ಜನಗಳ ತುರ್ತು ಬೇಡಿಕೆಗಳನ್ನು ಈಡೇರಿಸಿ

ವಿಫಲರಾದರೆ ಇನ್ನಷ್ಟು  ಬಲಿಷ್ಟ ಪ್ರತಿಭಟನೆಗಳು ಕೇಂದ್ರ  ಸರಕಾರಕ್ಕೆ ಸಿಪಿಐ(ಎಂ) ಪೊಲಿಟ್‍ಬ್ಯುರೊ ಎಚ್ಚರಿಕೆ

ಜೂನ್ 16ರಂದು ಸಿಪಿಐ(ಎಂ)ನ ಎಲ್ಲ ಘಟಕಗಳು, ಸದಸ್ಯರು ಮತ್ತು ಬೆಂಬಲಿಗರು ಪ್ರತ್ರಿಭಟನಾ ದಿನಾಚರಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿದ್ದಾರೆ. ಅವರೆಲ್ಲರಿಗೆ ಅಭಿನಂದನೆ ಸಲ್ಲಿಸಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ, ಪ್ರತಿಭಟನೆಯ ಕರೆಗೆ ಸಿಕ್ಕಿರುವ ಉತ್ತಮ ಸ್ಪಂದನೆ ಕೇಂದ್ರ ಸರಕಾರದ ಮುಂದೆ ಎತ್ತಿರುವ ಬೇಡಿಕೆಗಳು ಜನಗಳ ತುರ್ತು ಆವಶ್ಯಕತೆಗಳು ಎಂಬುದನ್ನು ತೋರಿಸಿದೆ ಎಂದಿದೆ.

  1. ಆದಾಯ ತೆರಿಗೆ ತೆರುವ ಮಿತಿಗಳ ಹೊರಗಿರುವ ಎಲ್ಲ ಕುಟುಂಬಗಳಿಗೆ ತಿಂಗಳಿಗೆ ರೂ.7500 ರಂತೆ ಆರು ತಿಂಗಳ ವರೆಗೆ ನಗದು ವರ್ಗಾವಣೆ
  2. ಪ್ರತಿವ್ಯಕ್ತಿಗೆ ತಿಂಗಳಿಗೆ 10 ಕೆ.ಜಿ. ಯಂತೆ ಆರು ತಿಂಗಳ ವರೆಗೆ ಉಚಿತ ಆಹಾರಧಾನ್ಯಗಳ ವಿತರಣೆ
  3. ಮನರೇಗದ ಅಡಿಯಲ್ಲಿ ಹೆಚ್ಚಿಸಿದ ಕೂಲಿಗಳೊಂದಿಗೆ ಕನಿಷ್ಟ 200 ದಿನಗಳ ಉದ್ಯೋಗ. ನಗರದ ಬಡವರಿಗೂ ಉದ್ಯೋಗ ಖಾತ್ರಿ ಯೋಜನೆಯ ವಿಸ್ತರಣೆ. ನಿರುದ್ಯೋಗಿ ವ್ಯಕ್ತಿಗಳಿಗೆ ತಕ್ಷಣವೇ ಒಂದು ನಿರುದ್ಯೋಗ ಭತ್ಯೆಯ ಪ್ರಕಟಣೆ
  4. ರಾಷ್ಟ್ರೀಯ ಆಸ್ತಿಗಳ ಲೂಟಿಯನ್ನು, ಸಾರ್ವಜನಿಕ ವಲಯದ ಖಾಸಗೀಕರಣವನ್ನು ಮತ್ತು ಕಾರ್ಮಿಕ ಕಾನೂನುಗಳನ್ನು ರದ್ದು ಮಾಡುವುದನ್ನು ನಿಲ್ಲಿಸಬೇಕು ಮತ್ತು
  5. ಕೃಷಿ ಬೆಳೆಗಳನ್ನು ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಟ 50ಶೇ. ಹೆಚ್ಚಿನ ಕನಿಷ್ಟ ಬೆಂಬಲ ಬೆಲೆಗಳಲ್ಲಿ ಖರೀದಿಸಬೇಕು ಮತ್ತು ನಮ್ಮ ಎಲ್ಲ ರೈತರಿಗೆ ಒಂದು ಬಾರಿಯ ಸಾಲಮನ್ನಾ ಕೊಡಬೇಕು ಎಂದು ಈ ಪ್ರತಿಭಟನೆಗಳಲ್ಲಿ ಆಗ್ರಹಿಸಲಾಗಿದೆ.

ಈ ಆಗ್ರಹಗಳನ್ನು ಜಾರಿಗೊಳಿಸಲು ತಕ್ಷಣವೇ ಕ್ರಮಗಳ:ನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸರಕಾರಕ್ಕೆ ಕರೆ ನೀಡಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಇವು ನಮ್ಮ ಜನಗಳ ತುರ್ತು ಆವಶ್ಯಕತೆಗಳು, ಇವನ್ನು ಜಾರಿಗೊಳಿಸಲು ವಿಫಲರಾದರೆ ಜನಗಳ ಇನ್ನೂ ಬಲವಾದ ಪ್ರತಿಭಟನೆಗಳನ್ನು ಎದುರಿಸಬೇಕಾಗುತ್ತದೆ ಎಂದು ಸರಕಾರವನ್ನು ಎಚ್ಚರಿಸಿದೆ.

Leave a Reply

Your email address will not be published. Required fields are marked *