ಉಕ್ಕೇರಿದ ಕಾರ್ಮಿಕ ವರ್ಗದ ಹೋರಾಟಗಳ ಅಲೆ-೧೯೪೬

workers meeting at kamgar maidan, 1946
ಮುಂಬೈಯ ಕಾಮಗಾರ್ ಮೈದಾನದಲ್ಲಿ ಕಾರ್ಮಿಕರ ರ‍್ಯಾಲಿ, ೧೯೪೬

ಎರಡನೇ ಮಹಾಯುದ್ಧ ದುಷ್ಪರಿಣಾಮಗಳ ಹೊರೆಯನ್ನು ದುಡಿಯುವ ಜನರ ಮೇಲೇ ಹೇರಲಾಯಿತು. ದಾಳಿಗಳಿಗೆ ಪ್ರತಿರೋಧವಾಗಿ ಕಾರ್ಮಿಕ ವರ್ಗವು ದೇಶಾದ್ಯಂತ ದೊಡ್ಡ ಹೋರಾಟದ ಅಲೆಯನ್ನೇ ಎಬ್ಬಿಸಿತು. ೧೯೪೬ರಲ್ಲಿ ಕಾರ್ಮಿಕ ವರ್ಗವು ಎಂತಹ ಪ್ರತಿರೋಧ ಒಡ್ಡಿತು ಎಂಬುದನ್ನು ಅಸಾಧಾರಣ ರೀತಿಯಲ್ಲಿ ಎದ್ದುಬಂದ ಮುಷ್ಕರಗಳ ಸಂಖ್ಯೆಯೇ ಸಾರುತ್ತದೆ. ಮುಷ್ಕರನಿರತ ಕಾರ್ಮಿಕರ ಉಗ್ರ ಹೋರಾಟದ ಕಿಚ್ಚು ಎಷ್ಟಿತ್ತೆಂದರೆ ಪ್ರತಿಯೊಂದು ರಾಷ್ಟ್ರೀಯ ಮತ್ತು ಸಾಮ್ರಾಜ್ಯಶಾಹಿ-ವಿರೋಧಿ ವಿಷಯಗಳಲ್ಲಿ ಅದು ವ್ಯಕ್ತವಾಗಿತ್ತು. ಎಐಟಿಯುಸಿಯಲ್ಲಿದ್ದ ಕಮ್ಯುನಿಸ್ಟರು ಕಾರ್ಮಿಕರಲ್ಲಿ ಬೆಳೆಯುತ್ತಿದ್ದ ಅಸಮಾಧಾನ ಮತ್ತು ಅತೃಪ್ತಿಗಳಿಗೆ ಒಂದು ಸಂಘಟಿತ ರೂಪ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಾರ್ಮಿಕ ವರ್ಗದಲ್ಲಿ ಬೆಳೆಯುತ್ತಿದ್ದ ರಾಜಕೀಯ ತಿಳುವಳಿಕೆಯು ಕಾಂಗ್ರೆಸ್ಸಿನ ಬೂರ್ಜ್ವಾ ನಾಯಕತ್ವದಲ್ಲಿ ಭೀತಿ ಹುಟ್ಟಿಸಿತು ಮತ್ತು ಅವರು ತಮ್ಮ ವರ್ಗ ಹಿತಾಸಕ್ತಿಯನ್ನು ರಕ್ಷಿಸುವ ಸಲುವಾಗಿ ಕಾರ್ಮಿಕ ವರ್ಗದ ಚಳುವಳಿಯನ್ನು ವಿಭಜಿಸುವ ದಾರಿ ತುಳಿದರು. ಆದರೂ ನಡುವೆ ಕಾರ್ಮಿಕ ವರ್ಗದ ಮಧ್ಯೆ ಅವರ ಆಯ್ಕೆಯ ಪಕ್ಷವಾಗಿ ಕಮ್ಯುನಿಸ್ಟ್ ಪಕ್ಷವು ಹೊರಹೊಮ್ಮಿತು.

Communist100 File copy
ಶತಮಾನೋತ್ಸವ ಲೇಖನ ಮಾಲೆ-೨೫

ಎರಡನೇ ವಿಶ್ವ ಮಹಾಯುದ್ಧದ ಅವಧಿಯಲ್ಲಿ, ಭಾರತದಲ್ಲಿನ ಕೈಗಾರಿಕಾ ಕಾರ್ಮಿಕರ ಸಂಖ್ಯೆಯು ೫೦% ಗೂ ಮೀರಿ ಹೆಚ್ಚಾಯಿತು. ಯುದ್ಧ ಕೊನೆಗೊಂಡ ನಂತರ(೧೯೪೫), ತಮ್ಮ ಸ್ಥಿತಿಯು ಉತ್ತಮಗೊಳ್ಳುವುದೆಂದು ಕಾರ್ಮಿಕರು ನಿರೀಕ್ಷಿಸಿದ್ದರು. ಅದರ ಬದಲು, ಅವರ ಸಮಸ್ಯೆಗಳು ಹೆಚ್ಚಾದವು. ಈ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಭಾರಿ ಹೋರಾಟಗಳನ್ನು ಸಂಘಟಿಸುವುದರಲ್ಲಿ ಹಲವಾರು ಕಾರ್ಮಿಕ ಸಂಘಗಳನ್ನು ಮುನ್ನಡೆಸುತ್ತಿದ್ದ ಮತ್ತು ಅಖಿಲ ಭಾರತ ಕಾರ್ಮಿಕ ಸಂಘಗಳ ಮಂಡಲಿ(ಎಐಟಿಯುಸಿ)ಯಲ್ಲಿದ್ದ ಕಮ್ಯುನಿಸ್ಟರು ಮುಂಚೂಣಿಯಲ್ಲಿದ್ದರು.

ಯುದ್ಧದ ಸಮಯದಲ್ಲಿ ನೇಮಕಗೊಂಡಿದ್ದ ಕಾರ್ಮಿಕರನ್ನು ದೊಡ್ಡ ಸಂಖ್ಯೆಯಲ್ಲಿ ಕೆಲಸದಿಂದ ವಜಾ ಮಾಡಿದ್ದು ಮತ್ತು ಸಂಬಳ ಕಡಿತ ಮಾಡಿದ್ದು ಯುದ್ಧಾನಂತರದಲ್ಲಿ ಕಾರ್ಮಿಕ ವರ್ಗ ಎದುರಿಸಿದ ಬಹಳ ಪ್ರಮುಖವಾದ ಸಮಸ್ಯೆಗಳಾಗಿದ್ದವು. ಲಂಡನ್ನಿನ ದಿ ಟೈಮ್ಸ್ ಪತ್ರಿಕೆಯು ಪ್ರಕಟಿಸಿದ ಒಂದು ಅಂದಾಜಿನ ಪ್ರಕಾರ, ಕೈಗಾರಿಕಾ ಕಾರ್ಮಿಕರಿಂದ ಹಿಡಿದು ಸರ್ಕಾರಿ ನೌಕರರು ಹಾಗೂ ಸೇನೆ ಮುಂತಾದ ವಿವಿಧ ಕೆಲಸಗಳಲ್ಲಿ, ವೃತ್ತಿಗಳಲ್ಲಿ, ಉದ್ಯೋಗಗಳಲ್ಲಿ ತೊಡಗಿದ್ದ ಐವತ್ತು ಲಕ್ಷದಿಂದ ಎಪ್ಪತ್ತು ಲಕ್ಷ ಕೆಲಸಗಾರರನ್ನು ಯುದ್ಧಾನಂತರ ಕೆಲಸದಿಂದ ಕಿತ್ತುಹಾಕಿದರು. ಅದಕ್ಕೂ ಮಿಗಿಲಾಗಿ, ೧೯೪೬ರ ಜನವರಿ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ಜೀವನ ವೆಚ್ಚ ಸೂಚ್ಯಾಂಕವು(ಕಾಸ್ಟ್ ಆಫ್ ಲಿವಿಂಗ್ ಇಂಡೆಕ್ಸ್) ೧೫% ಹೆಚ್ಚಾಯಿತು. ಆ ಯುದ್ಧದ ಸಮಯದಲ್ಲಿ ಕಾರ್ಮಿಕ ವರ್ಗ ಗಳಿಸಿದ್ದ ಬೋನಸ್ ಈ ಬೆಲೆ ಏರಿಕೆಯನ್ನು ಸರಿದೂಗಿಸಲು ಏನೇನೂ ಸಾಕಾಗುತ್ತಿರಲಿಲ್ಲ. ಅದೂ ಸಾಲದೆಂಬಂತೆ, ದೇಶದಲ್ಲಿ ಆಹಾರ ಧಾನ್ಯಗಳ ಕೊರತೆಯಿತ್ತು ಮತ್ತು ಅದರ ಹೊರೆಯನ್ನೂ ಪಡಿತರ ಪೂರೈಕೆಯಲ್ಲಿನ ಭಾರಿ ಕಡಿತದ ಮೂಲಕ ದುಡಿಯುವ ಜನರ ಮೇಲೇ ಹೇರಲಾಗಿತ್ತು. ಈ ದಾಳಿಗಳಿಗೆ ಪ್ರತಿರೋಧವಾಗಿ ಕಾರ್ಮಿಕ ವರ್ಗವು ದೇಶಾದ್ಯಂತ ದೊಡ್ಡ ಹೋರಾಟದ ಅಲೆಯನ್ನೇ ಎಬ್ಬಿಸಿತು. ೧೯೪೬ರಲ್ಲಿ ಕಾರ್ಮಿಕ ವರ್ಗವು ಎಂತಹ ಪ್ರತಿರೋಧ ಒಡ್ಡಿತು ಎಂಬುದನ್ನು ಅಸಾಧಾರಣ ರೀತಿಯಲ್ಲಿ ಎದ್ದುಬಂದ ಮುಷ್ಕರಗಳ ಸಂಖ್ಯೆಯೇ ಸಾರುತ್ತದೆ. ಆ ಒಂದೇ ವರ್ಷದಲ್ಲಿ, ೧೯,೬೧,೯೪೮ ಕಾರ್ಮಿಕರನ್ನು ಒಳಗೊಂಡ ೧,೬೨೯ ಮುಷ್ಕರಗಳು ನಡೆದವು. ಇದು ಆ ಹಿಂದಿನ ವರ್ಷ, ಅಂದರೆ ೧೯೪೫ರಲ್ಲಿ ನಡೆದ ಮುಷ್ಕರಗಳ ಸಂಖ್ಯೆಗಿಂತ ಎರಡು ಪಟ್ಟು ಮತ್ತು ಪಾಲ್ಗೊಂಡಿದ್ದ ಕಾರ್ಮಿಕರ ಸಂಖ್ಯೆಯಲ್ಲಿ ಎರಡೂವರೆ ಪಟ್ಟು ಹೆಚ್ಚಿದ್ದವು.

NGO STRIKE, MADRAS, 1946
ನಾನ್ ಗಜಟೆಡ್ ನೌಕರರ ಮುಷ್ಕರ, ಮದ್ರಾಸ್, ೧೯೪೬

ಮುಷ್ಕರನಿರತ ಕಾರ್ಮಿಕರ ಉಗ್ರ ಹೋರಾಟದ ಕಿಚ್ಚು ಎಷ್ಟಿತ್ತೆಂದರೆ ಪ್ರತಿಯೊಂದು ರಾಷ್ಟ್ರೀಯ ಮತ್ತು ಸಾಮ್ರಾಜ್ಯಶಾಹಿ-ವಿರೋಧಿ ವಿಷಯಗಳಲ್ಲಿ ಅದು ವ್ಯಕ್ತವಾಗಿತ್ತು. ರೈಲ್ವೇಯಲ್ಲಿ ಮುಷ್ಕರ ಬೇಕೆ ಬೇಡವೇ ಎಂಬ ನಿರ್ಧಾರವನ್ನು ಮತಕ್ಕೆ ಹಾಕಿದಾಗ, ೧೦೦% ಕಾರ್ಮಿಕರು ಮುಷ್ಕರದ ಪರವಾಗಿ ಮತ ನೀಡಿದರು. ಬ್ಯಾಂಕ್ ನೌಕರರು, ಜವಾನರು, ಪ್ರಾಥಮಿಕ ಶಿಕ್ಷಕರು, ಸರ್ಕಾರಿ ಸೇವಕರು, ಹೀಗೆ ಎಲ್ಲಾ ವಿಭಾಗದ ನೌಕರರು ಮುಷ್ಕರಗಳಲ್ಲಿ ಭಾಗವಹಿಸಿದರು. ಸರ್ಕಾರಿ ಸೇವೆಯಲ್ಲಿ ಇರುವವರೂ ಒಳಗೊಂಡಂತೆ ದೊಡ್ಡ ಸಂಖ್ಯೆಯಲ್ಲಿ ಮಧ್ಯಮ ವರ್ಗದ ನೌಕರರು ಮುಷ್ಕರದ ಚಳುವಳಿಗೆ ಪ್ರವೇಶ ಮಾಡಿದ್ದು ಯುದ್ಧಾನಂತರದ ವರ್ಷಗಳಲ್ಲಿ ನಡೆಸಿದ ಹಲವಾರು ಮುಷ್ಕರಗಳ ಒಂದು ಗಮನಾರ್ಹ ವೈಶಿಷ್ಟ್ಯವಾಗಿತ್ತು. ಸಂಘಟಿತ ಕಾರ್ಮಿಕ ವರ್ಗದ ಹೋರಾಟಗಳೊಂದಿಗೆ ಸರ್ಕಾರಿ ನೌಕರರ ಹೋರಾಟಗಳನ್ನು ಹಾಗೂ ಮುಷ್ಕರವನ್ನು ಸಂಯೋಜಿಸಲು ಸಾಧ್ಯ ಎಂದು ಕಾರ್ಮಿಕ ಸಂಘಗಳಾಗಲೀ ಅಥವಾ ಸರ್ಕಾರಿ ನೌಕರರಾಗಲೀ ಎಂದೂ ಎಣಿಸಿರಲಿಲ್ಲ.

ಎಐಟಿಯುಸಿಯಲ್ಲಿದ್ದ ಕಮ್ಯುನಿಸ್ಟರು ಕಾರ್ಮಿಕರಲ್ಲಿ ಬೆಳೆಯುತ್ತಿದ್ದ ಅಸಮಾಧಾನ ಮತ್ತು ಅತೃಪ್ತಿಗಳಿಗೆ ಒಂದು ಸಂಘಟಿತ ರೂಪ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೆಲಸದಿಂದ ವಜಾ, ಮೂಲ ಸಂಬಳದಲ್ಲಿ ತುಟ್ಟಿಭತ್ಯೆ ವಿಲೀನ, ಕನಿಷ್ಠ ಕೂಲಿ, ದಿನಕ್ಕೆ ಎಂಟು ಗಂಟೆ ಕೆಲಸ, ಆರೋಗ್ಯ ವಿಮೆ, ಹಿರಿಯರಿಗೆ ನಿವೃತ್ತಿ ವೇತನ, ನಿರುದ್ಯೋಗ ಭತ್ಯೆ ಮತ್ತು ಹಲವಾರು ಸಾಮಾಜಿಕ ಸುಭದ್ರತಾ ಯೋಜನೆಗಳು ಮುಂತಾದ ಪ್ರಶ್ನೆಗಳನ್ನು ಎತ್ತಿದರು.

TEACHERS STRIKE MEETING, LAHORE
ಶಿಕ್ಷಕರ ಮುಷ್ಕರ, ಲಾಹೋರ್, ೧೯೪೬

ಬಂಗಾಳ, ಬಿಹಾರ, ಒರಿಸ್ಸಾ, ಪಂಜಾಬ್, ಬೊಂಬಾಯಿ, ಮದ್ರಾಸ್ ಮುಂತಾದ ಬೇರೆ ಬೇರೆ ಕೈಗಾರಿಕಾ ಕೇಂದ್ರಗಳಲ್ಲಿ ಕಾರ್ಮಿಕರು ಸತತ ಮುಷ್ಕರಗಳನ್ನು ಮಾಡಿದರು. ಪಾಟ್ನಾ, ಬೇಗುಸರಾಯ್ ಮುಂತಾದ ಕೆಲವು ಊರುಗಳಲ್ಲಿ ಪೋಲಿಸರೂ ಕೂಡ ತಮ್ಮ ಆರ್ಥಿಕ ಬೇಡಿಕೆಗಳಿಗಾಗಿ ಮುಷ್ಕರ ಮಾಡಿದರು.

ಕಾರ್ಮಿಕ ವರ್ಗದ ಈ ಸಮರಶೀಲ ಹೋರಾಟಗಳನ್ನು ಬಗ್ಗುಬಡಿಯಲು, ಸರ್ಕಾರವು ಪೋಲಿಸ್ ಗೋಲಿಬಾರ್ ಮತ್ತಿತರ ತೀವ್ರತರದ ದಮನಕಾರಿ ಕ್ರಮಗಳಿಗೆ ಮುಂದಾಯಿತು. ಹಲವಾರು ಕಾರ್ಮಿಕರು ಜೀವ ಕಳೆದುಕೊಂಡರು, ನೂರಾರು ಜನ ಗಾಯಗೊಂಡರು ಮತ್ತು ಬಂಧನಕ್ಕೊಳಗಾದರು. ಕಾರ್ಮಿಕ ವರ್ಗದ ಈ ಧೀರೋದಾತ್ತ ಹೋರಾಟಗಳು ಜನಸಮುದಾಯದಲ್ಲಿ ಸಾಮ್ರಾಜ್ಯಶಾಹಿ-ವಿರೋಧಿ ಆಕ್ರೋಶವನ್ನು ಹೆಚ್ಚಿಸುವಲ್ಲಿ ಸ್ಪೂರ್ತಿ ನೀಡಿದವು.

ಅಂಚೆ ಮತ್ತು ತಂತಿ ಇಲಾಖೆಯ ಕಾರ್ಮಿಕರು ಮತ್ತು ನೌಕರರ ಮುಷ್ಕರವು ಆ ಅವಧಿಯಲ್ಲಿ ಇಡೀ ದೇಶವನ್ನೇ ನಡುಗಿಸಿದ ಮತ್ತು ವ್ಯಾಪಕ ಸಹಾನುಭೂತಿಯನ್ನು ಗಳಿಸಿದ ಅತ್ಯಂತ ಮಹತ್ವದ ಹೋರಾಟವಾಗಿತ್ತು. ಜನರ ಜೀವನೋಪಾಯಗಳ ಮೇಲೆ ನಡೆದ ಬಹುಮುಖೀ ದಾಳಿಯ ವಿರುದ್ಧ ಕಾರ್ಮಿಕ ವರ್ಗವು ನಡೆಸಿದ ದಿಟ್ಟತನದ ಪ್ರತಿರೋಧದ ಭಾಗವಾಗಿ ಅಂಚೆ ಮತ್ತು ತಂತಿ ಕಾರ್ಮಿಕರು ಹೋರಾಟ ನಡೆಸಿದ್ದರು. ಏನೇನೂ ಸಾಕಾಗದ ಸಂಬಳ ಶ್ರೇಣಿ ಮತ್ತು ತೀರ ಕಳಪೆ ದರ್ಜೆಯ ಸೇವಾ ನಿಯಮಗಳು ಅಂಚೆ ನೌಕರರನ್ನು ಬಲವಂತವಾಗಿ ಮುಷ್ಕರಕ್ಕೆ ಇಳಿಸಿದವು. ಸಂಬಳ ಹೆಚ್ಚಳದ ಹಕ್ಕೊತ್ತಾಯವನ್ನೂ ಒಳಗೊಂಡಂತೆ ೧೬ ಹಕ್ಕೊತ್ತಾಯಗಳ ಪಟ್ಟಿಯೊಂದನ್ನು ಅವರು ಸರ್ಕಾರಕ್ಕೆ ಸಲ್ಲಿಸಿದ್ದರು. ಅವರ ಬೇಡಿಕೆಗಳನ್ನು ತಿರಸ್ಕರಿಸಿದ ಸರ್ಕಾರವು ಮುಷ್ಕರವನ್ನು ಕಾನೂನುಬಾಹಿರ ಎಂದು ಘೋಷಿಸಿತು. ಧೈರ್ಯಗುಂದದ ಅಂಚೆ ಸಂಘದ ಕೆಳ ದರ್ಜೆಯ ಸಿಬ್ಬಂದಿಗಳು ಮುಷ್ಕರ ಮುಂದುವರಿಸಿದರು. ಅದೇ ಸಮಯದಲ್ಲಿ, ಅಖಿಲ ಭಾರತ ತಂತಿ ಸಂಘವೂ ಮುಷ್ಕರಕ್ಕೆ ಕರೆ ನೀಡಿತು. ರೈಲು ಟಪ್ಪಾಲು ರವಾನೆ ಸೇವೆ(ರೈಲ್ವೇ ಮೈಲ್ ಸರ್ವಿಸ್) ಕೆಲಸಗಾರರೂ ಮುಷ್ಕರ ಸೇರಿಕೊಂಡರು. ಅಂಚೆ ಇಲಾಖೆಯ ಕೆಳ ದರ್ಜೆಯ ಸಿಬ್ಬಂದಿಗಳ ಮುಷ್ಕರದ ಕರೆಯು ಬಹಳ ಬೇಗ ಇಡೀ ಅಂಚೆ ಮತ್ತು ತಂತಿ ಇಲಾಖೆಗೆ ವ್ಯಾಪಿಸಿತು ಮತ್ತು ಇಡೀ ದೇಶಕ್ಕೆ ಹಬ್ಬಿತು.

ಪ್ರಮುಖವಾಗಿ ಬಂಗಾಳ, ಅಸ್ಸಾಮ್, ಬೊಂಬಾಯಿ, ಮದ್ರಾಸ್, ದೆಹಲಿ, ರಾಜಪುತಾನಾ, ಮಧ್ಯ ಪ್ರಾಂತಗಳು, ಬೆರಾರ್, ಸಿಂಧ್ ಮತ್ತು ಬಲೂಚಿಸ್ತಾನಗಳಲ್ಲಿ ಮುಷ್ಕರವು ಯಶಸ್ವಿಯಾಯಿತು. ಬ್ರಿಟಿಷ್ ಆಡಳಿತದ ನಿರ್ದಯ ಕಾರ್ಮಿಕ ವಿರೋಧಿ ಧೋರಣೆಯ ವಿರುದ್ಧ ನಡೆಯುತ್ತಿರುವ ಅತಿದೊಡ್ಡ ಪ್ರತಿಭಟನೆಗಳ ಭಾಗವಾಗಿ ತಮ್ಮ ಪ್ರತಿಭಟನೆಯೂ ಇದೆ ಎಂದು ಮುಷ್ಕರನಿರತ ಕಾರ್ಮಿಕರು ಭಾವಿಸಿದರು. ಕಾರ್ಮಿಕ ವರ್ಗ ಹಾಗೂ ಹೋರಾಟದಲ್ಲಿದ್ದ ಜನವಿಭಾಗಗಳು ಈ ಹೋರಾಟವನ್ನು ಜನರ ಸಾಮ್ರಾಜ್ಯಶಾಹಿ-ವಿರೋಧಿ ವಿಪ್ಲವ ಎಂದು ಬಗೆದರು ಮತ್ತು ಅವರ ಕ್ರಿಯಾಶೀಲ ಬೆಂಬಲವು ಈ ಆರ್ಥಿಕ ಮುಷ್ಕರವನ್ನು ಸಾಮ್ರಾಜ್ಯಶಾಹಿ-ವಿರೋಧಿ ರಾಷ್ಟ್ರೀಯ ಹೋರಾಟದ ಮಟ್ಟಕ್ಕೆ ಎತ್ತರಿಸಿತು.

JULY 29, 1946 GENERAL STRIKE IN KOLKATA
                     ಶಿಕ್ಷಕರ ಮುಷ್ಕರ, ಲಾಹೋರ್, ೧೯೪೬

ಅಂಚೆ ಇಲಾಖೆಯಲ್ಲಿನ ಮುಷ್ಕರದಲ್ಲಿ ಮಾತ್ರವಲ್ಲ ಈ ಮುಷ್ಕರನಿರತ ಕಾರ್ಮಿಕರ ಪರವಾಗಿ ಸೌಹಾರ್ದವನ್ನು ಸಂಘಟಿಸುವಲ್ಲಿ ಕೂಡ ಕಮ್ಯುನಿಸ್ಟ್ ಪಕ್ಷ ಮತ್ತು ಅದರ ಮುಖಂಡರು ಕ್ರಿಯಾಶೀಲ ಪಾತ್ರ ವಹಿಸಿದ್ದರು. ಎಲ್ಲೆಲ್ಲಿ ಕಮ್ಯುನಿಸ್ಟರು ನಾಯಕತ್ವ ಸ್ಥಾನದಲ್ಲಿದ್ದರೋ ಆ ಎಲ್ಲಾ ವಿದ್ಯಾರ್ಥಿ ಸಂಘಟನೆಗಳು ಮತ್ತು ಇತರ ಸಾಮೂಹಿಕ ಸಂಘಟನೆಗಳು ಸೌಹಾರ್ದ ಮುಷ್ಕರದಲ್ಲಿ ಸೇರಿಕೊಂಡವು. ಭಾರತದ ಎಲ್ಲಾ ಜನವಿಭಾಗಗಳು ಮುಷ್ಕರಕ್ಕೆ ಬೆಂಬಲ ನೀಡುತ್ತಿದ್ದಾಗ್ಯೂ, ಕಾಂಗ್ರೆಸ್ ಈ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಲಿಲ್ಲ. ಅದು ಸಾಲದೆಂಬಂತೆ, ಅದು ಸಾರ್ವಜನಿಕರಿಗೆ ಅನಾನುಕೂಲ ಉಂಟುಮಾಡುತ್ತಿದೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಮುಷ್ಕರ ಹಿಂತೆಗೆದುಕೊಳ್ಳುವಂತೆ ನೆಹರೂರವರು ಕಾರ್ಮಿಕರಿಗೆ ಮನವಿ ಮಾಡಿದರು.

ಕಾಂಗ್ರೆಸ್ ನಾಯಕತ್ವಕ್ಕೆ ಮನಸ್ಸಿಲ್ಲದಿದ್ದಾಗ್ಯೂ, ಮುಷ್ಕರಕ್ಕೆ ದೊರೆತ ಭಾರಿ ಮಟ್ಟದ ಸಾರ್ವಜನಿಕ ಬೆಂಬಲಕ್ಕೆ ತಲೆಬಾಗಿ, ಸರ್ಕಾರವು ಮುಷ್ಕರನಿರತ ಕಾರ್ಮಿಕರ ಬೇಡಿಕೆಗಳನ್ನು ಒಪ್ಪಲೇಬೇಕಾದ ಬಲವಂತಕ್ಕೆ ಸಿಲುಕಿಕೊಂಡಿತು. ಅವರ ಹನ್ನೆರಡು ಬೇಡಿಕೆಗಳನ್ನು ಒಪ್ಪಲಾಯಿತು ಮತ್ತು ಸನ್ನಡತೆಗಾಗಿ ಸಂಬಳ ಎಂದು ಒಂದು ಕೋಟಿ ರೂಪಾಯಿಯನ್ನು ಅಂಚೆ ಮತ್ತು ತಂತಿ ಇಲಾಖೆಯ ಕಾರ್ಮಿಕರಿಗೆ ವೆಚ್ಚಮಾಡಲು ಸರ್ಕಾರ ಒಪ್ಪಿಕೊಂಡಿತು. ಅಂತಿಮವಾಗಿ ಆಗಸ್ಟ್ ೧೯೪೬ರಲ್ಲಿ ಮುಷ್ಕರವನ್ನು ಹಿಂತೆಗೆದುಕೊಳ್ಳಲಾಯಿತು.

ಇಡೀ ದೇಶವನ್ನು ನಡುಗಿಸಿದ ಕಾರ್ಮಿಕ ವರ್ಗದ ಮತ್ತೊಂದು ಮಹತ್ವದ ಹೋರಾಟವೆಂದರೆ ರೈಲ್ವೇ ಕಾರ್ಮಿಕರ ಮುಷ್ಕರ. ೧೯೪೬ರ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ದಕ್ಷಿಣ ಭಾರತ ರೈಲ್ವೇ ಕಾರ್ಮಿಕರು ಮುಷ್ಕರಕ್ಕೆ ಇಳಿದರು. ಆಡಳಿತ ವರ್ಗವು ರೈಲ್ವೇ ಕಾರ್ಮಿಕರ ವಿರುದ್ಧ ಅತ್ಯಂತ ಕ್ರೂರ ದಬ್ಬಾಳಿಕೆ ನಡೆಸಿತು. ಅದರ ಪರಿಣಾಮ, ಪೋಲಿಸ್ ಗೋಲಿಬಾರಿನಿಂದ ಒಂಭತ್ತು ಕಾರ್ಮಿಕರು ಜೀವ ತೆತ್ತರು ಮತ್ತು ನೂರಕ್ಕೂ ಹೆಚ್ಚು ಜನ ಗಾಯಗೊಂಡರು. ೪೦೦ ಕ್ಕೂ ಹೆಚ್ಚು ಜನರನ್ನು ಬಂಧಿಸಿದರು. ಆಗ ಸೆಪ್ಟೆಂಬರ್ ೧೮ರಂದು ರೈಲ್ವೇ ಕಾರ್ಮಿಕರ ಪರವಾಗಿ ಒಂದು ದಿನದ ಸೌಹಾರ್ದವನ್ನು ವ್ಯಕ್ತಪಡಿಸಬೇಕೆಂದು ಎಐಟಿಯುಸಿ ಕರೆ ನೀಡಿತು. ಅದಕ್ಕೆ ಸ್ಪಂದಿಸಿ, ದೇಶದ ಹಲವಾರು ಕಡೆಗಳಲ್ಲಿ ಮೆರವಣಿಗೆಗಳನ್ನು ಮತ್ತು ಮತಪ್ರದರ್ಶನಗಳನ್ನು ನಡೆಸಲಾಯಿತು ಮತ್ತು ರೈಲ್ವೇ ಕಾರ್ಮಿಕರ ಸಹಾಯಾರ್ಥ ನಿಧಿ ಸಂಗ್ರಹ ಮಾಡಲಾಯಿತು. ಈ ಮುಷ್ಕರವು ಒಂದು ತಿಂಗಳ ಕಾಲ ನಡೆಯಿತು ಮಧ್ಯಂತರ ಸರ್ಕಾರದಲ್ಲಿ ರೈಲ್ವೇ ಸಚಿವರಾಗಿದ್ದ ಅಸಫ್ ಅಲಿಯವರು ಬೇಡಿಕೆಗಳನ್ನು ಈಡೇರಿಸುವುದಾಗಿ ಆಶ್ವಾಸನೆ ನೀಡಿದ ನಂತರವೇ ಮುಷ್ಕರ ಕೊನೆಗೊಂಡಿತು.

ಅದೇ ಸಮಯದಲ್ಲಿ, ಈಶಾನ್ಯ ರೈಲ್ವೇ ಕಾರ್ಮಿಕರು ಮುಷ್ಕರ ಶುರುಮಾಡಿದರು. ಈ ಮುಷ್ಕರದಲ್ಲಿ ಕೂಡ, ಕಮ್ಯುನಿಸ್ಟರು ಮತ್ತು ಎಐಟಿಯುಸಿ ಮುಂದೆ ನಿಂತು ನಾಯಕತ್ವ ನೀಡಿದರು. ಈ ಹಲವಾರು ಹೋರಾಟಗಳಲ್ಲಿ ಕಾರ್ಮಿಕರ ಪರವಾಗಿ ಗಟ್ಟಿಯಾಗಿ ನಿಂತು ತಮ್ಮ ಬದ್ಧತೆಯನ್ನು ತೋರಿದ್ದರಿಂದ ಕಮ್ಯುನಿಸ್ಟರು ಕಾರ್ಮಿಕರ ದೊಡ್ಡ ವಿಭಾಗದ ವಿಶ್ವಾಸ ಗಳಿಸಿದರು. ಈಶಾನ್ಯ ರೈಲ್ವೇಯಲ್ಲಿನ ಮುಸ್ಲಿಂ ಲೀಗ್ ನೇತೃತ್ವದ ಸಂಘವನ್ನೂ ಹಿಂದೆ ಹಾಕಿ ಅವರು ಮುನ್ನುಗ್ಗಲು ಸಾಧ್ಯವಾಯಿತು. ವಾಯುವ್ಯ ಪ್ರದೇಶದಲ್ಲಿ ದೇಶವಿಭಜನೆಯ ಸಂದರ್ಭದಲ್ಲಿ ಕಮ್ಯುನಿಸ್ಟರ ನೇತೃತ್ವದ ಕಾರ್ಮಿಕರು ಅತ್ಯಂತ ಧೈರ್ಯದಿಂದ ಕೋಮುಗಲಭೆಗಳ ವಿರುದ್ಧ ಸೆಣಸಿದರು.

ಬೊಂಬಾಯಿ, ಕಾನ್ಪುರ, ಢಾಕ್ಕಾ ಮತ್ತು ನಾಗಪುರದ ಜವಳಿ, ಬಿಹಾರದ ಗಿರಿಧ್‌ನಲ್ಲಿನ ಕಲ್ಲಿದ್ದಲು ಗಣಿ, ಮೈಸೂರು ಸಂಸ್ಥಾನದ ಕೋಲಾರದ ಚಿನ್ನದ ಗಣಿ, ಕಲ್ಕತ್ತಾ ಬಂದರಿನ ಕಾರ್ಮಿಕರ ಹೋರಾಟಗಳು ಕಾರ್ಮಿಕ ವರ್ಗದ ಇತರೆ ಗಮನಾರ್ಹ ಹೋರಾಟಗಳಾಗಿದ್ದವು. ಇವುಗಳಲ್ಲದೇ, ರಾಜರುಗಳ ಸಂಸ್ಥಾನಗಳಲ್ಲಿನ ಕಾರ್ಮಿಕ ವರ್ಗದ ಉಕ್ಕೇರಿದ ಹೋರಾಟಗಳು ಹಿಂದೆಂದಿಗಿಂತಲೂ ದೊಡ್ಡ ಪ್ರಮಾಣದಲ್ಲಿದ್ದವು. ತಿರುವಾಂಕೂರು, ಹೈದರಾಬಾದ್, ಮೈಸೂರು, ಇಂದೋರ್, ಮತ್ತಿ ಇತರ ರಾಜರುಗಳ ಸಂಸ್ಥಾನಗಳಲ್ಲಿ ಮುಷ್ಕರಗಳು ನಡೆದವು. ತಿರುವಾಂಕೂರು ಮತ್ತು ಹೈದರಾಬಾದಿನ ಕಾರ್ಮಿಕವರ್ಗದ ಹೋರಾಟಗಳು ಪುನ್ನಪ್ರ-ವಯಲಾರ್ ಹಾಗೂ ತೆಲಂಗಾಣ ರೈತ ಚಳುವಳಿಗಳಲ್ಲಿ ಗುರುತರವಾದ ಪಾತ್ರ ವಹಿಸಿದ್ದವು.

ಈ ಅವಧಿಯಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಹಾಗೂ ಕಾಂಗ್ರೆಸ್ಸೇತರ ಸರ್ಕಾರಗಳು, ಕಾರ್ಮಿಕರ ಸಮಸ್ಯೆಗಳನ್ನು ಶಮನಗೊಳಿಸಲು ಕ್ರಮ ತೆಗೆದುಕೊಳ್ಳುವ ಬದಲು, ಅವರನ್ನು ವಿರೋಧಿಸುವ ಮೂಲಕ ಇನ್ನೂ ಜಟಿಲಗೊಳಿಸಿದವು. ಮುಷ್ಕರ ಮಾಡದಿರುವಂತೆ ಅವು ಬುದ್ಧಿವಾದ ಹೇಳಿದವು. ಇವು ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್‌ನ ಒಟ್ಟಾರೆ ಬಂಡವಾಳಶಾಹಿ ಧೋರಣೆಯನ್ನು ಪ್ರತಿಬಿಂಬಿಸಿದವು. ಬೊಂಬಾಯಿಯ ಕಾಂಗ್ರೆಸ್ ಸರ್ಕಾರವು ಒಂದು ಹೆಜ್ಜೆ ಮುಂದೆ ಹೋಗಿ ಪಕ್ಕಾ ಪ್ರಜಾಪ್ರಭುತ್ವ-ವಿರೋಧಿ ಹಾಗೂ ಕಾರ್ಮಿಕ ವರ್ಗ-ವಿರೋಧಿಯಾದ ಕೈಗಾರಿಕಾ ಸಂಬಂಧ ಕಾಯಿದೆ, ೧೯೪೬(ಇಂಡಸ್ಟ್ರಿಯಲ್ ರಿಲೇಷನ್ಸ್ ಆಕ್ಟ್, ೧೯೪೬)ನ್ನು ಅಂಗೀಕರಿಸಿತು. ಸಹಜವಾಗಿಯೇ, ಕಾರ್ಮಿಕ ಸಂಘಗಳು ಈ ಕ್ರಮಗಳನ್ನು ಪ್ರತಿಭಟಿಸಿದವು ಮತ್ತು ತಮ್ಮ ಪ್ರಬಲ ವಿರೋಧವನ್ನು ವ್ಯಕ್ತಪಡಿಸಿದವು.

ಕಾರ್ಮಿಕ ವರ್ಗದಲ್ಲಿ ಬೆಳೆಯುತ್ತಿದ್ದ ರಾಜಕೀಯ ತಿಳುವಳಿಕೆಯು ಕಾಂಗ್ರೆಸ್ಸಿನ ಬೂರ್ಜ್ವಾ ನಾಯಕತ್ವದಲ್ಲಿ ಭೀತಿ ಹುಟ್ಟಿಸಿತು ಮತ್ತು ತಮ್ಮ ವರ್ಗ ಹಿತಾಸಕ್ತಿಯನ್ನು ರಕ್ಷಿಸುವ ಸಲುವಾಗಿ ಕಾರ್ಮಿಕ ವರ್ಗದ ಚಳುವಳಿಯನ್ನು ವಿಭಜಿಸುವ ದಾರಿ ತುಳಿಯಿತು. ಮೊದಲನೆಯ ಹೆಜ್ಜೆಯಾಗಿ, ಕಾಂಗ್ರೆಸ್ ಸಂಸ್ಥೆಯೊಳಗಿರುವ ಎಲ್ಲಾ ಕಮ್ಯುನಿಸ್ಟರನ್ನು ಹೊರಹಾಕಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಡಿಸೆಂಬರ್ ೧೯೪೬ರಲ್ಲಿ ನಿರ್ದೇಶನ ನೀಡಿತು. ಈ ಪ್ರಕ್ರಿಯೆಯಲ್ಲಿ ಎಐಟಿಯುಸಿಯನ್ನು ಒಡೆದು ಐ.ಎನ್.ಟಿ.ಯುಸಿ ರಚಿಸಿದರು.

ಈ ಎಲ್ಲಾ ಪ್ರಯತ್ನಗಳ ನಡುವೆಯೂ, ೧೯೪೬ರಲ್ಲಿ ನಡೆದ ಪ್ರಾಂತೀಯ ವಿಧಾನಸಭಾ ಚುನಾವಣೆಗಳಲ್ಲಿ, ಕಾಂಗ್ರೆಸ್ಸಿನ ೩,೨೧,೬೦೭ ಮತಗಳ ಎದುರು ಕಮ್ಯುನಿಸ್ಟರು ೧,೧೨,೩೭೬ ಕಾರ್ಮಿಕರ ಮತಗಳನ್ನು ಗಳಿಸಿದರು. ಕಾರ್ಮಿಕ ವರ್ಗದ ಮಧ್ಯೆ ಅವರ ಆಯ್ಕೆಯ ಪಕ್ಷವಾಗಿ ಕಮ್ಯುನಿಸ್ಟ್ ಪಕ್ಷವು ಹೊರಹೊಮ್ಮಿತು.

ಎರಡನೇ ಮಹಾಯುದ್ಧ ದುಷ್ಪರಿಣಾಮಗಳ ಹೊರೆಯನ್ನು ದುಡಿಯುವ ಜನರ ಮೇಲೇ ಹೇರಲಾಯಿತು. ಈ ದಾಳಿಗಳಿಗೆ ಪ್ರತಿರೋಧವಾಗಿ ಕಾರ್ಮಿಕ ವರ್ಗವು ದೇಶಾದ್ಯಂತ ದೊಡ್ಡ ಹೋರಾಟದ ಅಲೆಯನ್ನೇ ಎಬ್ಬಿಸಿತು. ೧೯೪೬ರಲ್ಲಿ ಕಾರ್ಮಿಕ ವರ್ಗವು ಎಂತಹ ಪ್ರತಿರೋಧ ಒಡ್ಡಿತು ಎಂಬುದನ್ನು ಅಸಾಧಾರಣ ರೀತಿಯಲ್ಲಿ ಎದ್ದುಬಂದ ಮುಷ್ಕರಗಳ ಸಂಖ್ಯೆಯೇ ಸಾರುತ್ತದೆ. ಮುಷ್ಕರನಿರತ ಕಾರ್ಮಿಕರ ಉಗ್ರ ಹೋರಾಟದ ಕಿಚ್ಚು ಎಷ್ಟಿತ್ತೆಂದರೆ ಪ್ರತಿಯೊಂದು ರಾಷ್ಟ್ರೀಯ ಮತ್ತು ಸಾಮ್ರಾಜ್ಯಶಾಹಿ-ವಿರೋಧಿ ವಿಷಯಗಳಲ್ಲಿ ಅದು ವ್ಯಕ್ತವಾಗಿತ್ತು. ಎಐಟಿಯುಸಿಯಲ್ಲಿದ್ದ ಕಮ್ಯುನಿಸ್ಟರು ಕಾರ್ಮಿಕರಲ್ಲಿ ಬೆಳೆಯುತ್ತಿದ್ದ ಅಸಮಾಧಾನ ಮತ್ತು ಅತೃಪ್ತಿಗಳಿಗೆ ಒಂದು ಸಂಘಟಿತ ರೂಪ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಾರ್ಮಿಕ ವರ್ಗದಲ್ಲಿ ಬೆಳೆಯುತ್ತಿದ್ದ ರಾಜಕೀಯ ತಿಳುವಳಿಕೆಯು ಕಾಂಗ್ರೆಸ್ಸಿನ ಬೂರ್ಜ್ವಾ ನಾಯಕತ್ವದಲ್ಲಿ ಭೀತಿ ಹುಟ್ಟಿಸಿತು ಮತ್ತು ಅವರು ತಮ್ಮ ವರ್ಗ ಹಿತಾಸಕ್ತಿಯನ್ನು ರಕ್ಷಿಸುವ ಸಲುವಾಗಿ ಕಾರ್ಮಿಕ ವರ್ಗದ ಚಳುವಳಿಯನ್ನು ವಿಭಜಿಸುವ ದಾರಿ ತುಳಿದರು. ಆದರೂ ಈ ನಡುವೆ ಕಾರ್ಮಿಕ ವರ್ಗದ ಮಧ್ಯೆ ಅವರ ಆಯ್ಕೆಯ ಪಕ್ಷವಾಗಿ ಕಮ್ಯುನಿಸ್ಟ್ ಪಕ್ಷವು ಹೊರಹೊಮ್ಮಿತು.

ಕನ್ನಡಕ್ಕೆ: ಟಿ. ಸುರೇಂದ್ರ ರಾವ್

Leave a Reply

Your email address will not be published. Required fields are marked *