ಕಯ್ಯೂರು ಹುತಾತ್ಮರು: ಪ್ರಕಾಶಮಾನವಾಗಿ ಹೊಳೆಯುವ ತಾರೆಗಳು

ಭಾರತದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ, ಬಡ ರೈತ ಕುಟುಂಬದಲ್ಲಿ ಹುಟ್ಟಿದ ನಾಲ್ವರು ಎಳೆ ವಯಸ್ಸಿನ ಕಮ್ಯುನಿಸ್ಟರು, ಮದತ್ತಿಲ್ ಅಪ್ಪು, ಕುಙಂಬು ನಾಯರ್, ಚಿರುಕುಂಡನ್ ಮತ್ತು ಅಬೂಬಕರ್ ಮಾರ್ಚ್ 29, 1943ರಂದು ಗಲ್ಲಿಗೇರಿದರು. ಸ್ವಾತಂತ್ರ್ಯಕ್ಕಾಗಿ ಹೋರಾಡುವ ಅಜೇಯ ಸೇನೆಯನ್ನು, ಕಮ್ಯುನಿಸ್ಟ್ ಪಕ್ಷವನ್ನು ಸೇರಿದ ಅವರು ನಿಜವಾದ ದೇಶಪ್ರೇಮಿಗಳಾಗಿ ಬದುಕಿದರು, ತಮ್ಮ ತುಟಿಯ ಮೇಲೆ ‘ಕಮ್ಯುನಿಸ್ಟ್ ಪಕ್ಷ ಚಿರಾಯುವಾಗಲಿ’ ಎಂಬ ಘೋಷಣೆಯೊಂದಿಗೆ ಉದಾತ್ತ ಹುತಾತ್ಮರಾಗಿ ಮಡಿದರು. ಈ ಕಯ್ಯೂರಿನ ನಾಲ್ವರ ರಾಜಕೀಯ ಪರಿಪಕ್ವತೆ ಮತ್ತು ಸ್ಥೈರ್ಯ ಅಸಾಧಾರಣವಾಗಿತ್ತು.

ಕಮ್ಯುನಿಸ್ಟರ ನೇತೃತ್ವದ ಕ್ರಾಂತಿಕಾರಿ, ಸಾಮ್ರಾಜ್ಯಶಾಹಿ-ವಿರೋಧಿ ಚಳುವಳಿಯ ಅವಿಭಾಜ್ಯ ಅಂಗ ಈ ಕಯ್ಯೂರು ಹುತಾತ್ಮರ ಧೀರೋದಾತ್ತ ವೀರಗಾಥೆ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿರುವ ಅಂದಿನ ಕಣ್ಣೂರು ಜಿಲ್ಲೆಗೆ ಹೊಂದಿಕೊಂಡಿರುವ ಒಂದು ಪುಟ್ಟ ಹಳ್ಳಿಯೇ ಈ ಕಯ್ಯೂರು. ಅದು ಮದ್ರಾಸ್ ಪ್ರಾಂತ್ಯದ ಮಲಬಾರ್ ಪ್ರದೇಶದ ಭಾಗವಾಗಿತ್ತು. ಈಗ  ಕಯ್ಯೂರು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಇದೆ.

ಕಯ್ಯೂರು ಕಮ್ಯುನಿಸ್ಟರೆಂದು ಜನಪ್ರಿಯರಾದ ಮದತ್ತಿಲ್ ಅಪ್ಪು, ಕುಙಂಬು ನಾಯರ್, ಚಿರುಕುಂಡನ್, ಅಬೂಬಕರ್ ಈ ನಾಲ್ಕು ಯುವ ಕಮ್ಯುನಿಸ್ಟ್ ದೇಶಪ್ರೇಮಿಗಳನ್ನು 1943ರ ಮಾರ್ಚ್ 29 ರಂದು ಗಲ್ಲಿಗೇರಿಸಲಾಯಿತು. ಅವರೆಲ್ಲರೂ 25 ವರ್ಷ ವಯಸ್ಸಿನೊಳಗಿನವರಾಗಿದ್ದರು, ಆದರೆ ಆ ಹಳ್ಳಿಯ ಜನಪ್ರಿಯ ಮುಖಂಡರಾಗಿದ್ದರು. ಅವರು ಕಿಸಾನ್ ಸಭಾ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮತ್ತು 1938-41ರ ಅವಧಿಯಲ್ಲಿ ಆ ಜಿಲ್ಲೆಯಲ್ಲಿನ ಜೆನ್ಮಿಗಳು (ಜಮೀನುದಾರರು) ಮತ್ತು ಸರ್ಕಾರದ ದಾಳಿ ದಬ್ಬಾಳಿಕೆಗಳ ವಿರುದ್ಧ ಒಂದು ವೀರೋಚಿತ ರೈತ ಚಳುವಳಿಯನ್ನು ಕಟ್ಟಿದ್ದರು. ಪೋಲಿಸರು ಆ ಯುವಕರ ದೇಶಪ್ರೇಮವನ್ನು ದ್ವೇಷಿಸುತ್ತಿದ್ದರೆ, ರೈತರನ್ನು ಬಡಿದೆಬ್ಬಿಸಿ ಕ್ರಿಯಾಶೀಲರನ್ನಾಗಿ ಮಾಡಿದ್ದಕ್ಕೆ ಜಮೀನುದಾರರು ಅವರನ್ನು ದ್ವೇಷಿಸುತ್ತಿದ್ದರು.

ಆ ತಾಲೂಕಿನ ರೈತರಿಗೆ ಗೇಣಿ ಹಕ್ಕು ಇರಲಿಲ್ಲ ಮತ್ತು ಅವರನ್ನು ತಲೆ ಎತ್ತದಂತೆ ತುಳಿಯಲಾಗಿತ್ತು. ವಿಶ್ವ ಯುದ್ಧ ಆರಂಭವಾಗಿತ್ತು ಮತ್ತು ಅದನ್ನು ಕಮ್ಯುನಿಸ್ಟರು ವಿರೋಧಿಸುತ್ತಿದ್ದರಿಂದ ಬ್ರಿಟಿಷರ ಕ್ರೌರ್ಯ ಅವರ ಮೇಲೆ ಇನ್ನೂ ತೀವ್ರವಾಗಿತ್ತು. ಮಲಬಾರ್ ವಿಶೇಷ ಪೋಲಿಸರ ತುಕಡಿಯೊಂದು ಆ ಪ್ರದೇಶದಲ್ಲಿ ಬೀಡು ಬಿಟ್ಟಿತ್ತು. ಮನೆ ತಪಾಸಣೆ ಮಾಡುವ ನೆಪವೊಡ್ಡಿ ಪೋಲಿಸರು ಅವುಗಳ ಲೂಟಿ ಮಾಡಿದ್ದರು. ವಿಚಾರಣೆಯ ಹೆಸರಿನಲ್ಲಿ ರೈತಾಪಿ ಜನರನ್ನು ಹಿಡಿದು ಬಡಿದರು. ಈ ದರ್ಪ-ದಬ್ಬಾಳಿಕೆಯ ವಿರುದ್ಧ ಪ್ರತಿಭಟಿಸಲು 1941ರ ಮಾರ್ಚ್ 28ರಂದು ಕಯ್ಯೂರಿನಲ್ಲಿ ಒಂದು ಮತಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಮೆರವಣಿಗೆ ಬರುತ್ತಿರುವಾಗ ಆ ಹಳ್ಳಿಯಲ್ಲಿ ನೇಮಕವಾಗಿದ್ದ ಪೋಲಿಸನೊಬ್ಬ ಅಡ್ಡ ಬಂದು ಮುಸ್ಲಿಂ ರೈತ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ. ಅಲ್ಲಿ ಸೇರಿದ್ದ ರೈತರು ಅವನಿಗೆ ಕಲ್ಲಿನಿಂದ ಹೊಡೆದರೆಂದು ಮತ್ತು ಓಡಿದ ಅವನನ್ನು ಹಿಂಬಾಲಿಸಿದರೆಂದು, ಆಗ ಆ ಪೋಲಿಸ್ ನದಿಗೆ ಹಾರಿ ಸತ್ತನೆಂದು ಹೇಳಲಾಯಿತು. ಈ ಕಾರಣಕ್ಕಾಗಿ ಆ ಸಂಗಾತಿಗಳನ್ನು ನೇಣುಗಂಬಕ್ಕೆ ಏರಿಸಲಾಯಿತು.

ಇಂತಹ ಘಟನೆಗಳಲ್ಲಿ ತಪ್ಪಿತಸ್ಥರು ಯಾರು ಎಂದು ಗುರುತಿಸುವುದು ಕಷ್ಟ ಎಂದು ನ್ಯಾಯಾಲಯದ ನ್ಯಾಯಾಧೀಶರು ಒಪ್ಪಿಕೊಂಡರು. ತಿಂಗಳುಗಟ್ಟಲೆ ಪೋಲಿಸರು ಹೇಳಿಕೊಟ್ಟಿದ್ದರೂ ಸಹ ಸಾಕ್ಷಿಗಳು ಸುಸಂಬದ್ಧವಾಗಿ ಸಾಕ್ಷ್ಯ ಹೇಳುವಲ್ಲಿ ವಿಫಲರಾದರು. ಅವರ ಪುರಾವೆಗಳಲ್ಲಿ ಹಲವಾರು ವಿರೋಧಾಭಾಸದ ಹೇಳಿಕೆಗಳಿದ್ದವು, ಹಾಗಾಗಿ ಆ ಪ್ರಕರಣ ನಿಲ್ಲುವುದಿಲ್ಲ ಎಂದು ಎಲ್ಲರೂ ಭಾವಿಸಿದರು. ಇಷ್ಟೆಲ್ಲಾ ಸತ್ಯಾಂಶಗಳು ಇರುವಾಗಲೂ, ನ್ಯಾಯಾಧೀಶರು ಅವರಿಗೆ ಶಿಕ್ಷೆ ವಿಧಿಸಿ ನಾಲ್ವರಿಗೂ ಮರಣ ದಂಡನೆಯ ತೀರ್ಪನ್ನಿತ್ತರು. ಪಕ್ಷವು ತನ್ನೆಲ್ಲಾ ಪ್ರಯತ್ನಗಳನ್ನು ಮಾಡಿ ಮೇಲಿನ ನ್ಯಾಯಾಲಯಗಳಲ್ಲಿ ಮನವಿ ಸಲ್ಲಿಸಿದ್ದಾಗ್ಯೂ ಅವು ತಿರಸ್ಕರಿಸಲ್ಪಟ್ಟವು.

ಈ ಕಯ್ಯೂರಿನ ನಾಲ್ವರ ರಾಜಕೀಯ ಪರಿಪಕ್ವತೆ ಮತ್ತು ಸ್ಥೈರ್ಯ ಅಸಾಧಾರಣವಾಗಿತ್ತು. ಪಕ್ಷಕ್ಕೆ ಮತ್ತು ತಾಯಿನಾಡಿನ ವಿಮೋಚನೆಗಾಗಿ ಅದರ ಹೋರಾಟಕ್ಕೆ ತಮ್ಮ ಅದಮ್ಯ ನಿಷ್ಠೆಯನ್ನು ಘೋಷಿಸಿ ಅವರು ಅನೇಕ ಪತ್ರಗಳನ್ನು ಬರೆದಿದ್ದರು. ಅವರು ನೇಣುಗಂಬಕ್ಕೆ ಹೋಗುವ ಕೆಲವು ದಿನಗಳ ಮುಂಚೆ ಅವರು ಧೈರ್ಯೋತ್ಸಾಹಗಳನ್ನು ಬಡಿದೆಬ್ಬಿಸುವ ಪತ್ರವೊಂದನ್ನು ಜನರಿಗೆ ಬರೆದಿದ್ದರು. ಆ ಪತ್ರದ ಒಟ್ಟು ಸಾರಾಂಶ ಹೀಗಿದೆ:

“ನಮ್ಮ ಮಾಫಿ ಮನವಿಪತ್ರವು ಭಾರತದ ವೈಸ್‌ರಾಯರಿಂದಲೂ ತಿರಸ್ಕರಿಸಲ್ಪಟ್ಟಿರುವ ಮತ್ತು ನಾವು ನೇಣುಗಂಬಕ್ಕೆ ಹತ್ತಿರವಾಗುತ್ತಿದ್ದೇವೆಂಬ ಸಂಗತಿ ಇಷ್ಟೊತ್ತಿಗಾಗಲೇ ನಿಮಗೆಲ್ಲಾ ತಿಳಿದಿದೆಯೆಂದು ನಾವು ಭಾವಿಸುತ್ತೇವೆ. ಈ ತಿರಸ್ಕಾರದ ಸುದ್ದಿ ಕೇಳಿಸಿಕೊಳ್ಳಲು ನಮಗೆ ಅತ್ಯಾನಂದವಾಗಿದೆ, ಅದು ಇತರರಿಗೆ ಸಹಜವಾಗಿಯೇ ಪ್ರಿಯವಾಗದ ಸಂಗತಿ. ಈಗ ಪ್ರೀವಿ ಕೌನ್ಸಿಲ್ಲಿಗೆ ಸಲ್ಲಿಸಿದ ಮನವಿ ಮಾತ್ರ ಉಳಿದಿದೆ. ಈ ಮನವಿಯ ಅಂತಿಮ ಫಲಿತಾಂಶದ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಮಗೆ ಆ ತೀರ್ಪಿನ ಬಗ್ಗೆ ಆಸಕ್ತಿಯೂ ಇಲ್ಲ. ನಮ್ಮ ವ್ಯಕ್ತಿತ್ವ ನಮ್ಮದಲ್ಲ, ಏಕೆಂದರೆ ಅದು ಜಗತ್ತಿನ ಎಲ್ಲಾ ಜನರಿಗೆ ಸೇರಿದ್ದು ಎಂದು ನಾವು ನಂಬಿದ್ದೇವೆ. ನಮ್ಮ ದೇಶಕ್ಕಾಗಿ ನಾವು ಸಾಯುತ್ತಿದ್ದೇವೆ ಎಂದು ನಮಗೆ ಹೆಮ್ಮೆಯಾಗುತ್ತಿದೆ. ನಾವು ಹೇಡಿಗಳೆಂದು ತಿಳಿಯಬೇಡಿ; ನಾವು ಧೈರ್ಯವಾಗಿ ನಿಜವಾದ ದೇಶಪ್ರೇಮಿಗಳಂತೆ ಮತ್ತು ಹುತಾತ್ಮರಂತೆ ಸಾವನ್ನು ಎದುರಿಸಲು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ. ನಾವೀಗ ನೇಣುಗಂಬವನ್ನು ಅಪ್ಪಿಕೊಂಡರೆ, ನಮ್ಮ ಮುಂದಿನ ತಲೆಮಾರು ನಮ್ಮ ತ್ಯಾಗವನ್ನು ಎಂದೆಂದಿಗೂ ಹಾಡಿಹೊಗಳುತ್ತದೆ. ನಾವು ಇದನ್ನು ಒಂದು ಅಸಾಧಾರಣವಾದ ಸುಯೋಗವೆಂದು ಪರಿಗಣಿಸುತ್ತೇವೆ ಮತ್ತು ನಮ್ಮ ದೇಶದ ಸ್ವಾತಂತ್ರ್ಯಯಕ್ಕಾಗಿ ಸಾವನ್ನು ಎದುರಿಸಲು ದೊರೆತ ಅವಕಾಶವಿದೆಂದು ನಾವು ತಿಳಿಯುತ್ತೇವೆ. ಜೈಲಿನ ಕಂಬಿಗಳ ಹಿಂದೆ ನಮ್ಮ ಬದುಕಿನ ಪ್ರತಿಯೊಂದು ನಿಮಿಷವನ್ನೂ ಅತ್ಯಂತ ಸಂತೋಷದಿಂದ ನಮ್ಮ ಪವಿತ್ರ ತಾಯ್ನಾಡನ್ನು ಕೊಂಡಾಡುವ ಹಾಡುಗಳನ್ನು ಹಾಡುತ್ತಾ ಕಳೆಯುತ್ತಿದ್ದೇವೆ. ಭಗತ್‌ಸಿಂಗ್‌ನಂತಹ ದೇಶಪ್ರೇಮಿಗಳ ವೀರೋಚಿತ ಅಂತ್ಯವು ನಮಗೆ ಸ್ಪೂರ್ತಿದಾಯಕ. ಜಗತ್ತಿನ ಶ್ರಮಜೀವಿಗಳ ನಾಯಕ ಸಂಗಾತಿ ಲೆನಿನ್ ಅವರು ಝಾರ್‌ನ ಆಳ್ವಿಕೆಯನ್ನು ಕೊನೆಗೊಳಿಸಿ ಯಶಸ್ವೀ ಕ್ರಾಂತಿಯನ್ನು ಮಾಡುವ ಮುಂಚೆ ಅನುಭವಿಸಿದ ಅಸಂಖ್ಯಾತ ಕಷ್ಟನಷ್ಟಗಳನ್ನೂ ಕೂಡ ನಾವಿಲ್ಲಿ ನೆನೆಯುತ್ತೇವೆ.”

“ಪ್ರೀವಿ ಕೌನ್ಸಿಲ್ಲಿನಲ್ಲಿ ಒಂದು ಮನವಿ ಪತ್ರವನ್ನು ಸಲ್ಲಿಸಿರುವುದಾಗಿ ಮತ್ತು ಎಲ್ಲಾ ಜನರೂ, ಬಹು ಮುಖ್ಯವಾಗಿ ಕಮ್ಯುನಿಸ್ಟ್ ಪಕ್ಷವು ತಮ್ಮ ಕೈಲಾದ ಎಲ್ಲವನ್ನೂ, ಮನುಷ್ಯ ಮಾತ್ರದವರು ಮಾಡಬಹುದಾದ ಎಲ್ಲವನ್ನೂ ನಿಮ್ಮ ಜೀವ ಉಳಿಸಲು ಪ್ರಯತ್ನ ಮಾಡುತ್ತಿರುವುದಾಗಿ ಸಂಗಾತಿ ಕುಮಾರಮಂಗಳ ಪತ್ರ ಬರೆದು ತಿಳಿಸಿದ್ದಾರೆ. ಇದೇ ಸುದ್ದಿಯನ್ನು ಆಗಾಗ ನಮ್ಮ ಸಂದರ್ಶನ ಮಾಡಲು ಬರುತ್ತಿರುವ ನಮ್ಮ ಕೇರಳ ಸಂಗಾತಿಗಳಿಂದಲೂ ಪಡೆಯುತ್ತಿದ್ದೇವೆ.”

“ಫ್ಯಾಸಿಸಂನ್ನು ಸದೆಬಡಿಯಲು ಮತ್ತು ಬಲಿಷ್ಠರು ದುರ್ಬಲರ ಮೇಲೆ ನಡೆಸುವ ತಮ್ಮ ಆಕ್ರಮಣ ಮತ್ತು ಪ್ರಾಬಲ್ಯದಿಂದ ಭವಿಷ್ಯದ ವಿಶ್ವವನ್ನು ರಕ್ಷಿಸಲು ಹೊರಗಡೆ ಇರುವ ನಮ್ಮ ಸಂಗಾತಿಗಳು ವಿಶ್ವ ಸಂಸ್ಥೆಯ ಜನಗಳೊಂದಿಗೆ ನಮ್ಮ ಜನಗಳನ್ನೂ ಅಣಿನೆರೆಸಲು ತಮ್ಮೆಲ್ಲಾ ಶಕ್ತಿಯನ್ನು ವಿನಿಯೋಗಿಸುತ್ತಿರುವುದನ್ನು ಕೇಳಲು ನಮಗೆ ಬಹಳ ಸಂತಸವಾಗುತ್ತಿದೆ. ಜಪಾನಿ ಕ್ರೂರಿಗಳ ವಿರುದ್ಧ ಮತ್ತು ನಮ್ಮ ತಾಯ್ನಾಡಿನ ವಿಮೋಚನೆಗಾಗಿ ಹೋರಾಡುವಲ್ಲಿ ನಮ್ಮ ಪಾಲಿನ ಕೆಲಸವನ್ನು ಮಾಡಲಾಗಲಿಲ್ಲ ಎನ್ನುವ ಬೇಸರ ನಮಗಿದೆ.”

“ಜೈಲಿನ ಕಂಬಿಯ ಹಿಂದಿನಿಂದ ನಮ್ಮ ಸಂಗಾತಿಗಳಿಗೆ ನಮ್ಮ ಮನಃಪೂರ್ವಕ ಪ್ರಾರ್ಥನೆ ಏನೆಂದರೆ ಅವರು ತಮ್ಮ ಕಠಿನ ಹಾಗೂ ನಿಷ್ಠಾವಂತ ಕೆಲಸಗಳ ಶಕ್ತಿಯಿಂದ ಜನರಿಗೆ ಮಾದರಿಯಾಗಬೇಕು ಮತ್ತು ಜನರಲ್ಲಿ ಧೈರ್ಯ ಮತ್ತು ಉತ್ಸಾಹಗಳನ್ನು ತುಂಬಿ ಅವರೂ ಒಗ್ಗಟ್ಟಾಗಿ ಮುಂದೆ ಬಂದು ತಮ್ಮದೆಲ್ಲವನ್ನೂ ದೇಶಕ್ಕಾಗಿ ತ್ಯಾಗ ಮಾಡುವಂತೆ ಸ್ಪೂರ್ತಿ ನೀಡಬೇಕು. ನಮಗೆ ಯಾವುದೇ ಆತಂಕ ಕಳವಳಗಳಿಲ್ಲ ಅಥವಾ ನಿರುತ್ಸಾಹಗೊಂಡಿಲ್ಲ. ನಮ್ಮ ನಾಡಿನ ಅನೇಕ ವೀರಾಧಿವೀರರು ಹುತಾತ್ಮರಾದ ಚರಿತ್ರೆಯು ನಮ್ಮ ದೇಶದ ಉದಾತ್ತ ಕಾರಣಗಳಿಗಾಗಿ ಸಾವನ್ನು ಧೈರ್ಯದಿಂದ ಎದುರಿಸಲು ನಮಗೆ ಸಾಕಷ್ಟು ಸ್ಪೂರ್ತಿಯನ್ನು ಮತ್ತು ಸಮಾಧಾನವನ್ನು ನೀಡುತ್ತದೆ. ಅಂತಿಮವಾಗಿ ಜಗತ್ತಿನ ಜನರು ಜಯ ಸಾಧಿಸುತ್ತಾರೆ ಮತ್ತು ಜಗತ್ತಿನ ಭವಿಷ್ಯವು ಕಾಂತಿಪೂರ್ಣವಾಗಿಯೂ ಹಾಗೂ ಕೀರ್ತಿದಾಯಕವಾಗಿಯೂ ಇರುತ್ತದೆ ಎಂಬ ಸಂಪೂರ್ಣ ಭರವಸೆ ನಮಗಿದೆ. ಏನೇ ಆಗಲಿ ರಾಷ್ಟ್ರೀಯ ಐಕ್ಯತೆಯನ್ನು ಸಾಧಿಸಿ, ನಮ್ಮ ರಾಷ್ಟ್ರೀಯ ವಿಮೋಚನೆಗೆ ಅದೊಂದೇ ದಾರಿ. ಕಮ್ಯುನಿಸ್ಟ್ ಪಕ್ಷ ಚಿರಾಯುವಾಗಲಿ, ಇಂಕ್‌ಲಾಬ್ ಜಿಂದಾಬಾದ್”

ಅವರನ್ನು ನೇಣಿಗೆ ಹಾಕುವ ಸ್ವಲ್ಪ ದಿನಗಳ ಮುಂಚೆ, ಪಕ್ಷದ ಪ್ರಧಾನ ಕಾರ್ಯದರ್ಶಿ, ಪಿ.ಸಿ. ಜೋಶಿಯವರು ಆ ನಾಲ್ಕು ಸಂಗಾತಿಗಳನ್ನು ಭೇಟಿ ಮಾಡಿ ಇಡೀ ಪಕ್ಷದ ಪರವಾಗಿ ಶುಭಾಶಯಗಳನ್ನು ಕೋರಬೇಕೆಂದು ತೀರ್ಮಾನಿಸಲಾಗಿತ್ತು. ಅವರ ಜತೆ ಪಿ.ಸುಂದರಯ್ಯ ಹಾಗೂ ಕೃಷ್ಣ ಪಿಳ್ಳೆ ಹೋದರು, ದೇಶದೆಲ್ಲೆಡೆಯಿಂದ ಕಾರ್ಮಿಕರು ಮತ್ತು ರೈತರು ಬರೆದಿದ್ದ ಸೌಹಾರ್ದತೆಯ ಪತ್ರಗಳ ಒಂದು ದೊಡ್ಡ ಮೂಟೆಯನ್ನೇ ಕೊಂಡೊಯ್ದಿದ್ದರು.

kayyur martyrsಅವರ ಜತೆಯಲ್ಲಿ ಮಾಡಿದ ಸಂಭಾಷಣೆಗಳನ್ನು ನೆನೆಯುತ್ತಾ ಪಿ.ಸಿ.ಜೋಷಿಯವರು ಬರೆಯುತ್ತಾರೆ:

“ಪಕ್ಷದ ಪರವಾಗಿ ನಾನು ಅವರಿಗೆ ಹೇಳಿದೆ: ತನ್ನ ಬೇರೆಲ್ಲಾ ಸದಸ್ಯರಿಗಿಂತ ನೀವು ನಾಲ್ಕು ಸಂಗಾತಿಗಳ ಬಗ್ಗೆ ಪಕ್ಷ ಹೆಮ್ಮೆಪಡುತ್ತದೆ… ನಾವು 17,000 ಪಕ್ಷದ ಸದಸ್ಯರೆಲ್ಲರೂ ನಿಮಗೆ ಪ್ರತಿಜ್ಙೆ ಮಾಡುತ್ತೇವೆ ನೀವು ಇಷ್ಟೊಂದು ಸುಯೋಗ್ಯವಾಗಿ ಎತ್ತಿ ಹಿಡಿದ ಬಾವುಟವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುತ್ತೇವೆ ಮತ್ತು ನೀವು ವೀರೋಚಿತವಾಗಿ ನಡೆಸಿದ ಹೋರಾಟವನ್ನು ಮುಂದುವರಿಸುತ್ತೇವೆ… ಪಕ್ಷ ನಿಮ್ಮನ್ನು ಕಳೆದುಕೊಳ್ಳುತ್ತಿಲ್ಲ, ನಾಲ್ಕು ಹುತಾತ್ಮರನ್ನು ಪಡೆಯುತ್ತಿದೆ. ಅವರು ನಿಮ್ಮನ್ನು ನೇಣುಗಂಬಕ್ಕೆ ಹಾಕಲಿ, ಇವತ್ತು ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ನಿಮ್ಮ ನಾಲ್ವರಿಂದ ಸ್ಪೂರ್ತಿ ಪಡೆದು, ನಾವು ನಾಲ್ಕು ನೂರು ಜನರನ್ನು ಪಡೆಯುತ್ತೇವೆ, ನಾಲ್ಕು ಸಾವಿರ ಜನ ಹೊಸ ಸದಸ್ಯರನ್ನು ಪಕ್ಷಕ್ಕೆ ತರುತ್ತೇವೆ. ಅವರು ಇದನ್ನು ತಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ನಾವು ಕೆಲಸ ಮಾಡುತ್ತೇವೆ. ಸಂಗಾತಿಗಳೇ, ನಾವು ಇದನ್ನು ಗೆದ್ದೇ ಗೆಲ್ಲುತ್ತೇವೆಂದು ಭರವಸೆ ನೀಡುತ್ತೇವೆ. ನಮ್ಮ ಗುರಿ ಹೇಗೆ ಅಮರವೋ, ಅದರ ಸಾಧನ, ಪಕ್ಷ ಕೂಡ ಅಮರ. ನೀವು ಜನರನ್ನು ನಿಮ್ಮ ಪೋಷಕರೆಂದು ಒಪ್ಪಿಕೊಂಡಿರಿ ಮತ್ತು ನಿಮ್ಮ ಪೋಷಕರು ಅನುಭವಿಸಿದಂತೆ ಭಾರತದ ಬೇರೆ ಯಾವ ತಂದೆ ಅಥವಾ ತಾಯಿಯರೂ ಅನುಭವಿಸದಿರಲಿ ಎಂದು ನೀವು ಕೆಲಸ ಮಾಡಿದಿರಿ. ಭರವಸೆ ಇಡಿ ಸಂಗಾತಿಗಳೇ, ನಾವು ಪಕ್ಷದ 17,000 ಸದಸ್ಯರೂ, ನಿಮ್ಮ ತಂದೆ ತಾಯಿಯನ್ನು ನಮ್ಮ ಅಪ್ಪ ಅಮ್ಮನಂತೆ ನೋಡಿಕೊಳ್ಳುತ್ತೇವೆ. ಪಕ್ಷವೇ ತಮ್ಮ ಕುಟುಂಬ ಮತ್ತು ಪಕ್ಷದ ಪ್ರತಿಯೊಬ್ಬ ಸದಸ್ಯರೂ ತಮ್ಮ ಮಗ/ಮಗಳು ಎಂದು ನಿಮ್ಮ ಪೋಷಕರು ಭಾವಿಸುವಂತೆ ನಮ್ಮ ಕೈಲಾದ ಎಲ್ಲಾ ಪ್ರಯತ್ನಗಳನ್ನೂ ನಾವು ಮಾಡುತ್ತೇವೆ. ನಿಮ್ಮನ್ನು ಭೇಟಿಯಾಗಲು ಸಿಕ್ಕ ಈ ಅವಕಾಶ ನನ್ನ ಬದುಕಿನ ಅತ್ಯಂತ ಮಹತ್ವದ್ದು…”

ಉತ್ತರವಾಗಿ ಕುಙಂಬು ಹೇಳಿದರು: “ನಾನು ಜನರಿಗಾಗಿ ಏನೆಲ್ಲ ಮಾಡಿದನೋ ಅದನ್ನು ಮಾಡುವ ಸಾಮರ್ಥ್ಯವನ್ನು ಪಕ್ಷ ನನಗೆ ನೀಡಿದೆ. ನಾನು ನನ್ನ ಕರ್ತವ್ಯ ಮಾಡಿದ್ದೇನೆ ಎಂದು ಪಕ್ಷ ಎಣಿಸಿದರೆ ಅದೇ ನಾನು ಸದಾ ಬಯಸಿದ ಸನ್ಮಾನ.”

ಚಿರಕುಂಡನ್: “ನಾವು ನಾಲ್ವರು ರೈತರ ಮಕ್ಕಳು. ಆದರೆ ಭಾರತವು ಲಕ್ಷಾಂತರ ರೈತರನ್ನು ಹೊಂದಿದೆ. ನಮ್ಮನ್ನು ನೇಣಿಗೆ ಹಾಕಬಹುದು, ಆದರೆ ಅವರನ್ನು ನಾಶ ಮಾಡಲು ಸಾಧ್ಯವಿಲ್ಲ.”

ಅಪ್ಪು: “ಪಕ್ಷ ಶಕ್ತಿಶಾಲಿಯಾಗಿ ಬೆಳೆಯುತ್ತಿದೆ ಎಂಬ ದೊಡ್ಡ ಸುದ್ದಿಯನ್ನು ನೀವು ತಂದಿದ್ದೀರಿ. ಈಗ ನಾವು ಇನ್ನೂ ಹೆಚ್ಚು ಶಕ್ತಿಯಿಂದ ಗಲ್ಲುಗಂಬ ಏರುತ್ತೇವೆ.”

ಅಬೂಬಕರ್: “ನಾವು ನಮ್ಮ ಹುತಾತ್ಮರಿಂದ ಸ್ಪೂರ್ತಿಯನ್ನು ಪಡೆದಿದ್ದೇವೆ. ಅವರಲ್ಲಿ ಒಬ್ಬರಾಗಿ ಆ ಗೌರವವನ್ನು ಪಡೆಯುತ್ತೇವೆ ಎಂಬ ಕನಸನ್ನು ಎಂದಿಗೂ ಕಂಡಿರಲಿಲ್ಲ. ನಮ್ಮ ಸಂಗಾತಿಗಳಿಗೆ ಹೇಳಿ  ನಾವು ಯಾವುದೇ ಅಳುಕಿಲ್ಲದೇ ಗಲ್ಲುಗಂಬ ಏರುತ್ತೇವೆ ಎಂದು… ನನ್ನ ಸೋದರರು ಬಹಳ ಚಿಕ್ಕವರು. ಪಕ್ಷದ ಕೆಲಸಕ್ಕಾಗಿ ಅವರಿಗೆ ವಿದ್ಯೆ ಕಲಿಸಿ.”

ಜೋಷಿಯವರು ಕಣ್ಣೀರಿನೊಂದಿಗೆ ಆ ನಾಲ್ಕು ಸಂಗಾತಿಗಳ ಕೈಕುಲುಕಿದರು, ಜೈಲಿನಲ್ಲಿನ ಹೂವುಗಳತ್ತ ಕೈ ತೋರಿಸಿ ಹೇಳಿದರು: “ಈ ಹೂವುಗಳು ಬೇಗನೆ ಬಾಡಿಹೋಗುತ್ತವೆ. ಮಾನವೀಯತೆಯ ಹೂವುಗಳಾದ ನೀವು ಸಂಗಾತಿಗಳು ಎಂದೆಂದಿಗೂ ಬಾಡುವುದಿಲ್ಲ.”

ಭಾರತದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ, ಬಡ ರೈತ ಕುಟುಂಬದಲ್ಲಿ ಹುಟ್ಟಿದ ನಾಲ್ವರು ಕಮ್ಯುನಿಸ್ಟರು ಮಾರ್ಚ್ 29, 1943 ರಂದು ಗಲ್ಲಿಗೇರಿದರು. ವಯಸ್ಸಿನಲ್ಲಿ ಸಣ್ಣವರಾದ ಅವರು, ಸ್ವಾತಂತ್ರ್ಯಕ್ಕಾಗಿ ಹೋರಾಡುವ ಅಜೇಯ ಸೇನೆಯನ್ನು, ಕಮ್ಯುನಿಸ್ಟ್ ಪಕ್ಷವನ್ನು ಸೇರಿದರು. ನಿಜವಾದ ದೇಶಪ್ರೇಮಿಗಳಾಗಿ ಬದುಕಿದರು, ತಮ್ಮ ತುಟಿಯ ಮೇಲೆ ‘ಕಮ್ಯುನಿಸ್ಟ್ ಪಕ್ಷ ಚಿರಾಯುವಾಗಲಿ’ ಎಂಬ ಘೋಷಣೆಯೊಂದಿಗೆ ಉದಾತ್ತ ಹುತಾತ್ಮರಾಗಿ ಮಡಿದರು.

ಜನರ ಆಕ್ರೋಶಕ್ಕೆ ಹೆದರಿ, ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ಸೇರಿದ್ದ ಜನರಿಗೆ ಹುತಾತ್ಮ ಸಂಗಾತಿಗಳ ದೇಹವನ್ನು ಹಸ್ತಾಂತರಿಸಲೂ ಬ್ರಿಟಿಷ್ ಸರ್ಕಾರ ನಿರಾಕರಿಸಿತು.

ಆ ಪ್ರದೇಶದಲ್ಲಿ ಬೆಳೆಯುತ್ತಿದ್ದ ಕಮ್ಯುನಿಸ್ಟ್ ಚಳುವಳಿಯನ್ನು ಬಗ್ಗುಬಡಿಯಬೇಕೆಂಬ ಬ್ರಿಟಿಷರ ಎಲ್ಲಾ ಪ್ರಯತ್ನಗಳು ವಿಫಲವಾದವು. ವ್ಯತಿರಿಕ್ತವಾಗಿ, ಆ ಅವಧಿಯಲ್ಲಿ ಮೊರಾಜ, ಕರಿವೆಲ್ಲೂರು ಮತ್ತು ಕಯ್ಯೂರಿನಲ್ಲಿ ನಡೆದ ಉಗ್ರಸ್ವರೂಪದ ಹೋರಾಟಗಳಲ್ಲಿ ಕಂಡಂತೆ ಸಾಮ್ರಾಜ್ಯಶಾಹಿ ಮತ್ತು ಪಾಳೇಗಾರಿ ಪದ್ಧತಿಯ ವಿರುದ್ಧ ಒಂದು ಪರಿಣಾಮಕಾರಿ ಹೋರಾಟದ ಶಕ್ತಿಯಾಗಿ ಕಮ್ಯುನಿಸ್ಟ್ ಪಕ್ಷ ಹೊರಹೊಮ್ಮಿತು.

ಕನ್ನಡಕ್ಕೆ: ಟಿ. ಸುರೇಂದ್ರ ರಾವ್

Leave a Reply

Your email address will not be published. Required fields are marked *