ನರೇಂದ್ರ ಮೋದಿಗೆ ಮಾತ್ರ ಭಿನ್ನವಾದ ಮಾದರಿ ಆಚಾರ ಸಂಹಿತೆ

ಮುಖ್ಯ ಚುನಾವಣಾ ಆಯುಕ್ತರಿಗೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್‍ ಯೆಚುರಿ ಪತ್ರ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮತ್ತೆ-ಮತ್ತೆ ಮಾದರಿ ಆಚಾರ ಸಂಹಿತೆಯ ಉಲ್ಲಂಘನೆಗಳನ್ನು ಮಾಡುತ್ತಿದ್ದು, ಆ ಬಗ್ಗೆ ಬಹಳಷ್ಟು ದೂರುಗಳು ಭಾರತದ ಚುನಾವಣಾ ಆಯೋಗಕ್ಕೆ ಹೋಗಿದ್ದರೂ ಆಯೋಗ ಅವನ್ನು ಪರಿಶೀಲಿಸುತ್ತಿರುವ ರೀತಿಯ ಬಗ್ಗೆ ಆತಂಕ ಹೆಚ್ಚುತ್ತಿದೆ. ಈಗ ಅಧಿಕೃತವಾಗಿ ಆಡಳಿತ ಯಂತ್ರದ ದುರುಪಯೋಗ ನಡೆದಿದೆ ಎಂದೂ ವರದಿಯಾಗಿದೆ. ಈ ಬಗ್ಗೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಮೇ 1ರಂದು ಭಾರತದ ಮುಖ್ಯ ಚುನಾವಣಾ ಆಯುಕ್ತರಿಗೆ ಇನ್ನೊಂದು ಪತ್ರ ಬರೆದಿದ್ದಾರೆ.

“ಉತ್ತರಪ್ರದೇಶದ ವಾರಣಾಸಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಮತ್ತು ಬಿಜೆಪಿಯ ಒಬ್ಬ ಸ್ಟಾರ್‍ ಪ್ರಚಾರಕರಾಗಿರುವ ಶ್ರೀ ನರೇಂದ್ರ ಮೋದಿಯವರನ್ನು ಮಾದರಿ ಆಚಾರ ಸಂಹಿತೆಯ ಅನುಷ್ಠಾನದಲ್ಲಿ, ಅವರು ಪ್ರಸ್ತುತ ಪ್ರಧಾನ ಮಂತ್ರಿಯಾಗಿದ್ದಾರೆ ಎಂಬ ಸರಳ ಕಾರಣಕ್ಕೆ, ಅವರೊಡನೆ ಭಿನ್ನವಾಗಿ ವರ್ತಿಸುವ ಅಗತ್ಯವಿದೆಯೇ?” ಎಂಬ ಪ್ರಶ್ನೆಯನ್ನು ಯೆಚುರಿಯವರು ತಮ್ಮ ಪತ್ರದಲ್ಲಿ ದೇಶದ ಮುಖ್ಯ ಚುನಾವಣಾ ಆಯುಕ್ತರ ಮುಂದಿಟ್ಟಿದ್ದಾರೆ.

ಅಚಾರ ಸಂಹಿತೆಯ ಉಲ್ಲಂಘನೆಗಳ ವಿಷಯದಲ್ಲಿ ಆಯೋಗ ತಡೆ-ತಡೆದು ಮಾತ್ರವಲ್ಲ, ಇಂತಹ ಕೃತ್ಯಗಳನ್ನು ಎಸಗುವವರಿಗೆ ಧೈರ್ಯ ತುಂಬುವ ಗತಿಯಲ್ಲಿ ಸಾಗುತ್ತಿರುವಂತೆ ಕಾಣುತ್ತಿದೆ. ಮತ್ತು ‘ವಿಳಂಬಗೊಂಡ ನ್ಯಾಯ’ ವಾಸ್ತವವಾಗಿ ಅದರ ‘ನಿರಾಕರಣೆ’ಯೇ ಆಗುತ್ತದೆ ಎಂಬ ಮಾತಿಗೆ ಉದಾಹರಣೆಯಾಗಿ ಕಾಣುತ್ತಿದೆ ಎಂದು ಯೆಚುರಿಯವರು ತಮ್ಮ ಪತ್ರದಲ್ಲಿ ಟಿಪ್ಪಣಿ ಮಾಡಿದ್ದಾರೆ. ಅವರ ಪತ್ರದ ಪೂರ್ಣ ಪಾಟವನ್ನು ಇಲ್ಲಿ ಕೊಡಲಾಗಿದೆ:

01 05 2019 Yechury letter 2019-eci

ಪ್ರಿಯ ಶ್ರೀ ಅರೋರಾ ಜೀ,

ದೇಶದೆಲ್ಲೆಡೆಗಳಲ್ಲಿ, ಭಾರತದ ಚುನಾವಣಾ ಆಯೋಗ ಶ್ರೀ ನರೇಂದ್ರ ಮೋದಿಯವರಿಂದ ಮಾದರಿ ಆಚಾರ ಸಂಹಿತೆಯ ಸ್ಪಷ್ಟ ಉಲ್ಲಂಘನೆಗಳನ್ನು ಕುರಿತಾದ ದೂರುಗಳನ್ನು ನಿರ್ವಹಿಸುತ್ತಿರುವ ರೀತಿಯ ಬಗ್ಗೆ ಆತಂಕ ಹೆಚ್ಚುತ್ತಿದೆ.

ಈಗ ಒಂದು ವೆಬ್‍ ಪತ್ರಿಕೆ ಪ್ರಧಾನ ಮಂತ್ರಿಗಳ ಕಚೇರಿ ಅವರ ಚುನಾವಣಾ ಭಾಷಣಗಳಿಗೆ ವಿಷಯಗಳನ್ನು ಒದಗಿಸಲು ವಿವಿಧ ಮಂತ್ರಾಲಯಗಳಿಂದ ಮತ್ತು ಸಂಬಂಧಪಟ್ಟ ರಾಜ್ಯ ಮತ್ತು ಜಿಲ್ಲಾ ಆಡಳಿತಗಳಿಂದ ಮಾಹಿತಿಗಳನ್ನು ಪಡೆಯಲು ಸರಕಾರದ ಮೂಲರಚನೆ ಮತ್ತು ಆಡಳಿತ ಯಂತ್ರವನ್ನು ಯಾವ ರೀತಿಯಲ್ಲಿ ಭಂಡತನದಿಂದ ಬಳಸಲಾಗುತ್ತಿದೆ ಎಂಬುದನ್ನು ತೋರಿಸುವ ಒಂದು ಲೇಖನವನ್ನು ಪ್ರಕಟಿಸಿದೆ. ಈ ಲೇಖನ ಈ  ಬಗ್ಗೆ ದಸ್ತಾವೇಜುಗಳ ಪುರಾವೆಯನ್ನೂ ಒದಗಿಸುತ್ತದೆ

(ಅನುಬಂಧ-1, ವೆಬ್‍ ಲಿಂಕ್: : https://scroll.in/article/919512/model-code-collectors-being-asked-to-se…).

ಇನ್ನೊಂದು ವೆಬ್‍ ಪತ್ರಿಕೆ ಶ್ರೀಮತಿ ಇಂದಿರಾ ಗಾಂಧಿಯವರನ್ನು ಕೊನೆಗೂ ಅನರ್ಹಗೊಳಿಸಲು ಕಾರಣವಾದ ಆಧಾರಗಳನ್ನು ಒದಗಿಸುವ ಒಂದು ಲೇಖನವನ್ನು ಪ್ರಕಟಿಸಿದೆ. ಶ್ರೀಮತಿ ಗಾಂಧಿಯವರು ಮಾಡಿದರೆನ್ನಲಾದ ಉಲ್ಲಂಘನೆಗಳು ಶ್ರೀ ನರೇಂದ್ರ ಮೋದಿಯವರು ಮಾಡಿರುವ ಪ್ರಸಕ್ತ ಉಲ್ಲಂಘನೆಗಳಿಗೆ ಹೋಲಿಸಿದರೆ ಬಹಳ ಕಡಿಮೆ ಮಹತ್ವದ್ದಾಗಿ ಕಾಣುತ್ತವೆ

(ಅನುಬಂಧ-2’ ಲಿಂಕ್: : https://thewire.in/politics/elections-2019-narendra-modi-indira-gandhi-mcc ).

ನಾವು ಈ ಹಿಂದೆ ನಿಮ್ಮ ಮುಂದಿಟ್ಟಿರುವ ಪ್ರಶ್ನೆಯನ್ನೇ ಮುಂದಿಡಬಯಸುತ್ತೇವೆ. ಮಾದರಿ ಆಚಾರ ಸಂಹಿತೆಯ ಉಲ್ಲಂಘನೆಗಳ ವಿಷಯದಲ್ಲಿ, ಭಾರತದ ಚುನಾವಣಾ ಆಯೋಗ ತಡೆ-ತಡೆದು ಮಾತ್ರವಲ್ಲ, ಇಂತಹ ಕೃತ್ಯಗಳನ್ನು ಎಸಗುವವರಿಗೆ ಧೈರ್ಯ ತುಂಬುವ ಗತಿಯಲ್ಲಿ ಸಾಗುತ್ತಿರುವಂತೆ ಕಾಣುತ್ತಿದೆ. ಮತ್ತು ‘ವಿಳಂಬಗೊಂಡ ನ್ಯಾಯ’ ವಾಸ್ತವವಾಗಿ ಅದರ ‘ನಿರಾಕರಣೆ’ಯೇ ಆಗುತ್ತದೆ ಎಂಬ ಮಾತಿಗೆ ಉದಾಹರಣೆಯಾಗಿ ಕಾಣುತ್ತದೆ!

ಆದ್ದರಿಂದ, ಇಲ್ಲಿರುವ ಪ್ರಶ್ನೆ, ಉತ್ತರಪ್ರದೇಶದ ವಾರಣಾಸಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಮತ್ತು ಬಿಜೆಪಿಯ ಒಬ್ಬ ಸ್ಟಾರ್‍ ಪ್ರಚಾರಕರಾಗಿರುವ ಶ್ರೀ ನರೇಂದ್ರ ಮೋದಿಯವರನ್ನು ಮಾದರಿ ಆಚಾರ ಸಂಹಿತೆಯ ಅನುಷ್ಠಾನದಲ್ಲಿ, ಅವರು ಪ್ರಸ್ತುತ ಪ್ರಧಾನ ಮಂತ್ರಿಯಾಗಿದ್ದಾರೆ ಎಂಬ ಸರಳ ಕಾರಣಕ್ಕೆ, ಅವರೊಡನೆ ಭಿನ್ನವಾಗಿ ವರ್ತಿಸುವುದು ಅಗತ್ಯವಾಗಿದೆಯೇ? ನಾವು ಈ ಪ್ರಶ್ನೆಯನ್ನು ಆಯೋಗದಿಂದ ಸೂಕ್ತ ಸ್ಪಂದನೆಯ ಅಭಾವದಿಂದಾಗಿ ಎತ್ತಲೇ ಬೇಕಾಗಿ ಬಂದಿದೆ. ಏಕೆಂದರೆ ಆಯೋಗ ಇದನ್ನು ದೃಢವಾಗಿ ಮತ್ತು ನಿರ್ಣಾಯಕವಾಗಿ ನಿರ್ವಹಿಸಲು ಸಾಕಷ್ಟು ಅಧಿಕಾರ ಸಂಪನ್ನವಾಗಿದೆ.

ಒಂದು ತುರ್ತು ಸ್ಪಂದನೆಯ ನಿರೀಕ್ಷೆಯೊಂದಿಗೆ,

ಧನ್ಯವಾದಗಳು,

ತಮ್ಮವ

ಸೀತಾರಾಮ್‍ ಯೆಚುರಿ

Leave a Reply

Your email address will not be published. Required fields are marked *