22ನೇ ಸಿಪಿಐ(ಎಂ) ಮಹಾಧಿವೇಶನದ ಮೊದಲನೇ ದಿನ

ಐತಿಹಾಸಿಕ  ತೆಲಂಗಾಣ ಪಾಳೆಯಗಾರಿ-ವಿರೋಧಿ  ಸಶಸ್ತ್ರ  ಹೋರಾಟದಲ್ಲಿ ಭಾಗವಹಿಸಿದ್ದ ಹಿರಿಯ ಕ್ರಾಂತಿಕಾರಿ ಮಲ್ಲು ಸ್ವರಾಜ್ಯಂ ಕೆಂಬಾವುಟವನ್ನು ಹಾರಿಸುವುದರೊಂದಿಗೆ ಸಿಪಿಐ(ಎಂ)ನ 22ನೇ ಮಹಾಧಿವೇಶನ ಹೈದರಾಬಾದಿನಲ್ಲಿ ಎಪ್ರಿಲ್‍ 18 ರ ಬೆಳಿಗ್ಯೆ ಆರಂಭವಾಯಿತು. ಹಿರಿಯ ಕಾರ್ಮಿಕ ಮುಖಂಡರೂ, ಸಿಪಿಐ(ಎಂ) ಪೊಲಿಟ್‍ಬ್ಯರೊ ಸದಸ್ಯರೂ ಆದ ಮಹಮ್ಮದ್‍ ಅಮಿನ್‍ ನೆನಪಿನಲ್ಲಿ ಮಹಮ್ಮದ್‍ ಅಮೀನ್‍ ನಗರ ಎಂದು ಹೆಸರಿಸಿದ ಆವರಣದಲ್ಲಿ 22ನೇ ಮಹಾಧಿವೇಶನಕ್ಕೆ ಚಾಲನೆ ದೊರೆಯಿತು. ಈ ಮಹತ್ವದ ಸಭೆಯಲ್ಲಿ ದೇಶದ ಎಲ್ಲೆಡೆಗಳಿಂದ 765 ಚುನಾಯಿತ ಪ್ರತಿನಿಧಿಗಳು ಮತ್ತು 74 ವೀಕ್ಷಕರು ಭಾಗವಹಿಸುತ್ತಿದ್ದಾರೆ. ಎಪ್ರಿಲ್‍22ರ ವರೆಗೆ ಮಹಾಧಿವೇಶನ ನಡೆಯುತ್ತದೆ.

ಪೊಲಿಟ್‍ಬ್ಯುರೊ ಸದಸ್ಯರೂ, ಮಾಜಿ ತ್ರಿಪುರಾ ಮುಖ್ಯಮಂತ್ರಿಗಳೂ ಆದ ಮಾಣಿಕ್ ಸರ್ಕಾರ್  ಅಧ್ಯಕ್ಷತೆಯಲ್ಲಿ ಉದ್ಘಾಟನಾ ಅಧಿವೇಶನ  ಈ  ಅವಧಿ ಯಲ್ಲಿ  ಅಗಲಿದ ಸಂಗಾತಿಗಳಿಗೆ  ಮತ್ತು ಪಶ್ಚಿಮ ಬಂಗಾಲದಲ್ಲಿ ಟಿಎಂಸಿ ಅಮಾನುಷವಾಗಿ ಕೊಂದಿರುವ 32 ಸಂಗಾತಿಗಳು, ಆರೆಸ್ಸೆಸ್‍ ಕೊಲೆಗಡುಕ ಗ್ಯಾಂಗುಗಳಿಂದ ಹುತಾತ್ಮರಾದ ಕೇರಳದ 14 ಹುತಾತ್ಮರು ಮತ್ತು ತ್ರಿಪುರಾದಲ್ಲಿ ವಿಧಾನ ಸಭಾ ಚುನಾವಣೆಗಳ ನಂತರ ಬಿಜೆಪಿ ಗೂಂಡಾಗಳು ಕೊಂದಿರುವ  ಇಬ್ಬರು   ಸಂಗಾತಿಗಳಿಗೆ ಆಳವಾದ ಶ್ರದ್ಧಾಂಜಲಿಗಳನ್ನು ಸಲ್ಲಿಸುವುದರೊಂದಿಗೆ ಆರಂಭವಾಯಿತು.

ಸ್ವಾಗತ ಸಮಿತಿಯ ಪರವಾಗಿ ಅದರ ಅಧ್ಯಕ್ಷರಾದ ಬಿ.ವಿ.ರಾಘವುಲು ಅವರ ಸ್ವಾಗತ ಭಾಷಣದ ನಂತರ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಸಮ್ಮೇಳನವನ್ನು ಉದ್ಘಾಟಿಸಿದರು.

ತಮ್ಮ ಭಾಷಣದಲ್ಲಿ ಯೆಚುರಿ “ಸಿಪಿಐ(ಎಂ)ನ  22ನೇ ಮಹಾಧಿವೇಶನವನ್ನು ಜನತೆ ಮತ್ತು ನಮ್ಮ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ ಬಹುಮುಖೀ ಸವಾಲುಗಳನ್ನು ಎದುರಿಸುತ್ತಿರುವ ಒಂದು ಅವಧಿಯಲ್ಲಿ ನಡೆಸಲಾಗುತ್ತಿದೆ. ಪ್ರಸಕ್ತ ಬಿಜೆಪಿ ಕೇಂದ್ರ ಸರಕಾರದ ಅಧಿಕಾರ ಸೂತ್ರಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹತೋಟಿಯಲ್ಲಿದ್ದು, ಅದು ಜನಗಳ ಮೇಲೆ ಅಭೂತಪೂರ್ವ ಸಂಕಟಗಳನ್ನು ಹೇರುವ ಧೋರಣೆಗಳನ್ನು ಅನುಸರಿಸುತ್ತಿದೆ, ಮತ್ತು ಅದೇ ವೇಳೆಗೆ ನಮ್ಮ ಸಾಮಾಜಿಕ ಹಂದರವನ್ನು ಘಾಸಿಗೊಳಿಸುತ್ತಿದೆ, ಅದರ ಐಕ್ಯತೆ ಮತ್ತು ಸಮಗ್ರತೆಗೆ ಬೆದರಿಕೆ ಒಡ್ಡುತ್ತಿದೆ. ನಮ್ಮ ಸಮಾಜವನ್ನು ಎಷ್ಟೊಂದು ಅಮಾನವೀಯಗೊಳಿಸಲಾಗಿದೆ ಎಂಬುದು ಇತ್ತೀಚೆಗೆ ಕಠುವ ಮತ್ತು ಉನ್ನಾವ್‍ನ ಮೈನಡುಗಿಸುವ ಅತ್ಯಾಚಾರದ ಘಟನೆಗಳಲ್ಲಿ ಕಂಡು ಬಂದಿದೆ. ಅತ್ಯಾಚಾರವನ್ನು ಒಂದು ಕೋಮುಧ್ರುವೀಕರಣದ ಅಸ್ತ್ರವಾಗಿ ಬಳಸುತ್ತಿರುವುದನ್ನು ಕಾಣುತ್ತಿರುವುದು  ನಾಚಿಕೆಗೇಡಿನ ಸಂಗತಿ. ಇದನ್ನು ಪ್ರತಿರೋಧಿಸಬೇಕು ಮತ್ತು ಸೋಲಿಸಬೇಕು…”ಎಂದರು.

ಮುಂದುವರೆದು,”.. ನವ-ಉದಾರವಾದಿ ಧೋರಣೆಗಳ ಪ್ರಹಾರಗಳು ಅಭೂತಪೂರ್ವ ಆಯಾಮಗಳನ್ನು ಪಡೆದಿವೆ. ತೀಕ್ಷ್ಣಗೊಳ್ಳುತ್ತಿರುವ ಕೋಮುವಾದಿ ಧ್ರುವೀಕರಣ ನಮ್ಮ ಸಾಮಾಜಿಕ ಹಂದರದ ಐಕ್ಯತೆಯನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಚಿಂದಿಗೊಳಿಸುತ್ತಿದೆ….. ಸಿಪಿಐ(ಎಂ)ನ ಈ 22ನೇ ಮಹಾಧಿವೇಶನ ಪಕ್ಷದ ಸ್ವತಂತ್ರ ಚಟುವಟಿಕೆಗಳನ್ನು ಬಲಪಡಿಸಲು, ಜನಗಳ ಹೋರಾಟಗಳನ್ನು ತೀವ್ರಗೊಳಿಸಲು ಹಾಗೂ  ರಾಜಕೀಯ ಮಧ್ಯಪ್ರವೇಶ ನಡೆಸಲು,  ಎಡಶಕ್ತಿಗಳ ಐಕ್ಯತೆಯನ್ನು ಬಲಪಡಿಸಲು ಮತ್ತು ಎಡ ಹಾಗೂ ಪ್ರಜಾಪ್ರಭುತ್ವವಾದಿ ಶಕ್ತಿಗಳ ಐಕ್ಯತೆಯನ್ನು ಬೆಸೆಯಲು  ಹೊಸ ನಿರ್ದೇಶನಗಳನ್ನು ನೀಡುತ್ತದೆ ಎಂಬ ವಿಶ್ವಾಸ ನನಗಿದೆ. ಅಂತಿಮವಾಗಿ, ಈ ಸವಾಲುಗಳಿಗೆ  ಧೋರಣೆಗಳ ಪರ್ಯಾಯವೇ ಉತ್ತರ, ಮತ್ತು ಇದನ್ನು ಎಡ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳು ಮಾತ್ರವೇ ಕೊಡಬಲ್ಲವು” ಎಂದು ಹೇಳಿದರು.

ಆರು ಎಡಪಕ್ಷಗಳ ಮುಖಂಡರುಗಳು ಹಾಜರಿದ್ದುದು ಜನತೆಯ ಬೇಳೆಯುತ್ತಿರುವ ಹೋರಾಟಗಳಲ್ಲಿ ಎಡ ಐಕ್ಯತೆಯನ್ನು ಬಿಂಬಿಸಿತು. ಸಿಪಿಐನ ಪ್ರಧಾನ ಕಾರ್ಯದರ್ಶಿ ಸುಧಾಕರ ರೆಡ್ಡಿ, ಸಿಪಿಐ(ಎಂ-ಎಲ್)-ಲಿಬರೇಷನ್‍ನ ಪ್ರಧಾನ ಕಾರ್ಯದರ್ಶಿ ದೀಪಂಕರ್‍ ಭಟ್ಟಾಚಾರ್ಯ, ಅಖಿಲ ಭಾರತ ಫಾರ್ವರ್ಡ್ ಬ್ಲಾಕ್    ಕೇಂದ್ರಸಮಿತಿಯ ಕಾರ್ಯದರ್ಶಿ ಜಿ.ಆರ್‍.ಶಿವಶಂಕರ್, ಆರ್‍.ಎಸ್..ಪಿ. ಯ ರಾಷ್ಟ್ರೀಯ ಸಮಿತಿಯ ಕೇಂದ್ರ ಕಾರ್ಯದರ್ಶಿ ಮಂಡಳಿಯ ಸದಸ್ಯ ಮನೋಜ್‍ ಭಟ್ಟಾಚಾರ್ಯ ಮತ್ತು ಎಸ್‍ಯುಸಿಐ(ಸಿ)ಯ ಪೊಲಿಟ್‍ಬ್ಯುರೊ ಸದಸ್ಯರಾದ ಅಸಿತ್‍ ಭಟ್ಟಾಚಾರ್ಯ ಅಧಿವೇಶನವನ್ನು ಉದ್ದೇಶಿಸಿ ಮಾತಾಡಿದರು.

ಉದ್ಘಾಟನಾ ಅಧಿವೇಶನ ಮಾಣಿಕ್‍ ಸರ್ಕಾರ್ ಅವರ ಅಧ್ಯಕ್ಷ ಬಾಷಣದೊಂದಿಗೆ ಮುಕ್ತಾಯ ಗೊಂಡಿತು.

“ಈ ಸರಕಾರ ಒಡೆದು ಆಳುವ ಹೇಯ ಧೋರಣೆಯನ್ನು ಅನುಸರಿಸುತ್ತಿದೆ, ಜಾತ್ಯತೀತತೆಯ ನಮ್ಮ ನೆಚ್ಚಿನ ಸಾಂಸ್ಕೃತಿಕ ಹಂದರವನ್ನು ನಾಶಪಡಿಸುತ್ತಿದೆ, ನಮ್ಮ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸುತ್ತಿದೆ ಮತ್ತು ಅಮೆರಿಕನ್‍ ಸಾಮ್ರಾಜ್ಯಶಾಹಿಯ ಕಿರಿಯ ಪಾಲುದಾರನಂತೆ ವರ್ತಿಸುತ್ತಿದೆ. ಕಾರ್ಮಿಕ ವರ್ಗವಲ್ಲದೆ, ದುಡಿಯುವ ಜನಗಳು, ರೈತಾಪಿಗಳು, ಕೃಷಿಕೂಲಿಕಾರರು, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು, ವಿಶೇಷವಾಗಿ ಮುಸ್ಲಿಂ ಅಲ್ಪಸಂಖ್ಯಾತರು ಮತ್ತು ದಲಿತರು ತೀವ್ರ ದಾಳಿಗಳಿಗೆ ಒಳಗಾಗಿದ್ದಾರೆ…….ಇದನ್ನು ಗಮನದಲ್ಲಿಟ್ಟುಕೊಂಡು, ಭಾರತದಲ್ಲಿ ಎಡಶಕ್ತಿಗಳ ನಮ್ರ, ಆದರೆ ಮಹತ್ವದ ತುಕಡಿಯಾಗಿ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ), ನಮ್ಮ ದೇಶದ ಜನಸಾಮಾನ್ಯರ ಆಶಯ-ಆಕಾಂಕ್ಷೆಗಳನ್ನು ಈಡೇರಿಸಲು, ಬಿಜೆಪಿ-ಆರೆಸ್ಸೆಸ್ ಕೂಟವನ್ನು ಮೂಲೆಗುಂಪು ಮಾಡಿ ಸೋಲಿಸಲು ಮುಂಬರುವ ದಿನಗಳಲ್ಲಿ ಚೈತನ್ಯಪೂರ್ಣವಾಗಿ ಅನುಸರಿಸಬೇಕಾದ ಒಂದು ಸರಿಯಾದ ರಾಜಕೀಯ ಕಾರ್ಯತಂತ್ರವನ್ನು ವಿಕಾಸಗೊಳಿಸಬೇಕಾಗಿದೆ. ಆದರೆ, ಇದನ್ನು ನಮ್ಮ ನೀತಿಬದ್ಧ ನಿಲುವು ಮತ್ತು ಸಾಮಾಜಿಕ ಹಾಗೂ ವರ್ಗ ಕಣ್ಣೋಟಗಳ ವಿಷಯದಲ್ಲಿ ರಾಜಿ ಮಾಡಿಕೊಳ್ಳದೆ ಮಾಡಬೇಕು ಎಂಬುದು ಸ್ವಯಂವೇದ್ಯ…” ಎಂದು ಅವರು ಹೇಳಿದರು.

ಪ್ರತಿನಿಧಿ ಅಧಿವೇಶನ ಪಕ್ಷದ ಮಹಾಧಿವೇಶನ ನಡೆಸಲು ಸೀತಾರಾಮ್‍ ಯೆಚುರಿಯವರು  ಸೂಚಿಸಿದಂತೆ ವಿವಿಧ ಸಮಿತಿಗಳನ್ನು ಆರಿಸುವುದರೊಂದಿಗೆ ಆರಂಭವಾಯಿತು.

ಅಧ್ಯಕ್ಷ ಮಂಡಳಿ:
ಮಾಣಿಕ್‍ ಸರ್ಕಾರ್‍ ( ಅಧ್ಯಕ್ಷರು)
ಆಮ್ರ ರಾಮ್
ಯುಸುಫ್‍ ತರಿಗಾಮಿ
ರಾಧಾಕೃಷ್ಣನ್
ಜೆ.ಪಿ ಗವಿತ್
ಮಿನತಿ ಘೋಷ್‍
ಎಸ್‍.ವೀರಯ್ಯ

ಪೊಲಿಟ್‍ಬ್ಯುರೊ ಚಾಲನಾ ಸಮಿತಿಯಾಗಿ ಕೆಲಸ ನಿರ್ವಹಿಸುತ್ತದೆ.

ನಿರ್ಣಯಗಳ ಸಮಿತಿ:
ಸುಭಾಷಿಣಿ ಅಲಿ (ಸಂಯೋಜಕರು)
ಥಾಮಸ್‍ ಐಸಾಕ್,
ಡಾ.ಹೇಮಲತಾ,
ನೀಲೋತ್ಪಲ ಬಸು
ಡಾ.ವಿ.ಕೆ.ರಾಮಚಂದ್ರನ್

ಅರ್ಹತಾ ಸಮಿತಿ:

ಯು.ವಾಸುಕಿ (ಸಂಯೋಜಕರು)
ಕೆ.ಎನ್‍ ಬಾಲಗೋಪಾಲ್,
ಜಿತೇಂದ್ರ ಚೌಧುರಿ
ಜೇಬೇಶ್‍ ಸರ್ಕಾರ್ ‍

ದಾಖಲಾತಿ ಸಮಿತಿ

 ಜೆ.ಎಸ್‍.ಮಜುಂದಾರ್ ‍ (ಸಂಯೋಜಕರು)
ಕೆ.ಎನ್. ಉಮೇಶ್
ಎಂ. ಶರ್ಮ
,ಜೈಕ್ ಸಿ ಥಾಮಸ್
ಸೋಮನಾಥ್ ಭಟ್ಟಾಚಾರ್ಯ
ಮಧು ಗರ್ಗ್
ಮೈಮೂನಾ ಮೊಲ್ಲ

ಕೇಂದ್ರ ಸಮಿತಿಯ ಪರವಾಗಿ ಪ್ರಕಾಶ ಕಾರಟ್‍ ಕರಡು ನಿರ್ಣಯವನ್ನು ಮಂಡಿಸಿದರು.

ಬಿಜೆಪಿ-ಆರೆಸ್ಸೆಸ್‍ ಸರಕಾರವನ್ನು ಸೋಲಿಸಬೇಕೆಂಬ ಸರ್ವ ಸಮ್ಮತ ಗುರಿಯ ಸಾಧನೆಗೆ ಅನುಸರಿಸಬೇಕಾದ ರಾಜಕೀಯ-ಕಾರ್ಯತಂತ್ರದ ಧೋರಣೆಯ ಬಗ್ಗೆ ಕೇಂದ್ರಸಮಿತಿಯೊಳಗೆ ಒಂದು ಭಿನ್ನ ಅಭಿಪ್ರಾಯವಿರುವುದರಿಂದ ಮತ್ತು ಪಕ್ಷದ ಮಹಾಧಿವೇಶನ  ಪ್ರಶ್ನೆಯನ್ನು ನಿರ್ಧರಿಸುವ ಅತ್ಯುನ್ನತ ವೇದಿಕೆಯಾದ್ದರಿಂದ, ಪಕ್ಷದ ಆಂತರಿಕ ಪ್ರಜಾಪ್ರಭುತ್ವ, ವಾದ-ವಿವಾದ ಮತ್ತು ಚರ್ಚೆಗಳ ಅತ್ಯುತ್ತಮ ಪರಂಪರೆಯಂತೆ, ಕೇಂದ್ರ ಸಮಿತಿಯಲ್ಲಿನ ಅಲ್ಪಮತದ ಅಭಿಪ್ರಾಯವನ್ನು ಸೀತಾರಾಮ್ ಯೆಚುರಿಯವರು ಪ್ರತಿನಿಧಿಗಳ ಮುಂದೆ ಮಂಡಿಸಿದರು.

ಮಹಾಧಿವೇಶನ-ಪೂರ್ವ ತಿದ್ದುಪಡಿಗಳ ಕುರಿತಾದ ವರದಿಯನ್ನು ಮಂಡಿಸಲಾಯಿತು. ಕರಡು ರಾಜಕೀಯ ನರ್ಣಯಕ್ಕೆ 286 ತಿದ್ದುಪಡಿಗಳನ್ನು ಕೇಂದ್ರ ಸಮಿತಿ ಅಂಗೀಕರಿಸಿತು.

ಚರ್ಚೆಗಳು ಎರಡನೇ ದಿನ ಮುಂದುವರೆಯುತ್ತವೆ

Leave a Reply

Your email address will not be published. Required fields are marked *