ಆರ್ಥಿಕ ನಿಧಾನಗತಿಯನ್ನು ಉಲ್ಬಣಗೊಳಿಸುತ್ತವೆಯಷ್ಟೇ, ನಿವಾರಿಸುವುದಿಲ್ಲ

ಹಣಕಾಸು ಮಂತ್ರಿಗಳ ಇನ್ನೊಂದು ಸುತ್ತಿನ ಪಥ್ಯಗಳು ಆರ್ಥಿಕ ನಿಧಾನಗತಿಯನ್ನು ಉಲ್ಬಣಗೊಳಿಸುತ್ತವೆಯಷ್ಟೇ, ನಿವಾರಿಸುವುದಿಲ್ಲ – ಸಿಪಿಐ(ಎಂ) ಪೊಲಿಟ್‍ ಬ್ಯುರೊ

ಆರ್ಥಿಕ ವ್ಯವಸ್ಥೆಗೆ ಹುರುಪು ತುಂಬಲೆಂದು ಹಣಕಾಸು ಮಂತ್ರಿಗಳು ಸಪ್ಟಂಬರ್‍ 14ರಂದು ಮತ್ತೊಂದು ಸುತ್ತಿನ ಪ್ರಕಟಣೆಗಳನ್ನು ಮಾಡಿದ್ದಾರೆ. ಆದರೆ ಆರ್ಥಿಕ ಹಿಂಜರಿತದ ಮಟ್ಟಕ್ಕೆ ಜಾರುತ್ತಿರುವ ನಿಧಾನಗತಿಯ ಸಮಸ್ಯೆಯನ್ನು ಎದುರಿಸಲು ನಮ್ಮ ಬಹು ಅಗತ್ಯವಾದ ಮೂಲರಚಣೆಗಳನ್ನು ಕಟ್ಟುವ, ಆ ಮೂಲಕ ಉದ್ಯೋಗಾವಕಾಶಗಳನ್ನು ನಿರ್ಮಿಸಿ ದೇಶದೊಳಗಿನ ಬೇಡಿಕೆಯನ್ನು ಹೆಚ್ಚಿಸುವ ಬದಲು, ಹಣಕಾಸು ಮಂತ್ರಿಗಳು ಮತ್ತೊಮ್ಮೆ ಆ ನಿಧಾನಗತಿಗೆ ಕಾರಣವಾದ ಕ್ರಮಗಳನ್ನೇ ಪ್ರಕಟಿಸಿದ್ದಾರೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಟೀಕಿಸಿದೆ.

ರಿಯಲ್‍ ಎಸ್ಟೇಟ್‍ ವಲಯದಲ್ಲಿ ಖಾಸಗಿ ಹೂಡಿಕೆಗಳ ಮೇಲೆ ಗುರಿಯಿಡುವುದಕ್ಕೆ ಒತ್ತು, ಮತ್ತು ರಫ್ತುಗಳನ್ನು ಉತ್ತೇಜಿಸುವ ಪ್ರಯತ್ನಗಳು ಯಶಸ್ವಿಯಾಗಲಾರವು. ಏಕೆಂದರೆ ಜಾಗತಿಕ ವ್ಯಾಪಾರದ ಪ್ರಮಾಣಗಳು ಸಂಕುಚಿತಗೊಳ್ಳುತ್ತಿವೆ, ಮತ್ತು ಜನಗಳಲ್ಲಿ ಖರೀದಿ ಸಾಮರ್ಥ್ಯದ ಕೊರತೆಯಿಂದಾಗಿಯೇ ಮನೆಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ.

ಹಣಕಾಸು ಮಂತ್ರಿಗಳು ಪ್ರಕಟಿಸಿರುವ ಹೊಸ ಕ್ರಮಗಳ ಮೊತ್ತ 70,000 ಕೋಟಿ ರೂ.ಗಳು. ಇದನ್ನು ಸಾರ್ವಜನಿಕ ಹೂಡಿಕೆಗಳನ್ನು ಹೆಚ್ಚಿಸಲು ಬಳಸಬಹುದಾಗಿತ್ತು, ಮತ್ತು ಮನರೇಗದಲ್ಲಿ ಕೂಲಿಬಾಕಿಗಳನ್ನು ತೆರಲು ಬಳಸಿದ್ದರೆ ಗ್ರಾಮೀಣ ಭಾರತದಲ್ಲಿ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಬಹುದಿತ್ತು ಎಂದಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಜನಗಳ ಸಂಕಟಗಳನ್ನು ನಿವಾರಿಸುವ ಬದಲು ಅವನ್ನು  ಹೆಚ್ಚಿಸಿ,  ಉಳ್ಳವರ ಲಾಭಗಳನ್ನು ಮಾತ್ರ ಗರಿಷ್ಟಗೊಳಿಸಲು ಅನುಕೂಲವಾಗುವಂತಹ  ಈ ಧೋರಣೆಗಳ ವಿರುದ್ಧ ಪ್ರತಿಭಟಿಸಲು ಎದ್ದು ನಿಲ್ಲಬೇಕು ಎಂದು ಜನಗಳಿಗೆ ಕರೆ ನೀಡಿದೆ.

ಗಾಯಕ್ಕೆ ಉಪ್ಪು ತಿಕ್ಕುವ ಪ್ರಕಟಣೆಗಳು-ಯೆಚುರಿ

ಹಣಕಾಸು ಮಂತ್ರಿಗಳು ಸಪ್ಟಂಬರ್ 14ರಂದು ಮಾಡಿರುವ ಪ್ರಕಟಣೆಗಳು ಜನಗಳ ಗಾಯಗಳಿಗೆ ಉಪ್ಪು ತಿಕ್ಕುವಂತವುಗಳು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿಯವರು ಟಿಪ್ಪಣಿ ಮಾಡಿದ್ದಾರೆ.

ಮತ್ತೊಮ್ಮೆ ಅವೇ ಹಳಸಲು ನಿಷ್ಪ್ರಯೋಜಕ ಪಥ್ಯಗಳನ್ನೇ ಪ್ರಕಟಿಸಲಾಗಿದೆ. ಈ ಕ್ರಮಗಳಿಂದ ಆರ್ಥಿಕ ಚೇತರಿಕೆಯೂ ಬರಲಾರದು, ಜನಗಳು ಕಾತುರದಿಂದ ನಿರೀಕ್ಷಿಸುತ್ತಿರುವ ಪರಿಹಾರಗಳೂ ಸಿಗಲಾರವು ಎಂದು ಅವರು ಹೇಳಿದ್ದಾರೆ.

ಹಣಕಾಸು ಮಂತ್ರಿಗಳ ಹೊಸ ಪ್ರಕಟಣೆಗಳು ಬರುವ ಹಿಂದಿನ ದಿನವೇ ಆಗಸ್ಟ್   ತಿಂಗಳಲ್ಲಿ ರಫ್ತುಗಳಲ್ಲಿ 6.05% ಇಳಿಕೆಯಾಗಿದೆ, ರಫ್ತುಗಳಲ್ಲಿ 13.45% ಇಳಿಕೆಯಾಗಿದೆ ಎಂಬ ಸುದ್ದಿ ಬಂದಿತ್ತು. ಈ ರೀತಿ ಆಮದು ಮತ್ತು ರಫ್ತು ಇಷ್ಟೊಂದು ತೀವ್ರ ರೀತಿಯಲ್ಲಿ ಕುಗ್ಗಿರುವುದು ಆಥಿಕ ಚಟುವಟಿಕೆಗಳು ಕುಗುತ್ತಿರುವುದನ್ನು ಸೂಚಿಸುತ್ತದೆ.

ಅಂದರೆ ಭಾರತೀಯ ಆರ್ಥಿಕ ವ್ಯವಸ್ಥೆ ಅಭೂತಪೂರ್ವ ಬಿಕ್ಕಟ್ಟಿಗೆ ಒಳಗಾಗಿದೆ, ಇದಕ್ಕೂ ವಾಣಿಜ್ಯಮಂತ್ರಿಗಳು ಹೇಳಿದ ಗುರುತ್ವಾಕರ್ಷಣಕ್ಕಾಗಲೀ, ಅಥವ ಹಣಕಾಸು ಮಂತ್ರಿಗಳು ಹೇಳಿದ ಈ ಶತಮಾನದ ನವಯುವಕರ ಮನೋಭಾವಕ್ಕಾಗಲೀ ಯಾವುದೇ ಸಂಬಂಧವಿಲ್ಲ. ಇದಕ್ಕೆ ಸರಕಾರದಲ್ಲಿ ಕೂತಿರುವವರೇ ಹೊಣೆಗಾರರು ಎಂದು ತಿಳಿಯಲು ಐನ್‍ಸ್ಟೈನ್ ಏನೂ ಬೇಕಾಗಿಲ್ಲ ಎಂದು ಸೀತಾರಾಮ್‍ ಯೆಚುರಿ ಟಿಪ್ಪಣಿ ಮಾಡಿದ್ದರು.

Leave a Reply

Your email address will not be published. Required fields are marked *