ಮೂರು ಬಾರಿ ತಲಾಖ್: ಮುಸ್ಲಿಮ್ ಮಹಿಳೆಯರ ಆಗ್ರಹಕ್ಕೆ ಸಿಪಿಐ(ಎಂ) ಬೆಂಬಲ

ಮೂರು ಬಾರಿ ತಲಾಖ್ ಹೇಳಿ ಕೂಡಲೇ ವಿವಾಹ ವಿಚ್ಛೇದನ ಕೊಡುವ ಪದ್ಧತಿಯನ್ನು ನಿಲ್ಲಿಸಬೇಕೆಂಬ ಮುಸ್ಲಿಮ್ ಮಹಿಳೆಯರ ಆಗ್ರಹಕ್ಕೆ ಸಿಪಿಐ(ಎಂ) ಪೊಲಿಟ್‍ಬ್ಯುರೊ ಬೆಂಬಲ ವ್ಯಕ್ತಪಡಿಸಿದೆ. ಈ ಆಚರಣೆಗೆ ಇಸ್ಲಾಮೀ ದೇಶಗಳಲ್ಲಿ ಪರವಾನಿಗೆ ಇಲ್ಲ. ಈ ಬೇಡಿಕೆಯನ್ನು ಒಪ್ಪಿದರೆ ಸಂತ್ರಸ್ತ ಮಹಿಳೆಯರಿಗೆ ಪರಿಹಾರ ದೊರೆಯುತ್ತದೆ ಎಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ.

ಬಹುಸಂಖ್ಯಾತ ಸಮುದಾಯ ಸೇರಿದಂತೆ ಎಲ್ಲ ವೈಯಕ್ತಿಕ ಕಾನೂನುಗಳಲ್ಲೂ ಸುಧಾರಣೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಈ ಸಂದರ್ಭದಲ್ಲಿ ಸರಕಾರದ ವಕ್ತಾರರು ಹಿಂದೂ ಮಹಿಳೆಯರ ವೈಯಕ್ತಿಕ ಕಾನೂನುಗಳನ್ನು ಆಗಲೇ ಸುಧಾರಿಸಲಾಗಿದೆ ಎಂದಿರುವುದು ಸರಕಾರದ ಆಸಕ್ತಿ ಮಹಿಳೆಯರಿಗೆ ಸಮಾನತೆ ಕೊಡಿಸುವುದಲ್ಲ, ಬದಲಾಗಿ ಅಲ್ಪಸಂಖ್ಯಾತರ ಮೇಲೆ, ಅದರಲ್ಲೂ ಮುಸ್ಲಿಂ ಅಲ್ಪಸಂಖ್ಯಾತರ ಮೇಲೆ ಗುರಿಯಿಡುವುದೇ ಆಗಿದೆ ಎಂಬುದನ್ನು ತೋರಿಸುತ್ತದೆ ಎಂದಿದೆ. ಈಗಲೂ ಕೂಡ ದತ್ತು, ಆಸ್ತಿ ಹಕ್ಕುಗಳು ಮತ್ತು ತನ್ನ ಜೀವನ ಸಂಗಾತಿಯನ್ನು ಆರಿಸಿಕೊಳ್ಳುವ ಹಕ್ಕು ಕುರಿತಂತೆಯೂ ಕಾನೂನುಗಳು ಹಿಂದೂ ಮಹಿಳೆಯರ ವಿರುದ್ಧ ಪಕ್ಷಪಾತ ತೋರುತ್ತವೆ ಎಂದು ಅದು ಹೇಳಿದೆ.

ಅಲ್ಪಸಂಖ್ಯಾತ ಸಮುದಾಯಗಳ ಅಸ್ಮಿತೆಯ ಮೇಲೆಯೇ ಕೋಮುವಾದಿಗಳ ಹಲ್ಲೆಗಳು ನಡೆಯುತ್ತಿರುವಾಗ, ಸರಕಾರ ಈಗ ನೇರವಾಗಿ, ಮತ್ತು ತನ್ನ ಸಂಸ್ಥೆಗಳ ಮೂಲಕ ಮಾಡುತ್ತಿರುವಂತೆ, ಸಮರೂಪೀ ನಾಗರಿಕ ಸಂಹಿತೆಯ ತನ್ನ ಅಜೆಂಡಾವನ್ನು ಮುಂದೊತ್ತುತ್ತಿರುವುದು ಮಹಿಳೆಯರ ಹಕ್ಕುಗಳ ಮೇಲೆ ವಿರುದ್ಧ ಪರಿಣಾಮ ಬೀರುತ್ತದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಸಮರೂಪತೆ ಸಮಾನತೆಯ ಭರವಸೆಯನ್ನೇನೂ ಕೊಡುವುದಿಲ್ಲ ಎಂದಿದೆ.

 

Leave a Reply

Your email address will not be published. Required fields are marked *