ಕಾರ್ಮಿಕ ಪ್ರಧಾನ ಕಾರ್ಯದರ್ಶಿ ವರ್ಗಾವಣೆ ತಡೆಯಲು ಕೋರಿ ಮನವಿ

ರಾಜ್ಯದ ಬಿಜೆಪಿ ಸರಕಾರವು ಏಕಾಏಕಿಯಾಗಿ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್‌ ರವರನ್ನು ವರ್ಗಾವಣೆ ಮಾಡಿರುವ ಕ್ರಮ ಸರಿಯಾದದ್ದು ಅಲ್ಲ, ಪ್ರಸಕ್ತ ಕೋವಿಡ್-‌19 ರೋಗ ನಿಯಂತ್ರಣ ಮತ್ತು ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಸಮರ್ಪಕವಾದ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಈ ಸಂದರ್ಭದಲ್ಲಿ ವರ್ಗಾವಣೆ ಮಾಡಿರುವುದು ಸರಿಯಲ್ಲವೆಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ಸಮಿತಿಯು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಮನವಿಯಿಲ್ಲಿ ವಿವರಗಳು ಈ ಕೆಳಗಿನಿಂತಿವೆ :

ಮಾನ್ಯ ಮುಖ್ಯಮಂತ್ರಿಗಳು,

ಕರ್ನಾಟಕ ಸರಕಾರ, ವಿಧಾನಸೌಧ – ಬೆಂಗಳೂರು.

ಕೋವಿಡ್ ಪರಿಹಾರ ಕಾರ್ಯ ಕೈಗೊಳ್ಳುವಲ್ಲಿ ರಾಜ್ಯ ಸಕಾ೯ರದ ವಿವಿಧ ಇಲಾಖೆಗಳಲ್ಲೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಣಿವಣ್ಣನ್ ಅವರನ್ನು ರಾಜ್ಯ ಸರಕಾರವು ಏಕಾಏಕಿ ವಗಾ೯ವಣೆ ಮಾಡಿರುವುದು ಸರಿಯಾದ ಕ್ರಮವಾಗಿರುವುದಿಲ್ಲವೆಂದು ಸಿಪಿಐ(ಎಂ) ರಾಜ್ಯ ಸಮಿತಿ ಖಂಡಿಸುತ್ತದೆ.

ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ ರಾಜ್ಯಗಳಲ್ಲಿ ತಂದಿರುವ ಕಾರ್ಮಿಕ ಕಾನೂನುಗಳಿಂದ ಬಂಡವಾಳಗಾರರಿಗೆ ವಿನಾಯಿತಿ ನೀಡುವ ಕ್ರಮಗಳನ್ನು ಸುಗ್ರೀವಾಜ್ಞೆ ಹೊರಡಿಸುವ ಸರಕಾರದ ಕೈಂಕರ್ಯಕ್ಕೆ ಅನುವುಗೊಳಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಮಹೇಶ್ವರ ರಾವ್ ಅವರಿಗೆ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹೊಣೆಯನ್ನು ವಹಿಸಿದೆ.

ರಾಜ್ಯದ ಕಾರ್ಮಿಕರ ಹಿತಕ್ಕಿಂತ ಕಾರ್ಪೋರೇಟ್ ಬಂಡವಾಳದ ಹಿತವೇ ರಾಜ್ಯ ಸರ್ಕಾರಕ್ಕೆ ಮುಖ್ಯವಾಗಿದೆ ಎಂಬುದನ್ನು ಇದು ಮತ್ತೆ ಮತ್ತೆ ಸಾಬೀತು ಮಾಡಿದಂತಾಗಿದೆ.

ಏನಾದರು ಮಾಡಿ ಕಾರ್ಮಿಕ ಕಾನೂನುಗಳಿಂದ ಬಂಡವಾಳಗಾರರಿಗೆ ವಿನಾಯಿತಿ ನೀಡಲು ಕೋವಿಡ್ ಪರಿಹಾರವನ್ನು ಸಹಾ ಬಲಿಕೊಡಲು ರಾಜ್ಯ ಸರ್ಕಾರ ಹಿಂಜರಿಯದು ಎಂಬುದನ್ನು ಇದು ತೋರುತ್ತದೆ.

ತನ್ನ ಬಂಡವಾಳಗಾರರ ಪರ ನಿಲುಮೆಯ ಸಾಧನೆಗಾಗಿ ಒಬ್ಬ ದಕ್ಷ ಮತ್ತು ಕೋವಿಡ್ ಪರಿಹಾರ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವಲ್ಲಿ ಯಶಸ್ಸು ಕಾಣುತ್ತಿದ್ದ ಅಧಿಕಾರಿಯನ್ನು ಬೆಂಬಲಿಸಿ ಪ್ರೋತ್ಸಾಹಿಸುವ ಬದಲು ಈ ವರ್ಗಾವಣೆಯು ಶಿಕ್ಷಿಸಿದಂತಾಗಿದೆ  ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಠೀಕಿಸಿದೆ.

ಕೋವಿಡ್ ಲಾಕ್ ಡೌನ್ ಸಂತ್ರಸ್ತರಿಗೆ ಪರಿಹಾರವನ್ನು ಪರಿಣಾಮಕಾರಿಯಾಗಿ ಮುಂದುವರಿಸಲು ಶ್ರೀ ಮಣಿವಣ್ಣನ್ ವರ್ಗಾವಣೆಯನ್ನು ಕೂಡಲೆ ರದ್ದುಪಡಿಸಿ, ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಯಾಗಿ ಅವರನ್ನೇ ಮುಂದುವರಿಸಬೇಕೆಂದು ಸಿಪಿಐ (ಎಂ)  ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ.

ಯು. ಬಸವರಾಜ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *