ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಸ್ಮರಣೆ

ಭಾರತದ ಸುಪುತ್ರ, ನಮ್ಮ ಸಂವಿಧಾನ ಶಿಲ್ಪಿ, ಮಹಾನ್ ಮಾನವತಾವಾದಿ ಡಾ. ಬಾಬಸಾಹೇಬ್ ಅವರನ್ನು ನಾವು ವರ್ಷದಲ್ಲಿ ಅನೇಕ ಸಲ ಸ್ಮರಿಸಿ ಗೌರವಿಸುತ್ತೇವೆ. ಏಪ್ರಿಲ್ 14, ಅವರ ಜನ್ಮ ದಿನ, ಡಿಸೆಂಬರ್ 6, ಅವರ ಮಹಾಪರಿನಿರ್ವಾಣ ದಿನ. ಅಲ್ಲದೆ, ನವೆಂಬರ್ 26 ಅವರು ನಮ್ಮ ಗಣರಾಜ್ಯದ ಸಂವಿಧಾನವನ್ನು ಅವರು ಬರೆದು ಪೂರ್ಣಗೊಳಿಸಿದ ದಿನ ಅವರನ್ನು ಸ್ಮರಿಸಬೇಕಾದ ಮಹತ್ವದ ದಿನಗಳು.

1947 ಅಗಸ್ಟ್ 15ರಂದು ಭಾರತ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತು. ನೆಹರು ಅವರ ಸೂಚನೆಯಂತೆ ಡಾ.ಅಂಬೇಡ್ಕರ್‌ರವರು ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದರು. ನಂತರ ಅವರು ಸಂವಿಧಾನ ಸಭೆಯ ಸದಸ್ಯರಲ್ಲಿ ಒಬ್ಬರಾಗಿ ಆಯ್ಕೆಯಾದರು ಮಾತ್ರವಲ್ಲ ಸಂವಿಧಾನ ಕರಡು ರಚನಾ ಸಮಿತಿಯ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡರು. ಡಾ. ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ಸಭೆಯ ಅಧ್ಯಕ್ಷರಾಗಿದ್ದರು. ನಿರಂತರ ಪರಿಶ್ರಮದಿಂದ ಅಂಬೇಡ್ಕರ್‌ರವರು 395 ಕಲಮುಗಳು ಹಾಗೂ 8 ಅಧ್ಯಾಯಗಳನ್ನು ಒಳಗೊಂಡ ಕರಡು ಸಂವಿಧಾನವನ್ನು ರಚಿಸಿದರು. ಸಂವಿಧಾನ ಸಭೆಯು ಈ ನಡುವೆ ಒಟ್ಟು ಮೂರು ಬಾರಿ ಸೇರಿತ್ತು. ನವೆಂಬರ್ 26, 1949ರಂದು ಸಂವಿಧಾನವನ್ನು ಅಂಗೀಕರಿಸಿತು. ಸಭೆಯಲ್ಲಿ ಉಪಸ್ಥಿತರಿದ ಗಣ್ಯರೆಲ್ಲರೂ ಅಂಬೇಡ್ಕರ್ ರವರನ್ನು ಮುಕ್ತ ಕಂಠದಿಂದ ಹೊಗಳಿದರು. ಅವರ ಅಪಾರ ಜ್ಞಾನಕ್ಕೆ ಅವರೆಲ್ಲರೂ ಬೆರಗಾದರು. ಜನವರಿ 26, 1950ರಂದು ಸಂಸತ್ತಿನಲ್ಲಿ ಹರ್ಷೋದ್ಘಾರಗಳ ನಡುವೆ ಭಾರತದ ಸಂವಿಧಾನವನ್ನು ವಿದ್ಯುಕ್ತವಾಗಿ ಸ್ವೀಕರಿಸಲಾಯಿತು. ಅಂದಿನಿಂದ ಭಾರತವನ್ನು ಗಣರಾಜ್ಯ ಎಂದು ಘೋಷಿಸಲಾಯಿತು.

ಭಾರತದ ಸಂವಿಧಾನ 1950 ಜನವರಿ 26ರಂದು ಅಂಗೀಕರಿಸಲ್ಪಟ್ಟದ್ದು, ಆ ದಿನವನ್ನು ಗಣರಾಜ್ಯೋತ್ಸವ ದಿನವೆಂದು ಆಚರಿಸಲಾಗುತ್ತಿರುವುದು ಎಲ್ಲರಿಗೂ ತಿಳಿದವಿಷಯ. ಆದರೆ 26 ನವೆಂಬರ್ 1949ರಂದು ಸಂವಿಧಾನ ಸಭೆಯು ಅದನ್ನು ಅಂಗೀಕರಿಸಿತ್ತು ಎಂಬ ವಿಷಯ ಅನೇಕ ಭಾರತ ಪ್ರಜೆಗಳಿಗೆ ತಿಳಿದಿಲ್ಲ. ಇದನ್ನೇ ಸಂವಿಧಾನ ದಿನವಾಗಿ, ಸಂವಿಧಾನವನ್ನು ರಕ್ಷಿಸುವ ಪಣತೊಡುವ ದಿನ ಎಂದು ಆಚರಿಸಬೇಕಾಗಿದೆ. ಇದೇ ನವೆಂಬರ್ 26ರಂದು ಅನೇಕ ಕಡೆ ಸಂವಿಧಾನ ದಿನವನ್ನು ಆಚರಿಸಿದ್ದು ಗಮನಾರ್ಹವಾಗಿದೆ. ಜನವರಿ 26 ರಂತೆ ನವೆಂಬರ್ 26 ನ್ನು ಸಹ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರನ್ನು ಸ್ಮರಿಸುವ ವಿಶೇಷ ದಿನವಾಗಿದೆ.

ಇಡೀ ದೇಶ ಸಂವಿಧಾನ ರಚನೆಯ ಸಂಭ್ರಮದಲ್ಲಿದ್ದಾಗ ಡಾ||ಬಿ.ಆರ್‌.ಅಂಬೇಡ್ಕರ್ ಹೇಳಿದ ಒಂದು ಮಾತು ಸ್ಮರಿಸಲು ಯೋಗ್ಯವಾಗಿದೆ. ಅವರು ಹೇಳುತ್ತಾರೆ “ಇಂದು ನಾವು ವೈರುಧ್ಯಗಳ ಜೀವನಕ್ಕೆ ಕಾಲಿಡುತ್ತೇವೆ. ಇಲ್ಲಿ ರಾಜಕೀಯ ಸಮಾನತೆ ಇದ್ದರೂ ಸಾಮಾಜಿಕ ಸಮಾನತೆ ಇನ್ನೂ ಬಂದಿರುವುದಿಲ್ಲ” ಅಂದರೆ ಸಾಮಾಜಿಕ ಸಮಾನತೆ ಇಲ್ಲದೆ ರಾಜಕೀಯ ಸ್ವಾತಂತ್ರ್ಯದಿಂದ ಪ್ರಯೋಜನವಿಲ್ಲ.

ಡಾ||ಬಿ.ಆರ್‌.ಅಂಬೇಡ್ಕರ್ ಕಂಡಕನಸು ಇದು. ಅದು ಸಮತಾ ಸಮಾಜದ ಕನಸು. ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಸಾಮಾಜಿಕ ಸ್ವಾತಂತ್ರ್ಯ. ಜಾತಿ ಪದ್ಧತಿ, ಅಸ್ಪೃಶ್ಯತೆ, ತಾರತಮ್ಯ ಇಲ್ಲದ ಸಮಸಮಾಜ. ಅಂದು ನಮ್ಮೆಲ್ಲರ ಕನಸಾಗಬೇಕು. ಅದನ್ನು ಸಾಧಿಸುವುದು ನಮ್ಮ ಬದುಕಿನ ಗುರಿಯಾಗಬೇಕು. ತುಳಿತಕ್ಕೆ ಒಳಗಾದ ದೀನ ದಲಿತರೆಲ್ಲರೂ ಸ್ವಾಭಿಮಾನದಿಂದ ಬದುಕುವಂತಾಗಬೇಕು. ಅದಕ್ಕಾಗಿ ಡಾ.ಅಂಬೇಡ್ಕರ್ ನೀಡಿದ ನಮ್ಮ ಸಂವಿಧಾನವನ್ನು ಉಳಿಸಬೇಕು, ಅದನ್ನು ಮನುವಾದಿಗಳ ದಾಳಿಯಿಂದ ರಕ್ಷಿಸಬೇಕು.

Leave a Reply

Your email address will not be published. Required fields are marked *