ರಾಜಕೀಯ ಮುಖಂಡರು, ಮಾನವ ಹಕ್ಕು ಕಾರ್ಯಕರ್ತರ ಬಿಡುಗಡೆಗಾಗಿ ರಾಷ್ಟ್ರಪತಿಗಳಿಗೆ ಪತ್ರ

“ಪ್ರತಿಭಟನಾಕಾರರು ಮತ್ತು ರಾಜಕೀಯ ಭಿನ್ನಮತದವರ ವಿರುದ್ಧ ಪ್ರತೀಕಾರದ ರಾಜಕೀಯ ನಿಲ್ಲಲಿ”

ಪ್ರತಿಪಕ್ಷಗಳ ಮುಖಂಡರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರನ್ನು ತಕ್ಷಣವೇ ಬಿಡುಗಡೆ ಮಾಡಬೇಕು, ಪ್ರತಿಭಟನಾಕಾರರು ಮತ್ತು ಭಿನ್ನಮತ ಹೊಂದಿರುವವರ ವಿರುದ್ಧ ಪ್ರತೀಕಾರದ ರಾಜಕೀಯವನ್ನು ಕೊನೆಗೊಳಿಸಬೇಕು ಎಂದು ಆಗ್ರಹಿಸಿ ಎಂಟು ರಾಜಕೀಯ ಪಕ್ಷಗಳ ಮುಖಂಡರು ರಾಷ್ಟ್ರಪತಿಗಳಿಗೆ ಒಂದು ಪತ್ರ ಬರೆದಿದ್ದಾರೆ.

ಜನಗಳ ಆವಶ್ಯಕತೆಗಳನ್ನು ಪೂರೈಸುತ್ತ  ಕೊವಿಡ್-೧೯ ಮಹಾಮಾರಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದರ ಮೇಲೆ ಏಕಾಗ್ರತೆಯಿಂದ ಗಮನ ಕೇಂದ್ರೀಕರಿಸುವುದು ಕೇಂದ್ರ ಸರಕಾರದ ಆದ್ಯತೆಯಾಗಿರಬೇಕಿರುವ ಸಮಯದಲ್ಲಿ, ಕೋಟ್ಯಂತರ ವಲಸೆ ಕಾರ್ಮಿಕರು ಮತ್ತು ಇತರರು ಶೋಚನೀಯ ಸ್ಥಿತಿಯಲ್ಲಿರುವವರಿಗೆ ಅದು ಏನ್ನೂ ಮಾಡಿಲ್ಲ. ಬದಲಿಗೆ, ಅಧ್ಯಯನಕಾರರನ್ನು, ಕಾರ್ಯಕರ್ತರನ್ನು, ಮಹಿಳೆಯರು ಮತ್ತು ವಿದ್ಯಾರ್ಥಿಗಳನ್ನು ಜೈಲಿಗಟ್ಟುತ್ತಿದೆ ಅವರ ಆರೋಗ್ಯ ಮತ್ತು ಸುರಕ್ಷತತೆಗೆ ಗಂಭೀರ ಅಪಾಯವೊಡ್ಡುತ್ತಿದೆ ಎಂಬುದರ ಉದಾಹರಣೆಗಳನ್ನು ಕೊಡುತ್ತ, ಇದು ಆಘಾತಕಾರಿ ಸಂಗತಿ ಎಂದು ಈ ಮುಖಂಡರು ರಾಷ್ಟ್ರಪತಿಗಳ ಗಮನಕ್ಕೆ ಅವರ ಹೆಸರಿನಲ್ಲಿ ಅಧಿಕಾರ ನಡೆಸುತ್ತಿರುವ ಸರಕಾರದ ವರ್ತನೆಗಳನ್ನು ಈ ಪತ್ರದಲ್ಲಿ ತಂದಿದ್ದಾರೆ.

ಸೀತಾರಾಮ್ ಯೆಚುರಿ, ಡಿ.ರಾಜ, ದೀಪಂಕರ್ ಭಟ್ಟಾಚಾರ್ಯ, ದೇಬಬ್ರತ ಬಿಸ್ವಾಸ್, ಮನೋಜ್ ಭಟ್ಟಾಚಾರ್ಯ ಮತ್ತು ಶರದ್ ಯಾದವ್, ಅನುಕ್ರಮವಾಗಿ ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್)-ಎಲ್, ಎಐಎಫ್‌ಬಿ, ಆರ್.ಎಸ್.ಪಿ. ಮತ್ತು ಎಲ್.e.ಡಿ.ಯ  ಪ್ರಧಾನ ಕಾರ್ಯದರ್ಶಿಗಳು, ಹಾಗೂ ಆರ್.ಜೆ.ಡಿ.ಯ ಸಂಸತ್ ಸದಸ್ಯ ಮನೋಜ್ ಝಾ ಮತ್ತು ವಿಸಿಕೆ  ಅಧ್ಯಕ್ಷರು ಮತ್ತು ಸಂಸತ್ ಸದಸ್ ಡಾ. ಥೋಲ್ ತಿರುಮಾವಳವನ್ ಈ ಪತ್ರಕ್ಕೆ ಸಹಿ ಹಾಕಿರುವ ಮುಖಂಡರು. ಈ ಪತ್ರದ ಪೂರ್ಣ ಪಾಟ ಹೀಗಿದೆ:

ಪ್ರಿಯ ರಾಷ್ಟ್ರಪತಿಯವರೇ,

ನಾವು, ದೇಶ ಮತ್ತು ಜನತೆ ಕೊವಿಡ್-೧೯ ಮಹಾಮಾರಿಯನ್ನು ಎದುರಿಸುತ್ತಿರುವ ಸಮಯದಲ್ಲಿ ಕರಾಳ ಯುಎಪಿಎ ಅಡಿಯಲ್ಲಿ ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರುಗಳ ಬಂಧನಸತ್ರ ನಡೆಸಿರುವ ಬಗ್ಗೆ ಆತಂಕ ಮತ್ತು ಖಂಡನೆಯನ್ನು ವ್ಯಕ್ತಪಡಿಸಲು ಈ ಪತ್ರವನ್ನು ನಿಮಗೆ ಬರೆಯುತ್ತಿದ್ದೇವೆ.

ಇದು ದೇಶದ ಎಲ್ಲೆಡೆಗಳಲ್ಲಿ ಮತ್ತು ಜಗತ್ತಿನಾದ್ಯಂತ ಜನಗಳು ತಮ್ಮ ಯೋಗಕ್ಷೇಮದ ಬಗ್ಗೆ ಹಾಗೂ ತಮ್ಮ ಪ್ರಿಯಜನಗಳ ಸುರಕ್ಷಿತತೆಯ ಬಗ್ಗೆ ಭಯ ಮತ್ತು ಅನಿಶ್ಚಿತತೆಯನ್ನು ಅನುಭವಿಸುತ್ತಿರುವ ಸಮಯವಾಗಿದೆ. ಜನಗಳ ಆವಶ್ಯಕತೆಗಳನ್ನು ಪೂರೈಸುತ್ತ  ಈ ಮಹಾಮಾರಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದರ ಮೇಲೆ ಏಕಾಗ್ರತೆಯಿಂದ ಗಮನ ಕೇಂದ್ರೀಕರಿಸುವುದು ಕೇಂದ್ರ ಸರಕಾರದ ಆದ್ಯತೆಯಾಗಿರಬೇಕು. ನಿಮ್ಮ ಸರಕಾರದ ಆದ್ಯತೆ ಈಗ ಎದ್ದು ಬಂದಿರುವ ಕೋಟ್ಯಂತರ ಜನಗಳ ಜೀವ ಮತ್ತು ಜೀವನೋಪಾಯಗಳನ್ನು ಬಾಧಿಸುವ ಸಮಸ್ಯೆಗಳನ್ನು ನಿಭಾಯಿಸುವುದಾಗಿರ ಬೇಕಾಗಿದೆ. ವಲಸೆ ಕಾರ್ಮಿಕರ ಪಾಡು ಶೋಚನೀಯವಾಗಿದೆ. ಅವರಲ್ಲಿ ಹಲವರು ಹಸಿವು, ಆಯಾಸದಿಂದ ಪ್ರಾಣ ಕಳಕೊಂಡಿದ್ದಾರೆ, ಮನೆ ತಲುಪಲು ಕಿಲೋಮೀಟರುಗಳಷ್ಟು ನಡೆದಿದ್ದಾರೆ.  ಇಂತಹ ಜನಗಳಿಗೆ ಪರಿಹಾರ ಮತ್ತು ರೇಷನ್‌ಗಳನ್ನು ಕೊಡಲು ಕೇಂದ್ರ ಸರಕಾರ ಏನೇನೂ ಮಾಡಿಲ್ಲ.

ಜಗತ್ತಿನಲ್ಲಿ ಹಲವು ದೇಶಗಳು ಸೆರೆಮನೆಗಳಲ್ಲಿ ಕೊವಿಡ್-೧೯ ಹರಡದಂತೆ ತಡೆಯಲು ಸೆರೆಯಾಳುಗಳನ್ನು ಬಿಡುಗಡೆಗೊಳಿಸುವ ಪ್ರಯತ್ನದಲ್ಲಿದ್ದಾರೆ. ಭಾರತದಲ್ಲಿಯೂ, ಸುಪ್ರಿಂ ಕೋರ್ಟ್ ಸೆರೆಮನೆಗಳಲ್ಲಿ ಜನಸಂದಣಿಯನ್ನು ಕಡಿಮೆ ಮಾಡಲು ಸೆರೆಯಾಳುಗಳನ್ನು ಜಾಮೀನು ಅಥವ ಪೆರೊಲ್ ಮೇಲೆ ಬಿಡುಗಡೆ ಮಾಡಲು ಸಲಹೆ ನೀಡಿದೆ. ಮುಂಬೈಯ ಅರ್ಥರ್ ರೋಡ್ ಸೆರೆಮನೆಯಲ್ಲಿನ ಸನ್ನಿವೇಶ ಇಂತಹ ಅಪಾಯಗಳಿಗೆ ಒಂದು ಸಾಕ್ಷಿಯಾಗಿದೆ.

ದೈಹಿಕವಾಗಿ ಅಸಮರ್ಥರಾಗಿರುವ, ಗಂಭೀರ ವೈದ್ಯಕೀಯ ಪರಿಸ್ಥಿತಿಗಳಲ್ಲಿರುವ ಡಾ.ಜಿ.ಎನ್. ಸಾಯಿಬಾಬ ಮತ್ತಿತರರಿಗೂ ಅರ್ಹ ವೈದ್ಯಕೀಯ ಶುಶ್ರೂಷೆ ಪಡೆಯಲು ಬಿಡುತ್ತಿಲ್ಲ.

ಇಂತಹ ಒಂದು ಸಮಯದಲ್ಲಿ ಭಾರತ ಸರಕಾರ ಅಧ್ಯಯನಕಾರರನ್ನು, ಕಾರ್ಯಕರ್ತರನ್ನು, ಮಹಿಳೆಯರು ಮತ್ತು ವಿದ್ಯಾರ್ಥಿಗಳನ್ನು ಜೈಲಿಗಟ್ಟುತ್ತಿರುವುದು, ಅವರ ಆರೋಗ್ಯ ಮತ್ತು ಸುರಕ್ಷತತೆಗೆ ಗಂಭೀರ ಅಪಾಯವೊಡ್ಡುತ್ತಿರುವುದು ಆಘಾತಕಾರಿ ಸಂಗತಿ.

  • ದಿಲ್ಲಿಯಲ್ಲಿ, ನೇರವಾಗಿ ಗೃಹ ಮಂತ್ರಾಲಯದ ಅಡಿಯಲ್ಲಿರುವ ಪೋಲೀಸರು ಸಂಪೂರ್ಣವಾಗಿ ಶಾಂತಿಯುತವಾಗಿದ್ದ ಸಿಎಎ-ವಿರೋಧಿ ಆಂದೋಲನದಲ್ಲಿ ತೊಡಗಿದ್ದ ಮಹಿಳೆಯರೂ ಸೇರಿದಂತೆ ಪ್ರಮುಖ ಕಾರ್ಯಕರ್ತರನ್ನು ದಿಲ್ಲಿಯ ಕೋಮುವಾದಿ ಹಿಂಸಾಚಾರಕ್ಕೆ ತಳುಕು ಹಾಕುವ ಸಂಪೂರ್ಣವಾಗಿ ಸೃಷ್ಟಿಸಿಕೊಂಡ ಆಪಾದನೆಗಳ ಮೇಲೆ ಕರಾಳ ಯುಎಪಿಎ ಅಡಿಯಲ್ಲಿ ಬಂಧಿಸುತ್ತಿದ್ದಾರೆ. ಜತೆಗೆ, ಸ್ಪೆಷಲ್ ಬ್ರಾಂಚಿನವರು ಹತ್ತಾರು ವಿದ್ಯಾರ್ಥಿಗಳನ್ನು ವಿಚಾರಣೆಗೆಂದು ಕರೆದು ಬೆದರಿಸುತ್ತಿದ್ದಾರೆ. ಜೆಎನ್‌ಯುನಲ್ಲಿನ ಹಿಂಸಾಚಾರಕ್ಕೆ ಒಳಗಾದವರ ಮೇಲೆ ಗುರಿಯಿಡಲಾಗಿದೆ, ಆದರೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರುಗಳ ಮೇಲೆ ಹಿಂಸಾಚಾರ ನಡೆಸಿದ ಹೊರಗಿನವರಲ್ಲಿ ಒಬ್ಬರನ್ನೂ ಬಂಧಿಸಿಲ್ಲ. ನಿರ್ದಿಷ್ಟ ಸಮುದಾಯಗಳ ಜನರ ಮೇಲೇ ಗುರಿಯಿಡಲಾಗುತ್ತಿದೆ, ಅದೇ ವೇಳೆಗೆ, ಕೋಮು ದ್ವೇಷದಿಂದ ತುಂಬಿದ ಹಿಂಸಾಚಾರವನ್ನು ನಡೆಸಿದ್ದಾರೆಂಬುದು ವಿವಿಧ ವೀಡಿಯೋ ರೆಕಾರ್ಡಿಂಗ್‌ಗಳಲ್ಲಿ ಸಾಬೀತಾಗಿರುವ ಮಂದಿ, ಆಳುವ ಪಕ್ಷದ ಪ್ರಮುಖ ಮುಖಂಡರೂ ಸೇರಿದಂತೆ, ಯಾವುದೇ ಶಿಕ್ಷೆಯ ಭಯವಿಲ್ಲದೆ ಅಡ್ಡಾಡುತ್ತಿದ್ದಾರೆ ಎಂಬುದೂ ಆಘಾತಕಾರಿ.
  • ಈಶಾನ್ಯ ದಿಲ್ಲಿಯಲ್ಲಿ ಕೋಮುವಾದಿ ಹಿಂಸಾಚಾರದಲ್ಲಿ ಪೋಲೀಸರ ಶಾಮೀಲಿನ ಸಾಕ್ಷ್ಯ ಮೇಲ್ನೋಟಕ್ಕೇ ಕಾಣುತ್ತಿದ್ದರೂ ಮತ್ತು ಅಲ್ಪಸಂಖ್ಯಾತರ ಪ್ರದೇಶಗಳಲ್ಲಿ ದಾಳಿ ಮಾಡುತ್ತಿರುವ ದೊಂಬಿಕೋರರನ್ನು ವೀಡಿಯೋಗಳಲ್ಲಿ ಗುರುತಿಸಬಹುದಾಗಿದ್ದರೂ, ದಿಲ್ಲಿ ಪೋಲೀಸ್ ಮುಸ್ಲಿಂ ಯುವಕರನ್ನು ಏಕಪಕ್ಷೀಯವಾಗಿ ಬಂಧಿಸುತ್ತಿದೆ, ಅಲ್ಪಸಂಖ್ಯಾತರನ್ನು ಮಾತ್ರವೇ ವಿಚಾರಣೆಗೆ ಗುರಿಪಡಿಸುತ್ತಿದೆ, ಈ ಮೂಲಕ ಅವರಲ್ಲಿ ಅಭದ್ರತೆಯ ಭಾವವನ್ನು ಸೃಷ್ಟಿಸುತ್ತಿದೆ.
  • ಭೀಮಾ ಕೊರಗಾಂವ್ ಪ್ರಕರಣದಲ್ಲಿ ಸುಧಾ ಭಾರದ್ವಾಜ್ ಮತ್ತಿತರ ಕಾರ್ಯಕರ್ತರನ್ನು ಯಾವುದೇ ಸಾಕ್ಷ್ಯವಿಲ್ಲದೆ ಇನ್ನೂ ಬಂಧನದಲ್ಲೇ ಮುಂದುವರೆಸುತ್ತಿದ್ದರೂ, ಅದೇ ಕೇಸಿನಲ್ಲಿ ಆನಂದ ತೆಲ್ತುಂಬ್ಡೆ ಮತ್ತು ಗೌತಮ್ ನವ್ಲಖರನ್ನು ಬಂಧಿಸಿರುವುದು, ನಾಗರಿಕ ಸ್ವಾತಂತ್ರ್ಯಗಳನ್ನು ಹೇಗೆ ತುಳಿದು ಹಾಕಲಾಗುತ್ತಿದೆ ಎಂಬುದಕ್ಕೆ ಇನ್ನೊಂದು ಆಘಾತಕಾರೀ ಉದಾಹರಣೆ.
  • ಕಾಶ್ಮೀರದಲ್ಲಿ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರನ್ನು ಇನ್ನೂ ಬಂಧಿಸಿಟ್ಟಿರುವುದು ಖಂಡನೀಯ. ಅದೇ ರೀತಿಯಲ್ಲಿ ಕಾಶ್ಮೀರದ ಬಂಧಿತರನ್ನು ದೇಶದ ಹಲವೆಡೆಗಳಲ್ಲಿ ಸೆರೆಯಲ್ಲಿ ಇಟ್ಟಿರುವುದು ಕೂಡ ಖಂಡನೀಯ.
  • ಶ್ರೀ ಲಾಲೂ ಪ್ರಸಾದ್ ಯಾದವ್‌ರನ್ನು ಅವರ ಅನಾರೋಗ್ಯದ ಹೊರತಾಗಿಯೂ ಮತ್ತು ಕಠಿಣ ಪರಿಸ್ಥಿತಿಗಳಲ್ಲಿ ಬಂಧಿಸಿಟ್ಟಿರುವ ಸರಕಾರದ ಪ್ರತೀಕಾರದ ಮನೋಭಾವ ಖಂಡನೀಯ.

ನಾವು, ಸರಕಾರ ಈ ದಾರಿಯನ್ನು ಬದಲಿಸಬೇಕು, ಪ್ರತಿಪಕ್ಷಗಳ ಮುಖಂಡರನ್ನು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕು ಮತ್ತು ದೇಶ ಹಾಗೂ ಜನತೆ ಕೊವಿಡ್ ಮಹಾಮಾರಿಯನ್ನು ಎದುರಿಸುವಲ್ಲಿ ಐಕ್ಯತೆಯಿಂದಿರಬೇಕಾದ ಸಮಯದಲ್ಲಿ ಪ್ರತಿಭಟನಾಕಾರರು ಮತ್ತು ರಾಜಕೀಯ ಭಿನ್ನಮತ ಹೊಂದಿರುವವರ ವಿರುದ್ಧ ಪ್ರತೀಕಾರದ ರಾಜಕೀಯವನ್ನು ನಿಲ್ಲಿಸಬೇಕು ಎಂದು ತಮ್ಮನ್ನು ಆಗ್ರಹಿಸುತ್ತೇವೆ.

Leave a Reply

Your email address will not be published. Required fields are marked *