ವಿಧಾನಸಭಾ ಚುನಾವಣೆಗಳಲ್ಲಿ ಎಡ ಪರ್ಯಾಯವನ್ನು ಜನರ ಮುಂದಿಡಲು ಎಡಪಕ್ಷಗಳ ಸ್ಪರ್ಧೆ

ಚುನಾವಣಾ ಸುಧಾರಣೆಗಳನ್ನು ಕುರಿತಂತೆ ಎಡಪಕ್ಷಗಳಿಂದ ರಾಷ್ಟ್ರೀಯ ಸಮಾವೇಶ

ಸಿಪಿಐ(ಎಂ) ಇತರ ಎಡಪಕ್ಷಗಳೊಂದಿಗೆ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ ಮತ್ತು ಮಣಿಪುರ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದೆ. ಉತ್ತರಪ್ರದೇಶದಲ್ಲಿ 26 ಕ್ಷೇತ್ರಗಳಲ್ಲಿ, ಉತ್ತರಾಖಂಡದಲ್ಲಿ 6 ಕ್ಷೇತ್ರಗಳಲ್ಲಿ, ಪಂಜಾಬಿನಲ್ಲಿ 12 ಹಾಗೂ ಮಣಿಪುರದಲ್ಲಿ 2ಕ್ಷೇತ್ರಗಳಲ್ಲಿ ಸಿಪಿಐ(ಎಂ) ಸ್ಪರ್ಧಿಸುತ್ತಿದೆ.
ಎಡ ಧೋರಣೆಗಳ ಪರ್ಯಾಯವನ್ನು ಜನರ ಮುಂದಿಡುವ ಪ್ರಾಥಮಿಕ ಉದ್ದೇಶದಿಂದ ಸಿಪಿಐ(ಎಂ) ಮತ್ತು ಇತರ ಎಡಪಕ್ಷಗಳು ಈ ಚುನಾವಣೆಗಳಲ್ಲಿ ಸಪರ್ಧಿಸುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ. ಈ ವಿಧಾನಸಭೆಗಳಲ್ಲಿ ಇನ್ನೂ ಕೇಳಬರದ ಜನತೆಯ ಕುಂದುಕೊರತೆಗಳ ದನಿಯನ್ನು ಎತ್ತಲು ಸಾಧ್ಯವಾಗುವಂತೆ, ರಾಜ್ಯಸರಕಾರಗಳ ಮೇಲೆ ಈ ಕುರಿತು ಒತ್ತಡ ಹಾಕಿ ಅವು ಜನಗಳಿಗೆ ಬಹಳ ಅಗತ್ಯವಾಗಿರುವ ಪರಿಹಾರಗಳನ್ನು ಕೊಡುವಂತೆ  ಮಾಡಲು ಈ ವಿಧಾನಸಭೆಗಳಲ್ಲಿ ಎಡಪಕ್ಷಗಳ ಪ್ರಾತಿನಿಧ್ಯವನ್ನು ಬಲಪಡಿಸಬೇಕು ಎಂದು ಜನಗಳಿಗೆ ಮನವಿ ಮಾಡಿಕೊಳಲಾಗುತ್ತಿದೆ.

ಸಿಪಿಐ(ಎಂ) ಮತ್ತು ಎಡ ಅಭ್ಯರ್ಥಿಗಳು ಕಣದಲ್ಲಿ ಇಲ್ಲದ ಕ್ಷೇತ್ರಗಳಲ್ಲಿ ಬಿಜೆಪಿಯ ಮತ್ತು ಅದರ ಕೋಮುವಾದಿ ಕೂಟದ ಅಭ್ಯರ್ಥಿಗಳನ್ನು ಸೋಲಿಸಬೇಕು ಎಂದೂ ಸಿಪಿಐ(ಎಂ) ಕರೆ ನೀಡಿದೆ. ಇದು, ಒಂದೆಡೆಯಲ್ಲಿ ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸುವ ಮತ್ತು ಇನ್ನೊಂದೆಡೆಯಲ್ಲಿ ಜನಗಳ ಮೇಲೆ ಅಭೂತಪೂರ್ವ ಆರ್ಥಿಕ ಹೊರೆಗಳನ್ನು ಹಾಕುತ್ತಿರುವ ಎರಡಲಗಿನ ದಾಳಿಗಳನ್ನು ಹಿಮ್ಮೆಟ್ಟಿಸಲು ಮತ್ತು ಅಂತಿಮವಾಗಿ ಸೋಲಿಸಲು ಅಗತ್ಯ. ನೋಟುರದ್ಧತಿಯಿಂದಾಗಿ ಜನಗಳ ಮೇಲೆ ಹೇರಿರುವ ಹೊರೆಗಳನ್ನೂ ಈ ಪ್ರಚಾರದಲ್ಲಿ ವಿರೋಧಿಸಲಾಗುತ್ತಿದೆ.

ಈ ಚುನಾವಣಾ ಪ್ರಚಾರದಲ್ಲಿ ಪ್ರಧಾನ ಮಂತ್ರಿ ಮೋದಿ ಮತ್ತು ಬಿಜೆಪಿ ಮುಖಂಡರು ರಾಜಕೀಯ ಪಕ್ಷಗಳನಿಧಿ ಸಂಗ್ರಹವನ್ನು ಪಾರದರ್ಶಕಗೊಳಿಸುವ ಅಗತ್ಯದ ಬಗ್ಗೆ ಹೇಳುತ್ತಿದ್ದಾರೆ.

ಆದರೆ ಮೊದಲಿಗೆ ಪ್ರಧಾನ ಮಂತ್ರಿಗಳು ಮತ್ತು ಬಿಜೆಪಿ ತಮ್ಮ ನಿಧಿ ಸಂಗ್ರಹದ ಬಗ್ಗೆ ಪಾರದರ್ಶಕವಾಗಿರುವುದು ಒಳ್ಳೆಯದು, ಏಕೆಂದರೆ ಬಿಜೆಪಿ ಮತ್ತು ಅದರ ಮಿತ್ರರು ಚುನಾವಣಾ ರ್ಯಾಲಿಗಳಲ್ಲಿ ಹಣಬಲದ ಬೃಹತ್ ಪ್ರದರ್ಶನವನ್ನು ನಡೆಸುತ್ತಿದ್ದಾರೆ ಎಂದು ಸಿಪಿಐ(ಎಂ) ಟೀಕಿಸಿದೆ.

ಕೇಂದ್ರ ಬಜೆಟಿನಲ್ಲಿ ರಾಜಕೀಯ ನಿಧಿ ಸಂಗ್ರಹವನ್ನು ಸ್ವಚ್ಛಗೊಳಿಸುವ ಹೆಸರಿನಲ್ಲಿ ಹಣಕಾಸು ಮಂತ್ರಿಗಳು ಪ್ರಕಟಿಸಿರುವ ಕ್ರಮಗಳು ಕೇವಲ ಕಣ್ಣೊರೆಸುವ ತಂತ್ರ. ನಗದು ದೇಣಿಗೆಗಳ ಮೊತ್ತವನ್ನು 20,000ರೂ.ನಿಂದ 2,000ಕ್ಕೆ ಇಳಿಸಿರುವುದು, ಇದಕ್ಕಿಂತ ಹೆಚ್ಚಿನ ಮೊತ್ತದ ದೇಣಿಗೆಗಳನ್ನು ಒಂದು ಡಿಜಿಟಲ್ ವ್ಯವಹಾರದ ಮೂಲಕ ಅಥವ ದೇಣಿಗೆದಾರರು ಖರೀದಿಸಿ ಕೊಡುವ ಚುನಾವಣಾ ಬಾಂಡುಗಳ ಮೂಲಕ ನಡೆಸಬೇಕು ಎಂಬುದು ಯಾವುದೇ ರೀತಿಯಲ್ಲಿ ಪರಿಣಾಮಕಾರಿ ಕ್ರಮಗಳು ಎಂದು ಹೇಳಲಾಗದು.

ಚುನಾವಣಾ ಪ್ರಕ್ರಿಯೆಯಲ್ಲಿ ಜನತೆಯ ಪ್ರಜಾಸತ್ತಾತ್ಮಕ ಆಯ್ಕೆಯನ್ನು ಹೆಚ್ಚುತ್ತಿರುವ ವಿಪರೀತ ಹಣಬಲದ ಬಳಕೆ ವಿಕೃತಗೊಳಿಸುವುದನ್ನು ತಡೆಯಬೇಕಾದರೆ ಅದಕ್ಕೆ ಮೊದಲ ಕ್ರಮವೆಂದರೆ ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ನಿಧಿ ನೀಡಿಕೆಯನ್ನು ನಿಷೇಧಿಸಬೇಕು ಎಂದು ಸಿಪಿಐ(ಎಂ) ಬಹಳ ಕಾಲದಿಂದ ಸೂಚಿಸುತ್ತ ಬಂದಿದೆ.

ಎರಡನೆಯದಾಗಿ, ಚುನಾವಣೆಗಳ ಸಮಯದಲ್ಲಿ ಒಂದು ರಾಜಕೀಯ ಪಕ್ಷ ಮಾಡಬಹುದಾದ ವೆಚ್ಚಗಳ ಮೇಲೆ ಒಂದು ಮಿತಿಯನ್ನು ಹಾಕಬೇಕು. ಸದ್ಯಕ್ಕೆ ಅಭ್ಯರ್ಥಿಗಳು ಮಾಡುವ ಖರ್ಚುಗಳ ಮೇಲೆ ಮಿತಿ ಇದೆ, ರಾಜಕೀಯ ಪಕ್ಷಗಳು ಮಾಡುವ ಚುನಾವಣಾ ವೆಚ್ಚಗಳ ಮೇಲೆ ಮಿತಿ ಅಥವ ನಿಯಂತ್ರಣ ಇಲ್ಲ. ಈ ಬಿಜೆಪಿ ಸರಕಾರದ ಕಳೆದ ಸುಮಾರು ಮೂರು ವರ್ಷಗಳಲ್ಲಿ ಅದು ಈ ಸಲಹೆಗಳನ್ನು ಪರಿಶೀಲಿಸುವುದನ್ನು ಸಾರಾಸಗಟು ತಿರಸ್ಕೆರಿಸುತ್ತ ಬಂದಿದೆ ಎಂಬ ಸಂಗತಿಯತ್ತ ಸಿಪಿಐ(ಎಂ) ಪೊಲಿಟ್‍ಬ್ಯುರೊದ ಈ ಹೇಳಿಕೆ  ಗಮನ ಸೆಳೆದಿದೆ.

ಚುನಾವಣಾ ಸುಧಾರಣೆಗಳ ಪ್ರಶ್ನೆಯ ಮೇಲೆ ಸಿಪಿಐ(ಎಂ) ಬಹಳ ಕಾಲದಿಂದ ಮಹತ್ವದ ಸೂಚನೆಗಳನ್ನು ಮುಂದಿಡುತ್ತ ಬಂದಿದೆ.

ನಮ್ಮ ಚುನಾವಣಾ ವ್ಯವಸ್ಥೆಯನ್ನು ಒಂದು ಭಾಗಶಃ ಆನುಪಾತಿಕ ಪ್ರಾತಿನಿಧ್ಯವನ್ನು ಅಂಗೀಕರಿಸುವಂತೆ ಬದಲಿಸಬೇಕು. ಈ ಮೂಲಕ ಸರಕಾರದ ರಚನೆಯಲ್ಲಿ ಜನಗಳ ನಿಜವಾದ ಪ್ರಜಾಸತ್ತಾತ್ಮಕ ಆಯ್ಕೆ ಬಿಂಬಿತವಾಗಲು ಸಾಧ್ಯವಾಗುತ್ತದೆ ಎಂದು ಸಿಪಿಐ(ಎಂ) ಸೂಚಿಸಿದೆ. ಸ್ವಾತಂತ್ರ್ಯದ ನಮತರ ಕೇಂದ್ರದಲ್ಲಿನ ಸುಮಾರಾಗಿ ಎಲ್ಲ ಸರಕಾರಗಳನ್ನು ಸಾರ್ವತ್ರಿಕ ಚುನಾವಣೆಗಳಲ್ಲಿ ನಡೆದ ಮತದಾನದಲ್ಲಿ 50ಶೇಕಡಾಕ್ಕಿಂತ ಕಡಿಮೆ ಮತಗಳ ಮೇಲೆ ರಚಿಸಲಾಗಿದೆ. ಪ್ರಸಕ್ತ ಬಿಜೆಪಿ ನೇತರತ್ವದ ಸರಕಾರ ಲೋಕಸಭೆಯಲ್ಲಿ ಒಂದು ಆರಾಮದಾಯಕ ಬಹುಮತ ಹೊಂದಿರುವುದು ಕೇವಲ 31ಶೇ.ಕತಗಳಿಕೆಯ ಆಧಾರದಲ್ಲಿ; ಅಂದರೆ ಮತದಾನ ಮಾಡಿದವರಲ್ಲಿ ಬಿಜೆಪಿಯ ವಿರುದ್ಧ 69ಶೇ. ಮಂದಿ ಮತ ಹಾಕಿದ್ದಾರೆ, ಎನ್‍ಡಿಎಯನ್ನು ನಂತರ ಸೇರಿದ ಪಕ್ಷಗಳನ್ನು ಬಿಟ್ಟು. ಪ್ರಜಾಪ್ರಭುತ್ವ ಎಂಬುದು ಬಹುಮತದ ಆಳ್ವಿಕೆ, ಅದನ್ನು ನಿಜವಾಗಿಯೂ ಭಾರತದಲ್ಲಿ ಜಾರಿ ಮಾಡಲಾಗಿಲ್ಲ.  ಎರಡು ಕ್ಷೇತ್ರಗಳನ್ನು ಒಟ್ಟಿಗೆ ಸೇರಿಸಿ ಒಂದರಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಮತಹಾಕಿದರೆ, ಇನ್ನೊಂದರಲ್ಲಿ ಮತದಾರರು ಒಂದು ರಾಜಕೀಯ ಪಕ್ಷ ವನ್ನು ಅದರ ರಾಜಕೀಯ ಪ್ರಣಾಳಿಕೆ, ಧೋರಣೆಗಳು ಮತ್ತು ಕಾರ್ಯಕ್ರಮಗಳ ಆಧಾರದಲ್ಲಿ ಆರಿಸುವಂತಾಗಬೇಕು ಎಂದು ಸಿಪಿಐ(ಎಂ) ಈ ಹಿಂದೆ ಸೂಚಿಸಿತ್ತು.

ಇದು ಜನತೆಯ ಪ್ರಜಾಪ್ರಭುತ್ವ ಆಯ್ಕೆಯನ್ನು ಈಗಿರುವುದಕ್ಕಿಂತ ಉತ್ತಮ ರೀತಿಯಲ್ಲಿ ಬಿಂಬಿಸುತ್ತದೆ. ಆನುಪಾತಿಕ ಪ್ರಾತಿನಿಧ್ಯ ಕೆಲವು ಮಟ್ಟಿಗೆ ಹಣಬಲ, ಜಾತಿ ಪರಿಗಣನೆ ಮುಂುತಾದವುಗಳನ್ನು  ಸ್ವಲ್ಪ ಮಟ್ಟಿಗೆ  ತಡೆಯುವ ಅನುಕೂಲಗಳನ್ನೂ ತರುತ್ತದೆ. ಏಕೆಂದರೆ ಜನರು ರಾಜಕೀಯ ಪಕ್ಷಗಳ ಕಾರ್ಯಕ್ರಮಗಳು ಮತ್ತು ಧೋರಣೆಗಳ ಮೇಲೆ ಮತ ನೀಡುತ್ತಾರೆ.

ಸಿಪಿಐ(ಎಂ) ಮತ್ತು ಸಿಪಿಐ ಇತರ ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಸಂಘಟನೆಗಳು ಮತ್ತು ಆಂದೋಲನಗಳೊಂದಿಗೆ ಚರ್ಚಿಸಿ  ಆಮೂಲಾಗ್ರ ಚುನಾವಣಾ ಸುಧಾರಣೆಗಳ ಬಗ್ಗೆ ಒಂದು ರಾಷ್ಟ್ರೀಯ ಸಮಾವೇಶವನ್ನು ಸದ್ಯದಲ್ಲೇ ನಡೆಸಲು ಯೋಚಿಸುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ತಿಳಿಸಿದೆ. ಸಿಪಿಐ(ಎಂ) ನಮ್ಮ ಚುನಾವಣಾ ಪ್ರಕ್ರಿಯೆಯಲ್ಲಿ ಬಹಳ ಅಗತ್ಯವಿರುವ ಬದಲಾವಣೆಗಳನ್ನು ತರಲು ಈ ಮಹತ್ವದ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳಲು ಸಿದ್ಧವಿರುವ ರಾಜಕೀಯ ಪಕ್ಷಗಳೊಂದಿಗೆ ಚರ್ಚೆಗಳನ್ನು ನಡೆಸಲಿದೆ.

ದಕ್ಷಿಣ ಏಶ್ಯ ದೇಶಗಳ ವಿಚಾರ ಸಂಕಿರಣ

ಮಹಾನ್ ಅಕ್ಟೋಬರ್ ಕ್ರಾಂತಿಯ ಶತಮಾನೋತ್ಸವ ಆಚರಣೆಯ ಭಾಗವಾಗಿ ಪೊಲಿಟ್‍ಬ್ಯುರೊ, ಹಿಂದಿನ ಕೇಂದ್ರ ಸಮಿತಿಯ ಸಭೆಯ ನಿರ್ಧಾರದಂತೆ ಸಪ್ಟಂಬರ್ 2017ರಲ್ಲಿ ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಶ್ರೀಲಂಕಾದ ಕಮ್ಯುನಿಸ್ಟ್ ಮತ್ತು ಕಾರ್ಮಿಕ ಪಕ್ಷಗಳ ಎರಡು ದಿನಗಳ ವಿಚಾರ ಸಂಕಿರಣವನ್ನು ಸಂಘಟಿಸುವ ಸೂಚನೆಯನ್ನು ಮುಂದಿಟ್ಟಿದೆ. ಈ ವಿಚಾರ ಸಂಕಿರಣ “ಸಮಕಾಲೀನ ಯುಗದಲ್ಲಿ ಸಾಮ್ರಾಜ್ಯಶಾಹಿ, ಕೋಮುವಾದ ಮತ್ತು ಮೂಲಭೂತವಾದವನ್ನು ಎದುರಿಸುವ ಬಗೆ-ಅಕ್ಟೋಬರ್ ಕ್ರಾಂತಿಯ ಚಿರ ಪ್ರಸ್ತುತತೆ” ಕುರಿತಂತೆ ಗಮನ ಕೇಂದ್ರೀಕರಿಸುತ್ತದೆ ಎಂದು ಪೊಲಿಟ್‍ಬ್ಯುರೊ ಹೇಳಿದೆ.

ಮುಂದಿನ ಸಿಪಿಐ(ಎಂ) ಕೇಂದ್ರ ಸಮಿತಿ ಸಭೆ ಎಪ್ರಿಲ್ 18-19ರಂದು ನಡೆಯಲಿದೆ. ಎಪ್ರಿಲ್ 17ರಂದು ಪೊಲಿಟ್‍ಬ್ಯುರೊ ಸಭೆ ನಡೆಯಲಿದೆ.

Leave a Reply

Your email address will not be published. Required fields are marked *