ತ್ರಿಪುರಾದಲ್ಲಿ ಪ್ರತಿಪಕ್ಷಗಳ ಮೇಲೆ ಕೊನೆಗಾಣದ ದೈಹಿಕ ದಾಳಿಗಳು

ತ್ರಿಪುರಾದಲ್ಲಿ ಸಿಪಿಐ(ಎಂ) ಮತ್ತು ಅದರ ಮುಖಂಡರ ಮೇಲೆ ಬಿಜೆಪಿಗೆ ಸೇರಿದ ಗೂಂಡಾಗಳ ದಾಳಿಗಳಿಗೆ ಕೊನೆಯಿಲ್ಲದಂತಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡಿಸಿದೆ. ಹಿಂಸಾಚಾರದ ಸುರುಳಿಯಲ್ಲಿ ಇತ್ತೀಚಿನದೆಂದರೆ ಸಿಪಿಐ(ಎಂ) ತ್ರಿಪುರಾ ರಾಜ್ಯ ಕಾರ್ಯದರ್ಶಿ ಗೌತಮ್‍ ದಾಸ್‍ ಮತ್ತು ಶಾಸಕ ರತನ್‍ ಭೌಮಿಕ್ ಮೇಲೆ ನಡೆದಿರುವ ದಾಳಿ.

ಡಿಸೆಂಬರ್‍ 28ರಂದು ಇವರನ್ನು ಬಿಶಾಲ್‍ಗಡ್‍ ಪಟ್ಟಣದಲ್ಲಿ ಅಡ್ಡಗಟ್ಟಿ ದಾಳಿ ನಡೆಸಲಾಗಿದೆ. ಇವರಿಬ್ಬರು ಮಿರ್ಝಾ, ಉದಯಪುರ್‍ ನಿಂದ  ಹಿಂದಿರುತ್ತಿದ್ದಾಗ  ಬಿಶಾಲಗಡ್‍ ಪಟ್ಟಣದಲ್ಲಿ ಅಡ್ಡಗಟ್ಟಿ ಅವರ ಮೇಲೆದಾಳಿ ನಡೆಸಲಾಗಿದೆ. ಕೆಲವು ದಿನಗಳ ಹಿಂದೆ ಅದೇ ಕಿಡಿಗೇಡಿಗಳ ಗ್ಯಾಂಗ್ ಮಾಜಿ ಮಂತ್ರಿ ಹಾಗೂ ಈಗ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಭಾನುಲಾಲ್‍ ಸಾಹಾ ಅವರ ಮೇಲೆ ದಾಳಿ ಮಾಡಿದ್ದರು.

ಆಳುವ ಪಕ್ಷದ ಗೂಂಡಾಗಳು ಹಾಡುಹಗಲೇ ಪ್ರಧಾನ ಪ್ರತಿಪಕ್ಷದ ಉನ್ನತ ಮುಖಂಡರು ಮತ್ತು ಚುನಾಯಿತ ಪ್ರತಿನಿಧಿಗಳ ಮೇಲೆ ದೈಹಿಕ ದಾಳಿಯನ್ನು ಮಾಡುವ ಧೈರ್ಯ ತೋರುತ್ತಿರುವುದು , ಅವರಿಗೆ ಆಳುವ ಮಂದಿಗಳಿಂದ ಎಂತಹ ಅಭಯ ಹಸ್ತ ಇದೆ ಎಂಬ ಬಗ್ಗೆ ಬಹಳಷ್ಟು ಹೇಳುತ್ತದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಂದಿನಿಂದ ಸತತವಾಗಿ ಇಂತಹ ದಾಳಿಗಳು ಇಲ್ಲಿ ಸಾಮಾನ್ಯವಾಗಿ ಬಿಟ್ಟಿದೆ.

ಈ ಹಿಂಸಾಚಾರದ ಬಗ್ಗೆ ಪೋಲೀಸ್‍ ಮಹಾ ನಿರ್ದೆಶಕರಿಗೆ ವರದಿ ಮಾಡಿದ ಎರಡು ದಿನಗಳ ನಂತರವೂ ಈ ಕುರಿತ ದೂರಿನಲ್ಲಿ ಹೆಸರಿಸಿರುವ ಅಪರಾಧಿಗಳನ್ನು  ಬಂಧಿಸಲು ಯಾವುದೇ ಕ್ರಮ ಕೈಗೊಳ್ಳದಿರುವುದು ದೂಷಣೀಯ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ತಕ್ಷಣವೇ ಅಪರಾಧಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದೆ, ಹಾಗೂ  ತ್ರಿಪುರಾದಲ್ಲಿ ಸಿಪಿಐ(ಎಂ) ಮೇಲೆ ಮತ್ತು ಪ್ರತಿಪಕ್ಷಗಳ ಮೇಲೆ ಮಾಡುತ್ತಿರುವ ಈ ದಾಳಿಗಳನ್ನು ಖಂಡಿಸಬೇಕು ಎಂದು ಜನತೆಗೆ ಕರೆ ನೀಡಿದೆ.

Leave a Reply

Your email address will not be published. Required fields are marked *