ಈ ಗಂಭೀರ ಅರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಒಂದು ಸಾರ್ವತ್ರಿಕ ಲಸಿಕೀಕರಣ ಕಾರ್ಯಕ್ರಮ ಅಗತ್ಯ

ನಿನ್ನೆ ಕೇಂದ್ರ ಸರಕಾರ ಪ್ರಕಟಿಸಿರುವ ಲಸಿಕೆ ಧೋರಣೆಯು ಮತ್ತೊಮ್ಮೆ ತಾವು ಸೃಷ್ಟಿಸಿದ  ಅಗಾಧ ಸ್ವರೂಪದ  ಅರೋಗ್ಯ ಬಿಕ್ಕಟ್ಟಿನಿಂದ ಹೊಣೆ ಜಾರಿಸಿಕೊಳ್ಳುವ ಅದರ ಪ್ರಯತ್ನವಾಗಿದೆ, ಸಮಸ್ತ ಜವಾಬ್ದಾರಿಯನ್ನು ರಾಜ್ಯ ಸರಕಾರಗಳ ಮೇಲೆ ದಾಟಿಸುವ ಒಂದು ಪ್ರಯತ್ನ ನಡೆದಿದೆ  ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೋ ಟೀಕಿಸಿದೆ.

ಈ ಧೋರಣೆ ಲಸಿಕೆಗಳ ಪೂರೈಕೆಯನ್ನು ಹೆಚ್ಚಿಸದೆಯೇ, ಅವುಗಳ ಮಾರಾಟವನ್ನು ಉದಾರೀಕರಿಸುವ ಮತ್ತು ಬೆಲೆಗಳನ್ನು ನಿಯಂತ್ರಣ-ಮುಕ್ತ ಗೊಳಿಸುವ ಒಂದು ಪ್ರಯತ್ನವೇ ಆಗಿದೆ. ಕೇಂದ್ರ ಸರಕಾರ ಒಂದು ವರ್ಷದಿಂದ ಲಸಿಕೆ ಪೂರೈಕೆಗಳನ್ನು ಸಾಕಷ್ಟು ಮತ್ತು ಅಗತ್ಯ ಪ್ರಮಾಣದಲ್ಲಿ  ಹೆಚ್ಚಿಸಲು ಏನೂ ಮಾಡದೇ ವಿಫಲವಾಗಿತ್ತು. ಇದು ಈ ಜೀವರಕ್ಷಕ ಲಸಿಕೆಯನ್ನು ಕೋಟ್ಯಂತರ ಜನಗಳ ಕೈಗೆಟುಕದಂತೆ ಮಾಡಿ ಅವರನ್ನು ಇದರಿಂದ ಹೊರಗಿಡುವ ಸೂತ್ರವಾಗಿದೆ.

ಅಲ್ಲದೆ, ಇದುವರೆಗೆ ಲಸಿಕೆಗಳು ರಾಜ್ಯ ಸರಕಾರಗಳಿಗೆ ಉಚಿತವಾಗಿದ್ದವು. ಈಗ ರಾಜ್ಯಗಳು ಅವನ್ನು ಯಾವುದೇ ಬೆಲೆ ನಿಯಂತ್ರಣವಿಲ್ಲದ ಮುಕ್ತ ಮಾರುಕಟ್ಟೆ’ಯಿಂದ “ಖರೀದಿ”ಸಬೇಕು. ಲಸಿಕೆ ಒದಗಿಸುವವವರು, ಈ ಧೋರಣೆಯ ಪ್ರಕಾರ, ತಮ್ಮ ‘ಸ್ವಯಂ ನಿರ್ಧಾರಿತ ಲಸಿಕೆ ಬೆಲೆ’ಯನ್ನು ಘೋಷಿಸುತ್ತಾರೆ. ಇದು ಕೂಡ ನಮ್ಮ ಬಹುಪಾಲು ಜನಗಳನ್ನು ಹೊರಗಿಡುವುದು ಖಂಡಿತ ಎಂದು ಪೊಲಿಟ್ ಬ್ಯುರೋ ಹೇಳಿದೆ.

ಅಲ್ಲದೆ, ಈ ಧೋರಣೆ ದೊಡ್ಡಪ್ರಮಾಣದಲ್ಲಿ ಕಾಳಸಂತೆ ಮತ್ತು ಕಳ್ಳ ದಾಸ್ತಾನನ್ನು ಖಂಡಿತಾ ಹುಟ್ಟು ಹಾಕುತ್ತದೆ ಎಂದು ಅದು ಎಚ್ಚರಿಸಿದೆ.

ರಾಜ್ಯ ಸರಕಾರಗಳಿಗೆ ಕೇಂದ್ರೀಯ ಖಜಾನೆಯಿಂದ ಲಸಿಕೆಗಳಿಗೆ ನಿಧಿ  ಒದಗಿಸಬೇಕು.

ಒಂದು ಸಾಮೂಹಿಕ ಲಸಿಕೀಕರಣ ಕಾರ್ಯಕ್ರಮ ಉಚಿತವಾಗಿರಬೇಕು ಮತ್ತು ಸಾರ್ವತ್ರಿಕವಾಗಿರಬೇಕು. ಇದು ಸ್ವತಂತ್ರ  ಭಾರತದ ಪರಂಪರೆ ಮತ್ತು ಆಚರಣೆಯಾಗಿದೆ ಎಂದು ನೆನಪಿಸಿರುವ ಸಿಪಿಐ(ಎಂ) ಪೊಲಿಟ್ ಬ್ಯುರೋ ಕೇಂದ್ರದ ಈ ತಾರತಮ್ಯಪೂರ್ಣ, ಸಮತ್ವ-ವಿರೋಧಿ ಮತ್ತು ಅಡ್ಡಾದಿಡ್ಡಿ ಯೋಜನೆಯ ಗುರಿ ತನ್ನನ್ನು ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಿಕೊಳ್ಳುವುದೇ ಆಗಿದೆ ಎಂದು ಬಲವಾಗಿ ಖಂಡಿಸಿದೆ. ಇದು ಈ ಮಹಾಸೋಂಕನ್ನು ಶಮನಗೊಳಿಸುವುದಿಲ್ಲ, ಅಥವಾ, ನಮ್ಮ ಜನಗಳು ಎದುರಿಸುತ್ತಿರುವ ಅಪಾರವಾದ ಸಾರ್ವಜನಿಕ ಅರೋಗ್ಯ ತುರ್ತು ಪರಿಸ್ಥಿತಿಯನ್ನು ಪರಿಹರಿಸುವುದಿಲ್ಲ. ತದ್ವಿರುದ್ಧವಾಗಿ, ಈ ತಾರತಮ್ಯದ ಧೋರಣೆ ಭಾರತವನ್ನು ಮಹಾಸೋಂಕಿನ ಪ್ರವಾಹಕ್ಕೆ ಮತ್ತಷ್ಟು ಈಡು ಮಾಡುತ್ತದೆ.

ಒಂದು ಸಾಮೂಹಿಕ ಸಾರ್ವತ್ರಿಕ ಲಸಿಕೀಕರಣ ಕಾರ್ಯಕ್ರಮ ಮಾತ್ರವೇ ಈ ತುರ್ತು ಪರಿಸ್ಥಿತಿಯ ಅಗತ್ಯಗಳನ್ನು ಈಡೇರಿಸಬಲ್ಲುದು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೋ ಹೇಳಿದೆ.

Leave a Reply

Your email address will not be published. Required fields are marked *