ರೈತಾಪಿ ಜನರ ನಡುವಿನ ಕೆಲಸ ಕಾರ್ಯಗಳು – 2

Communist100 File copy
ಶತಮಾನೋತ್ಸವ ಲೇಖನಮಾಲೆ-೪೬

“ವಿದೇಶಿ ಹಾಗೂ ಭಾರತೀಯ ಏಕಸ್ವಾಮ್ಯಗಳ ಒಳಸಂಚುಗಳಿಂದ ರೈತರನ್ನು ಮುಕ್ತಗೊಳಿಸಲು ಮತ್ತು ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯನ್ನು ಖಾತ್ರಿಗೊಳಿಸುವ ಮೂಲಕ ರೈತ ಉತ್ಪಾದಕರಿಗೆ ರಕ್ಷಣೆ ನೀಡಲು ಸರ್ಕಾರವು ಕ್ರಮಕೈಗೊಳ್ಳಬೇಕೆಂಬ ಬೇಡಿಕೆಯು ಕಿಸಾನ್ ಚಳುವಳಿಯು ಮಾಡಬೇಕಾದ ಕೆಲಸಗಳಲ್ಲಿ ಬಹಳ ಪ್ರಮುಖವಾದದ್ದಾಗಿದೆ.

“ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯನ್ನು ಖಾತ್ರಿಗೊಳಿಸುವ ಜತೆಯಲ್ಲೇ, ಒಂದೊಮ್ಮೆ ಮಾರುಕಟ್ಟೆ ಬೆಲೆಯು ಕನಿಷ್ಠಕ್ಕಿಂತ ಕೆಳಗೆ ಕುಸಿದರೆ, ಸರ್ಕಾರವು ಮಧ್ಯಪ್ರವೇಶ ಮಾಡಿ ರೈತರಿಂದ ಆ ಉತ್ಪನ್ನಗಳನ್ನು ಕನಿಷ್ಠ ದರಗಳಲ್ಲಿ ಖರೀದಿಸಬೇಕು ಎಂದು ನಾವು ಒತ್ತಾಸಬೇಕು.

“ಬರಗಾಲ ಮತ್ತು ಅಭಾವಪೀಡಿತ ಪ್ರದೇಶಗಳಲ್ಲಿ ಸರ್ಕಾರವು ಈ ಕೆಳಗಿನಂತೆ ವ್ಯವಸ್ಥೆ ಮಾಡಬೇಕೆಂದು ನಾವು ಒತ್ತಾಸಬೇಕು:

ಅ) ಅಗ್ಗದ ಆಹಾರ ಧಾನ್ಯಗಳ ಮಳಿಗೆಗಳನ್ನು, ಪರಿಹಾರ ಕೆಲಸಗಳನ್ನು ಮತ್ತು ಉಚಿತ ಅಡಿಗೆಮನೆಗಳನ್ನು ಸ್ಥಾಪಿಸಬೇಕು;

ಆ) ಶೋಧನಾ ಕಾರ್ಯಗಳು, ಉದ್ಯೋಗಗಳು ಹಾಗೂ ಕೂಲಿಗಳಿಗೆ ಸಂಬಂಧಪಟ್ಟಂತೆ ಬರಗಾಲ ಸಂಹಿತೆಯನ್ನು ಸರಳೀಕರಿಸಬೇಕು;

ಇ) ಬರಗಾಲ ಪ್ರದೇಶಗಳಲ್ಲಿ ಪರಿಹಾರ ಕೆಲಸಗಳಾಗಿ ಕಲ್ಲು ಒಡೆಯುವ, ಕೇವಲ ರಸ್ತೆ ನಿರ್ಮಾಣ ಮುಂತಾದ ಕೆಲಸಗಳ ಬದಲು ಉತ್ಪಾದಕ ಕೆಲಸಗಳು ಮತ್ತು ರಕ್ಷಣಾ ಕೆಲಸಗಳ ಲಾಭವನ್ನು ಪರಿಗಣಿಸದೆ ಕೈಗೆತ್ತಿಕೊಳ್ಳಬೇಕು;

ಈ) ಎಲ್ಲಾ ಋಣಭಾರಗಳು, ಗೇಣಿ ಬಾಕಿ ಮತ್ತು ಭೂಕಂದಾಯ ಸಂದಾಯ ಮಾಡುವುದನ್ನು ಮುಂದೂಡಬೇಕು;

ಉ) ಮೇವುಗಳನ್ನು ಪೂರೈಸಬೇಕು; ಮತ್ತು

ಊ) ತಕಾವಿ ಸಾಲಗಳನ್ನು ಉದಾರಗೊಳಿಸಬೇಕು.

“ಅದೇ ಸಮಯದಲ್ಲಿ ನಾವು ಬರಗಾಲ ಪರಿಹಾರ ಸಮಿತಿಗಳನ್ನು ಬೇರೆಯವರ ಸಹಕಾರದೊಂದಿಗೆ ಸಂಘಟಿಸಬೇಕು ಮತ್ತು ಪರಿಹಾರ ಒದಗಿಸಬೇಕು. ಕಿಸಾನ್ ಸಭಾ ಮತ್ತು ಕೃಷಿ ಕೂಲಿಕಾರರ ಸಂಘಟನೆಗಳ ಘಟಕಗಳು ಈ ಪರಿಹಾರ ಕೇಂದ್ರಗಳಲ್ಲಿ, ಶೋಧನಾ ಕಾರ್ಯಗಳಲ್ಲಿ, ಅಗ್ಗದ ಧಾನ್ಯ ಮಳಿಗೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಭ್ರಷ್ಟಾಚಾರವನ್ನು ತಡೆಯಬೇಕು ಮತ್ತು ಅವು ಸರಿಯಾಗಿ ನಿರ್ವಹಿಸುವಂತೆ ನೋಡಿಕೊಳ್ಳಬೇಕು.

“ತಕ್ಷಣ ಋಣಸಂದಾಯ ಮುಂದೂಡಲು ಮತ್ತು ಹಳೆ ಸಾಲ ಬಾಕಿಯನ್ನು ಕಡಿಮೆ ಮಾಡುವ ಮತ್ತು ರದ್ದು ಮಾಡುವ ಬಗೆಗಿನ ಶಾಸನಕ್ಕಾಗಿ ತೀವ್ರವಾದ ಪ್ರಚಾರ ಕೈಗೊಳ್ಳಬೇಕು.

“ಸಹಕಾರ ಸಂಘಗಳು ಸಾಮಾನ್ಯವಾಗಿ ಭೂಮಾಲಕರ ಮತ್ತು ಶ್ರೀಮಂತ ರೈತರ ಕೈಯಲ್ಲಿರುತ್ತವೆ… .ಕಿಸಾನ್ ಚಳುವಳಿ ಎಲ್ಲೆಲ್ಲಿ ದುರ್ಬಲವಾಗಿದೆಯೋ ಅಂತಹ ಪ್ರದೇಶಗಳಲ್ಲಿ ಅವು ಅವರ ಕೈಯಲ್ಲಿರುತ್ತವೆ. ಆದರೆ ಈ ವಿದ್ಯಮಾನಗಳು ಈ ಸಹಕಾರ ಸಂಘಗಳ ಮೂಲಕ ಸರ್ಕಾರವು ನೀಡುತ್ತಿರುವ ಸೌಲಭ್ಯಗಳ ಬಗ್ಗೆ ನಮ್ಮನ್ನು ಕುರುಡಾಗಿಸಬಾರದು. ಸರ್ಕಾರವು ಈ ಸೌಲಭ್ಯಗಳನ್ನು ಮುಂದುವರಿಸುತ್ತಲೇ ಇದೆ ಮತ್ತು ನಿಜವಾಗಿಯೂ ‘ಕೋಅಪರೇಟಿವ್ ಕಾಮನ್‌ವೆಲ್ತ್’ನ್ನು ಈ ರೀತಿಯಲ್ಲಿ ಬೆಳೆಸಬಹುದು ಎಂಬ ಭ್ರಮೆಯನ್ನು ಹುಟ್ಟುಹಾಕಲು ಈ ಸಹಕಾರ ಸಂಘಗಳನ್ನು ಹೆಚ್ಚು ವ್ಯಾಪಕವಾಗಿ ಬೆಳೆಸಬೇಕೆಂಬುದನ್ನು ಸರ್ಕಾರ ಬಯಸುತ್ತದೆ. ಆದರೆ, ನಾವು ಈ ಭ್ರಮೆಗಳ ಬಲೆಗೆ ಬೀಳದೆ, ಈ ಸಹಕಾರಿ ಸಂಘಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಾದ್ದು ಅಗತ್ಯವಿದೆ ಮತ್ತು ಅವನ್ನು ಬಳಸಲು ಪ್ರಯತ್ನಿಸಬೇಕು, ಆ ಮೂಲಕ ಕೃಷಿ ಕೂಲಿಕಾರರ, ಬಡವರ ಮತ್ತು ಮಧ್ಯಮ ರೈತರ ಅಗತ್ಯಗಳಿಗೆ ನೆರವು ನೀಡಬಹುದು. ಸಹಕಾರಿ ರಂಗದಲ್ಲಿನ ಭ್ರಷ್ಟಾಚಾರದ ವಿರುದ್ಧ ನಾವು ಹೋರಾಡಬೇಕು ಮತ್ತು ಹೆಚ್ಚು ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಒತ್ತಾಯಿಸಬೇಕು.

“ಹಲವಾರು ತೆರಿಗೆ ಹೊರೆಗಳನ್ನು ಕಡಿಮೆ ಮಾಡಬೇಕೆಂಬ ಬೇಡಿಕೆಗಳನ್ನು ನಾವು ರೂಪಿಸಬೇಕು ಮತ್ತು ಶ್ರೇಣೀಕೃತ ಕೃಷಿ ತೆರಿಗೆಯನ್ನು ಆರಂಭಿಸಬೇಕೆಂದು ಒತ್ತಾಸಬೇಕು. ರೈತರ ಮೇಲೆ ಹೊಸ ತೆರಿಗೆ ಹೊರೆಗಳನ್ನು ಹೇರುವುದರ ವಿರುದ್ಧ ಹೋರಾಟಗಳನ್ನು ತೀವ್ರಗೊಳಿಸಬೇಕು ಮತ್ತು ಅಂತಹ ಎಲ್ಲಾ ಪ್ರಯತ್ನಗಳನ್ನು ಪ್ರತಿರೋಧಿಸಬೇಕು.

ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಯು ತನ್ನ ಏಪ್ರಿಲ್ ೧೯೫೪ರ ಸಭೆಯಲ್ಲಿ ‘ರೈತಾಪಿ ಜನರ ನಡುವಿನ ಕೆಲಸ ಕಾರ್ಯಗಳು’ ಕುರಿತು ಒಂದು ನಿರ್ಣಯ ಅಂಗೀಕರಿಸಿತು. “ಭೂಮಿತಿ, ‘ಪುನಃಸ್ವಾಧೀನದ ಹಕ್ಕು’, ಗೇಣಿ ಕಡಿಮೆ ಮಾಡುವುದು, ಕಂದಾಯದ ಹೊರೆಗಳು, ರೈತರ ಉತ್ಪನ್ನಕ್ಕೆ ಆರ್ಥಿಕ ಬೆಲೆ, ಋಣಭಾರ, ಹಿಡುವಳಿಗಳ ಕ್ರೋಡೀಕರಣ ಮತ್ತು ಛಿದ್ರೀಕರಣವನ್ನು ತಡೆಯುವುದು, ಸಹಕಾರ ಸಂಘಗಳು, ಪಂಚಾಯತ್‌ಗಳು, ನೀರಾವರಿ ಸೌಲಭ್ಯಗಳು, ಕೃಷಿ ಕೂಲಿಕಾರರ ಬೇಡಿಕೆಗಳು ಮತ್ತು ರೈತ ಸಂಘಟನೆಗಳನ್ನು ಕಟ್ಟುವುದು ಮತ್ತು ಕ್ರಿಯಾಶೀಲಗೊಳಿಸುವಲ್ಲಿನ ಸಮಸ್ಯೆಗಳು ಮುಂತಾದ ಪ್ರಶ್ನೆಗಳನ್ನು ಅದು ಎತ್ತಿಕೊಂಡಿತ್ತು. ರೈತ ಚಳುವಳಿಯಲ್ಲಿ ಪಕ್ಷದ ಕೆಲಸಗಳಿಗೆ ಮಾರ್ಗದರ್ಶನ ಮಾಡಲು ಈ ಎಲ್ಲ ಪ್ರಶ್ನೆಗಳ ಮೇಲೆ ಮೂರ್ತ ನೀತಿ-ನಿಯಮಗಳನ್ನು ಅದು ಹಾಕಿ ಕೊಟ್ಟಿತು. ಆ ನಿರ್ಣಯದ ಮುಖ್ಯಾಂಶಗಳನ್ನು ಕಳೆದ ಸಂಚಿಕೆಯಲ್ಲಿ ಆರಂಭಿಸಲಾಗಿತ್ತು. ಇಲ್ಲಿ ಅದನ್ನು ಮುಂದುವರೆಸಲಾಗಿದೆ.

“ಆದಿವಾಸಿ ಪ್ರದೇಶಗಳಲ್ಲಿ, ಮೀಸಲು ರೇಖೆಯನ್ನು ಹಳ್ಳಿಗಳಿಂದ ಒಂದು ಮೈಲಿ ದೂರದಲ್ಲಿಡಬೇಕು. ಅರಣ್ಯಗಳೇ ಇಲ್ಲದ, ಆದರೆ ಮೀಸಲು ಎಂದು ಗುರುತಿಸಲ್ಪಟ್ಟ ಪ್ರದೇಶಗಳನ್ನು ಸಾಗುವಳಿಗಾಗಿ ನೀಡಬೇಕು. ಸಾಗುವಳಿ ಸ್ಥಳಾಂತರಕ್ಕೆ ಸಂಬಂಧಪಟ್ಟ ನಿಯಮಗಳನ್ನು ಸರಳವಾಗಿಸಬೇಕು. ಅರಣ್ಯ ಪಂಚಾಯತುಗಳನ್ನು ರಚಿಸಬೇಕು. ಅರಣ್ಯ ಉತ್ಪನ್ನಗಳನ್ನು ಆದಿವಾಸಿಗಳು ಮುಕ್ತವಾಗಿ ಬಳಸಲು ಹಾಗೂ ಮಾರಾಟ ಮಾಡಲು ಸಾಧ್ಯವಾಗಬೇಕು. ಮಾರಾಟಕ್ಕಾಗಿ ಮರಗಳನ್ನು ಕಡಿಯಬಹುದಾದಂತಹ ಪ್ರದೇಶಗಳಲ್ಲಿ ಆದಿವಾಸಿಗಳ ಸಹಕಾರ ಸಂಘಗಳನ್ನು ಸ್ಥಾಪಿಸಬೇಕು.

“ಆದಿವಾಸಿ ಪ್ರದೇಶಗಳಲ್ಲಿ ಎಲ್ಲಾ ರೀತಿಯ ಭೂಮಾಲಕತ್ವವನ್ನು ರದ್ದು ಮಾಡಬೇಕು ಮತ್ತು ಹಳೆಯ ಋಣಭಾರವನ್ನು ಕೊನೆಗೊಳಿಸಬೇಕು.

“ಗುತ್ತಿಗೆದಾರರಿಂದ ಎಲ್ಲಾ ರೀತಿಯ ಶೋಷಣೆಯನ್ನು ತಡೆಯಬೇಕು ಮತ್ತು ಆದಿವಾಸಿಗಳ ಅರಣ್ಯ ಸಂಗ್ರಹಣೆಗಳಿಗೆ ನ್ಯಾಯಬೆಲೆ, ಅವರ ಕೆಲಸಗಳಿಗೆ ಸರಿಯಾದ ಕೂಲಿ ಸಿಗಬೇಕು.

“ದವಾಖಾನೆಗಳ ಮೂಲಕ ವೈದ್ಯಕೀಯ ನೆರವು, ಸಂಚಾರಿ ವೈದ್ಯಾಧಿಕಾರಿಗಳು, ಆದಿವಾಸಿ ಪ್ರದೇಶಗಳಲ್ಲಿ ವ್ಯಾಪಕವಾಗಿರುವ ವಿಶೇಷ ರೋಗಗಳಿಗೆ ವಿಶೇಷ ಕ್ರಮಗಳು, ಕುಡಿಯುವ ನೀರಿನ ಬಾವಿಗಳು, ಹೊಂಡಗಳನ್ನು ಸೋಂಕಿಲ್ಲದಂತೆ ಶುದ್ಧಗೊಳಿಸುವುದು ಮತ್ತು ಮಲೇರಿಯಾ ಹೋಗಲಾಡಿಸಲು ವಿಶೇಷ ಕ್ರಮಗಳು ಮುಂತಾದವುಗಳನ್ನು ಕೈಗೊಳ್ಳಬೇಕು.

“ಜಾನುವಾರುಗಳ ಖಾಯಿಲೆಗಳನ್ನು ತಡೆಯಲು ಔಷಧಾಲಯಗಳನ್ನು ಮತ್ತು ಸಂಚಾರಿ ಜಾನುವಾರು ವೈದ್ಯರುಗಳನ್ನು ಒದಗಿಸಬೇಕು.

“ಆದಿವಾಸಿ ಪ್ರದೇಶಗಳಲ್ಲಿ ವಿಶೇಷ ಶಿಕ್ಷಣ ಸೌಲಭ್ಯವನ್ನು, ಅವರ ಭಾಷೆಯಲ್ಲೇ ಶಿಕ್ಷಣ ಒದಗಿಸುವುದು; ಶಾಲಾ ಪರಿಕರಗಳನ್ನು ಉಚಿತವಾಗಿ ನೀಡಬೇಕು; ವಯಸ್ಕರಿಗೆ ರಾತ್ರಿ ಶಾಲೆಗಳನ್ನು ನಡೆಸಬೇಕು; ಪ್ರೌಢ ಹಾಗೂ ವಿಶ್ವವಿದ್ಯಾಲಯಗಳ ಶಿಕ್ಷಣಕ್ಕೆ ಉಚಿತ ವಿದ್ಯಾರ್ಥಿ ವೇತನಗಳನ್ನು ಹಾಗೂ ಆದಿವಾಸಿ ಶಿಕ್ಷಕರಿಗೆ ತರಬೇತಿ ನೀಡಬೇಕು.

“ನೀರಾವರಿ ಯೋಜನೆಗಳು ಪೂರ್ಣಗೊಳ್ಳುವ ಮುಂಚೆಯೇ ಅನೇಕ ಸಂದರ್ಭಗಳಲ್ಲಿ ರೈತರ ಮೇಲೆ ಎಕರೆವಾರು ಅಭಿವೃದ್ಧಿ ಶುಲ್ಕ ವಿಧಿಸಬೇಕೆಂಬ ಕಾಂಗ್ರೆಸ್ ಸರ್ಕಾರದ ಉದ್ದೇಶವನ್ನು ವಿರೋಧಿಸಬೇಕು, ಏಕೆಂದರೆ ಇದು ಬಡ ಮತ್ತು ಮಧ್ಯಮ ರೈತರನ್ನು ಹೆಚ್ಚೆಚ್ಚು ಸಾಲಗಾರರನ್ನಾಗಿಸಿ ಸರ್ವನಾಶ ಮಾಡುತ್ತದೆ.

“ಸರ್ಕಾರದ ನೀತಿಗಳು ಮತ್ತು  ಕಾರ್ಯಗಳನ್ನು ಟೀಕೆ ಮಾಡುವುದಕ್ಕೆ ಮಾತ್ರವೇ ಸೀಮಿತವಾಗದೇ, ಯೋಜನೆಗಳನ್ನು ರೂಪಿಸುವವರಾಗಿ, ಬರಗಾಲ ಹಾಗೂ ಪ್ರವಾಹ ಪರಿಹಾರ ಸಂಘಟಿಸುವವರಾಗಿ ಕೂಡ ಪಕ್ಷ ಮತ್ತು ಕಿಸಾನ್ ಸಭಾ ಮುಂದಾಗಬೇಕಾದ ಸಮಯವಿದು; ಸಹಕಾರಿ ಸಂಘಗಳು, ಗ್ರಾಮೀಣ ಬ್ಯಾಂಕ್‌ಗಳು, ಮಾರುಕಟ್ಟೆ ಮಂಡಲಿಗಳು, ಪಂಚಾಯತುಗಳು ಹಾಗೂ ಶಾಲೆಗಳು; ಸಾಂಸ್ಕೃತಿಕ ಸಂಘಗಳು, ಕೃಷಿ ಸಂಶೋಧನಾ ಕೇಂದ್ರಗಳು ಮುಂತಾದ ಎಲ್ಲಾ ಸಂಸ್ಥೆಗಳನ್ನು ನಡೆಸುವ ಶಕ್ತಿಸಾಮರ್ಥ್ಯಗಳನ್ನು ಹೊಂದಬೇಕು.

” ‘ಸೃಜನಾತ್ಮಕ’ ಯೋಜನೆಗಳನ್ನು ರೈತರು ಮತ್ತು ಜನರ ದೃಷ್ಟಿಯಿಂದ ಜಾಗರೂಕತೆಯಿಂದ ಅಭ್ಯಾಸ ಮಾಡದೆ ತಿರಸ್ಕಾರ ಭಾವದಿಂದ ನೋಡುವ ಮತ್ತು ಅವಹೇಳನ ಮಾಡುವ ಪರಿಪಾಟವನ್ನು ಬಿಡಬೇಕು. ಅಂತಹ ಕೆಲಸಗಳು ನಮ್ಮನ್ನು ‘ಪರಿಷ್ಕರಣವಾದ’ದತ್ತ ಕೊಂಡೊಯ್ಯುತ್ತವೆ ಮತ್ತು ನಾವು ರೈತಾಪಿಗಳ ನಡುವೆ ‘ಭ್ರಮೆಗಳನ್ನು’ ಸೃಷ್ಟಿಸುತ್ತೇವೆ ಎಂಬ ಭೀತಿಯಿಂದ ಹೊರಬರಬೇಕು. ಭೂಮಾಲಕರು ಮತ್ತು ಸರ್ಕಾರದ ವಿರುದ್ಧ ಇವುಗಳನ್ನು ಸಾಧಿಸುವ ನಿಟ್ಟಿನಲ್ಲಿ ರೈತ ಸಮುದಾಯವನ್ನು ಯಶಸ್ವಿಯಾಗಿ ಮುನ್ನಡೆಸುವ ಮೂಲಕ, ಅವರ ಬೇಡಿಕೆಗಳನ್ನು ಈಡೇರಿಸುವುದಕ್ಕಾಗಿ ರೈತ ಸಮುದಾಯವನ್ನು ಹುರಿದುಂಬಿಸಿ ಕಾರ್ಯಾಚರಣೆಗೆ ಇಳಿಸಲು ಸಾಧ್ಯವಾಗುತ್ತದೆ.

“ಕಾರ್ಷಿಕ ಕ್ರಾಂತಿಯ ಚಳುವಳಿಗೆ ಲಕ್ಷಾಂತರ ರೈತರು ಮತ್ತು ಕೃಷಿ ಕೂಲಿಕಾರರನ್ನು ಸೆಳೆದುಕೊಳ್ಳುವ ದೃಷ್ಟಿಯಿಂದ ಯೋಜನಾಬದ್ಧ ಸಂಘಟನಾತ್ಮಕ ಕೆಲಸಗಳ ಮೂಲಕ ಸೈದ್ಧಾಂತಿಕ ಹೋರಾಟ ಮತ್ತು ಐಕ್ಯ ರಂಗದ ಕಾರ್ಯಾಚರಣೆಗಳನ್ನು ಬಲಪಡಿಸಬೇಕು.

“ನಿರ್ದಿಷ್ಟ ಪ್ರಶ್ನೆಗಳ ಮೇಲೆ ರೈತ ಹೋರಾಟಗಳನ್ನು ಮಾಡುವಾಗ ಅಸ್ತಿತ್ವದಲ್ಲಿರುವ ಇತರ ಕಿಸಾನ್ ಸಂಘಟನೆಗಳ ಜತೆ ಜಂಟಿ ಸಮಿತಿಗಳನ್ನು ರಚಿಸುವ ನಿಟ್ಟಿನಲ್ಲಿ ವ್ಯವಸ್ಥಿತ ಪ್ರಯತ್ನ ಮಾಡಲು ಕೆಳ ಮಟ್ಟದ ಘಟಕಗಳಿಗೆ ಕಿಸಾನ್ ಸಭಾವು ಮನವಿ ಮಾಡುವುದನ್ನು ಮುಂದುವರಿಸಬೇಕು. ಆಗ ಮಾತ್ರವೇ ಇಡೀ ರೈತ ಸಮುದಾಯವನ್ನು ಒಂದು ಒಗ್ಗಟ್ಟಾದ ಸಂಘಟನೆಯ ಹಿಂದೆ ಅಣಿನೆರೆಸಬಹುದು.

“ಒಂದು ವಿಶಾಲ ಒಗ್ಗಟ್ಟಾದ ರೈತ ಚಳುವಳಿಯನ್ನು ಬೆಳೆಸುವ ಸಲುವಾಗಿ ಭೂಮಾಲಕ-ಸಾಮ್ರಾಜ್ಯಶಾಹಿ ಶೋಷಣೆಯ ವಿರುದ್ದ ಇಡೀ ರೈತಾಪಿ ಜನರ ಐಕ್ಯತೆಯನ್ನು ಬೆಸೆಯುವುದು ಅತ್ಯಂತ ಮುಖ್ಯವಾದ ಕೆಲಸವಾಗಬೇಕು.

“ಸಾಮ್ರಾಜ್ಯಶಾಹಿಗಳು, ಭೂಮಾಲಕರು ಮತ್ತು ಭಾರತೀಯ ಏಕಸ್ವಾಮ್ಯಗಳ ವಿರುದ್ಧ ರೈತರನ್ನು ಒಗ್ಗೂಡಿಸುವ ಸಮಸ್ಯೆಯು ಪ್ರಮುಖವಾಗಿ ಶ್ರೀಮಂತ ರೈತರನ್ನೂ ಒಳಗೊಂಡಂತೆ ಕೃಷಿ ಕೂಲಿಕಾರರು ಮತ್ತು ರೈತರನ್ನು ಒಗ್ಗೂಡಿಸುವ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ಅದರ ಎಲ್ಲಾ ಸಂಬಂಧಗಳ ಆಧಾರದಲ್ಲಿ ಅಧ್ಯಯನ ಮಾಡವಲ್ಲಿನ ನಿಷ್ಕ್ರೀಯತೆ ಅಥವಾ ಕಾದು ಕೂರುವ ಮತ್ತು ಸ್ವಯಂಪ್ರೇರಿತ ಪ್ರವೃತ್ತಿಯು ಅಥವಾ ವೈಫಲ್ಯವು, ಪಾಳೇಗಾರಿ ಶೋಷಣೆಯ ವಿರುದ್ಧ ಇಬ್ಬರ ಸಮಾನ ತಿಕ್ಕಾಟವನ್ನು ಬದಿಗಿರಿಸಿ ಕೃಷಿ ಕೂಲಿಕಾರರನ್ನು, ಅವರ ಬೇಡಿಕೆಗಳನ್ನು ಮತ್ತು ಹೋರಾಟಗಳನ್ನು ಕಡೆಗಣಿಸಲು ಅಥವಾ ರೈತರ ನಡುವಿನ ಅವರ ತಿಕ್ಕಾಟಕ್ಕೆ ಒತ್ತುಕೊಡಲು ಕಾರಣವಾಗಿದೆ. ಪ್ರಧಾನವಾಗಿ ಮೊದಲನೆಯದರ ಕಡೆಗಣಿಸುವಿಕೆಂದಾಗಿ ರೈತ ಚಳುವಳಿಯು ಇಲ್ಲಿಯ ತನಕ ಹಾನಿಗೊಳಗಾಗಿದೆ.

“ಒಂದು ಬಲಿಷ್ಠ ರೈತ ಚಳುವಳಿಯನ್ನು ಕಟ್ಟಲು, ಸಾಕ್ಷರತಾ ತರಗತಿಗಳು, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು, ಪರಿಹಾರ ಮತ್ತು ಸ್ವಸಹಾಯ ಚಳುವಳಿ, ಸಾಮಾಜಿಕ ಕುಂದು ಕೊರತೆಗಳ ವಿರುದ್ಧ ಹೋರಾಟ ಮುಂತಾವುಗಳನ್ನು ಸಂಘಟಿಸುವ ಮತ್ತು ವೈದ್ಯಕೀಯ, ಸಾರ್ವಜನಿಕ ಆರೋಗ್ಯ ಮತ್ತಿತರ ನೈತಿಕ ಉನ್ನತಿಗಾಗಿನ ಚಟುವಟಿಕೆಗಳನ್ನು ಸಂಘಟಿಸುವ ಮೂಲಕ ರೈತರ ಮತ್ತು ಕೃಷಿ ಕೂಲಿಕಾರರ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಮಟ್ಟವನ್ನು ಎತ್ತರಿಸುವಂತಹ ಎಲ್ಲಾ ಕಾರ್ಯಗಳನ್ನು ಕಿಸಾನ್ ಸಭಾ ಮತ್ತು ಕೃಷಿ ಕೂಲಿಕಾರರ ಸಂಘಟನೆಗಳು ಕೈಗೆತ್ತಿಕೊಳ್ಳಬೇಕಾದ ಅಗತ್ಯವಿದೆ.

“ಭೂಮಾಲಕರೊಂದಿಗೆ, ಸರ್ಕಾರಿ ಅಧಿಕಾರಿಗಳೊಂದಿಗೆ ಮತ್ತಿತರ ಸಾರ್ವಜಕ ಸಂಸ್ಥೆಗಳೊಂದಿಗಿನ ಸಂಬಂಧದಲ್ಲಿ ರೈತಾಪಿ ಜನಗಳು ಎದುರಿಸುವ ಹಲವಾರು ಸಮಸ್ಯೆಗಳನ್ನು ದಿನತ್ಯ ವಿಚಾರಿಸಲು ಕಿಸಾನ್ ಸಭಾ ಮತ್ತು ಕೃಷಿ ಕೂಲಿಕಾರರ ಸಂಘಟನೆಗಳ ಕಛೇರಿಗಳು ಸದಾ ಕಾರ್ಯನಿರ್ವಹಿಸಬೇಕು; ಕಾನೂನು ಸಹಾಯ ಒದಗಿಸುವುದು, ಬೇಸಾಯವನ್ನು ಉತ್ತಮಪಡಿಸಲು ಇತ್ತೀಚಿನ ವಿಧಾನಗಳನ್ನು ಅವರ ಗಮನಕ್ಕೆ ತರುವುದರ ಮೂಲಕ ಅವರ ಇಳುವರಿಯನ್ನು ಹೆಚ್ಚಿಸಲು ಸಹಾಯ ಮಾಡುವುದು, ಅವರ ಬೆಳೆ ಮತ್ತು ಜಾನುವಾರಗಳಿಗೆ ಬಾಧೆಯುಂಟುಮಾಡುವ ಕೀಟಗಳನ್ನು ನಾಶಪಡಿಸಲು ಸಹಾಯ ಮಾಡುವುದು, ಉತ್ತಮ ಬೀಜಗಳು, ಸಲಕರಣೆಗಳು, ಗೊಬ್ಬರ, ಸಮಯಕ್ಕೆ ಸರಿಯಾಗಿ ಅವರ ಜಮೀನಿಗೆ ನೀರು ಪೂರೈಕೆಗೆ ಸಹಾಯ ಮಾಡುವುದು ಮತ್ತು ರೈತರ ಮತ್ತು ಅವರ ದಿನತ್ಯದ ವೃತ್ತಿಗೆ ಸಂಬಂಧಪಟ್ಟಂತಹ ಮತ್ತು ಅವರ ಇಡೀ ಬದುಕಿನಲ್ಲಿನ ಈ ತರದ ವಿವಿಧ ಚಟುವಟಿಕೆಗಳಿಗೆ ಸಹಾಯ ಮಾಡಬೇಕು.

“ಒಂದೇ ಮಾತಿನಲ್ಲಿ ಹೇಳುವುದಾದರೆ, ಕಿಸಾನ್ ಸಭಾ ಮತ್ತು ಕೃಷಿ ಕೂಲಿಕಾರರ ಸಂಘಟನೆಗಳು ರೈತರ ಬದುಕಿನ ಅವಿಭಾಜ್ಯ ಅಂಗವಾಗಬೇಕು, ಅದರಿಂದ ನಿರಂತರ ಸಲಹೆ ಮತ್ತು ಸಹಾಯ ಅವರಿಗೆ ಸಿಗುವಂತಾಗಬೇಕು.

“ನಮ್ಮ ರೈತ ಹೋರಾಟಗಳು ಯಶಸ್ಸನ್ನು ಸಾಧಿಸಲು, ಕಾರ್ಮಿಕ ವರ್ಗದ ಕ್ರಿಯಾಶೀಲ ಬೆಂಬಲವನ್ನು ಗಳಿಸಬೇಕು. ಆದರೆ ಇಲ್ಲಿ ಪಕ್ಷ ಸೋಲುತ್ತಿದೆ. ಕಾರ್ಮಿಕ ವರ್ಗದ ನಡುವೆ ರೈತಾಪಿ ಜನರ ಬೇಡಿಕೆಗಳನ್ನು ಜನಪ್ರಿಯಗೊಳಿಸಲು ನಮಗೆ ಸಾಧ್ಯವಾಗಲಿಲ್ಲ. ರೈತರ ಬೇಡಿಕೆಗಳಿಗೆ ಬೆಂಬಲವಾಗಿ ನಡೆಯುವ ಸಭೆ, ಮತಪ್ರದರ್ಶನ ಮತ್ತು ಸಾರ್ವತ್ರಿಕ ಮುಷ್ಕರಗಳಿಗೆ ಕಾರ್ಮಿಕ ವರ್ಗವನ್ನು ಕರೆತರಲು ಸಾಧ್ಯವಾಗಿಲ್ಲ.

“ಕಾರ್ಮಿಕ ವರ್ಗದ ಬೇಡಿಕೆಗಳು ಮತ್ತು ಹೋರಾಟಗಳ ಬಗ್ಗೆ ರೈತರ ಮಧ್ಯೆ ಕೊಂಡೊಯ್ಯಲು ಮತ್ತು ಕಾರ್ಮಿಕ ವರ್ಗದ ಬೇಡಿಕೆಗಳು ಮತ್ತು ಹೋರಾಟಗಳ ಬೆಂಬಲಕ್ಕೆ ರೈತರನ್ನು ಕರೆತರಲು ಪಕ್ಷ ಶ್ರಮಿಸಬೇಕು. ಹೀಗಾದಾಗ ಮಾತ್ರವೇ ನಾವು ಕಾರ್ಮಿಕ ವರ್ಗ ಮತ್ತು ರೈತಾಪಿ ಜನಗಳ ನಡುವಿನ ಐಕ್ಯತೆಯನ್ನು ಸಾಧಿಸಬಹುದು, ಅದುವೇ ನಮ್ಮ ಅಂತಿಮ ಜಯಕ್ಕೆ ದಾರಿ.

“ರೈತ ಚಳುವಳಿಯನ್ನು ಬೆಳೆಸಲು ಕಾರ್ಮಿಕ ವರ್ಗದಲ್ಲಿನ ಪಕ್ಷದ ಕಾರ್ಯಕರ್ತರನ್ನು ಕೈಗಾರಿಕಾ ಕೇಂದ್ರಗಳಿಂದ ನೆರೆಹೊರೆಯ ರೈತರ ಪ್ರದೇಶಗಳಿಗೆ ಕಳಿಸಲು ಪಕ್ಷವು ದೃಢ ಸಂಕಲ್ಪ ಮಾಡಬೇಕು.

“ಅಮೆರಿಕ ನೇತೃತ್ವದ ಸಾಮ್ರಾಜ್ಯಶಾಹಿಗಳು ಮತ್ತವರ ಕಿರಿಯ ಪಾಲುದಾರ ಬ್ರಿಟಿಷ್ ಸಾಮ್ರಾಜ್ಯಶಾಹಿಗಳು ಮೂರನೇ ವಿಶ್ವಯುದ್ಧ ಆರಂಭಿಸಲು ಮಾಡುತ್ತಿರುವ ಆ ಯುದ್ಧಕೋರರ ಕಾರ್ಯಾಚರಣೆಯ ವಿರುದ್ಧ ರೈತ ಸಮುದಾಯವನ್ನು ಪಕ್ಷ ಮತ್ತು ಕಿಸಾನ್ ಸಭಾ ಎಚ್ಚರಿಸಬೇಕು.

“ಕಮ್ಯುನಿಸ್ಟ್ ಪಕ್ಷದ ಕಾರ್ಯಕ್ರಮ ಮತ್ತು ನೀತಿಗಳು ಹೇಗೆ ಜನರ ಮುಖ್ಯವಾಗಿ ರೈತಾಪಿ ಜನರ ಸೇವೆಗಾಗಿ ಅಚಲವಾದ ನಿಲುವನ್ನು ಹೊಂದಿದೆ ಎಂಬುದನ್ನು ಜನಪ್ರಿಯಗೊಳಿಸುವುದು ಕೂಡ ಅಗತ್ಯವಿದೆ. ರೈತ ಹಾಗೂ ಕೃಷಿ ಕೂಲಿಕಾರರ ಸಮರಶೀಲರ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ವ್ಯವಸ್ಥಿತ ಪ್ರಚಾರ ಮತ್ತು ಶಿಕ್ಷಣ ಒಂದು ಕಡೆಯಾದರೆ, ಮತ್ತೊಂದೆಡೆ ಮಧ್ಯಮ ವರ್ಗ ಮತ್ತು ಪ್ರಜ್ಞಾವಂತ ವಿಭಾಗದ ಪಕ್ಷದ ಕಾರ್ಯಕರ್ತರನ್ನು ರೈತ ಸಮುದಾಯದ ನಡುವೆ ಕಳಿಸುವ ಕಾರ್ಯವೂ ವ್ಯವಸ್ಥಿತವಾಗಿ ನಡೆಯಬೇಕು. ಹೀಗೆ ಮಾತ್ರವೇ ಪಕ್ಷದ ಸೈದ್ಧಾಂತಿಕ, ರಾಜಕೀಯ ಹಾಗೂ ಸಂಘಟನಾತ್ಮಕ ಸಂಬಂಧಗಳನ್ನು ಲಕ್ಷಾಂತರ ರೈತರು ಮತ್ತು ಕೃಷಿ ಕೂಲಿಕಾರರೊಂದಿಗೆ ಬಲಪಡಿಸಬಹುದು, ಅದು ನಮ್ಮ ತಕ್ಷಣದ ಮತ್ತು ತುರ್ತಿನ ಕೆಲಸವಾಗಿದೆ.

ರೈತ ಮಹಿಳೆಯರನ್ನು ಕಿಸಾನ್ ಸಭಾಕ್ಕೆ ಸೇರಿಸಲು ಮತ್ತು ಅದರ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಲು ಪಕ್ಷ ಮತ್ತು ಕಿಸಾನ್ ಸಭಾವು ವಿಶೇಷ ಪ್ರಯತ್ನ ಮಾಡಬೇಕು. ಮಹಿಳೆಯರ ಬೇಡಿಕೆಗಳನ್ನು ಮುಖ್ಯವಾಗಿ ರೈತ ಮಹಿಳೆಯರನ್ನು ಬಾಧಿಸುವ ಬೇಡಿಕೆಗಳನ್ನು ರೂಪಿಸಲು ವಿಶೇಷ ಪ್ರಯತ್ನ ನಡೆಸಬೇಕು ಮತ್ತು ಅವುಗಳ ಪರವಾಗಿ ಹೋರಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ರೈತ ಮಹಿಳಾ ಕಾರ್ಯಕರ್ತರನ್ನು ತರಬೇತಿಗೊಳಿಸಲು ವಿಶೇಷ ಪ್ರಯತ್ನಗಳಾಗಬೇಕು.

“ಹಲವಾರು ಪ್ರಶ್ನೆಗಳ ಮೇಲೆ, ಚಳುವಳಿಯಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ತಾತ್ವಿಕ ಸ್ಪಷ್ಟತೆಯ ಕೊರತೆ ಮತ್ತು ಗೊಂದಲಗಳು ಅದಕ್ಕೆ ಮುಖ್ಯ ಕಾರಣ. ರೈತರ ವರ್ಗೀಕರಣದ, ಭಾರತದ ಕಾರ್ಷಿಕ ಆರ್ಥಿಕತೆಯ ವಸಾಹತುಶಾಹಿ ಸಂರಚನೆ, ಕೃಷಿ ಬೆಳವಣಿಗೆಯಲ್ಲಿನ ಇತ್ತೀಚಿನ ಪ್ರವೃತ್ತಿಗಳು, ಕಾಂಗ್ರೆಸ್ಸಿನ ಕಾರ್ಷಿಕ ಶಾಸನಗಳ ಗುರಿ ಮುಂತಾದವುಗಳ ಪರಾಮರ್ಶೆಯನ್ನು ಪಕ್ಷದ ಕೇಂದ್ರ ಸಮಿತಿಯು ಎಐಕೆಎಸ್‌ನ ಪ್ರಧಾನ ಸಂಗಾತಿಗಳೊಂದಿಗೆ ಸಮಾಲೋಚನೆ ನಡೆಸಿ ಮಾಡಬೇಕು.

“ಕಿಸಾನ್ ಸಭಾ ಅಥವಾ ಗ್ರಾಮ ಘಟಕಗಳು ಜೀವಂತವಾಗಿರಬೇಕು ಮತ್ತು ನೈಜ ಕಾರ್ಯನಿರ್ವಹಣೆಯ ಕೇಂದ್ರವಾಗಬೇಕು, ದಿನನಿತ್ಯದ ಕೆಲಸ ಮತ್ತು ಹೋರಾಟಗಳನ್ನು ಅದು ನಡೆಸಬೇಕು. ಇಲ್ಲಿಯವರೆಗೆ ಅವು ಹೆಸರಿಗೆ ಮಾತ್ರ ದಾಖಲೆಗಳಲ್ಲಿ ಇವೆಯಷ್ಟೆ. ಅವುಗಳನ್ನು ಕಟ್ಟಿ ಕ್ರಿಯಾಶೀಲಗೊಳಿಸುವುದು ಬಹು ಮುಖ್ಯ ಕೆಲಸವಾಗಬೇಕು.”

ಕನ್ನಡಕ್ಕೆ: ಟಿ. ಸುರೇಂದ್ರ ರಾವ್

Leave a Reply

Your email address will not be published. Required fields are marked *