ನ್ಯಾಯಮೂರ್ತಿ ಲೊಯ ಸಾವಿನ ಬಗ್ಗೆ ವಿಚಾರಣೆ ನಡೆಸಬೇಕು

ಗುಜರಾತಿನಲ್ಲಿ 2005ರಲ್ಲಿ ಸೋಹ್ರಬಬುದ್ದಿನ್ ಶೇಖ್ ಎನ್‌ಕೌಂಟರ್ ಹತ್ಯೆ ಕುರಿತ ವಿಚಾರಣೆ ಮಾಡುತ್ತಿದ್ದ ಸಿಬಿಐ ನ್ಯಾಯಾಲಯದ ನ್ಯಾಯಮೂರ್ತಿ ಹೆಚ್‌ ಪಿ  ಲೊಯ ನವಂಬರ್ 30-ಡಿಸೆಂಬರ್ 1, 2014 ರಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ವರದಿಯಾಗಿತ್ತು. ಆದರೆ ಅದು ಸಹಜ ಸಾವು ಅಲ್ಲ ಎಂಬ ಸಂದೆಹ ಈಗ ‘ಕಾರವಾನ್’ ಪತ್ರಿಕೆಯಲ್ಲಿ ಪ್ರಕಟವಾದ ಎರಡು ವರದಿಗಳಿಂದ ಎದ್ದಿದೆ.

ಈ ಬಗ್ಗೆ  ಉನ್ನತ ಮಟ್ಟದ ನ್ಯಾಯಾಂಗ ತನಿಖೆಯನ್ನು ನಡೆಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಆಗ್ರಹಿಸಿದೆ. ನ್ಯಾಯಮೂರ್ತಿ ಲೊಯ ರವರ ಕುಟುಂಬದ ಸದಸ್ಯರು ವಿಚಾರಣೆಯ ವೇಳೆಯಲ್ಲಿ ಅವರಿಗೆ ಲಂಚ ಕೊಡುವ ಮತ್ತು ಬೆದರಿಸುವ ಪ್ರಯತ್ನಗಳನ್ನು ನಡೆಸಲಾಯಿತು ಎಂದು ಆಪಾದಿಸಿದ್ದಾರೆ.

ಇವೆಲ್ಲ ಕೊಲೆ, ಲಂಚ, ಕಾನೂನಿನ ಬುಡಮೇಲು, ಮತ್ತು ನಮ್ಮ ಸಂಸದೀಯ ಪ್ರಜಾಪ್ರಭುತ್ವ ಸಂಸ್ಥೆಗಳ ದುರುಪಯೋಗ ಅತ್ಯುನ್ನತ ಸ್ಥಾನಗಳಲ್ಲಿ ನಡೆಯುತ್ತಿದೆಯೇ ಎಂಬ ಕಳವಳಕಾರಿ ಪ್ರಶ್ನೆಗಳನ್ನು ಎತ್ತಿವೆ. ಇದನ್ನು ಗಂಭೀರವಾಗಿ ತನಿಖೆಮಾಡಬೇಕಾಗಿದೆ. ಆದ್ದರಿಂದ  ಇಡೀ ವ್ಯವಹಾರದ ಉನ್ನತ ಮಟ್ಟದ ನ್ಯಾಯಾಂಗ ತನಿಖೆಯನ್ನು ನಡೆಸಬೇಕು ಎಂದು ಅದು  ಆಗ್ರಹಿಸಿದೆ. ತನಿಖೆ ಅಗತ್ಯವಾಗಿದೆ ಎಂಬ ಅಭಿಪ್ರಾಯಗಳು ನ್ಯಾಯಾಧೀಶರುಗಳಿಂದಲೂ ಬರುತ್ತಿವೆ.

ದಿಲ್ಲಿ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಎ.ಪಿ.ಷಹಾ ಅವರು ಈ ಕುರಿತು ಮಾತಾಡುತ್ತ ಅವರ ಸಾವಿನ ಸಂದೇಹಾಸ್ಪದ ಸನ್ನಿವೇಶದ ಬಗ್ಗೆ ಕುಟುಂಬದ ಸದಸ್ಯರ ದೂರುಗಳಲ್ಲದೆ, ಇದರಲ್ಲಿ ಭ್ರಷ್ಟಾಚಾರದ ಆಪಾದನೆಗಳ ಬಗ್ಗೆ, ಈ ಸಿಬಿಐ ನ್ಯಾಯಾಧೀಶರು ಇದ್ದಕ್ಕಿದ್ದಂತೆ ಸಾಯುವ ಕೆಲವು  ವಾರಗಳ ಹಿಂದೆ ಅವರಿಗೆ  “ಅನುಕೂಲಕರ’ ತೀರ್ಪಿಗಾಗಿ  100 ಕೋಟಿ ರೂ.ಗಳ ಲಂಚದ ಆಮಿಷ ಒಡ್ಡಲಾಗಿತ್ತು ಎಂಬ ಆಪಾದನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

“ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು ಅಥವ ಭಾರತದ ಮುಖ್ಯ ನ್ಯಾಯಾಧೀಶರೇ ಈ ಕುರಿತ ಮಾಹಿತಿಗಳನ್ನು ನೋಡಬೇಕು  ಮತ್ತು ಒಂದು ತನಿಖೆ ನಡೆಸುವುದು ಅಗತ್ಯವೇ ಎಂದು ನಿರ್ಧರಿಸಬೇಕು. ಏಕೆಂದರೆ ಈ ಆಪಾದನೆಗಳ ತನೀಖೆಯಾಗದಿದ್ದರೆ ಅದು ನ್ಯಾಯಾಂದ ಮೇಲೆ ಒಂದು ಗಂಭೀರ ಕಳಂಕ ತರುತ್ತದೆ” ಎಂದು ಹೇಳಿದ ಅವರು, ನ್ಯಾಯಮೂರ್ತಿ ಲೊಯ ಒಬ್ಬ ಪ್ರಾಮಾಣಿಕ ಮತ್ತು ನೇರನಡೆಯ ನ್ಯಾಯಾಧೀಶರಾಗಿದ್ದರು, ಅವರ ಕುಟುಂಬದವರು ಮಾಡಿರುವ ಆಪಾದನೆಗಳ ತನಿಖೆ ಮಾಡದಿದ್ದರೆ ಅದು ನ್ಯಾಯಾಂಗಕ್ಕೆ , ವಿಶೇಷವಾಗಿ ಕೆಳಗಣ ಹಂತಗಳಲ್ಲಿ ಇರುವವರಿಗೆ ಒಂದು ಅತ್ಯಂತ ತಪ್ಪು ಸಂದೇಶವನ್ನು ಕಳಿಸುತ್ತದೆ,  ಜನಗಳಲ್ಲಿ ನ್ಯಾಯಾಂಗದ ಸಮಗ್ರತೆಯ ಬಗ್ಗೆ ವಿಶ್ವಾಸವನ್ನು ಕಾಯ್ದುಕೊಳ್ಳುವುದು ಅಗತ್ಯವಾಗಿದೆ  ಎಂದಿದ್ದಾರೆ.

ಇನ್ನೊಬ್ಬ ನ್ಯಾಯಾಧೀಶರು, ಮುಂಬೈ ಕೈಕೋರ್ಟಿನ ನಿವೃತ್ತ ನ್ಯಾಯಾಧೀಶ, ನ್ಯಾಯಮೂರ್ತಿ ಬಿ.ಹೆಚ್‍. ಮರ್ಲಪಲ್ಲೆ ಅವರು ಕೂಡ  ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಈಗ ಮುಂಬೈ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿರುವ  ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ ರವರಿಗೆ ಈ ಕುರಿತು ಬರೆದ ಪತ್ರದಲ್ಲಿ, ಭಾರತದ ಸಂವಿಧಾನದ 235ನೇ ವಿಧಿಯ ವ್ಯಾಖ್ಯಾನ ಮಾಡುತ್ತ ಸರ್ವೋಚ್ಚ ನ್ಯಾಯಾಲಯ ಹೈಕೋರ್ಟ್‍ ಅದರ ಕೈಕೆಳಗೆ ಇರುವ ನ್ಯಾಯಾಂಗದ ರಕ್ಷಕ ಎಂದು ಮತ್ತೆ-ಮತ್ತೆ ಹೇಳಿದೆ,  ಮುಖ್ಯ ನ್ಯಾಯಾಧೀಶರು ಈ ವಿಷಯದ ಬಗ್ಗೆ ಒಂದು ವಿಶೇಷ ತನಿಖಾ ತಂಡದಿಂದ ತನಿಖೆಗೆ ಆದೇಶ ನೀಡಿ ಖಂಡಿತವಾಗಿಯೂ ಕೆಳಗಣ ಹಂತದ ನ್ಯಾಯಾಧೀಶರುಗಳು ತಾವು ಅನಾಥರಲ್ಲ ಎಂದು ನಂಬುವಂತೆ ಮಾಡಬಹುದು ಎಂದು ಅಭಿಪ್ರಾಯ ಪಟ್ಟಿರುವುದಾಗಿ ವರದಿಯಾಗಿದೆ.

2005ರಲ್ಲಿ ಈಗಿನ ಪ್ರಧಾನ ಮಂತ್ರಿಗಳು ಗುಜರಾತಿನ ಮುಖ್ಯಮಂತ್ರಿಗಳಾಗಿದ್ದಾಗ ಮತ್ತು ಈಗಿನ ಆಳುವ ಪಕ್ಷದ ಅಧ್ಯಕ್ಷರು ಅಲ್ಲಿನ ಗೃಹ ಇಲಾಖೆಯನ್ನು ನಿರ್ವಹಿಸುತ್ತಿದ್ದಾಗ ನಡೆದ ಸೋಹ್ರಬುದೀನ್ ಎನ್‌ಕೌಂಟರ್‌ನ ಕೇಸ್ನ ನ್ಯಾಯಪೂರ್ಣ ವಿಚಾರಣೆ ಆಗಲಿಕ್ಕಿಲ್ಲ ಎಂದು ಅದರ ವಿಚಾರಣೆಯನ್ನು ಗುಜರಾತಿನಿಂದ ಮಹಾರಾಷ್ಟçಕ್ಕೆ ವರ್ಗಾಯಿಸಲಾಗಿತ್ತು.

ಇದರ ವಿಚಾರಣೆ ಮಾಡುತ್ತಿದ್ದ ನ್ಯಾಯಾಧೀಶರನ್ನು ಮಧ್ಯದಲ್ಲಿ ಬದಲಿಸಬಾರದು ಎಂಬ ಆದೇಶವಿದ್ದರೂ (ಈ ನಡುವೆ ಗುಜರಾತಿನ ಮುಖ್ಯಮಂತ್ರಿಗಳು ಕೇಂದ್ರದಲ್ಲಿ ಪ್ರಧಾನ ಮಂತ್ರಿಗಳಾದ  ಬೆನ್ನಲ್ಲೆ  ಅವರನ್ನು ವರ್ಗ ಮಾಡಲಾಯಿತು, ಆರೋಪಿಗಳಲ್ಲಿ ಒಬ್ಬರಾದ ಅಮಿತ್‌ ಷಾ ನಿಗದಿತ ದಿನಾಂಕದಲ್ಲಿ ವಿಚಾರಣೆಗೆ ಹಾಜರಾಗಲೇ ಬೇಕು ಎಂದದ್ದಕ್ಕೆ ಅವರ ವರ್ಗಾವಣೆಯಾಗಿತ್ತು ಎನ್ನಲಾಗಿದೆ, ಅವರ ಜಾಗದಲ್ಲಿ ಬಂದ ನ್ಯಾಯಮೂರ್ತಿ ಲೋಯ ಕೂಡ ಇದೇ ಟಿಪ್ಪಣಿ ಮಾಡಬೇಕಾಯ್ತು. ಈ ನಡುವೆ ಅವರ ಸಾವು ಸಂಭವಿಸಿ ನಂತರ ಬಂದ ನ್ಯಾಯಾಧೀಶರು ಈ ಕೇಸಿನಲ್ಲಿ ಅಮಿತ್‌ಷಾ ಅವರಿಗೆ ‘ಕ್ಲೀನ್ ಚಿಟ್’’ ಕೊಟ್ಟರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈಗ ಅವರ ಸಾವು ಸಹಜವಾಗಿರಲಿಲ್ಲ, ಮರಣೋತ್ತರ ಪರೀಕ್ಷೆಯಲ್ಲಿ ಮೋಸವಾಗಿದೆ ಎಂಬ ಸಂದೆಹದೊಡನೇಯೇ ಅವರಿಗೆ ‘ಸರಿಯಾದ’(ಅಂದೆ ಕ್ಲಿನ್‌ಚಿಟ್‌ನ?) ತೀರ್ಪು ಕೊಡಲು, ಅದೂ ಮುಂಬೈ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರ ಮೂಲಕವೇ  100 ಕೋಟಿ ರೂ.ಗಳ ಲಂಚ ಕೊಡುವ ಮಾತು ಬಂದಿತ್ತು  ಎಂಬ ಆಪಾದನೆಗಳು ಬಂದಿವೆ.

Leave a Reply

Your email address will not be published. Required fields are marked *