ವೆನೆಜುವೆಲಾದ ಒಳಕ್ಕೆ ಹಠಾತ್ ಸಶಸ್ತ್ರ ದಾಳಿ: ಸಿಪಿಐ(ಎಂ) ಖಂಡನೆ

ವೆನೆಜುವೆಲಾದ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಕೊಲಂಬಿಯಾದಿಂದ ವೆನೆಜುವೆಲಾದ ಒಳಕ್ಕೆ ಮೇ 3ರಂದು ಹಠಾತ್ ಸಶಸ್ತ್ರ ದಾಳಿಯನ್ನು ನಡೆಸಿರುವುದನ್ನು ಸಿಪಿಐ(ಎಂ) ಖಂಡಿಸಿದೆ.

ಎರಡು ದಿನಗಳಿಂದ ಸಶಸ್ತ್ರ ಬಾಡಿಗೆ ಸೈನಿಕರ ಎರಡು ಗುಂಪುಗಳು ವೆನೆಜುವೆಲಾದ ಒಳಕ್ಕೆ ನುಸುಳಲು ಪ್ರಯತ್ನ ನಡೆಸಿದವು. ಇವು ವೆನೆಜುವೆಲಾದ ಒಳಗಿನ ಅಮೆರಿಕಾ ಬೆಂಬಲಿತ ವಿರೋಧಿಗಳಿಗಾಗಿ ಕೆಲಸ ಮಾಡುತ್ತಿರುವ ಅಮೆರಿಕಾದ ಭದ್ರತಾ ಏಜೆನ್ಸಿಯೊಂದರಿಂದ ತರಬೇತಿ ಪಡೆದ ಗುಂಪುಗಳು. ಎಚ್ಚರದಿಂದಿದ್ದ ವೆನೆಜುವೆಲಾದ ಭದ್ರತಾ ಪಡೆಗಳವರಿಗೆ ತ್ವರಿತವಾಗಿ ನುಸುಳುಕೋರರನ್ನು ತಡೆದು ಅವರ ಯೋಜನೆಯನ್ನು ವಿಫಲಗೊಳಿಸಲು ಸಾಧ್ಯವಾಗಿದೆ. ಭದ್ರತಾ ಏಜೆನ್ಸಿಗಳು ಕಲೆ ಹಾಕಿರುವ ಅಪಾರ ಸಾಕ್ಷ್ಯಗಳು ಈ ಸಶಸ್ತ್ರ ನುಸುಳುಕೋರರು ಉನ್ನತ ಸೇನಾಧಿಕಾರಿಗಳು ಮತ್ತು ರಾಜಕೀಯ ಅಧಿಕಾರಿಗಳ ಮೇಲೆ ಗುರಿಯಿಟ್ಟಿದ್ದಾರೆ ಎಂಬುದನ್ನು ತೋರಿಸುತ್ತವೆ.

ಅಮೆರಿಕಾದ ಬೆಂಬಲ ಪಡೆದಿರುವ ಪ್ರತಿಪಕ್ಷದ ಮುಖಂಡ ಯುವಾನ್ ಗುವೈಡೊ ಅಮೆರಿಕಾದಲ್ಲಿ ನೆಲೆಲ ಹೊಂದಿರುವ ಖಾಸಗಿ ಭದ್ರತಾ ಏಜೆನ್ಸಿಯೊಂದಿಗೆ ಇಂತಹ ಸಶಸ್ತ್ರ ನುಸುಳಿಕೆಗಳನ್ನು ನಡೆಸಲು ಒಂದು ಕಾಂಟ್ರಾಕ್ಟ್ ಗೆ ಸಹಿ ಹಾಕಿರುವಂತೆ ಕಾಣುತ್ತದೆ. ಪ್ರಸಕ್ತ ಮಹಾಮಾರಿಯ ಸನ್ನಿವೇಶವನ್ನು ಬಳಸಿಕೊಂಡು ಹಠಾತ್ತಾಗಿ ಒಂದು ಸಶಸ್ತ್ರ ದಾಳಿಯನ್ನು ನಡೆಸುವುದು, ದೇಶದೊಳಗೆ ಅವ್ಯವಸ್ಥೆ ಉಂಟುಮಾಡುವುದು, ಮತ್ತು ಅಧ್ಯಕ್ಷ ನಿಕೊಲಸ್ ಮಡುರೊ ರವರ ಚುನಾಯಿತ ಸರಕಾರವನ್ನು ಅಸ್ಥಿರಗೊಳಿಸಿ ಅಧಿಕಾರ ಕಸಿದುಕೊಳ್ಳುವುದು ಇವರ ಯೋಜನೆಯಿದ್ದಂತೆ ಕಾಣುತ್ತದೆ.

ಅಮೆರಿಕಾ ಸಂಯುಕ್ತ ಸಂಸ್ಥಾನ ಒಂದು ದೇಶದ ಸಾರ್ವಭೌಮ ವ್ಯವಹಾರದೊಳಕ್ಕೆ ಕೈಹಾಕುತ್ತಿದೆ ಎಂದು ಸಿಪಿಐ(ಎಂ) ಖಂಡಿಸಿದೆ.

ವೆನೆಜುವೆಲಾದ ಸರಕಾರ ಮತ್ತು ಭದ್ರತಾ ಪಡೆಗಳು ಅಮೆರಿಕನ್ ಸಾಮ್ರಾಜ್ಯಶಾಹಿಯನ್ನು ಎದುರಿಸಿ ನಿಂತಿವೆ, ಮತ್ತು ತಮ್ಮ ಜನಗಳ ಹಿತಗಳನ್ನು ರಕ್ಷಿಸುತ್ತಿವೆ ಎನ್ನುತ್ತ ಅವರನ್ನು ಅಭಿನಂದಿಸಿರುವ ಸಿಪಿಐ(ಎಂ), ಅಮೆರಿಕ ಸಂಯುಕ್ತ ಸಂಸ್ಥಾನ ಎಷ್ಟೇ ಆರ್ಥಿಕ ದಿಗ್ಬಂಧನಗಳನ್ನು ಹೇರಿದರೂ, ಮತ್ತು ಅಸ್ಥಿರಗೊಳಿಸುವ ಪ್ರಯತ್ನಗಳನ್ನು ನಡೆಸಿದರೂ ಅವುಗಳ ನಡುವೆಯೇ ಕೊವಿಡ್-೧೯ ಮಹಾಮಾರಿಯನ್ನು ಯಶಸ್ವಿಯಾಗಿ ಎದುರಿಸುತ್ತಿರುವ ವೆನೆಜುವೆಲಾದ ಬೊಲಿವೇರಿಯನ್ ಗಣತಂತ್ರದ ಜನತೆ ಮತ್ತು ಅಧ್ಯಕ್ಷ ಮಡುರೊ ಅವರೊಂದಿಗೆ ತನ್ನ ಸೌಹಾರ್ದವನ್ನು ಪುನರುಚ್ಚರಿಸಿದೆ.

Leave a Reply

Your email address will not be published. Required fields are marked *