ಸ್ವಾತಂತ್ರ್ಯ ಹೋರಾಟದಲ್ಲಿ ಕಮ್ಯುನಿಸ್ಟರ ಪಾತ್ರವನ್ನು ನೆನೆಯುತ್ತಾ……

ನೀಲೋತ್ಪಲ ಬಸು

Communist Part 100 copyತಾಷ್ಕೆಂಟ್‌ ನಲ್ಲಿ ಅಕ್ಟೋಬರ್ 17, 1920 ರಂದು ಅಸ್ತಿತ್ವಕ್ಕೆ ಬಂದ ಭಾರತೀಯ ಕಮ್ಯುನಿಸ್ಟ್ ಪಕ್ಷದ 100ನೇ ವರ್ಷಾಚರಣೆಯು ಮುಗಿಯುತ್ತಿದೆ. ಆದರೆ ಭಾರತವನ್ನು ಒಂದು ಪ್ರಜಾಸತ್ತಾತ್ಮಕ, ಧರ್ಮ ನಿರಪೇಕ್ಷ ಜನತಾ ಗಣತಂತ್ರವಾಗಿ ರೂಪಿಸುವ ಮೂಲಕ ಎಲ್ಲ ನಾಗರಿಕರು ಯಾವುದೇ ಜಾತಿ, ಜನಾಂಗ, ಧರ್ಮ ಮತ್ತು ಆರ್ಥಿಕ ಸ್ಥಾನಮಾನಗಳ ಬೇಧವಿಲ್ಲದೆ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಸಂಭ್ರಮಿಸುವಂತಾಗಬೇಕು ಎನ್ನುವ ಭಾರತೀಯ ಕಮ್ಯುನಿಸ್ಟ್ ಪಕ್ಷದ ಸ್ಥಾಪನಾ ಆಶಯವು ಈವರೆಗೂ ಈಡೇರಿಲ್ಲ. ಜೊತೆಗೆ, ಪ್ರಮುಖವಾಗಿ ಸಂವಿಧಾನದ ಈ ಮೇಲ್ಕಾಣಿಸಿದ ಆಶಯಗಳನ್ನು ಪ್ರಶ್ನೆ ಮಾಡುತ್ತಿರುವ ಇತ್ತೀಚಿನ ವರ್ಷಗಳಲ್ಲಿ, ಇದು ಹಲವು ಗಂಭೀರ ಹಿನ್ನಡೆಯನ್ನು ಎದುರಿಸಿದೆ. ಇಂದು ನಾವು ಅತ್ಯಂತ ಹೀನ ಮಟ್ಟದ ಅಸಮಾನತೆ, ಶೋಷಣೆ ಮತ್ತು ಧರ್ಮ, ಜಾತಿ ಲಿಂಗಾಧಾರಿತ ಅಸಮಾನತೆಗಳಿಂದ ಸಂವಿಧಾನಾತ್ಮಕ ಹಕ್ಕು ಮತ್ತು ಸ್ವಾತಂತ್ರ್ಯಗಳ ತೀವ್ರ ಸವೆತಗಳನ್ನು ಅನುಭವಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಕಮ್ಯುನಿಸ್ಟರ ಪಾತ್ರವನ್ನು ನೆನೆಯುವುದು ಬಹಳ ಮುಖ್ಯ. ಇಂದು ದಾಳಿಗೊಳಗಾಗಿರುವ ಪರಿಕಲ್ಪನೆಗಳಾದ ರಾಜಕೀಯ ಸ್ವಾತಂತ್ರ್ಯ ಮತ್ತು ನಾಗರಿಕರ ಸಮಾನತೆಗಳನ್ನು ಸ್ಥಾಪಿಸುವುದೇ ಕಮ್ಯುನಿಸ್ಟರ ನಿರ್ದಿಷ್ಟ ಪಾತ್ರವಾಗಿತ್ತು.

ಹಿನ್ನೆಲೆ

ಬ್ರಿಟೀಷ್ ಆಡಳಿತದ ವಿವಿಧ ಆಯಾಮಗಳ ಇತಿಹಾಸ ಮತ್ತು ಇದು ನಮ್ಮ ಜನರ ಮೇಲೆ ನಡೆಸುತ್ತಿದ್ದ ಕ್ರೂರ ಶೋಷಣೆಯು ನಮ್ಮ ಸ್ವಾತಂತ್ರ್ಯ ಹೋರಾಟದ ಚಾಲಕಶಕ್ತಿಯಾಗಿತ್ತು. ಭಾರತದ ಅಗಾಧ ಮತ್ತು ವೈವಿಧ್ಯಮಯ ಪರಿಸ್ಥಿತಿಗಳಲ್ಲಿ ನಡುವೆ ಜನತೆ ನಡೆಸಿದ ಎಲ್ಲ ಅಸಂಖ್ಯ ಹೋರಾಟಗಳ ಸಂಗಮವಾಗಿ, ಸ್ವಾತಂತ್ರ್ಯ ಚಳುವಳಿಯು ಒಂದು ರಾಷ್ಟ್ರ ಮಟ್ಟದ ಅಸ್ತಿತ್ವವಾಗಿ ರೂಪುಗೊಂಡಿತು. ಬ್ರಿಟೀಷ್ ಸಾಮ್ರಾಜ್ಯವು ತನ್ನನ್ನೂ ಉಳಿಸಿಕೊಳ್ಳಲು ನಡೆಸುತ್ತಿದ್ದ ಸುಲಿಗೆ ಮತ್ತು ಲೂಟಿಯೇ ಈ ಪ್ರತಿಯೊಂದು ಹೋರಾಟಕ್ಕೂ ತಕ್ಷಣದ ಕಾರಣವಾಗಿತ್ತು ಎಂದು ಪುನರುಚ್ಚರಿಸುವುದು ಸ್ವಯಂ-ಸಿದ್ಧವಾದ ಮಾತಾಗುತ್ತದೆ.

ಬ್ರಿಟಿಷ್ ಭಾರತೀಯ ಸೇನೆಯಲ್ಲಿದ್ದ ಭಾರತೀಯ ಸೈನಿಕರ ಬಂಡಾಯ ಈ ವಸಾಹತುಶಾಹಿ ಶೋಷಣೆಯ ವಿರುದ್ಧ ನಡೆದ ಮೊದಲ ಸಂಘಟಿತ ಅಭಿವ್ಯಕ್ತಿಯಾಗಿತ್ತು. ಈ ಬಂಡಾಯ ಪ್ರಾರಂಭವಾದ ಮೇ 10, 1857 ದಿನದಿಂದ ದೆಹಲಿಯನ್ನು ಸೆಪ್ಟೆಂಬರ್ 20, 1857 ರಂದು ಮತ್ತೆ ವಶಪಡಿಸಿಕೊಳ್ಳಲು ಬ್ರಿಟಿಷ್ ಆಡಳಿತಕ್ಕೆ 4 ತಿಂಗಳುಗಳು ಬೇಕಾಯಿತು. ಆದರೆ ಈ ಬಂಡುಕೋರರನ್ನು ಸಂಪೂರ್ಣವಾಗಿ ನಿಯಂತ್ರಿಸಲು ಮತ್ತು ಬಂಡಾಯದಿಂದ ವಿಮೋಚನೆಗೊಂಡಿದ್ದ ಬಹುತೇಕ ಉತ್ತರ ಭಾರತವನ್ನು ಮತ್ತೆ ವಶಪಡಿಸಿಕೊಳ್ಳಲು ಬ್ರಿಟಿಷರಿಗೆ ಸುಮಾರು ಎರಡು ವರ್ಷಗಳೇ ಬೇಕಾಯಿತು.

ಈ ಬಂಡಾಯದ ಪ್ರಾಮುಖ್ಯತೆಯನ್ನು ನಗಣ್ಯಗೊಳಿಸಲು ಬಹುತೇಕ ವಸಾಹತುಶಾಹಿ ಇತಿಹಾಸ ಬರವಣಿಗೆಗಳು ಪ್ರಯತ್ನಿಸಿದ್ದವು. ಆದರೆ ಕೆಲವು ಬರವಣಿಗೆಗಳು ಅಂದಿದ್ದ ಸಂದರ್ಭಗಳ ಮೇಲೆ ಬೆಳಕು ಚೆಲ್ಲಿದ್ದವು. ಅಧಿಕಾರ/ಹಿಡಿತ ಕಳೆದುಕೊಂಡಿದ್ದ ಭಾರತದ ರಾಜ ಸಂಸ್ಥಾನಗಳು, ಕುಲೀನರು ಮತ್ತು ಜಮೀನ್ದಾರರ ಅಸಮಾಧಾನವು ಈ ಬಂಡಾಯಕ್ಕೆ ತಕ್ಷಣದ ಕಿಡಿಯಾಗಿತ್ತು. ಬ್ರಿಟಿಷ್ ಆಡಳಿತದಲ್ಲಿ ವಿನಾಶವನ್ನು ಎದುರಿಸುತ್ತಿದ್ದ ಭಾರತೀಯ ಸೈನಿಕರು ಮತ್ತು ಸಾಮಾನ್ಯ ದುಡಿಯುವ ಜನರ ವಿಶಾಲ ವಿಭಾಗಗಳು ಸಹ ಈ ಬಂಡಾಯದಲ್ಲಿ ಒಂದಾಗಿ ಎದ್ದು ನಿಂತವು ಎನ್ನುವುದು ಸ್ವಷ್ಟ.
ಜನ ಸಮೂಹಗಳ ಪಾತ್ರವನ್ನು ಕಡೆಗಣಿಸಿ ಈ ರಾಷ್ಟ್ರೀಯ ಬಂಡಾಯವನ್ನು “ಸಿಪಾಯಿ ದಂಗೆ” ಎಂದು ಬ್ರಿಟಿಷ್ ಇತಿಹಾಸಕಾರರು ಕರೆದಿದ್ದನ್ನು ಪ್ರಶ್ನಿಸಿದ ಕಾರ್ಲ್ ಮಾರ್ಕ್ಸ್, ಈ ಬಂಡಾಯವನ್ನು ಹಿಂದುಗಳು ಮತ್ತು ಮುಸ್ಲಿಮರ ರಾಷ್ಟ್ರೀಯ ಬಂಡಾಯ ಎಂದು ಬಣ್ಣಿಸಿದರು ಮತ್ತು ಮುಂದುವರೆದು “ನೈಜವಾಗಿ ಈ ಮಿಲಿಟರಿ ದಂಗೆಯು ಒಂದು ರಾಷ್ಟ್ರೀಯ ಬಂಡಾಯವಾಗಿತ್ತು” ಎಂದರು.

ಈ ಬಂಡಾಯದ ಬೃಹತ್ ಪರಿಣಾಮಗಳ ಜೊತೆಯಲ್ಲಿ, ಇವನ್ನು ಮುಂದೆ ಕೊಂಡೊಯ್ಯಲಾಗದಿರುವ ವಿಫಲತೆಯ ಪಾಠವೂ ಅಷ್ಟೇ ಗಹನವಾಗಿತ್ತು. ಅನಿಶ್ಚತತೆಯನ್ನು ಎದುರಿಸುತ್ತಿದ್ದ ಹಲವು ಭಾರತೀಯ ಸಂಸ್ಥಾನಗಳ ಆಳರಸರು ಮತ್ತು ದೊಡ್ಡ ಜಮೀನ್ದಾರುಗಳು ಬ್ರಿಟೀಷರ ಪರವಾಗಿ ಸಕ್ರಿಯವಾಗಿ ನಿಂತರು. ಇದನ್ನು ಗಮನಿಸಿ ಗವರ್ನರ್ ಜನರಲ್ ಲಾರ್ಡ್ ಕ್ಯಾನ್ಸಿಂಗ್, “ಈ ರಾಜರುಗಳು ನಮ್ಮನ್ನು ಒಂದು ಬೃಹತ್ ಅಲೆಯ ಮೂಲಕ ಕೊಚ್ಚಿ ಕೊಂಡು ಹೋಗಲಿದ್ದ ಪ್ರವಾಹಕ್ಕೆ ತಡೆಗೋಡೆಗಳಾಗಿ ಅಡ್ಡ ನಿಂತರು” ಎಂದು ನೇರವಾಗಿ ಹೇಳಿದ್ದರು.

ಭಾರತೀಯ ಸ್ವಾತಂತ್ರ್ಯ ಹೋರಾಟವು ಒಂದು ಪಾಳೆಯಗಾರಿ-ವಿರೋಧಿ ಹೋರಾಟವಾಗಲೇಬೇಕು ಮತ್ತು ಅಪಾರ ಪ್ರಮಾಣದ ಕೃಷಿ ಬಿಕ್ಕಟ್ಟಿನ ವಿರುದ್ಧದ ರೈತಾಪಿ ಜನರ ಪ್ರತಿರೋಧವನ್ನು ಕ್ರೋಢೀಕರಿಸದೆ, ಸ್ವಾತಂತ್ರ್ಯ ಚಳುವಳಿಯ ಸಫಲವಾಗುವುದಿಲ್ಲ ಎಂಬ ಸ್ವಷ್ಟ ಪಾಠವನ್ನು ಬ್ರಿಟಿಷರ ಪ್ರತಿಕ್ರಿಯೆ ಒತ್ತಿ ಹೇಳಿತ್ತು.

ಬ್ರಿಟೀಷರು ಸಹ 1857 ರ ಹೋರಾಟದ ತಮ್ಮ ಪಾಠವನ್ನು ಅರಿತರು. ಹಿಂದುಗಳು, ಮುಸ್ಲಿಮರು ಮತ್ತು ಜಮೀನ್ದಾರಿ ರಾಜರುಗಳು ಒಂದೇ ಸಮಾನ ಉದ್ದೇಶಕ್ಕಾಗಿ ಒಂದುಗೂಡಲು ಅನುವು ಮಾಡಿದಲ್ಲಿ ಭಾರತದಲ್ಲಿ ಬ್ರಿಟಿಷರ್ ಆಡಳಿತವನ್ನು ಹೆಚ್ಚು ಕಾಲ ಮುಂದುವರೆಸಲು ಸಾಧ್ಯವಿಲ್ಲ. “ಗೋವನ್ನು ಸಾಯಿಸುವವರು ಮತ್ತು ಗೋವನ್ನು ಪೂಜಿಸುವವರು, ಹಂದಿಯನ್ನು ದ್ವೇಷಿಸುವವರು ಮತ್ತು ಹಂದಿಯನ್ನು ತಿನ್ನುವವರು ಒಟ್ಟಾಗಿ ಬಂಡಾಯವೆದ್ದಿದ್ದಾರೆ” ಎಂದು ಬ್ರಿಟಿಷ್ ಬರಹಗಾರ ಥಾಮಸ್ ಲೋವೆ ನುಡಿದಿದ್ದರು. ಇದರ ಪುನರಾವರ್ತನೆ ತಡೆಯಲೇಬೇಕು! ಸಹಜವಾಗಿ ಇದು `ಒಡೆದು ಆಳುವ’ ನೀತಿಯ ಆಕ್ರಮಣಕಾರಿ ಬಳಕೆಯತ್ತ ಅವರನ್ನು ಒಯ್ದಿತು.

ಕಮ್ಯುನಿಸ್ಟರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಪಾತ್ರವನ್ನು ರೂಪಿಸಿಕೊಳ್ಳಲು ಈ ಪಾಠಗಳನ್ನು ಮನನ ಮಾಡಿಕೊಂಡರು.

1921ರಲ್ಲಿ ಕಾಂಗ್ರೆಸ್‌ನ ಅಹಮದಾಬಾದ್ ಅಧಿವೇಶನದಲ್ಲಿ ಕಮ್ಯುನಿಸ್ಟರ ನಿರ್ಣಯದ ಮೊದಲು ಎಂ.ಎನ್.ರಾಯ್ ಮತ್ತು ಅಬನಿ ಮುಖರ್ಜಿ ಒಂದು ಮುಕ್ತ ಪತ್ರ ಬರೆದು, ಕಾಂಗ್ರೆಸನ್ನು ಕೆಳಕಂಡಂತೆ ಒತ್ತಾಯಿಸಿದರು: “(ಕಾಂಗ್ರೆಸ್) ಕಾರ್ಮಿಕ ಸಂಘಟನೆಗಳ ಬೇಡಿಕೆಗಳನ್ನು ರೈತ ಸಂಘಟನೆಗಳ ಕಾರ್ಯಕ್ರಮವನ್ನು ತನ್ನದೇ ಬೇಡಿಕೆಯಾಗಿ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬೇಕು. ಆಗ ಕಾಂಗ್ರೆಸನ್ನು ಯಾವ ಶಕ್ತಿಯೂ ತಡೆಯದಿರುವ ಸಮಯ ಬರುತ್ತದೆ; ತಮ್ಮ ಭೌತಿಕ ಹಿತ್ತಾಸಕಿಗಳಿಗಾಗಿ ಪ್ರಜ್ಞಾಪೂರ್ವಕವಾಗಿ ಹೋರಾಡುತ್ತಿರುವ ಇಡೀ ಜನತೆಯ ತಡೆಯಲಾಗದ ಶಕ್ತಿ ಕಾಂಗ್ರೆಸ್‌ನ ಹಿಂದಿರುತ್ತದೆ.” ಈ ಕಣ್ಣೋಟದೊಂದಿಗೆ ಕಮ್ಯುನಿಸ್ಟ್ ಪಕ್ಷವು ಬ್ರಿಟಿಷ್ ಆಡಳಿತದಿಂದ ವಿಮೋಚನೆಗಾಗಿ ನಡೆಯುತ್ತಿದ್ದ ಒಟ್ಟಾರೆ ರಾಷ್ಟ್ರೀಯ ಚಳುವಳಿಯ ಭಾಗವಾಗುತ್ತಲೇ,  ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿತ್ತು.

RIN -Chittaprasadಭಾರತೀಯ ಕಮ್ಯುನಿಸ್ಟ್ ಪಕ್ಷದ ಆರಂಭಿಕ ವರ್ಷಗಳು

ಬ್ರಿಟೀಷರ ವಿರುದ್ಧ ಭಾರತದ ಜನತೆ ನಡೆಸಿದ ಹಲವು ಮೂಲಗಳ ಸ್ಥಳಿಯ ಹೋರಾಟಗಳ ತೊರೆಗಳನ್ನು ಒಳಗೊಳ್ಳಲು ಕಮ್ಯುನಿಸ್ಟ್ ಪಕ್ಷವು ಬದ್ಧವಾಗಿದ್ದರೂ, ಮಹಾನ್ ಅಕ್ಟೋಬರ್ ಕ್ರಾಂತಿಯ ಯಶಸ್ಸು ಪಕ್ಷಕ್ಕೆ ತಕ್ಷಣದ ಸ್ಫೂರ್ತಿಯಾಗಿದ್ದು ಸ್ಪಷ್ಟ. ತನ್ನ ವಸಾಹತುಶಾಹಿ ಪ್ರಬುಧಗಳಲ್ಲಿ ಲೆನಿನ್ ಮಾಡಿದ ಮನವಿ ಕೇವಲ ಭಾರತದಲ್ಲಿ ಮಾತ್ರವಲ್ಲ, ಬೇರೆಡೆಯಲ್ಲಿಯೂ ಆರಂಭದಲ್ಲಿ ಕ್ರಾಂತಿಕಾರಿಗಳ ಕೆಲವು ಸಣ್ಣ ಗುಂಪುಗಳು ಕಮ್ಯೂನಿಸ್ಟ್ ಪಕ್ಷದ ರಚನೆಗೆ ಎಡೆ ಮಾಡಿತು. ಯುರೋಪ್‌ನ ಹಲವು ಭಾಗಗಳಲ್ಲಿ ಮಾರ್ಕ್ಸ್ವಾದವನ್ನು ಅಪ್ಪಿಕೊಂಡ ರಾಜಕೀಯ ವಲಸೆಗಾರರ ಪಾತ್ರ ಇದರಲ್ಲಿ ಸಮಾನ ಅಂಶವಾಗಿದೆ. “ಭಾರತೀಯ ಕಮ್ಯೂನಿಸ್ಟ್ ಪಕ್ಷವು ವಿದೇಶದಲ್ಲಿ ಸ್ಥಾಪಿತವಾದ ಪಕ್ಷ ಸಂಘಟನೆಯ ವಿಸ್ತೃತ ಭಾಗ” ಎಂದು ಮುಜ್ಜಫರ್ ಅಹ್ಮದ್ ಗಮನಿಸುತ್ತಾರೆ.  1922-23 ರಲ್ಲಿ ಪೇಶಾವರ್ ಕಮ್ಯುನಿಸ್ಟ್ ಪಿತೂರಿ ಪ್ರಕರಣದಲ್ಲಿ ಬ್ರಿಟೀಷರು ಭಾರತೀಯ ಕಮ್ಯೂನಿಸ್ಟ್ಟರನ್ನು ವಿಚಾರಣೆಗೆ ಒಳಪಡಿಸುವುದರಲ್ಲಿ ಇದು ಸ್ಪಷ್ಟವಾಗಿ ಪ್ರತಿಫಲಿತವಾಗುತ್ತದೆ. 10 ಜನ ಆರೋಪಿಗಳಲ್ಲಿ 9 ಜನ ಪಕ್ಷದ ರಾಜಕೀಯ ವಲಸಿಗರ ಘಟಕದ ಸದಸ್ಯರಾಗಿದ್ದರು.

ಕಮ್ಯುನಿಸ್ಟ್ ಪಕ್ಷದ ಸ್ಥಾಪನೆಯಿಂದಾಗಿ ಬ್ರಿಟೀಷರು ಗಾಬರಿಗೊಂಡಿದ್ದರು ಎಂಬುದು ಆಗ ತಾನೇ ಜನ್ಮ ತಾಳಿದ್ದ ರಾಜಕೀಯ ಪಕ್ಷದ ಮೇಲೆ ಹಾಕಿದ ಹಲವು ಪಿತೂರಿ ಪ್ರಕರಣಗಳಲ್ಲಿ ತಿಳಿಯುತ್ತದೆ: ಉದಾ: ಪೇಶಾವರ್ ಪಿತೂರಿ ಪ್ರಕರಣ (1922-23) ಕಾನ್ಪುರ ಬೋಲ್ಷೆವಿಕ್ ಪಿತೂರಿ ಪ್ರಕರಣ (1924) ಮತ್ತು 31 ಪ್ರಮುಖ ಭಾರತೀಯ ಕಮ್ಯುನಿಸ್ಟ್ ಪಕ್ಷದ ನಾಯಕರುಗಳನ್ನು ಶಿಕ್ಷೆಗೆ ಒಳಪಡಿಸಲಾಗಿದ್ದ ಕುಖ್ಯಾತ ಮೀರತ್ ಪಿತೂರಿ ಪ್ರಕರಣ (1929).

ಆದರೆ, ಮುಂಬರುವ ದಮನದ ಸಾಧ್ಯತೆಗೆ ಜಗ್ಗದ ಹಿಂಜರಿಯದ ನವಜಾತ ಪಕ್ಷವು 1921 ರ ಕಾಂಗ್ರೆಸ್ ನ ಅಹಮದಾಬಾದ್ ಅಧಿವೇಶನದಲ್ಲಿ ಸಂಪೂರ್ಣ ಸ್ವಾತಂತ್ರ್ಯದ ನಿರ್ಣಯವನ್ನು ಮಂಡಿಸಿತು. ಸ್ವಾತಂತ್ರ್ಯ ಚಳುವಳಿಯ ಪ್ರಮುಖ ಆಶೋತ್ತರವನ್ನು ಬಿಂಬಿಸುವ ಈ ನಿರ್ಣಯವನ್ನು ಮೌಲಾನಾ ಹಸ್ರತ್ ಮೊಹಾ ಮತ್ತು ಸ್ವಾಮಿ ಕುಮಾರಾನಂದ್ ಪಕ್ಷದ ಪರವಾಗಿ ಮಂಡಿಸಿದರು. ಆದರೆ ಸಂಪೂರ್ಣ ಸ್ವಾತಂತ್ರ್ಯದ ನಿರ್ಣಯವನ್ನು ಆ ನಂತರ ಕಾಂಗ್ರೆಸ್ 1929 ರಲ್ಲಿ ಅಂಗೀಕರಿಸಿತು.

HASRAT KOHANIಜನರೊಡನೆ ಸಂಪರ್ಕ, ಕೃಷಿ ಮತ್ತು ದುಡಿಯುವ ವರ್ಗದ ಹೋರಾಟಗಳು

ಕಾಂಗ್ರೆಸ್‌ನ ಅಹಮದಾಬಾದ್ ಅಧಿವೇಶನದಲ್ಲಿ ಕಮ್ಯುನಿಸ್ಟರ ನಿರ್ಣಯದ ಮೊದಲು ಎಂ.ಎನ್.ರಾಯ್ ಮತ್ತು ಅಬನಿ ಮುಖರ್ಜಿ ಒಂದು ಮುಕ್ತ ಪತ್ರ ಬರೆದು, ಕಾಂಗ್ರೆಸನ್ನು ಕೆಳಕಂಡಂತೆ ಒತ್ತಾಯಿಸಿದರು: “(ಕಾಂಗ್ರೆಸ್) ಕಾರ್ಮಿಕ ಸಂಘಟನೆಗಳ ಬೇಡಿಕೆಗಳನ್ನು ರೈತ ಸಂಘಟನೆಗಳ ಕಾರ್ಯಕ್ರಮವನ್ನು ತನ್ನದೇ ಬೇಡಿಕೆಯಾಗಿ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬೇಕು. ಆಗ ಕಾಂಗ್ರೆಸನ್ನು ಯಾವ ಶಕ್ತಿಯೂ ತಡೆಯದಿರುವ ಸಮಯ ಬರುತ್ತದೆ; ತಮ್ಮ ಭೌತಿಕ ಹಿತ್ತಾಸಕಿಗಳಿಗಾಗಿ ಪ್ರಜ್ಞಾಪೂರ್ವಕವಾಗಿ ಹೋರಾಡುತ್ತಿರುವ ಇಡೀ ಜನತೆಯ ತಡೆಯಲಾಗದ ಶಕ್ತಿ ಕಾಂಗ್ರೆಸ್‌ನ ಹಿಂದಿರುತ್ತದೆ.”

ಕಮ್ಯುನಿಸ್ಟ್ ಪಕ್ಷವು ಬ್ರಿಟಿಷ್ ಆಡಳಿತದಿಂದ ವಿಮೋಚನೆಗಾಗಿ ನಡೆಯುತ್ತಿದ್ದ ಒಟ್ಟಾರೆ ರಾಷ್ಟ್ರೀಯ ಚಳುವಳಿಯ ಭಾಗವಾಗುತ್ತಲೇ, ಮೇಲ್ಕಾಣಿಸಿದ ಕಣ್ಣೋಟದೊಂದಿಗೆ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿತ್ತು. ಕಾರ್ಮಿಕರು, ರೈತರು ಮತ್ತು ಸಾಮಾಜಿಕ ಬೇಧಭಾವ ಮತ್ತು ಜಾತಿ ಶ್ರೇಣೀಕರಣದಿಂದ ದಾಳಿಗೊಳಗಾಗಿದ್ದ ವಿಶಾಲವಾದ ಜನ ವಿಭಾಗಗಳನ್ನು ಅಣಿ ನೆರೆಸುವ ಉದ್ದೇಶದಿಂದ ವರ್ಗ ಸಂಘರ್ಷ ಮತ್ತು ಸಾಮಾಜಿಕ ವಿಷಯಗಳ ಮೇಲೆ ಹೋರಾಟಕ್ಕೆ ಒತ್ತು ನೀಡಲಾಗಿತ್ತು. ಕೇವಲ ಸ್ವಾತಂತ್ರ್ಯ ಮಾತ್ರವಲ್ಲದೆ, ಜನರ ಭೌತಿಕ ಸ್ಥಿತಿಯಲ್ಲಿ ಬದಲಾವಣೆ ತರುವುದು ಮತ್ತು ಅಂತಿಮವಾಗಿ ಸಮಾಜವಾದವನ್ನು ಸ್ಥಾಪಿಸುವುದು, ಈ ಹೋರಾಟದ ಉದ್ದೇಶವಾಗಿತ್ತು ಎನ್ನುವುದು ಸ್ವಷ್ಟ. ಇದು ರಾಷ್ಟ್ರೀಯ ಚಳುವಳಿಯಲ್ಲಿ ಒಂದು ಹೊಸ ಮಾದರಿಯಾಗಿತ್ತು ಎಂಬುದು ಪ್ರಶ್ನಾತೀತವಾಗಿದೆ.

ಆರಂಭಿಕ ದಿನಗಳಿಂದಲೇ ಕಮ್ಯುನಿಸ್ಟ್ ಪಕ್ಷವು ಹಿಂದು-ಮುಸ್ಲಿಮ್ ಐಕ್ಯತೆಗಾಗಿ ಮಧ್ಯ ಪ್ರವೇಶಿಸುತ್ತಿತ್ತು ಮತ್ತು ಬ್ರಿಟೀಷರು ಹುಟ್ಟು ಹಾಕಿ ಪೋಷಿಸುತ್ತಿದ್ದ ಹಾಗೂ ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್ ಪಾಲಿಸುತ್ತಿದ್ದ ಕೋಮು ವಿಭಜನೆಯ ಕ್ರಮಗಳನ್ನು ವಿರೋಧಿಸುತ್ತಿತ್ತು.

ಕಮ್ಯುನಿಸ್ಟ್ ಪಕ್ಷವು ಜಾತಿ ದಮನದಂತಹ ಸಾಮಾಜಿಕ ವಿಷಯಗಳಲ್ಲೂ ಮಧ್ಯ ಪ್ರವೇಶಿಸಿತ್ತು. ಆಗ ಈ ವಿಷಯಗಳನ್ನು ಪಾಳೇಗಾರಿ ವಿರೋಧಿ ಮತ್ತು ವಸಾಹತುಶಾಹಿ ವಿರೋಧಿ ಅಜೆಂಡಾಗಳ ಜೊತೆ ಸೇರಿಸುವ ಪ್ರಯತ್ನಿಸಲಾಗುತ್ತಿತ್ತು. ಪಕ್ಷದ ಗುರಿಯು ಜಾತಿ ವ್ಯವಸ್ಥೆಯ ಸುಧಾರಣೆಯಾಗಿರದೆ ಜಾತಿ ನಿರ್ಮೂಲನೆಯಾಗಿತ್ತು.

ಮೊದಲಿನಲ್ಲಿ ಕಾಂಗ್ರೆಸ್ ಮೂಲಕ ಅಣಿನೆರೆಸಲ್ಪಟ್ಟಿದ್ದ ರೈತಾಪಿ ಜನ ಪಾಳೇಗಾರಿಗಳನ್ನು ವಿರೋಧಿಸದ ಕಾಂಗ್ರೆಸ್‌ನ ನಿಲುವಿನಿಂದ ಭ್ರಮರಸನಗೊಂಡರು. ತಮ್ಮದೇ ಆದ ವರ್ಗ ಬೇಡಿಕೆಗಳ ಆಧಾರದಲ್ಲಿ ತಾವು ಸಂಘಟಿತರಾಗಬೇಕು ಎಂಬ ಅವರ ತಿಳುವಳಿಕೆ ಹೆಚ್ಚಾಗತೊಡಗಿತು. ಯುದ್ಧದ ನಂತರದ ಹೋರಾಟಗಳ ಉಬ್ಬರದ ಭಾಗವಾಗಿ ಸ್ಥಳೀಯ ಮತ್ತು ಪ್ರಾದೇಶಿಕ ಹೋರಾಟಗಳು ಸ್ಫೋಟಗೊಂಡು, ಹೆಚ್ಚಿನ ರಭಸ ಪಡೆದುಕೊಂಡವು. ಬಂಗಾಳದ ತೆಭಾಗಾ ಹೋರಾಟ, ಕೇರಳದ ವಿವಿಧ ಭಾಗಗಳಲ್ಲಿ ನಡೆದ ಅಸಂಖ್ಯ ರೈತ ಹೋರಾಟಗಳು, ಮಹಾರಾಷ್ಟçದ ವಾರಲಿ ಬುಡಕಟ್ಟು ಹೋರಾಟಗಳು, ಬಿಹಾರದ ಬಕ್ಷತ್ ಹೋರಾಟ, ಅಸ್ಸಾಂ ನ ಸುರ್ಮಾ ಕಣಿವೆ ಹೋರಾಟ, ಇತ್ಯಾದಿಗಳಲ್ಲಿ ರೈತರ ಬೃಹತ್ ಅಣಿನೆರೆಸುವಿಕೆಯಾಗಿತ್ತು. ಇವೆಲ್ಲದರಲ್ಲಿ ಅತ್ಯಂತ ದೊಡ್ಡ ಹೋರಾಟವಾಗಿದ್ದ ನಿಜಾಂಶಾಹಿ ವಿರುದ್ಧದ ಹೋರಾಟವು ತೆಲಂಗಾಣದಲ್ಲಿ ಸಶಸ್ತ್ರ ಹೋರಾಟದ ಸ್ವರೂಪ ಪಡೆಯಿತು.

ಅಂತೆಯೇ ಭಾರತದ ಪ್ರಮುಖ ನಗರಗಳಾದ ಕಲ್ಕತ್ತಾ, ಕಾನ್ಪುರ್, ಬಾಂಬೆ, ಮದ್ರಾಸ್‌ಗಳ ಪ್ರಮುಖ ಕೈಗಾರಿಕಾ ವಲಯಗಳಲ್ಲಿ ಮತ್ತು ರೈಲ್ವೆ, ಕಲ್ಲಿದ್ದಲು, ಸೆಣಬು, ಹತ್ತಿ ಟೀ ತೋಟಗಳು ಮುಂತಾದೆಡೆ ಹಲವು ಹೋರಾಟಗಳು ನಡೆದವು. ಇವುಗಳಲ್ಲಿ ಅತ್ಯಂತ ಗಮನಾರ್ಹವಾದುದು ಮತ್ತು ರಾಜಕೀಯವಾಗಿ ಮಹತ್ವದ್ದು ಬ್ರಿಟಿಷ್ ನೌಕಾಸೈನಿಕರ (ರಿನ್) ದಂಗೆಗೆ ಬೆಂಬಲ ಸೂಚಿಸಿ ಬಾಂಬೆ ಕಾರ್ಮಿಕರು ಮುಕ್ತವಾಗಿ ನಡೆಸಿದ ಹೋರಾಟ.

MUZAFFAR AHMADವಿವಿಧ ಎಳೆಗಳು: ಗದರ್ ಪಕ್ಷ, ಕ್ರಾಂತಿಕಾರಿ ರಾಷ್ಟ್ರೀಯವಾದಿಗಳು ಮತ್ತು ಕಾಂಗ್ರೆಸ್ ಸೋಷಿಯಲಿಸ್ಟ್ ಪಕ್ಷ

ಅಕ್ಟೋಬರ್ ಕ್ರಾಂತಿಯ ಮಹತ್ವದ ಪರಿಣಾಮ ಮತ್ತು ಸೋವಿಯತ್ ಯೂನಿಯನ್ ನ ಸ್ಥಾಪನೆ ದುಡಿಯುವ ವರ್ಗದಲ್ಲಿ ಆಶಾಭಾವನೆ ಮತ್ತು ಭರವಸೆಯನ್ನು ಮೂಡಿಸಿತು. ಹಲವು ಸಮರಧೀರ ರಾಜೀರಹಿತ ವಸಾಹತುಶಾಹಿ ವಿರೋಧಿ ಚಳುವಳಿಗಳು ಮತ್ತು ರಾಜಕೀಯ ಕೂಟಗಳಿಗೂ ಇದು ಭರವಸೆ ನೀಡಿತು. ಅದರಲ್ಲಿ ಕೆನಡಾ ಮತ್ತು ಯು.ಎಸ್. ನಲ್ಲಿದ್ದ ವಲಸಿಗರ ಗದರ್ ಚಳುವಳಿಯು ಒಂದು. ಬಹುತೇಕ ಪಂಜಾಬ್‌ನಿಂದ ಬಂದಿದ್ದ ಈ ವಲಸಿಗರ ಹೋರಾಟಗಳು ಗದರ್ ಪಕ್ಷದ ಸ್ಥಾಪನೆಗೆ ಎಡೆ ಮಾಡಿತು. ಭಾರತಕ್ಕೆ ಮರಳಿ ಬಂದ ಹಲವು ಗದರ್ ಚಳುವಳಿಗಾರರನ್ನು ಕಮ್ಯುನಿಸ್ಟ್ ಪಕ್ಷದತ್ತ ಸೆಳೆಯಿತು ಮತ್ತು ಬಹುಪಾಲು ಕಿಸಾನ್ ಸಭಾ ಮೂಲಕ ಚಟುವಟಿಕೆಯಲ್ಲಿ ಪಾಲ್ಗೊಂಡರು.

ಇಂತಹುದೇ ಪ್ರಕ್ರಿಯೆಯು ಬ್ರಿಟಿಷ್ ಆಡಳಿತದ ವಿರುದ್ಧ ರಹಸ್ಯ ಗುಂಪುಗಳ ಮೂಲಕ ವ್ಯಕ್ತಿಗತ ಸಶಸ್ತ್ರ ಹೋರಾಟ ನಡೆಸುತ್ತಿದ್ದ ಕ್ರಾಂತಿಕಾರಿ ರಾಷ್ಟ್ರೀಯವಾದಿಗಳನ್ನು ಸೆಳೆಯಿತು. ನಂತರದಲ್ಲಿ ಈ ಬಹುತೇಕ ಕ್ರಾಂತಿಕಾರಿಗಳು ಕಮ್ಯುನಿಸ್ಟ್ ಪಕ್ಷದ ರಾಜೀ ರಹಿತ ವಸಾಹತುಶಾಹಿ ವಿರೋಧಿ ನಿಲುವಿಗೆ ಸೆಳೆಯಲ್ಪಟ್ಟರು. ಭಗತ್‌ಸಿಂಗ್ ಮತ್ತಿತರರ ನೇತೃತ್ವದ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿಯಲ್ಲಿ ವ್ಯಕ್ತವಾದ ಮಾದರಿಯಲ್ಲಿ ಈ ಚಳುವಳಿಗಳಲ್ಲಿ ಹೋರಾಟದ ಹಾದಿಯ ಕುರಿತು ಒಂದು ಸೈದ್ಧಾಂತಿಕ ಘರ್ಷಣೆಯೂ ನಡೆಯಿತು. ಅಂತೆಯೇ ಬಂಗಾಳ, ಪಂಜಾಬ್ ಮತ್ತು ಉತ್ತರ ಭಾರತದ ಕೆಲ ಭಾಗಗಳ ಗುಂಪುಗಳೂ ಸಹ ಕಮ್ಯುನಿಸ್ಟ್ ಪಕ್ಷದತ್ತ ಸೆಳೆಯಲ್ಪಟ್ಟವು.

ಇನ್ನೊಂದು ಪ್ರಮುಖ ಬೆಳವಣಿಗೆಯೆಂದರೆ ಕಾಂಗ್ರೆಸ್ ಸೋಷಿಯಲಿಸ್ಟ್ ಪಕ್ಷದ ಸ್ಥಾಪನೆ. ರಾಷ್ಟ್ರೀಯ ಚಳುವಳಿಯಲ್ಲಿ ಸ್ಥಾಪಿತವಾದ ಒಂದು ಪ್ರಮುಖ ರಾಜಕೀಯ ಪಕ್ಷವಾಗಿ ಕಾಂಗ್ರೆಸ್ ನಾಯಕತ್ವದ ರಾಜಿ ನಡವಳಿಕೆಯಿಂದ ಕಾಂಗ್ರೆಸಿಗರ ಒಂದು ವಿಭಾಗ ಭ್ರಮ ನಿರಸನಗೊಂಡು ಕಾಂಗ್ರೆಸ್ ಸೋಷಿಯಲಿಸ್ಟ್ ಪಕ್ಷವನ್ನು ಸ್ಥಾಪಿಸಿದರು. ಇದರ ಜೊತೆಯಲ್ಲಿಯೇ, ಕಾರ್ಮಿಕ ವರ್ಗದ ನೇತೃತ್ವದಲ್ಲಿ ದುಡಿಯುವ ವರ್ಗವನ್ನು ಸ್ವಾತಂತ್ರ್ಯ ಚಳುವಳಿಯಲ್ಲಿ ಅಣಿನೆರೆಸುವ ಮಹತ್ವವನ್ನು ಅರಿತ ಕಾಂಗ್ರೆಸ್ ಸೋಷಿಯಲಿಸ್ಟ್ ಪಕ್ಷವು ಕಮ್ಯೂನಿಸ್ಟರ ಜತೆ ಸಂಪರ್ಕ ಸಾಧಿಸಿತು. ಆದರೆ ಈ ಎರಡು ಧಾರೆಗಳ ನಡೆಗಳ ನಡುವೆ ಒಂದು ಮೂಲ ವ್ಯತ್ಯಾಸವಿತ್ತು. ಕಾಂಗ್ರೆಸ್ ಸೋಷಿಯಲಿಸ್ಟ್ ಪಕ್ಷವು ಕಾಂಗ್ರೆಸ್ ನ ಒಳಗಿದ್ದುಕೊಂಡೇ ಅದನ್ನು ಒಂದು ನಿಜವಾಗಿ ವಸಾಹತುಶಾಹಿ ವಿರೋಧಿ ಚಳುವಳಿಯನ್ನಾಗಿ ಮಾರ್ಪಡಿಸುವ ಗುರಿ ಹೊಂದಿತ್ತು. ಆದರೆ ಕಮ್ಯುನಿಸ್ಟ್ ಪಕ್ಷವು ಕಾರ್ಮಿಕ ವರ್ಗದ ನೇತೃತ್ವದಲ್ಲಿ ದುಡಿಯುವ ಜನತೆಯನ್ನು ಮುನ್ನಡೆಸಿ, ಅದನ್ನು ಕಾಂಗ್ರೆಸ್‌ನೊಡನೆ ಯಾವುದೇ ಮೂಲಭೂತ ತಿಕ್ಕಾಟವಿಲ್ಲದ ಒಂದು ಸ್ವತಂತ್ರ ರಾಜಕೀಯ ಶಕ್ತಿಯಾಗಿ ಬೆಳೆಸುವ ಉದ್ದೇಶ ಹೊಂದಿತ್ತು. ಕಮ್ಯುನಿಸ್ಟ್ಟರು ಕಾಂಗ್ರೆಸ್ ಮತ್ತು ಕಾಂಗ್ರೆಸ್ ಸೋಷಿಯಲಿಸ್ಟ್ ಪಕ್ಷದೊಳಗೆ ಕೆಲಸ ಮಾಡುವ ಈ ಮಾದರಿ ಮುಂದುವರಿಯಿತು. ಆದರೆ ಅಂತಿಮವಾಗಿ ಪ್ರಮುಖ ಕಾಂಗ್ರೆಸ್ ಸೋಷಿಯಲಿಸ್ಟ್ ಪಕ್ಷದ ಪ್ರಮುಖ ನಾಯಕತ್ವ ಸಹ ಕಮ್ಯುನಿಸ್ಟ್ ಪಕ್ಷದ ಭಾಗವಾಗುವುದರೊಂದಿಗೆ ಇದು ವಿಭಜನೆಗೆ ಎಡೆ ಮಾಡಿತು.

ಕಮ್ಯುನಿಸ್ಟ್ ಪಕ್ಷವು ತನ್ನ ವಿಶಿಷ್ಟ ಗುರಿಯ ಮಹತ್ವವನ್ನು ಗುರುತಿಸಿಕೊಂಡಿದ್ದಷ್ಟೇ ಅಲ್ಲದೆ ಇನ್ನಷ್ಟು ವಿಸ್ತಾರವಾದ ದೇಶಪ್ರೇಮಿ ಜನ ವಿಭಾಗಗಳನ್ನು ಒಳಗೊಳ್ಳಲು ಅನುವಾಗುವಂತೆ ಇತರ ಸಮರಧೀರ ವಸಾಹತುಶಾಹಿ ವಿರೋಧಿ ರಾಜಕೀಯ ರಚನೆಗಳ ಜೊತೆಯಲ್ಲಿಯೂ ಕೆಲಸ ಮಾಡುತ್ತಿತ್ತು.

M N ROYವಿಶಾಲ ತಳಹದಿಯ ಸಾಮೂಹಿಕ ಸಂಘಟನೆಗಳು

1920 ರಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷದ ಸ್ಥಾಪನೆಯ ಜೊತೆಯಲ್ಲಿಯೇ ಕಾರ್ಮಿಕರ ಸಂಘಟನೆಯಾದ ಎಐಟಿಯುಸಿ ಸಹ ಅದೇ ವರ್ಷದಲ್ಲಿ ಸ್ಥಾಪಿತವಾಯಿತು. ಆರಂಭಿಕ ಹಂತಗಳಲ್ಲಿ ಕೆಲವು ಸುಧಾರಣಾವಾದಿ ಪ್ರವೃತ್ತಿಗಳು ಕಂಡು ಬಂದರೂ ಕಾರ್ಮಿಕ ಸಂಘಟನೆಯಲ್ಲಿ ಕಮ್ಯುನಿಸ್ಟ್ರ ಭಾಗವಹಿಸುವಿಕೆಯಿಂದಾಗಿ ಒಂದು ವಿಶಾಲ ತಳಹದಿಯ ಕಾರ್ಮಿಕ ಸಂಘಟನಾ ವೇದಿಕೆ ರಚಿಸಲ್ಪಟ್ಟಿತು.

1930 ರ ದಶಕದಲ್ಲಿ ಬೆಳೆದು ಬರುತ್ತಿದ್ದ ಸಾಮೂಹಿಕ ಹೋರಾಟಗಳಿಂದಾಗಿ ವಿಶಾಲ ತಳಹದಿಯ ಒಂದು ಅಖಿಲ ಭಾರತ ಸಂಘಟನೆಯ ಅಗತ್ಯತೆ ಬಂದಿತು ಮತ್ತು ಅಖಿಲ ಭಾರತ ಕಿಸಾನ್ ಸಭಾ, ಅಖಿಲ ಭಾರತ ವಿದ್ಯಾರ್ಥಿ ಫೆಡರೇಶನ್ ಮತ್ತು ಪ್ರಗತಿಪರ ಬರಹಗಾರರ ಸಂಘಗಳು 1936 ರಲ್ಲಿ ಸ್ಥಾಪಿತಗೊಂಡವು. ಕೆಲವೇ ಸಮಯದಲ್ಲಿ ಈ ವೇದಿಕೆಗಳು ಮತ್ತು ಸಂಘಟನೆಗಳು ಆಯಾ ಜನವಿಭಾಗಗಳವರನ್ನು ಒಗ್ಗೂಡಿಸುವ ಒಂದು ಬಲಿಷ್ಠ ವಾಹನಗಳಾದವು. ಕಮ್ಯುನಿಸ್ಟರು ಇವುಗಳ ನಾಯಕತ್ವ ವಹಿಸಿದರು ಮತ್ತು ಇವುಗಳು ನಿರ್ದಿಷ್ಟ ವರ್ಗ ಮತ್ತು ಸಾಮೂಹಿಕ ವಿಷಯಗಳನ್ನು ಕೈಗೆತ್ತಿಕೊಳ್ಳಲು ಜನರನ್ನು ಅಣಿನೆರೆಸುವ ಬಲಿಷ್ಠ ವಾಹನಗಳಾದವು. ವಿಶಾಲ ಜನವಿಭಾಗಗಳನ್ನು ಅಣಿ ನೆರೆಸುವ ಮೂಲಕ ಈ ವೇದಿಕೆಗಳು/ಸಂಘಟನೆಗಳು ಸ್ವಾತಂತ್ರ್ಯ ಚಳುವಳಿಯನ್ನು ಬಲಪಡಿಸುವ ಪಾತ್ರ ಸಹ ನಿರ್ವಹಿಸಿದವು ಮತ್ತು ಬ್ರಿಟೀಷರ್ ‘ಒಡೆದು ಆಳುವ’ ನೀತಿಗಳ ವಿರುದ್ಧ ರಕ್ಷಣಾ ಕೋಟೆಗಳಾಗಿ ಕಾರ್ಯ ನಿರ್ವಹಿಸಿದವು.

ಯುದ್ಧದ ನಂತರದ ಹೋರಾಟಗಳ ಉಬ್ಬರ

1939-45 ಯುದ್ಧದ ಅವಧಿಯಲ್ಲಿ, ಪಕ್ಷವನ್ನು ಬಹುತೇಕ ಸಲ ನಿಷೇದಿತವಾಗಿದ್ದರೂ, ಕಾರ್ಮಿಕರು, ರೈತರು ಮತ್ತು ಜನಸಮೂಹಗಳ ನಡುವೆ ನಡೆಸಿದ್ದ ನಿರಂತರ ಕೆಲಸದಿಂದಾಗಿ ಕೆಲವು ಪ್ರದೇಶಗಳಲ್ಲಿ ಪಕ್ಷ ಸಂಘಟನೆ ವಿಸ್ತಾರಗೊಂಡಿತು. ಯುದ್ಧದ ನಂತರದ ಸಾಮೂಹಿಕ ಹೋರಾಟಗಳಿಂದಾಗಿ ಭಾರತೀಯ ಕಮ್ಯುನಿಸ್ಟ್ ಪಕ್ಷ ಮತ್ತು ಸಾಮೂಹಿಕ ಸಂಘಟನೆಗಳು ಕೈಗಾರಿಕಾ ಮುಷ್ಕರಗಳು, ಕೃಷಿ ಹೋರಾಟಗಳು ಮತ್ತು ವಿದ್ಯಾರ್ಥಿ ಪ್ರತಿಭಟನೆಗಳಲ್ಲಿ ಗಣನೀಯ ಪಾತ್ರ ವಹಿಸುವಂತಾಯಿತು. ರಿನ್ (ಬ್ರಿಟಿಷ್ ನೌಕಾಸೈನ್ಯ) ದಂಗೆಗೆ ಬೆಂಬಲವಾಗಿ ಮತ್ತು ಐ.ಎನ್.ಎ. ಕೈದಿಗಳನ್ನು ಬಿಡುಗಡೆ ಮಾಡುವಂತೆ ಮಾಡಿದ ರಾಜಕೀಯ ಮಧ್ಯಪ್ರವೇಶಗಳಲ್ಲಿ ಕಮ್ಯುನಿಸ್ಟ್ರು ಪ್ರಮುಖ ಪಾತ್ರ ವಹಿಸಿದ್ದರು. ಇದು ಅಧಿಕಾರದ ಹಸ್ತಾಂತರ ಪ್ರಕ್ರಿಯೆಯನ್ನು ಮತ್ತು ಬ್ರಿಟೀಷರ ನಿರ್ಗಮನವನ್ನು ಚುರುಕುಗೊಳಿಸಿತು.

ಜನರ ಐಕ್ಯತೆ ಮತ್ತು ಪ್ರಜಾಸತ್ತಾತ್ಮಕ ಧರ್ಮನಿರಪೇಕ್ಷ ಗಣತಂತ್ರದ ರಕ್ಷಣೆಯತ್ತ……

ಇಂದು ನಾವು ಎದುರಿಸುತ್ತಿರುವ ಅಪಾಯ ಹಿಂದೆದೂ ಕೇಳರಿಯದ್ದು. ಕಮ್ಯುನಿಸ್ಟ್ಟರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಭಾಗವಹಿಸಲು ಹಾಗೂ ಅಮೂಲ್ಯ ತ್ಯಾಗಗಳನ್ನು ಮಾಡಲು ಸ್ಫೂರ್ತಿಯ ಚಿಲುಮೆಯಾಗಿದ್ದ ಕಣ್ಣೋಟವು, ಒಂದು ಪುರೋಗಾಮಿ ಪ್ರಜಾಸತ್ತಾತ್ಮ ಮತ್ತು ಧರ್ಮ ನಿರಪೇಕ್ಷ ಗಣತಂತ್ರವಾದ ಸ್ವತಂತ್ರ ಭಾರತವನ್ನು ನಿರ್ಮಿಸುವುದಾಗಿತ್ತು. ವಿಪರ್ಯಾಸವೆಂದರೆ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಪಾತ್ರ ನಿರ್ವಹಿಸದೆ ಇದ್ದ ಮತ್ತು ಆ ಐತಿಹಾಸಿಕ ಹೋರಾಟಗಳಲ್ಲಿ ಜನರ ಐಕ್ಯತೆ ಮುರಿಯಲು ಯತ್ನಿಸಿದ ಶಕ್ತಿಗಳು ಇಂದು ಕಮ್ಯುನಿಸ್ಟ್ಟರನ್ನು ತಮ್ಮ ಸಂಚಿನ ವಿರುದ್ಧದ ರಕ್ಷಣಾ ಕೋಟೆಗಳಾಗಿ ಕಾಣುತ್ತಿವೆ. ಹೀಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಕಮ್ಯುನಿಸ್ಟರ ಪಾತ್ರವನ್ನು ದೃಢವಾಗಿ ಸಮರ್ಥಿಸಿಕೊಳ್ಳುವ ಮೂಲಕ ಮತ್ತು ಈ ಧೀಮಂತ ಪರಂಪರೆಯಿಂದ ಹೊರ ಹೊಮ್ಮಿದ ಸಂವಿಧಾನಾತ್ಮಕ ಮೌಲ್ಯಗಳನ್ನು ರಕ್ಷಿಸಿಕೊಳ್ಳುವ ಮೂಲಕ ಕಮ್ಯುನಿಸ್ಟ್ ಪಕ್ಷದ ಸ್ಥಾಪನೆಯ ಶತಮಾನೋತ್ಸವವನ್ನು ಆಚರಿಸಿದರೆ ಮಾತ್ರ ಅದು ಅರ್ಥಪೂರ್ಣವಾಗುತ್ತದೆ.

ಅನುವಾದ: ಶೃಂಶಾನಾ

Leave a Reply

Your email address will not be published. Required fields are marked *