ಭಯೋತ್ಪಾದನೆ ಆರೋಪಿಗೆ ಪ್ರಧಾನಿ-ಬಿಜೆಪಿ ಅನುಮೋದನೆ ಆಘಾತಕಾರಿ

ಮತದಾರರನ್ನು ಧ್ರುವೀಕರಿಸುವ ಹತಾಶ ಬಿಜೆಪಿ ಪ್ರಯತ್ನಗಳನ್ನು ಸೋಲಿಸಿ-ಸಿಪಿಐ(ಎಂ) ಪೊಲಿಟ್ ಬ್ಯುರೊ ಕರೆ

ಭೋಪಾಲ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಪ್ರಜ್ಞಾಸಿಂಗ್ ಠಾಕುರ್‍ ನಾಮನಿರ್ದೇಶನ ಬಿಜೆಪಿಯ ಮತ್ತು ಪ್ರಧಾನ ಮಂತ್ರಿಗಳ ಯುಕ್ತತೆಯಿಲ್ಲದ ಕೃತ್ಯ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಬಲವಾಗಿ ಖಂಡಿಸಿದೆ. ಆಕೆ ಒಬ್ಬ ಆರೋಪಿ, ಭಯೋತ್ಪಾದನೆ ಸಂಬಂಧಿತ ಹಲವು ಕೇಸುಗಳಲ್ಲಿ ಆರೋಪ ಪಟ್ಟಿಗಳಲ್ಲಿ ಆಕೆಯನ್ನು ಹೆಸರಿಸಲಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆಕೆ ಇನ್ನೂ ಮಾಲೆಗಾಂವ್‍ ಸ್ಫೋಟ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ ಅಡಿಯಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.

ಆದರೂ ಬಿಜೆಪಿ ಆಕೆಯನ್ನು ಕಣಕ್ಕಿಳಿಸಿರುವುದು ಭಯೋತ್ಪಾದನೆಯನ್ನು ವಿರೋಧಿಸುವ ಅವರ ಅಬ್ಬರದ ಮಾತುಗಳ ಟೊಳ್ಳನ್ನು ಸಂಪೂರ್ಣವಾಗಿ ಅನಾವರಣಗೊಳಿಸಿದೆ. ಆಕೆಯೇ ಸ್ವತಃ ತನ್ನ ಸ್ಪರ್ಧೆಯ ನೆಲೆ ಎಷ್ಟು ಅಸಹ್ಯಕಾರಿ ಎಂಬುದನ್ನು, ಸಪ್ಟಂಬರ್‍ 26, 2011ರಂದು ಮುಂಬೈಯಲ್ಲಿ ಐ.ಎಸ್‍.ಐ. ಪ್ರಾಯೋಜಿತ ಭಯೋತ್ಪಾದನಾ ದಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತ ಪ್ರಾಣಾರ್ಪಣೆ ಮಾಡಿದ ಆಗಿನ ಭಯೋತ್ಪಾದನಾ-ನಿರೋಧಕ ದಳದ ಮುಖ್ಯಸ್ಥ ಹೇಮಂತ ಕರ್ಕರೆಯವರ ವಿರುದ್ದ ಹರಿಹಾಯುವ ಮೂಲಕ ಬಯಲು ಮಾಡಿಕೊಂಡಿದ್ದಾರೆ.

20 04 2019-bjp candidate for terror-free india

ಒಬ್ಬ ಹುತಾತ್ಮರನ್ನು ಈ ರೀತಿ ಅವಹೇಳನ ಮಾಡಿರುವುದು ವ್ಯಾಪಕ ಟೀಕೆಗೆ ಒಳಗಾಗಿದೆ. ದೇಶದ ಐಪಿಎಸ್‍ ಅಧಿಕಾರಿಗಳ ಸಂಘ ಕೂಡ ಟೀಕೆ ಮಾಡಿದೆ. ಆದರೂ ಪ್ರಧಾನ ಮಂತ್ರಿಗಳೇ ಆಕೆಯನ್ನು ಚುನಾವಣೆಗೆ ನಿಲ್ಲಿಸರುವುದನ್ನು ಸಮರ್ಥಿಸಿಕೊಂಡಿದ್ದಾರೆ, ಆಕೆ ಸಾವಿರಾರು ವರ್ಷಗಳ ಧಾರ್ಮಿಕ , ತಾತ್ವಿಕ ಮತ್ತು ನಾಗರಿಕತೆಯ ಮೌಲ್ಯಗಳ ಸಂಕೇತ ಎಂದು ಬಿಂಬಿಸಿದ್ದಾರೆ.  ಈ ರೀತಿಯಲ್ಲಿ ಒಬ್ಬ ಸಂವಿಧಾನಿಕ ಹುದ್ದೆಯನ್ನು ಅಲಂಕರಿಸಿರುವವರು ಒಂದು ಕ್ರಿಮಿನಲ್‍ ಚಟುವಟಿಕೆಯನ್ನು ಇಷ್ಟು ಭಂಡತನದಿಂದ ರಾಜಕೀಯಕರಣಗೊಳಿಸಿರುವುದನ್ನು ಈ ಹಿಂದೆ ಕಂಡಿರಲಿಲ್ಲ.

ಜನಗಳಲ್ಲಿ ತಮ್ಮ ಜೀವನಾಧಾರಗಳಿಗೆ ಬಂದೆರಗಿರುವ ಬಿಕ್ಕಟ್ಟಿನ ಬಗ್ಗೆ ಅಸಂತೃಪ್ತಿ ಹೆಚ್ಚುತ್ತಿರುವುದನ್ನು ಕಂಡು ಹತಾಶಗೊಂಡಿರುವ ಬಿಜೆಪಿ ಮತ್ತು ಪ್ರಧಾನ ಮಂತ್ರಿಗಳು ಮತದಾರರನ್ನು ಧ್ರುವೀಕರಿಸಲು ಸರ್ವ ಪ್ರಯತ್ನ ನಡೆಸುತ್ತಿದ್ದಾರೆ ಎಂಬುದೀಗ ಸ್ಪಷ್ಟವಾಗುತ್ತಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಇದು ಚುನಾವಣಾ ವಾತಾವರಣವನ್ನು ಕಲುಷಿತಗೊಳಿಸುವ ಮತ್ತು ಕಾನೂನಿನ ಆಳ್ವಿಕೆಯನ್ನು ಮತ್ತು ಸಂವಿಧಾನಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವ ಪ್ರಯತ್ನ ಎಂದು ಖಂಡಿಸಿದೆ. ಚುನಾವಣೆಗಳಲ್ಲಿ ಇವರನ್ನು ತಿರಸ್ಕರಿಸುವ ಮೂಲಕ  ಈ ದುಷ್ಟ ಪ್ರಯತ್ನಗಳನ್ನು ಸೋಲಿಸಬೇಕು ಎಂದು ಸಿಪಿಐ(ಎಂ) ಜನತೆಗೆ ಮನವಿ ಮಾಡಿಕೊಂಡಿದೆ.

Leave a Reply

Your email address will not be published. Required fields are marked *