ಮತ್ತೆ ಹಿಂದಿ ಹೇರಿಕೆ: ಯುಜಿಸಿ ಸುತ್ತೋಲೆ ಹಿಂತೆಗೆದುಕೊಳ್ಳಿ

ಎಲ್ಲ ಜನವಿಭಾಗಗಳು, ಶಿಕ್ಷಣ ರಂಗದಲ್ಲಿರುವ ಸಂಘಟನೆಗಳಿಗೆ ಸಿಪಿಐ(ಎಂ) ಪೊಲಿಟ್‍ ಬ್ಯುರೊ ವಿನಂತಿ

-ವಿಶ್ವವಿದ್ಯಾಲಯ ಅನುದಾನ ಆಯೋಗ(ಯು.ಜಿ.ಸಿ.) ದೇಶಾದ್ಯಂತ ಪದವಿ ಕೋರ್ಸ್‍ಗಳಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸುವ ಪ್ರಯತ್ನ ನಡೆಸುತ್ತಿದೆ, ಈ ದಿಕ್ಕಿನಲ್ಲಿ ಅದು ಒಂದು ಸುತ್ತೋಲೆ ಕಳಿಸಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಆಳವಾದ ಆತಂಕ ವ್ಯಕ್ತಪಡಿಸಿದೆ.

ಇದು ವಿಚಿತ್ರ ಸಂಗತಿ. ಏಕೆಂದರೆ ಇತ್ತೀಚೆಗಷ್ಟೇ ರಾಷ್ಟ್ರೀಯ ಶಿಕ್ಷಣ ಧೋರಣೆ, 2019ರ ಕರಡಿನ ಭಾಗವಾಗಿ ಹಿಂದಿಯನ್ನು ಹೇರುವುದರ ವಿರುದ್ಧ ದೇಶದಲ್ಲಿ ವ್ಯಕ್ತಗೊಂಡ ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ಸರಕಾರ ಕೂಡಲೇ ಈ ವಿಷಯದಲ್ಲಿ ಹಿಂದೆ ಸರಿಯಬೇಕಾಗಿ ಬಂದಿತ್ತು. ಕೇಂದ್ರ ಸರಕಾರ ಸದ್ಯಕ್ಕೆ ಈ ವಿವಾದವನ್ನು ಇತ್ಯರ್ಥ ಮಾಡಲು ಒಂದು ಸ್ಪಷ್ಟೀಕರಣವನ್ನು ಕೊಟ್ಟಿತು. ಆದ್ದರಿಂದ, ಯು.ಜಿ.ಸಿ. ಸ್ವತಂತ್ರವಾಗಿ ಈ ಅಜೆಂಡಾವನ್ನು ಮುಂದೊತ್ತಲು ಸಾಧ್ಯವಿಲ್ಲ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.

ಭಾರತ ಭಾಷೆ ಮತ್ತು ಸಂಸ್ಕೃತಿಯಲ್ಲಿ ವೈವಿಧ್ಯತೆಯನ್ನು ಹೊಂದಿರುವ ದೇಶ. ಒಂದು ಶಾಸನಬದ್ಧ ಸಂಸ್ಥೆ ಒಂದು ಸರಿಯಾದ ಪ್ರಕ್ರಿಯೆಯಿಲ್ಲದೆ ಒಂದು ನಿರ್ದಿಷ್ಟ ರಾಷ್ಟ್ರೀಯ ಭಾಷೆಯನ್ನು ಹೇರುವ ಪ್ರಯತ್ನ ಇತರ ಭಾಷಾವಾರು ಗುಂಪುಗಳ ನಡುವೆ ಇರುವೆಗೂಡಿಗೆ ಕೈಹಾಕಿದಂತಾಗುತ್ತದೆ. ಶ್ರೀಮಂತ ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಆಧರಿಸಿದ ನಮ್ಮ ಜನಗಳ ಐಕ್ಯತೆಯನ್ನು ಇಂತಹ ಪ್ರಯತ್ನಗಳು ಛಿದ್ರಗೊಳಿಸುತ್ತವೆ.

ಆದ್ದರಿಂದ ಎಲ್ಲ ಜನವಿಭಾಗಗಳು, ಶಿಕ್ಷಣ ರಂಗದಲ್ಲಿರುವ ಸಂಘಟನೆಗಳು ಜನಾಭಿಪ್ರಾಯವನ್ನು ಅಣಿನೆರೆಸಬೇಕು ಮತ್ತು ನಮ್ಮ ದೇಶದ ಎಲ್ಲ ಭಾಷಾ ಮತ್ತು ಸಾಂಸ್ಕೃತಿಕ ಗುಂಪುಗಳ ಐಕ್ಯತೆಯನ್ನು ಎತ್ತಿ ಹಿಡಿಯಲು ಯುಜಿಸಿ ಈ ಸುತ್ತೋಲೆಯನ್ನು ಹಿಂತೆಗೆದುಕೊಳ್ಳುವಂತೆ ಸರಕಾರದ ಮೇಲೆ ಒತ್ತಡ ತರಬೇಕು ಎಂದು ಸಿಪಿಐ(ಎಂ) ವಿನಂತಿಸಿಕೊಂಡಿದೆ.

Leave a Reply

Your email address will not be published. Required fields are marked *