ಆಹಾರ ಭದ್ರತೆಯ ಮೇಲಿನ ದಾಳಿಯನ್ನು ಹಿಮ್ಮೆಟ್ಟಿಸಬೇಕು

BRINDA KARAT
ಬೃಂದಾ ಕಾರಟ್

ಕಡ್ಡಾಯ ವ್ಯಾಪ್ತಿಯನ್ನು ಇಳಿಸುವ ಮತ್ತು ಬೆಲೆಗಳನ್ನು ಏರಿಸುವ ಮೂಲಕ ಆಹಾರ ಭದ್ರತೆಯನ್ನು ತೀವ್ರವಾಗಿ ದುರ್ಬಲಗೊಳಿಸುವ ನೀತಿಯನ್ನು ʻನೀತಿ ಆಯೋಗʼ ಶಿಫಾರಸು ಮಾಡಿದೆ ಎಂದು ವರದಿಯಾಗಿದೆ. ಮಾತೃತ್ವ ಸಂಬಂಧಿತ ಅನುಕೂಲಗಳು, ಮಧ್ಯಾಹ್ನದ ಬಿಸಿಯೂಟ, ಮಕ್ಕಳ ಪೌಷ್ಠಿಕ ಆಹಾರ ಪೂರೈಕೆಗಳ ಜಾರಿಯಲ್ಲಿ NFSAಯ ಹಲವು ಉಲ್ಲಂಘನೆಗಳನ್ನು ಈಗಾಗಲೇ ಮಾಡಲಾಗುತ್ತಿದೆ. ಹಾಗೆಯೇ ಅಂತ್ಯೋದಯ ಅನ್ನ ಕಾರ್ಡುಗಳ ಫಲಾನುಭವಿಗಳ ಕಡಿತ ಮತ್ತು ಪಡಿತರ ಚೀಟಿಗಳ ಬೇಕಾ ಬಿಟ್ಟಿ ರದ್ದತಿ ಸಹ ಆಹಾರ ಭದ್ರತೆಯನ್ನು ದುರ್ಬಲಗೊಳಿಸುತ್ತಿವೆ. NFSAಯು ಕೆಲವು ಗಂಭೀರ ನ್ಯೂನತೆಗಳನ್ನು ಸಹ ಹೊಂದಿದೆ. ಹಾಗಾಗಿ ಮುಂದಿನ ದಿನಗಳಲ್ಲಿ NFSA ಉಳಿಸುವುದು ಮತ್ತು ಅದರ ನ್ಯೂನತೆಗಳನ್ನು ಹೋಗಲಾಡಿಸುವ ಮೂಲಕ ಅದನ್ನು ಬಲಗೊಳಿಸುವುದು ಆಹಾರ ಭದ್ರತೆಯನ್ನು ಸಾಧಿಸಲು ನಿರ್ಣಾಯಕ ಹಕ್ಕೊತ್ತಾಯವಾಗಲಿದೆ. NFSA ಮತ್ತು ಆಹಾರ ಭದ್ರತೆಯ ಮೇಲಿನ ಈ ದಾಳಿಯು ಆಹಾರ ಧಾನ್ಯಗಳ ಉತ್ಪಾದನೆ ಮತ್ತು ಖರೀದಿಯ ನೀತಿಗೆ ನೇರವಾದ ಅಂತಸ್ಸಂಬಂಧವನ್ನು ಹೊಂದಿದೆ. ಈ ದಾಳಿಗಳು ಮೂರು ರೈತ-ವಿರೋಧಿ ಕೃಷಿ ಕಾನೂನುಗಳಿಗೆ ಒಡನಾಡಿಯಾಗಿವೆ.

ಮಾರ್ಚ್ 1, 2020ರಂದು ಭಾರತ 9.2 ಕೋಟಿ ಟನ್ನುಗಳಷ್ಟು ಆಹಾರ ಧಾನ್ಯಗಳ(ಅಕ್ಕಿಯಾಗಿಸದ ಭತ್ತ ಸೇರಿಸಿ)ದಾಸ್ತಾನನ್ನು ಹೊಂದಿದೆ. ಇದು ಅಧಿಕೃತವಾಗಿ ಆವಶ್ಯಕ ಆಹಾರ ದಾಸ್ತಾನಿಗಿಂತ ಮೂರು ಪಟ್ಟು ಹೆಚ್ಚಿದೆ. FCI ನ ವಾರ್ಷಿಕ ವರದಿಯ ಪ್ರಕಾರ, 2019-20 ರಲ್ಲಿ ಆಹಾರ ಧಾನ್ಯಗಳ ದಾಸ್ತಾನು ಸ್ವಲ್ಪ ಕಡಿಮೆಯಿದ್ದಾಗ, ದಾಸ್ತಾನು ನಿರ್ವಹಣೆಯ ವೆಚ್ಚ 12 ಸಾವಿರ ಕೋಟಿ ರೂಪಾಯಿ ಆಗಿದೆ. 107 ದೇಶಗಳ ಜಾಗತಿಕ ಹಸಿವು ಸೂಚ್ಯಂಕದಲ್ಲಿ 92ನೇ ಸ್ಥಾನದಲ್ಲಿರುವ ದೇಶದಲ್ಲಿ ಸಾಕಷ್ಟು ಆಹಾರಧಾನ್ಯಗಳ ಲಭ್ಯವಿರುವಾಗ, ಅಪೌಷ್ಠಿಕತೆಯಿಂದ ಬಳಲುತ್ತಿರುವ ಜನಸಂಖ್ಯೆಗೆ ಪರಿಹಾರ ಕೊಡಲು ಆಹಾರ ಧಾನ್ಯಗಳ ವಿತರಣೆಯ ಪರಿಮಾಣ ಮತ್ತು ವ್ಯಾಪ್ತಿಯನ್ನು ವಿಸ್ತರಿಸುವುದು ನೈತಿಕ ಆಹಾರ ಭದ್ರತಾ ನೀತಿಯಾಗಿರಬೇಕಿತ್ತು. ಆದರೆ ಸರಕಾರವು ಇದಕ್ಕೆ ವಿರುದ್ಧವಾಗಿ ತನ್ನ ಯೋಜನೆಗಳನ್ನು ರೂಪಿಸುತ್ತಿದೆ.

ಆಹಾರ ಭದ್ರತೆಯ ಕಡ್ಡಾಯ ವ್ಯಾಪ್ತಿಯನ್ನು ಗ್ರಾಮೀಣ ಜನಸಂಖ್ಯೆಯ ಶೇಕಡ 75 ರಿಂದ 60 ಮತ್ತು ನಗರ ಜನಸಂಖ್ಯೆಯ ವ್ಯಾಪ್ತಿಯನ್ನು ಶೇಕಡಾ 50 ರಿಂದ 40ಕ್ಕೆ ಇಳಿಸುವ ಮೂಲಕ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA)ಯನ್ನು ತೀವ್ರವಾಗಿ ದುರ್ಬಲಗೊಳಿಸುವ ನೀತಿಯನ್ನು ಆಯೋಗ ಶಿಫಾರಸು ಮಾಡಿದೆ ಎಂದು ವರದಿಯಾಗಿದೆ.  ಇದರ ಅರ್ಥ ಸುಮಾರು 10 ಕೋಟಿ ಫಲಾನುಭವಿಗಳ ಕಡಿತವಾಗಿದೆ ಎಂದು. 2011 ರಿಂದ 2021 ವರ್ಷಗಳಲ್ಲಿನ ಜನಸಂಖ್ಯೆಯ ಹೆಚ್ಚಳದ ಪ್ರಕಾರ ಕನಿಷ್ಠ 9 ಕೋಟಿ ಫಲಾನುಭವಿಗಳನ್ನು ಸೇರಿಸಬೇಕಾಗಿತ್ತು. ಆದರೆ ಅದಾಗಿಲ್ಲ ಎಂಬುದನ್ನು ನೀತಿ ಆಯೋಗವೇ ಒಪ್ಪಿಕೊಂಡಿದೆ. ಜನಸಂಖ್ಯೆಯಲ್ಲಿ ಏರಿಕೆಯಾದರೂ ಸರಕಾರವು ಅದೇ 2011ರ ಹಳೆಯ ಅಂಕಿಅಂಶಗಳನ್ನು ಬಳಸಿಕೊಳ್ಳುತ್ತಿತ್ತು. ಬರುವ ವರ್ಷಾಂತ್ಯದಲ್ಲಿ 2021ರ ಜನಗಣತಿಯು ಲಭ್ಯವಾಗುವುದರಿಂದ ಜನಸಂಖ್ಯೆಯ ಹೆಚ್ಚಳವನ್ನು ಇನ್ನು ಮೇಲೆ ಕಡೆಗಣಿಸುವಂತಿಲ್ಲ. ಆದ್ದರಿಂದ ಕಾನೂನನ್ನು ಬದಲಾಯಿಸುವ ಮೂಲಕ ಮತ್ತು ವ್ಯಾಪ್ತಿಯನ್ನು ಕಡಿಮೆ ಮಾಡುವ ಮೂಲಕ ಅದನ್ನು ಸರಿದೂಗಿಸಲು ಸರಕಾರ ಬಯಸುತ್ತಿದೆ.

ಆಹಾರ ಭದ್ರತೆಗೆ ಸಂಬಂಧಿಸಿದಂತೆ ಈ ಕಾನೂನಿನ ಬದಲಾವಣೆ ಒಂದೇ ಅಲ್ಲ. 2014ರಲ್ಲಿ ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳುಗಳಲ್ಲಿ, ಭಾರತದ ಆಹಾರ ನಿಗಮದ ಕಾರ್ಯವೈಖರಿಗೆ ಮತ್ತು ಸಂಬಂಧಿಸಿದ ಇತರ ವಿಷಯಗಳ ಬಗ್ಗೆ ಶಿಫಾರಸ್ಸು ಮಾಡಲು ಮೋದಿ ಸರಕಾರ ಬಿಜೆಪಿ ಮುಖಂಡರು ಮತ್ತು ಮಾಜಿ ಕೇಂದ್ರ ಸಚಿವ ಶಾಂತಕುಮಾರ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಅದರಿಂದ ನಿರೀಕ್ಷಿಸಿದ್ದನ್ನು ಅಂದರೆ ” NFSA ಯ ಮರುಪರಿಶೀಲನೆಯ ಅಗತ್ಯವಿದೆ’ಎಂಬ ಶಿಫಾರಸನ್ನು ಮಾಡಿತು. ವ್ಯಾಪ್ತಿಯನ್ನು ಶೇ. 67ರಿಂದ ಶೇ.40ಕ್ಕೆ ಇಳಿಸಬೇಕು ಮತ್ತು ಕೇಂದ್ರ ಹಂಚಿಕೆ (CIP) ಬೆಲೆಗಳನ್ನು ಹೆಚ್ಚಿಸಬೇಕೆಂದು ಶಿಫಾರಸು ಮಾಡುವ ಮೂಲಕ ಅದು ಕಾಯ್ದೆಯ ಬುಡವನ್ನೇ ಕಡಿದಿದೆ. 2021ರ ಆರ್ಥಿಕ ಸಮೀಕ್ಷೆಯಲ್ಲಿ CIP ಯನ್ನು ಹೆಚ್ಚಿಸಬೇಕು ಎನ್ನುವಲ್ಲಿಈ ಶಿಫಾರಸು ಪ್ರತಿಧ್ವನಿಸಿತು. ಫಲಾನುಭವಿಗಳ ಸಂಖ್ಯೆ ಕಡಿತಗೊಳಿಸುವುದರಿಂದ ಆಹಾರದ ಸಬ್ಸಿಡಿಯನ್ನು 49 ಸಾವಿರ ಕೋಟಿ ರೂ.ರಷ್ಟು ಕಡಿತಗೊಳಿಸಬಹುದು ಎಂದು ನೀತಿ ಆಯೋಗ ಲೆಕ್ಕಾಚಾರ ಮಾಡಿದೆ. ಬೆಲೆಗಳನ್ನು ಹೆಚ್ಚಿಸುವ ಆರ್ಥಿಕ ಸಮೀಕ್ಷೆಯ ಸಲಹೆಯೂ ಸಬ್ಸಿಡಿಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಕಾರ್ಪೊರೇಟ್ ಕಂಪನಿಗಳ ಸಬ್ಸಿಡಿಯನ್ನು ಮುಂದುವರಿಸಿ ವಿಸ್ತರಿಸಲು ಅನುವಾಗುವಂತೆ, ಸಾಮಾನ್ಯ ಜನರ ಸಬ್ಸಿಡಿಗಳನ್ನು ಕಡಿತಗೊಳಿಸುವ ಮೋದಿ ಸರಕಾರದ ಸಂಕಲ್ಪದಿಂದಾಗಿ, ಭಾರತದ ಆಹಾರ ಭದ್ರತೆಯು ದುರ್ಬಲಗೊಳ್ಳುವ ಸಾಧ್ಯತೆಯೇ ಹೆಚ್ಚು. ಇದು ಸಾರ್ವಜನಿಕ ವಿತರಣೆ ವ್ಯವಸ್ಥೆಯ ವ್ಯಾಪಿಯನ್ನು ಕಡಿತಗೊಳಿಸುವುದರಲ್ಲಿ ಮತ್ತು ಬೆಲೆಗಳನ್ನು ಹೆಚ್ಚಿಸುವುದರಲ್ಲಿ ಪ್ರತಿಬಿಂಬಿತವಾಗುತ್ತದೆ. NFSA ಮೇಲಿನ ಈ ದಾಳಿಯು ಆಹಾರ ಧಾನ್ಯಗಳ ಉತ್ಪಾದನೆ ಮತ್ತು ಖರೀದಿಯ ನೀತಿಗೆ ನೇರವಾದ ಅಂತಸ್ಸಂಬಂಧವನ್ನು ಹೊಂದಿದೆ. NFSA ಮೇಲಿನ ದಾಳಿಯು ಮೂರು ರೈತ ವಿರೋಧಿ ಕೃಷಿ ಕಾನೂನುಗಳಿಗೆ ಒಡನಾಡಿಯಾಗಿದೆ.

ನಿಸ್ಸಂದೇಹವಾಗಿ NFSAಯಲ್ಲೇ ಸಾರ್ವಜನಿಕ ವಿತರಣೆಯ ಸಾರ್ವತ್ರಿಕ ವ್ಯವಸ್ಥೆಗೆ ಬದಲಾಗಿ ಅಪಖ್ಯಾತಿಗೆ ಒಳಗಾದ ಎಪಿಎಲ್ ಮತ್ತು ಬಿಪಿಎಲ್ ವ್ಯವಸ್ಥೆಯನ್ನು ವಿಭಿನ್ನ ಹೆಸರುಗಳಲ್ಲಿ (ಆದ್ಯತೆ ಮತ್ತು ಅಂತ್ಯೋದಯ ಅನ್ನ ಯೋಜನೆ – AAY) ಹೆಸರಿನಡಿಯಲ್ಲಿ ಮುಂದುವರಿಸುವುದು ಸೇರಿದಂತೆ ಕೆಲವು ಗಂಭೀರ ನ್ಯೂನತೆಗಳನ್ನು ಹೊಂದಿದೆ. NFSA ಕ್ಕಿಂತ ಮೊದಲಿನ ಬಿ.ಪಿ.ಎಲ್ ಕಾರ್ಡ್ ಬಳಕೆದಾರರಿಗೆ ಕನಿಷ್ಠ 35 ಕೆ.ಜಿ. ಆಹಾರ ಧಾನ್ಯಗಳ ಹಂಚಿಕೆ ಆಗಿರುವುದನ್ನು ಮುಂದುವರಿಸದೆ, ಅದನ್ನು ಪ್ರತಿ ವ್ಯಕ್ತಿಗೆ 5 ಕೆ.ಜಿ.ಗೆ ಮಿತಿಗೊಳಿಸಲಾಗಿದೆ. 2013ರಲ್ಲಿ ಸುಮಾರು 81.35 ಕೋಟಿ ಫಲಾನುಭವಿಗಳು ಇದ್ದರು (ಮೂಲ dfpd.gov.in). ಈಗ ಅದು 79.26 ಕೋಟಿ ಆಗಿದೆ (ಮೂಲ nfsa.gov.in march 2021). ಎಪಿಎಲ್ ನಿಂದ ಅಲ್ಪ ಲಾಭ ಪಡೆದ ಜನಸಂಖ್ಯೆಯ ಒಂದು ಭಾಗವನ್ನು ಈಗ ಸಂಪೂರ್ಣವಾಗಿ ವ್ಯವಸ್ಥೆಯಿಂದ ಹೊರಗಿಡಲಾಗಿದೆ. ಮುಂದಿನ ದಿನಗಳಲ್ಲಿ NFSA ಉಳಿಸುವುದು ಮತ್ತು ಅದರ ನ್ಯೂನತೆಗಳನ್ನು ಹೋಗಲಾಡಿಸುವ ಮೂಲಕ ಅದನ್ನು ಬಲಗೊಳಿಸುವುದು ನಿರ್ಣಾಯಕ ಹಕ್ಕೊತ್ತಾಯವಾಗಲಿದೆ.

ಈ ಲೇಖನ ಇದಕ್ಕೆ ಸಂಬಂಧಿಸಿದ ವಿಷಯಗಳನ್ನು ಪರಿಶೀಲಿಸುವ ಲೇಖನ.

anganwadi-kidsNFSA ಯ ಉಲ್ಲಂಘನೆ

NFSA ಯ ಕೆಲವು ನಿಬಂಧನೆಗಳನ್ನು ಈಗಾಗಲೇ ಉಲ್ಲಂಘಿಸಲಾಗುತ್ತಿದೆ. ಸೆಕ್ಷನ್ 4ರ  ಅಡಿಯಲ್ಲಿ “ಪ್ರತಿ ಗರ್ಭಿಣಿ ಮಹಿಳೆ ಮತ್ತು ಹಾಲುಣಿಸುವ ತಾಯಿಗೆ, ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ನಂತರದ 6 ತಿಂಗಳವರೆಗೆ ಉಚಿತ ಆಹಾರದ ಹಕ್ಕು ಇದೆ. ಮತ್ತು ಅವರಿಗೆ ಆರು ಸಾವಿರ ರೂಪಾಯಿಗಳ ನಗದು ಸಹಾಯಧನವನ್ನು ಕೊಡಬೇಕು.” ಈ ಕಾಯ್ದೆಯನ್ನು 2017ರ ವರೆಗೆ ಜಾರಿ ಮಾಡಿರಲಿಲ್ಲ ಮತ್ತು ನಂತರ ಯಾವುದೇ ರೀತಿಯ ತಿದ್ದುಪಡಿ ಇಲ್ಲದೆ  ಕಾನೂನನ್ನು ಮೊಟಕುಗೊಳಿಸಲಾಯಿತು. ನಗದು ಸಹಾಯಧನವನ್ನು ಐದು ಸಾವಿರ ರೂಪಾಯಿಗೆ ಕಡಿತಗೊಳಿಸುವುದಲ್ಲದೇ, ಕೇವಲ ಮೊದಲ ಜೀವಂತ ಮಗುವಿಗೆ ಮಾತ್ರ ಇದು ಅನ್ವಯಿಸುತ್ತದೆ ಎಂಬ ಕಾನೂನುಬಾಹಿರವಾಗಿ ಹೇರಿದ ಶರತ್ತಿನಿಂದಾಗಿ  ಕನಿಷ್ಠ 57% ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಈ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಮೊದಲ ಜೀವಂತ ಶಿಶುವನ್ನು ಹೊಂದಿದ ಮಹಿಳೆಯರು ಶೇಕಡಾ 43 ರಷ್ಟು ಇರುವುದರಿಂದ ಅವರಿಗೆ ಮಾತ್ರ ಈ ಹಕ್ಕು ದೊರಕಿದೆ. ಹೀಗೆ ಬಹುಪಾಲು ಮಹಿಳೆಯರು ಈ ಕಾಯ್ದೆಯ ಲಾಭ ಪಡೆಯುವ ಹಕ್ಕನ್ನು ನಿರಾಕರಿಸಲಾಗಿದೆ.

ಇದೇ ರೀತಿ NFSAಯು ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ (MDM) ಹಕ್ಕನ್ನು ನೀಡಿದೆ. ವಾಸ್ತವವಾಗಿ ಬೆಲೆ ಏರಿಕೆ ಆಗುತ್ತಿದ್ದರೂ ಬಿಸಿ ಊಟಕ್ಕಾಗಿ ಬಜೆಟಿನಲ್ಲಿ ಅನುದಾನ ಕಡಿಮೆಯಾಗುತ್ತಿದೆ. 2021-2022ರ ಬಜೆಟಿನಲ್ಲಿ ಬಿಸಿಊಟದ ಅನುದಾನವನ್ನು ರೂ. 12,900 ಕೋಟಿಯಿಂದ ರೂ. 11,500 ಕೋಟಿಗೆ ಇಳಿಸಲಾಗಿದೆ. ಇದು ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಹಂತದ ಸುಮಾರು 12 ಕೋಟಿ ಶಾಲಾ ಮಕ್ಕಳಿಗೆ ಒದಗಿಸುವ ಆಹಾರದ ಗುಣಮಟ್ಟ ಮತ್ತು ಪ್ರಮಾಣದ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಇದು NFSA ನ ಬಿಸಿಯೂಟದ ಕಡ್ಡಾಯ ಪೌಷ್ಟಿಕಾಂಶದ ಕಾನೂನನ್ನು ಉಲ್ಲಂಘಿಸುತ್ತದೆ. ಆರು ತಿಂಗಳಿಂದ ಆರು ವರ್ಷದ ಮಕ್ಕಳು “ವಯಸ್ಸಿಗೆ ಬೇಕಾದ ಪೌಷ್ಟಿಕ ಆಹಾರವನ್ನು ಸ್ಥಳೀಯ ಅಂಗನವಾಡಿಗಳ ಮೂಲಕ ಪಡೆಯಲು ಅರ್ಹರಾಗಿರುತ್ತಾರೆ”. ಆದರೆ ಅಂಗನವಾಡಿಗಳಿಗೆ ಆಹಾರದ ಸರಬರಾಜು ಕಡಿಮೆ ಮಾಡಲಾಗಿದೆ. ಇದರಿಂದ ಪೌಷ್ಟಿಕ ಆಹಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.

ಆದ್ದರಿಂದ ಮಹಿಳೆಯರಿಗೆ NFSA ಕಡ್ಡಾಯಗೊಳಿಸಿದ ಮಾತೃತ್ವ ಸಂಬಂಧಿತ ನಗದು ಪ್ರಯೋಜನಗಳನ್ನು ಜಾರಿಗೆ ತರುವುದು ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರಕ್ಕಾಗಿ NFSA ನ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಲು ಮಧ್ಯಾಹ್ನದ ಬಿಸಿಯೂಟದ ಯೋಜನೆಗೆ ಬಜೆಟ್ ಹಂಚಿಕೆ ಹೆಚ್ಚಿಸುವುದು ಪ್ರಮುಖ ಮತ್ತು ತುರ್ತು ಬೇಡಿಕೆಯಾಗಬೇಕಿದೆ.  ಮಹಿಳೆಯರ ಮತ್ತು ಮಕ್ಕಳ ಪೌಷ್ಟಿಕಾಂಶ ಸಂಬಂಧಿತ ಯೋಜನೆಗಳು ಜನರಿಗೆ ಮುಟ್ಟಲು ಅಂಗನವಾಡಿ ಕೇಂದ್ರಗಳು ಪ್ರಮುಖವಾಗಿರುವುದರಿಂದ ಅವುಗಳಿಗೆ ಅಗತ್ಯ ಬಜೆಟ್ ಅನುದಾನದ ಹಂಚಿಕೆಯು, NFSA ಕಾಯಿದೆಯ ಅನುಷ್ಠಾನಕ್ಕಾಗಿ ಒಂದು ನಿರ್ಣಾಯಕ ಅಂಶವಾಗಿದೆ.

ಅಂತ್ಯೋದಯ ಅನ್ನ ಕಾರ್ಡ್

ಅಂತ್ಯೋದಯ ಅನ್ನ ಯೋಜನೆ (AAY) ಕಾರ್ಡ್ ಹೊಂದಿರುವವರು ಕೇಂದ್ರ ಹಂಚಿಕೆ (CIP) ಬೆಲೆಯಲ್ಲಿ 35 ಕೆಜಿ ಆಹಾರ ಧಾನ್ಯಗಳನ್ನು ಪಡೆಯಬಹುದು. ಅದರಲ್ಲಿ ಒಂದು ಕೆಜಿ ಗೋಧಿಗೆ ₹2 ಮತ್ತು ಅಕ್ಕಿಗೆ ಮೂರು ರೂಪಾಯಿ ದಂತೆ ಪಡೆಯಬಹುದು. NFSA ನ ಸೆಕ್ಷನ್ 3(1) ರ ಅಡಿಯಲ್ಲಿ AAYನ ಕುಟುಂಬಗಳ ಸಂಖ್ಯೆಯನ್ನು ಕೇಂದ್ರ ಸರಕಾರವೇ ನಿರ್ಧರಿಸುತ್ತದೆ. AAY ಕಾರ್ಡುಗಳ ಅರ್ಹತೆ ಪಡೆಯಲು AAY ನಿರ್ದಿಷ್ಟವಾದ ಮಾನದಂಡಗಳನ್ನು ನಿಖರವಾಗಿ ಹೇಳುತ್ತದೆ. AAY ನಲ್ಲಿ ಭೂಹೀನ ಕೃಷಿ ಕಾರ್ಮಿಕರು, ದಿನಗೂಲಿ ಕಾರ್ಮಿಕರು, ವಿಧವೆಯರ ನೇತೃತ್ವದ ಕುಟುಂಬಗಳು, ಒಂಟಿ ಮಹಿಳೆಯರು, ಅಂಗವಿಕಲರು, ವಿಶೇಷವಾಗಿ ದುರ್ಬಲರಾದ ಬುಡಕಟ್ಟು ಗುಂಪುಗಳು (PVTG) ಸೇರಿದ್ದಾರೆ. ದಿನದಿಂದ ದಿನಕ್ಕೆ AAYಗೆ ಸೇರುವಂತಹ ಸಾಮಾಜಿಕ ಗುಂಪುಗಳು ಹೆಚ್ಚಾಗುತ್ತಿವೆ. ಆದರೆ 2005 ರಿಂದ AAY ಕುಟುಂಬಗಳ ಸಂಖ್ಯೆ 2.5 ಕೋಟಿಗೆ ಸ್ಥಗಿತಗೊಂಡಿದೆ.

ಮಾರ್ಚ್ 2015 ರಲ್ಲಿ, NFSAನ ಗಂಭೀರ ಉಲ್ಲಂಘನೆ ಮಾಡುವ “ವಲಸೆ, ಸಾಮಾಜಿಕ-ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ, ಸಾವು ಇತ್ಯಾದಿಗಳ ಕಾರಣದಿಂದಾಗಿ AAY ಕುಟುಂಬಗಳು ತಮ್ಮ ಅರ್ಹತೆ ಕಳೆದುಕೊಂಡಾಗ, ಅಷ್ಟರ ಮಟ್ಟಿಗೆ ಅಂತ್ಯೋದಯ ಕುಟುಂಬಗಳ ಸಂಖ್ಯೆ ಇಳಿಸಲಾಗುತ್ತದೆ” ಎಂದು ಮೋದಿ ಸರ್ಕಾರವು ಸುತ್ತೋಲೆಯನ್ನು ಹೊರಡಿಸಿತು. ಆದರೆ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ದುಸ್ಥಿತಿ ಆದವರ ಗತಿಯೇನು? ಅವರನ್ನು ಮತ್ತೆ AAY ನಲ್ಲಿ ಸೇರಿಸಲಾಗುವುದೆ? ರಾಜ್ಯಗಳು ಅಂತ್ಯೋದಯ ಕುಟುಂಬಗಳನ್ನು ಗುರುತಿಸುವಂತಿಲ್ಲ ಎನ್ನುವುದನ್ನೂ ಸುತ್ತೋಲೆ ಹೇಳುತ್ತದೆ. 2013ರಿಂದ ಸುಮಾರು ಹದಿನೈದು ಲಕ್ಷ ಕುಟುಂಬಗಳು ಕಡಿಮೆಯಾಗಿವೆ. ಅಂದರೆ ಸುತ್ತೋಲೆಯ ಪರಿಣಾಮದಿಂದ AAY ಕುಟುಂಬಗಳು 2.5 ಕೋಟಿಯಿಂದ 2.35 ಕೋಟಿಗೆ ಇಳಿದಿದೆ. ಈ ಕ್ರೂರ ಮತ್ತು ನೀತಿಗೆಟ್ಟ ಯೋಜನೆಗಳ ಇತ್ತೀಚಿನ ಉದಾಹರಣೆ ಎಂದರೆ, ಇಂತಹ ಮಹಾಸೋಂಕಿನ ಕೆಟ್ಟ ಸಮಯದಲ್ಲಿ AAY ಫಲಾನುಭವಿಗಳ ಸಂಖ್ಯೆ ಇಳಿಮುಖವಾಗುತ್ತಿರುವುದು. ಅತ್ಯಂತ ಸಂಕಟ ವರ್ಷವಾದ 2020ರಲ್ಲಿ ಸುಮಾರು 3.79 ಲಕ್ಷ AAY ಕಾರ್ಡುಗಳನ್ನು ತೆಗೆದುಹಾಕಲಾಗಿದೆ. ಸತತ ಮೂರು ತಿಂಗಳವರೆಗೆ ತಮ್ಮ ಪಡಿತರವನ್ನು ತೆಗೆದುಕೊಳ್ಳಲು ಸಾಧ್ಯವಾಗದ ಕಾರಣ ಸುಮಾರು 71,982 AAY ಕುಟುಂಬಗಳನ್ನು “ಮೂಕ ಪಡಿತರಚೀಟಿ ಹೊಂದಿದವರು” ಎಂದು ಗುರುತಿಸಲಾಗಿದೆ. ಈ ಕುಟುಂಬಗಳು ಪಡಿತರ ತೆಗೆದುಕೊಳ್ಳದೆ ಇರುವುದಕ್ಕೆ ಕಾರಣವನ್ನು ವಿಶ್ಲೇಷಿಸದಿರುವುದರಿಂದ ಇವರನ್ನು ನಕಲಿ ಕಾರ್ಡ್ ಹೊಂದಿದವರು ಎಂದು ವ್ಯಾಖ್ಯಾನಿಸುವ ಅಪಾಯವೂ ಇದೆ. ಮಹಾಸೋಂಕಿನ ಈ ಒಂದು ವರ್ಷದಲ್ಲಿ ಸುಮಾರು 90,000 AAY ಫಲಾನುಭವಿಗಳ ನಿವ್ವಳ (ಸೇರ್ಪಡೆ ಮತ್ತು ರದ್ದತಿಗಳೆರಡನ್ನು ಪರಿಗಣಿಸಿ) ಕುಸಿತ ಕಂಡುಬಂದಿದೆ (ಮೂಲ nfsa.gov.in).

ಇವೆಲ್ಲದರ ಮಧ್ಯೆ ಮೋದಿ ಸರ್ಕಾರ ವಲಸೆ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡುವುದಾಗಿ ಹೆಮ್ಮೆಪಡುತ್ತಿದ್ದರೆ, ಇತ್ತ AAY ಅಡಿಯಲ್ಲಿ ತಿಂಗಳಿಗೆ 35 ಕೆಜಿ ಧಾನ್ಯ ಪಡೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇಂತಹ ಸಮಯದಲ್ಲಿ NFSA ನ ಕಾಯ್ದೆ ಉಲ್ಲಂಘಿಸುವ ಮಾರ್ಚ್ 2015ರ ಆದೇಶವನ್ನು ರದ್ದು ಪಡಿಸುವುದು ಮತ್ತು AAY ಮಾರ್ಗಸೂಚಿಗಳ ಅಡಿಯಲ್ಲಿ ಬರುವ ಎಲ್ಲಾ ವಿಭಾಗಗಳನ್ನು ಸೇರಿಸುವುದು ಒಂದು ಪ್ರಮುಖ ಬೇಡಿಕೆಯಾಗಿದೆ.

“ಆದ್ಯತೆಯ” ಕುಟುಂಬಗಳಿಗೆ ಸಂಬಂಧಿಸಿದಂತೆ, ಮಹಾಸೋಂಕಿನ ಸಮಯದಲ್ಲಿ ವಲಸೆ ಹೋದ 8 ಕೋಟಿ ವಲಸಿಗರಿಗೆ ಪಡಿತರ ಚೀಟಿ ಮತ್ತು ಉಚಿತ ದವಸಧಾನ್ಯಗಳನ್ನು ನೀಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. 8 ಕೋಟಿ ವಲಸಿಗರಲ್ಲಿ ಕೇವಲ 1.49 ಕೋಟಿ ಫಲಾನುಭವಿಗಳನ್ನು ಆದ್ಯತೆಯ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಅಂಕಿ-ಅಂಶಗಳು ಹೇಳುತ್ತವೆ. ಆದರೆ ಆಶ್ಚರ್ಯಕರ ಸಂಗತಿ ಎಂದರೆ ಇದೇ ಅವಧಿಯಲ್ಲಿ 51 ಲಕ್ಷ ಫಲಾನುಭವಿಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ವಾಸ್ತವದಲ್ಲಿ ನೋಡುವುದಾದರೆ ಒಟ್ಟು ಫಲಾನುಭವಿಗಳು ಹೆಚ್ಚಾಗಿರುವುದು ಒಂದು ಕೋಟಿಗಿಂತ ಕಡಿಮೆ ಇದೆ.

mid-day-meal5_660_072413125015ಪಡಿತರ ಚೀಟಿಗಳ ರದ್ದತಿ ಮತ್ತು ಷರತ್ತುಗಳು

ಮೂರು ಕೋಟಿ ಪಡಿತರ ಚೀಟಿಗಳ ರದ್ದತಿಯ ವಿರುದ್ಧದ ಸಾರ್ವಜನಿಕ ಹಿತಾಶಕ್ತಿ ಅರ್ಜಿ (ಪಿ.ಐ.ಎಲ್) ನ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ “ಇದು ಬಹಳ ಗಂಭೀರವಾದ ವಿಷಯ” ಎಂದು ಪ್ರತಿಕ್ರಿಯಿಸಿ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿತ್ತು. ರದ್ದಾದ ಪಡಿತರ ಚೀಟಿಗಳ ಸಂಖ್ಯೆಯ ಕುರಿತು ಸರಕಾರವೇ ನೀಡಿದ ಹೇಳಿಕೆಗಳು ವಿರೋಧಾಭಾಸದಿಂದ ಕೂಡಿವೆ. ಫೆಬ್ರುವರಿ 2017ರಲ್ಲಿ ಪ್ರಧಾನಮಂತ್ರಿಯವರು ಲೋಕಸಭೆಯಲ್ಲಿ, “ತಂತ್ರಜ್ಞಾನದ ಬಳಕೆ ಮತ್ತು ಆಧಾರ್ ಕಾರ್ಡ್ ಅನ್ನು ಪಡಿತರ ಚೀಟಿಯೊಂದಿಗೆ ಸೇರಿಸುವುದು ಎಷ್ಟು ಸಫಲವಾಗಿದೆಯೆಂದರೆ, ಅದರ ಫಲವಾಗಿ 3.95 ಕೋಟಿ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ” ಎಂದು ಹೇಳಿದರು. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಹಿಂದುಸ್ತಾನ್ ಟೈಮ್ಸ್ ಆರ್.ಟಿ.ಐ ಅಡಿಯಲ್ಲಿ ಅರ್ಜಿ ಸಲ್ಲಿಸಿದಾಗ ತಿಳಿದುಬಂದ ಸತ್ಯವೆಂದರೆ ಪ್ರಧಾನಮಂತ್ರಿಯವರ ಈ ಹೇಳಿಕೆಗೆ ಪೂರಕವಾಗುವಂತಹ  ಯಾವುದೇ ರೀತಿಯ ಮಾಹಿತಿ ರಾಜ್ಯಗಳಿಂದ ಬಂದಿಲ್ಲ. ಇಷ್ಟೆಲ್ಲದರ ನಡುವೆ ಪ್ರಧಾನಿಯವರು ಹೇಳಿಕೆಯಿಂದ ಒಂದು ಅಂಶ ಸ್ಪಷ್ಟವಾಗಿತ್ತು. ಅವರ ಪ್ರಕಾರ ಪಡಿತರ ಚೀಟಿಗಳ ಡಿಜಿಟಲ್ ರದ್ಧತಿಯ ಕೆಲಸ ಸರಿಯಾದದು ಮತ್ತು ಅದೇ ಸರಿಯಾದ ಮಾರ್ಗ. ಪ್ರಧಾನಮಂತ್ರಿಯವರ ಈ ಹೇಳಿಕೆಯ ನಂತರದ ನಾಲ್ಕು ವರ್ಷಗಳಲ್ಲಿ ಪಡಿತರ ಚೀಟಿಗಳ ರದ್ಧತಿಯ ಸಂಖ್ಯೆ ವಾಸ್ತವವಾಗಿ ನಾಲ್ಕು ಕೋಟಿಯನ್ನು ಮೀರಿದೆ.

ಲೋಕಸಭೆಯಲ್ಲಿನ ಪ್ರಶ್ನೆಗೆ (ಪ್ರಶ್ನೆ ಸಂಖ್ಯೆ 632, ಫೆಬ್ರುವರಿ 6, 2018) ಉತ್ತರಿಸುತ್ತ “2013-2017ರ ಅವಧಿಯಲ್ಲಿ ಒಟ್ಟು 2.75 ಕೋಟಿ ನಕಲಿ/ಅನರ್ಹ ಪಡಿತರ ಚೀಟಿಗಳನ್ನು ತೆಗೆಯಲಾಗಿದೆ/ರದ್ದುಪಡಿಸಲಾಗಿದೆ. ಇದರಿಂದ 17,500 ಕೋಟಿ ರೂ. ಹಣ ಉಳಿತಾಯ ಮಾಡಲಾಗಿದೆ” ಎಂದು ಹೇಳಲಾಗಿದೆ. ಆಹಾರ ಸಚಿವಾಲಯದ ಸ್ಥಾಯಿ ಸಮಿತಿಯ ಎರಡನೆಯ ವರದಿಯ(ಡಿಸೆಂಬರ್ 2019) ಪ್ರಕಾರ 2016-2019ರ ನಡುವೆ 1.49 ಕೋಟಿ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. ಒಟ್ಟಾರೆಯಾಗಿ ಈ ಎಲ್ಲಾ ಅಂಕಿ ಅಂಶಗಳನ್ನು ನೋಡಿದರೆ 2014ರಿಂದ ಕೇಂದ್ರದಲ್ಲಿ ಮೋದಿ ಸರಕಾರದ ವರ್ಷಗಳಲ್ಲಿ ಮತ್ತು ಬಿಜೆಪಿಯು ಈ ಅವಧಿಯಲ್ಲಿ ಅನೇಕ ದೊಡ್ಡ ರಾಜ್ಯಗಳಲ್ಲಿ ಕೆಲ ಕಾಲವಾದರೂ ಅಧಿಕಾರದಲ್ಲಿ ಇದ್ದ ಅವಧಿಯಲ್ಲಿ ಒಟ್ಟು ನಾಲ್ಕು ಕೋಟಿ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ.

ಇಲ್ಲಿ ಮುಖ್ಯವಾದ ವಿಷಯವೆಂದರೆ, ಎಲ್ಲ ಪಡಿತರ ಚೀಟಿಗಳನ್ನು ಯಾವುದೇ ಭೌತಿಕ ಪರಿಶೀಲನೆ ಇಲ್ಲದೆ ರದ್ದುಪಡಿಸಲಾಗಿದೆ. ಹೀಗೆ ಪರಿಶೀಲನೆ ಇಲ್ಲದೆ ರದ್ದು ಮಾಡಿದ ಚೀಟಿಗಳಲ್ಲಿ ನಿಜವಾದ ಫಲಾನುಭವಿಗಳ ಪಡಿತರ ಚೀಟಿಗಳ ರದ್ದತಿಗೆ ಭಾರೀ ಅವಕಾಶ ಮಾಡಿಕೊಟ್ಟಿದೆ. ಭಾರಿ ಪ್ರಮಾಣದಲ್ಲಿ ಪಡಿತರ ಚೀಟಿಗಳ ರದ್ದತಿ ಆಹಾರ ಭದ್ರತೆಯ ಹಕ್ಕಿನ ಮೇಲೆ ಆಕ್ರಮಣ ಮಾಡಿದಂತಾಗುತ್ತದೆ. ಒಂದೆಡೆ ಹೊಸ ಫಲಾನುಭವಿಗಳನ್ನು ಸೇರಿಸಲು ಸರ್ಕಾರ ನಿರಾಕರಿಸಿದೆ. ಮತ್ತೊಂದೆಡೆ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಅಳವಡಿಸಿಕೊಂಡ ವ್ಯವಸ್ಥೆಯು ಬೇಕಾಬಿಟ್ಟಿಯಾಗಿದೆ. ಪಡಿತರ ಚೀಟಿಯನ್ನು ರದ್ದುಗೊಳಿಸಲಾದ ಒಂದು ಕುಟುಂಬವು, ಈ ವ್ಯವಸ್ಥೆಯ ಕುಂದುಕೊರತೆಗಳ ಕುರಿತು ದೂರು ಪರಿಹಾರ ನಿರ್ವಹಣೆಯನ್ನು ಬಳಸುವ ಸಾಮರ್ಥ್ಯ ಹೊಂದಿದೆ ಎಂದು ಭಾವಿಸುವುದು, ಗ್ರಾಮೀಣ ಭಾರತದಲ್ಲಿ ವಾಸಿಸುವ ಬಡ ಕುಟುಂಬದ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಭೌತಿಕ ಪರಿಶೀಲನೆ ಇಲ್ಲದೆ ಯಾವುದೇ ಪಡಿತರ ಚೀಟಿಗಳನ್ನು ರದ್ದುಗೊಳಿಸಬಾರದು. ಕೇಂದ್ರ ಸರ್ಕಾರ ನಡೆಸುತ್ತಿರುವ ಪ್ರಸ್ತುತ ವಿಧಾನವನ್ನು ನಿಲ್ಲಿಸಬೇಕು. ಭೌತಿಕ ಪರಿಶೀಲನೆಯ  ಪ್ರಕ್ರಿಯೆಯಲ್ಲಿ ಸ್ಥಳೀಯ ಚುನಾಯಿತ ಪಂಚಾಯತ್ ಸಂಸ್ಥೆಗಳು  ಭಾಗಿಯಾಗಬೇಕು.

ಇನ್ನೊಂದು ವಿಷಯವೆಂದರೆ ಪಡಿತರ ಚೀಟಿಗಳನ್ನು ಆಧಾರ್ ಕಾರ್ಡಿನೊಂದಿಗೆ ಜೋಡಿಸುವುದು. ಸರಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಎಲ್ಲಾ ಫಲಾನುಭವಿಗಳಿಗೆ ಆಧಾರ್ ಬಳಕೆಯನ್ನು ಕಡ್ಡಾಯಗೊಳಿಸಿದ್ದನ್ನು ಸುಪ್ರೀಂಕೋರ್ಟ್ ಸಹ ಒಪ್ಪಿಕೊಂಡಿದೆ. ಮೇ 2020ರಲ್ಲಿ ಕೇಂದ್ರ ಸರ್ಕಾರವು ಒಂದು ಸುತ್ತೋಲೆಯನ್ನು ಹೊರಡಿಸಿತು. “ಸರಕಾರ ಆಧಾರ್ ಕಾರ್ಡ್ ನ ಜೋಡಣೆ ಮಾಡುವ ಅಂತಿಮ ದಿನವನ್ನು ಸೆಪ್ಟೆಂಬರ್ 2020ರ ವರೆಗೆ ವಿಸ್ತರಿಸಿದೆ. ಆದಕಾರಣ ಅಲ್ಲಿಯವರೆಗೆ ಯಾರಿಗೂ ಆ ಕಾರಣಕ್ಕೆ ಆಹಾರಧಾನ್ಯ ವಿತರಣೆ ನಿಲ್ಲಿಸಬಾರದು”. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಪಡಿತರವನ್ನು ಪಡೆಯಲು ಆಧಾರ್ ಕಾರ್ಡ್ ಜೋಡಣೆ ಮುಂದೆ ಕಡ್ಡಾಯ ಎಂದು ಇದು ಖಚಿತಪಡಿಸುತ್ತದೆ.  ಮಾರ್ಚ್ 2021ರಲ್ಲಿ ಸಚಿವಾಲಯದ ಜಾಲತಾಣದಲ್ಲಿ 79.28 ಕೋಟಿ ಫಲಾನುಭವಿಗಳಲ್ಲಿ 8.8 ಕೋಟಿ ಫಲಾನುಭವಿಗಳು ಆಧಾರ್ ಕಾರ್ಡನ್ನು ಪಡಿತರ ಚೀಟಿಯೊಂದಿಗೆ ಜೋಡಣೆ ಮಾಡಿಲ್ಲವೆಂದು ಹೇಳುತ್ತದೆ. ಜೋಡಣೆ ಮಾಡದ ಕಾರ್ಡ ಗಳನ್ನು ರದ್ದುಗೊಳಿಸುವ ಅಪಾಯವೂ ಇದೆ. ಇವೆಲ್ಲ ಕಾರಣಗಳೊಂದಿಗೆ, ಬಯೋಮೆಟ್ರಿಕ್ ಗಳು ಹೊಂದಿಕೆಯಾಗದ ಕಾರಣ ಗಣನೀಯ ಸಂಖ್ಯೆಯ ಫಲಾನುಭವಿಗಳಿಗೆ ಪಡಿತರ ಹಕ್ಕನ್ನು ನಿರಾಕರಿಸಲಾಗಿದೆ ಎಂದು ವಾಸ್ತವ ವರದಿ ಹೇಳುತ್ತದೆ. ಹೊಂದಿಕೆಯಾಗದ ಬಯೋಮೆಟ್ರಿಕ್ ಮತ್ತು ದೋಷಯುಕ್ತ ಯಂತ್ರಗಳಿಂದಾಗಿ, ವೈಫಲ್ಯದ ಅಪಾಯಗಳನ್ನು ಹೊಂದಿರುವ ತಂತ್ರಜ್ಞಾನಗಳೊಂದಿಗೆ ಆಹಾರ ಭದ್ರತೆಯನ್ನು ಜೋಡಿಸಲು ಸಾಧ್ಯವಿಲ್ಲ ಮತ್ತು ಜೋಡಿಸಲೂಬಾರದು.

ಪಡಿತರ ವ್ಯವಸ್ಥೆಯಿಂದ  ಭಾರಿ ಪ್ರಮಾಣದ ಸೋರಿಕೆಗಳು ಮತ್ತು ಸಾರ್ವಜನಿಕ ಹಣವು ಪೋಲಾಗುವ ಸುಳ್ಳು ನಿರೂಪಣೆಯನ್ನು, ಸಾಮಾಜಿಕ ಭದ್ರತೆಯ ಅಗತ್ಯ ಅಂಶವಾಗಿರುವ ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು NFSAಗಳ ಮೂಲಕ ಖಾತ್ರಿಗೊಳಿಸುವ ಆಹಾರ ಭದ್ರತೆಯನ್ನು ದುರ್ಬಲಗೊಳಿಸುವುದನ್ನು ನವ-ಉದಾರವಾದಿಗಳು ಉತ್ತೇಜಿಸುತ್ತಾರೆ. ಆಹಾರ ಭದ್ರತೆಯನ್ನು ಖಾತರಿಪಡಿಸಲು ಭಾರತಕ್ಕೆ, ಪ್ರತಿ ಮನೆಗೆ ಕನಿಷ್ಠ 35 ಕೆಜಿ ಆಹಾರ ಧಾನ್ಯವನ್ನು ಒಂದು ಕೆಜಿ ಗೋಧಿಗೆ 2 ರೂ ಮತ್ತು ಅಕ್ಕಿಗೆ 3 ರೂಪಾಯಿಯ ಕೇಂದ್ರ ನಿಗದಿತ ಬೆಲೆಗಳಲ್ಲಿಒದಗಿಸುವ ಸಾರ್ವತ್ರಿಕ ಆಹಾರ ಹಕ್ಕಿನ ಆವಶ್ಯಕತೆ ಇದೆ. ಇತರ ಅಗತ್ಯ ಆಹಾರ ಪದಾರ್ಥಗಳನ್ನು ಸಹ ಸಬ್ಸಿಡಿ ದರದಲ್ಲಿ ಫಲಾನುಭವಿಗಳಿಗೆ ಸಿಗುವ  ಆಹಾರಗಳ ಪಟ್ಟಿಯಲ್ಲಿ ಸೇರಿಸಬೇಕು.

ಆಹಾರ ಭದ್ರತೆಗಾಗಿನ ಹೋರಾಟವು, ರೈತರ ಹಕ್ಕುಗಳಿಗೆ ಸಂಬಂಧಿಸಿದ ಆಹಾರ ಧಾನ್ಯಗಳ ಉತ್ಪಾದನೆ ಮತ್ತು ಖರೀದಿಯ ನೀತಿಗಳ ಹಿನ್ನೆಲೆಯಲ್ಲಿ ನಡೆಯುತ್ತಿದೆ. ಇದರಿಂದ ಅವುಗಳು ಸಹ ಆಕ್ರಮಣಕ್ಕೆ ಒಳಗಾಗಿವೆ. ಈ ಅಂಶವನ್ನು ಮುಂದೆ ಪ್ರತ್ಯೇಕವಾಗಿ ವಿಶ್ಲೇಷಿಸಲಾಗುವುದು.

ಅನು: ಲವಿತ್ರ ವಸ್ತ್ರದ

Leave a Reply

Your email address will not be published. Required fields are marked *