ಕೃಷಿ ಕಾಯ್ದೆಗಳನ್ನು ಕುರಿತ ಏಕಪಕ್ಷೀಯ ಆದೇಶ

ಸುಪ್ರಿಂ ಕೋರ್ಟ್ ಮೂರು ಕೃಷಿ ಕಾಯ್ದೆಗಳ ಅನುಷ್ಠಾನದ ಮೇಲೆ ತಡೆ ಹಾಕಿರುವ ಆದೇಶ ಅದು ಸರಕಾರವನ್ನೇ ಅವಲಂಬಿಸಿ ನೇಮಿಸಿದಂತಿರುವಪರಿಣಿತರ ಸಮಿತಿಯ ಎರಡು ತಿಂಗಳಲ್ಲಿ ಪೂರ್ವನಿರ್ಧಾರಿತ ವರದಿ ಸಲ್ಲಿಕೆಯೊಂದಿಗೆ ಕೊನೆಗೊಳ್ಳುತ್ತದೆ. ರೈತರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟು ಮನೆಗೆ ಹೋಗಲು ಆದೇಶ ಸಾಕಾಗುತ್ತದೆ ಎಂದೂ ಸುಪ್ರಿಂ ಕೋರ್ಟ್ ಸ್ಪಷ್ಟಪಡಿಸಿದೆ. ಅಲ್ಲದೆ ಖಾಲಿಸ್ತಾನಿಗಳು ನುಸುಳಿದ್ದಾರೆಂಬ ನೆವವೊಡ್ಡಿ ಪ್ರತಿಭಟನೆಯನ್ನು ದಮನ ಮಾಡಬಹುದೆಂಬ ಸೂಚನೆಯೂ ಕೋರ್ಟಿನ ನಿಲುವಿನಿಂದ ಸರಕಾರಕ್ಕೆ ಸಿಕ್ಕಿದೆ ಎಂದು ಸಿಪಿಐ(ಎಂ) ವಾರಪತ್ರಿಕೆಪೀಪಲ್ಸ್ ಡೆಮಾಕ್ರಸಿಯ ಸಂಪಾದಕೀಯ ಲೇಖನ ವಿಶ್ಲೇಷಿಸಿದೆ.

ಮೂರು ಕೃಷಿ ಕಾಯ್ದೆಗಳು ಮತ್ತು ಅವುಗಳ ವಿರುದ್ಧ ರೈತರ ಹೋರಾಟವನ್ನು ಕುರಿತ ಸರ್ವೋಚ್ಚ ನ್ಯಾಯಾಲಯದ ಆದೇಶ ಸರಿಯಾಗಿ ಗ್ರಹಿಸಿರದ ಮತ್ತು ಏಕಪಕ್ಷೀಯ ಆದೇಶವಾಗಿದೆ.

ಮುಖ್ಯ ನ್ಯಾಯಾಧೀಶ ಎಸ್.ಎ.ಬೊಬ್ಡೆ ನೇತೃತ್ವದ ಮೂವರು ನ್ಯಾಯಾಧೀಶರುಗಳಿರುವ ಪೀಠ ಈ ಮೂರು ಕೃಷಿ ಕಾಯ್ದೆಗಳ ಅನುಷ್ಠಾನವನ್ನು ಮುಂದಿನ ಆದೇಶಗಳ ವರೆಗೆ ತಡೆ ಹಿಡಿದಿದೆ. ಇದು ಕೆಲವು ವಿಭಾಗಗಳನ್ನು ತಪ್ಪು ದಾರಿಗೆಳೆದು ಸುಪ್ರಿಂ ಕೋರ್ಟಿನ ಮಧ್ಯಪ್ರವೇಶವನ್ನು ಅವು ಪ್ರಶಂಸಿಸುವಂತೆ ದಾರಿ ಮಾಡಿದೆ. ವಾಸ್ತವವಾಗಿ, ಈ ತಡೆ ಆದೇಶ ‘ಪರಿಣಿತರ ಸಮಿತಿ’ಯ ರಚನೆಯೊಂದಿಗೆ ತಳಕು ಹಾಕಿಕೊಂಡಿದೆಯೇ ಹೊರತು ಈ ನ್ಯಾಯಪೀಠದ ಮುಂದಿದ್ದ ಅರ್ಜಿಗಳಲ್ಲಿ ಎತ್ತಿದ ಮುಖ್ಯ ಪ್ರಶ್ನೆಗಳು ಅಥವ ಹೋರಾಟದಲ್ಲಿ ರೈತರು ಎತ್ತುವ ಪ್ರಶ್ನೆಗಳ ಬಗ್ಗೆ ಯಾವುದೇ ಮುಂದಿನ ವಿಚಾರಣೆಯೊಂದಿಗೆ ಅಲ್ಲ. ಈ ‘ಪರಿಣಿತರ ಸಮಿತಿ’ಗೆ ಎರಡು ತಿಂಗಳೊಳಗೆ ವರದಿ ನೀಡುವಂತೆ ನಿರ್ದೇಶನ ನೀಡಲಾಗಿದೆ.

ಅರ್ಜಿದಾರರಲ್ಲಿ ಯಾರೂ ಈ ಸಮಿತಿಯನ್ನು ರಚಿಸಬೇಕೆಂದು ಕೇಳಿರಲಿಲ್ಲ. ಅಲ್ಲದೆ, ರೈತರ ಪ್ರತಿನಿಧಿಗಳು ಸರಕಾರದೊಡನೆ ಮಾತುಕತೆಗಳಲ್ಲಿ ಸಮಿತಿ ರಚನೆಯ ಪ್ರಸ್ತಾವವನ್ನು ತಿರಸ್ಕರಿಸಿದ್ದರು.

ನ್ಯಾಯಾಲಯ ಸಮಿತಿಗೆ ನಾಲ್ಕು ವ್ಯಕ್ತಿಗಳನ್ನು ನೇಮಿಸಿದೆ. ಇವರೆಲ್ಲರೂ ಈ ಮೂರು ಕೃಷಿ ಕಾಯ್ದೆಗಳನ್ನು ಬೆಂಬಲಿಸಿರುವವರು ಎಂಬುದು ಎಲ್ಲರಿಗೂ ಗೊತ್ತಿದೆ. ಅಶೋಕ ಗುಲಾಟಿ ಕೃಷಿಯಲ್ಲಿ ನವ-ಉದಾರವಾದಿ ಧೋರಣೆಗಳ ಒಬ್ಬ ಪ್ರಮುಖ ಪ್ರತಿಪಾದಕರೆಂದೇ ಪರಿಚಿತರಾಗಿದ್ದಾರೆ. ಸುಪ್ರಿಂ ಕೋರ್ಟ್ ಈ ಸಮಿತಿಗೆ ಪರಿಣಿತರನ್ನು ನೇಮಿಸುವಲ್ಲಿ ಸರಕಾರವನ್ನೇ ಅವಲಂಬಿಸಿದಂತೆ ಕಾಣುತ್ತದೆ. ಪರಿಣಿತರ ಸಮಿತಿಯಲ್ಲಿರುವ ಇಬ್ಬರು ರೈತ ಪ್ರತಿನಿಧಿಗಳು ಕೂಡ ಕೃಷಿ ಕಾಯ್ದೆಗಳ ಬೆಂಬಲಿಗರು. ಸಮಿತಿಯಲ್ಲಿ ತಮ್ಮನ್ನು ಯಾರು ಪ್ರತಿನಿಧಿಸಬೇಕು ಎಂದು ರೈತರ ಸಂಘಟನೆಗಳೊಡನೆ ಸಮಾಲೋಚನೆ ನಡೆಸಬೇಕು ಎಂದು ನ್ಯಾಯಲಯಕ್ಕೆ ಅನಿಸಿಲ್ಲ.

trust them
ಅವರನ್ನು ನಂಬಿ!-ವ್ಯಂಗ್ಯಚಿತ್ರ: ಸತೀಶ ಆಚಾರ್ಯ

ಇಂತಹ ಒಂದು ಸಮಿತಿಯ ವರದಿ ಪೂರ್ವನಿರ್ಧಾರಿತವಾಗಿರುತ್ತದೆ. ಎರಡು ತಿಂಗಳ ನಂತರ ವರದಿ ಸಲ್ಲಿಸಿದಾಗ, ನ್ಯಾಯಾಲಯ ತನ್ನದೇ ಸಮಿತಿಯ ಶಿಫಾರಸುಗಳನ್ನು ಅನಿವಾರ್ಯವಾಗಿಯೇ ಸ್ವೀಕರಿಸುತ್ತದೆ, ಮತ್ತು ಅದರೊಂದಿಗೆ ಕಾಯ್ದೆಗಳ ಜಾರಿಯ ಮೇಲಿನ ತಡೆ ಆದೇಶ ಕೊನೆಗೊಳ್ಳುತ್ತದೆ.

ಈ ಆದೇಶ “ನಾವು ಒಂದು ಶಾಂತಿಯುತ ಪ್ರತಿಭಟನೆಯ ಉಸಿರಡಗಿಸಲಿಕ್ಕಿಲ್ಲವಾದರೂ, ಕೃಷಿ ಕಾಯ್ದೆಗಳ ಅನುಷ್ಠಾನದ ಮೇಲೆ ತಡೆಯ ಈ ಅಸಾಮಾನ್ಯ ಆದೇಶವನ್ನು ಇಂತಹ ಪ್ರತಿಭಟನೆಯ ಉದ್ದೇಶದ ಸಾಧನೆಯೆಂದು ಸದ್ಯಕ್ಕಾದರೂ ಕಾಣಲಾಗುತ್ತದೆ ಎಂದು ಭಾವಿಸುತ್ತೇವೆ. ಇದು ರೈತರ ಸಂಘಟನೆಗಳು ತಮ್ಮ ಸದಸ್ಯರು, ಅವರ ಜೀವಗಳ ಮತ್ತು ಆರೋಗ್ಯದ ರಕ್ಷಣೆಗಾಗಿಯೂ ಮತ್ತು ಇತರರ ಜೀವಗಳ ಮತ್ತು ಆಸ್ತಿಗಳ ರಕ್ಷಣೆಗಾಗಿಯೂ ಕೂಡ ತಮ್ಮ ಜೀವನೋಪಾಯಗಳಿಗೆ ಮರಳಬೇಕೆಂದು ಮನವರಿಕೆ ಮಾಡಿಸುವಂತೆ ಪ್ರೋತ್ಸಾಹಿಸುತ್ತದೆ”ಎನ್ನುತ್ತ ಕೊನೆಗೊಳ್ಳುತ್ತದೆ.

ಹೀಗೆ, ರೈತರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟು ಮನೆಗೆ ಹೋಗಲು ಈ ಆದೇಶ ಸಾಕಾಗುತ್ತದೆ ಎಂದು ಸುಪ್ರಿಂ ಕೋರ್ಟ್ ಸ್ಪಷ್ಟಪಡಿಸಿದೆ. ವಿಚಾರಣೆಯ ವೇಳೆಯಲ್ಲಿ, ಅಟಾರ್ನಿ ಜನರಲ್ ಈ ಚಳುವಳಿಯೊಳಕ್ಕೆ ಖಾಲಿಸ್ತಾನೀ ಮಂದಿ ನುಸುಳಿದ್ದಾರೆ ಎಂಬ ಅಸಾಮಾನ್ಯ ಮಾತುಗಳನ್ನಾಡಿದ್ದಾರೆ. ನ್ಯಾಯಾಲಯ ಇದಕ್ಕೆ ಸ್ಪಂದಿಸುತ್ತ ಇದರ ವಿವರಗಳೊಂದಿಗೆ ಒಂದು ಅಫಿಡವಿಟ್ ಸಲ್ಲಿಸುವಂತೆ ಹೇಳಿದೆ, ಈ ಮೂಲಕ ಅದನ್ನು ಪರಿಗಣನೆಗೆ ತೆಗೆದುಕೊಂಡಿದೆ.

ನ್ಯಾಯಾಲಯದ ಈ ನಿಲುವನ್ನು ಸರಕಾರ ಪ್ರತಿಭಟನಾಕಾರರ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಈ ಹೋರಾಟದಲ್ಲಿ ರಾಷ್ಟ್ರ-ವಿರೋಧಿ ಖಾಲಿಸ್ತಾನೀ ಮಂದಿ ಸಕ್ರಿಯರಾಗಿದ್ದಾರೆ ಎಂಬ ನೆವವೊಡ್ಡಿ ಅದನ್ನು ದಮನ ಮಾಡಲು ಕೊಟ್ಟಿರುವ ಸೂಚನೆ ಎಂದು ತೆಗೆದುಕೊಳ್ಳಬಹುದು.

ರೈತರ ಸಂಘಟನೆಗಳು ನ್ಯಾಯಾಲಯ ರಚಿಸಿರುವ “ಪರಿಣಿತರ ಸಮಿತಿ”ಯನ್ನು ತಿರಸ್ಕರಿಸಿರುವುದು ಮತ್ತು ಈ ಕಾಯ್ದೆಗಳನ್ನು ರದ್ದು ಮಾಡಬೇಕೆಂಬ ತಮ್ಮ ಹೋರಾಟವನ್ನು ಮುಂದುವರೆಸುವ ನಿರ್ಧಾರವನ್ನು ಪುನರುಚ್ಛರಿಸಿರುವುದು ಸರಿಯಾಗಿಯೇ ಇದೆ. ಮುಂಬರುವ ದಿನಗಳು ಈ ಹೋರಾಟಕ್ಕೆ ನಿರ್ಣಾಯಕವಾಗಲಿವೆಯಾದ್ದರಿಂದ ಎಲ್ಲ ಪ್ರಜಾಪ್ರಭುತ್ವವಾದೀ ಶಕ್ತಿಗಳು ಇದಕ್ಕೆ ಪೂರ್ಣ ಬೆಂಬಲ ಮತ್ತು ಸೌಹಾರ್ದವನ್ನು ಅಣಿನೆರೆಸಬೇಕಾಗಿದೆ.

Leave a Reply

Your email address will not be published. Required fields are marked *