ಅಮೆರಿಕಾದ ಒತ್ತಡದಿಂದ ತಿಪ್ಪರಲಾಗ : ಸೀತಾರಾಂ ಯೆಚೂರಿ

ಮೋದಿ ಸರಕಾರ ಹೀಗೇಕೆ ತನ್ನ ನಿಲುವುಗಳಲ್ಲಿ ತಿಪ್ಪರಲಾಗ ಹಾಕುತ್ತಿದೆ? ಇದು ಮತ್ತೊಮ್ಮೆ ಅದು ಅಮೆರಿಕಾದ ಎದುರು ಶರಣಾಗಿರುವುದನ್ನು ತೋರಿಸುತ್ತದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಟ್ವೀಟ್ ಮಾಡಿದ್ದಾರೆ.

ಹವಾಮಾನ ಬದಲಾವಣೆ ಇಡೀ ಮಾನವಕುಲವನ್ನು ಬಾಧಿಸುತ್ತಿರುವ ಗಂಭೀರ ಸಮಸ್ಯೆ, ಅದನ್ನು ಎದುರಿಸಲು ಒಂದು ಅಂತರ್ರಾಷ್ಟ್ರೀಯ ಒಪ್ಪಂದ ಅಗತ್ಯವೆನ್ನುವುದರಲ್ಲಿ ಸಂದೇಹವಿಲ್ಲ. ಆದರೆ, ಈಗಾಗಲೇ ಸಿಪಿಐ(ಎಂ) ಹೇಳಿರುವಂತೆ, ಪ್ಯಾರಿಸ್ ಒಪ್ಪಂದ ದೂಷಣೆಯ ಪ್ರಮಾಣವನ್ನು ಸುರಕ್ಷಿತ ಮಟ್ಟಕ್ಕೆ ಇಳಿಸುವಲ್ಲಿಯಾಗಲೀ, ಅಥವ ಅಂತರ್ರಾಷ್ಟ್ರೀಯ ವಾಯುದೂಷಣೆ ಹತೋಟಿ ವ್ಯವಸ್ಥೆಯನ್ನು ತರುವಲ್ಲಾಗಲೀ ಅತ್ಯಂತ ದೋಷಪೂರ್ಣವಾದ ಒಪ್ಪಂದ.

ತಮ್ಮ ಅಭಿವೃದ್ಧಿಗಾಗಿ ವಾತಾವರಣಕ್ಕೆ ಇಂಗಾಲವನ್ನು ದೀರ್ಘಕಾಲದಿಂದ ಹರಿಯ ಬಿಡುತ್ತ ಬಂದಿರುವ ಅಭಿವೃದ್ಧಿ ಹೊಂದಿದ ದೇಶಗಳದ್ದೇ ಈ ದೂಷಣೆ ಹೆಚ್ಚಿಸುವಲ್ಲಿ ಸಿಂಹಪಾಲು-ಸುಮಾರು 75ಶೇ.. ಆದ್ದರಿಂದ ದೂಷಣೆಯ ಪ್ರಮಾಣವನ್ನು ಇಳಿಸುವಲ್ಲಿ ಅಭಿವೃದ್ಧಿ ಹೊಂದಿರುವ ದೇಶಗಳು ಮತ್ತು ಈಗ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಸಮಾನ ಹೊಣೆ ವಹಿಸಬೇಕು ಎಂದು ಹೇಳುವುದು ಸರಿಯಲ್ಲ, ಏಕೆಂದರೆ ಈಗಷ್ಟೇ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಪ್ರಸ್ತುತ ಸಹಜವಾಗಿಯೇ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗಿಂತ ಹೆಚ್ಚಿನ ಇಂಗಾಲ ಉತ್ಸರ್ಜನೆ ಮಾಡುತ್ತವೆ, ಅವು ಅಭಿವೃದ್ಧಿ ಹೊಂದಿರುವ ದೇಶಗಳಷ್ಟೇ ಹೊಣೆ ನಿರ್ವಹಿಸಬೇಕೆನ್ನುವುದು ಅವು ಅಭಿವೃದ್ಧಿ ಹೊಂದುವುದು ಬೇಡ ಎಂದಂತೆಯೇ ಸರಿ, ಆದ್ದರಿಂದ ‘ಸಮಾನ, ಆದರೆ ಭಿನ್ನೀಕರಿಸಿದ ಹೊಣೆಗಾರಿಕೆ’ ಎಂಬ ಪರಿಕಲ್ಪನೆಯನ್ನು ‘ವಿಶ್ವಸಂಸ್ಥೆ ಹವಾಮಾನ ಬದಲಾವಣೆ ಚೌಕಟ್ಟು ಸಮಾವೇಶ’ ರೂಪಿಸಿದೆ. ಪ್ಯಾರಿಸ್ ಒಪ್ಪಂದ ಅಮೆರಿಕಾದ ತಂತ್ರದಿಂದಾಗಿ ಈ ಪರಿಕಲ್ಪನೆಗೆ ತಿಲಾಂಜಲಿ ನೀಡಿದೆ ಎಂಬುದೇ ಸಿಪಿಐ(ಎಂ) ಮತ್ತು ಇತರ ಪ್ರಗತಿಪರ ಸಂಘಟನೆಗಳ ಮತ್ತು ವ್ಯಕ್ತಿಗಳ ಆಕ್ಷೇಪ. ಅಲ್ಲದೆ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವ ತಂತ್ರಜ್ಞಾನವನ್ನು, ಅದಕ್ಕೆ ಬೇಕಾದ ಹಣಸಹಾಯವನ್ನು ಅಭಿವೃದ್ಧಿ ಹೊಂದಿರುವ ದೇಶಗಳು ಒದಗಿಸಬೇಕು ಎಂಬ ಸದಾಶಯದ ಹೇಳಿಕೆ ಇದ್ದರೂ, ಈ ಆಶಯವನ್ನು ಜಾರಿಗೆ ತರುವಂತೆ ಮಾಡುವ ಅಂಶ ಈ ಒಪ್ಪಂದದಲ್ಲಿ ಇಲ್ಲ. ಆದ್ದರಿಂದ ಅದು ಜಾರಿಗೆ ಸಂಭವವೂ ಬಹಳ ಕಡಿಮೆ.

ಇದರಿಂದಾಗಿಯೇ, ಈ ಒಪ್ಪಂದ ಒಂದು ಸಾಧನೆ ಎಂದು ಮೊದಲಿಗೆ ಪ್ರಧಾನಿಗಳೂ ಸೇರಿದಂತೆ ಬಿಜೆಪಿ ಸರಕಾರದ ಮುಖಂಡರು ಹೇಳಿದರೂ, ಆನಂತರ ಭಾರತದ ಪರಿಸರ, ಅರಣ್ಯ ಮತ್ತು ಇಂಧನ ಕುರಿತ ನಿಯಮಗಳನ್ನು ಪರೀಕ್ಷಿಸಿದ ನಂತರವೇ ಇದನ್ನು ಅಧಿಕೃತವಾಗಿ ಅನುಮೋದಿಸಲಾಗುವುದು ಎಂದು ಸರಕಾರ ಹೇಳಲಾರಂಭಿಸಿದ್ದು. ಪರಿಸರ ಮಂತ್ರಾಲಯ ಅನುಮೋದನೆಯ ಬಗ್ಗೆ ಏನು ಹೇಳಲೂ ಸಿದ್ಧವಾಗಿಲ್ಲ, ಏಕೆಂದರೆ ಈ ಒಪ್ಪಂದವನ್ನು ಅನುಮೋದಿಸಿದರೆ ನಮ್ಮ ಹಲವು ನಿಯಮಗಳನ್ನು ಬದಲಿಸಬೇಕಾಗುತ್ತದೆ. ಬೇರೆ ಮಂತ್ರಾಯಗಳದ್ದೂ ಅದೇ ನಿಲುವಾಗಿತ್ತು. ಪ್ರಧಾನ ಮಂತ್ರಿಗಳ ಕಚೇರಿ ಕೂಡ ಎಲ್ಲ ಇಲಾಖೆಗಳುÀ/ಮಂತ್ರಾಲಯಗಳು ನಡೆಸುತ್ತಿರುವ ನಿಯಮಗಳ ಪರೀಕ್ಷೆಗಳು ಮುಗಿಯಲಿ ಎಂಬ ನಿಲುವು ತಳೆದಿತ್ತು. ತೀರಾ ಇತ್ತೀಚಿನ ವರೆಗೂ ಅಂದರೆ ಸಪ್ಟಂಬರ್ 21 ರ ವರೆಗೂ ಅದೇ ನಿಲುವನ್ನು ತಳೆದಿತ್ತು ಎಂದು ಇಂಡಿಯನ್ ಎಕ್ಸ್‍ಪ್ರೆಸ್ ವರದಿ ಮಾಡಿದೆ.

ಆದರೆ ನಾಲ್ಕು ದಿನಗಳೊಳಗೇ  ಈ ತಿಪ್ಪರಲಾಗ ಏಕೆ?

ಇದಕ್ಕೆ ಕಾರಣ ವಿದೇಶ ಮಂತ್ರಾಲಯದಿಂದ ಬಂದ ‘ಎಚ್ಚರಿಕೆ’ ಎನ್ನಲಾಗಿದೆ. ಇದುವರೆಗೆ ಸಹಿ ಹಾಕದೇ ಇರುವ ಯುರೋಪಿಯನ್ ಒಕ್ಕೂಟ, ರಶ್ಯ ಅಥವ ಜಪಾನ್ ಸಹಿ ಹಾಕಿದರೆ ಭಾರತ ಹಿಂದೆ ಬಿದ್ದಂತೆ ಆಗುತ್ತದೆ ಎಂಬುದು ಈ ‘ಎಚ್ಚರಿಕೆ’ಗೆ ಕೊಟ್ಟ ಒಂದು ಕಾರಣವಾದರೆ, ಇನ್ನೊಂದು, ಬಹುಶಃ ಬಹಳ ಮುಖ್ಯವಾದದ್ದು “ಭಾರತ ಮತ್ತು ಅಮೆರಿಕಾದ ನಡುವೆ ಇರುವ ವಿಶೇಷ ಏಕಪಕ್ಷೀಯ ಸಂಬಂಧ. ಈ ಒಪ್ಪಂದವನ್ನು ಮಾಡಿಸಿದ್ದು ಅಮೆರಿಕಾವಾದ್ದರಿಂದ ಅದನ್ನು ಅನುಮೋದಿಸದಿರುವುದು ಒಂದು ತಪ್ಪು ಸಂಕೇತ ನೀಡುತ್ತದೆ, ವಿಶೇಷವಾಗಿ ಬರಾಕ್ ಒಬಾಮ ಇನ್ನು ಎರಡು ತಿಂಗಳೊಳಗೆ ಅಮೆರಿಕ ಅಧ್ಯಕ್ಷರ ಹುದ್ದೆ ಬಿಡುವುದರಿಂದಾಗಿ” ಎಂದು ವಿದೇಶಾಂಗ ಕಾರ್ಯಧರ್ಶಿ ಹೇಳಿರುವುದಾಗಿ ವರದಿಯಾಗಿದೆ (ಇಂಡಿಯನ್ ಎಕ್ಸ್ ಪ್ರೆಸ್, ಸೆಪ್ಟಂಬರ್28).

ಈ ರೀತಿ ಅಮೆರಿಕಾದ ಹಿತಾಸಕ್ತಿಗಳ ಎದುರು ತಲೆಬಾಗಿ ಪ್ಯಾರಿಸ್ ಒಪ್ಪಂದಕ್ಕೆ ಅನುಮೋದನೆ ಕೊಡಲು ನಿರ್ಧರಿಸಿರುವುದು ಭಾರತದ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ದುಷ್ಪರಿಣಾಮ ಬೀರಲಿದೆ, ಈ ವಾಯುದೂಷಣೆ ಇಳಿಸುವ ಕ್ರಮಗಳನ್ನು ಈಗಾಗಲೇ ಇಂಧನ ಲಭ್ಯತೆ ಬಹಳ ಕಡಿಮೆ ಇರುವ ಜನಸಾಮಾನ್ಯರನ್ನೇ ತಟ್ಟುವ ಕಾರ್ಪೊರೇಟ್-ಪರ ದಾರಿಯಲ್ಲೇ ಸಾಗುವ ಭೀತಿ ಹೆಚ್ಚಾಗಿದೆ.

Leave a Reply

Your email address will not be published. Required fields are marked *