ಪಾರದರ್ಶಕ ಸಮಾಲೋಚನೆ ನಡೆಸದೆ ಚುನಾವಣಾ ವಿಧಾನಗಳಲ್ಲಿ ಬದಲಾವಣೆ

ಅಂಚೆ ಮತದಾನ ಕ್ರಮಕ್ಕೆ ಏಕೆ ಈ ತರಾತುರಿ?-ಮುಖ್ಯ  ಚುನಾವಣಾ ಆಯುಕ್ತರಿಗೆ ಯೆಚುರಿ ಪತ್ರ

ಚುನಾವಣಾ ಆಯೋಗ ರಾಜಕೀಯ ಪಕ್ಷಗಳೊಡನೆ ಯಾವುದೇ ಸಮಾಲೋಚನೆ ನಡೆಸದೆ ಏಕಪಕ್ಷೀಯವಾಗಿ ಚುನಾವಣಾ ವಿಧಾನಗಳಲ್ಲಿ ಬದಲಾವಣೆಗಳನ್ನು ತರುತ್ತಿದೆ. ಇದು ಸರಿಯಲ್ಲ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ರವರಿಗೆ ಜೂನ್ 29ರಂದು ಬರೆದಿರುವ ಪತ್ರದಲ್ಲಿ ಆಕ್ಷೇಪಿಸಿದ್ದಾರೆ. ಮಾಧ್ಯಮಗಳ ವರದಿಗಳ ಪ್ರಕಾರ ಭಾರತದ ಚುನಾವಣಾ ಆಯೋಗ 64 ವರ್ಷಕ್ಕೆ ಮೇಲ್ಪಟ್ಟ ಮತದಾರರಿಗೆ ಅಂಚೆ ಮತದಾನವನ್ನು ಬಳಸಲು ಅವಕಾಶ ನೀಡುವ ಕ್ರಮವನ್ನು ಕೈಗೊಳ್ಳುತ್ತಿದೆ. ನವಂಬರ್2020ರಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ತರಾತುರಿಯಿಂದ ಈ ಕ್ರಮವನ್ನು ಆಯೋಗ ಕೈಗೊಂಡಿದೆ ಎನ್ನಲಾಗುತ್ತಿದೆ. ಇದು ಆತಂಕಕಾರಿ ಸುದ್ದಿ ಎಂದು ಯೆಚುರಿ ಹೇಳಿದ್ದಾರೆ.

ಚುನಾವಣಾ ಆಯೋಗ ಯಾವುದೇ ಕ್ರಮವನ್ನು ಕೈಗೊಳ್ಳುವ ಮೊದಲು ರಾಜಕೀಯ ಪಕ್ಷಗಳೊಡನೆ ಸಮಾಲೋಚನೆಗಳನ್ನು ನಡೆಸುವ ಪದ್ಧತಿಯನ್ನು ಈ ಹಿಂದೆ ಅನುಸರಿಸಿಕೊಂಡು ಬರುತ್ತಿತ್ತು. ಆದರೆ ಈಗ ಅದಕ್ಕೆ ವ್ಯತಿರಿಕ್ತವಾಗಿ ಏಕಪಕ್ಷೀಯವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಚುನಾವಣಾ ಆಯೋಗದ ಕೋರಿಕೆಯ ಮೇರೆಗೆ ಕಾನೂನು ಮಂತ್ರಾಲಯ ಈ ಮೊದಲು 80 ವರ್ಷಕ್ಕೆ ಮೇಲ್ಪಟ್ಟ ವಿಕಲಾಂಗತೆ ಇರುವ ವ್ಯಕ್ತಿಗಳು ಸಾರ್ವತ್ರಿಕ ಚುನಾವಣೆಗಳು ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಅಂಚೆ ಮತದಾನ (ಪೋಸ್ಟಲ್ ಬ್ಯಾಲೆಟ್) ವನ್ನು ಆಯ್ದುಕೊಳ್ಳಲು ಅವಕಾಶವಾಗುವಂತೆ ಚುನಾವಣಾ ನಡಾವಳಿ ನಿಯಮಗಳಲ್ಲಿ ತಿದ್ದುಪಡಿ ತಂದಿತ್ತು. ಆನಂತರ ಕೊವಿಡ್-19 ಮಹಾಮಾರಿಯ ಸಂದರ್ಭದಲ್ಲಿ ಈ ನಿಯಮದಲ್ಲಿ ಇನ್ನಷ್ಟು ತಿದ್ದುಪಡಿ ತರಬೇಕು ಎಂದು ಸರಕಾರವನ್ನು ಕೇಳಿತ್ತು. ಜೂನ್ 19ರಂದು ಕಾನೂನು ಮಂತ್ರಾಲಯ 65 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದವರು ಅಂಚೆ ಮತದಾನವನ್ನು ಆಯ್ದುಕೊಳ್ಳಲು ಅನುವು ಮಾಡಿಕೊಡುವ ಹೊಸ ಬದಲಾವಣೆಯ ಅಧಿಸೂಚನೆ ಹೊರಡಿಸಿದೆ ಎಂದು ವರದಿಯಾಗಿದೆ. ಈ ತಿದ್ದುಪಡಿಯಾದ ನಿಯಮಗಳು “ಕೊವಿಡ್ ಶಂಕಿತ ಅಥವ ಬಾಧಿತ ವ್ಯಕ್ತ್ತಿಗಳು” ಕೂಡ ಈ ಆಯ್ಕೆಯನ್ನು ಮಾಡಿಕೊಳ್ಳಲು ಅನುವು ಮಾಡಿ ಕೊಟ್ಟಿವೆ.

ಭಾರತದ ಚುನಾವಣಾ ಆಯೋಗಕ್ಕೆ ಸಂವಿಧಾನ 324ನೇ ಕಲಮಿನ ಅಡಿಯಲ್ಲಿ ಚುನಾವಣೆಗಳ ”ಹತೊಟಿ ಮತ್ತು ಉಸ್ತುವಾರಿ”ಗೆ ವ್ಯಾಪಕ ಮತ್ತು ಸಮಗ್ರ ಅಧಿಕಾರಗಳನ್ನು ಕೊಟ್ಟಿದ್ದರೂ ಈ ಅಧಿಕಾರವನ್ನು ತಾವು ಏಕಪಕ್ಷೀಯವಾಗಿ ಚಲಾಯಿಸುವುದಿಲ್ಲ ಎಂದು ಆಯುಕ್ತರುಗಳು ಒತ್ತಿ ಹೇಳುತ್ತ ಬಂದಿದ್ದರು. ಇದು ಜನತೆಯನ್ನು ಪ್ರತಿನಿಧಿಸುವ ರಾಜಕೀಯ ಪಕ್ಷಗಳು ಈ ಪ್ರಕ್ರಿಯೆಯಲ್ಲಿ ಪ್ರಮುಖ ಭಾಗೀದಾರರು ಎಂದು ಮಾನ್ಯ ಮಾಡುವ ಒಂದು ಅತ್ಯಂತ ಆರೋಗ್ಯಕರ ಪದ್ಧತಿಯನ್ನು ನಿರ್ಮಿಸಿದೆ.

ಚುನಾವಣೆಗಳನ್ನು ನಡೆಸುವ ವಿಧಾನಗಳಲ್ಲಿ ಬದಲಾವಣೆಗಳನ್ನು ತರುವಲ್ಲಿ ಒಮ್ಮತವನ್ನು ಬೆಸೆಯುವಲ್ಲಿ ರಾಜಕೀಯ ಪಕ್ಷಗಳನ್ನು ತಪ್ಪದೇ ತೊಡಗಿಸಿಕೊಳ್ಳಲಾಗುತ್ತಿತ್ತು. ‘ಮಾದರಿ ಚುನಾವಣಾ ಸಂಹಿತೆ’ (ಎಂಸಿಸಿ) ಒಂದು ಪ್ರಮುಖ ಚುನಾವಣಾ ಸುಧಾರಣೆಯಾಗಿದ್ದು, ಇದನ್ನು ಎಲ್ಲ ಬಣ್ಣಗಳ ರಾಜಕೀಯ ಪಕ್ಷಗಳ ನಡುವೆ ಒಂದು ಒಮ್ಮತವನ್ನು ಮೂಡಿಸುವ ಮೂಲಕ ರೂಪಿಸಲಾಯಿತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇದಕ್ಕೆ ಕಾನೂನು ಅಧಿಕಾರ ಇಲ್ಲದಿದ್ದರೂ ಇದನ್ನು ಎಂದೂ ಪ್ರಶ್ನಿಸಲಾಗಿಲ್ಲ. ಈ ಕ್ರಮ ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಗಟ್ಟಿಗೊಳಿಸಿ ವ್ಯಾಪಕ ಪ್ರಶಂಸೆಯನ್ನು ಗಳಿಸಿದೆ.

ಈ ಹಿಂದಿನ ಇಂತಹ ಎಲ್ಲ ಆಚರಣೆಗಳಿಗೆ ವ್ಯತಿರಿಕ್ತವಾಗಿ, ಆಯೋಗ ಚುನಾವಣಾ ನಿಯಮಗಳಲ್ಲಿ ಅಕ್ಟೋಬರ್ 2019ರ ಮತ್ತು ಜೂನ್ 19, 2020ರ ಬದಲಾವಣೆಗಳನ್ನು ತರುವ ಮೊದಲು ರಾಜಕೀಯ ಪಕ್ಷಗಳೊಡನೆ ಯಾವುದೇ ಸಮಾಲೋಚನೆಯನ್ನು ನಡೆಸಿಲ್ಲ. ಈ ವಿಷಯದಲ್ಲಿ ಚುನಾವಣಾ ಆಯೋಗ ವಿಪರೀತ ತರಾತುರಿಯನ್ನು ಪ್ರದರ್ಶಿಸುತ್ತಿರುವುದು ನವಂಬರ್ 2020ರಲ್ಲಿ ನಡೆಯಬೇಕಾಗಿರುವ ಬಿಹಾರ ವಿಧಾನಸಭಾ ಚುನಾವಣೆಗಳಿಂದಾಗಿ ಎಂದೇ ಮಾಧ್ಯಮ ವರದಿಗಳಿಂದ ನಾವು ಭಾವಿಸಬೇಕಾಗುತ್ತದೆ ಎಂದು ಯೆಚುರಿಯವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ನಮ್ಮ ಚುನಾವಣಾ ವ್ಯವಸ್ಥೆ ಮತದಾರರ ದೈಹಿಕವಾಗಿ ದೃಢೀಕರಣ ನಡೆಸುವುದು ಸಮಗ್ರತೆಯ ಬುನಾದಿ ಎಂದೇ ಸದಾ ಪರಿಗಣಿಸಿದೆ. ನಿಯಮಗಳಲ್ಲಿ ಈ ಎರಡು ತಿದ್ದುಪಡಿಗಳಿಂದಾಗಿ ದೊಡ್ಡ ಸಂಖ್ಯೆಯ ಮತದಾರರು ಈ ದೃಢೀಕರಣ ಚೌಕಟ್ಟಿನಿಂದ ಹೊರ ಹೋಗುತ್ತಾರೆ. ಇದುವರೆಗೆ ಬಹಳ ಕಡಿಮೆ ಸಂಖ್ಯೆಯಲ್ಲಿರುವ ಚುನಾವಣಾ ಕರ್ತವ್ಯದ ಸಿಬ್ಬಂದಿ ಮತ್ತಿತರರು ಮಾತ್ರ ಅಂಚೆ ಮತದಾನವನ್ನು ಬಳಸುತ್ತಿದ್ದಾಗಲೂ ಇದರ ದುರುಪಯೋಗದ, ವಂಚನೆಯ ಉದಾಹರಣೆಗಳಿರುವಾಗ ಈ ಸಂಖ್ಯೆ ವಿಪರೀತವಾಗಿ ಹೆಚ್ಚುವುದು ಬಹಳ ಮಹತ್ವ ಪಡೆಯುತ್ತದೆ.

ಈ ರೀತಿ ಬಹುಸಂಖ್ಯೆಯಲ್ಲಿ ಮತದಾರರ ದೃಢೀಕರಣದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಬಹುದಾದ ಹೊಸ ಮತದಾನದ ಆಚರಣೆಗಳನ್ನು ಆರಂಭಿಸುವ ಮೊದಲು ಈ ಕುರಿತು ರಾಜಕೀಯ ಪಕ್ಷಗಳ ನಡುವೆ ಒಂದು ಒಮ್ಮತ ಮೂಡಿಸುವುದು ಅಗತ್ಯ. ಏಕೆಂದರೆ ಈ ರೀತಿ ಅಂಚೆ ಮತದಾನ ಸಂಘಟಿಸುವಲ್ಲಿ ಆಡಳಿತದಲ್ಲಿ ಇರುವವರಿಗೆ ಹೆಚ್ಚಿನ ಪ್ರಯೋಜನ ಸಿಗುತ್ತದೆ, ಅದು ಈ ಇಡೀ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಸಮಗ್ರತೆಯ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ.

ಈಗಾಗಲೇ ಅಪಾರದರ್ಶಕವಾದ ಚುನಾವಣಾ ಬಾಂಡ್ ಪ್ರಶ್ನೆ ಇನ್ನೂ ಸುಪ್ರಿಂ ಕೋರ್ಟ್ ಎದುರಲ್ಲಿದೆ. ಇದು ಚುನಾವಣಾ ಆದಾಯ/ವೆಚ್ಚಗಳ ಉಸ್ತುವಾರಿ ನಡೆಸುವಲ್ಲಿ ಒಂದು ದೊಡ್ಡ ಸವಾಲೊಡ್ಡಿದೆ ಎಂದು ಸ್ವತಃ ಚುನಾವಣಾ ಆಯೋಗವೇ ಒಪ್ಪಿಕೊಂಡಿದೆ. ಈಗ ಈ ಅಂಚೆ ಮತದಾನ ಆಳುವ ಪಕ್ಷದ ಪರವಾಗಿ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತಡೇ ಎಂಬ  ಸಂಗತಿಯನ್ನು ಮುಖ್ಯ ಚುನಾವಣಾ ಆಯುಕ್ತರ ಗಮನಕ್ಕೆ ತರುತ್ತ ಯೆಚುರಿಯವರು, “ಇದರಿಂದಾಗಿ ಚುನಾವಣಾ ಆಯೋಗ ಈ ಬದಲಾವಣೆಗಳನ್ನು ರಾಜಕೀಯ ಪಕ್ಷಗಳೊಂದಿಗೆ ಸರಿಯಾದ ಮತ್ತು ಪಾರದರ್ಶಕ ಸಮಾಲೋಚನೆ ಇಲ್ಲದೆ ಜಾರಿಗೊಳಿಸಲು ಏಕಪಕ್ಷೀಯವಾಗಿ ಮುಂದುವರೆಯಬಾರದು ಎಂದು ನಿಸ್ಸಂದಿಗ್ಧವಾಗಿ ಹೇಳ ಬಯಸುತ್ತೇವೆ” ಎಂದು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಈ ಮೂಲಕ ಎಲ್ಲ ರಾಜಕೀಯ ಪಕ್ಷಗಳಿಗೂ ಸಮಾನ ಅವಕಾಶ ಲಭ್ಯಗೊಳಿಸುವ ಚುನಾವಣಾ ಆಯೋಗದ ಅತ್ಯುತ್ತಮ ಪರಂಪರೆಗಳನ್ನು ಎತ್ತಿ ಹಿಡಿದಂತಾಗುತ್ತದೆ, ಈ ಪರಂಪರೆ ಇನ್ನೂ ಮುಕ್ತ ಮತ್ತು ನ್ಯಾಯಯುತ ಮತದಾನದ ಒಂದು ಬುನಾದಿ ಆಗಿಯೇ ಉಳಿದಿದೆ ಎಂದು ಅವರು ನೆನಪಿಸುತ್ತ ತಮ್ಮ ಈ ಪತ್ರವನ್ನು ಮುಖ್ಯ ಚುನಾವಣಾ ಆಯುಕ್ತರು ಸಕಾರಾತ್ಮಕವಾಗಿ ಪರಿಶೀಲಿಸುತ್ತಾರೆ ಎಂದು ಆಶಿಸಿದ್ದಾರೆ.

Leave a Reply

Your email address will not be published. Required fields are marked *