಿಂದೆ ಎಂ ಪಿ ಶರ್ಮ ಮತ್ತು ಖರಕ್ಸಿಂಗ್ ಕೇಸ್ನಲ್ಲಿ ನ್ಯಾಯಾಲಯ ಖಾಸಗಿತನದ ಹಕ್ಕು ಮೂಲಭೂತ ಹಕ್ಕು ಅಲ್ಲ ಎಂಬ ತೀರ್ಪುಗಳನ್ನು ಕೊಟ್ಟಿತ್ತು. ಈಗ ಭಾರತದ ಮುಖ್ಯ ನ್ಯಾಯಾಧೀಶರ ನೇತೃತ್ವದ ಒಂಭತ್ತು ಸದಸ್ಯರ ಸಂವಿಧಾನ ಪೀಠ ಒಂದು ಒಮ್ಮತದ ನಿರ್ಧಾರದಲ್ಲಿ ಅದನ್ನು ತಳ್ಳಿ ಹಾಕಿದೆ.
ಇದೊಂದು ಮೈಲಿಗಲ್ಲಾಗುವ ತೀರ್ಪು ಎಂದಿರುವ ಪೊಲಿಟ್ಬ್ಯುರೊ, ಇದು ಕಾರ್ಪೊರೇಟ್ಗಳು ಪ್ರಾಬಲ್ಯ ಹೊಂದಿರುವ ತಂತ್ರಜ್ಞಾನದ ಮುನ್ನಡೆಯ ಜಗತ್ತಿನಲ್ಲಿ ಖಾಸಗಿ ಮಾಹಿತಿಗಳ ದುರುಪಯೋಗದ ಮೂಲಕ ವ್ಯಕ್ತಿಗಳ ಖಾಸಗಿತನವನ್ನು ಉಲ್ಲಂಫಿಸುವ ಪ್ರಯತ್ನಗಳಿಂದ ರಕ್ಷಣೆಗೆ ಹಾದಿ ಮಾಡಿಕೊಡಬೇಕು ಎಂದು ಆಶಿಸಿದೆ. ಈ ಸರಕಾರ ಮುಂದೊತ್ತುತ್ತಿರುವ ‘ಆಧಾರ್’ನ್ನು ಕಡ್ಡಾಯಗೊಳಿಸುವ ಪ್ರಶ್ನೆಯನ್ನು ಒಂದು ಪ್ರತ್ಯೇಕ ಐವರು ನ್ಯಾಯಾಧೀಶರ ಪೀಠ ನಿರ್ಧರಿಸಲಿದೆ ಎಂಬ ಸಂಗತಿಯತ್ತ ಅದು ಗಮನ ಸೆಳೆದಿದೆ.
ಸರಕಾರದ ದುಷ್ಟ ತಂತ್ರಗಳ ಎದುರಾಗಿ ಹೋರಾಡಿದವರಿಗೆ ಯೆಚುರಿ ಅಭಿನಂದನೆ
ಇದೊಂದು ದೂರಗಾಮೀ ತೀರ್ಪು, ಹಲವಾರು ಕ್ಷೇತ್ರಗಳಲ್ಲಿ ಇದು ಪರಿಣಾಮ ಬೀರಲಿದೆ, ಏಕೆಂದರೆ ಇಂದು ತಂತ್ರಜ್ಞಾನ ನಮ್ಮ ಬದುಕಿನಲ್ಲಿ ಹೆಚ್ಚೆಚ್ಚು ವ್ಯಾಪಕವಾದ ಪಾತ್ರ ವಹಿಸುತ್ತಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಈ ತೀರ್ಪನ್ನು ಸ್ವಾಗತಿಸುತ್ತ ಹೇಳಿದ್ದಾರೆ. ಭಾರತೀಯರಿಗೆ ಖಾಸಗಿತನದ ಅವರ ಮೂಲಭೂತ ಹಕ್ಕನ್ನು ನಿರಾಕರಿಸುವ ಈ ಸರಕಾರದ ದುಷ್ಟ ತಂತ್ರಗಳನ್ನು ಎದುರಿಸಿ ಹೋರಾಡಿರುವ ಎಲ್ಲ ವಕೀಲರು, ಕಾರ್ಯಕರ್ತರು ಮತ್ತು ಇತರರನ್ನು ಅವರು ಈ ಸಂದರ್ಭದಲ್ಲಿ ಅಭಿನಂದಿಸಿದ್ದಾರೆ.
ನಾವು ಆಧಾರ್ ಅನ್ನು ಕಡ್ಡಾಯಗೊಳಿಸುವುದನ್ನು, ವಿದೇಶಿ ತಂತ್ರಜ್ಞಾನದ ಕಾರ್ಪೊರೇಟ್ಗಳು ಮಾಹಿತಿಗಳ ದುರುಪಯೋಗ ಮಾಡಿಕೊಳ್ಳುವದನ್ನು ವಿರೋಧಿಸುತ್ತೇವೆ, ಈ ತೀರ್ಪು ನಮ್ಮ ಹಕ್ಕುಗಳನ್ನು ಭದ್ರಪಡಿಸಿಕೊಳ್ಳಲು ಹಾದಿ ಮಾಡಿಕೊಡುತ್ತದೆ ಎಂದು ಅವರು ಆಶಿಸಿದ್ದಾರೆ.