ಜೂನ್ 11: ಮೈಸೂರಿನಲ್ಲಿ ಸಂವಿಧಾನ ಉಳಿಸಲು `ದೇಶಪ್ರೇಮಿ ಸಮಾವೇಶ’

ಇತ್ತೀಚಿನ ವರ್ಷಗಳಲ್ಲಿ ನಮ್ಮ ಸಂವಿಧಾನದ ಮೂಲ ಆಶಯಗಳು ಮತ್ತು ತತ್ವಗಳ ಮೇಲೆ ತೀರ್ವವಾದ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜೂನ್ ೧೧ರಂದು ಸಿಪಿಐ(ಎಂ) ನೇತೃತ್ವದಲ್ಲಿ ಮೈಸೂರಿನ ದಸರಾ ವಸ್ತು ಪ್ರದರ್ಶನದ ಆವರಣದಲ್ಲಿ ರಾಜ್ಯ ಮಟ್ಟದ ’ಸಂವಿಧಾನ ಉಳಿಸಲು ದೇಶಪ್ರೇಮಿ ಸಮಾವೇಶ’ ನಡೆಯಲಿದೆ. ಈ ಸಮಾವೇಶವನ್ನು ಸಂಸತ್ ಸದಸ್ಯರು ಹಾಗೂ ಸಿಪಿಐ(ಎಂ)ನ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಸೀತಾರಾಂ ಯೆಚೂರಿಯವರು ಉದ್ಘಾಟಿಸಲಿದ್ದಾರೆ.

ನಮ್ಮ ದೇಶದ ಸಂವಿಧಾನದ ಪ್ರಸ್ಥಾವನೆಯಲ್ಲಿ ಭಾರತವನ್ನು ಒಂದು ’ಸಾರ್ವಭೌಮ ಸಮಾಜವಾದಿ ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯ’ ಎಂದು ಘೋಷಿಸಲಾಗಿದೆ. ಭಾರತದ ಎಲ್ಲಾ ಜನರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ; ಆಲೋಚನೆಯ, ಅಭಿವ್ಯಕ್ತಿಯ, ನಂಬಿಕೆ, ವಿಶ್ವಾಸ ಮತ್ತು ಆಚರಣೆಯ ಸ್ವಾತಂತ್ಯ; ಸಾಮಾಜಿಕ ಸ್ಥಾನ ಮತ್ತು ಅವಕಾಶಗಳಲ್ಲಿ ಸಮಾನತೆ ನೀಡುವುದು ಹಾಗೂ ಪ್ರತೀ ವ್ಯಕ್ತಿಯ ಘನತೆಯನ್ನು ಖಾತ್ರಿಪಡಿಸಿ, ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯಲಾಗಿದೆ.

ಬಾಬಾಸಾಹೇಬ್ ಡಾ|| ಬಿ.ಆರ್. ಅಂಬೇಡ್ಕರ್‌ರವರ ನೇತೃತ್ವದಲ್ಲಿ ರಚಿಸಲಾದ ಭಾರತದ ಸಂವಿಧಾನ ದೇಶದ ಎಲ್ಲಾ ಜಾತಿಯ, ಧರ್ಮದ, ಭಾಷೆಯ, ಪ್ರದೇಶದ ಹಾಗೂ ವಿವಿಧ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಅನುಸರಿಸುವ ಮತ್ತು ಶ್ರೀಮಂತ ಹಾಗೂ ಬಡವ ಎನ್ನುವ ಬೇಧವಿಲ್ಲದೆ ಎಲ್ಲಾ ಜನರಿಗೆ ಸಮಾನ ರೀತಿಯ ಸಾಂಸ್ಕೃತಿಕ, ಧಾರ್ಮಿಕ, ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ನ್ಯಾಯ, ಭದ್ರತೆ, ರಕ್ಷಣೆ ಹಾಗೂ ಅವಕಾಶಗಳನ್ನು ನೀಡುವುದು ಮೂಲ ಉದ್ದೆಶವಾಗಿತ್ತು.

ಆದರೆ, ಸ್ವಾತಂತ್ರ್ಯಾ ನಂತರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ಹಂತ ಹಂತವಾಗಿ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನೀತಿಗಳನ್ನೇ ಜಾರಿಗೆ ತಂದಿವೆ. ಸಾರ್ವಭೌಮ ಸಮಾಜವಾದಿ ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯದ ತತ್ವಗಳಿಗೆ ವಿರುದ್ಧವಾಗಿ ಅಮೇರಿಕಾದ ಸಾಮ್ರಾಜ್ಯಶಾಹಿಗೆ ಅಧೀನವಾಗುವಂತ ವಿದೇಶಾಂಗನೀತಿ, ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣದಂತಹ ಆರ್ಥಿಕ ನೀತಿಗಳು ಹಾಗೂ ಕೋಮುವಾದ, ಜಾತೀಯತೆ, ಅಸ್ಪೃಶ್ಯತೆ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ನೀತಿಗಳನ್ನೇ ಸರ್ಕಾರಗಳು ಆಚರಣೆಗೆ ತಂದ ಪರಿಣಾಮವಾಗಿ ದೇಶದ ಎಲ್ಲಾ ಜನರಿಗೆ ಸಮಾನ ರೀತಿಯ ಸಾಂಸ್ಕೃತಿಕ, ಧಾರ್ಮಿಕ, ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ನ್ಯಾಯ, ಭದ್ರತೆ, ರಕ್ಷಣೆ ಹಾಗೂ ಅವಕಾಶಗಳನ್ನು ನೀಡುವುದು ಕನಸಾಗಿಯೇ ಉಳಿದಿದೆ.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದಮೇಲೆ ಸಂವಿಧಾನದ ಮೂಲ ಆಶಯಗಳು ಹಾಗೂ ತತ್ವಗಳ ಮೇಲೆ ಅತ್ಯಂತ ತೀರ್ವತೆರನಾದ ದಾಳಿಗಳು ಆರಂಭವಾಗಿವೆ. ಜಾತ್ಯಾತೀತ ಮತ್ತು ಒಕ್ಕೂಟ ತತ್ವಗಳನ್ನು ಗಾಳಿಗೆ ತೂರಲಾಗಿದೆ. ದೇಶದಲ್ಲಿ ಕೋಮುವಾದಿ ಹಾಗೂ ಜಾತಿವಾದಿ ಶಕ್ತಿಗಳು ವಿಜೃಂಭಿಸುತ್ತಿವೆ. ದೇಶದ ಸಾರ್ವಜನಿಕ ಆಸ್ತಿಯಾದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿ ಉದ್ಯಮಿಗಳಿಗೆ ಕಡಿಮೆ ಬೆಲೆಗೆ ಮಾರಾಟಮಾಡಿ ದೇಶದ ಜನರ ಸಂಪತ್ತನ್ನು ಕೆಲವೇ ಕೆಲವು ವ್ಯಕ್ತಿಗಳ ಹಿತಾಸಕ್ತಿಗಾಗಿ ನೀಡಲಾಗುತ್ತಿದೆ.

ನರೇಂದ್ರ ಮೋದಿ ತಾನು ಅಧಿಕಾರಕ್ಕೆ ಬರುವಾಗ ವರ್ಷದಲ್ಲಿ ೨ ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇನೆ ಮತ್ತು ಶಿಕ್ಷಣ, ಆರೋಗ್ಯ, ವಸತಿ, ಸಾರಿಗೆ, ಸಂಪರ್ಕಗಳನ್ನು ದೇಶದ ಮೂಲೆ ಮೂಲೆಗಳಲ್ಲಿ ಸಿಗುವಂತೆ ಮಾಡುತ್ತೇನೆ, ಅಗತ್ಯ ವಸ್ತುಗಳ ಮತ್ತು ಸೇವೆಗಳ ಬೆಲೆ ಕಡಿಮೆ ಮಾಡುತ್ತೇನೆ, ಭ್ರಷ್ಟಾಚಾರ ತಡೆಗಟ್ಟುತ್ತೇನೆ ಹಾಗೂ ಎಲ್ಲರೊಂದಿಗೆ ಎಲ್ಲರ ವಿಕಾಸ ಮತ್ತು ’ಒಳ್ಳೆಯ ದಿನಗಳನ್ನು’ ತರುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ನರೇಂದ್ರ ಮೋದಿಯವರ ಮೂರು ವರ್ಷದ ಆಳ್ವಿಕೆಯಲ್ಲಿ ಇರುವ ಉದ್ಯೋಗಾವಕಾಶಗಳೂ ನಾಶವಾಗಿವೆ. ಶಿಕ್ಷಣ ಮತ್ತು ಆರೋಗ್ಯ ವ್ಯಾಪಾರೀಕರಣಗೊಂಡು ಸಂಪೂರ್ಣವಾಗಿ ಖಾಸಗೀ ಬಂಡಬಾಳಿಗರ ಹಿಡಿತಕ್ಕೆ ಸಿಲುಕಿವೆ. ನೋಟು ಅನಾಣ್ಯೀಕರಣದಂತ ಅತ್ಯಂತ ಅವೈಜ್ಞಾನಿಕ ಹಾಗೂ ಅತಾರ್ಕಿಕವಾದ ಆರ್ಥಿಕ ತೀರ್ಮಾನಗಳಿಂದಾಗಿ ದೇಶದ ಅರ್ಥ ವ್ಯವಸ್ಥೆಯೇ ಕುಸಿದು ಜಿಡಿಪಿ ಕುಸಿದಿದೆ. ಹೀಗಾಗಿ ದೇಶದ ಆಂತರಿಕ ಬೇಡಿಕೆ ಮತ್ತು ಉತ್ಪಾದನೆಯಲ್ಲಿ ಶೇ.೬೦ರಷ್ಟು ಕುಸಿತ ಉಂಟಾಗಿದ್ದು ಇದರಿಂದಾಗಿ ಕೋಟ್ಯಾಂತರ ಉದ್ಯೋಗಗಳು ನಾಶವಾಗಿವೆ. ದಲಿತರಿಗೆ ಹಾಗೂ ಹಿಂದುಳಿದವರಿಗೆ ಸಂವಿಧಾನಾತ್ಮಕವಾಗಿ ನೀಡಬೇಕಿದ್ದ ಮೀಸಲಾತಿಯ ಅವಕಾಶಗಳು ಕ್ಷೀಣುಸುತ್ತಿವೆ. ಅಸ್ಪೃಶ್ಯತೆ ಮತ್ತು ಜಾತಿತಾರತಮ್ಯ ದಬ್ಬಾಳಿಕೆ ದೌರ್ಜನ್ಯಗಳು ಸಾಮಾನ್ಯವಾಗಿವೆ. ಧರ್ಮ, ಸಂಸ್ಕೃತಿ, ಉಡುಪು ಹಾಗೂ ಆಹಾರದ ಹೆಸರಿನಲ್ಲಿ ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ನಿರಂತರವಾದ ದಾಳಿಗಳು ನಡೆಯುತ್ತಿವೆ.

ಜನರಿಗೆ ರಕ್ಷಣೆ ನೀಡದ ಸರ್ಕಾರ ’ಜಾನುವಾರುಗಳಿಗೆ ರಕ್ಷಣೆ’ ನೀಡುವ ಹೆಸರಿನಲ್ಲಿ ಜಾನುವಾರು ಸಾಗಾಣಿಕೆ ಹಾಗೂ ಮಾರಾಟದ ಮೇಲೆ ನಿರ್ಬಂದ ಹೇರುವ ನೆಪದಲ್ಲಿ ದೇಶದ ಬಹುಸಂಖ್ಯಾತ ಜನರ ಆಹಾರ ಕ್ರಮದ ಮೇಲೆ ದಾಳಿ ಮಾಡಿದೆ. ಈ ಕಾಯ್ದೆಯಿಂದ ದೇಶದ ಕೃಷಿಯೇ ನಾಶವಾಗಲಿದೆ. ರಾಜ್ಯದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಕೂಡ ಈ ಕಾಯ್ದೆಯ ಬಗ್ಗೆ ಎಡಬಿಡಂಗಿ ನಿಲುವು ತಳೆದಿರುವ ಪರಿಣಾಮ ರಾಜ್ಯದ ರೈತರು ಹಾಗೂ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ನರೇಂದ್ರ ಮೋದಿ ಸರ್ಕಾರ ತನ್ನ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ದೇಶದಲ್ಲಿ ಯುದ್ಧೋನ್ಮಾನದ ವಾತಾವರಣವನ್ನು ತುಂಬುತ್ತಿದೆ. ಹುಸಿ ದೇಶಭಕ್ತಿ, ದೇಶದ ಗಡಿ ಹಾಗೂ ದೇಶವನ್ನು ಕಾಯುವ ಸೈನಿಕರನ್ನು ಭಾವನಾತ್ಮಕವಾಗಿ ಬಳಸಿಕೊಂಡು ಜನರನ್ನು ದಿಕ್ಕುತಪ್ಪಿಸಲಾಗುತ್ತಿದೆ. ಗೋವು, ಸಂಸ್ಕೃತಿ ಹಾಗೂ ಧರ್ಮ ರಕ್ಷಣೆಯ ಹೆಸರಿನಲ್ಲಿ ಗೂಂಡಾಗಳ ಕೈಗೆ ಅಧಿಕಾರ ನೀಡಿ ದೇಶದ ದಲಿತರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಮೇಲೆ ದಾಳಿ ಮಾಡಲಾಗುತ್ತಿದೆ.

ದೇಶದಲ್ಲಿ ಜಾರಿಯಲ್ಲಿರುವ ಕಾರ್ಮಿಕ ಕಾನೂನುಗಳು, ಭೂ ಕಾಯ್ದೆಗಳು ಆರ್ಥಿಕ ಕಾನೂನುಗಳು ಮತ್ತು ವಿದೇಶಾಂಗ ನೀತಿಗಳಿಗೆ ಆಮೂಲಾಗ್ರವಾದ ತಿದ್ದುಪಡಿ ತರುವ ಮೂಲಕ ಸಂವಿಧಾನದ ಮೂಲ ಅಡಿಪಾಯವನ್ನೇ ಬುಡಮೇಲು ಮಾಡುವ ಪ್ರಯತ್ನಕ್ಕೆ ನರೇಂದ್ರ ಮೋದಿ ಸರ್ಕಾರ ಕೈಹಾಕಿದೆ. ಭಾರತ ಒಂದು ’ಸಾರ್ವಭೌಮ ಸಮಾಜವಾದಿ ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯ’ ಎನ್ನುವುದನ್ನು ಗಾಳಿಗೆ ತೂರಿ ಫ಼್ಯಾಸಿಸ್ಟ್ ಮಾಧರಿಯ ಸರ್ವಾಧಿಕಾರದ ಕೇಂದ್ರೀಕೃತ ವ್ಯವಸ್ಥೆಯೆಡೆಗೆ ಭಾರತವನ್ನು ಕೊಂಡೊಯ್ಯಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷವು ದೇಶದ ಸಂವಿಧಾನದ ಉಳಿವಿಗಾಗಿ ದೇಶದಾದ್ಯಂತ ಜತ್ಯಾತೀತ ಹಾಗೂ ಪ್ರಜಾಸತ್ತಾತ್ಮಕ ಶಕ್ತಿಗಳ ಐಕ್ಯತೆಗಾಗಿ ಶ್ರಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜೂನ್ ೧೧ರಂದು ಮೈಸೂರಿನಲ್ಲಿ ನಡೆಯುತ್ತಿರುವ ’ಸಂವಿಧಾನ ಉಳಿಸಲು ರಾಜ್ಯ ಮಟ್ಟದ ದೇಶಪ್ರೇಮಿ ಸಮಾವೇಶ’ ಅತ್ಯಂತ ಪ್ರಮುಖವಾಗಿದ್ದು ಹಾಸನ ಜಿಲ್ಲೆಯ ಎಲ್ಲಾ ಜಾತ್ಯಾತೀತ, ಪ್ರಗತಿಪರ ಹಾಗೂ ಸಂವಿಧಾನಪರ ಸಂಘಟನೆಗಳು ಮತ್ತು ವ್ಯಕ್ತಿಗಳು ಈ ಸಮಾವೇಶಕ್ಕೆ ಭಾಗವಹಿಸಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *