ಆಗಸ್ಟ್ 5, ಆಗಸ್ಟ್ 15ಕ್ಕೆ ಸಮಾನವೆ?

ಅಯೋಧ್ಯೆಯಲ್ಲಿ ಮಸೀದಿ ಇದ್ದ ಜಾಗದಲ್ಲಿ ಶ್ರೀರಾಮನಿಗೆ ಮಂದಿರ ಕಟ್ಟುವ ಅಂಗವಾಗಿ ಭೂಮಿ ಪೂಜೆ ನಡೆಸುವುದರೊಂದಿಗೆ ಅಯೋಧ್ಯೆ ರಾಜಕಾರಣ ಮುಕ್ತಾಯಗೊಂಡಂತೆ ಕಾಣುವುದಿಲ್ಲ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಎರಡು ಪರಸ್ಪರ ವಿರುದ್ಧವಾದ ಮಾತುಗಳನ್ನು ಆಡಿದ್ದಾರೆ. ಮೊದಲ ವಿಶ್ಲೇಷಣೆ ಸ್ವಾಗತಾರ್ಹವಾಗಿದೆ. ಮಂದಿರವನ್ನು ಪರಸ್ಪರ ಪ್ರೀತಿ ಮತ್ತು ಸಹೋದರತ್ವದ ನೆಲೆಯಲ್ಲಿ ಕಟ್ಟಲಾಗುತ್ತದೆ ಎಂದು ಮೋದಿಯವರು ಹೇಳಿದ್ದಾರೆ.

ಅದು ವೈವಿದ್ಯತೆಯಲ್ಲಿ ಏಕತೆಯ ಸಂಕೇತವಾಗಲಿದೆ ಎಂದಿದ್ದರು. ರಾಮ ಮತ್ತು ರಾಮಾಯಣದ ಅನೇಕ ಪರಂಪರೆಗಳಿರುವುದನ್ನು ಒಪ್ಪಿಕೊಂಡಿದ್ದರು. ರಾಮಾಯಣದ ವಿಭಿನ್ನ ನಿರೂಪಣೆಗಳನ್ನು ಅವರು ಪ್ರಸ್ತಾಪಿಸಿದ್ದರು. ಸಹೋದರತೆ ಮತ್ತು ಭಾತೃತ್ವದಿಂದ ಇಟ್ಟಿಗೆಗಳನ್ನು ಜೋಡಿಸಿ ಮಂದಿರವನ್ನು ಕಟ್ಟಲಾಗುವುದು ಎಂದು ಹೇಳಿದ್ದರು.

ಈ ಭಾವನೆಗಳು ಮತ್ತು ಅಭಿಪ್ರಾಯಗಳನ್ನು ಕುರಿತು ಯಾರಾದರೂ ಮೆಚ್ಚುಗೆ ವ್ಯಕ್ತಪಡಿಸಬಹುದು. ಆದರೆ ಪ್ರಧಾನಿ ಮೋದಿಯವರು ಮೇಲಿನ ತಮ್ಮ ಮಾತುಗಳಿಗೆ ತದ್ವಿರುದ್ಧವಾದ ಮಾತುಗಳನ್ನು ಅದೇ ಅಯೋಧ್ಯೆಯ ವೇದಿಕೆಯಿಂದ ಹೇಳಲು ತಡಮಾಡಲಿಲ್ಲ. ಮಂದಿರ ಕಟ್ಟುವ ಅವರ ಇಡೀ ಯೋಜನೆ ರಾಜಕೀಯ ಪ್ರೇರಿತವಾದದ್ದು ಎಂದು ಅವರಿಂದ ಮುಚ್ಚಿಡಲಾಗಲಿಲ್ಲ. ಪ್ರಧಾನ ಮಂತ್ರಿಗಳು ರಾಮ ಮಂದಿರ ಆಂದೋಲನವನ್ನು ದೇಶದ ಸ್ವಾತಂತ್ರ್ಯ ಆಂದೋಲನಕ್ಕೆ ಹೋಲಿಸಿದರು.

ಆಗಸ್ಟ್ 5ರ ಭಾರತಕ್ಕೆ ಆಗಸ್ಟ್ 15ರಷ್ಟೇ ಮುಖ್ಯವಾದದು ಎಂದು ಅವರು ಹೇಳಲು ಅವರು ಸಂಕೋಚ ಪಡಲಿಲ್ಲ. ಮೋದಿಯವರ ಈ ಹೇಳಿಕೆಯನ್ನು ಯಾರೊಬ್ಬ ದೇಶವಾಸಿಯೂ ಬೆಂಬಲಿಸಲಾರರು. ಸ್ವಾತಂತ್ರ ಆಂದೋಲನಕ್ಕೂ ರಾಮಮಂದಿರದ ಚಳುವಳಿಗೂ ಯಾವುದೇ ಹೋಲಿಕೆ ಸಾಧ್ಯವಿಲ್ಲ. ಸ್ವಾತಂತ್ರ್ಯ ಚಳುವಳಿ ಎಲ್ಲ ದೇಶಬಾಂದವರನ್ನು ಒಂದುಗೂಡಿಸಿತ್ತು. ಆದರೆ ರಾಮ ಮಂದಿರ ಚಳುವಳಿಯು ದೇಶವನ್ನು ಒಡಕಿನತ್ತ ಸಾಗುವಂತೆ ಮಾಡಿದೆ.

ಚಳುವಳಿಯ ಯಶಸ್ಸು ಮತ್ತು ಮಂದಿರ ನಿರ್ಮಾಣ ವಸ್ತು ಸ್ಥಿತಿಯನ್ನು ಬದಲಾಸುವುದಿಲ್ಲ. ಚರಿತ್ರೆಯನ್ನು ತಿರುಚುವುದು ಆರೆಸ್ಸೆಸಿನ ಹುಟ್ಟುಗುಣ. ಸ್ವಾತಂತ್ರ್ಯ ಚಳುವಳಿಯನ್ನು ಮಂದಿರ ಚಳುವಳಿಗೆ ಹೋಲಿಸುವುದು ದೇಶದ್ರೋಹ ನಡೆ. ಮಂದಿರವನ್ನು ರಾಷ್ಟ್ರೀಯ ಸಂಕೇತವೆಂದು ಸಹ ದೊಡ್ಡ ತಪ್ಪು. ರಾಷ್ಟ್ರೀಯತೆಯನ್ನು ಧಾರ್ಮಿಕ ವ್ಯಕ್ತಿಗಳಿಗೆ, ವಿಚಾರಗಳಿಗೆ ಜೋಡಿಸುವುದು ಸರಿಯಾದುದಲ್ಲ. ಸಂಘ ಪರಿವಾರದವರು ಎಂದೂ ಸ್ವಾತಂತ್ರ್ಯ ಆಂದೋಲನದಲ್ಲಿ ಭಾಗವಹಿಸದೆ ಇರುವುದರಿಂದ ಅವರಿಗೆ ಮಂದಿರ ಚಳುವಳಿಯೊಳಗಿನ ದೇಶದ್ರೋಹ ಮನಗಾಣಲಾಗುತ್ತಿಲ್ಲ. ನಮ್ಮ ಸ್ವಾತಂತ್ರ್ಯ ಚಳುವಳಿಯ ಪಿತಾಮಹಾ ಗಾಂಧೀಜಿಯವರನ್ನು ಹತ್ಯೆ ಮಾಡಲು ಹಿಂಜರಿಯದ ಕಟುಕರು ಇವರು.

ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಿದ್ದು ೫೦೦ ವರ್ಷಗಳ ಹಿಂದುಗಳ ಕನಸನ್ನು ನನಸು ಮಾಡಿದೆ ಎಂದು ಹೇಳಲಾಗುತ್ತದೆ. ಹಿಂದುಗಳ ಕರಾಳ ಕನಸು ನನಸಾಗಿರಬಹುದು. ಆದರೆ ಈ ದೇಶವನ್ನು ಒಪ್ಪದಿರುವ ಅಸಂಖ್ಯಾತ ದೇಶಪ್ರೇಮಿಗಳು ಕಣ್ಣೀರಿಡಲು ಕಾರಣವಾದ ದುರಂತವಿದೆ. ದೊಡ್ಡ ಪ್ರಮಾಣದ ದೇಶವಾಸಿಗಳು ಮಸೀದಿಯನ್ನು ಕೆಡವಿ ಮಂದಿರವನ್ನು ಕಟ್ಟುವ ಆಂದೋಲನದಲ್ಲಿ ಭಾಗವ”ಸಿರಲಿಲ್ಲ. ಅವರು ರಾಮನ ಭಕ್ತರೇ ಆಗಿರಬಹುದು. ರಾಮನ ಸುತ್ತ ಹೆಣೆಯಲಾದ ರಾಜಕಾರಣದ ಬಲೆಯನ್ನು ಕತ್ತರಿಸಿ ಹಾಕಬೇಕಾಗಿದೆ. ಮೋದಿ ಮುಖವಾಡವನ್ನು ಕಳಚಿಹಾಕಬೇಕಾಗಿದೆ.

ಅಲ್ಪ ಸಂಖ್ಯಾತರಾದ ಮುಸಲ್ಮಾನರು, ಕ್ರೈಸ್ತರು ಧೃತಿಗೆಡಬೇಕಾಗಿಲ್ಲ. ಧೈರ್ಯದಿಂದ ಬದುಕಿರಿ. ತಲೆಕೆಟ್ಟ ರಾಜ್ಯ ಬಿಜೆಪಿ ನಾಯಕ ಈಶ್ವರಪ್ಪನ ಗೊಡ್ಡು ಬೆದರಿಕೆಗೆ ಸೊಪ್ಪುಹಾಕದಿರಿ. ದಾರ್ಮಿಕ ಅಲ್ಪ ಸಂಖ್ಯಾತರೆ, ಒಂದಾಗಿ. ಜಾತ್ಯಾತೀತ ಸಂಘಟನೆಗಳೊಂದಿಗೆ ಕೈಜೋಡಿಸಿ ಮುಂದೆ ಬನ್ನಿ. ಮಸೀದಿಗಳನ್ನು ಧ್ವಂಸಮಾಡಿ ದೇವಸ್ಥಾನಗಳನ್ನು ಕಟ್ಟುವ ಮಾನವ ದ್ವೇಗಳನ್ನು ಹಿಮ್ಮೆಟ್ಟಿಸುವ, ಬನ್ನಿ. ಆಗಸ್ಟ್ 5 ಎಂದಿಗೂ ಆಗಸ್ಟ್ 15 ರ ಮಹತ್ವವನ್ನು ಮೀರಿಸಲಾರದು.

Leave a Reply

Your email address will not be published. Required fields are marked *