ನಾಲ್ಕನೇ ಮಹಾಧಿವೇಶನ-ಆಂತರಿಕ ಹೋರಾಟ ಪ್ರಾರಂಭ

ನೆಹರೂ ಸರ್ಕಾರವು ಅನುಸರಿಸುತ್ತಿದ್ದ ನೀತಿಗಳ ವಿಶ್ಲೇಷಣೆಯ ಪ್ರಶ್ನೆಯ ಕುರಿತು ಗಂಭೀರ ಚರ್ಚೆಗಳು ಪಕ್ಷದ ಒಳಗಡೆ ಪ್ರಾರಂಭವಾದವು. ಈ ಪ್ರಕ್ರಿಯೆಯಲ್ಲಿ ಎದ್ದು ಬಂದಿದ್ದ  ವರ್ಗ ಸಹಯೋಗದ ನಿಲುವನ್ನು ಕೇಂದ್ರ ಸಮಿತಿಯು ತಿರಸ್ಕರಿಸಿದ್ದಾಗ್ಯೂ, ಅದು ಮುಂದುವರೆಯಿತು.  ಮಾರ್ಚ್ ೧೯೫೫ರ ಚುನಾವಣೆಯಲ್ಲಿ ಆಂಧ್ರದಲ್ಲಿ ಪಕ್ಷವು ಸೋಲನ್ನು ಅನುಭವಿಸಿದ ನಂತರ ಈ ಭಿನ್ನಾಭಿಪ್ರಾಯಗಳು ಇನ್ನಷ್ಟು ಗಟ್ಟಿಗೊಂಡವು. ಅಂತರಾಷ್ಟ್ರೀಯವಾಗಿ, ಕಮ್ಯುಸ್ಟ್ ಚಳುವಳಿಯಲ್ಲಿ ಆಗುತ್ತಿದ್ದ ಬದಲಾವಣೆಗಳೂ ಪರಿಷ್ಕರಣವಾದೀ ಶಕ್ತಿಗಳನ್ನು ಬಲಪಡಿಸಿದವು. ಈ ಹಿನ್ನೆಲೆಯಲ್ಲಿ ಪಕ್ಷದ ನಾಲ್ಕನೇ ಮಹಾಧಿವೇಶನವು ಕೇರಳದ ಪಾಲ್ಘಾಟ್‌ನಲ್ಲಿ ೧೯೫೬ರ ಏಪ್ರಿಲ್ ೧೯ ರಿಂದ ೨೯ರವರೆಗೆ ನಡೆಯಿತು. ಅದು ಒಂದು ರಾಜಕೀಯ ನಿರ್ಣಯವನ್ನು ಅಂಗೀಕರಿಸಿದ್ದಾಗ್ಯೂ, ಕಾರ್ಯಕ್ರಮ ಹಾಗೂ ಸೈದ್ಧಾಂತಿಕ ವಿಷಯಗಳ ಮೇಲೆ ಪಕ್ಷದೊಳಗಿನ ದಶಕಗಳ ಕಾಲದ ಹೋರಾಟಕ್ಕೆ ಈ ಮಹಾಧಿವೇಶನವು ಪೂರ್ವಸೂಚಕವಾಯಿತು.

ಶತಮಾನೋತ್ಸವ ಲೇಖನಮಾಲೆ-೩೮
ಶತಮಾನೋತ್ಸವ ಲೇಖನಮಾಲೆ-೩೮

ಕಮ್ಯುನಿಸ್ಟ್ ಪಕ್ಷವು ಸದಾ ಎತ್ತಿದ ಬಹು ಮುಖ್ಯ ಬೇಡಿಕೆಗಳಲ್ಲಿ ಭಾಷಾಧಾರಿತ ರಾಜ್ಯಗಳನ್ನು ರಚಿಸಬೇಕೆಂಬ ಬೇಡಿಕೆಯು ಒಂದು. ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ನಡೆದ ಹಲವಾರು ರೈತ ಹೋರಾಟಗಳ ಪ್ರಮುಖ ಬೇಡಿಕೆಗಳಲ್ಲಿ ಇದೂ ಕೂಡ ಒಂದಾಗಿತ್ತು. ಸ್ವಾತಂತ್ರ್ಯದ ನಂತರ, ಅದು ದೇಶವನ್ನು ಒಡೆಯಲು ಕಾರಣವಾಗುತ್ತದೆ ಎಂಬ ಕಾರಣ ನೀಡಿ ಕಾಂಗ್ರೆಸ್ ಸರ್ಕಾರವು ಈ ಬೇಡಿಕೆಯನ್ನು ಒಪ್ಪಲು ನಿರಾಕರಿಸಿತು. ಆ ವಾದವನ್ನು ಅಲ್ಲಗಳೆದ ಕಮ್ಯುನಿಸ್ಟ್ ಪಕ್ಷ ಜನರ ನಡುವೆ ವ್ಯಾಪಕವಾಗಿ ಪ್ರಚಾರಮಾಡಿತು ಮತ್ತು ಹಲವಾರು ಹೋರಾಟಗಳನ್ನು ನಡೆಸಿತು ಕೂಡ.

ದೇಶದ ಆರ್ಥಿಕ ಹಾಗೂ ರಾಜಕೀಯ ಬದುಕನ್ನು ಪ್ರಜಾಸತ್ತಾತ್ಮಕವಾಗಿ ಪುನರ್ ನಿರ್ಮಾಣ ಮಾಡುವ ಮತ್ತು ಅದನ್ನು ಪ್ರಗತಿ ಹಾಗೂ ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಜನಸಮುದಾಯವು ಪೂರ್ಣವಾಗಿ ಭಾಗವಹಿಸುವುದನ್ನು ಖಾತ್ರಿಪಡಿಸುವ ಸಲುವಾಗಿ ಭಾಷಾವಾರು ರಾಜ್ಯಗಳ ರಚನೆಯು ಒಂದು ಅಗತ್ಯ ಅಂಶ ಎಂದು ಕಮ್ಯುನಿಸ್ಟ್ ಪಕ್ಷವು ಅಭಿಪ್ರಾಯಪಟ್ಟಿತು. ಪ್ರಜಾಪ್ರಭುತ್ವ ಹಾಗೂ ಎಲ್ಲಾ ಜನರ ಸಮಾನತೆಯ ಆಧಾರದಲ್ಲಿ ಭಾರತದ ಐಕ್ಯತೆಯನ್ನು ಕಟ್ಟುವಲ್ಲಿ ಒಂದು ದೃಢವಾದ ಹಾಗೂ ಸುಭದ್ರವಾದ ಬುನಾದಿಯನ್ನು ಹಾಕಲು ಕೂಡ ಅದು ಅವಶ್ಯವಾಗಿದೆ. ಜನಾಂದೋಲನದ ಪರಿಣಾಮವಾಗಿ ೧೯೫೩ರಲ್ಲಿ ಆಂಧ್ರ ರಾಜ್ಯ ರಚನೆಯಾಗಿದ್ದನ್ನು ಪಕ್ಷವು ಸ್ವಾಗತಿಸಿತು.

  4th congress-1ಏಪ್ರಿಲ್ ೧೯೫೪ರಲ್ಲಿ ನಡೆದ ಪಕ್ಷದ ಕೇಂದ್ರ ಸಮಿತಿ ಸಭೆಯಲ್ಲಿ, ರಾಜ್ಯಗಳ ಪುನರ್‌ಸಂಘಟನೆಯ ಕುರಿತು ಕಮ್ಯುನಿಸ್ಟ್ ಪಕ್ಷದ ನಿಲುವನ್ನು ವಿವರಿಸಿ ಒಂದು ನಿರ್ಣಯವನ್ನು ಅಂಗೀಕರಿಸಲಾತು. ರಾಜ್ಯಗಳ ಪುನರ್‌ಸಂಘಟನಾ ಆಯೋಗದ ರಚನೆಯನ್ನು ಅದು ಸ್ವಾಗತಿಸಿತು. ಭಾಷೆ, ಸಂಸ್ಕೃತಿಯ ಕಲ್ಪನೆಯನ್ನು ಬದಿಗೊತ್ತಿ ಅದರ ಬದಲು ಆರ್ಥಿಕ ಕಾರ್ಯಸಾಧ್ಯತೆ ಮತ್ತು ಆಡಳಿತಾತ್ಮಕ ಅನುಕೂಲಗಳಿಗೆ ಒತ್ತು ನೀಡುವ ಕಾರ್ಯ ವ್ಯಾಪ್ತಿ(ಟರ್ಮ್ಸ್ ಆಫ್ ರೆಫರೆನ್ಸ್)ಯನ್ನು ಆ ಆಯೋಗಕ್ಕೆ ನಿಗದಿಪಡಿಸಿದ್ದನ್ನು ಪಕ್ಷ ಟೀಕೆಮಾಡಿತು. ಭಾಷಾವಾರು ರಾಜ್ಯಗಳ ರಚನೆಯು ತಡವಾದರೆ, ಅದು ಜನಸಮುದಾಯದ ಹಲವಾರು ವಿಭಾಗಗಳ ನಡುವಿನ ಸೌಹಾರ್ದ ಸಂಬಂಧಗಳಿಗೆ ಹಾನಿಕರ ಆಗಬಹುದಾದ್ದರಿಂದ ಅದನ್ನು ವಿಳಂಬ ಮಾಡಬಾರದೆಂದು ಸರ್ಕಾರವನ್ನು ಒತ್ತಾಯಿಸಿತು. ಭಾಷೆಗಳ ಆಧಾರದಲ್ಲಿ ೨೦ ರಾಜ್ಯಗಳ ರಚನೆ ಮಾಡಬಹುದೆಂಬ ನಿರ್ದಿಷ್ಟ ಸಲಹೆಯನ್ನು ಪಕ್ಷವು ನೀಡಿತು ಮತ್ತು ಸೆಪ್ಟೆಂಬರ್ ೧೯೫೪ರ ಹೊತ್ತಿಗೆ ಮಧ್ಯಂತರ ವರದಿಯು ಸಲ್ಲಿಕೆಯಾಗಬೇಕೆಂದು ಒತ್ತಾಯಿಸಿತು.

‘ರಾಜಪ್ರಮುಖ’ ಎಂಬ ಹುದ್ದೆಯನ್ನು, ಮಾಜಿ ರಾಜರುಗಳಿಗೆ ರಾಜಧನ ನೀಡುವುದನ್ನು ಮತ್ತು ಅವರಿಗೆ ನೀಡುವ ಎಲ್ಲಾ ವಿಶೇಷ ಸವಲತ್ತುಗಳನ್ನು ರದ್ದುಮಾಡಬೇಕೆಂದು ಕೂಡ ಪಕ್ಷ ಒತ್ತಾಯ ಮಾಡಿತು. ಹಿಂದಿನ ರಾಜರುಗಳ ಎಲ್ಲಾ ವೈಯಕ್ತಿಕ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಅದನ್ನು ದೇಶದ ಮರುನಿರ್ಮಾಣಕ್ಕೆ ಹಾಗೂ ಜನರ ಅನುಕೂಲಕ್ಕೆ ಬಳಸಬೇಕೆಂದು ಒತ್ತಾಯಿಸಿತು. ಭಾಷಾಧಾರಿತವಾಗಿ ರಚಿಸಲ್ಪಟ್ಟ ರಾಜ್ಯಗಳಲ್ಲಿ ಶಿಕ್ಷಣವು ಮಾತೃಭಾಷೆಯಲ್ಲಿಯೇ ಇರಬೇಕೆಂದು ಕೂಡ ಒತ್ತಾಯಿಸಿತು.

ಭಾಷಾವಾರು ರಾಜ್ಯಗಳಿಗೆ ಆದಿವಾಸಿ ಪ್ರದೇಶಗಳನ್ನು ಸೇರಿಸುವಾಗ ಅವರ ಸಾಂಸ್ಕೃತಿಕ ಹಾಗೂ ಭಾಷಾ ನಂಟುಗಳನ್ನು ಪರಿಗಣಿಸಬೇಕೆಂದು ಕೂಡ ಪಕ್ಷ ಒತ್ತಾಯ ಮಾಡಿತು. ಆ ಪ್ರದೇಶಗಳಿಗೆ ಪ್ರಾದೇಶಿಕ ಸ್ವಾಯತ್ತತೆಯನ್ನು ನೀಡಬೇಕೆಂದು ಒತ್ತಾಯಿಸಲಾತು.

ಗಡಿಗಳ ಸಣ್ಣಪುಟ್ಟ ವಿವರಗಳಿಗೆ ತಮ್ಮ ಶಕ್ತಿಸಾಮರ್ಥ್ಯಗಳನ್ನು ವ್ಯಯಮಾಡದೇ ಒಂದು ಹಳ್ಳಿಯನ್ನು ಒಂದು ನಿರ್ಣಾಯಕ ಘಟಕವಾಗಿ ಪರಿಗಣಿಸಿ ರಾಜ್ಯಗಳ ರಚನೆಗಾಗಿ ಹೋರಾಟ ಮಾಡಬೇಕೆಂದು ಜನರಲ್ಲಿ ಪಕ್ಷವು ಮನವಿ ಮಾಡಿತು. ಈ ಎಲ್ಲಾ ಹಕ್ಕೊತ್ತಾಯಗಳ ಆಧಾರದಲ್ಲಿ ಒಂದು ಸವಿಸ್ತಾರವಾದ ಮನವಿಯನ್ನು ಕಮ್ಯುನಿಸ್ಟ್ ಪಕ್ಷವು ಆಯೋಗಕ್ಕೆ ಸಲ್ಲಿಸಿತು.

ಕೇರಳ, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಮತ್ತು ತಮಿಳುನಾಡುಗಳ ರಚನೆಯನ್ನು ಪಕ್ಷವು ಸ್ವಾಗತಿಸಿತು, ಆದರೆ ಬೊಂಬಾಯಿಯನ್ನು ಮಹಾರಾಷ್ಟ್ರದಿಂದ ಬೇರ್ಪಡಿಸಿ ಕೇಂದ್ರಾಡಳಿತ ಪ್ರದೇಶವಾಗಿ ಮಾಡುವ ಆಯೋಗದ ಶಿಫಾರಸನ್ನು ಮತ್ತು ಬಿಹಾರ ಹಾಗೂ ಬಂಗಾಳವನ್ನು ವಿಲೀನಗೊಳಿಸುವ ಶಿಫಾರಸನ್ನೂ ಕೂಡ ಪಕ್ಷವು ಟೀಕೆಮಾಡಿತು. ಈ ಹಕ್ಕೊತ್ತಾಯಗಳ ಮೇಲೆ ಪಕ್ಷವು ಹಲವಾರು ಹೋರಾಟಗಳನ್ನು ನಡೆಸಿತು, ಹಲವಾರು ಕಾರ್ಯಕರ್ತರು ಬಂಧಿಸಲ್ಪಟ್ಟರು ಮತ್ತು ಪೋಲಿಸರಿಂದ ಹೊಡೆತ ತಿಂದರು. ಈ ಪ್ರತಿಭಟನೆಗಳಲ್ಲಿ ಪಕ್ಷದ ಕೇಂದ್ರ ಸಮಿತಿಯ ಆರು ಸದಸ್ಯರು ಬಂಧಿಸಲ್ಪಟ್ಟರು. ಕೆಲವು ಕಡೆಗಳಲ್ಲಿ, ಪೋಲಿಸರು ಗೋಲೀಬಾರು ನಡೆಸಿ ಬಹಳ ಜನರನ್ನು ಕೊಂದುಹಾಕಿದರು.

ಈ ಅವಧಿಯಲ್ಲಿ, ಭಾರತ ಸರ್ಕಾರದ ವಿದೇಶಾಂಗ ನೀತಿ, ಪಂಚವಾರ್ಷಿಕ ಯೋಜನೆಗಳು ಮತ್ತು ‘ಸಮಾಜವಾದಿ ಮಾದರಿಯ ಸಮಾಜವನ್ನು’ ಸ್ಥಾಪನೆ ಮಾಡುತ್ತೇವೆಂಬ ಕಾಂಗ್ರೆಸ್ ಪಕ್ಷದ ವಂಚಕ ಘೋಷಣೆ ಮುಂತಾದ ನೆಹರೂ ಸರ್ಕಾರವು ಅನುಸರಿಸುತ್ತಿದ್ದ ನೀತಿಗಳ ವಿಶ್ಲೇಷಣೆಯ ಪ್ರಶ್ನೆಯ ಕುರಿತು ಗಂಭೀರ ಚರ್ಚೆಗಳು ಪಕ್ಷದ ಒಳಗಡೆ ಪ್ರಾರಂಭವಾದವು. ಪಕ್ಷದ ನಾಯಕತ್ವದಲ್ಲಿನ ಒಂದು ವಿಭಾಗವು ಈ ಬೆಳವಣಿಗೆಗಳಿಂದ ಪರವಶರಾಗಿದ್ದರು ಮತ್ತು ರಾಷ್ಟ್ರೀಯ ಬಂಡವಾಳಶಾಹಿಯು ಎರಡು ವಿಭಾಗಗಳಾಗಿ ಒಡೆದುಹೋಗಿವೆ-ಏಕಸ್ವಾಮ್ಯ ವಿಭಾಗವು ಸಾಮ್ರಾಜ್ಯಶಾಹಿಗಳು ಮತ್ತು ಪಾಳೇಗಾರಿಗಳೊಂದಿಗೆ ಸಂಪೂರ್ಣ ಶಾಮೀಲಾಗುವುದರ ಪರವಾಗಿದ್ದಾರೆ, ಮತ್ತೊಂದೆಡೆ ನೆಹರೂ ಮತ್ತು ಇತರ ಎಡ ಕಾಂಗ್ರೆಸ್ಸಿಗರು ಎಂದು ಕರೆದುಕೊಳ್ಳುವವರನ್ನು ಪ್ರತಿನಿಧಿಸುವ ಮತ್ತೊಂದು ವಿಭಾಗವು ಸಾಮ್ರಾಜ್ಯಶಾಹಿ ಹಾಗೂ ಪಾಳೇಗಾರಿ ಶಕ್ತಿಗಳಿಗೆ ವಿರುದ್ಧವಾಗಿದ್ದಾರೆ ಎಂದು ಪ್ರತಿಪಾದನೆ ಮಾಡಲು ಶುರುಮಾಡಿದರು. ಈ ವರ್ಗ ಸಹಯೋಗದ ನಿಲುವನ್ನು ಕೇಂದ್ರ ಸಮಿತಿಯು ತಿರಸ್ಕರಿಸಿದ್ದಾಗ್ಯೂ, ಅದು ಮುಂದುವರೆಯಿತು.

ಮಾರ್ಚ್ ೧೯೫೫ರ ಚುನಾವಣೆಯಲ್ಲಿ ಆಂಧ್ರದಲ್ಲಿ ಪಕ್ಷವು ಸೋಲನ್ನು ಅನುಭವಿಸಿದ ನಂತರ ಈ ಭಿನ್ನಾಭಿಪ್ರಾಯಗಳು ಇನ್ನೂ ಎದ್ದು ಕಾಣುವಂತಾಯಿತು. ಆ ರಾಜ್ಯದಲ್ಲಿ ಪಕ್ಷವು ಬಹುಮತ ಪಡೆಯಲಿದೆ ಎಂಬ ನಿರೀಕ್ಷೆ ಇತ್ತು. ಭಾರಿ ಬಹಿರಂಗ ಸಭೆಗಳಲ್ಲಿ ಜನರಿಂದ ದೊರೆತ ಬೆಂಬಲ ಮತ್ತು ಪ್ರೋತ್ಸಾಹಗಳು ಹಾಗೂ ಆಳುವ ವರ್ಗಗಳು ಹರಿಬಿಟ್ಟ ಉಗ್ರದ್ವೇಷದ ಪ್ರಚಾರಗಳ ಹೊರತಾಗಿಯೂ ಮತ್ತು ಕಾಂಗ್ರೆಸ್ ಪಕ್ಷದ ಬೆದರಿಕೆ ಮತ್ತು ಅಸಹ್ಯಕರ ತಂತ್ರಗಳನ್ನು ಸೋಲಿಸಿ, ನಾವು ಆ ರಾಜ್ಯದಲ್ಲಿ ಬಹುಮತ ಗಳಿಸುತ್ತೇವೆಂಬ ಹುಸಿ ಭರವಸೆಯನ್ನು ಹುಟ್ಟಿಸಿದ್ದವು. ಕಮ್ಯುನಿಸ್ಟರನ್ನು ಸೋಲಿಸುವ ಸಲುವಾಗಿ ಆಳುವ ವರ್ಗಗಳು ಭಾರೀ ಹಣ ಮತ್ತಿತರ ಸಂಪನ್ಮೂಲಗಳನ್ನು ಬಳಸಿದವು. ಫಲಿತಾಂಶವು ಪಕ್ಷಕ್ಕೆ ಆಘಾತ ಉಂಟುಮಾಡಿತು. ಪಕ್ಷದ ಅನೇಕ ಅಭ್ಯರ್ಥಿಗಳು ಕೆಲವೇ ಓಟುಗಳ ಅಂತರದಲ್ಲಿ ಪರಾಭವಗೊಂಡಿದ್ದರು. ಪಕ್ಷವು ೩೧% ಮತ ಗಳಿಸಿದರೂ, ಪಡೆದ ಸ್ಥಾನಗಳು ಕೇವಲ ೭% ಮಾತ್ರ. ಸುಮಾರು ೧೦೦ ಕ್ಷೇತ್ರಗಳಲ್ಲಿ, ಪಕ್ಷವು ೪೭% ಮತಗಳನ್ನು ಗಳಿಸಿತು. ಮತ್ತೊಂದೆಡೆ, ಕಾಂಗ್ರೆಸ್ ಮತ್ತದರ ಮೈತ್ರಿಕೂಟವು ೭೪% ಸ್ಥಾನಗಳನ್ನು ಪಡೆದು, ೫೦% ಮತ ಗಳಿಸಿತು. ಈ ಚುನಾವಣೆಯ ಸರಿಯಾದ ಪರಾಮರ್ಶೆಯನ್ನು ಮಾಡಲಾಗಲಿಲ್ಲ, ಏಕೆಂದರೆ ಪಕ್ಷದ ಒಳಗಡೆ ಭಿನ್ನಾಭಿಪ್ರಾಯಗಳು ತೀವ್ರಗೊಂಡಿದ್ದವು.

ಈ ಹಿನ್ನೆಲೆಯಲ್ಲಿ ಪಕ್ಷದ ನಾಲ್ಕನೇ ಮಹಾಧಿವೇಶನವು ಕೇರಳದ ಪಾಲ್ಘಾಟ್(ಈಗಿನ ಪಾಲಕ್ಕಾಡ್)ನಲ್ಲಿ ೧೯೫೬ರ ಏಪ್ರಿಲ್ ೧೯ರಿಂದ ೨೯ರವರೆಗೆ ನಡೆತು. ನಾಲ್ಕನೇ ಮಹಾಧಿವೇಶನದ ಹೊತ್ತಿಗೆ, ಪಕ್ಷವು ೭೫,೦೦೦ ಸದಸ್ಯತ್ವ ಮತ್ತು ೩೦,೦೦೦ ಅಭ್ಯರ್ಥಿ ಸದಸ್ಯರನ್ನು ಹೊಂದಿತ್ತು.

ಪಕ್ಷದ ಮಹಾಧಿವೇಶನದ ಮೇಲೆ ಪ್ರಭಾವ ಬೀರಿದ ಬಹು ಮುಖ್ಯ ಬೆಳವಣಿಗೆಯೆಂದರೆ ಅಂತರಾಷ್ಟ್ರೀಯ ಕಮ್ಯುನಿಸ್ಟ್ ಚಳುವಳಿಯಲ್ಲಿ, ಬಹು ಮುಖ್ಯವಾಗಿ ಸೋವಿಯತ್ ಯೂಯನ್ ಕಮ್ಯುನಿಸ್ಟ್ ಪಕ್ಷ(ಸಿಪಿಎಸ್‌ಯು)ದಲ್ಲಿ ಆಗುತ್ತಿದ್ದ ಬದಲಾವಣೆಗಳು. ೧೯೫೬ರಲ್ಲಿ ಸಿಪಿಎಸ್‌ಯುನ ೨೦ನೇ ಮಹಾಧಿವೇಶನವು ನಡೆಯಿತು ಮತ್ತು ಅದು ತನ್ನ ತಪ್ಪು ವಿಶ್ಲೇಷಣೆಗಳೊಂದಿಗೆ ಅಂಗೀಕರಿಸಿದ ನಿರ್ಣಯಗಳು ಮತ್ತೆ ಪರಿಷ್ಕರಣವಾದೀ ಶಕ್ತಿಗಳನ್ನು ಬಲಪಡಿಸಿತು.

ಪಾಲ್ಘಾಟ್ ಮಹಾಧಿವೇಶನಕ್ಕಾಗಿ ಸಿದ್ಧಪಡಿಸಿದ್ದ ಕೇಂದ್ರ ಸಮಿತಿಯ ಕರಡು ನಿರ್ಣಯವು ಅನೇಕ ಪರಿಷ್ಕರಣವಾದಿ ಸೂತ್ರಗಳನ್ನು ಹೊಂದಿತ್ತು ಮತ್ತು ಅದು ಪಕ್ಷದೊಳಗಿನ ವರ್ಗ ಸಹಯೋಗದ ಪ್ರವೃತ್ತಿಯನ್ನು ಉತ್ತೇಜಿಸಿತು. ಈ ಸೂತ್ರಗಳನ್ನು ಒಪ್ಪದ ಕೇಂದ್ರ ಸಮಿತಿಯ ಒಂದು ವಿಭಾಗವು ಮತ್ತೊಂದು ಪರ್ಯಾಯ ಕರಡನ್ನು ಮಹಾಧಿವೇಶನದ ಮುಂದೆ ಮಂಡಿಸಿತು. ಈ ಕರಡಿನಲ್ಲಿನ ಸೂತ್ರಗಳಲ್ಲಿ ಎಲ್ಲವೂ ತಪ್ಪುಗಳಿಂದ ಹೊರತಾಗಿರಲಿಲ್ಲ, ಏಕೆಂದರೆ ೧೯೫೧ರಲ್ಲಿ ಅಂಗೀಕರಿಸಿದ್ದ ಪಕ್ಷದ ಕಾರ್ಯಕ್ರಮದ ಆಧಾರದಲ್ಲಿ ಅವು ಇದ್ದವು, ಹಾಗಾಗಿ ಮಿತಿಗಳಿದ್ದವು. ಆದರೆ, ಈ ಕರಡು ಭಾರತೀಯ ಪ್ರಭುತ್ವದ ವರ್ಗ ಗುಣವನ್ನು ಸ್ಪಷ್ಟವಾಗಿ ವಿಶ್ಲೇಷಣೆ ಮಾಡಿತ್ತು ಮತ್ತು ವರ್ಗ ಸಹಯೋಗದ ಸೂತ್ರಗಳನ್ನು ತೀವ್ರವಾಗಿ ಟೀಕೆಮಾಡಿತ್ತು. ಈ ಎರಡು ದಸ್ತಾವೇಜುಗಳ ಬಗ್ಗೆ ತೀಕ್ಷ್ಣವಾದ ಚರ್ಚೆಗಳಾದವು ಮತ್ತು ತಮ್ಮ ನಿಲುವಿನ ಪರವಾಗಿ ಇಡೀ ಪಕ್ಷವನ್ನು ಕೊಂಡೊಯ್ಯಬೇಕೆಂಬ ವರ್ಗ ಸಹಯೋಗ ಬಯಸುವವರ ಪ್ರಯತ್ನ ವಿಫಲವಾಯಿತು. ಈ ಸಂವಾದ ಮತ್ತು ಚರ್ಚೆಗಳು ಕೆಲವು ಮೂಲಭೂತ ಸೈದ್ಧಾಂತಿಕ ನಿಲುವುಗಳನ್ನು ಹಾಗೇ ಉಳಿಸಿಕೊಳ್ಳಲು ಅವರನ್ನು ಬಲವಂತ ಮಾಡಿದವು; ಅದರ ಫಲವಾಗಿ, ಜನತಾ ಪ್ರಜಾಪ್ರಭುತ್ವ ಮತ್ತು ಕಾರ್ಮಿಕ ವರ್ಗದ ನೇತೃತ್ವದಲ್ಲಿನ ಜನತಾ ಪ್ರಜಾಪ್ರಭುತ್ವ ರಂಗ ಎಂಬ ರಣತಂತ್ರದ ಧ್ಯೇಯೋದ್ದೇಶಗಳನ್ನು ಒಳಗೊಳ್ಳಲು ಸಾಧ್ಯವಾಯಿತು. ಪರ್ಯಾಯ ಕರಡು ಮಂಡಿಸಿದವರನ್ನು ಈ ತಿದ್ದುಪಡಿಗಳು ಹೆಚ್ಚೂ ಕಡಿಮೆ ಸಮಾಧಾನಗೊಳಿಸಿದ ಕಾರಣ ಅವರು ಅದನ್ನು ಹಿಂಪಡೆದರು.

ಪುನರ್ರೂಪಿಸಿದ ಹಾಗೂ ತಿದ್ದುಪಡಿ ಮಾಡಿದ ಕರಡು ವರ್ಗ-ಸಹಯೋಗದ ನಿಲುವಿನವರಿಗೆ ಹಿಡಿಸಲಿಲ್ಲ, ಅವರು ಕೇಂದ್ರ ಸಮಿತಿಯು ಮಂಡಿಸಿದ ಮೊದಲಿನ ಕರಡನ್ನೇ ಬೆಂಬಲಿಸಿದರು. ಸಮಾಜದ ಬದಲಾವಣೆಗೆ ಅನುಸಾರವಾಗಿ ಇಲ್ಲದೇ ಅದೇ ಹಳೆಯ ಜಾಡಿಗೇ, ಬದಲಾಗದ ಕಲ್ಪನೆಗಳು ಹಾಗೂ ತಂತ್ರಗಳಿಗೆ ಅಂಟಿಕೊಂಡು ಪಕ್ಷಕ್ಕೆ ಸರಿಪಡಿಸಲಾಗದ ಹಾನಿಯನ್ನು ಉಂಟುಮಾಡುತ್ತಿದ್ದಾರೆ ಎಂದು ಅವರು ಇತರರನ್ನು ದೂಷಿಸಿದರು. ಅವರು ತಮ್ಮದೇ ಆದ ಒಂದು ಪರ್ಯಾಯ ಕರಡನ್ನು ಪಕ್ಷದ ಮಹಾಧಿವೇಶನದಲ್ಲಿ ಮಂಡಿಸಿದರು, ಅದು ಸೋತುಹೋಯಿತು, ಆದರೆ ಅದಕ್ಕೆ ಮೂರನೇ ಒಂದು ಭಾಗದ ಪ್ರತಿಧಿಗಳು ಮತಹಾಕಿದರು.

ಮಹಾಧಿವೇಶನದಲ್ಲಿ ಮಂಡಿಸಿದ ಸಂಘಟನಾ ವರದಿಯು ಶಿಸ್ತು ಸಡಿಲವಾಗುತ್ತಿರುವುದು ಮತ್ತು ತೀರ್ಮಾನಗಳನ್ನು ಜಾರಿ ಮಾಡದಿರುವ ಬಗ್ಗೆ ಟಿಪ್ಪಣಿ ಮಾಡಿತ್ತು. ಈ ಅವಧಿಯಲ್ಲಿ ಒಂದು ಕೇಂದ್ರ ಶಾಲೆಯನ್ನು ಸಂಘಟಿಸಲಾಗಿತ್ತಾದರೂ ಅದಕ್ಕೆ ಪಕ್ಷದಲ್ಲಿ ಒಂದು ಸಮಾನ ತಿಳುವಳಿಕೆಯನ್ನು ಉಂಟುಮಾಡಲು ಸಾಧ್ಯವಾಗಲಿಲ್ಲ. ಸಾಮೂಹಿಕ ಕಾರ್ಯನಿರ್ವಹಣೆಗೆ ಹೊಡೆತ ಬಿದ್ದಿತ್ತು ಮತ್ತು ಪಕ್ಷದ ಕೇಂದ್ರದಲ್ಲಿ ದೌರ್ಬಲ್ಯ ಹಾಗೆಯೇ ಉಳಿದಿತ್ತು. ಇದು ಪಕ್ಷದ ಪತ್ರಿಕೆಗಳ ಪ್ರಕಟಣೆಗೂ ಅಡಚಣೆ ಉಂಟುಮಾಡಿತ್ತು ಮತ್ತು ಪಕ್ಷದ ಸಾಹಿತ್ಯ ಮಾರಾಟಕ್ಕೂ ಧಕ್ಕೆ ಮಾಡಿತ್ತು. ಪಕ್ಷ ಹಾಗೂ ಪಕ್ಷದ ಸಿದ್ಧಾಂತದ ಬೆಳವಣಿಗೆಗೆ ಉತ್ತಮ ವಾತಾವರಣ ಇದ್ದಾಗಲೂ ಅದನ್ನು ಪರಿಣಾಮಕಾರಿಯಾಗಿ ಬಳಸಲಾಗದಿರುವುದು ನಾಯಕತ್ವದ ಸೋಲು ಎಂಬುದನ್ನು ವರದಿಯು ಸ್ವವಿಮರ್ಶಾತ್ಮಕವಾಗಿ ಒಪ್ಪಿಕೊಂಡಿತ್ತು.

ಪ್ರತಿನಿಧಿ ಪರಿಚಯ ಪತ್ರ ಸಮಿತಿಯ ವರದಿಯು ೪೦೭ ಪ್ರತಿಧಿಗಳು ಮಹಾಧಿವೇಶನದಲ್ಲಿ ಭಾಗವಹಿಸಿದ್ದರು ಎನ್ನುವುದನ್ನು ದಾಖಲಿಸಿತು. ಪ್ರತಿಧಿಗಳು ಜೈಲಿನಲ್ಲಿ ಕಳೆದ ವರ್ಷಗಳನ್ನು ಲೆಕ್ಕ ಹಾಕಿದರೆ ಅದು ೧೩೪೪ ವರ್ಷಗಳಾಗಿತ್ತು. ಅಂದರೆ ಪ್ರತಿಯೊಬ್ಬ ಪ್ರತಿನಿಧಿಯೂ ಕನಿಷ್ಠ ಮೂರು ವರ್ಷಗಳ ಜೈಲುವಾಸ ಅನುಭವಿಸಿದ್ದರು. ಪ್ರತಿನಿಧಿಗಳು ಒಟ್ಟಾಗಿ ೧೦೨೧ ವರ್ಷಗಳ ಭೂಗತ ಜೀವನ ನಡೆಸಿದ್ದರು, ಅಂದರೆ ಪ್ರತಿಯೊಬ್ಬ ಪ್ರತಿನಿಧಿಯೂ ಎರಡೂವರೆ ವರ್ಷಗಳ ಕಾಲ ಭೂಗತರಾಗಿದ್ದರು. ಇದು ಪಕ್ಷದ ಹೋರಾಟದ ಸಾಮರ್ಥ್ಯವನ್ನು ಪ್ರತಿಫಲಿಸಿತ್ತು.

ಜಗತ್ತಿನಲ್ಲಿ ಬಲಾಬಲಗಳು ಸಮಾಜವಾದದತ್ತ ನಿರ್ಣಾಯಕವಾಗಿ ವಾಲಿವೆ ಮತ್ತು ಸಾಮ್ರಾಜ್ಯಶಾಹಿಯ ಪ್ರಭಾವ ದುರ್ಬಲವಾಗುತ್ತಿದೆ ಎಂದು ಮಹಾಧಿವೇಶನ ಅಂಗೀಕರಿಸಿದ ರಾಜಕೀಯ ನಿರ್ಣಯವು ಹೇಳಿತು. ಇದು ಸಂಸದೀಯ ಬಹುಮತಗಳು ಸಾಮಾಜಿಕ ಬದಲಾವಣೆಗೆ ಎಡೆ ಮಾಡಿಕೊಡ ಬಲ್ಲವು ಮತ್ತು ಪಕ್ಷದ ಮುಂದಿರುವ ಪ್ರಶ್ನೆಯು ಸಮಾಜವಾದದೆಡೆಗೆ ಶಾಂತಿಯುತ ಬದಲಾವಣೆಗೆ ‘ಪರಿಸ್ಥಿತಿಯನ್ನು ಸೃಷ್ಟಿಸುವುದೇ’ ಆಗಿದೆ ಎಂಬ ಕೆಲವರ ತೀರ್ಮಾನಕ್ಕೆ ಕಾರಣವಾತಯಿತು. ಕಾರ್ಯಕ್ರಮಾತ್ಮಕ ಪ್ರಶ್ನೆಗಳಲ್ಲಿ ಹಾಗೂ ತತ್‌ಕ್ಷಣದಲ್ಲಿ ಅನುಸರಿಸಬೇಕಾದ ತಂತ್ರಾತ್ಮಕ ನಿಲುವುಗಳಲ್ಲಿ ಪಕ್ಷವು ಇನ್ನೂ ವಿಭಜಿತವಾಗಿಯೇ ಇತ್ತು ಎಂಬುದನ್ನು ಈ ಎಲ್ಲಾ ಸಂವಾದಗಳು ಮತ್ತು ಚರ್ಚೆಗಳು ತೋರಿಸಿಕೊಟ್ಟವು.

ಪಕ್ಷದ ಮಹಾಧಿವೇಶನವು ರಾಜಕೀಯ ನಿರ್ಣಯವನ್ನು ಅಂಗೀಕರಿಸಿದ್ದಾಗ್ಯೂ, ಭಾರತೀಯ ಕಮ್ಯುನಿಸ್ಟ್ ಚಳುವಳಿಯು ಎದುರಿಸುತ್ತಿದ್ದ ಕೆಲವು ಪ್ರಮುಖ ಪ್ರಶ್ನೆಗಳ(ಪ್ರಭುತ್ವದ ವರ್ಗ ಗುಣ, ಅನುಸರಿಸಬೇಕಾದ ದೀರ್ಘಕಾಲದ ಹಾಗೂ ತತ್‌ಕ್ಷಣದ ತಂತ್ರಗಳು) ವಿಷಯಗಳಲ್ಲಿ ಪಕ್ಷದ ಒಳಗಡೆ ಸಮಾನ ತಿಳುವಳಿಕೆ ಇಲ್ಲ ಎನ್ನುವುದು ಸ್ಪಷ್ಟವಾಯಿತು. ಹೀಗೆ ಕಾರ್ಯಕ್ರಮ ಹಾಗೂ ಸೈದ್ಧಾಂತಿಕ ವಿಷಯಗಳ ಮೇಲೆ ಪಕ್ಷದೊಳಗಿನ ದಶಕಗಳ ಕಾಲದ ಹೋರಾಟಕ್ಕೆ ಈ ಮಹಾಧಿವೇಶನವು ಪೂರ್ವಸೂಚಕವಾಯಿತು.

ಕನ್ನಡಕ್ಕೆ: ಟಿ.ಸುರೇಂದ್ರ ರಾವ್

Leave a Reply

Your email address will not be published. Required fields are marked *