ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ತೀವ್ರ ಸೋಲು

ಐದು ವಿಧಾನಸಭಾ ಚುನಾವಣಾ ಫಲಿತಾಂಶಗಳು ಬರುತ್ತಿದ್ದು ಅವು ಒಟ್ಟಾರೆಯಾಗಿ ಬಿಜೆಪಿಗೆ ತೀವ್ರ ಹಿನ್ನಡೆಯನ್ನು ತೋರಿಸುತ್ತಿವೆ. ಕೋಮು ಭಾವನೆಗಳನ್ನು ಬಡಿದೆಬ್ಬಿಸಲು ಎಷ್ಟೇ ಪ್ರಯತ್ನಿಸಿದರೂ, ಅಗಾಧ ಪ್ರಮಾಣದಲ್ಲಿ ಹಣ ಸುರಿದರೂ, ಆಡಳಿತ ವ್ಯವಸ್ಥೆಯನ್ನು ಮತ್ತು ಚುನಾವಣಾ ಯಂತ್ರವನ್ನು ತನಗೆ ಅನುಕೂಲವಾಗುವಂತೆ ಬಳಸಿಕೊಳ್ಳುವ ಕೈಚಳಕ ನಡೆಸಿದರೂ, ಜನಗಳ ಬೆಂಬಲವನ್ನು ಪಡೆಯುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.

ಈ ಫಲಿತಾಂಶಗಳು ದೇಶದಲ್ಲಿ ಜನತಾ ಆಂದೋಲನಗಳನ್ನು ಮತ್ತು ಹೋರಾಟಗಳನ್ನು ಇನ್ನಷ್ಟು ಬಲಪಡಿಸಬೇಕು ಎಂದು ಅದು ಹೇಳಿದೆ.

ಕೇರಳ: ಎಡ ಪ್ರಜಾಪ್ರಭುತ್ವ ರಂಗ ಭಾರೀ ವಿಜಯ ಗಳಿಸಿದೆ. ಇದಕ್ಕೆ ಹರ್ಷ ವ್ಯಕ್ತಪಡಿಸುತ್ತ ಪೊಲಿಟ್‌ ಬ್ಯುರೊ ಎಲ್‌ಡಿಎಫ್ನಲ್ಲಿ ಮತ್ತೊಮ್ಮೆ ವಿಶ್ವಾಸವಿಟ್ಟು ಮುಂದಿನ ಸರಕಾರವನ್ನು ರಚಿಸಲು ಅದನ್ನು ಮತ್ತೆ ಚುನಾಯಿಸಿರುವುದಕ್ಕೆ ಕೇರಳದ ಜನತೆಗೆ ಧನ್ಯವಾದವನ್ನು ಅರ್ಪಿಸಿದೆ. ಕಳೆದ ನಾಲ್ಕು ದಶಕಗಳಿಗಿಂತಲೂ ಹೆಚ್ಚಿನ ಕಾಲಾವಧಿಯಲ್ಲಿ ಮೊತ್ತಮೊದಲ ಬಾರಿಗೆ ಅಧಿಕಾರದಲ್ಲಿರುವ ರಂಗವನ್ನು ಪುನಃ ಸರಕಾರ ರಚಿಸಲು ಕೇರಳದ ಜನತೆ ಚುನಾಯಿಸಿದ್ದಾರೆ. ಈ ಬಾರಿ ಎಲ್‌ ಡಿ ಎಫ್ ಕಳೆದ ಬಾರಿಗಿಂತಲೂ ಉತ್ತಮ ಫಲಿತಾಂಶವನ್ನು ಪಡೆದಿದೆ.

ಕೇರಳದ ಜನತೆ ಈಗಿರುವ ಸರಕಾರದ ಕಾರ್ಯನಿರ್ವಹಣೆ, ಅದು ಅನುಸರಿಸಿದ ಪರ್ಯಾಯ ಧೋರಣೆಗಳು, ನೈಸರ್ಗಿಕ ವಿಪತ್ತುಗಳನ್ನು, ಮಹಾಸೋಂಕಿನ ಪರಿಣಾಮಗಳನ್ನು ನಿಭಾಯಿಸಿದ ವೈಖರಿ, ಕೈಗೊಂಡ ಜನಕಲ್ಯಾಣ ಕ್ರಮಗಳು ಮತ್ತು ಕೇರಳ ಸಮಾಜದ ಜಾತ್ಯತೀತ ಪ್ರಜಾಸತ್ತಾತ್ಮಕ ಸಾಮರಸ್ಯಭರಿತ ಸ್ವರೂಪವನ್ನು ರಕ್ಷಿಸಿಕೊಂಡಿರುವುದಕ್ಕೆ ಮತ ನೀಡಿದ್ದಾರೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.

ಬಂಗಾಳ: ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ತನ್ನ ಹಣಬಲ ಮತ್ತು ಕೈಚಳಕಗಳ ಹೊರತಾಗಿಯೂ ಒಂದು ತೀವ್ರ ಪರಾಜಯವನ್ನು ಅನುಭವಿಸಿದೆ. ಬಂಗಾಳದ ಜನತೆ ಕೋಮುವಾದಿ ಧ್ರುವೀಕರಣದ ತತ್ವವನ್ನು ಅತ್ಯಂತ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ.

ಸಂಯುಕ್ತ ಮೋರ್ಚಾ ಮತ್ತು ಎಡಪಕ್ಷಗಳ ಫಲಿತಾಂಶ ಅತ್ಯಂತ ನಿರಾಶಾದಾಯಕವಾಗಿದೆ. ಬಿಜೆಪಿಯನ್ನು ಸೋಲಿಸುವ ಜನಗಳ ಆಕಾಂಕ್ಷೆಯಿAದಾಗಿ ಉಂಟಾದ ತೀಕ್ಷ್ಣ ವಾದ ಧ್ರುವೀಕರಣದ ಮಧ್ಯೆ ಸಂಯುಕ್ತ ಮೋರ್ಚಾ ಹಿಪ್ಪೆಯಾಗಿದೆ ಎಂದಿರುವ ಪೊಲಿಟ್‌ಬ್ಯುರೊ, ಪಕ್ಷ ಇದರಿಂದ ಅಗತ್ಯ ಪಾಟಗಳನ್ನು ಕಲಿಯಲು ಈ ಫಲಿತಾಂಶಗಳ ಸ್ವವಿಮರ್ಶಾತ್ಮಕ ಪರಿಶೀಲನೆಯನ್ನು ನಡೆಸುತ್ತದೆ ಎಂದು ಹೇಳಿದೆ.

ತಮಿಳುನಾಡು: ಡಿಎಂಕೆ ನೇತೃತ್ವದ ರಂಗ ಒಂದು ಪ್ರಭಾವಪೂರ್ಣ ವಿಜಯವನ್ನು ಗಳಿಸಿದೆ. ತಮಿಳುನಾಡಿನ ಜನತೆ ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟವನ್ನು ತಿರಸ್ಕರಿಸಿದ್ದಾರೆ ಮತ್ತು ಅಧಿಕಾರದಲ್ಲಿದ್ದ ಎಐಎಡಿಎಂಕೆ ಸರಕಾರವನ್ನು ಸೋಲಿಸಿದ್ದಾರೆ.

ಅಸ್ಸಾಂ: ಬಿಜೆಪಿ ತನ್ನ ಸರಕಾರವನ್ನು ಉಳಿಸಿಕೊಂಡಿದೆ. ಮಹಾಜೋತ್ ಒಂದು ಉತ್ತಮ ಹೋರಾಟವನ್ನು ನೀಡಿದೆ.

ಪುದುಚೇರಿ: ಎನ್‌ಆರ್ ಕಾಂಗ್ರೆಸ್ ತನ್ನ ಮಿತ್ರ ಪಕ್ಷಗಳೊಂದಿಗೆ ಬಹುಮತವನ್ನು ಪಡೆಯುವಂತೆ ಕಾಣುತ್ತಿದೆ.

ಒಟ್ಟಾರೆಯಾಗಿ ಈ ಫಲಿತಾಂಶಗಳು ಬಿಜೆಪಿಗೆ ತೀವ್ರ ಹಿನ್ನಡೆಯನ್ನು ತೋರಿಸುತ್ತಿವೆ. ಕೋಮು ಭಾವನೆಗಳನ್ನು ಬಡಿದೆಬ್ಬಿಸಲು ಎಷ್ಟೇ ಪ್ರಯತ್ನಿಸಿದರೂ, ಅಗಾಧ ಪ್ರಮಾಣದಲ್ಲಿ ಹಣ ಸುರಿದರೂ, ಆಡಳಿತ ವ್ಯವಸ್ಥೆ ಮತ್ತು ಚುನಾವಣಾ ಯಂತ್ರದಲ್ಲಿ ಕೈವಾಡ ನಡೆಸಿದರೂ, ಜನಗಳ ಬೆಂಬಲವನ್ನು ಪಡೆಯುವಲ್ಲಿ ಅದು ವಿಫಲವಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಈ ಫಲಿತಾಂಶಗಳು ಭಾರತೀಯ ಗಣತಂತ್ರದ ಜಾತ್ಯತೀತ ಪ್ರಜಾಸತ್ತಾತ್ಮಕ ಚಾರಿತ್ರ್ಯವನ್ನು ಕಾಪಾಡಿಕೊಳ್ಳುವ ಮತ್ತು ಜನಗಳ ಜೀವನ ಪರಿಸ್ಥಿತಿಗಳನ್ನು ಬಹುವಾಗಿ ಉತ್ತಮಪಡಿಸಿಕೊಳ್ಳುವ ಜನತಾ ಆಂದೋಲನಗಳನ್ನು ಮತ್ತು ಹೋರಾಟಗಳನ್ನು ಇನ್ನಷ್ಟು ಬಲಪಡಿಸಬೇಕು ಎಂದು ಹೇಳಿದೆ.

Leave a Reply

Your email address will not be published. Required fields are marked *