ಸಾರ್ವಜನಿಕ ವಲಯದ ಖಾಸಗೀಕರಣವನ್ನು ಹಿಂದಕ್ಕೆ ತಳ್ಳಿ

ಕಾರ್ಪೊರೇಟ್ ಬಂಟರುಗಳಿಗೆ ಅರ್ಥವ್ಯವಸ್ಥೆಯಲ್ಲಿ ಆಯಕಟ್ಟಿನ ಹತೋಟಿ ಕೊಡಿಸುವ ಹುನ್ನಾರ

ಅತ್ಯಂತ ಲಾಭದಲ್ಲಿರುವ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(ಬಿಪಿಸಿಎಲ್)ನಲ್ಲಿ ಸರಕಾರದ ಪಾಲನ್ನು ಮಾರುವುದಕ್ಕೆ ಕೇಂದ್ರ ಸಂಪುಟದ ಮಂಜೂರಾತಿ ಭಾರತದ ಸಾರ್ವಭೌಮತೆಗೆ ಸಂಪೂರ್ಣ ಹಾನಿಕಾರಕ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.

ಬಿಪಿಸಿಎಲ್ ನೊಂದಿಗೆ ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯ ಮತ್ತು ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯ, ಟಿಹೆಚ್‌ಡಿಸಿಐಎಲ್ ಮತ್ತು ನಾರ್ತ್ ಈಸ್ಟರ್ನ್ ಇಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ ಈ ನಾಲ್ಕು ಸಾರ್ವಜನಿಕ ವಲಯದ ಘಟಕಗಳನ್ನು ಕೂಡ ಮಾರಾಟಕ್ಕೆ ಇಡಲಾಗುವುದು. ಸರಕಾರ ಈ ಘಟಕಗಳಲ್ಲಿ ತನ್ನ ನಿರ್ವಹಣಾ ಹತೋಟಿಯನ್ನು ಬಿಟ್ಟುಕೊಡುತ್ತದೆಯಂತೆ.

ಮೋದಿ ಸರಕಾರ ಉಕ್ಕು, ಇಂಜಿನಿಯರಿಂಗ್, ಕಟ್ಟಡ ನಿರ್ಮಾಣ, ವಾಯುಯಾನ, ಇಲೆಕ್ಟ್ರಾನಿಕ್ಸ್, ಬಂದರುಗಳು, ರೈಲ್ವೆ, ರಕ್ಷಣಾ ಉತ್ಪಾದನೆ ಮತ್ತು ಇತರ ಕೆಲವು ರಂಗಗಳ 28 ಸಾರ್ವಜನಿಕ ವಲಯದ ಘಟಕಗಳನ್ನು ಒಂದು ವರ್ಷದ ಒಳಗೆ ಖಾಸಗೀಕರಿಸುವುದಕ್ಕೆಂದು ಪಟ್ಟಿ ಮಾಡಿದೆ. ತನ್ನ ದುಂದುವೆಚ್ಚವನ್ನು, ಮುಖ್ಯವಾಗಿ ಪ್ರಚಾರ ಮತ್ತು ಬುರುಡೆ ಬಿಡುವುದರ ವೆಚ್ಚಗಳನ್ನು ಭರಿಸಲು ಈ ಸರಕಾರ ಸಾರ್ವಜನಿಕ ಆಸ್ತಿಗಳನ್ನು ಮಾರಿ 1.10ಲಕ್ಷ ಕೋಟಿ ರೂ.ಗಳನ್ನು ಎತ್ತುವ ಗುರಿ ಇಟ್ಟುಕೊಂಡಿದೆ.

ಈ ಪ್ರಕ್ರಿಯೆಯಲ್ಲಿ ಉತ್ಪಾದಕ ಮತ್ತು ಮೌಲ್ಯಗಳನ್ನು ಸೃಷ್ಟಿಸುವ ಸಾರ್ವಜನಿಕ ವಲಯದ ಘಟಕಗಳನ್ನು ತಮ್ಮ ಕಾರ್ಪೊರೇಟ್ ಬಂಟರುಗಳಿಗೆ ಅವರು ಭಾರತೀಯ ಅರ್ಥವ್ಯವಸ್ಥೆಯ ಆಯಕಟ್ಟಿನ ಹತೋಟಿ ಹೊಂದುವಂತೆ ಪ್ರಾಯೋಜಿಸಲು ಮಾರಲಾಗುತ್ತಿದೆ.

ಇದು ಕುಟುಂಬದ ದೈನಂದಿನ ಖರ್ಚುಗಳನ್ನು ಹೊಂದಿಸಲು ಮನೆಯ ಪಾತ್ರೆ ಪಗಡಗಳನ್ನು ಮಾರುವಂತೆಯೇ ಸರಿ ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ಬಿಪಿಸಿಎಲ್‌ನ ಎಲ್ಲ ಕಾರ್ಮಿಕ ಸಂಘಗಳು ಒಟ್ಟಾಗಿ ಕರೆ ನೀಡಿರುವ ನವಂಬರ್ ೨೮ರ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಸಿಪಿಐ(ಎಂ) ಈಗಾಗಲೇ ಸಾರ್ವಜನಿಕ ವಲಯದ ಘಟಕಗಳ ಖಾಸಗೀಕರಣದ ವಿರುದ್ಧ ಡಿಸೆಂಬರ್ ತಿಂಗಳಿಡೀ ಪ್ರಚಾರಾಂದೋಲನ ನಡೆಸುವುದಾಗಿ ಪ್ರಕಟಿಸಿದೆ.

Leave a Reply

Your email address will not be published. Required fields are marked *