ಛತ್ತೀಸ್‍ಗಡದಲ್ಲಿ ಸರ್ವಾಧಿಕಾರಶಾಹಿ ದಾಳಿ: ಸುಳ್ಳು ಕೇಸುಗಳ ವಿರುದ್ಧ ಪ್ರತಿಭಟನೆಗೆ ಕರೆ

ಛತ್ತಿಸ್‍ಗಡ ಸರಕಾರ ಬಸ್ತಾರ್ ಬುಡಕಟ್ಟು ಪ್ರದೇಶದಲ್ಲಿ ನವಂಬರ್ 4ರಂದು ನಡೆದ ಒಂದು ಕೊಲೆಯ ಸುಳ್ಳು ಆಪಾದನೆಯನ್ನು ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ಪ್ರೊ. ಅರ್ಚನಾ ಪ್ರಸಾದ್, ದಿಲ್ಲಿ ವಿವಿಯ ಪ್ರೊ. ನಂದಿನಿ ಸುಂದರ್, ದಿಲ್ಲಿಯ ಜೋಶಿ ಅಧಿಕಾರಿ ಸಂಶೋಧನಾ ಸಂಸ್ಥೆಯ ವಿನೀತ್ ತಿವಾರಿ ಮತ್ತು ಸಿಪಿಐ(ಎಂ) ಛತ್ತಿಸ್‍ಗಡ ರಾಜ್ಯ ಕಾರ್ಯದರ್ಶಿ ಸಂಜಯ್ ಪರಾಟೆಯವರ ಮೇಲೆ ದಾಖಲಿಸಿರುವುದನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಲವಾಗಿ ಖಂಡಿಸಿದೆ. ಸೆಕ್ಷನ್ 302, 120ಬಿ, 147,148,149,452 ಮುಂತಾದವುಗಳ ಅಡಿಯಲ್ಲಿ ಎಫ್‍ಐಆರ್ ಹಾಕಲಾಗಿದೆ.

ಬಸ್ತಾರ್ ಪ್ರದೇಶದಲ್ಲಿ ಬುಡಕಟ್ಟು ಜನಗಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರಗಳ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಈ ಮೇಲಿನವರಿದ್ದ ಒಂದು ತಂಡ ಮೇ 12ರಿಂದ 16 ವರೆಗೆ ಈ ಪ್ರದೇಶಕ್ಕೆ ಭೇಟಿ ನೀಡಿತ್ತು. ಆಗಲೂ ಜಿಲ್ಲ್ಲಾ ಆಡಳಿತ ಒಂದು ಸುಳ್ಳು ದೂರನ್ನು ಬರೆಸಿಕೊಂಡು ಇವರನ್ನು ಸುಳ್ಳು ಕೇಸಿನಲ್ಲಿ ಸಿಗಿಸಲು ಸರ್ವ ಪ್ರಯತ್ನ ನಡೆಸಿತ್ತು.

ಸಿಪಿಐ(ಎಂ) ಮತ್ತು ಸಿಪಿಐ ಪ್ರಧಾನ ಕಾರ್ಯದರ್ಶಿಗಳು ಆಗ ಕಾನೂನುಬದ್ದz ರಾಜಕೀಯ ಚಟುವಟಿಕೆಗಳನ್ನು ಸುಗಮವಾಗಿ ನಡೆಸಲು ಮತ್ತು ಛತ್ತಿಸ್‍ಗಡ ಜನತೆಯ ಮಾನವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳನ್ನು ರಕ್ಷಿಸಬೇಕು ಎಂದು ರಾಜ್ಯ ಮುಖ್ಯಮಂತ್ರಿ ಹಾಗೂ ಕೇಂದ್ರ ಗೃಹಮಂತ್ರಿಗಳಿಗೆ ಪತ್ರ ಬರೆದಿದ್ದರು.

ಈ ಹಿನ್ನೆಲೆಯಲ್ಲಿ ಈ ವಾರವಷ್ಟೆ ನಡೆದ ಕೊಲೆಯ ಆಪಾದನೆಯ ಮೇಲೆ ಆರು ತಿಂಗಳ ಹಿಂದೆ ಅಲ್ಲಿಗೆ ಭೇಟಿ ನೀಡಿದ್ದವರ ಮೇಲೆ ಸುಳ್ಳು ಕೇಸ್ ಸೃಷ್ಟಿಸಿರುವುದು ಪ್ರಜಾಸತ್ತಾತ್ಮಕ ರಾಜಕೀಯದ ಮೇಲೊಂದು ನೇರವಾದ ಪ್ರಹಾರ, ರಾಜ್ಯದಲ್ಲಿ ಸರ್ವಾಧಿಕಾರಶಾಹಿತ್ವ ಪ್ರವೃತ್ತಿ ಹೆಚ್ಚುತ್ತಿರುವುದನ್ನು ಇದು ತೋರಿಸುತ್ತದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಈ ಸುಳ್ಳು ಕೇಸನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.

ಜನತೆಯ ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳ ಮೇಲಿನ ಇಂತಹ ನಗ್ನ ಸರ್ವಾಧಿಕಾರಶಾಹಿ ದಾಳಿಗಳ ವಿರುದ್ಧ ಪ್ರತಿಭಟನೆಯಲ್ಲಿ ಎಲ್ಲ ಪ್ರಜಾಪ್ರಭುತ್ವ ಮನಸ್ಸಿನ ಜನರು ಸೇರಿಕೊಳ್ಳಬೇಕು ಎಂದು ಅದು ಕರೆ ನೀಡಿದೆ.

Leave a Reply

Your email address will not be published. Required fields are marked *