ಬಾಬ್ರಿ ಮಸೀದಿ ಧ್ವಂಸಕ್ಕೆ 25 ವರ್ಷ-ಡಿಸೆಂಬರ್ 6 ನ್ನು ಕರಾಳ ದಿನವಾಗಿ ಆಚರಿಸಲು ಎಡಪಕ್ಷಗಳ ಕರೆ

ಡಿಸೆಂಬರ್ 6, 1992 ರಂದು ಬಾಬ್ರಿ ಮಸೀದಿಯ ಉದ್ದೇಶಶಪೂರ್ವಕ ಧ್ವಂಸ ಸ್ವತಂತ್ರ ಭಾರತದ ಚರಿತ್ರೆಯ ಕ್ಯಾಲೆಂಡರಿನಲ್ಲಿ ಒಂದು ಕರಾ22ಳ ಭಾನುವಾರ. ಒಂದು ಕಾಂಗ್ರೆಸ್ ಕೇಂದ್ರ ಸರಕಾರ ಮತ್ತು ಉತ್ತರಪ್ರದೇಶದ ಒಂದು ಶಾಮೀಲುಕೋರ ಬಿಜೆಪಿ ಸರಕಾರದ ಅಡಿಯಲ್ಲಿ ಅಧಿಕಾರಸ್ಥರು ಮತ್ತು ಕಾನೂನು ಜಾರಿಯ ಸಂಸ್ಥೆಗಳ ಮೂಗಿನ ಕೆಳಗೇ ನಡೆದಿರುವ ಈ ಭಂಡ ಕೃತ್ಯ ಆಧುನಿಕ ಭಾರತೀಯ ಗಣತಂತ್ರದ ಜಾತ್ಯತೀತ ಪ್ರಜಾಸತ್ತಾತ್ಮಕ ಬುನಾದಿಯ ಮೇಲೆ ಮಾಡಿರುವ ಅತ್ಯಂತ ತೀವ್ರವಾದ ಪ್ರಹಾರವಾಗಿಯೇ ಉಳಿದಿದೆ ಎಂದು ಆರು ಎಡಪಕ್ಷಗಳು ನವಂಬರ್ 22ರಂದು ನೀಡಿರುವ ಜಂಟಿ ಹೇಳಿಕೆ ನೆನಪಿಸಿದೆ.

ಈ ಡಿಸೆಂಬರ್ 6 ರಂದು ಈ ಕರಾಳ ಕೃತ್ಯ ನಡೆದು 25 ವರ್ಷಗಳಾಗುತ್ತವೆ. ಅಂದು ಅದನ್ನು ಕರಾಳ ದಿನವಾಗಿ ಆಚರಿಸಬೇಕು, ಮತ್ತು ಈಗಿನ ಸಂದರ್ಭದಲ್ಲಿ ಕೇಂದ್ರದಲ್ಲಿನ ಮತ್ತು ಹಲವು ರಾಜ್ಯಗಳಲ್ಲಿನ ಬಿಜೆಪಿ ಸರಕಾರಗಳು ಪೋಷಿಸುತ್ತಿರುವ ಮತ್ತು ಪ್ರೋತ್ಸಾಹಿಸುತ್ತಿರುವ ಕೋಮುವಾದಿ ಧ್ರುವೀಕರಣದ ವಿರುದ್ಧ ಹೋರಾಟವನ್ನು ಬಲಪಡಿಸಬೇಕು ಎಂದು ಸಿಪಿಐ(ಎಂ), ಸಿಪಿಐ, ಸಿಪಿಐ(ಎಂ.ಎಲ್)-ಲಿಬರೇಶನ್, ಆರ್‌ಎಸ್‌ಪಿ, ಎಐಎಫ್‌ಬಿ ಮತ್ತು ಎಸ್‌ಯುಸಿಐ(ಸಿ) ತಮ್ಮೆಲ್ಲ ಘಟಕಗಳಿಗೆ ಕರೆ ನೀಡಿವೆ.

ಬಾಬ್ರಿ ಮಸೀದಿ ಧ್ವಂಸ ಆಧುನಿಕ ಗಣತಂತ್ರವನ್ನು ಕ್ರೋಡೀಕರಿಸುವುದಂತೂ ದೂರದ ಮಾತು, ಬದಲಿಗೆ ಅದರ ಬುನಾದಿಯನ್ನೇ  ಧ್ವಂಸ ಮಾಡಲು, ಮತ್ತು ಅದರ ಬದಲು ಒಂದು ಸರ್ವಾಧಿಕಾರಿ, ಉನ್ಮತ್ತ ಅಸಹಿಷ್ಣು, ಫ್ಯಾಸಿಸ್ಟ್ ಮಾದರಿಯ  ಆರೆಸ್ಸೆಸ್‌ನ ಸೈದ್ಧಾಂತಿಕ ಯೋಜನೆಯಾದ ‘ಹಿಂದೂ ರಾಷ್ಟ್ರ’ ವನ್ನು ತರಲು ಕಟಿಬದ್ಧವಾದ ಉನ್ಮತ್ತ ಶಕ್ರಿಗಳಿವೆ ಎಂಬ ವಾಸ್ತವತೆಯನ್ನು ಎತ್ತಿ ತೋರಿದೆ.

ಅಂದು ಬಿಜೆಪಿ ಮುಖಂಡರ ನೇತೃತ್ವದಲ್ಲಿ ಆರೆಸ್ಸೆಸ್ ಪ್ರಾಯೋಜಿತ ಹಿಂದುತ್ವ ಖಾಸಗಿ ಪಡೆಗಳು ಬಾಬ್ರಿ ಧ್ವಂಸ ಕೃತ್ಯವನ್ನು ನಡೆಸಿದವು. ಮತ್ತು ಇಂದು ಇಂತಹ ಖಾಸಗಿ ಪಡೆಗಳಿಗೆ ಹೆಚ್ಚಿನ ಧೈರ್ಯಬಂದು, ಅಧಿಕಾರಸ್ಥ ಬಿಜೆಪಿಯ ಕೃಪಾಪೋಷಣೆ ಪಡೆದು ತಾವು ಹೇಳಿದ್ದೇ  ಕಾನೂನು ಎಂಬಂತೆ ವರ್ತಿಸುತ್ತಿವೆ. ಇಂದು ಗೋರಕ್ಷಕರ ಹುಚ್ಚಾಟ ಸಾಗಿದೆ, ಗೋವಧೆಯ ಸುಳ್ಳು ಆಪಾದನೆಗಳನ್ನು ಸೃಷ್ಟಿಸಿ ದಲಿತರು ಮತ್ತು ಮುಸ್ಲಿಮರ ಮೇಲೆ ದಾಳಿ ಮಾಡುತ್ತಿದ್ದಾರೆ.

ನೈತಿಕ ಪೋಲಿಸ್‌ಗಿರಿಯ ಪಡೆಗಳು ನಮ್ಮ ಯುವಜನ ಏನು ತೊಡಬೇಕು, ಏನು ತಿನ್ನಬೇಕು ಮತ್ತು ಯಾರ ಗೆಳೆತನ ಮಾಡಬೇಕು ಎಂದು ವಿಧಿಸುತ್ತಿದ್ದಾರೆ. ದೇಶದ ಕಾನೂನನ್ನು ಎತ್ತಿ ಹಿಡಿದು ಈ ಖಾಸಗಿ ಪಡೆಗಳನ್ನು ನಿಷೇಧಿಸುವ ಬದಲು ಹಿರಿಯ ಬಿಜೆಪಿ ಮುಖಂಡರು, ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಂತ್ರಿಗಳು ಕೂಡ ಬಹಿರಂಗವಾಗಿಯೇ, ಇಂತಹ ಖಾಸಗಿ ಪಡೆಗಳನ್ನು ಅನುಮೋದಿಸಿದ್ದಾರೆ, ಪೋಷಿಸಿದ್ದಾರೆ ಮತ್ತು ಪ್ರೋತ್ಸಾಹಿಸುತ್ತಿದ್ದಾರೆ ಮತ್ತು ಅವರ ಹಿಂಸಾಕೃತ್ಯಗಳನ್ನು ಸಕಾರಣ ಎಂದಿದ್ದಾರೆ ಅಥವ ಕೊಂಡಾಡಿದ್ದಾರೆ ಕೂಡ ಎಂದು ಎಡಪಕ್ಷಗಳು ನೆನಪಿಸಿವೆ.

ಭಾರತದ ಜಾತ್ಯತೀತ ಪ್ರಜಾಪ್ರಭುತ್ವಕ್ಕೆ ಈ ಕಳಂಕ ಹತ್ತಿ ಕಾಲು ಶತಮಾನ ಕಳೆದರೂ ಹೀಗೆ ದೇಶದ ಕಾನೂನನ್ನು ಭಂಡತನದಿಂದ ಉಲ್ಲಂಘಿಸಿರುವ, ಭಾರತದ ಜಾತ್ಯತೀತ ಪ್ರಜಾಪ್ರಭುತ್ವ ಬುನಾದಿಯನ್ನು ಎಂದೂ ಸರಿಪಡಿಸಲಾಗದ ರೀತಿಯಲ್ಲಿ ಹಾಳುಗೆಡವಿರುವ ಈ ಧ್ವಂಸ ಕಾರ್ಯವನ್ನು ಸಂಘಟಿಸಿದವರು ಮತ್ತು ಎಸಗಿದವರ ಮೇಲೆ ಯಾವುದೇ ಕ್ರಮವನ್ನು ಇದುವರೆಗೂ ಕೈಗೊಂಡಿಲ್ಲ. ಭಾರತದಲ್ಲಿನ ಪ್ರಜಾಪ್ರಭುತ್ವ ಪ್ರಿಯರು ಈ ಅನ್ಯಾಯವನ್ನು ಎಂದೂ ಮರೆಯಲು ಸಾಧ್ಯವಿಲ್ಲ,, ಇದನ್ನು ಎಸಗಿದವರನ್ನು ಶಿಕ್ಷಿಸುವ ವರೆಗೂ ಇದಕ್ಕಾಗಿ ಹೋರಾಡುತ್ತಾರೆ ಎಂದು ಎಡಪಕ್ಷಗಳು ಹೇಳಿವೆ.

ಡಿಸೆಂಬರ್ 6 ಸ್ವತಂತ್ರ ಭಾರತಕ್ಕೆ ಅದರ ಸಂವಿಧಾನವನ್ನು ಕೊಟ್ಟ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಾಬಾಸಾಹೇಬ್ ಅಂಬೇಡ್ಕರ್  ಅವರ ನಿಧನ ವಾರ್ಷಿಕದ ದಿನ ಕೂಡ. ಎಡಪಕ್ಷಗಳು ಈ ದಿನದಂದು ಕೋಮುವಾದಿ ಶಕ್ತಿಗಳು ದೇಶಾದ್ಯಂತ ದಲಿತರ ಮೇಲೆ ತೀಕ್ಷ್ಣಗೊಳಿಸುತ್ತಿರುವ ಅತ್ಯಾಚಾರಗಳ ವಿರುದ್ಧ ಮತ್ತು  ನಮ್ಮ ಸಂವಿಧಾನದ ಜಾತ್ಯತೀತ ಪ್ರಜಾಪ್ರಭುತ್ವವಾದಿ ಮೌಲ್ಯಗಳ ವಿರುದ್ಧ ನಡೆಸಿರುವ ಪ್ರಹಾರಗಳ ವಿರುದ್ಧ ಒಂದು ಪ್ರಚಾರಾಂದೋಲನವನ್ನು ನಡೆಸುವುದಾಗಿ ಈ ಹೇಳಿಕೆ ತಿಳಿಸಿದೆ. ಈ ಪ್ರಹಾರಗಳನ್ನು  ಜನಗಳನ್ನು ಅಣಿನೆರೆಸುವ ಮೂಲಕ, ಜಾತ್ಯತೀತ ಪ್ರಜಾಪ್ರಭುತ್ವ ನೀತಿಗಳನ್ನು, ನಮ್ಮ ಸಮ್ಮಿಶ್ರ ಸಂಸ್ಕೃತಿಯನ್ನು  ರಕ್ಷಿಸುವ ಹೋರಾಟಗಳ ಮೂಲಕ ಮತ್ತು ಜನಗಳನ್ನು ಕೋಮು ಆಧಾರದಲ್ಲಿ ಒಡೆಯುವ ಪ್ರತಿಯೊಂದು ಪ್ರಯತ್ನವನ್ನು ಪ್ರತಿರೋಧಿಸುವ ಮೂಲಕ ಎದುರಿಸಬೇಕು ಎಂದು ಅವು ಹೇಳಿವೆ.

ಈ ಕರಾಳ ದಿನವನ್ನು ವಿವಿಧ ರಾಜ್ಯಗಳಲ್ಲಿ ರಾಜ್ಯ ಮಟ್ಟದಲ್ಲಿ  ನಿರ್ಧರಿಸಿದಂತೆ ಆಚರಿಸಬೇಕು ಎಂದು ಈ ಆರು ಎಡಪಕ್ಷಗಳು ಕರೆ ನೀಡಿವೆ.

Leave a Reply

Your email address will not be published. Required fields are marked *