ಇನ್ನಷ್ಟು ಸಮಯ ಕಳೆಯಲು ಸಾಧ್ಯವಿಲ್ಲ- ತಕ್ಷಣವೇ ಕ್ರಮಗಳನ್ನು ಕೈಗೊಳ್ಳಿ: ಎಡಪಕ್ಷಗಳ ಆಗ್ರಹ

ಕೊವಿಡ್ ಮಹಾಸೋಂಕಿನ ವಿರುದ್ಧ  ಮತ್ತು ಶ್ರಮಿಕ ಜನಗಳ ಹಕ್ಕುಗಳ ರಕ್ಷಣೆಯ ಕಾರ್ಮಿಕ ವರ್ಗದ ಸಮರದಲ್ಲಿ ಎಡಪಕ್ಷಗಳು ಸೇರಿಕೊಳ್ಳುತ್ತವೆ ಎಂದು ಮೇದಿನದ ಸಂದರ್ಭದಲ್ಲಿ ಭಾರತದ ಐದು ಎಡಪಕ್ಷಗಳು ಅಂತ ರ‍್ರಾಷ್ಟ್ರೀ ಯ ಕಾರ್ಮಿಕ ವರ್ಗದೊಂದಿಗೆ ಸೌಹಾರ್ದವನ್ನು ವ್ಯಕ್ತಪಡಿಸುತ್ತ ಹೇಳಿವೆ.

ಭಾರತ ಇಂದು ಸ್ವಾತಂತ್ರ್ಯಾನಂತರದ  ಅತೀ ಕೆಟ್ಟ ಮಾನವಜೀವಿಗಳ  ಆರೋಗ್ಯ ಬಿಕ್ಕಟ್ಟಿನ ಹಿಡಿತಕ್ಕೆ ಒಳಗಾಗಿದೆ. ಅಷ್ಟೇ ಅಲ್ಲ, ಈ ಮಹಾಸೋಂಕಿನ ಪಿಡುಗು ಇನ್ನಷ್ಟು ತೀವ್ರಗೊಳ್ಳುತ್ತಿದೆ. ಇದನ್ನು ಎದುರಿಸಲು, ಜನಗಳ ಜೀವಗಳು ಮತ್ತು ಜೀವನೋಪಾಯಗಳನ್ನು ರಕ್ಷಿಸಲು ಕೇಂದ್ರ ಸರಕಾರ ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದಿರುವ ಎಡಪಕ್ಷಗಳು ಈ ಕೆಳಗಿನ ಕ್ರಮಗಳನ್ನು ತಕ್ಷಣವೇ ಕೈಗೊಳ್ಳುವಂತೆ ಆಗ್ರಹಿಸಿವೆ:

1. ಆಕ್ಸಿಜನ್ ಅನ್ನು ಅಗತ್ಯವಿರುವ ಎಲ್ಲ ಆಸ್ಪತ್ರೆಗಳಿಗೆ ಮತ್ತು ಜನಗಳಿಗೆ ಖಾತ್ರಿಪಡಿಸಬೇಕು.

2. ದೇಶಾದ್ಯಂತ ಒಂದು ಉಚಿತ ಸಾರ್ವತ್ರಿಕ ಲಸಿಕೀಕರಣ ಕಾರ್ಯವನ್ನು ಆರಂಭಿಸಬೇಕು.

3. ಲಸಿಕೆಗಳನ್ನೂ, ಜೀವ ಉಳಿಸುವ ಔಷಧಿಗಳನ್ನೂ ಅವನ್ನು ತಯಾರಿಸಬಲ್ಲ ಸಾಮರ್ಥ್ಯ-ಸೌಕರ್ಯಗಳು ಇರುವ ಎಲ್ಲರೂ ಉತ್ಪಾದಿಸಲು ಸಾಧ್ಯವಾಗುವಂತೆ ಕಾಯ್ದೆಯ ‘ಕಡ್ಡಾಯ ಲೈಸೆನ್ಸಿಂಗ್’ ಉಪಬಂಧವನ್ನು ಬಳಸಿಕೊಳ್ಳಬೇಕು.

4. ಆವಶ್ಯಕ ಔಷಧಿಗಳ ಮತ್ತು ಆಕ್ಸಿಜನ್‌ನ ಬೆಲೆಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು ಮತ್ತು ಅವುಗಳ ಕಳ್ಳ ದಾಸ್ತಾನು ಹಾಗೂ ಕಾಳಸಂತೆಯನ್ನು ನಿಗ್ರಹಿಸಬೇಕು.

5. ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಇಲ್ಲದ ಎಲ್ಲ ಕುಟುಂಬಗಳಿಗೆ ರೂ.7500 ನೇರ ನಗದು ವರ್ಗಾವಣೆ ಮತ್ತು ಅಗತ್ಯ ಇರುವ ಎಲ್ಲರಿಗೆ ಉಚಿತ ಆಹಾರಧಾನ್ಯಗಳ ವಿತರಣೆಯನ್ನು ಮಾಡಬೇಕು.

ಸರಕಾರ ತಕ್ಷಣವೇ ಆಸ್ಪತ್ರೆ ಹಾಸಿಗೆಗಳು, ವೆಂಟಿಲೇಟರುಗಳು, ಐಸಿಯು ಹಾಸಿಗೆಗಳು, ವಿಶೇಷವಾಗಿ ಸೋಂಕು ತ್ವರಿತವಾಗಿ ಹರಡುತ್ತಿರುವ ಗ್ರಾಮೀಣ ಪ್ರದೇಶಗಳಲ್ಲಿ ಲಭ್ಯಗೊಳಿಸಬೇಕು.

ಈ ಸರಕಾರ ಒಂದಿಡೀ ವರ್ಷವನ್ನು ವ್ಯರ್ಥಗೊಳಿಸಿದೆ. ಎಡಪಕ್ಷಗಳ ಸಲಹೆ-ಸೂಚನೆಗಳಿಗೆ ಕಿವಿಗೊಡಲಿಲ್ಲ. ಬದಲಿಗೆ ಸೋಂಕನ್ನು  ದೊಡ್ಡ ಮಟ್ಟದಲ್ಲಿ ಹರಡುವ ಮಹಾ ಸಮಾರಂಭಗಳನ್ನು ಉತ್ತೇಜಿಸಿತು ಎಂದಿರುವ ಎಡಪಕ್ಷಗಳು, ಭಾರತ ಈಗ ಇನ್ನಷ್ಟು ಸಮಯ ಕಳೆಯಲು ಸಾಧ್ಯವಿಲ್ಲ, ಸರಕಾರ ಈಗ ಮಾಡಬಹುದಾದ ಕನಿಷ್ಟ ಕೆಲಸ ಎಂದರೆ ಈ ಮೇಲಿನ ಬೇಡಿಕೆಗಳನ್ನು ಪೂರೈಸುವುದು, ಇಲ್ಲವಾದರೆ ಕೇಂದ್ರ ಸರಕಾರ ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಹಕ್ಕನ್ನು ಸಂಪೂರ್ಣವಾಗಿ ಕಳಕೊಳ್ಳುತ್ತದೆ ಎಂದು ಎಚ್ಚರಿಸಿವೆ.

Leave a Reply

Your email address will not be published. Required fields are marked *