17 ಶಾಸಕರ ಅನರ್ಹತೆಯ ಸ್ಪೀಕರ್ ಅದೇಶ ಎತ್ತಿ ಹಿಡಿದ ಸುಪ್ರಿಂ ಕೋರ್ಟ್: ಸಿಪಿಐಎಂ ಸ್ವಾಗತ

ಪ್ರಜಾಸತ್ತಾತ್ಮಕವಾಗಿ ರಚಿಸಲ್ಪಟ್ಟ ಶ್ರೀ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರವನ್ನು ಉರುಳಿಸುವ ಬಿಜೆಪಿ ಸಂಚಿಗೆ ಕೈಜೋಡಿಸಿದ್ದ ಆಡಳಿತ ಪಕ್ಷಗಳ 17 ಶಾಸಕರ ರಾಜಿನಾಮೆಯನ್ನು ತಿರಸ್ಕರಿಸಿ, ಪಕ್ಷಾಂತರ ನಿಷೇಧ ಕಾಯ್ದೆಯಡಿ ಅವರನ್ನು ಅನರ್ಹಗೊಳಿಸಿದ್ದ ವಿಧಾನಸಭೆಯ ಅಧ್ಯಕ್ಷರ ನಿರ್ಣಯವನ್ನು ಸುಪ್ರಿಂಕೋರ್ಟ್ ಎತ್ತಿ ಹಿಡಿದಿರುವುದು ಪ್ರಜಾಸತ್ತೆಗೆ ದೊರೆತ ಜಯವೆಂದು ಸಿಪಿಐಎಂ ವರ್ಣಿಸಿ ಅದನ್ನು ಸ್ವಾಗತಿಸಿದೆ.

ಇದು ಪಕ್ಷ ಮತ್ತು ತಮನ್ನು ಆಯ್ಕೆ ಮಾಡಿದ್ದ ಜನರಿಗೆ ದ್ರೋಹ ಎಸಗಿ ಪಕ್ಷಾಂತರ ಮಾಡುವ ಜನಪ್ರತಿನಿಧಿಗಳಿಗೆ ಗುಣಪಾಠವಾಗಿದೆ.

ಸಂವಿಧಾನದ 164(1ಬಿ) ಮತ್ತು 361(ಬಿ)ಯಂತೆ ಅನರ್ಹಗೊಂಡವರು ಹೊಸದಾಗಿ ಚುನಾಯಿತರಾಗುವವರೆಗೆ ಸಚಿವ ಪದವಿಯನ್ನಾಗಲೀ ಅಥವಾ ಯಾವುದೇ ರಾಜಕೀಯ ಹುದ್ದೆಗಳನ್ನು ಪಡೆಯಲು ಅವಕಾಶವಿಲ್ಲವೆಂದು ಕೋರ್ಟ ಸ್ಪಷ್ಟಪಡಿಸಿದೆ.

ಅದೇ ರೀತಿ, ಕುದುರೆ ವ್ಯಾಪಾರದ ಮಾದರಿಯಲ್ಲಿ ಶಾಸಕರನ್ನು ಖರೀದಿಸುವ ಮತ್ತು ಪಕ್ಷಾಂತರದಂತಹ ಪ್ರಜಾಪ್ರಭುತ್ವ ವಿರೋಧಿ ಪ್ರಕ್ರಿಯೆಯನ್ನು ತಡೆಯುವ ನಿಟ್ಟಿನಲ್ಲಿ ಕಾನೂನನ್ನು ಬಲಪಡಿಸಲು ಕೋರ್ಟ್ ಸೂಚಿಸಿದೆ.

ಆದರೇ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡ ಶಾಸಕರಿಗೆ ಪುನಃ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿರುವುದು ದುರದೃಷ್ಟಕರ ಇಂತಹ ತಪ್ಪಿತಸ್ಥರನ್ನು ಶಿಕ್ಷಿಸಲಾಗದ ದೌರ್ಬಲ್ಯ ಈ ಕಾಯ್ದೆ ಹೊಂದಿರುವುದನ್ನು ಇದು ಬಯಲಿಗೆಳೆದಿದೆ.

ಆದ್ದರಿಂದ ತಕ್ಷಣವೇ ಕಾಯ್ದೆಗೆ ಸೂಕ್ತ ತಿದ್ದುಪಡಿಯನ್ನು ಮಾಡುವಂತೆ ಸರಕಾರವನ್ನು ಸಿಪಿಐಎಂ ಒತ್ತಾಯಿಸುತ್ತದೆ.

ಉಪ ಚುನಾವಣೆಯಲ್ಲಿ ಕೋಮುವಾದಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ಬಿಜೆಪಿ ಹಾಗೂ ಅನರ್ಹರನ್ನು ಸೋಲಿಸಲು ಸಿಪಿಐ(ಎಂ) ಕರೆ

ಬಿಜೆಪಿ ತನ್ನ ಅಧಿಕಾರದಾಹದ ಕಾರಣದಿಂದ ತೊಡಗಿದ ವಿರೋಧ ಮುಕ್ತ ಭಾರತ ರಚನೆಯ ಅನೈತಿಕ ಸರ್ವಾಧಿಕಾರದ ರಾಜಕಾರಣದಿಂದ ಮತ್ತು ಆಡಳಿತ ಪಕ್ಷದ ಸದಸ್ಯರು ಕೈ ಜೋಡಿಸಿದ ಪ್ರಜಾಸತ್ತೆಯ ವಿರೋಧಿ ಸಂಚಿನಿಂದಾಗಿ, ಈ ಉಪ ಚುನಾವಣೆಗಳು ಜನತೆಯ ಮೇಲೆ ಹೇರಲ್ಪಟ್ಟಿರುವುದು  ಸ್ಪಷ್ಠವಿದೆ.

ರಾಜ್ಯ ವ್ಯಾಪಕವಾದ ಬರಗಾಲ, ಅತಿವೃಷ್ಠಿ, ಪ್ರವಾಹಗಳಿಂದ ಮತ್ತು ಬೆಳೆಯುತ್ತಿರುವ ಆರ್ಥಿಕ ಬಿಕ್ಕಟ್ಟಿನ ಪರಿಣಾಮದಿಂದ ನರಳುತ್ತಿರುವಾಗ, ಜನತೆಗೆ ಪರಿಣಾಮಕಾರಿಯಾಗಿ ನೆರವಾಗುವ ಬದಲು ಇಂತಹ ಅನೈತಿಕ ರಾಜಕಾರಣದಲ್ಲಿ ತೊಡಗಿ, ಜನತೆಯನ್ನು ಸಂಕಷ್ಠದಲ್ಲಿಟ್ಜ ಜನವಿರೋಧಿ ಬಿಜೆಪಿ ಹಾಗೂ ಸುಪ್ರಿಂಕೋರ್ಟ್ ಅನರ್ಹರೆಂದು ಗುರುತಿಸಿದ ಮತ್ತು ವಿಧಾನ ಸಭೆಯ ಸಭಾಧ್ಯಕ್ಷರು ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸನ ಸಭೆಯಿಂದ ಅನರ್ಹರೆಂದು ವಜಾಗೊಳಿಸಿದವರನ್ನು ನಿರ್ಣಾಯಕವಾಗಿ ಸೋಲಿಸಲು ಸಿಪಿಐಎಂ ರಾಜ್ಯ ಸಮಿತಿ ರಾಜ್ಯದ ಮತದಾರರಿಗೆ ಕರೆ ನೀಡಿದೆ.

ಮತದಾರರ ತೀರ್ಪನ್ನು ಲಘುವಾಗಿ ಪರಿಗಣಿಸುವ ಈ ಜನವಿರೋಧಿ ಶಕ್ತಿಗಳನ್ನು ಸೋಲಿಸಲು ರಾಜ್ಯದಾದ್ಯಂತ ಸಿಪಿಐಎಂ ಘಟಕಗಳು ಕಾರ್ಯ ನಿರ್ವಹಿಸಿಲಿವೆ ಎಂದು ಸಿಪಿಐಎಂ ರಾಜ್ಯ ಸಮಿತಿ ಪ್ರಕಟಣೆ ಹೊರಡಿಸಿದೆ.

ಯು. ಬಸವರಾಜ

ಕಾರ್ಯದರ್ಶಿಗಳು

Leave a Reply

Your email address will not be published. Required fields are marked *