ಪುನ್ಮಪ್ರ-ವಯಲಾರ್ ವೀರಗಾಥೆ

ಕತ್ತದ ಉದ್ದಿಮೆ ಕಾರ್ಮಿಕರು ಅವರ ಮಾಲೀಕರ ವಿರುದ್ಧ ಮತ್ತು ತಿರುವಾಂಕೂರಿನ ದಿವಾನರ ಸರ್ವಾಧಿಕಾರಿ ಆಳ್ವಿಕೆಯ ವಿರುದ್ಧ ಹಾಗೂ ಜವಾಬ್ದಾರಿಯುತ ಸರ್ಕಾರಕ್ಕಾಗಿ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ೧೯೪೬ರಿಂದ ನಡೆಸಿದ ವೀರೋಚಿತ ಹೋರಾಟದ ಗಾಥೆಯಿದು. ಅಳಪುಜಾ ಮತ್ತು ಸುತ್ತಲ ಪ್ರದೇಶಗಳಲ್ಲಿನ ಕಾರ್ಮಿಕ ವರ್ಗದ ಕಟ್ಟಾಳುಗಳು ತಿರುವಾಂಕೂರು ಹಿಂದೆಂದೂ ಕಂಡಿರದಂತಹ ಧೀರತನವನ್ನು ಪ್ರದರ್ಶಿಸಿದರು. ಅಸಮಾನ ಕದನದಲ್ಲಿ, ಕಾರ್ಮಿಕ ವರ್ಗದ ಸ್ವಯಂಸೇವಕರು ಅಳಪುಜಾ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ತಮ್ಮ ಒಡ್ಡೊಡ್ಡಾದ ಆಯುಧಗಳೊಂದಿಗೆ ಮಿಲಿಟರಿ ಮತ್ತು ಪೋಲಿಸರು ಹಾಗೂ ತಿರುವಾಂಕೂರು ಸರ್ಕಾರದ ಕುಮ್ಮಕ್ಕು ಪಡೆದ ಸಮಾಜಘಾತುಕ ಶಕ್ತಿಗಳ ವಿರುದ್ಧ ಹೋರಾಡಿದರು. ಇದರಲ್ಲಿ ಕಾರ್ಮಿಕ ವರ್ಗ ಸೋಲುಂಡರೂ ಕೂಡ, ರಾಜ್ಯದ ಇಡೀ ರಾಜಕೀಯ ವಾತಾವರಣ ಸಂಪೂರ್ಣ ಬದಲಾಯಿತು. ಹೋರಾಟದಿಂದ ಎದ್ದುಬಂದ ಘೋಷಣೆ: ವಯಲಾರಿನ ರಕ್ತ ನಮ್ಮ ರಕ್ತ ಒಂದು ವರ್ಷದ ಒಳಗೇ, ಜನರ ರಾಜಕೀಯ ಬೇಡಿಕೆಗಳನ್ನು ಒಪ್ಪಿರುವುದಾಗಿ ಮಹಾರಾಜ ಘೋಷಣೆ ಮಾಡಿದ.

Communist100 File copyಪುನ್ನಪ್ರ ಮತ್ತು ವಯಲಾರ್ ಕೇರಳದ ಅಲೆಪ್ಪಿ(ಅಲಪುಜಾ) ಜಿಲ್ಲೆಯ ಎರಡು ಹಳ್ಳಿಗಳು. ಪುನ್ನಪ್ರ ಮತ್ತು ವಯಲಾರ್ ಹೋರಾಟವು ಭೂಮಾಲಕರ ಮಧ್ಯಯುಗೀನ ದಬ್ಬಾಳಿಕೆಯ ವಿರುದ್ಧ ರೈತರು ಮತ್ತು ಕೃಷಿ ಕಾರ್ಮಿಕರ ಪ್ರತಿರೋಧದ ಚಳುವಳಿ, ಕತ್ತದ ಉದ್ದಿಮೆ ಕಾರ್ಮಿಕರು ಅವರ ಮಾಲೀಕರ ವಿರುದ್ಧ, ಮತ್ತು ತಿರುವಾಂಕೂರಿನ ದಿವಾನರ ಸರ್ವಾಧಿಕಾರೀ ಆಳ್ವಿಕೆಯ ವಿರುದ್ಧ ಹಾಗೂ ಜವಾಬ್ದಾರಿಯುತ ಸರ್ಕಾರಕ್ಕಾಗಿ ನಡೆದ ವೀರೋಚಿತ ಹೋರಾಟದ ಕತೆ. ಚಳುವಳಿ ಪ್ರಾರಂಭವಾಗಿದ್ದು ಅಕ್ಟೋಬರ್ ೧೯೪೬ರಲ್ಲಿ.

೧೯೩೮ರಲ್ಲಿ ತಿರುವಾಂಕೂರಿನಲ್ಲಿ ನಡೆದ ಮೊದಲ ರಾಜಕೀಯ ಸಾರ್ವತ್ರಿಕ ಮುಷ್ಕರದ ಪ್ರಬಲ ಹೋರಾಟದ ಕೇಂದ್ರಗಳಾಗಿದ್ದ ಆ ಜಿಲ್ಲೆ ಮತ್ತು ಆ ಎರಡು ಹಳ್ಳಿಗಳು ೧೯೪೬ರಲ್ಲಿ ಮತ್ತೆ ಮಹಾರಾಜ ಮತ್ತು ಅವನ ದಿವಾನನ ನಿರಂಕುಶಾಧಿಕಾರದ ವಿರುದ್ಧ ಪ್ರಮುಖ ಹೋರಾಟದ ಕೇಂದ್ರಗಳಾದವು. ಅಲ್ಲಿಯ ಸಮರಶೀಲ ಕಾರ್ಮಿಕರು ಮತ್ತು ಸಶಸ್ತ್ರ ಸೇನೆಯ ನಡುವಿನ ಯೋಜಿತ ಯುದ್ಧಗಳಿಂದಾಗಿ ಈ ಎರಡು ಹಳ್ಳಿಗಳು ಎಲ್ಲರ ಗಮನವನ್ನು ಸೆಳೆದಿದ್ದವು. ಅಲ್ಲಿಯ ಕಾರ್ಮಿಕರ ಬಳಿ ಯಾವುದೇ ಶಸ್ತ್ರಗಳಿರಲಿಲ್ಲ, ಬದಲಿಗೆ ಒರಟಾದ ಮರದ ಬಾಣಗಳನ್ನು ಹೊಂದಿದ್ದರು.

Punnapra_vayalarಎರಡನೇ ವಿಶ್ವ ಮಹಾ ಯುದ್ಧದ ಕೊನೆಯಲ್ಲಿ ಅದರ ಹಿಂದೆಯೇ ವ್ಯಾಪಕ ನಿರುದ್ಯೋಗ ಮತ್ತು ಹಸಿವಿನಿಂದ ಸಾಯುವ ಸ್ಥಿತಿ ಬಂತು. ಆಹಾರ, ಅಕ್ಕಿ, ಬಟ್ಟೆ, ಸಕ್ಕರೆ, ಸೀಮೆಎಣ್ಣೆ ಮುಂತಾವುಗಳ ತೀವ್ರ ಅಭಾವ ಇತ್ತು, ಕಾಳಸಂತೆಯಲ್ಲಿ ಮಾತ್ರ ಅವು ದೊರೆಯುತ್ತಿದ್ದವು. ಈ ಪ್ರದೇಶದ ಭೂಮಾಲಕರಿಂದ ಗೇಣಿದಾರರು ಮತ್ತು ಕೃಷಿ ಕಾರ್ಮಿಕರ ಮೇಲೆ ಬಡಿತ ಮತ್ತು ಕಿರುಕುಳಗಳು, ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಮನೆಗಳ ದ್ವಂಸಗಳು ನಡೆದವು. ಜೀತದ ಗುಲಾಮರಂತೆ ಅವರನ್ನು ನೋಡಿಕೊಂಡರು. ಕೃಷಿ ಕಾರ್ಮಿಕ ಯುವತಿಯೊಬ್ಬಳು ಭೂಮಾಲಕನ ಲೈಂಗಿಕ ತೃಷೆ ತಣಿಸಲು ನಿರಾಕರಿಸಿದ್ದಕ್ಕೆ ಅವಳನ್ನು ಹಿಡಿದು ಹಗ್ಗದಿಂದ ಕಟ್ಟಿ ಅವನ ಮನೆಯ ತನಕ ಎಳೆದುಕೊಂಡು ಹೋಗಿ ಅಲ್ಲಿ ಅವಳ ಮೇಲೆ ಅತ್ಯಾಚಾರ ಮಾಡಿ, ಹಿಂಸಿಸಿ  ಕುತ್ತಿಗೆಯವರೆಗೂ ಹೂತುಹಾಕಿ ತಲೆಗೆ ಒದ್ದಿದ್ದ.

ಆ ಪ್ರದೇಶದ ಜನರು ಮುಖ್ಯವಾಗಿ ಕಾರ್ಮಿಕರು, ಕೃಷಿ ಕೂಲಿಗಾರರು ಮತ್ತು ಗೇಣಿದಾರರು ಕತ್ತದ ಕಾರ್ಮಿಕರ ಸಂಘ ಹಾಗೂ ಭಾರತ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ಸಂಘಟಿತರಾಗಿ ಪ್ರತಿರೋಧದ ಚಳುವಳಿಗೆ ಸಿದ್ಧರಾದರು. ಇತರ ಕಾರ್ಮಿಕರನ್ನೂ ಸಂಘಟಿಸಲಾಯಿತು. ೧೯೪೪-೪೫ರಲ್ಲಿ ಅದಾಗಲೇ ಕೃಷಿ ಕಾರ್ಮಿಕರು ಚೆರ್ತಾಲಾ ತಾಲೂಕಿನಾದ್ಯಂತ ವಾರ್ಡ್ ಸಮಿತಿಗಳನ್ನು ರಚಿಸಿಕೊಂಡಿದ್ದರು.

ತಿರುವಾಂಕೂರಿನ ರಾಜ ಮತ್ತು ದಿವಾನರು ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ತಿರಸ್ಕರಿಸಿದ್ದಷ್ಟೇ ಅಲ್ಲ, ಸ್ವತಂತ್ರ ಭಾರತದ ಭಾಗವಾಗದೆ ಸ್ವತಂತ್ರ ರಾಜ್ಯವಾಗಿ ಉಳಿಯುವುದಾಗಿ ಘೋಷಿಸಿದರು. ಆಗ ಜವಾಬ್ದಾರಿ ಸರ್ಕಾರಕ್ಕಾಗಿನ ಹೋರಾಟವು ಈ ಹೋರಾಟದ ಜತೆ ಬೆರೆತು ಸ್ವತಂತ್ರ ತಿರುವಾಂಕೂರಿನ ವಿರುದ್ಧದ ಹೋರಾಟವಾಗಿ ತಿರುಗಿತು.

ತಿರುವಾಂಕೂರು ಆಡಳಿತ ಮತ್ತು ಪ್ರಜಾಪ್ರಭುತ್ವ ಶಕ್ತಿಗಳ ವಿರೋಧದ ನಡುವೆ ಇದ್ದ ಮತ್ತೊಂದು ವಿವಾದ ಅಮೆರಿಕಾ ಮಾದರಿ ಎಂಬುದಾಗಿತ್ತು. ಒಬ್ಬ ಕಾರ್ಯಕಾರಿ ಅಧ್ಯಕ್ಷ ಇರುವ ಅಮೆರಿಕಾ ಮಾದರಿಯನ್ನು ದಿವಾನ ಬೆಂಬಲಿಸಿದ. ದಿವಾನನ ಈ ಪ್ರಸ್ತಾಪವು ಪುನ್ನಪ್ರ-ವಯಲಾರ್ ಸಮರಶೀಲ ಕಾರ್ಮಿಕ ವರ್ಗದಿಂದ ತೀವ್ರ ಪ್ರತಿರೋಧಕ್ಕೆ ಕಾರಣವಾಯಿತು. ಅಲೆಪ್ಪಿಯ ಸಮರಶೀಲ ಕಾರ್ಮಿಕ ವರ್ಗ ಮತ್ತು ಕಮ್ಯುನಿಸ್ಟ್ ಪಕ್ಷವು ಅಮೆರಿಕಾ ಮಾದರಿ ಅರಬ್ಬೀ ಸಮುದ್ರಕ್ಕೆ ಎಂಬ ಘೋಷಣೆ ನೀಡಿತು.

೧೯೪೫ರ ಜುಲೈ-ಆಗಸ್ಟ್‌ನಲ್ಲಿ, ಅಲೆಪ್ಪಿ, ಚೆರ್ತಾಲಾ ಹಾಗೂ ಮುಹಮ್ಮಾದ ಕಾರ್ಮಿಕರು ನ್ಯಾಯ ಬೆಲೆಯಲ್ಲಿ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಿ ಎಂದು ಬೇಡಿಕೆ ಮುಂದಿಟ್ಟು ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದರು. ಆರಂಭದಲ್ಲಿ ತಿರುವಾಂಕೂರು ರಾಜ್ಯ ಸರ್ಕಾರವು ಅವುಗಳ ವಿತರಣೆಗೆ ಒಂದು ಕಾರ್ಯಪಡೆ ರಚಿಸುವುದಾಗಿ ಒಪ್ಪಿತು. ಆದರೆ ಯಾವಾಗ ಕಾರ್ಮಿಕರು ನಿರುದ್ಯೋಗ ಹಾಗೂ ಹಸಿವಿನ ಸಾವಿನ ವಿರುದ್ಧ ಹೋರಾಟ ಮಾಡಿದರೋ ಆ ಚಳುವಳಿಯನ್ನು ಬಗ್ಗುಬಡಿಯಲು ಸರ್ಕಾರ ಮುಂದಾಯಿತು. ಸೈನ್ಯಾಡಳಿತ ಘೋಷಿಸಲಾಯಿತು. ಪೋಲಿಸರನ್ನು ಮನಸೋಯಿಚ್ಛೆ ಏನು ಮಾಡಲೂ ಹರಿಬಿಡಲಾಯಿತು. ಕೊಯಿಲಾನ್, ಅಲೆಪ್ಪಿ, ಕೊಟ್ಟಾಯಂ, ಪುನಲೂರು ಮುಂತಾದೆಡೆ ರಾಜ್ಯದ ಸೇನೆ ಮತ್ತು ಸಶಸ್ತ್ರ ಪೋಲಿಸ್ ಪಡೆಗಳನ್ನು ಸನ್ನದ್ಧಗೊಳಿಸಲಾಯಿತು. ಎಲ್ಲಾ ಪ್ರತಿಭಟನೆಗಳು ಮತ್ತು ಮುಷ್ಕರಗಳನ್ನು ನಿಷೇಧಿಸಲಾಯಿತು. ಪೋಲಿಸರ ಪಾಶವೀಕೃತ್ಯ ಮತ್ತು ಭಯೋತ್ಪಾದಕ ವರ್ತನೆಗಳ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸದಂತೆ ಆದೇಶ ನೀಡಲಾಯಿತು. ಪೋಲಿಸ್ ಮತ್ತು ಗೂಂಡಾ ದಾಳಿಗಳು ಅತಿರೇಕವಾದವು. ಕಾರ್ಮಿಕ ಕಛೇರಿಗಳ ಮೇಲೆ ದಾಳಿಗಳಾದವು, ಅವನ್ನು ಸುಟ್ಟು ದ್ವಂಸ ಮಾಡಲಾಯಿತು. ಚಳುವಳಿಯ ಮುಖಂಡರನ್ನು ಬಂಧಿಸಿ ಜೈಲಿಗೆ ತಳ್ಳಲಾಯಿತು. ಈ ಭಯೋತ್ಪಾದಕ ದಾಳಿಗಳಲ್ಲಿ ಭೂಮಾಲಕರು ಸಕ್ರಿಯ ಪಾತ್ರ ವಹಿಸಿದ್ದರು.

Punnapra-vayalar3
          ಜೈಲಿನಿಂದ ಬಿಡುಗಡೆಯಾಗಿ ಬಂದ ಹೋರಾಟಗಾರರು               

ಅಖಿಲ ತಿರುವಾಂಕೂರು ಟ್ರೇಡ್ ಯೂನಿಯನ್ ಕಾಂಗ್ರೆಸ್ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿತು, ೧೯೪೬ ಅಕ್ಟೋಬರ್ ೨೨ರಂದು ಮುಷ್ಕರ ಪ್ರಾರಂಭವಾಯಿತು. ಭಾರಿ ಸಂಖ್ಯೆಯಲ್ಲಿ ಕಾರ್ಮಿಕರು ತಮ್ಮ ಪ್ರತಿಭಟನೆಗಳನ್ನು ಶುರುಮಾಡಿದರು ಮತ್ತು ವಿಮೋಚನೆಗಾಗಿ ಒತ್ತಾಯಿಸಿ ಪುನ್ನಪ್ರದಲ್ಲಿನ ಸಶ್ಯಸ್ತ್ರ ಪೋಲಿಸ್ ಕ್ಯಾಂಪುಗಳತ್ತ ಮೆರವಣಿಗೆ ಹೋದರು. ಕ್ಯಾಂಪಿನ ಮೇಲಧಿಕಾರಿ ಪ್ರತಿಭಟನಾಕಾರರ ಮೇಲೆ ಗುಂಡಿನ ಮಳೆಗರೆಯಲು ಆದೇಶ ನೀಡಿದ. ಹಲವಾರು ಪ್ರತಿಭಟನಾಕಾರರು ಪೋಲಿಸರ ಗುಂಡುಗಳಿಂದ ಹತರಾದರು, ಅದೇ ಸಮಯದಲ್ಲಿ ಆ ಅಧಿಕಾರಿ ಮತ್ತವನ ಐದು ಜನರು ಆ ಕಾದಾಟದಲ್ಲಿ ತಮ್ಮ ಜೀವ ಕಳೆದುಕೊಂಡರು. ಪುನ್ನಪ್ರ ಕಾದಾಟವಾದ ೨೪ ಗಂಟೆಯೊಳಗೆ, ಅಂಬಳಪುಜ ಮತ್ತು ಚೆರ್ತಾಲಾ ತಾಲೂಕುಗಳನ್ನು ಸೇನೆಗೆ ವಹಿಸಲಾಯಿತು. ಹಳ್ಳಿಗಳಲ್ಲಿ ಜನರ ಬೇಟೆಯಾಯಿತು. ಜನರನ್ನು ಹಿಡಿದು ಕೊಂದರು ಅಥವಾ ಬಡಿದು ಕೊಂದರು. ಪೋಲಿಸರ ದಾಳಿಗಳನ್ನು ಎದುರಿಸಲು ವಯಲಾರಿನಲ್ಲಿ ಒಂದು ಶಿಬಿರವನ್ನು ಏರ್ಪಡಿಸಲಾಗಿತ್ತು. ೧೯೪೬ ಅಕ್ಟೋಬರ್ ೨೭ರ ಮಧ್ಯಾಹ್ನ ಶಿಬಿರದಲ್ಲಿದ್ದವರು ಊಟ ಮಾಡುತ್ತಿದ್ದಾಗ ಹಠಾತ್ತನೆ ಸೇನೆಯು ಅವರನ್ನು ಸುತ್ತುವರಿಯಿತು, ಮನಬಂದಂತೆ ಗೋಲಿಬಾರ್ ಮಾಡಿ ಹಲವರನ್ನು ಹತ್ಯೆಮಾಡಿತು(ಇವತ್ತಿವರೆಗೂ ಎಷ್ಟು ಜನ ಎಂಬುದು ಪತ್ತೆಯಾಗಲಿಲ್ಲ). ಗುಂಡುಮದ್ದುಗಳು ಇರುವ ತನಕವೂ ಗೋಲಿಬಾರ್ ನಡೆಯಿತು, ನಂತರವೂ ಬದಕುಳಿದವರನ್ನು ಬಂದೂಕಿನ ತುದಿಯ ಬಾಯೊನೆಟ್‌ಗಳಿಂದ ಸಾಯಿಸಿದರು.

ಜನ ಹೇಳತೀರದ ಪೋಲಿಸ್ ಮತ್ತು ಮಿಲಿಟರಿ ದೌರ್ಜನ್ಯಗಳಿಗೆ ಒಳಗಾದರು. ಅನೇಕರು ತಮ್ಮ ಮನೆ ಮಾರುಗಳನ್ನು ತೊರೆದು ತಿರುವಾಂಕೂರಿನ ಹೊರಗಡೆ ಉಳಿಯಬೇಕಾಯಿತು. ಜಿಲ್ಲೆಯಾದ್ಯಂತ ನಡೆದ ಈ ಕಾರ್ಯಾಚರಣೆಯಲ್ಲಿ ನೂರಾರು ಸಮರಶೀಲ ಕಾರ್ಮಿಕರು ಪ್ರಾಣ ತೆತ್ತರು, ಬಹಳ ಜನ ಗಾಯಗೊಂಡರು; ನೂರಾರು ಮನೆಗಳು ಸುಟ್ಟು ಭಸ್ಮವಾದವು, ಇಡೀ ಪ್ರದೇಶ  ಮರುಭೂಮಿಯಂತಾಯಿತು. ಅಲೆಪ್ಪಿಯ ಕಮ್ಯುನಿಸ್ಟರೆಲ್ಲರನ್ನು ಹೊಸಕಿ ಹಾಕಿಬಿಟ್ಟೆವೆಂದು ಸರ್ವಶಕ್ತ ದಿವಾನ ಕೊಚ್ಚಿಕೊಂಡ. ಈ ಎಲ್ಲಾ ದಾರುಣ ಸಂಗತಿಗಳ ನಡುವೆಯೂ, ಅಳಪುಜಾ ಮತ್ತು ಸುತ್ತಲ ಪ್ರದೇಶಗಳಲ್ಲಿನ ಕಾರ್ಮಿಕ ವರ್ಗದ ಕಟ್ಟಾಳುಗಳ ತಿರುವಾಂಕೂರು ಈ ಹಿಂದೆಂದೂ ಕಂಡಿರದಂತಹ ಧೀರತನವನ್ನು ಪ್ರದರ್ಶಿಸಿದರು.

ಈ ಅಸಮಾನ ಕದನದಲ್ಲಿ, ಕಾರ್ಮಿಕ ವರ್ಗದ ಸ್ವಯಂಸೇವಕರು ಅಳಪುಜಾ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ತಮ್ಮ ಒಡ್ಡೊಡ್ಡಾದ ಆಯುಧಗಳೊಂದಿಗೆ ಮಿಲಿಟರಿ ಮತ್ತು ಪೋಲಿಸರು ಹಾಗೂ ತಿರುವಾಂಕೂರು ಸರ್ಕಾರದ ಕುಮ್ಮಕ್ಕು ಪಡೆದ ಸಮಾಜಘಾತುಕ ಶಕ್ತಿಗಳ ವಿರುದ್ಧ ಹೋರಾಡಿದರು. ವಸ್ತುಶಃ ಯಾವ ಶಸ್ತ್ರಾಸ್ತಗಳಿಲ್ಲದೇ ಸರ್ಕಾರದ ದಾಳಿಗಳನ್ನು ಎದುರಿಸಿದ ಹೆಗ್ಗಳಿಕೆ ತಿರುವಾಂಕೂರಿನ ಕಮ್ಯುನಿಸ್ಟ್ ಪಕ್ಷದ ಮುಖಂಡರಿಗೆ ಸಲ್ಲುತ್ತದೆ.

ಕಾರ್ಮಿಕ ವರ್ಗ ಸೋಲುಂಡರೂ ಕೂಡ, ರಾಜ್ಯದ ಇಡೀ ರಾಜಕೀಯ ವಾತಾವರಣ ಸಂಪೂರ್ಣ ಬದಲಾಗಿತ್ತು. ಈ ಹೋರಾಟದಿಂದ ಎದ್ದುಬಂದ ಘೋಷಣೆ: ವಯಲಾರಿನ ರಕ್ತ ನಮ್ಮ ರಕ್ತ ಮತ್ತು ಅವರ ತ್ಯಾಗಗಳು ವ್ಯರ್ಥವಾಗಲಿಲ್ಲ.

ಕಾರ್ಮಿಕ ವರ್ಗ ಮಾತ್ರವೇ ಆ ಪ್ರತಿರೋಧದ ವಿರುದ್ಧ ತನ್ನ ವ್ಯವಹಾರ ಕೌಶಲ್ಯವನ್ನು ಮತ್ತು ಧೀರತನವನ್ನು ಪ್ರದರ್ಶನ ಮಾಡಿದ್ದರೂ, ವ್ಯಾಪಕ ಜನ ವಿಭಾಗಗಳು ನಿರಂಕುಶ ಪ್ರಭುತ್ವದ ವಿರುದ್ಧ ಸ್ಪಷ್ಟ ನಿಲುವು ತಳೆದಿದ್ದರು. ಆ ಹೋರಾಟವನ್ನು ನಡೆಸಿದ ಅಲೆಪ್ಪಿಯ ಸಂಘಟಿತ ಕಾರ್ಮಿಕ ವರ್ಗ ಮತ್ತು ಕಮ್ಯುನಿಸ್ಟ್ ಪಕ್ಷದ ಬಗ್ಗೆ ತಿರುವಾಂಕೂರಿನ ಮತ್ತು ಭಾರತದಾದ್ಯಂತ  ಪ್ರಜಾಸತ್ತಾತ್ಮಕ ಚಳುವಳಿಯ ಸಹಾನುಭೂತಿ ಮತ್ತು ಸದಾಶಯಗಳಿದ್ದವು. ತಿರುವಾಂಕೂರಿನಲ್ಲಿ, ಎಲ್ಲಾ ಜನರೂ(ಮೇಲ್ಜಾತಿಯ ಸ್ವಲ್ಪ ಜನರನ್ನು ಹೊರತುಪಡಿಸಿ), ದಿವಾನರ ಆಳ್ವಿಕೆಯನ್ನು ಸಂಪೂರ್ಣವಾಗಿ ವಿರೋಧಿಸಿದರು. ಇದರಲ್ಲಿ ಸವರ್ಣೀಯರಲ್ಲದ ಹಿಂದೂಗಳ ದೊಡ್ಡ ಸಮುದಾಯ, ಗಣನೀಯ ಸಂಖ್ಯೆಯ ಅಲ್ಪಸಂಖ್ಯಾತ ಕ್ರಿಶ್ಚಿಯನ್ನರು ಹಾಗೂ ಅಲ್ಪಸಂಖ್ಯಾತ ಮುಸ್ಲಿಮರ ಸ್ವಲ್ಪ ಜನರೂ ಇದ್ದರು. ಹೀಗಾಗಿ ಈ ಹೋರಾಟವು ಸ್ವಾತಂತ್ರ್ಯಾನಂತರ ಭಾರತದ ಐಕ್ಯತೆಯನ್ನು ಕಾಪಾಡಲು ಭಾರತೀಯ ಜನರು ನಡೆಸಿದ ಹೋರಾಟದ ಅವಿಭಾಜ್ಯ ಅಂಗವಾಗಿತ್ತು. ಈ ಹೋರಾಟ ನಡೆದ ಒಂದು ವರ್ಷದ ಒಳಗೇ, ಕಮ್ಯುನಿಸ್ಟ್ ಪಕ್ಷದ ಬಂಡಾಯವನ್ನು ಮಟ್ಟಹಾಕಿದೆ ಎಂದು ಬೀಗುತ್ತಿದ್ದ ದಿವಾನ ದೇಶದಿಂದ ಮಾನ-ಮರ್ಯಾದೆ ಕಳಕೊಂಡು ಹೊರ ಹೋಗಬೇಕಾಯಿತು. ಜನರ ರಾಜಕೀಯ ಬೇಡಿಕೆಗಳನ್ನು ಒಪ್ಪಿರುವುದಾಗಿ ಅವನ ನಿರ್ಗಮನದ ನಂತರ ಮಹಾರಾಜ ಘೋಷಣೆ ಮಾಡಿದ. ವಯಸ್ಕ ಮತದಾನದ ಆಧಾರದಲ್ಲಿ ಚುನಾವಣೆಗಳನ್ನು ನಡೆಸಲು ಮತ್ತು ಚುನಾಯಿತ ಶಾಸಕರಿಗೆ ಉತ್ತರದಾಯಿಯಾದ ಪ್ರಜಾಸತ್ತಾತ್ಮಕ ಸರ್ಕಾರವನ್ನು ಸ್ಥಾಪಿಸಲು ಸಿದ್ಧತೆಗಳಾದವು.

ತಿರುವಾಂಕೂರಿನ ಪುನ್ನಪ್ರ-ವಯಲಾರ್‌ನ ಉಗ್ರ ಪ್ರತಿರೋಧವು ಅಪರೂಪದ ಬೆಳವಣಿಗೆಯಲ್ಲ. ಆ ಅವಧಿಯಲ್ಲಿ ಕೇರಳದ ಉದ್ದಕ್ಕೂ ಬೀಸಿದ ಹಲವಾರು ರೀತಿಯ ಮತ್ತು ಪ್ರಖರ ಸಾಮೂಹಿಕ ಕಾರ್ಯಾಚರಣೆಗಳ ಸಮರಧೀರ ಅಲೆಯ ಒಂದು ಭಾಗವಾಗಿತ್ತು. ಅವುಗಳಲ್ಲಿ ಮಲಬಾರಿನ ಕರಿವೆಲ್ಲೂರ್, ಕಾವುಂಬೈ ಮತ್ತು ತಿಲ್ಲಂಕೇರಿ ರೈತ ಹೋರಾಟಗಳು ಪ್ರಮುಖವಾದವು.

ಅನೇಕ ಪ್ರದೇಶಗಳಲ್ಲಿ ಹಸಿವಿನಿಂದ ಸಾವು ಮತ್ತು ಬರಗಾಲ ಸಾಮಾನ್ಯವಾಗಿತ್ತು. ಅಕ್ಕಿಯು ಚಿನ್ನಕ್ಕಿಂತ ದುಬಾರಿಯಾಗಿತ್ತು. ಕರಿವೆಲ್ಲೂರಿನಲ್ಲಿ ಭೂಮಾಲಕರ ಕಣಜಗಳು ತುಂಬಿ ತುಳುಕುತ್ತಿದ್ದರೆ, ಬಡ ರೈತರು ಮತ್ತು ಕೃಷಿ ಕೂಲಿಗಾರರು ಹಸಿವಿನಿಂದ ತತ್ತರಿಸಿದ್ದರು. ಪೋಲಿಸರ ಮತ್ತು ಪ್ರಭುತ್ವಯಂತ್ರಗಳ ಸಂಪೂರ್ಣ ಶಾಮೀಲಿನಿಂದ ಭೂಮಾಲಕರ ಕಳ್ಳ ದಾಸ್ತಾನು ಕಾಳಸಂತೆ ಮಾರುಕಟ್ಟೆ ತಲುಪುತ್ತಿತ್ತು. ಕಾಳಸಂತೆಯ ವಿರುದ್ಧ ದನಿ ಎತ್ತುವವರನ್ನು ಬಗ್ಗುಬಡಿಯಲು ಮಲಬಾರ್ ಪ್ರದೇಶದಲ್ಲಿನ ವಸಾಹತುಶಾಹಿ ಆಡಳಿತವು ವಿಶೇಷ ಮಲಬಾರ್ ಪೋಲಿಸರನ್ನು ನೇಮಿಸಿತ್ತು. ಕರಿವೆಲ್ಲೂರಿನ ಹೊರಗೆ ಭತ್ತವನ್ನು ಕೊಂಡೊಯ್ಯಬೇಡಿ ಎಂಬ ಜನರ ಪ್ರಾರ್ಥನೆಯನ್ನು ಭೂಮಾಲಕರು ಕಿವಿಯ ಮೇಲೇ ಹಾಕಿಕೊಳ್ಳುತ್ತಿರಲಿಲ್ಲ. ೧೯೪೬ರ ಡಿಸೆಂಬರ್ ೨೦ರಂದು ಭೂಮಾಲಕರ ಕಡೆಯವರು ಭತ್ತ ಸಂಗ್ರಹ ಮಾಡುವುದನ್ನು ಜನರು ಪ್ರತಿರೋಧಿಸಿದಾಗ ಪೋಲಿಸರು ಅವರ ಮೇಲೆ ಗುಂಡು ಹಾರಿಸಿದರು. ಪ್ರತಿರೋಧದ ಮುಂದಾಳುತ್ವ ವಹಿಸಿದ್ದ ಪಕ್ಷದ ಮುಖಂಡರು ಪೋಲಿಸರ ಗುಂಡಿಗೆ ಬಲಿಯಾದರು. ನೂರಾರು ಜನರನ್ನು ಸುಳ್ಳು ಆರೋಪ ಹೊರಿಸಿ ಬಂಧಿಸಲಾಯಿತು.

ಪ್ರತಿರೋಧದ ದೀರ್ಘ ಪರಂಪರೆ ಹೊಂದಿರುವ ಮಲಬಾರಿನ ಮತ್ತೊಂದು ಹಳ್ಳಿಯಾದ ಕಾವುಂಬೈಯಲ್ಲಿ, ಧಾನ್ಯಗಳನ್ನು ದಾಸ್ತಾನು ಮಾಡಿದ್ದ ಭೂಮಾಲಕರ ಉಗ್ರಾಣದ ಮೇಲೆ ದಾಳಿ ಮಾಡಬೇಕೆಂದು ಕಮ್ಯುನಿಸ್ಟ್ ಪಕ್ಷ ನಿರ್ಧರಿಸಿತು. ಇದನ್ನು ಎದುರಿಸಲು ಭೂಮಾಲಕರು ಪೋಲಿಸರ ಮೊರೆ ಹೋದರು. ಈ ಕಾರ್ಯಾಚರಣೆಯಲ್ಲಿ ಹಲವಾರು ಸಂಗಾತಿಗಳು ಹುತಾತ್ಮರಾದರು, ನೂರಾರು ಜನರನ್ನು ಬಂಧಿಸಿ ಹಿಂಸಿಸಿದರು. ಮಲಬಾರಿನ ಈ ರೈತ ಹೋರಾಟಗಳಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರನ್ನು ಸೇಲಮ್ಮಿನ ಜೈಲಿನಲ್ಲಿ ಇಟ್ಟಿದ್ದರು, ಅಲ್ಲಿ ಅವರು ಜೈಲಿನಲ್ಲಿ ಉತ್ತಮ ಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಿ ಮುಷ್ಕರ ಹೂಡಿದರು(ಫೆಬ್ರವರಿ, ೧೯೫೦). ಕಾಂಗ್ರೆಸ್ ಸರ್ಕಾರದ ಪೋಲಿಸರು ಕಮ್ಯುನಿಸ್ಟ್ ಖೈದಿಗಳ ಮೇಲೆ ಗುಂಡಿನ ಮಳೆಗರೆದರು, ೨೨ ಸಂಗಾತಿಗಳು ಹುತಾತ್ಮರಾದರು.

ಪುನ್ನಪ್ರ ಮತ್ತು ವಯಲಾರಿನಲ್ಲಿ ಮಡಿದ ನೂರಾರು ಹುತಾತ್ಮರ ಮತ್ತು ನರಳಿದ ಸಾವಿರಾರು ಸಂಗಾತಿಗಳ ತ್ಯಾಗಗಳು ವ್ಯರ್ಥವಾಗಲಿಲ್ಲ. ಈ ಹೋರಾಟಗಳಿಂದಾಗಿ ಎರಡು ರಾಜರುಗಳ ಸಂಸ್ಥಾನಗಳಾದ ತಿರುವಾಂಕೂರು ಮತ್ತು ಕೊಚಿನ್‌ಗಳನ್ನು ಒಂದುಗೂಡಿಸಿ ತಿರುವಾಂಕೂರು-ಕೊಚಿನ್ ರಾಜ್ಯವನ್ನಾಗಿ ಮಾಡುವ ಪ್ರಕ್ರಿಯೆಗಳು ಪ್ರಾರಂಭವಾದವು. ಏಳು ವರ್ಷಗಳ ನಂತರ, ಬ್ರಿಟಿಷ್ ಆಳ್ವಿಕೆಯ ಮದ್ರಾಸ್ ಪ್ರಸಿಡೆನ್ಸಿಯ ಮಲಬಾರ್ ಜಿಲ್ಲೆಯನ್ನು ಇವುಗಳ ಜತೆ ವಿಲೀನ ಮಾಡಿ ಹೊಸ ಐಕ್ಯ ಭಾಷಾವಾರು ರಾಜ್ಯ ಕೇರಳ ರಚನೆಗೊಂಡಿತು.

ಕನ್ನಡಕ್ಕೆ: ಟಿ.ಸುರೇಂದ್ರ ರಾವ್

Leave a Reply

Your email address will not be published. Required fields are marked *