ತ್ರಿಪುರಾದಲ್ಲಿ ಕಾನೂನು ವ್ಯವಸ್ಥೆ ಸರಿಯಿಲ್ಲ: ಎಡಪಕ್ಷಗಳ ಮೇಲೆ ಬಿಜೆಪಿ ಬೆದರಿಕೆ

ಚುನಾವಣಾ ಆಯೋಗ ಗುರುತಿಸಿದರೂ ಮುಂದುವರೆಯುತ್ತಿವೆ: ನೀಲೋತ್ಪಲ ಬಸು

ಸಿಪಿಐ(ಎಂ) ಪೊಲಿಟ್‍ಬ್ಯರೊ ಸದಸ್ಯ ನೀಲೋತ್ಪಲ ಬಸು ಮುಖ್ಯ ಚುನಾವಣಾ ಆಯುಕ್ತರಿಗೆ ಎಪ್ರಿಲ್ 17 ರಂದು ಬರೆದಿರುವ ಇನ್ನೊಂದು ಪತ್ರದಲ್ಲಿ ತ್ರಿಪುರಾದಲ್ಲಿ ಆಳುವ ಬಿಜೆಪಿಯೊಂದಿಗೆ ಸಂಬಂಧವಿರುವ ಗೂಂಡಾಗಳ ಹೊಲಸು ಚಟುವಟಿಕೆಗಳ ಬಗ್ಗೆ ತಿಳಿಸುತ್ತ ಪಶ್ಚಿಮ ತ್ರಿಪುರಾ ಲೋಕಸಭಾ ಕ್ಷೇತ್ರದ 464 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸಬೇಕು ಎಂಬ ಪಕ್ಷದ ಆಗ್ರಹವನ್ನು ಪುನರುಚ್ಚರಿಸಿದ್ದಾರೆ.

ಈ ನಡುವೆ ಪೂರ್ವ ತ್ರಿಪರಾ ಕ್ಷೇತ್ರದಲ್ಲಿ ಎಪ್ರಿಲ್‍ 18ರಂದು ನಡೆಯಬೇಕಾಗಿದ್ದ ಮತದಾನವನ್ನು ಆಯೋಗ ಅಲ್ಲಿ ಕಾನೂನು -ವ್ಯವಸ್ಥೆ ಸರಿಯಿಲ್ಲ ಎಂದು ಹೇಳುತ್ತ ಎಪ್ರಿಲ್‍ 23ಕ್ಕೆ ಮುಂದೂಡಿದೆ, ಅಲ್ಲಿಗೆ ಹೆಚ್ಚಿನ ಕೇಂದ್ರೀಯ ಪಡೆಗಳನ್ನು ಕಳಿಸಬೇಕು  ಎಂದೂ ಹೇಳಿರುವುದಾಗಿ ವರದಿಯಾಗಿದೆ. ಮುಖ್ಯ ಚುನಾವನಾ ಆಯುಕ್ತರು ತ್ರಿಪುರಾದಲ್ಲಿ ಕಾನೂನು-ವ್ಯವಸ್ಥೆ ಗಂಭೀರವಾಗಿದೆ ಎಂದು ಈ ಮೂಲಕ ಗುರುತಿಸಿರುವುದಕ್ಕೆ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತ ಇದರಿಂದಾಗಿ ಅಲ್ಲಿ ಮುಕ್ತ ಮತ್ತು ನ್ಯಾಯಯುತ ಮತದಾನ ನಡೆಯಲು ಸಾಧ್ಯವಾಗಬಹುದು ಎಂದು ನಿರೀಕ್ಷೆಯನ್ನು ಬಸು ತಮ್ಮ ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ.

ಈ ನಡುವೆ ತ್ರಿಪುರಾದಲ್ಲಿ ಆಳುವ ಬಿಜೆಪಿಯೊಂದಿಗೆ ಸಂಬಂಧವಿರುವ ಗೂಂಡಾಗಳ ಅಸಹ್ಯ ಚಟುವಟಿಕೆಗಳು ಮುಂದುವರೆಯುತ್ತಿವೆ. ಈ ಕುರಿತು ಸಿಪಿಐ(ಎಂ)ನ ತ್ರಿಪುರಾ ರಾಜ್ಯಸಮಿತಿ ಎರಡು ಪತ್ರಗಳನ್ನು ಮುಖ್ಯ ಚುನಾವಣಾ ಆಯುಕ್ತರಿಗೆ ಕಳಿಸಿದೆ. ಇಂಡಿಯನ್‍ ಎಕ್ಸ್ ಪ್ರೆಸ್‍ ನಲ್ಲಿ ಸಿಪಿಐ(ಎಂ) ಮತ್ತು ಎಡಪಕ್ಷಗಳನ್ನು ಬೆಂಬಲಿಸುವ ನಾಗರಿಕರ ಮೇಲೆ ಹಾಕುತ್ತಿರುವ ಬೆದರಿಕೆಗಳ ಒಂದು ವರದಿ ಮೈನಡುಗಿಸುವ ಬಿಂಬಗಳೊಂದಿಗೆ ಪ್ರಕಟವಾಗಿದೆ. ಇವು ಮೂರನ್ನೂ ಬಸು ರವರು ತಮ್ಮ ಪತ್ರದೊಂದಿಗೆ ಮುಖ್ಯ ಚನಾವಣಾ ಆಯುಕ್ತರಿಗೆ ಕಳಿಸಿದ್ದಾರೆ.

“ಈಗ ತ್ರಿಪುರಾ ಪಶ್ಚಿಮ ಲೋಕಸಭಾ ಕ್ಷೇತ್ರದಲ್ಲಿ ಮರು ಮತದಾನ ನಡೆಸಬೇಕು ಎಂದು ಯಾವ ಕಾರಣಕ್ಕಾಗಿ ಸಿಪಿಐ(ಎಂ) ಆಗ್ರಹಿಸಿತ್ತೋ ಅದನ್ನು ತಾವು ಗುರುತಿಸಿರುವುದರಿಂದಾಗಿ, 464 ಮತಗಟ್ಟೆಗಳಲ್ಲಿ ಮರುಮತದಾನ ನಡೆಸಬೇಕೆಂಬ ನಮ್ಮ ಆಗ್ರಹವನ್ನೂ ಸ್ವೀಕರಿಸಬೇಕು ಎಂದು ಕೋರುತ್ತೇವೆ. ಈ ಮೂಲಕ ತಮ್ಮ ನಿರ್ದಾರ ತರ್ಕಬದ್ಧ ಅಂತ್ಯವನ್ನು  ತಲುಪುವಂತಾಗುತ್ತದೆ” ಎಂದು ನೀಲೋತ್ಪಲ ಬಸು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

Leave a Reply

Your email address will not be published. Required fields are marked *