ಧರಣಿ ಪ್ರತಿಭಟನೆಗೆ ಅವಕಾಶ ನೀಡದಿರುವುದು ಕೋವಿಡ್ ತಡೆಗೋ, ರಾಜಕೀಯ ಹಿತಾಸಕ್ತಿಗೋ : ಸಿಪಿಐ(ಎಂ) ಪ್ರಶ್ನೆ

ಬೆಂಗಳೂರು : ಬೆಂಗಳೂರು ಮತ್ತು ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಎರಡನೇ ಅಲೆಯ ಸೋಂಕಿತರ ಸಂಖ್ಯೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕೈಗೊಂಡಿರುವ ಧರಣಿ ಹಾಗೂ ಪ್ರತಿಭಟನೆಗಳಿಗೆ ಅವಕಾಶ ನೀಡದಿರುವ ಕ್ರಮವು ಕೋವಿಡ್ ತಡೆಗೋ ಅಥವಾ ತನ್ನ ರಾಜಕೀಯ ಹಿತಾಸಕ್ತಿಗೋ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಸಿಪಿಐ(ಎಂ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ರಾಜ್ಯ ಸರ್ಕಾರವನ್ನು ಪ್ರಶ್ನಿಸಿವೆ.

ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯ ಸೋಂಕಿತರ ಸಂಖ್ಯೆ ದಿನಂಪ್ರತಿ ಹೆಚ್ಚುತ್ತಿದೆ. ಅದರಲ್ಲೂ ಪ್ರಮುಖವಾಗಿ ಬೆಂಗಳೂರಿನಲ್ಲಿ ದಿನಂಪ್ರತಿ ಸೋಂಕಿತರ ಸಂಖ್ಯೆಯು 17೦೦ ಅನ್ನು ದಾಟುತ್ತಿದೆ. ಸೋಮವಾರದ ಸಂಖ್ಯೆಗಳ ಅನುಗುಣವಾಗಿ ಬೆಂಗಳೂರು ಒಂದರಲ್ಲೆ 1742 ಸೋಂಕಿತರು ಹೆಚ್ಚಾಗಿದ್ದು ಒಟ್ಟು 16,259 ಸಕ್ರಿಯ ಪ್ರಕರಣಗಳು ಬೆಂಗಳೂರಿನಲ್ಲಿವೆ. ಸೋಂಕಿತರಿಗೆ ಸರಿಯಾದಂತಹ ಹಾಸಿಗೆಯಾಗಲಿ, ಐಸಿಯು ಆಗಲಿ ಸಿಗದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷ ಸ್ಥಾಪಿಸಿದ್ದ ಕೋವಿಡ್ ವಾರ್ರೂಂ ಗಳನ್ನು ವ್ಯಾಕ್ಸಿನೇಷನ್ ವಾರ್ರೂಂಗಳಾಗಿ ಮಾರ್ಪಡಿಸಿರುವ ಕಾರಣ ಆಸ್ಪತ್ರೆ, ಚಿಕಿತ್ಸೆ, ಆಂಬುಲೆನ್ಸ್ ಮತ್ತು ಬೆಡ್ಗಳಿಗಾಗಿ ಸೋಂಕಿತರು ಪರದಾಡುತ್ತಿದ್ದಾರೆ. ಇಂತಹ ಒಂದು ಸಂದರ್ಭದಲ್ಲಿ ಕೋವಿಡ್ ಬೆಡ್ಗಳನ್ನು ಹೆಚ್ಚಿಸಲು ವಾರ್ರೂಂ ಅನ್ನು ಪುನರ್ ಪ್ರಾರಂಭಿಸಲು ಕ್ರಮ ಕೈಗೊಳ್ಳುವ ಬದಲು ಕೇವಲ ಧರಣಿ, ಪ್ರತಿಭಟನೆಗಳಿಗೆ ಅವಕಾಶ ನೀಡದಿರುವುದು ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರಗಳ ವಿರುದ್ಧ ಹೆಚ್ಚುತ್ತಿರುವ  ಜನರ  ಪ್ರತಿಭಟನೆಗಳನ್ನು ತಡೆಯುವ ರಾಜಕೀಯ ಹಿತಾಸಕ್ತಿಗಾಗಿ ರಾಜ್ಯ ಬಿಜೆಪಿ ಸರ್ಕಾರವು ಕೈಗೊಂಡಿರುವ ಕ್ರಮ ಇದಾಗಿದೆ ಎಂದು  ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಕಾರ್ಯದರ್ಶಿ  ಕೆ.ಎನ್.ಉಮೇಶ್ ಆರೋಪಿಸಿದ್ದಾರೆ.

ಮಹಾನಗರದಲ್ಲಿ ಪೀಕ್ ಅವರ್ಗಳಲ್ಲಿ ಬಿಎಂಟಿಸಿ ಬಸ್ಗಳ ಕೊರತೆಯಿಂದಾಗಿ ಓಡಾಡುತ್ತಿರುವ ಬಸ್ಗಳು  ತುಂಬಿತುಳುಕುತ್ತಿವೆ. ಯಾವುದೇ ಅಂತರವಾಗಲಿ ಮುನ್ನೆಚ್ಚರಿಕೆಯಾಗಲಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಪಬ್ ಒಂದರಲ್ಲೇ ಇತ್ತೀಚೆಗೆ 16 ಮಂದಿ ಸೋಂಕಿತರು ಕಂಡುಬಂದಿದ್ದರೂ ಬಾರ್ ಅಂಡ್ ರೆಸ್ಟೋರೆಂಟ್, ಪಬ್ಗಳಿಗೆ ಹಾಗೂ ಇತರೆ ಜನಸಾಂದ್ರತೆಯ ಪ್ರದೇಶಗಳಲ್ಲಿ ಯಾವುದೇ ನಿಯಂತ್ರಣವಿಲ್ಲದೆ ಜನರ ಚಲನವಲನಕ್ಕೆ ಅನುವುಗೊಳಿಸಿ ಕೇವಲ ಧರಣಿ ಪ್ರತಿಭಟನೆಗಳನ್ನು ನಿಷೇಧಿಸಿದರೆ ಕೋವಿಡ್ ಎರಡನೇ ಅಲೆಯನ್ನು ತಡೆಯಲು ಸಾಧ್ಯವೇ ಎಂಬುದು ಜನತೆಯ ಪ್ರಶ್ನೆಯಾಗಿದೆ. ಮುಂಬರುವ ಉಪಚುನಾವಣೆಗಳ ಹಿನ್ನೆಲೆಯಲ್ಲಿ ತನ್ನ ರಾಜಕೀಯ ಹಿತಾಸಕ್ತಿಗಾಗಿ ಬಿಗಿ ಕ್ರಮಗಳನ್ನು ವಿಧಿಸಲು ತಯಾರಿಲ್ಲದ ರಾಜ್ಯ ಬಿಜೆಪಿ ಸರ್ಕಾರವು ಕೇವಲ ಕಣ್ಣೊರೆಸುವ ತಂತ್ರವಾಗಿ 15 ದಿನ ಕಟ್ಟೆಚ್ಚರದ ಮಾತುಗಳನ್ನು ಆಡುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಐಸಿಯು ಒದಗಿಸಲು ಸುಶ್ರೂಷಕರು ಹಾಗೂ ವೈದ್ಯರಿಗೆ ಅಗತ್ಯ ಪಿಪಿಇ ಕಿಟ್ಗಳನ್ನು ಒದಗಿಸಲು ಕ್ರಮವಹಿಸದೆ ಇಂತಹ ಬೂಟಾಟಿಕೆ ಮಾತುಗಳು ಜನರನ್ನು ಬಲಿಕೊಡಲಿವೆ ಹಾಗಾಗಿ  ರಾಜ್ಯ ಸರ್ಕಾರ ಕೂಡಲೇ ಅಗತ್ಯ ಕ್ರಮವಹಿಸಬೇಕೆಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *