ಕಟಕಟೆಯಿಂದಲೇ ಸಾಮ್ರಾಜ್ಯಶಾಹಿಗಳಿಗೆ ಸವಾಲೆಸೆದ ಮೀರತ್ ಪಿತೂರಿ ಪ್ರಕರಣ

  • ಈ ಮೊಕದ್ದಮೆಯ ವಿಚಾರಣೆ ಜಗತ್ತಿನಾದ್ಯಂತ ವ್ಯಾಪಕ ಪ್ರಚಾರ ಪಡೆಯಿತು ಮತ್ತು ಕಾರ್ಮಿಕ ವರ್ಗದ ಸೌಹಾರ್ದತೆಯನ್ನು ಪ್ರೇರೇಪಿಸಿತು. ಕಮ್ಯುನಿಸ್ಟ್ ಅಂತರ್ರಾಷ್ಟ್ರೀಯವು ಬಂಧನವನ್ನು ಖಂಡಿಸಿತು ಮತ್ತು ಬ್ರಿಟಿಷ್ ಕಾರ್ಮಿಕರು ಹಾಗೂ ಕಮ್ಯುನಿಸ್ಟರು ಒಂದು ದೃಢ ಸೌಹಾರ್ದ ಆಂದೋಲನವನ್ನು ಕಟ್ಟಿದರು, ೧೯೨೯ ರಿಂದ ೧೯೩೩ ರ ಕೊನೆಯವರೆಗೆ, ಮೀರಟ್ ಬಂಧಿತರಿಗಾಗಿನ ಸೌಹಾರ್ದದ ಚಳುವಳಿ ಒಂದು ಸಮರಶೀಲ ರಾಜಕೀಯ ಚಳುವಳಿಯಾಗಿ ಪರಿವರ್ತನೆಗೊಂಡಿತು; ಅದು ಭಾರತದ ಸ್ವಾತಂತ್ರ್ಯ ಚಳುವಳಿಗೆ ಬೆಂಬಲವಾಗಿ ಸಾರ್ವಜನಿಕ ಅಭಿಪ್ರಾಯವನ್ನು  ಮೂಡಿಸುವಲ್ಲಿ ಸಹಾಯಕವಾಯಿತು.

Communist100 File copyಮೀರತ್ ಪಿತೂರಿ ಪ್ರಕರಣವು(೧೯೨೯) ಭಾರತದ ರಾಷ್ಟ್ರೀಯ ವಿಮೋಚನಾ ಚಳುವಳಿಯ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲು. ಇಡೀ ಬಂಡವಾಳಶಾಹಿ ಜಗತ್ತು ಮಹಾ ಆರ್ಥಿಕ ಕುಸಿತದಲ್ಲಿ ತತ್ತರಿಸುತ್ತಿದ್ದಾಗಲೇ, ಆಗ ತಾನೇ ಜನ್ಮತಾಳಿದ್ದ ಸಮಾಜವಾದಿ ದೇಶ ಸೋವಿಯತ್ ರಷ್ಯಾವು ಅದ್ಭುತ ಸಾಧನೆಗಳನ್ನು ಮಾಡುತ್ತಿದ್ದ ಸಮಯದಲ್ಲಿ ಅದು ಘಟಿಸಿತು. ಈ ಅವಧಿಯಲ್ಲಿ, ಸಮರಶೀಲ ಕಾರ್ಮಿಕ ವರ್ಗದ ಹೋರಾಟಗಳು, ಅವುಗಳಲ್ಲಿ ಬಹುಪಾಲು ಕಮ್ಯುನಿಸ್ಟರು ಮತ್ತು ಕ್ರಾಂತಿಕಾರಿಗಳ ನೇತೃತ್ವದಲ್ಲಿ ಉಚ್ಪ್ರಾಯ ಸ್ಥಿತಿ ತಲುಪಿದ್ದವು.

೧೯೨೧ರಲ್ಲಿ (ಖಿಲಾಫತ್ ಅಸಹಕಾರ ಚಳುವಳಿಯ ಅವಧಿಯಲ್ಲಿ)  ಒಂದು ಉನ್ನತ ಮಟ್ಟಕ್ಕೇರಿದ್ದ   ಕಾರ್ಮಿಕರ ಮುಷ್ಕರಗಳ ಸಂಖ್ಯೆ  ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಳ್ಳುವುದರೊಂದಿಗೆ ಕೆಳಗಿಳಿಯಿತು. ಆದರೆ ೧೯೨೧ ರ ಉತ್ತರಾರ್ಧದಲ್ಲಿ ಮತ್ತೆ ಮುಷ್ಕರಗಳಿಂದಾಗಿ ಮಾನವ ದಿನಗಳ ನಷ್ಟ ಹೆಚ್ಚಾಗಿದ್ದನ್ನು ಕಾಣುತ್ತೇವೆ. ಅದನ್ನು ೧೯೨೮-೨೯ರಲ್ಲಿ ನೋಡಬಹುದು, ಆಗ ೨೦೩ ಮುಷ್ಕರಗಳಿಂದ ೩,೧೬,೪೭,೪೦೪ ಮಾನವ ದಿನಗಳು ನಷ್ಟವಾಗಿದ್ದವು.

೧೯೨೯ ರ ಅಂತ್ಯದಲ್ಲಿ ಆರಂಭವಾದ ಮಹಾ ಕುಸಿತವು ಭಾರತವನ್ನು ಹಲವಾರು ವಿಧಗಳಲ್ಲಿ ಬಾಧಿಸಿತು; ಅದರ ಪರಿಣಾಮವು ಕಾರ್ಮಿಕ ವರ್ಗ ಮತ್ತು ರೈತಾಪಿ ಜನರನ್ನು ತೀವ್ರ ಬಾಧಿಸಿತು; ಅದರಿಂದಾಗಿ ಅವರು ಇನ್ನೂ ದೊಡ್ಡ ರೀತಿಯಲ್ಲಿ ಹೋರಾಟಗಳಲ್ಲಿ ಇಳಿಯುವುದು ಅನಿವಾರ್ಯವಾಯಿತು. ಈ ವಿದ್ಯಮಾನಗಳು ೧೯೩೦ರ ಆರಂಭದ ವರ್ಷಗಳವರೆಗೂ ಮುಂದುವರಿದವು. ಕಾರ್ಮಿಕ ವರ್ಗದ ಚಳುವಳಿಯೊಂದಿಗೆ ರಾಜಕೀಯ ತಿಳುವಳಿಕೆ ಹೆಚ್ಚುತ್ತಿರುವುದನ್ನು ಕಾರ್ಮಿಕರ ಹೋರಾಟಗಳ ತೀವ್ರತೆಯು ಪ್ರದರ್ಶಿಸಿತು.

ಕಾರ್ಮಿಕ ವರ್ಗದ ಮತ್ತು ರೈತರ ಬಹುಪಾಲು ಹೋರಾಟಗಳು ಕಮ್ಯುನಿಸ್ಟರ ನಾಯಕತ್ವದಲ್ಲಿ ಕಾರ್ಮಿಕರ ಮತ್ತು ರೈತರ ಪಕ್ಷಗ(ಡಬ್ಲ್ಯುಪಿಪಿ) ಅಡಿಯಲ್ಲಿ ನಡೆಯುತ್ತಿದ್ದವು. ೧೯೨೮ರಲ್ಲಿ, ಬಾರ್ಡೋಲಿ ಆಂದೋಲನವು ರೈತರನ್ನು ಅಣಿನೆರೆಸುವಲ್ಲಿ ಅತ್ಯಂತ ಯಶಸ್ವೀ ಹೋರಾಟಗಳಲ್ಲಿ ಒಂದು; ಮತ್ತು ಅದೇ ಸಮಯದಲ್ಲಿ ಬೊಂಬಾಯಿಯಲ್ಲಿ ಬಟ್ಟೆ ಗಿರಣಿ ಕಾರ್ಮಿಕರ ಮುಷ್ಕರ ಕೂಡ ನಡೆಯುತ್ತಿತ್ತು. ಈ ಎರಡು ಹೋರಾಟಗಳ ನಡುವೆ ಯಾವುದೇ ಸಂಘಟನಾತ್ಮಕ ಸಂಬಂಧಗಳು ಇರದೇ ಇದ್ದಾಗ್ಯೂ, ಬ್ರಿಟಿಷರು ಅವೆರಡರ ನಡುವೆ ಸಂಬಂಧವಿದೆಯೆಂದು ಹೆದರಿದ್ದರು; ಬಾರ್ಡೋಲಿಯಲ್ಲಿ ಸರ್ಕಾರ ಏನಾದರೂ ಕ್ರಮ ತೆಗೆದುಕೊಂಡರೆ ಆ ಸನ್ನಿವೇಶವನ್ನು ಕಮ್ಯುನಿಸ್ಟರು ಖಂಡಿತವಾಗಿ ಬಳಸಿಕೊಳ್ಳುತ್ತಾರೆ ಎಂಬ ಭಯ ಅವರಿಗಿತ್ತು. ಅಂತಹ ಭಯ ಕಮ್ಯುನಿಸ್ಟರ ಬಗ್ಗೆ ಬ್ರಿಟಿಷರಲ್ಲಿ ಇತ್ತು.

ಕಮ್ಯುನಿಸ್ಟರ ಮತ್ತು ಡಬ್ಲುಪಿಪಿಯ ಚಟುವಟಿಕೆಗಳು ಸಾಮಾನ್ಯ ಜನರಲ್ಲಿ ಪ್ರಜ್ಞೆಯ ಬೆಳವಣಿಗೆಗೆ ನೆರವಾದವು. ಅವರು ಈಗ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು  ವಿಶ್ವವ್ಯಾಪೀ ಸಾಮ್ರಾಜ್ಯಶಾಹಿ-ವಿರೋಧಿ ಹೋರಾಟದ ಭಾಗ ಎಂದು ಗುರುತಸಿಕೊಳ್ಳುವುದು ಅವರಿಗೆ ಈಗ ಸಾಧ್ಯವಾಗಿತ್ತು. ಕಾಂಗ್ರೆಸ್ ಕೂಡ ಈ ವಾಸ್ತವವನ್ನು ಒಪ್ಪಿಕೊಳ್ಳಲೇಬೇಕಾಯಿತು. ಮತ್ತೊಂದು ಪ್ರಧಾನವಾದ ಪರಿಣಾಮ ಡಬ್ಲುಪಿಪಿಯ ಕೆಲಸಗಳು ಈ ಅವಧಿಯಲ್ಲಿ ಬೀರಿದ್ದು ಕ್ರಾಂತಿಕಾರಿ ರಾಷ್ಟ್ರೀಯವಾದಿಗಳ ಮೇಲೆ. ಅವರಲ್ಲಿ ಅನೇಕರು ಕಮ್ಯುನಿಸ್ಟ್ ಚಿಂತನೆಗಳ ಪ್ರಭಾವಕ್ಕೆ ಒಳಗಾದರು. ಅವರ ಮನೋಭಾವದಲ್ಲಿ ಗಮನಾರ್ಹ ಬದಲಾವಣೆಯ ಮೊದಲ ಸಂಕೇತವು ಕಮ್ಯುನಿಸ್ಟ್ ಚಳುವಳಿಯ ಬೆಳವಣಿಗೆಯಲ್ಲಿ ಕಂಡಿತು. ಅಂತಹ ಬದಲಾವಣೆಯ ಸ್ಪಷ್ಟ ಪುರಾವೆ ದೊರೆತದ್ದು ಭಗತ್ ಸಿಂಗ್ ಅವರ ನಾಯಕತ್ವದಲ್ಲಿ ಹಿಂದೂಸ್ತಾನ್ ಸೋಶಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಸ್ಥಾಪನೆಯಾಗುವುದರ ಮೂಲಕ. ಅಂದಿನ ದಿನಗಳಲ್ಲಿ ಸಾಮಾನ್ಯ ಜನರು ಬಾಂಬ್ ರಾಜಕೀಯ ಅಥವಾ ಗಾಂಧಿಯ ಅಹಿಂಸೆಯ ಬಗ್ಗೆಯಷ್ಟೇ ಯೋಚಿಸುತ್ತಿದ್ದಾಗ, ಡಬ್ಲುಪಿಪಿ ಮತ್ತು ಕಮ್ಯುನಿಸ್ಟ್ ಪಕ್ಷ ನಡೆಸಿದ ಪ್ರಚಾರವು ಕಾರ್ಮಿಕ ವರ್ಗದ ರಾಜಕೀಯವನ್ನು ಮುನ್ನೆಲೆಗೆ ತಂದಿತು. ಕಮ್ಯುನಿಸ್ಟರತಿಪಾದಿಸುತ್ತಿದ್ದಂತೆ, ಯುವಜನರು ನೇರ ಕಾರ್ಯಾಚರಣೆ ಮತ್ತು ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಎಲ್ಲಾ ದುಡಿಯುವ ಜನರನ್ನು ಅಣಿನೆರೆಸಬೇಕೆಂಬ ಚಿಂತನೆಯತ್ತ ಆಕರ್ಷಿತರಾದರು.

ಈ ರೀತಿಯಲ್ಲಿ ಜನಸಮುದಾಯದಲ್ಲಿ ಕಮ್ಯುನಿಸ್ಟ್ ಪ್ರಬಾವ ಹರಡುತ್ತಿರುವುದನ್ನು ಕಂಡೇ ಬ್ರಿಟಿಷರು ಬೆದರಿದರು ಮತ್ತು ಕಮ್ಯುನಿಸ್ಟ್ ಚಟುವಟಿಕೆಗಳನ್ನು ನಿಗ್ರಹಿಸಲು ತಡವಿಲ್ಲದೇ ಕ್ರಮ ಕೈಗೊಳ್ಳಲು ಮುಂದಾದರು. ಡಿಸೆಂಬರ್ ೧೯೨೮ರಲ್ಲಿ, ಪ್ರಸ್ತಾಪಿತ ಪಿತೂರಿ ವಿಚಾರಣೆಯ ಸಂಬಂಧದಲ್ಲಿ ಸರ್ಕಾರವು ಮಾಹಿತಿಗಳನ್ನು ಕಲೆಹಾಕುತ್ತಿದೆ ಎಂದು ಬ್ರಿಟಿಷ್ ಗೃಹ ಕಾರ್ಯದರ್ಶಿಯು ವೈಸ್‌ರಾಯಿ ಹತ್ತಿರ ಹೇಳಿಕೊಂಡ. ವೈಸ್‌ರಾಯ್ ಇರ್ವಿನ್ ಬಂಗಾಳದ ಗೌರ್ನರಿಗೆ ಪತ್ರ ಬರೆದು(ಜನವರಿ ೧೮, ೧೯೨೯): ಈ ಜನಗಳ ವಿರುದ್ಧ ಒಂದು ಸಮಗ್ರ ಪಿತೂರಿ ಪ್ರಕರಣವನ್ನು ನಡೆಸಲು ನಾವು ಈಗ ಸಮರ್ಥರಾಗಿದ್ದೇವೆ ಎಂದು ಸಾಕಷ್ಟು ಉತ್ತಮ ನಿರೀಕ್ಷೆಗಳನ್ನು ಹೊಂದಿದ್ದೇವೆ.. ನಾವಿದನ್ನು ಮಾಡಲು ಸಾಧ್ಯವಾದರೆ, ನಮ್ಮ ಅಭಿಪ್ರಾಯದಲ್ಲಿ ಅದು, ಭಾರತದ ಕಮ್ಯುನಿಸ್ಟ್ ಚಳುವಳಿಗೆ ಬೇರೆಯದಕ್ಕಿಂತ ತೀವ್ರತರದ ಹೊಡೆತವನ್ನು ಕೊಡಲಿದೆ ಎಂದು ತಿಳಿಸಿದ.

ಹೀಗೆ ಆರಂಭಗೊಳಿಸಿದ ಮೀರಟ್ ಪಿತೂರಿ ಪ್ರಕರಣವು ಮಾರ್ಚ್ ೧೫, ೧೯೨೯ ರಂದು ಮೀರಟ್‌ನ ಜಿಲ್ಲಾ ನ್ಯಾಯಾಧೀಶರು ಆರೋಪಿತ ವ್ಯಕ್ತಿಗಳಿಗೆ ವಾರಂಟುಗಳನ್ನು ನೀಡುವುದರ ಮೂಲಕ ಶುರುವಾಯಿತು. ಭಾರತೀಯ ದಂಡ ಸಂಹಿತೆ ವಿಭಾಗ ೧೨೧ಎ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲು ಭಾರತದ ಗೌರ್ನರ್ ಜನರಲ್, ಲಾರ್ಡ್ ಇರ್ವಿನ್ ಒಂದು ದಿನ ಮುಂಚೆಯಷ್ಟೆ ಸಮ್ಮತಿಸಿದ್ದರು.

ಮಾರ್ಚ್ ೨೦, ೧೯೨೯ ರಂದು ಭಾರತದ ವಿವಿಧ ಪ್ರದೇಶಗಳಲ್ಲಿ ೩೧ ಕಮ್ಯುನಿಸ್ಟ್/ಕಾರ್ಮಿಕ ನಾಯಕರನ್ನು ಬಂಧಿಸಲಾಯಿತು. ಅವರಲ್ಲಿ ಬಹುತೇಕರು ಕಾರ್ಮಿಕ ಸಂಘಟನೆಗಳ ಮತ್ತು ಕಾರ್ಮಿಕ ವರ್ಗದ ಚಳುವಳಿಯ ಪ್ರಸಿದ್ಧ ವ್ಯಕ್ತಿಗಳಾಗಿದ್ದರು. ಅವರಲ್ಲಿ, ಬೊಂಬಾಯಿಯ ೧೩ ಜನ, ಬಂಗಾಳದ ೧೦ ಜನ, ಯುಪಿಯ ೫ ಜನ, ಪಂಜಾಬಿನ ೩ ಜನ ಹಾಗೂ ೩ ಇಂಗ್ಲಿಷರಾಗಿದ್ದರು. ಬಂಧಿತರಲ್ಲಿ ೮ ಜನ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸದಸ್ಯರಾಗಿದ್ದರು ಮತ್ತು ಆಗಷ್ಟೇ ಸ್ಥಾಪಿತವಾದ ಡಬ್ಲುಪಿಪಿಯ ಕಾರ್ಯಕಾರಿ ಸಮಿತಿಯ ಸುಮಾರಾಗಿ ಎಲ್ಲಾ ಸದಸ್ಯರೂ ಇದ್ದರು. ಬಂಧನಕ್ಕೆ ಮೊದಲು ಎಲ್ಲರ ಮನೆಯ ಮೇಲೆ ದಾಳಿ ನಡೆಸಿ ಆಮೂಲಾಗ್ರ ಶೋಧ ಮಾಡಲಾಗಿತ್ತು.

ವಿಚಾರಣೆಯ ಸ್ಥಳ ಮೀರಟ್ ಎಂದು ಮುಂಚೆಯೇ ಯೋಜಿಸಲಾಗಿತ್ತು. ಮುಖ್ಯವಾಗಿ, ನ್ಯಾಯದರ್ಶಿಮಂಡಳಿ(ಜ್ಯೂರಿ)ಯಿಂದ ವಿಚಾರಣೆ ನಡೆಸುವುದನ್ನು ತಪ್ಪಿಸಲು ಅಧಿಕಾರಿಗಳು ಬಯಸಿದ್ದರು. ಕಮ್ಯುನಿಸ್ಟ್ ಚಟುವಟಿಕೆಗಳ ಪ್ರಮುಖ ಕೇಂದ್ರಗಳಾದ  ಬೊಂಬಾಯಿ ಮತ್ತು ಕಲ್ಕತ್ತಾ ಎರಡರಲ್ಲೂ ಒಂದು ಹೈಕೋರ್ಟಿನ ನ್ಯಾಯದರ್ಶಿ ಮಂಡಳಿಯಿಂದ ಪ್ರಕರಣದ ವಿಚಾರಣೆ ನಡೆಸಬಹುದಿತ್ತು. ಗೃಹ ಇಲಾಖೆಯ ಒಂದು ಅತ್ಯಂತ ಗುಪ್ತ ದಾಖಲೆಯು ಬ್ರಿಟಿಷರ ನಿಜವಾದ ಉದ್ದೇಶ ಏನಿತ್ತು ಎಂಬುದನ್ನು ಬಯಲುಮಾಡಿತು: ಈ ಪ್ರಕರಣವನ್ನು ಒಂದು ನ್ಯಾಯದರ್ಶಿ ಮಂಡಳಿಗೆ ಸಲ್ಲಿಸುವುದು ಸಾಧ್ಯವಾಗುತ್ತಿರಲಿಲ್ಲ. . . .ಪ್ರಕರಣ ಎಷ್ಟೇ ಒಳ್ಳೆಯದಿರಲಿ, ಮಂಡಳಿಯು ಶಿಕ್ಷೆ ನೀಡುತ್ತದೆ ಎಂಬ ಭರವಸೆ ಇರಲಿಲ್ಲ, ಅದು ಶಿಕ್ಷೆಯಲ್ಲಿ ಕೊನೆಗೊಳ್ಳುತ್ತದೆ ಎಂಬುದು ನಮಗೆ ಮನವರಿಕೆಯಾಗದ ಹೊರತು ಕೋರ್ಟಿಗೆ ಆ ಪ್ರಕರಣವನ್ನು ನೀಡುವುದು ಸಾಧ್ಯವಿರಲಿಲ್ಲ. ಅದೇ ದಾಖಲೆಯು ಮುಂದುವರಿದು: ಬೊಂಬಾಯಿ ಮತ್ತು ಕಲ್ಕತ್ತಾ ಎರಡಲ್ಲೂ ದುಡಿಯುವ ಜನರಲ್ಲಿ ಪ್ರಚಲಿತವಿರುವ ಇವತ್ತಿನ ಅಪಾಯಕಾರಿ ವಾತಾವರಣದಲ್ಲಿ ಈ ಎರಡು ಸ್ಥಳಗಳಲ್ಲಿ ಕೂಡ ವಿಚಾರಣೆ ನಡೆಸುವುದು ನಿಸ್ಸಂದೇಹವಾಗಿಯೂ ಬಯಸತಕ್ಕದ್ದಲ್ಲ. ಎಂದು ಈ ಗುಪ್ತ ದಾಖಲೆಯು ಹೇಳಿತ್ತು.

ಅಲಹಾಬಾದ್ ಹೈಕೋರ್ಟಿನ ಅಂತಿಮ ತೀರ್ಪಿನಲ್ಲಿ ವ್ಯಾಖ್ಯಾನಿಸಿದಂತೆ ಆ ಪ್ರಕರಣವನ್ನು ಬೃಹತ್ ಪ್ರಮಾಣದಲ್ಲಿ ನಡೆಸಲಾಯಿತು. ಕಲಾಪಗಳು ಸರಿ ಸುಮಾರು ನಾಲ್ಕೂವರೆ ವರ್ಷ ಮುಂದುವರಿದವು. ಪ್ರಕರಣದ ಸಾಕ್ಷ್ಯಾಧಾರಗಳು ದೊಡ್ಡ ಹಾಳೆ ಗಾತ್ರದ ೨೫ ಮುದ್ರಿತ ಸಂಪುಟಗಳಲ್ಲಿ ಒಳಗೊಂಡಿದ್ದವು. ಅಲ್ಲಿ ಎಲಾ ಸೇರಿ, ೩೫೦೦ ಆಪಾದನೆಯ ದಸ್ತಾವೇಜುಗಳು, ೧೫೦೦ ಆರೋಪಿಗಳ ನಿರಾಕರಣೆ ದಸ್ತಾವೇಜುಗಳು ಮತ್ತು ಏನಿಲ್ಲೆಂದರೂ ೩೨೦ ಸಾಕ್ಷಿಗಳನ್ನು ಪರೀಕ್ಷಿಸಲಾಗಿತ್ತು. ಆ ತೀರ್ಪು  ದೊಡ್ಡ ಹಾಳೆಗಳ ಗಾತ್ರದ ೬೭೬ ಪುಟಗಳ ಎರಡು ಮುದ್ರಿತ ಸಂಪುಟಗಳಾಗಿದ್ದವು. ಆ ಪ್ರಕರಣವನ್ನು ಹೈಕೋರ್ಟಿಗೆ ಸಲ್ಲಿಸುವುದಕ್ಕೆ ಮುಂಚೆಯೇ ಸರ್ಕಾರವು ಸಸಾರ್ವಜನಿಕ ಖಜಾನೆಯಿಂದ ೧೬ ಲಕ್ಷ ರೂಪಾಯಿಗಳನ್ನು ವೆಚ್ಚಮಾಡಿತ್ತು.

ಹಿಂದಿನ ಕಮ್ಯುನಿಸ್ಟ್ ಪಿತೂರಿ ಪ್ರಕರಣಗಳಿಗಿಂತ ಭಿನ್ನವಾಗಿ, ಮೀರಟ್‌ನ ಬಂಧಿಗಳು ನ್ಯಾಯಾಲಯದ ವೇದಿಕೆಯನ್ನು ಎಷ್ಟು ಸಾಧ್ಯವೋ ಅಷ್ಟು ತಮ್ಮ ಕಾರ್ಯಸೂಚಿಯನ್ನು ಪ್ರಚಾರ ಮಾಡಲು ಬಳಸಬೇಕೆಂದು ತೀರ್ಮಾನಿಸಿದರು. ರಾಜಕೀಯ ಹೇಳಿಕೆಗಳನ್ನು ನೀಡುವುದರ ಮೂಲಕ ಸೆಶನ್ಸ್ ಕೋರ್ಟನ್ನು ತಮ್ಮ ಪ್ರಚಾರದ ವೇದಿಕೆಯಾಗಿ ಪರಿವರ್ತಿಸಬೇಕು ಎಂದು ಮುಜಾಫರ್ ಅಹಮದ್ ಅವರು ಅಧಿಕಾರಿ ಅವರಿಗೆ ಹೇಳಿದ್ದರು; ಅದಕ್ಕಾಗಿ ಅವರು ಅಧ್ಯಯನದ ಮೂಲಕ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬೇಕೆಂದು ನಿರ್ಧರಿಸಿದ್ದರು. ಎಲ್ಲಾ ಆರೋಪಿಗಳ ಪರವಾಗಿ ಒಂದು ಸಾಮಾನ್ಯ ಹೇಳಿಕೆಯನ್ನು ಆರ್.ಎಸ್.ನಿಂಬ್‌ಕರ್ ಔಪಚಾರಿಕವಾಗಿ ಮಂಡಿಸಿದರು.

ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶರು, ತಮ್ಮ ತೀರ್ಪಿನಲ್ಲಿ ಈ ಅಪರಾಧಿಗಳ ಪ್ರಮುಖ ಸಾಧನೆಗಳೆಂದರೆ ಕಾರ್ಮಿಕರ ಮತ್ತು ರೈತರ ಪಕ್ಷಗಳನ್ನು ಸ್ಥಾಪನೆ ಮಾಡಿದ್ದು ಮತ್ತು ಗಂಭೀರ ಮಹತ್ವದ ಸಂಗತಿಯೆಂದರೆ ಬೊಂಬಾಯಿ ಪಕ್ಷದ ಸದಸ್ಯರು ಬೊಂಬಾಯಿ ಜವಳಿ ಕಾರ್ಖಾನೆಯ ಕಾರ್ಮಿಕರ ಮೇಲೆ ಹೊಂದಿದ್ದ ಹಿಡಿತ; ೧೯೨೮ರ ಮುಷ್ಕರದ ಸಮಂiiದಲ್ಲಿ ಅವರು ಚಲಾಯಿಸಿದ ನಿಯಂತ್ರಣದ ಹರವು ಎಷ್ಟಿತ್ತೆಂಬುದನ್ನು ಮತ್ತು ಮುಷ್ಕರ ಕೊನೆಗೊಂಡಮೇಲೆ ಗಿರಣಿ ಕಾಮಗಾರ್ ಸಂಘದಲ್ಲಿ ಆಮೂಲಾಗ್ರವಾದ ಕ್ರಾಂತಿಕಾರಿ ನೀತಿಯನ್ನು ಪ್ರಚೋದಿಸುವಲ್ಲಿ ಅವರ ಸಾಧನೆಗಳು ಅವರು ಪಡೆದ ಯಶಸ್ಸನ್ನು ತೋರಿಸುತ್ತವೆ.

ಒಟ್ಟಾರೆಯಾಗಿ ೨೭ ಆರೋಪಿಗಳು ಶಿಕ್ಷೆಗೆ ಒಳಗಾದರು. ಮುಜಾಫರ್ ಅಹಮದ್ ಅವರಿಗೆ ಜೀವಾವಧಿ ಗಡೀಪಾರು; ಎಸ್.ಎ.ಡಾಂಗೆ, ಫಿಲಿಪ್ ಸ್ಪ್ರಾಟ್, ಎಸ್.ವಿ.ಘಾಟೆ, ಕೆ.ಎನ್.ಜೋಗ್ಳೇಕರ್, ಆರ್.ಎಸ್.ನಿಂಬ್ಕರ್ ಅವರುಗಳಿಗೆ ೨೦ ವರ್ಷಗಳ ಗಡೀಪಾರು; ಬಿ.ಎಫ್.ಬ್ರಾಡ್ಲಿ ಎಸ್.ಎಸ್.ಮೀರಜ್‌ಕರ್, ಶೌಕತ್ ಉಸ್ಮಾನಿ ಅವರುಗಳಿಗೆ ೧೦ ವರ್ಷಗಳ ಗಡೀಪಾರು; ಮೀರ್ ಅಬ್ದುಲ್ ಮಜೀದ್, ಸೋಹನ್ ಸಿಂಗ್ ಜೋಶ್, ಧರಣೀಕಾಂತ ಗೋಸ್ವಾಮಿ ಅವರುಗಳಿಗೆ ೭ ವರ್ಷಗಳ ಗಡೀಪಾರು; ಅಯೋಧ್ಯಾ ಪ್ರಸಾದ್, ಗಂಗಾಧರ್ ಅಧಿಕಾರಿ, ಪಿ.ಸಿ.ಜೋಶಿ, ಎಂ.ಜಿ.ದೇಸಾಯ್ ಅವರುಗಳಿಗೆ ೫ ವರ್ಷಗಳ ಗಡೀಪಾರು; ಗೋಪೆನ್ ಚಕ್ರವರ್ತಿ, ಗೋಪಾಲ್ ಚಂದ್ರ ಬಸಕ್, ಹಚಿನ್ಸನ್, ರಾಧಾರಮಣ್ ಮಿತ್ರ, ಎಸ್.ಹೆಚ್.ಜಾಬ್‌ವಾಲಾ, ಕೆ.ಎನ್.ಸೆಹಗಲ್ ಅವರುಗಳಿಗೆ ೪ ವರ್ಷಗಳ ಉಗ್ರಶಿಕ್ಷೆ; ಶಂಸುಲ್ ಹೂಡಾ, ಅರ್ಜುನ್ ಆತ್ಮಾರಾಮ್ ಅಳ್ವೆ, ಜಿ.ಆರ್.ಕಸ್ಲೆ, ಗೌರಿ ಶಂಕರ್ ಮತ್ತು ಎಲ್.ಆರ್.ಕದಮ್ ಅವರುಗಳಿಗೆ ೩ ವರ್ಷಗಳ ಉಗ್ರಶಿಕ್ಷೆ.

ತೀರ್ಪು ಬಂದ ನಂತರ, ಎಲ್ಲಾ ಅಪರಾಧಿಗಳೂ ಅಲಾಹಾಬಾದ್ ಹೈಕೋರ್ಟಿಗೆ ಮನವಿ ಸಲ್ಲಿಸಿದರು; ಅದು ಆಗಸ್ಟ್ ೧೯೩೩ ರಲ್ಲಿ ತೀರ್ಪು ನೀಡಿತು. ೯ ಜನರ ಮೇಲಿನ ಎಲ್ಲಾ ಆರೋಪಗಳನ್ನು ಹೈಕೋರ್ಟ್ ವಜಾಗೊಳಿಸಿತು; ಮತ್ತು ಇತರರಿಗೆ ಶಿಕ್ಷೆಯ ಪ್ರಮಾಣವನ್ನು ಕಠಿಣ ಶಿಕ್ಷೆಗೆ ಇಳಿಸಲಾಯಿತು. ಅವರೆಲ್ಲರೂ ಅದಾಗಲೇ ಜೈಲು ಶಿಕ್ಷೆ ಅನುಭವಿಸಿದ್ದನ್ನು ಪರಿಗಣಿಸಿ ನವಂಬರ್ ೧೯೩೩ರಲ್ಲಿ ಎಲ್ಲರನ್ನೂ ಬಿಡುಗಡೆ ಮಾಡಲಾಯಿತು.

ಇಡೀ ವಿಚಾರಣೆಯು ಜಗತ್ತಿನಾದ್ಯಂತ ವ್ಯಾಪಕ ಪ್ರಚಾರ ಪಡೆಯಿತು ಮತ್ತು ಕಾರ್ಮಿಕ ವರ್ಗದ ಸೌಹಾರ್ದತೆಯನ್ನು ಪ್ರೇರೇಪಿಸಿತು. ಮೀರಟ್ ವಿಚಾರಣೆಯು ಪ್ರಾಯಶಃ ಅದ್ವಿತೀಯವಾದದ್ದು. ಏಕೆಂದರೆ  ಅದು ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಮುಖ್ಯವಾಗಿ ಬ್ರಿಟನ್ನಿನಲ್ಲಿ, ಒಂದು  ಸಂಘಟಿತ ಚಳುವಳಿಯ ರೂಪದಲ್ಲಿ ಬಲವಾದ ಸೌಹಾರ್ದವನ್ನು ಗಳಿಸಿತು. ಕಮ್ಯುನಿಸ್ಟ್ ಅಂತರ್ರಾಷ್ಟ್ರೀಯವು ಬಂಧನವನ್ನು ಖಂಡಿಸಿತು ಮತ್ತು ಬ್ರಿಟಿಷ್ ಕಾರ್ಮಿಕರು ಹಾಗೂ ಕಮ್ಯುನಿಸ್ಟರು ಒಂದು ದೃಢ ಸೌಹಾರ್ದ ಆಂದೋಲನವನ್ನು ಕಟ್ಟಿದರು, ಬಂಧಿತರಿಗೆ ನಿಧಿಗಳನ್ನು ಸಂಗ್ರಹಿಸಿದರು. ತೀವ್ರಗಾಮಿ ಬ್ರಿಟಿಷ್ ಪತ್ರಿಕೆಗಳು ಈ ವಿಷಯಕ್ಕೆ ಹೆಚ್ಚು ಪ್ರಚಾರ ಕೊಟ್ಟವು ಮತ್ತು ವಿಚಾರಣೆಯುದ್ದಕ್ಕೂ ಬಂಧಿತರ ಪರವಾಗಿ ಸಹಾನುಭೂತಿ ವ್ಯಕ್ತಪಡಿಸಿದವು. ೧೯೨೯ ರಿಂದ ೧೯೩೩ ರ ಕೊನೆಯವರೆಗೆ, ಮೀರಟ್ ಬಂಧಿತರಿಗಾಗಿನ ಸೌಹಾರ್ದದ ಚಳುವಳಿ ಒಂದು ಸಮರಶೀಲ ರಾಜಕೀಯ ಚಳುವಳಿಯಾಗಿ ಪರಿವರ್ತನೆಗೊಂಡಿತು; ಅದು ಭಾರತದ ಸ್ವಾತಂತ್ರ್ಯ ಚಳುವಳಿಗೆ ಬೆಂಬಲವಾಗಿ ಸಾರ್ವಜನಿಕ ಅಭಿಪ್ರಾಯವನ್ನು  ಮೂಡಿಸುವಲ್ಲಿ ಸಹಾಯಕವಾಯಿತು.

ಭಗತ್ ಸಿಂಗ್ ಮತ್ತವರ ಒಡನಾಡಿಗಳು, ತಾವೇ (ಲಾಹೋರ್ ಪಿತೂರಿ ಪ್ರಕರಣದಲ್ಲಿ) ವಿಚಾರಣೆಗೆ ಒಳಗಾಗಿದ್ದರೂ ಮೀರಟ್ ಬಂಧಿತರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಮದ್ರಾಸ್ ಪ್ರಾಂತದ ಸ್ವಾಭಿಮಾನ ಚಳುವಳಿಯ ಮುಖಂಡ ಪೆರಿಯಾರ್ ಇ.ವಿ. ರಾಮಸ್ವಾಮಿ ಮೀರಟ್ ಬಂಧಿತರ ಪರವಾಗಿ ಬಹಿರಂಗವಾಗಿಯೇ ಸಹಾನುಭೂತಿ ವ್ಯಕ್ತಪಡಿಸಿದರು. ಗಾಂಧಿಯನ್ನೂ ಒಳಗೊಂಡಂತೆ ಅನೇಕ ಕಾಂಗ್ರೆಸ್ ನಾಯಕರು ಬ್ರಿಟಿಷರನ್ನು ಖಂಡಿಸಿ ಮೀರಟ್ ಬಂಧಿತರಿಗೆ ಸಹಾನುಭೂತಿ ವ್ಯಕ್ತಪಡಿಸಿದರು.

ಕಲ್ಕತ್ತಾ, ಬೊಂಬಾಯಿ ಮತ್ತಿತರ ಕಾರ್ಮಿಕ ವರ್ಗದ ಪ್ರಾಬಲ್ಯವಿದ್ದ ಕಡೆಗಳಲ್ಲೆಲ್ಲಾ ಕಾರ್ಮಿಕರು ತಮ್ಮ ಮುಖಂಡರ ಬಂಧನವನ್ನು ಪ್ರತಿಭಟಿಸಿ ಕೆಲಸ ನಿಲ್ಲಿಸಿದರು. ಎಐಟಿಯುಸಿ ಬಹಿರಂಗವಾಗಿಯೇ ವಿಚಾರಣೆಯನ್ನು ಖಂಡಿಸಿತು. ಹಲವಾರು ನಗರಗಳಲ್ಲಿ ವಿದ್ಯಾರ್ಥಿಗಳು ಮತ್ತು ಯುವಜನರು ಪ್ರತಿಭಟನೆಗಳಲ್ಲಿ ಸೇರಿಕೊಂಡರು.

ಮೀರಟ್ ಸೌಹಾರ್ದ ಚಳುವಳಿಯು ಕಾರ್ಮಿಕ ವರ್ಗದ ಶಕ್ತಿ ಸಾಮರ್ಥ್ಯವನ್ನು ತೋರ್ಪಡಿಸಿತು. ಭಾರತದಲ್ಲಿ, ಈ ವಿಚಾರಣೆಯು ಕಮ್ಯುನಿಸ್ಟರಿಗೆ ಒಂದು ಆದರ್ಶ ವೇದಿಕೆಯಾಗಿ ಒಂದು ಸಮಾನ ತಿಳುವಳಿಕೆಯ ಆಧಾರದಲ್ಲಿ ಕಾರ್ಯತಂತ್ರಗಳನ್ನು ರೂಪಿಸಲು ಮತ್ತು ವಿಶಾಲ ತಳಹದಿಯಲ್ಲಿ ಪ್ರಚಾರ ಮಾಡಲು ಅವಕಾಶ ಒದಗಿಸಿತು. ೧೯೩೩ ರ ಅಂತ್ಯದಲ್ಲಿ ಕಮ್ಯುನಿಸ್ಟ್ ಬಂಧಿತರ ಬಿಡುಗಡೆಯಾದ ನಂತರ, ಪಕ್ಷವು ಒಂದು ಪ್ರಬಲವಾದ ರಾಜಕೀಯ ಹಾಗೂ ಸಂಘಟನಾತ್ಮಕ ಬುನಾದಿಯನ್ನು ಹೊಂದಿ ಚಟುವಟಿಕೆಗಳನ್ನು ಹರಡುವಲ್ಲಿ ಪಕ್ಷ ಸಮರ್ಥವಾಯಿತು. ರಾಷ್ಟ್ರೀಯ ವಿಮೋಚನೆಗೆ ಪರ್ಯಾಯ ಹಾದಿಯನ್ನು ಅರಸುತ್ತಿದ್ದ ಕ್ರಾಂತಿಕಾರಿ ರಾಷ್ಟ್ರೀಯವಾದಿಗಳ ನಡುವೆ ತನ್ನ ಬೆಂಬಲ ನೆಲೆಯನ್ನು ವಿಸ್ತರಿಸುವಲ್ಲಿ ಕೂಡ ಯಶಸ್ಸನ್ನು ಪಡೆಯಿತು.

ಏಕಕಾಲದಲ್ಲಿ ನಡೆಯುತ್ತಿದ್ದ ಮೀರಟ್ ಪಿತೂರಿ ಪ್ರಕರಣ ಮತ್ತು ಲಾಹೋರ್ ಪಿತೂರಿ ಪ್ರಕರಣಗಳಲ್ಲಿನ ಸಂಗತಿಗಳು ಮತ್ತು ವಾದಗಳು, ಭಾರತದ ಲಕ್ಷಾಂತರ ಯುವಜನರಿಗೆ ಸಾಮೂಹಿಕ ಕ್ರಾಂತಿಕಾರಿ ಹೋರಾಟಗಳ ಹಾದಿಯನ್ನು ಆಯ್ಕೆಮಾಡುವಲ್ಲಿ ಸಹಾಯ ಮಾಡಿದವು.

 

ಕನ್ನಡಕ್ಕೆ ಟಿ. ಸುರೇಂದ್ರ ರಾವ್

 

 

Leave a Reply

Your email address will not be published. Required fields are marked *