ಕಾರ್ಮಿಕ ವರ್ಗದ ಚಳವಳಿಯ ಸಂಘಟನೆಯಲ್ಲಿ ಕಮ್ಯುನಿಸ್ಟರು

ಕೆ. ಹೇಮಲತಾ

Communist Part 100 copyನಮ್ಮ ದೇಶದಲ್ಲಿನ ಕಮ್ಯುನಿಸ್ಟ್ ಚಳವಳಿ ಮತ್ತು ಸಂಘಟಿತ ಟ್ರೇಡ್ ಯೂನಿಯನ್ ಚಳವಳಿ ಎರಡೂ ಅವುಗಳ ರಚನೆಯ ಶತಮಾನೋತ್ಸವವನ್ನು ಆಚರಿಸುತ್ತಿರುವುದು ಕಾಕತಾಳೀಯವಲ್ಲ. ಈ ಎರಡೂ ಘಟನೆಗಳು 1917ರಲ್ಲಿ ಕಾರ್ಮಿಕ ವರ್ಗದ ನಾಯಕತ್ವದಲ್ಲಿ ಮಹಾನ್ ಅಕ್ಟೋಬರ್ ಸಮಾಜವಾದಿ ಕ್ರಾಂತಿಯ ನಂತರ ರಷ್ಯಾದಲ್ಲಿ ಮೊದಲ ಕಾರ್ಮಿಕರ ಪ್ರಭುತ್ವ ಸ್ಥಾಪನೆಯಿಂದ ಪ್ರೇರಿತವಾಗಿವೆ. ಮಾರ್ಕ್ಸ್ ವಾದ-ಲೆನಿನ್‌ವಾದ ಮತ್ತು ಅದರ ಸಮಾಜದ ವಿಮೋಚನೆಯ ಸಿದ್ಧಾಂತದ ಮಾರ್ಗದರ್ಶನದಲ್ಲಿ ಕಮ್ಯುನಿಸ್ಟ್ ಚಳುವಳಿಯ ಪ್ರವರ್ತಕರಾದ ಮುಜಾಫರ್ ಅಹ್ಮದ್, ಸಿಂಗಾರವೇಲು ಚೆಟ್ಟಿಯಾರ್, ಎಸ್.ಎ.ಡಾಂಗೆ, ಗುಲಾಮ್ ಹುಸೇನ್, ಮುಂತಾದವರು ಆರಂಭಿಕ ದಿನಗಳಿಂದ ಕಾರ್ಮಿಕ ವರ್ಗವನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಿದರು. ಕಲ್ಕತ್ತಾ, ಮದ್ರಾಸ್, ಬಾಂಬೆ, ಲಾಹೋರ್, ಕಾನ್ಪುರದಂತಹ ಆ ಕಾಲದ (1920 ರ ದಶಕದ) ಹೊಸ ಕೈಗಾರಿಕಾ ಕೇಂದ್ರಗಳನ್ನು ಸಂಘಟಿತ ಕಾರ್ಮಿಕ ವರ್ಗ ಮತ್ತು ಆಗಷ್ಟೇ ಹುಟ್ಟಿಬರುತ್ತಿದ್ದ ವಿವಿಧ ಕಮ್ಯುನಿಸ್ಟ್ ಗುಂಪುಗಳಿಗೆ ಬಲವಾದ ಕೇಂದ್ರಗಳೆಂದು ಸಹ ಪರಿಗಣಿಸಲಾಗಿದೆ ಎಂಬ ಅಂಶದಿಂದ ಈ ಎರಡೂ ಚಳುವಳಿಗಳ ಸಮಕಾಲೀನ ಬೆಳವಣಿಗೆಯನ್ನು ತಿಳಿಯಬಹುದು.

ಕಮ್ಯುನಿಸ್ಟ್ ಚಳವಳಿಯ ಸಂಸ್ಥಾಪಕರ ಮುತುವರ್ಜಿಯಿಂದಲೇ ಮೇ ದಿನವನ್ನು ನಮ್ಮ ದೇಶದಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. ಸಿಂಗಾರವೆಲು ಚೆಟ್ಟಿಯಾರ್ 1923 ರಲ್ಲಿ ಮದ್ರಾಸ್‌ನಲ್ಲಿ ಕೆಂಬಾವುಟವನ್ನು ಮೇ ಮೊದಲ ದಿನದಂದು ಹಾರಿಸಿದರು ಮತ್ತು ಲೇಬರ್ ಕಿಸಾನ್ ಪಕ್ಷವನ್ನೂ ಪ್ರಾರಂಭಿಸಿದರು. ಗಾಂಧೀಜಿಗೆ ಬರೆದ ಪತ್ರದಲ್ಲಿ ಚೆಟ್ಟಿಯಾರ್ ತಮ್ಮ ಕಮ್ಯುನಿಸ್ಟ್ ನಂಬಿಕೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಿದರು, ಭೂಮಿ ಮತ್ತು ಪ್ರಮುಖ ಕೈಗಾರಿಕೆಗಳನ್ನು ಸಾರ್ವಜನಿಕ ಒಡೆತನದಲ್ಲಿ ನಡೆಸಬೇಕು ಮತ್ತು ದೇಶದ ಎಲ್ಲ ದುಡಿಯುವ ಜನರ ಸಾಮಾನ್ಯ ಲಾಭಕ್ಕಾಗಿ ಬಳಸಬೇಕು ಎಂದು ಹೇಳಿದ್ದರು. ಇದು ಸ್ವಾತಂತ್ರ‍್ಯದ ನಿಜವಾದ ಅರ್ಥವಾಗಿರಬೇಕು ಎಂದೂ ಅವರು ಹೇಳಿದ್ದರು. ಆರ್ಥಿಕ ಸ್ವಾಸ್ಥ್ಯ ಮತ್ತು ಕಾರ್ಮಿಕ ವರ್ಗದ ಹಕ್ಕುಗಳ ರಕ್ಷಣೆಯನ್ನು ನಮ್ಮ ಸ್ವಾತಂತ್ರ‍್ಯ ಹೋರಾಟದ ಪ್ರಮುಖ ಅಂಶವಾಗಿ ಜೋಡಿಸುವ ಕಲ್ಪನೆಯು ಕಮ್ಯುನಿಸ್ಟ್ ಚಳವಳಿಯ ಕೊಡುಗೆಯಾಗಿದೆ. ಕಮ್ಯುನಿಸ್ಟರು ವಿವಿಧ ಪತ್ರಿಕೆಗಳು ಮತ್ತು ನಿಯತಕಾಲಿಕಗಳನ್ನು ಪ್ರಾರಂಭಿಸಿದರು, ಇವು ಕಾರ್ಮಿಕ ವರ್ಗ ಎದುರಿಸುತಿದ್ದ ಸಮಸ್ಯೆಗಳ ವರದಿಗಾರಿಕೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದವು ಮತ್ತು ಆರ್ಥಿಕ ಮತ್ತು ರಾಜಕೀಯ ವಿಮೋಚನೆಯ ಕಲ್ಪನೆಯನ್ನು ಪ್ರಚಾರ ಮಾಡಿದವು.

ಕಮ್ಯುನಿಸ್ಟರು ಕಾರ್ಮಿಕರ ಐಕ್ಯತೆ ಮತ್ತು ವರ್ಗ ಹೋರಾಟವನ್ನು ಪ್ರತಿಪಾದಿಸುತ್ತಿದ್ದರೆ, ಗಾಂಧೀಜಿಯವರು, ಕಾರ್ಮಿಕರ ಕುಂದುಕೊರತೆಗಳ ಪರಿಹಾರಕ್ಕಾಗಿ ಅವರ ಮತ್ತು ಕೈಗಾರಿಕೋದ್ಯಮಿಗಳ (ಅವರ ಪ್ರಕಾರ ಟ್ರಸ್ಟಿಗಳು) ನಡುವಿನ ಮಧ್ಯಸ್ಥಿಕೆಯ ಬಗ್ಗೆ ಮಾತನಾಡುತ್ತಿದ್ದರು. ಕಾರ್ಮಿಕರನ್ನು ಮತ್ತು ಮಾಲೀಕರನ್ನು ‘ಪಾಲುದಾರರು’ಎಂದು ಪರಿಗಣಿಸಿದ್ದರಿಂದ ಬೂರ್ಜ್ವಾ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಗಾಂಧೀಜಿ ವರ್ಗ-ಹೋರಾಟದಲ್ಲಿ ನಂಬಿಕೆಯಿಡಲಿಲ್ಲ. ಕಾರ್ಮಿಕ ಸಂಘಗಳು ಮುಷ್ಕರಗಳನ್ನು ಸಂಘಟಿಸಬಾರದು ಅಥವಾ ಹೋರಾಟಗಳನ್ನು ನಡೆಸಬಾರದು, ಬದಲಾಗಿ ತಮ್ಮನ್ನು ‘ರಚನಾತ್ಮಕ ಕೆಲಸ’ದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಬಯಸಿದರು. ಈ ಕಾರಣಕ್ಕಾಗಿಯೇ ಅವರು ಕಾರ್ಮಿಕ ಸಂಘಗಳ ಅಖಿಲ ಭಾರತ ಸಂಘಟನೆಯನ್ನು ರಚಿಸುವುದನ್ನು ವಿರೋಧಿಸಿದರು. ಬೂರ್ಜ್ವಾ ವರ್ಗದಿಂದ ಬಂದ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಹೆಚ್ಚಿನ ನಾಯಕರು ಸ್ವಾಭಾವಿಕವಾಗಿ ಈ ಅಭಿಪ್ರಾಯಗಳನ್ನು ಹಂಚಿಕೊಂಡರು ಮತ್ತು ಅದರಿಂದಾಗಿ ವಿವಿಧ ಕಾರ್ಮಿಕ ಸಂಘಗಳಲ್ಲಿ ಭಾಗಿಯಾಗಿದ್ದರೂ ಕಾರ್ಮಿಕ ವರ್ಗವನ್ನು ಕ್ರಾಂತಿಕಾರಿಗೊಳಿಸುವಲ್ಲಿ ತೊಡಗಿಸಿಕೊಳ್ಳಲಿಲ್ಲ.

ಈ ಸುಧಾರಣಾವಾದಿ ಪದ್ಧತಿಗಳಿಗೆ ವ್ಯತಿರಿಕ್ತವಾಗಿ, ಕಮ್ಯುನಿಸ್ಟ್ ಪಕ್ಷವು ತನ್ನ ಅಭಿಪ್ರಾಯಗಳನ್ನು ವಿವಿಧ ಕಾಂಗ್ರೆಸ್ ಅಧಿವೇಶನಗಳ ಪ್ರತಿ£ಧಿಗಳನ್ನು ಉದ್ದೇಶಿಸಿದ ತನ್ನ ಪ್ರಣಾಳಿಕೆಗಳ ಮೂಲಕ ದೃಡವಾಗಿ ಮಂಡಿಸಿತು. ಉದಾಹರಣೆಗೆ, ಕಾಂಗ್ರೆಸ್ಸಿನ 1921 ರ ಅಹಮದಾಬಾದ್ ಅಧಿವೇಶನಕ್ಕೆ ಮಾಡಿದ ಪ್ರಣಾಳಿಕೆ “ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಅಥವಾ ಗದ್ದೆಗಳಲ್ಲಿ ದುಡಿಯುತ್ತಿರುವ ಮನುಷ್ಯನಿಗೆ ರಾಷ್ಟ್ರೀಯ ಸ್ವಾತಂತ್ರ‍್ಯವು ತನ್ನ ಕಷ್ಟಗಳನ್ನು ಕೊನೆಗೊಳಿಸುತ್ತದೆ ಎಂದು ಮನವರಿಕೆ ಮಾಡುವುದು ಹೇಗೆ?… .ಅವರು ಹೋರಾಟಕ್ಕೆ ಮುಂದಾಗಬೇಕಾದರೆ, ಸ್ವಾತಂತ್ರ‍್ಯವು ಅವರ ಭೌತಿಕ ಪರಿಸ್ಥಿತಿಗಳ ಸುಧಾರಣೆಗಾಗಿರಬೇಕು. ನಗರಗಳಲ್ಲಿನ ಕಾರ್ಮಿಕರು ಹೆಚ್ಚಿನ ವೇತನ, ಕಡಿಮೆ ಕೆಲಸದ ಅವಧಿ, ಉತ್ತಮ ಜೀವನ ಪರಿಸ್ಥಿತಿಗಳನ್ನು ಬಯಸುತ್ತಾರೆ. ಅವರು ಸಾಮಾಜಿಕ ಮತ್ತು ಆರ್ಥಿಕ ಶೋಷಣೆಯ ವಿರುದ್ಧ ದಂಗೆ ಏಳುತ್ತಾರೆ; ಶೋಷಕನು ಯಾವ ರಾಷ್ಟ್ರೀಯತೆಗೆ ಸೇರಿದವನು ಎಂಬುದು ಅವರಿಗೆ ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ.. “ ಎಂದು ಹೇಳಿತು:

ಕಾಂಗ್ರೆಸ್ಸಿನ ಗಯಾ ಅಧಿವೇಶನಕ್ಕೆ (1922) ಉದ್ದೇಶಿಸಿದ್ದ ಪ್ರಣಾಳಿಕೆ ‘ರಾಷ್ಟ್ರೀಯ ವಿಮೋಚನೆ ಮತ್ತು ಪುನರ್ನಿರ್ಮಾಣದ ಕಾರ್ಯಕ್ರಮ’ದಲ್ಲಿ, ಸಂಪೂರ್ಣ ಸ್ವಾತಂತ್ರ‍್ಯಕ್ಕಾಗಿ ತನ್ನ ಬೇಡಿಕೆಯನ್ನು ಕಮ್ಯುನಿಸ್ಟ್ ಪಕ್ಷವು ವಿವರವಾಗಿ ಮಂಡಿಸಿತು: ಸಂಘಟಿಸುವ ಮತ್ತು ಮುಷ್ಕರ ಮಾಡುವ ಹಕ್ಕನ್ನು ಒಳಗೊಂಡಂತೆ ಕಾರ್ಮಿಕ ವರ್ಗಕ್ಕೆ ವಿವಿಧ ಹಕ್ಕುಗಳೊಂದಿಗೆ ಪ್ರಭುತ್ವದ ನೆರವಿನಿಂದ ಆಧುನಿಕ ಕೈಗಾರಿಕೆಗಳನ್ನು ಸ್ಥಾಪಿಸುವದನ್ನು ಅದು ತಿಪಾದಿಸಿತು. ಪಕ್ಷವು ತನ್ನ ಕಾರ್ಯಯೋಜನೆಯಲ್ಲಿ, ಕಾರ್ಮಿಕ ಸಂಘಗಳಿಗೆ ಮಾನ್ಯತೆ, ಕಾರ್ಮಿಕರ ಮುಷ್ಕರ ಹಕ್ಕು, ಎಂಟು ಗಂಟೆಗಳ ಕೆಲಸದ ದಿನ, ಕನಿಷ್ಟ ವೇತನ ಮತ್ತು ಉತ್ತಮ ವಸತಿಗಾಗಿ ಹೋರಾಟಗಳಿಗೆ ಕರೆ ನೀಡಿತು. ಕಾನ್ಪುರ್ ಬೊಲ್ಶೆವಿಕ್ ಪಿತೂರಿ ಪ್ರಕರಣದಲ್ಲಿ (1924) ಕಮ್ಯುನಿಸ್ಟ್ ಪಕ್ಷದ ನಾಯಕರ ವಿರುದ್ಧದ ಪ್ರಮುಖ ಸಾಕ್ಷ್ಯವೆಂದು ಬ್ರಿಟಿಶ್ ಪೊಲೀಸರು ಗಯಾ ಕಾಂಗ್ರೆಸ್ ಅಧಿವೇಶನಕ್ಕೆ ಮಂಡಿಸಿದ ಈ ಪ್ರಣಾಳಿಕೆಯನ್ನು ಉಲ್ಲೇಖಿಸಿದ್ದರು.

ಪಕ್ಷದ ಕಾರ್ಮಿಕ ವರ್ಗದ ಸ್ವರೂಪವನ್ನು ಒತ್ತಿಹೇಳುತ್ತಾ, ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಲು ಬಯಸುವವರು, “ಪಕ್ಷದ ತಕ್ಷಣದ ಉದ್ದೇಶವನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ಸಾಮೂಹಿಕ ಒಡೆತನದ ಭೂಮಿ, ಗಣಿಗಳು, ಕಾರ್ಖಾನೆಗಳು, ವಸತಿಗಳು, ಟೆಲಿಗ್ರಾಫ್ ಮತ್ತು ದೂರವಾಣಿಗಳು, ರೈಲ್ವೆಗಳು ಮತ್ತಿತರ ಅಗತ್ಯವಿರುವ ಸಾರ್ವಜ£ಕ ಉಪಯುಕ್ತತೆಗಳ, ಸಾರ್ವಜ£ಕ ಸೇವೆಗಳ ರಾಷ್ಟ್ರೀಕರಣದ ಮೂಲಕ ಕಾರ್ಮಿಕರು ಮತ್ತು ರೈತರಿಗೆ ಜೀವನಯೋಗ್ಯ ವೇತನವನ್ನು ಖಾತರಿ ಪಡಿಸಬಹುದು.” ಎಂದು ಹೇಳುವ ಒಂದು ಘೋಷಣೆಗೆ (1925) ಸಹಿ ಹಾಕಬೇಕೆಂದು ಪ್ರತಿಪಾದಿಸಲಾಯಿತು.

ದೇಶದ ಆರಂಭಿಕ ಕಮ್ಯುನಿಸ್ಟರೆಲ್ಲರೂ ಕಾರ್ಮಿಕ ಸಂಘಟನೆಯಲ್ಲಿ ತೊಡಗುವುದರೊಂದಿಗೆ ತಮ್ಮ ರಾಜಕೀಯ ಜೀವನ ಆರಂಭಿಸಿದವರು. ಆ ಕಾಲದ (1920 ರ ದಶಕದ) ಹೊಸ ಕೈಗಾರಿಕಾ ಕೇಂದ್ರಗಳನ್ನು ಸಂಘಟಿತ ಕಾರ್ಮಿಕ ವರ್ಗ ಮತ್ತು ಆಗಷ್ಟೇ ಹುಟ್ಟಿಬರುತ್ತಿದ್ದ ವಿವಿಧ ಕಮ್ಯುನಿಸ್ಟ್ ಗುಂಪುಗಳಿಗೆ ಬಲವಾದ ಕೇಂದ್ರಗಳೆಂದು ಸಹ ಪರಿಗಣಿಸಲಾಗಿದೆ. ಪ್ರತಿವರ್ಷದ ಎಐಸಿಸಿ ಅಧಿವೇಶನದ ಪ್ರತಿನಿಧಿಗಳನ್ನು ಉದ್ದೇಶಿಸಿ ಕಮ್ಯುನಿಸ್ಟ್ ಪಕ್ಷ ಪ್ರಕಟಿಸಿರುವ ಪ್ರಣಾಳಿಕೆಗಳಲ್ಲಿ ಕಾರ್ಮಿಕರು, ರೈತರು ಮತ್ತು ಇತರ ದುಡಿಯುವ ಜನವಿಭಾಗಗಳ ಆಕಾಂಕ್ಷೆಗಳಿಗೆ ಹೆಚ್ಚಿನ ಒತ್ತು ಕೊಡಲಾಗುತ್ತಿತ್ತು. ಬ್ರಿಟಿಶರು ಕಮ್ಯುನಿಸ್ಟರ ಮೇಲೆ ವಿವಿಧ ಪಿತೂರಿ ಮೊಕದ್ದಮೆಗಳನ್ನು ಇವುಗಳ ಆಧಾರದಲ್ಲಿಯೇ ಹಾಕಿದ್ದರು ಎಂಬುದು ಗಮನಾರ್ಹ.

ಕಾರ್ಮಿಕರನ್ನು ಸಂಘಟಿಸುವಲ್ಲಿ ಕಮ್ಯುನಿಸ್ಟರು ವಹಿಸಿದ ಸಕ್ರಿಯ ಪಾತ್ರದಿಂದಾಗಿ, ಎಸ್.ವಿ. ಘಾಟೆ ಎ.ಐ.ಟಿ.ಯು.ಸಿ. ಪದಾಧಿಕಾರಿಗಳಾಗಿ ಆಯ್ಕೆಯಾದ ಮೊದಲ ಕಮ್ಯುನಿಸ್ಟ್ ಎನಿಸಿಕೊಂಡರು. ಅಂದಿನಿಂದ, ಎ.ಐ.ಟಿ.ಯು.ಸಿ.ಯ ಯಾವುದೇ ಸಮ್ಮೇಳನವು ಕಮ್ಯುನಿಸ್ಟರನ್ನು ತನ್ನ ಪ್ರಮುಖ ಪದಾಧಿಕಾರಿಗಳಲ್ಲಿ ಆಯ್ಕೆ ಮಾಡದಿರಲಿಲ್ಲ. ಮುಜಾಫರ್ ಅಹ್ಮದ್ 1927 ರಲ್ಲಿ ಎಐಟಿಯುಸಿಯ ಉಪಾಧ್ಯಕ್ಷರಾಗಿ ಆಯ್ಕೆಯಾದರು ಮತ್ತು 1943 ರಲ್ಲಿ ಎಸ್‌ಎ ಡಾಂಗೆ ಅದರ ಅಧ್ಯಕ್ಷರಾಗಿ ಆಯ್ಕೆಯಾದರು, ಇದು ಕಾರ್ಮಿಕ ವರ್ಗದ ನಡುವೆ ಕಮ್ಯುನಿಸ್ಟರು ಮಾಡಿದ ಕಾರ್ಯದ ಪ್ರತಿಬಿಂಬವಾಗಿದೆ. ಬ್ರಿಟಿಶ್ ಸರ್ಕಾರ ಕೂಡ ಕಾರ್ಮಿಕ ವರ್ಗವನ್ನು ಸಂಘಟಿಸುವಲ್ಲಿ ಕಮ್ಯುನಿಸ್ಟರು ವಹಿಸಿದ ಪಾತ್ರವನ್ನು ‘ಗುರುತಿಸಿತು’. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು, ಮೀರತ್ ಪಿತೂರಿ ಪ್ರಕರಣದಲ್ಲಿ (1929) ನೀಡಿದ ತೀರ್ಪಿನಲ್ಲಿ, ಆರೋಪಿಗಳ ‘ಮುಖ್ಯ ಸಾಧನೆಗಳು’ ‘ಕಾರ್ಮಿಕರು ಮತ್ತು ರೈತರ ಪಕ್ಷಗಳ ಸ್ಥಾಪನೆ’ ಮತ್ತು ಬಾಂಬೆಯಲ್ಲಿ 1928 ರ ಮುಷ್ಕರದಲ್ಲಿ ಅವರು ನಿರ್ವಹಿಸಿದ ನಿಯಂತ್ರಣದ ವ್ಯಾಪ್ತಿ ಮತ್ತು ಮುಷ್ಕರ ಮುಗಿದ ನಂತರ ಗಿರಣಿ ಕಾಮಗಾರ್ ಯೂನಿಯನಿನಲ್ಲಿ ಸಂಪೂರ್ಣ ಕ್ರಾಂತಿಕಾರಿ ನಿಲುವನ್ನು ಮುಂದಿಡುವಲ್ಲಿ ಅವರು ಸಾಧಿಸಿದ್ದ ಯಶಸ್ ನಿಂದಾಗಿ ವ್ಯಕ್ತವಾದ ಮುಂಬಯಿಯ ಜವಳಿ ಉದ್ಯಮದ ಕಾರ್ಮಿಕರ ಮೇಲೆ ಅವರ ಹಿಡಿತ ‘ ಎಂದು ಹೇಳಿತ್ತು.

ಕಾರ್ಮಿಕ ವರ್ಗದ ನಡುವೆ ಕಮ್ಯುನಿಸ್ಟರ ಸಕ್ರಿಯ ಮಧ್ಯಪ್ರವೇಶ ಮತ್ತು ಕ್ರಾಂತಿಕಾರಿ ವಿಚಾರಗಳ ಪ್ರಚಾರ, ಕಾರ್ಮಿಕ ಸಂಘಗಳ ಮೇಲಿನ ಸುಧಾರಣಾವಾದಿಗಳ ಹಿಡಿತವನ್ನು ದುರ್ಬಲಗೊಳಿಸಿತು. ಒಂದು ಉದ್ಯಮದೊಳಗೆ ಒಂದೇ ಸಂಘವನ್ನು ಹೊಂದುವ ಕಮ್ಯುನಿಸ್ಟರ ನಂಬಿಕೆಯ ಹೊರತಾಗಿಯೂ, ಸುಧಾರಣಾವಾದ ಮತ್ತು ಕ್ರಾಂತಿಕಾರಿ ನೀತಿಯ ನಡುವಿನ ಹೋರಾಟವು ಟ್ರೇಡ್ ಯೂನಿಯನ್ ಚಳವಳಿಯಲ್ಲಿ ವಿವಿಧ ಒಡಕುಗಳಿಗೆ ಕಾರಣವಾಯಿತು. ಸುಧಾರಣಾವಾದಿ ನಾಯಕತ್ವ, ವರ್ಗ ಹೋರಾಟಗಳನ್ನು ತೀಕ್ಷ್ಣಗೊಳಿಸುವ ಮತ್ತು ನಮ್ಮ ಸಮಾಜದ ಕ್ರಾಂತಿಕಾರಿ ಪರಿವರ್ತನೆಯನ್ನು ತರುವ ಕೆಲಸ ಮಾಡುವ ಬದಲು ವರ್ಗ ಸಹಯೋಗಿ ನಿಲುವುಗಳನ್ನು ಪ್ರತಿಪಾದಿಸಿತು. ಬೂರ್ಜ್ವಾವರ್ಗದ ನಾಯಕತ್ವವನ್ನು ಒಪ್ಪಿಕೊಂಡ ಅವರು ಕಾರ್ಮಿಕ ವರ್ಗದ ಚಳವಳಿಯನ್ನು ಆಳುವ ವರ್ಗಗಳ ರಾಜಕೀಯ ಮತ್ತು ನೀತಿಗಳಿಗೆ ತಕ್ಕಂತೆ ಹೊಂದಾಣಿಕೆ ಮಾಡಲು ಪ್ರಯತ್ನಿಸಿದರು ಮತ್ತು ಅದರಿಂದಾಗಿ ಕಾರ್ಮಿಕ ವರ್ಗದ ಐಕ್ಯತೆಯನ್ನು ಬಲಪಡಿಸಲು ಆಸಕ್ತಿ ಹೊಂದಿರಲಿಲ್ಲ.

ಬಿ.ಟಿ. ರಣದಿವೆ, ಕಾರ್ಮಿಕ ವರ್ಗದ ಚಳವಳಿಯಲ್ಲಿ ಇಂತಹ ಸುಧಾರಣಾವಾದಿ ಪ್ರವೃತ್ತಿಗಳ ವಿರುದ್ಧ ಹೋರಾಡುವ ಮತ್ತು ಕಾರ್ಮಿಕ ವರ್ಗದ ಗರಿಷ್ಟ್ ಐಕ್ಯತೆಗಾಗಿ ಶ್ರಮಿಸುವ ಅಗತ್ಯವನ್ನು ವಿವರಿಸುತ್ತಾ “ಕಾರ್ಮಿಕ ವರ್ಗದ ಐಕ್ಯತೆ, ಕಾರ್ಮಿಕ ವರ್ಗದ ಹೋರಾಟ ಮತ್ತು ದೈನಂದಿನ ಹೋರಾಟದಲ್ಲಿ ಸುಧಾರಣಾವಾದಿ ವಿಧ್ವಂಸಕತೆಯ ವಿರುದ್ಧ ಹೋರಾಟಗಳು ಜೊತೆಜೊತೆಯಲ್ಲಿ ಸಾಗಬೇಕು…. ಕಾರ್ಮಿಕ ಸಂಘಗಳಲ್ಲಿನ ಸುಧಾರಣಾವಾದಿ ಅಭ್ಯಾಸದ ವಿರುದ್ಧದ ಹೋರಾಟವನ್ನು ಕಾರ್ಮಿಕ ವರ್ಗದ ಚಟುವಟಿಕೆಯಲ್ಲಿ ಏಕತೆಗಾಗಿ ಬೆಳೆಯುತ್ತಿರುವ ಹೋರಾಟದೊಂದಿಗೆ ಸಂಯೋಜಿಸಬೇಕಾಗಿದೆ, ಎರಡನ್ನೂ ಬೇರ್ಪಡಿಸಲು ಸಾಧ್ಯವಿಲ್ಲ. ಇವು ಬೇರ್ಪಟ್ಟರೆ, ನೀವು ಖಾಲಿಯಾದಂತೆ. “ಎಂದು ಹೇಳಿದರು.

ಕಾರ್ಮಿಕ ವರ್ಗದ ಹೋರಾಟಗಳಲ್ಲಿ ಕಮ್ಯುನಿಸ್ಟರ ಭಾಗವಹಿಸುವಿಕೆಯು ಕಾರ್ಮಿಕ ಸಂಘಗಳ ದೃಷ್ಟಿಕೋನವನ್ನು ವಿಸ್ತರಿಸಿತು ಮತ್ತು ಅವರನ್ನು ಸಾಮಾಜಿಕ ಸಮಸ್ಯೆಗಳತ್ತ ಸಹ ಗಮನಹರಿಸುವಂತೆ ಮಾಡಿತು. ಕಮ್ಯುನಿಸ್ಟರ ಪ್ರಯತ್ನದಿಂದಾಗಿ ದಲಿತ ಮತ್ತು ದಲಿತೇತರ ಕಾರ್ಮಿಕರು, ಮುಸ್ಲಿಮರು ಮತ್ತು ಹಿಂದೂಗಳು ತಮ್ಮ ಜಾತಿ ಮತ್ತು ಧಾರ್ಮಿಕ ಅಡೆತಡೆಗಳನ್ನು ಮರೆತು ತಮ್ಮ ಹಕ್ಕುಗಳಿಗಾಗಿ ಒಗ್ಗಟ್ಟಿನಿಂದ ಹೋರಾಡಿದರು. ಇಂತಹ ಹೋರಾಟಗಳ ಮೂಲಕವೇ ಅನೇಕ ದಲಿತರು ಸ್ಫೂರ್ತಿ ಪಡೆದು ಕಮ್ಯುನಿಸ್ಟ್ ಚಳವಳಿಗೆ ಸೇರಿದರು.

ಕಮ್ಯುನಿಸ್ಟರು ಮಹಿಳಾ ಕಾರ್ಮಿಕರ ಹಕ್ಕುಗಳನ್ನು ಪ್ರತಿಪಾದಿಸಿದರು ಮತ್ತು ಅವರ ಸಮಾನತೆಯನ್ನು ಸಮರ್ಥಿಸಿದರು. ಮೀರತ್ ಪಿತೂರಿ ಪ್ರಕರಣದಲ್ಲಿ ಆರೋಪಿಗಳಾದ ಕಮ್ಯುನಿಸ್ಟರ ಸಾಮೂಹಿಕ ಹೇಳಿಕೆಯಲ್ಲಿ, ಅವರು ಸ್ಪಷ್ಟವಾಗಿ “ಮಹಿಳೆಯರನ್ನು ಅಧೀನಗೊಳಿಸುವುದು ಮತ್ತು ಶೋಷಣೆ ಮಾಡುವುದು ಅಧೀನತೆ ಮತ್ತು ಶೋಷಣೆಯ ಒಂದು ಅಂಶವಾಗಿದೆ ಮಾತ್ರ…. ಇದನ್ನು ವರ್ಗಾಧಾರದಲ್ಲಿ ಪರಿಹರಿಸಬೇಕು, ಲಿಂಗ ಆಧಾರದಲ್ಲಲ್ಲ…”ಹೇಳಲಾಗಿತ್ತು. ಸಮಾನ ಕೆಲಸಕ್ಕೆ ಸಮಾನ ವೇತನ, ನಾಲ್ಕು ತಿಂಗಳವರೆಗೆ ಸಂಪೂರ್ಣ ವೇತನದೊಂದಿಗೆ ಮಾತೃತ್ವ ರಜೆ ಒದಗಿಸುವುದು, ಕೆಲಸದ ಸ್ಥಳಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ಬಾಣಂತಿ ತಾಯಂದಿರಿಗೆ ಕೆಲಸದ ದಿನದ ಅವಧಿಯನ್ನು ಕಡಿಮೆ ಮಾಡಲು ಮೊದಲಿಗೆ ಬೇಡಿಕೆ ಇಟ್ಟಿದ್ದು ಕಮ್ಯುನಿಸ್ಟರು.

ಕಮ್ಯುನಿಸ್ಟ್ ಪಕ್ಷವು ಕಡ್ಡಾಯ ಗುತ್ತಿಗೆ ಕಾರ್ಮಿಕ ಪದ್ದತಿಯನ್ನು ಮತ್ತು ಮಧ್ಯವರ್ತಿ ವ್ಯಕ್ತಿಗಳ ಮೂಲಕ ಕೆಲಸಗಾರರನ್ನು ನೇಮಿಸಿಕೊಳ್ಳುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಪಡಿಸಬೇಕೆಂದು ಒತ್ತಾಯಿಸಿತು. ಕಾರ್ಮಿಕರ ನೇಮಕಾತಿ ಮತ್ತು ವಜಾಗೊಳಿಸುವಿಕೆಯನ್ನು ಉದ್ಯೋಗ ವಿನಿಮಯ ಕೇಂದ್ರಗಳ ಮೂಲಕ ನಿಯಂತ್ರಿಸಬೇಕು ಮತ್ತು ಕಾರ್ಮಿಕ ಸಂಘಗಳ ಮೇಲ್ವಿಚಾರಣೆಯಲ್ಲಿ ನಡೆಸಬೇಕು ಎಂದು ಅದು ಒತ್ತಾಯಿಸಿತು. ‘ಕಾರ್ಯಾಚರಣೆಯ ವೇದಿಕೆ’ಯ ಕಾರ್ಯಕ್ರಮದ ಕರಡು (ಡ್ರಾಫ್ಟ್ ಪ್ಲಾಟ್‌ಫಾರ್ಮ್ ಆಫ್ ಆಕ್ಷನ್) (1931) ರಿಂದಲೇ, ಕಮ್ಯುನಿಸ್ಟ್ ಪಕ್ಷವು ನಿರಂತರವಾಗಿ ‘ವಾಕ್-ಸ್ವಾತಂತ್ರ‍್ಯ, ಆತ್ಮಸಾಕ್ಷಿಯ- ಸ್ವಾತಂತ್ರ‍್ಯ,, ಪತ್ರಿಕಾ, ಸಭೆಗಳು, ಮುಷ್ಕರಗಳು ಮತ್ತು ದುಡಿಯುವ ಜನರಿಗೆ ಸಂಘಗಳನ್ನು ರಚಿಸುವ ಸ್ವಾತಂತ್ರ‍್ಯಕ್ಕಾಗಿ ಮತ್ತು ಎಲ್ಲಾ ಜನ-ವಿರೋಧಿ ಮತ್ತು ಕಾರ್ಮಿಕ ವಿರೋಧಿ ಕಾನೂನುಗಳನ್ನು (ಕೈಗಾರಿಕೆ ವಿವಾದ ಕಾಯ್ದೆ, ಪಿಕೆಟಿಂಗ್ ನಿಳೇಧ, ಕ್ರಾಂತಿಕಾರಿ ಕಾರ್ಮಿಕರನ್ನು ಗಡೀಪಾರು ಮಾಡುವ ನಿಯಮಗಳು, ಪತ್ರಿಕಾ ಕಾಯ್ದೆಗಳು ಇತ್ಯಾದಿ) ರದ್ದುಗೊಳಿಸುವಂತೆ ಒತ್ತಾಯಿಸಿತು.

ಕಾರ್ಮಿಕ ವರ್ಗದ ಹೋರಾಟಗಳ ಒತ್ತಡಕ್ಕೆ ಮಣಿದು, ಕಾಂಗ್ರೆಸ್ ಪಕ್ಷವು 1930 ರ ದಶಕದಿಂದ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಈ ಮೇಲಿನ ಹಲವು ಬೇಡಿಕೆಗಳನ್ನು ಸೇರಿಸಬೇಕಾಗಿ ಬಂತು. ಚುನಾಯಿತಗೊಂಡ ನಂತರ, ಅದು ಯಾವಾಗಲೂ ಕಾರ್ಮಿಕ ವರ್ಗಕ್ಕೆ ದ್ರೋಹ ಬಗೆದಿದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಪೊಲೀಸ್ ಮತ್ತು ಪ್ರಭುತ್ವಯಂತ್ರವನ್ನು ಬಳಸಿಕೊಂಡು ಈ ಹೋರಾಟಗಳನ್ನು ನಿಗ್ರಹಿಸಲು ಸಹ ಅದು ಪ್ರಯತ್ನಿಸಿದೆ.

ಕಾಂಗ್ರೆಸ್ಸಿನ ವರ್ಗ ಮನೋಭಾವದಿಂದಾಗಿ, ಸ್ವಾತಂತ್ರ್ಯದ ನಂತರ ದಶಕಗಳ ನಂತರವೂ ಈ ಬೇಡಿಕೆಗಳು ಈಡೇರಿಲ್ಲ. ಕಾಂಗ್ರೆಸ್ ಮತ್ತು ನಂತರದ ಬಿಜೆಪಿ ನೇತೃತ್ವದ ಸರ್ಕಾರಗಳು ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಬದಲು, ನವ-ಉದಾರವಾದಿ ಆರ್ಥಿಕ ನೀತಿಗಳ ಅನುಷ್ಟಾನದ ಮೂಲಕ ಅವುಗಳನ್ನು ಇನ್ನಷ್ಟ್ಟು ಹೆಚ್ಚಿಸಿದವು. ಆರು ವರ್ಷಗಳ ಹಿಂದೆ ಬಿಜೆಪಿ ಸರ್ಕಾರದ ಆಗಮನದೊಂದಿಗೆ ಕಾರ್ಮಿಕ ವರ್ಗದ ಮೇಲಿನ ದಾಳಿಗಳು ಅಭೂತಪೂರ್ವ ಮಟ್ಟಕ್ಕೆ ತೀವ್ರಗೊಂಡಿವೆ.

ಬಂಡವಾಳಶಾಹಿ ವರ್ಗದ ಲಾಭದ ಗರಿಷ್ಠೀಕರಣಕ್ಕಾಗಿ, ಮೋದಿ ಸರ್ಕಾರ ಕಾರ್ಮಿಕ ವರ್ಗದ ಮೇಲೆ ಮತ್ತು ಕಾರ್ಮಿಕರ ಕಷ್ಟಪಟ್ಟು ಗೆದ್ದ ಹಕ್ಕುಗಳ ಮೇಲೆ ಅಭೂತಪೂರ್ವ ದಾಳಿ ನಡೆಸಿದೆ. ಕಾರ್ಮಿಕ ವರ್ಗದ ಆಂದೋಲನವನ್ನು ದುರ್ಬಲಗೊಳಿಸಲು, ಕಾರ್ಮಿಕ ಸಂಘಗಳ ರಚನೆಯನ್ನು ತಡೆಯಲು ಮತ್ತು ಮುಷ್ಕರದ ಹಕ್ಕನ್ನು ನಿರಾಕರಿಸಲು ಅಸ್ತಿತ್ವದಲ್ಲಿರುವ ಕಾರ್ಮಿಕ ಕಾನೂನುಗಳನ್ನು ಬದಲಾಯಿಸಿದೆ. ನವ-ಉದಾರವಾದಿ ಸುಧಾರಣೆಗಳ ಈ ಪ್ರಮುಖ ಕಾರ್ಯಸೂಚಿಯನ್ನು ಸಾಂಕ್ರಾಮಿಕದ ಸಮಯದಲ್ಲಿ ಸರ್ವಾಧಿಕಾರಿಶಾಹೀ ರೀತಿಯಲ್ಲಿ ಮುಂದೊತ್ತಲಾಗುತ್ತಿದೆ.

ಕಾರ್ಮಿಕ ವರ್ಗದ ನಡುವೆ ಗರಿಷ್ಟ ಐಕ್ಯತೆಯನ್ನು ಬೆಳೆಸುವ ಮೂಲಕ ಮಾತ್ರ ಆಳುವ ವರ್ಗಗಳ ದಾಳಿಯನ್ನು ಸೋಲಿಸಬಹುದು ಎಂದು ಕಾರ್ಮಿಕ ವರ್ಗದ ಚಳವಳಿಯ ಅನುಭವವು ನಮಗೆ ಕಲಿಸುತ್ತದೆ. ಆಳುವ ವರ್ಗಗಳು ಧರ್ಮ, ಜಾತಿ ಇತ್ಯಾದಿಗಳ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುವ ಮೂಲಕ ಕಾರ್ಮಿಕ ವರ್ಗದ ಐಕ್ಯತೆಯನ್ನು ಹಾಳುಮಾಡಲು ತಮ್ಮ ಗರಿಷ್ಟ ಪ್ರಯತ್ನವನ್ನು ಮಾಡುತ್ತಿದ್ದರೆ, ಕಮ್ಯುನಿಸ್ಟರು ಈ ವಿಭಜಕ ರಾಜಕಾರಣವನ್ನು ಎದುರಿಸಲು ಮತ್ತು ಕಾರ್ಮಿಕ ವರ್ಗವನ್ನು ಒಂದುಗೂಡಿಸಲು ಪ್ರಯತ್ನಿಸಿದ್ದಾರೆ. ಆಳುವ ವರ್ಗಗಳ ದಾಳಿಯ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ವಿವಿಧ ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ಸಮನ್ವಯ ಸಮಿತಿಗಳನ್ನು ರಚಿಸಲಾಯಿತು.

ಸಿಪಿಐ(ಎಂ) 1964ರಲ್ಲಿ ಅಂಗೀಕರಿಸಿದ ಮತ್ತು ತರುವಾಯ 2000 ರಲ್ಲಿ ಸಮಕಾಲಿಕಗೊಳಿಸಿದ  ಕಾರ್ಯಕ್ರಮವು ಕಾರ್ಮಿಕ ವರ್ಗ ಮತ್ತು ರೈತರ ದೃಢವಾದ ಮೈತ್ರಿಕೂಟದ ಮೂಲಕ ಮಾತ್ರ ನಮ್ಮ ಸಮಾಜದಲ್ಲಿ ಕ್ರಾಂತಿಕಾರಿ ಪರಿವರ್ತನೆ ಸಾಧ್ಯವಾಗುತ್ತದೆ ಎಂದು ಹೇಳುತ್ತದೆ. ಕಾರ್ಮಿಕ ವರ್ಗ ಮತ್ತು ಅದರ ರಾಜಕೀಯ ಪಕ್ಷವಾದ ಸಿಪಿಐ (ಎಂ)ನ ನಾಯಕತ್ವದ ಮಹತ್ವವನ್ನು ಮತ್ತಷ್ಟು ವಿವರಿಸುತ್ತ ಕಾರ್ಯಕ್ರಮವು ಹೀಗೆ ಹೇಳುತ್ತದೆ: “ಐತಿಹಾಸಿಕವಾಗಿ ಕಾರ್ಮಿಕ ವರ್ಗವನ್ನು ಹೊರತುಪಡಿಸಿ ಆಧುನಿಕ ಸಮಾಜದಲ್ಲಿ ಬೇರೆ ಯಾವುದೇ ವರ್ಗವು ಈ ಪಾತ್ರವನ್ನು ನಿರ್ವಹಿಸಲು ಉದ್ದೇಶಿಸಿಲ್ಲ ಮತ್ತು ನಮ್ಮ ಕಾಲದ ಸಂಪೂರ್ಣ ಅನುಭವ ಈ ಸತ್ಯವನ್ನು ಸಾಕಷ್ಟು ಎತ್ತಿ ತೋರಿಸುತ್ತದೆ” ಎಂದಿದೆ. ಇದು ಕಾರ್ಮಿಕ ವರ್ಗದ ಆಂದೋಲನವನ್ನು ಬಲಪಡಿಸುವ ಮತ್ತು ಅಂತಹ ಹೋರಾಟಗಳಿಗೆ ನೇತೃತ್ವ ನೀಡುವ ನಮ್ಮ ಇಂದಿನ ತಿಳುವಳಿಕೆಯನ್ನು ನಿರೂಪಿಸುತ್ತದೆ.

ಇಂದು, ಸ್ವಾತಂತ್ರ‍್ಯ ಪೂರ್ವದ ದಿನಗಳಲ್ಲಿ ಎತ್ತಲಾಗುತ್ತಿದ್ದ ಕೆಲವು ಬೇಡಿಕೆಗಳನ್ನು ಎತ್ತುತ್ತಿರುವ ಹೋರಾಟಗಳಲ್ಲಿ ಹೆಚ್ಚೆಚ್ಚು ಸಂಖ್ಯೆಯಲ್ಲಿ ಕಾರ್ಮಿಕರು ಹೊರಬರುತ್ತಿರುವಾಗ ಮತ್ತು ರೈತರು ಸಹ ಅವರ ಮೇಲೆ ಹೆಚ್ಚುತ್ತಿರುವ ದಾಳಿಯನ್ನು ಪ್ರತಿರೋಧಿಸುತ್ತಿರುವಾಗ, ಈ ಹೋರಾಟಗಳನ್ನು ಬಲಪಡಿಸುವುದು ಮತ್ತು ಅವುಗಳನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವ ಹೊಣೆ ಮತ್ತೊಮ್ಮೆ ಕಮ್ಯುನಿಸ್ಟರ ಮೇಲೆ ಬಂದಿದೆ. ಉತ್ತುಂಗಕ್ಕೇರಿದ ವರ್ಗ ಪ್ರಜ್ಞೆಯೊಂದಿಗೆ ವರ್ಗ ಹೋರಾಟಗಳನ್ನು ತೀಕ್ಷಣಗೊಳಿಸುವುದು ಮುಂದೆ ಸಾಗುವ ಏಕೈಕ ಮಾರ್ಗವಾಗಿದೆ.

ಅನು: ಸಿ.ಆರ್ ಶಾನಬಾಗ

Leave a Reply

Your email address will not be published. Required fields are marked *