ಮೋದಿ ಸರ್ಕಾರವೇ ಒಂದು ದೊಡ್ಡ ಹಗರಣ

prakash karatಸ್ವಾತಂತ್ರ್ಯಾನಂತರದ ಅತ್ಯಂತ ದೊಡ್ಡ ಮಾನವ ಅನಾಹುತಕ್ಕೆ ಭಾರತ ಸಾಕ್ಷಿಯಾಗುತ್ತಿದೆ. ಈ ಮಹಾವಿನಾಶಕ್ಕೆ ನರೇಂದ್ರ ಮೋದಿ ಹಾಗೂ ಅವರ ಸರ್ಕಾರವೇ ಹೊಣೆ ಎಂದು ಹೇಳಲು ಐತಿಹಾಸಿಕ ಸಂಶೋಧನೆಯೇನೂ ಬೇಕಿಲ್ಲ. ಆಕ್ಸಿಜನ್, ಬೆಡ್, ಔ಼ಷಧಿಗಳ ಕೊರತೆ, ಜತೆಗೆ ಲಸಿಕೆ ಕೊರತೆ ಹಗರಣಗಳು, ಇವೆಲ್ಲಕ್ಕಿಂತ ಹೆಚ್ಚಾಗಿ ಮೋದಿ ಸರ್ಕಾರವೇ ಒಂದು ಹಗರಣವಾಗಿ ಬಿಟ್ಟಿದೆ. ಮೋದಿ ಸರ್ಕಾರ ಎಂಥ ತಪ್ಪುಗಳನ್ನು ಮಾಡುತ್ತಿದೆ ಎನ್ನುವುದಕ್ಕೆ ಏಪ್ರಿಲ್ 19ರಂದು ಪ್ರಕಟಿಸಿದ ಲಸಿಕೆ ನೀತಿಗಿಂತ ದೊಡ್ಡ ಉದಾಹರಣೆ ಬೇಕಿಲ್ಲ ಎಂದು ಸಿಪಿಐ(ಎಂ) ಪೊಲಿಟ್‌ ಬ್ಯೂರೋ ಸದಸ್ಯರಾದ ಪ್ರಕಾಶ ಕಾರಟ್ ವಿವರಿಸಿದ್ದಾರೆ.

ಭಾರತದಲ್ಲಿ ಅನಾವರಣಗೊಳ್ಳುತ್ತಿರುವ ಕೋವಿಡ್-19 ದುರಂತ ನಿಜಕ್ಕೂ ಬೃಹತ್ ಪ್ರಮಾಣದ್ದಾಗಿದೆ. ಆಸ್ಪತ್ರೆಗಳಲ್ಲಿ ಆಮ್ಲಜನಕ ಸಿಗದೆ ರೋಗಿಗಳು ಸಾಯುತ್ತಿರುವ ಹಗರಣ ಇದೆ; ಆಸ್ಪತ್ರೆ ಬೆಡ್ ಮತ್ತು ಔಷಧಿಗಳು ಸಿಗದೆ ರೊಗಿಗಳು ಪರದಾಡುವ ಹಗರಣ ಇದೆ; ಕೋವಿಡ್ ಗಹನತೆಯನ್ನು ಮುಚ್ಚಿಟ್ಟಿದ್ದರಿಂದ ಜನರು ಸಾಯುತ್ತಿರುವ ಹಗರಣವೂ ಇದೆ. ಲಸಿಕೆ ಕೊರತೆಯ ಹಗರಣವೂ ಇದೆ. ಮತ್ತು ಸರ್ಕಾರವೇ ಮಂಜೂರು ಮಾಡಿರುವ ಲಾಭಕೋರತನ ಕೂಡ. ಆದರೆ ಇವೆಲ್ಲಕ್ಕಿಂತ ದೊಡ್ಡ ಹಗರಣವೆಂದರೆ ಸ್ವತಃ ಮೋದಿ ಸರ್ಕಾರವೇ.

covid 2021-festival of democracy
‘ಪ್ರಜಾಪ್ರಭುತ್ವದ ಉತ್ಸವ’- ಕೃಪೆ: ಸತೀಶ ಆಚಾರ್ಯ

ಸ್ವಾತಂತ್ರ್ಯಾನಂತರದ ಅವಧಿಯಲ್ಲೇ ಭಾರತ ಅತ್ಯಂತ ದೊಡ್ಡ ಮಾನವ ಅನಾಹುತಕ್ಕೆ ಸಾಕ್ಷಿಯಾಗುತ್ತಿದೆ. 1943ರಲ್ಲಿನ ಬಂಗಾಳ ಕ್ಷಾಮದ ನಂತರ ಮಾನವ ಜೀವ ನಷ್ಟವಾದ ಲೆಕ್ಕದಲ್ಲಿ ಇದು ಅತ್ಯಂತ ದೊಡ್ಡ ಕೇಡು. ಆ ಕ್ಷಾಮದಲ್ಲಿ ಹಸಿವು, ಅಪೌಷ್ಟಿಕತೆ ಮತ್ತು ರೋಗರುಜಿನಗಳಿಂದ ಸುಮಾರು 30 ಲಕ್ಷ ಜನರು ಮೃತಪಟ್ಟಿದ್ದರು. ಆ ಮಹಾ ಅನಾಹುತಕ್ಕೆ ಬ್ರಿಟಿಷ್ ಸಾಮ್ರಾಜ್ಯಶಾಹಿ ಮತ್ತು ಬ್ರಿಟಷ್ ರಾಜ್ಯಭಾರ ಅನುಸರಿಸಿದ ವಸಾಹತುಶಾಹೀ ನೀತಿಗಳು ಕಾರಣವಾಗಿದ್ದವು. ದೇಶ ‘ವಿಭಜನೆ’ ವೇಳೆಯ ದೊಡ್ಡಪ್ರಮಾಣದ ಸಾವುಗಳನ್ನು ಇಲ್ಲಿ ಹೋಲಿಕೆ ಮಾಡಲಾಗದು. ಯಾಕೆಂದರೆ ಅದಾಗಿದ್ದು ಪರಸ್ಪರ ಮಾನವಹತ್ಯೆ ಮತ್ತು ಕೋಮುವಾದಿ ಕೊಲೆಗಳಿಂದಾಗಿ ಎನ್ನುವುದು ಗಮನಾರ್ಹ.

ಪ್ರಸಕ್ತ ಮಹಾಸೋಂಕಿನ ಸಂದರ್ಭದಲ್ಲಿ ಹೇಳುವುದಾದರೆ, ಅಧಿಕೃತ ಅಂಕಿಸಂಖ್ಯೆಗಳು ಏನೇ ಹೇಳಿದರೂ, ಕನಿಷ್ಠ 10 ಲಕ್ಷ ಜನರು ಸೋಂಕಿನಿಂದ ಮೃತಪಟ್ಟಿದ್ದು ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ಸರ್ಕಾರ ಅಧಿಕೃತವಾಗಿ ಪ್ರಕಟಿಸಿರುವ ಎರಡು ಲಕ್ಷ ಸಾವಿನ ಮಾಹಿತಿಯ ಐದು ಪಟ್ಟು ಮಾಡಿರುವ ಒಂದು ಮಿತ ಅಂದಾಜು.

ಈ ಮಹಾವಿನಾಶಕ್ಕೆ ನರೇಂದ್ರ ಮೋದಿ ಹಾಗೂ ಅವರ ಸರ್ಕಾರವೇ ಹೊಣೆ ಎಂದು ಹೇಳಲು ಐತಿಹಾಸಿಕ ಸಂಶೋಧನೆಯನ್ನು ನಡೆಸಬೇಕೆಂದೇನೂ ಇಲ್ಲ. ಮೋದಿ ಸರ್ಕಾರ ಎಂಥ ತಪ್ಪುಗಳನ್ನು ಮಾಡುತ್ತಿದೆ ಎನ್ನುವುದಕ್ಕೆ ಏಪ್ರಿಲ್ 19ರಂದು ಪ್ರಕಟಿಸಿದ ಲಸಿಕೆ ನೀತಿಗಿಂತ ದೊಡ್ಡ ಉದಾಹರಣೆ ಬೇಕಿಲ್ಲ.

Ghazipur crematorium
ಗಾಝೀಪುರ ಸ್ಮಶಾನ, ಫೋಟೋ: ಅನಿಂದ್ಯ ಚಟ್ಟೋಪಾಧ್ಯಾಯ

ಸದ್ಯಕ್ಕೆ ಭಾರತ ಮತ್ತು ಜಗತಿನ ವಿವಿಧ ಭಾಗಗಳಲ್ಲಿ ಆಕ್ಸಿಜನ್ ಕೊರತೆಯಿಂದ ರೋಗಿಗಳು ಉಸಿರಾಡಲು ಒದ್ದಾಡುತ್ತಿರುವ ಭಯಾನಕ ದೃಶ್ಯಗಳು ಆಸ್ಪತ್ರೆಗಳ ಒಳಗಡೆಯೂ ಹೊರಗಡೆಯೂ ಕಾಣಿಸುತ್ತಿವೆ. ಆಮ್ಲಜನಕ ಉತ್ಪಾದನೆ, ಪೂರೈಕೆ ಮೊದಲಾದ ವಿಚಾರಗಳು ಹೆಚ್ಚಿನ ಗಮನವನ್ನು ಸೆಳೆಯಲಿವೆ. ಆದರೆ, ಸದ್ಯೋಭವಿಷ್ಯದಲ್ಲಿ 18 ವರ್ಷ ದಾಟಿದ ಎಲ್ಲ ವಯಸ್ಕರಿಗೆ ಲಸಿಕೆ ಹಾಕುವ ಲಸಿಕೆ ಅಭಿಯಾನ ನಮ್ಮೆಲ್ಲರ ಗಮನ ಸೆಳೆಯಲಿದೆ. ಸರ್ಕಾರದ ಲಸಿಕೆ ಕಾರ್ಯಕ್ರಮವು ಅತ್ಯಂತ ಉಪೇಕ್ಷೆಯ, ತಾರತಮ್ಯದ ಮತ್ತು ಹಾಗೂ ಅಸಮತ್ವದ ಧೋರಣೆಯಿಂದ ರೂಪಿಸಿರುವಂತದ್ದು. ಕೇಂದ್ರ ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡಿದೆ. ಹಾಗೂ 18ರಿಂದ 45 ವರ್ಷ ಗುಂಪಿನವರಿಗೆ ಲಸಿಕೆ ನೀಡುವÀ ಸಂಪೂರ್ಣ ಹೊಣೆಯನ್ನು ರಾಜ್ಯಗಳ ಹೆಗಲಿಗೆ ಹೊರಿಸಿದೆ. ಅದಕ್ಕೆ ಹಣ ಹೊಂದಿಸುವ ಶಕ್ತಿ ರಾಜ್ಯಗಳಿಗೆ ಇಲ್ಲ. ಲಸಿಕೆ ಉತ್ಪಾದನೆಯ 50ಶೇ.ವನ್ನು ರಾಜ್ಯ ಸರಕಾರಗಳು ಮತ್ತು ಖಾಸಗಿ ಅಸ್ಪತ್ರೆಗಳು ನೇರವಾಗಿ ಖರೀದಿಸಬೇಕು ಎಂದು ಪ್ರಕಟಿಸುವ ಮೂಲಕ, ಸೀಮಿತ ಲಸಿಕೆ ಉತ್ಪಾದನೆಯನ್ನು ಪಡೆದುಕೊಳ್ಳಲು ರಾಜ್ಯಗಳ ನಡುವೆ ಪರಸ್ಪರರನ್ನು ಕುಂಠಿತಗೊಳಿಸುವ ಸ್ಪರ್ಧೆಗೆ ದಾರಿ ತೆರೆದು ಕೊಡಲಾಗಿದೆ.

ಮೊದಲನೆಯದಾಗಿ, ಪ್ರಧಾನ ಮಂತ್ರಿಯ ನೇರ ಮಂಜೂರಾತಿಯೊಂದಿಗೆ, ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯ (ಎಸ್‌ಐಐ) ಹಾಗೂ ಭಾರತ್ ಬಯೋಟೆಕ್ ಕಂಪೆನಿಗಳಿಗೆ ಲಾಭಕೋರತನಕ್ಕೆ ಪರವಾನಿಗೆ ಮತ್ತು ಜನರ ಹಣದಲ್ಲಿ ಸೂಪರ್ ಲಾಭ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

covid-2021-waiting at LNJP
ದೇಶದ ರಾಜಧಾನಿಯಲ್ಲಿ ಆಸ್ಪತ್ರೆ ಎದುರು-ಫೋಟೋ: ಬಿಬಿಸಿ ನ್ಯೂಸ್ -ಹಿಂದಿ

ಎರಡನೆಯದಾಗಿ, ಮೇ 1ರಿಂದ 18 ವರ್ಷ ದಾಟಿದ ಎಲ್ಲರಿಗೂ ಲಸಿಕೆ ಹಾಕಲಾಗುತ್ತದೆ ಎಂದು ಸರ್ಕಾರ ಸಿನಿಕತನದಿಂದ ಘೋಷಣೆ ಹೊರಡಿಸಿದೆ. ದೇಶದಲ್ಲಿ ಲಸಿಕೆ ಉತ್ಪಾದನೆ ಹೆಚ್ಚಿಸಲು ಅಥವಾ ವಿದೇಶಗಳಿಂದ ಸಾಕಷ್ಟು ಖರೀದಿಸಲು ಸರ್ಕಾರ ವಿಫಲವಾಗಿದೆ ಎನ್ನುವುದು ಗೊತ್ತಿದ್ದೂ ಸರ್ಕಾರ ಈ ಘೋಷಣೆ ಮಾಡಿದೆ. ಲಸಿಕೆ ಖರೀದಿಸಲು ರಾಜ್ಯಗಳಿಗೆ ಸೂಚಿಸುವ ಮೂಲಕ ಸಾಕಷ್ಟು ಲಸಿಕೆ ಸಿಗದಿದ್ದರೆ ಅದರ ದೂಷಣೆಯನ್ನು ರಾಜ್ಯಗಳ ತಲೆಗೆ ಸುತ್ತುವ ಕುತ್ಸಿತ ಯೋಜನೆ ಕೇಂದ್ರದ್ದಾಗಿದೆ.

ಮೂರನೆಯದಾಗಿ, ಯಾವ ರಾಜ್ಯಗಳು ಎಷ್ಟು ಲಸಿಕೆ ಹಾಗೂ ಯಾವ ಸಮಯದಲ್ಲಿ ಅದನ್ನು ಪಡೆಯಬೇಕು ಎನ್ನುವುದನ್ನು ಈ ಎರಡು ಖಾಸಗಿ ಕಂಪೆನಿಗಳು ನಿರ್ಧರಿಸಲಿವೆ. ರಾಜ್ಯಗಳು ಈ ಅವಳಿ ಕಂಪೆನಿಗಳ ಮುಂದೆ ನಡುಬಗ್ಗಿಸಿ ನಿಲ್ಲುವಂತೆ ಮಾಡಲಾಗುವುದು. ಅಲ್ಲದೆ ಲಸಿಕೆ ಪಡೆಯಲು ಖಾಸಗಿ ಆಸ್ಪತ್ರೆಗಳು ಹಾಗೂ ಕಾರ್ಪೊರೇಟ್‌ಗಳೊಂದಿಗೆ ಸ್ಪರ್ಧಿಸುವಂತೆ ಕೂಡ ಮಾಡಲಾಗುತ್ತದೆ. ಇವೆಲ್ಲದರ ಫಲಿತಾಂಶ ಏನೆಂಬುದನ್ನು 45 ವರ್ಷ ದಾಟಿದವರಿಗೆ ಲಸಿಕೆ ನೀಡಿಕೆ ಪ್ರಕ್ರಿಯೆ ರಾಜ್ಯಗಳಲ್ಲಿ ನಿಧಾನಗೊಂಡ ರೀತಿಯೇ ತೋರಿಸಿದೆ.

ಏಪ್ರಿಲ್ ಆರಂಭಕ್ಕೆ ಹೋಲಿಸಿದರೆ, ಚುಚ್ಚುಮದ್ದು ನೀಡಿಕೆ ಪ್ರಕ್ರಿಯೆಯು ಲಸಿಕೆ ಲಭ್ಯತೆ ಕೊರತೆಯಿಂದಾಗಿ ಅರ್ಧಕ್ಕೆ ಬಂದು ನಿಂತಿದೆ ಎಂದು ವರದಿಗಳು ಹೇಳಿವೆ. ಆದರೆ ಕೇಂದ್ರ ಸರ್ಕಾರ ಮತ್ತು ಆರೋಗ್ಯ ಸಚಿವಾಲಯ ಈ ವಾಸ್ತವತೆಯನ್ನು ನಿರಾಕರಿಸುತ್ತಾ ಬಂದಿವೆ. ಲಸಿಕೆ ಕೊರತೆ ಇಲ್ಲ ಎಂದೇ ಹೇಳುತ್ತಾ ಬಂದಿವೆ. ಲಸಿಕೆ ಕೊರತೆ ಬಗ್ಗೆ ದೂರಿದ ರಾಜ್ಯಗಳ ಮೇಲೆಯೇ ಆರೋಗ್ಯ ಖಾತೆ ಗೂಬೆ ಕೂರಿಸಿದೆ. ಕೋವಿಡ್ ಸಾಂಕ್ರಾಮಿಕತೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ವಿಫಲವಾಗಿರುವುದನ್ನು ಮುಚ್ಚಿಹಾಕಲು ರಾಜ್ಯಗಳು ಲಸಿಕೆ ಕೊರತೆಯ ದೂರು ಹೇಳುತ್ತಿವೆ ಎಂಬುದು ಕೇಂದ್ರದ ಮೊಂಡು ವಾದವಾಗಿದೆ.

covid 2021 wonder 2220421
ವಂಡರ್ಫುಲ್ ಸುದ್ದಿ!!-ಎಲ್ಲರಿಗೂ ಲಸಿಕೆ- ಲಸಿಕೆ ಕೇಂದ್ರದಲ್ಲಿ ಸ್ಟಾಕ್‍ ಇಲ್ಲಾ ವ್ಯಂಗ್ಯಚಿತ್ರ ಕೃಪೆ: ಮುಂಜುಲ್, ಫಸ್ಟ್ ಪೋಸ್ಟ್

ಎಸ್‌ಐಐ ತನ್ನ ಕೋವಿಶೀಲ್ಡ್ ಲಸಿಕೆಯ ಪ್ರತಿ ಡೋಸ್‌ಗೆ ರಾಜ್ಯ ಸರ್ಕಾರಕ್ಕೆ 400 ರೂಪಾಯಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ 600 ರೂಪಾಯಿ ನಿಗದಿಪಡಿಸಿದೆ. ಅದೇ ರೀತಿ, ಭಾರತ್ ಬಯೋಟೆಕ್ ಅನುಕ್ರಮವಾಗಿ 600 ರೂ. ಹಾಗೂ 1200 ರೂ. ನಿಗದಿಪಡಿಸಿದೆ. ಇದು ಲಾಭಕೋರತನದ ಪರಮಾವಧಿಯಲ್ಲದೆ ಬೇರೇನೂ ಅಲ್ಲ.

ಮೋದಿ ಸರ್ಕಾರದ ಮುಂದಿನ ಹೆಜ್ಜೆ ಏನೆಂಬುದು ಯಾರಾದರೂ ಊಹಿಸಬಹುದು. ಬೆಲೆ ಇಳಿಸುವಂತೆ ಲಸಿಕೆ ಕಂಪೆನಿಗಳಿಗೆ ಸರ್ಕಾರ ಮನವಿ ಮಾಡುತ್ತದೆ. ಅವುಗಳು ಸಾಂಕೇತಿಕವಾಗಿ ಅದನ್ನು ಇಳಿಸುತ್ತವೆ. ಕೇಂದ್ರ ಸರ್ಕಾರ ಅದರ ಶ್ರೇಯಸ್ಸನ್ನು ಪಡೆಯುವುದು ನಿಶ್ಚಿತ. ಏನಿದ್ದರೂ ಲಸಿಕೆ ನೀತಿಯ ಅಸವiತ್ವ ಹಾಗೂ ಸುಲಿಗೆಕೋರತನದ ಅಂಶ ಹಾಗೇ ಇರಲಿದೆ. ಇದನ್ನು ಯಾವ ರೀತಿಯಲ್ಲೂ ಒಪ್ಪಲಾಗದು.

ಸರ್ಕಾರ ತಕ್ಷಣವೇ ಪ್ರಸಕ್ತ ಲಸಿಕೆ ನೀತಿಯನ್ನು ವಾಪಸ್ ಪಡೆದು ಉಚಿತ ಹಾಗೂ ಸಾರ್ವತ್ರಿಕ ಲಸಿಕೆ ನೀಡಿಕೆಯ ಹೊಸ ನೀತಿಯನ್ನು ಪ್ರಕಟಿಸಬೇಕು.

ಸರ್ಕಾರ ಈಗಾಗಲೇ ಬಜೆಟ್‌ನಲ್ಲಿ ಲಸಿಕೆಗಾಗಿ 35,000 ಕೋಟಿ ರೂಪಾಯಿಗಳನ್ನು ಇಟ್ಟಿದೆ. ಅಗತ್ಯವಾದಾಗ ಇನ್ನೂ ಹೆಚ್ಚಿನ ಹಣ ಒದಗಿಸಲಾಗುತ್ತದೆ ಎಂದು ಹಣಕಾಸು ಮಂತ್ರಿ ಬಜೆಟ್ ಭಾಷಣದಲ್ಲೇ ಹೇಳಿದ್ದರು. ಆದರೆ, 45 ವರ್ಷ ಮೇಲಿನವರಿಗೆ ಲಸಿಕೆಗಾಗಿ ಕೇವಲ 10,000 ಕೋಟಿ ರೂಪಾಯಿ ವೆಚ್ಚ ಮಾಡಿರುವ ಕೇಂದ್ರ ಸರ್ಕಾರ, ರಾಜ್ಯಗಳಿಗೆ ಲಸಿಕೆಗಾಗಿ ಹಣ ನೀಡಲು ನಿರಾಕರಿಸುತ್ತಿದೆ. ರಾಜ್ಯಗಳ ಮೂಲಕ ಉಚಿತವಾಗಿ ಲಸಿಕೆ ಹಾಕಲು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಮಂಜೂರಾದ ಇನ್ನುಳಿದ 25,000 ಕೋಟಿ ರೂಪಾಯಿಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಿದೆ.

ಆರೋಗ್ಯ ತುರ್ತು ಪರಿಸ್ಥಿತಿಯನ್ನು ಮೋದಿ-ಅಮಿತ್ ಷಾ ಜೋಡಿ ನಿಭಾಯಿಸಿದ ರೀತಿಗೆ ಜನರು ಕ್ರುದ್ಧರಾಗಿದ್ದಾರೆ. ವ್ಯಾಪಕ ಆಕ್ರೋಶ ಮಡುಗಟ್ಟಿದೆ. ಇದು ಸಂಪೂರ್ಣ ಸಮರ್ಥನೀಯ ಹಾಗೂ ರಾಜಕೀಯ ಲೆಕ್ಕಚುಕ್ತಾದ ಅಗತ್ಯವೂ ಇದೆ. ಅದೇನೇ ಇರಲಿ, ಜನರ ಜೀವ ರಕ್ಷಣೆಗಾಗಿ ಒಂದು ಸಮಗ್ರ ಲಸಿಕೆ ಕಾರ್ಯಕ್ರಮವನ್ನು ಜಾರಿ ಮಾಡುವುದು ಸದ್ಯದ ಪರಮ ಕರ್ತವ್ಯವಾಗಿದೆ.

ಅದಕ್ಕಾಗಿ ಸರ್ಕಾರ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಲೇ ಬೇಕು:

  • ವಿಪತ್ತು ನಿರ್ವಹಣಾ ಕಾನೂನು ಹಾಗೂ ಔಷಧಿಗಳ ಬೆಲೆ ನಿಯಂತ್ರಣ ಆದೇಶದ ಅನ್ವಯ ಅಧಿಕಾರವನ್ನು ಬಳಸಿಕೊಂಡು ಕೇಂದ್ರ ಸರಕಾರವು ಒಟ್ಟಾಗಿ ಲಸಿಕೆ ಖರೀದಿಸಲು ಬೆಲೆಯನ್ನು ನಿಗದಿಪಡಿಸಬೇಕು. ಒಂದು ಪಾರದರ್ಶಕ ಸೂತ್ರದಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಲಸಿಕೆ ಪೂರೈಸಬೇಕು.
  • ಲಸಿಕೆ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಕಡ್ಡಾಯ ಲೈಸೆನ್ಸಿಂಗ್ ನಿಯಮವನ್ನು ಬಳಸಬೇಕು. ಮತ್ತು ಸಾರ್ವಜನಿಕ ನಿಧಿಯಿಂದ ಸಂಶೋಧನೆಯಿAದ ಬಂದಿರುವ ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಯನ್ನು ಆರು ಸಾರ್ವಜನಿಕ ವಲಯದ ಔಷಧಿ ಕಂಪೆನಿಗಳು ಹಾಗೂ ಇತರ ಖಾಸಗಿ ಸಂಸ್ಥೆಗಳಿಗೆ ವಹಿಸಬೇಕು. ಇದಲ್ಲದೆ, ರಷ್ಯಾದ ಸ್ಪುಟ್ನಿಕ್ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಲು ಅರ್ಜಿ ಹಾಕಿಕೊಂಡಿರುವ ಕಂಪನಿಗಳು ತಮ್ಮ ಉತ್ಪಾದನೆಗಳನ್ನು ತ್ವರಿತಗೊಳಿಸುವಂತೆ ಕ್ರಮ ಕೈಗೊಳ್ಳಬೇಕು. ಈ ಎಲ್ಲ ಪ್ರಯತ್ನಗಳ ಜೊತೆ ವಿದೇಶಗಳಿಂದ ಎಲ್ಲೆಲ್ಲಿಂದ ಸಾಧ್ಯವೋ, ತುರ್ತಾಗಿ ಲಸಿಕೆ ಆಮದಿಗೂ ಮುಂದಾಗಬೇಕು.

ವಿನಾಶದ ಪರಿಸ್ಥಿತಿಯಿಂದ ದೇಶವನ್ನು ಹೊರತರಲು ಮೋದಿ ಸರ್ಕಾರ ಉಚಿತ ಮತ್ತು ಸಾರ್ವತ್ರಿಕ ಲಸಿಕೀಕರಣಕ್ಕೆ ಒಂದು ಸಮತ್ವಪೂರ್ಣ ಹಾಗೂ ಸಮಗ್ರ ನೀತಿಯನ್ನು ಪ್ರಕಟಿಸಬೇಕು.

ಅನು: ವಿಶ್ವ

Leave a Reply

Your email address will not be published. Required fields are marked *