ಕೇಂದ್ರದಿಂದ ಕೇರಳದ 68.8% ವಲಸೆ ಕಾರ್ಮಿಕರಿಗೆ ಸಿಕ್ಕಿದ್ದು ಕೇವಲ 1.4% ಮೊತ್ತ

ಮೋದಿ ಸರಕಾರ ಕೇವಲ ನಾಲ್ಕು ಗಂಟೆಗಳ ಸಮಯಾವಕಾಶ ಕೊಟ್ಟು, ಯಾವುದೇ ಪರಿಹಾರ ಪ್ರಕಟಿಸದೆ ಲಾಕ್‌ಡೌನ್ ಘೋಷಿಸಿದಾಗ ಲಕ್ಷ-ಲಕ್ಷ ವಲಸೆ ಕಾರ್ಮಿಕರು ಅಕ್ಷರಶಃ ಬೀದಿಪಾಲಾದರು, ಬೇರೆ ದಾರಿಯಿಲ್ಲದೆ ತಂತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲಿ ಹೊರಟರು. ಇದರಿಂದ ಉಂಟಾದ ಪರಿಸ್ತಿತಿಯಿಂದ ಗಲಿಬಿಲಿಗೊಂಡ ಕೇಂದ್ರ ಸರಕಾರದ ಗೃಹ ಮಂತ್ರಾಲಯ ಎಲ್ಲ ರಾಜ್ಯಗಳ ಗಡಿಗಳನ್ನು ಮುಚ್ಚಲು ಆದೇಶ ನೀಡಿತು, ನಂತರವಷ್ಟೇ,  ಈ ವಲಸೆ ಕಾರ್ಮಿಕರಿಗೆ ಆಶ್ರಯ, ಆಹಾರ ಒದಗಿಸುವ ಪರಿಹಾರ ಕೇಂದ್ರಗಳನ್ನು ರಚಿಸುವಂತೆ ರಾಜ್ಯಗಳಿಗೆ ಸೂಚನೆ ನೀಡಿತು.

ಅ ವಲಸೆ ಕಾರ್ಮಿಕರು, ಅವರ ಮಕ್ಕಳು ರಸ್ತೆಗಳಲ್ಲಿ ನಡೆದು ಹೋಗುವ ದೃಶ್ಯ ಸಹಜವಾಗಿಯೇ ದೇಶದ ಎಲ್ಲ ಪ್ರಜಾಪ್ರಭುತ್ವವಾದಿಗಳ ಮನಕಲಕಿತು. ಕೇಂದ್ರ ಸರಕಾರದ ಇಂತಹ ವಿಫಲತೆಯ ಹಿನ್ನೆಲೆಯಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಹರ್ಷ್ ಮಂದರ್ ಮತ್ತು ಅಂಜಲಿ ಭಾರಧ್ವಾಜ್ ಸುಪ್ರಿಂಕೋರ್ಟಿನಲ್ಲಿ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದರು.

ಇದಕ್ಕೆ ಸಂಬಂಧಪಟ್ಟಂತೆ ಮೋದಿ ಸರಕಾರದ ಗೃಹ ಮಂತ್ರಾಲಯ ನ್ಯಾಯಾಲಯದಲ್ಲಿ ಒಂದು ವರದಿಯನ್ನು ಸಲ್ಲಿಸಬೇಕಾಗಿ ಬಂತು. ಇದರ ಪ್ರಕಾರ ದೇಶಾದ್ಯಂತ ೨೨, ೫೬೭ ಪರಿಹಾರ ಶಿಬಿರಗಳು ಮತ್ತು ಆಶ್ರಯಗಳಿದ್ದು ಇದರಲ್ಲಿ ೧೫,೫೪೧ ನ್ನು, ಅಂದರೆ ೬೮.೮ಶೇ.ವನ್ನು ಕೇರಳ ಸರಕಾರವೊಂದೇ ನಡೆಸುತ್ತಿದೆ. ಎರಡನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲೂ ಸರಕಾರ ನಡೆಸುತ್ತಿರುವ ಪರಿಹಾರ ಶಿಬಿರಗಳ ಸಂಖ್ಯೆ ಕೇವಲ ೧೧೩೫. ಇತರ ರಾಜ್ಯಗಳಲ್ಲಂತೂ ಈ ಸಂಖ್ಯೆ ಎರಡು ಮತ್ತು ಮೂರಂಕಿಗಳಿಗೇ ಸೀಮಿತವಾಗಿದೆ.

ದೇಶಾದ್ಯಂತ ೬,೩೧,೧೧೯ ಜನಗಳು ಸರಕಾರೀ ಪರಿಹಾರ ಕೇಂದ್ರಗಳಲ್ಲಿದ್ದಾರೆ. ಇದರಲ್ಲಿ ಕೇರಳದ ಪರಿಹಾರ ಕೆಂದ್ರಗಳಲ್ಲಿ ಇರುವವರ ಸಂಖ್ಯೆ ೩,೦೨,೦೧೬ ಅಥವ ೪೭.೯ಶೇ.

ಕೇರಳ ಸರಕಾರ ಲಾಕ್‌ಡೌನ್‌ ನ ಮೊದಲೇ ಅದು ಅತಿಥಿ ಕಾರ್ಮಿಕರೆಂದು ಹೆಸರಿಸಿದ ವಲಸೆ ಕಾರ್ಮಿಕರಿಗೂ ಸೇರಿದಂತೆ ಪರಿಹಾರ ಕ್ರಮಗಳನ್ನು ಪ್ರಕಟಿಸಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ದೇಶದಲ್ಲೇ ಮೊದಲಿಗೆ ಮಹಾಮಾರಿಯನ್ನು ತಡೆಗಟ್ಟುವ ಕಾರ್ಯಾಚರಣೆಯನ್ನು ಆರಂಭಿಸಿದ ಕೇರಳ, ಇದರಿಂದಾಗಿಯೇ ಕಳೆದ ವಾರದವರೆಗೂ ಸೋಂಕು ಪತ್ತೆಯಾದವರ ಸಂಖ್ಯೆಯ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು, ಈಗ ಐದನೇ ಸ್ಥಾನಕ್ಕಿಳಿದಿದೆ, ದೇಶದಲ್ಲಿ ಇದುವರೆಗೆ ದಾಖಲಾಗಿರುವ ೧೭೩ ಸಾವುಗಳಲ್ಲಿ ಕೇರಳದ ಸಂಖ್ಯೆ ಎರಡು ಮಾತ್ರ.

ಆದರೂ ಕೇಂದ್ರ ಸರಕಾರ ಕೊವಿಡ್ ಪರಿಹಾರ ಕಾರ್ಯಗಳಿಗೆ ಕೊಟ್ಟಿರುವ ೧೧,೦೯೨ ಕೋಟಿ ರೂ.ಗಳಲ್ಲಿ ಕೇರಳಕ್ಕೆ ಸಿಕ್ಕಿದ್ದು ಕೇವಲ ೧೫೭ ಕೋಟಿ ರೂ, ಅಂದರೆ ೧.೪%!

Leave a Reply

Your email address will not be published. Required fields are marked *