ಜಮ್ಮು- ಕಾಶ್ಮೀರದಲ್ಲಿನ ಉಗ್ರವಾದಿಗಳ ಬರ್ಬರ ದಾಳಿಗೆ ಖಂಡನೆ

ನಿನ್ನೆ ದಿನ ಜಮ್ಮು-ಕಾಶ್ಮೀರ ರಾಜ್ಯದ ಅವಂತಿಪೋರಾದಲ್ಲಿ ಸಿ.ಅರ್.ಪಿ.ಎಫ್. ಯೋಧರ ಮೇಲಿನ ಜೈಷ್ ಎ ಮೊಹಮ್ಮದ್ ಉಗ್ರರ ಬರ್ಬರ ದಾಳಿಯನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ದ ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ.

ತಕ್ಷಣವೇ ಕೇಂದ್ರ ಸರಕಾರ ಸಂಬಂಧಿತ ದಾಳಿಕೋರರನ್ನು ಬಂಧಿಸಿ ಕಾನೂನಿನ ಕ್ರಮಕ್ಕೊಳಪಡಿಸಲು ಅಗತ್ಯ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸುತ್ತದೆ.

ಈ ಬರ್ಬರ ಧಾಳಿಯಲ್ಲಿ ಕರ್ನಾಟಕದ ಮಂಡ್ಯ ಜಿಲ್ಲೆಯ ಓರ್ವ ಯೋಧನು ಸೇರಿದಂತೆ ಇದುವರೆಗಿನ ಮಾಹಿತಿಯಂತೆ ಸುಮಾರು ಒಟ್ಟು ೪೨ ಯೋಧರು ಹುತಾತ್ಮರಾಗಿದ್ದಾರೆ. ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆನ್ನಲಾಗಿದೆ.

pulwama-terror-attack2ಹುತಾತ್ಮರಾದ ಎಲ್ಲ ಯೋಧರಿಗೆ ಸಿಪಿಐ(ಎಂ) ತನ್ನ ಶ್ರಧ್ಧಾಂಜಲಿಯನ್ನು ಸಲ್ಲಿಸುತ್ತದೆ ಮತ್ತು ಅಗಲಿದ ಈ ಎಲ್ಲ ಯೋಧರ ದುಃಖತಪ್ತ ಕುಟುಂಬಗಳಿಗೆ ತನ್ನ ತೀವ್ರ ಸಂತಾಪವನ್ನು ಸಲ್ಲಿಸುತ್ತದೆ. ಅದೇ ರೀತಿ, ಸದರಿ ಯೋಧರ ಕುಟುಂಬಗಳಿಗೆ ಅಗತ್ಯವಾದ ಪರಿಹಾರವನ್ನು ನೀಡುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತದೆ.

ಹಿಂಸೆಯು ಸಮಸ್ಯೆಗಳಿಗೆ ಪರಿಹಾರವಾಗಿಲ್ಲ. ಪ್ರತಿ ಹಿಂಸೆಯು ಸಮಸ್ಯೆಯನ್ನು ಬಿಗಡಾಯಿಸಬಲ್ಲದು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಕಳೆದ ಮೂರು ವರ್ಷಗಳ ಹಿಂದೆಯೆ ಅಲ್ಲಿ ಶಾಂತಿ ಮತ್ರು ಸೌಹಾರ್ದ ವಾತಾವರಣ ನಿರ್ಮಿಸಲು ಅಲ್ಲಿನ ಸಂಬಂಧಿತ ವಿವಿಧ ಸಂಸ್ಥೆಗಳು ಮತ್ತು ರಾಜಕೀಯ ನಾಯಕರೊಂದಿಗೆ ಮಾತುಕತೆ ನಡೆಸುವ ಮೂಲಕ ರಾಜಕೀಯ ಮತ್ತು ಆರ್ಥಿಕ ಪರಿಹಾರ ರೂಪಿಸುವುದಾಗಿ ಹೇಳಿತ್ತು.

ಆದರೇ ಅಂತಹ ಪ್ರಯತ್ನಗಳನ್ನು ಗಂಭೀರವಾಗಿ ನಡೆಸದೇ ಹೋದುದರಿಂದ ಮತ್ತು ಅಲ್ಲಿನ ಸಮಸ್ಯೆಗಳ ಇತ್ಯರ್ಥಕ್ಕೆ ಅಗತ್ಯ ಕ್ರಮವಹಿಸದೇ ಹೋದುದರಿಂದ ಇಂತಹ ಧಾರುಣ ಪರಿಸ್ಥಿತಿ ಪುನಃ ಕಂಡು ಬರಲು ಕಾರಣವಾಗಿದೆ.

ಈಗಲಾದರೂ ಅಲ್ಲಿನ ಜನತೆಯ ವಿಶ್ವಾಸವನ್ನು ಪಡೆಯಲು ಜಮ್ಮು-ಕಾಶ್ಮೀರದ ನಿಜವಾದ ಅರ್ಥದ ಸ್ವಾಯುತ್ತ ಸ್ಥಾನಮಾನದ ವಿಚಾರವೂ ಸೇರಿದಂತೆ, ಅಗತ್ಯವಾದ ರಾಜಕೀಯ ಮತ್ತು ಆರ್ಥಿಕ ಪರಿಹಾರದ ಕ್ರಮಗಳಿಗಾಗಿ ಸಂಬಂಧಿಸಿದವರ ಜೊತೆಯಲ್ಲಿ ಗಂಭೀರವಾದ ಮಾತುಕತೆಗಳನ್ನು ಆರಂಭಿಸುವಂತೆ ಮತ್ತು ಆ ಮೂಲಕ ಅಲ್ಲಿನ ಸಮಸ್ಯೆಗಳ ಶಾಶ್ವತ ಇತ್ಯರ್ಥಕ್ಕಾಗಿ ಕ್ರಮ ವಹಿಸುವಂತೆ ಕೇಂದ್ರ ಸರಕಾರವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಒತ್ತಾಯಿಸುತ್ತದೆ.

ಯು.ಬಸವರಾಜ, ಕಾರ್ಯದರ್ಶಿ

Leave a Reply

Your email address will not be published. Required fields are marked *