ತೇಜಪಾಲ್ ಅತ್ಯಾಚಾರ ಪ್ರಕರಣ ತೀರ್ಪು: ಮಹಿಳೆಯರ ಸುರಕ್ಷಿತೆಗೆ ಮಾರಕ

ಬೃಂದಾ ಕಾರಟ್

ಮೇಲಧಿಕಾರಿಯಾಗಿದ್ದ ತಂದೆಯ ವಯಸ್ಸಿನ ಅತ್ಯಾಚಾರದ ಆರೋಪಿಗೆ ಅನುಕೂಲವಾಗುವಂತೆ, ಅತ್ಯಾಚಾರದ ಸಂತ್ರಸ್ತೆಯನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ದೂಷಿಸಿದ್ದಕ್ಕೆ ಮತ್ತು ಅವಮಾನ ಮಾಡಿದ್ದಕ್ಕೆ ಈ ತೀರ್ಪು ಇತಿಹಾಸದಲ್ಲಿ  ತನ್ನ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಈ ತೀರ್ಪನ್ನು ಎಷ್ಟು ಬೇಗ ರದ್ದು ಮಾಡಲು ಸಾಧ್ಯವೋ ಅಷ್ಟು ಒಳ್ಳೆಯದು. ಈ ಮುಂದಿನ ಅತ್ಯಾಚಾರ ಪ್ರಕರಣಗಳಿಗೆ ಇದು ಒಂದು ಪೂರ್ವ-ದೃಷ್ಟಾಂತವಾದರೆ, ಕೆಲಸ ಸ್ಥಳದಲ್ಲಿ ನಡೆಯುವ ಲೈಂಗಿಕ ದುರ್ಬಳಕೆ ಮತ್ತು ಹಿಂಸಾಚಾರದ ಬಗ್ಗೆ ಮಾತನಾಡಲು ಮುಂದೆ ಬರುವ ಧೈರ್ಯವನ್ನು ಯಾವ ಮಹಿಳೆಯೂ ಮಾಡಲಿಕ್ಕಿಲ್ಲ.

ಸುದ್ದಿ ಪತ್ರಿಕೆಯೊಂದರ (ತೆಹೆಲ್ಕಾ) ಮಾಜಿ ಸಂಪಾದಕ ತರುಣ್ ತೇಜಪಾಲ್, ತನ್ನ ಕಿರಿಯ ಉದ್ಯೋಗಿಯ ಮೇಲೆ ನವೆಂಬರ್ 2013 ರಲ್ಲಿ ಅತ್ಯಾಚಾರ ಎಸಗಿದ ಆರೋಪದ ಮೇಲೆ, ನಡೆದ ಪ್ರಕರಣದಲ್ಲಿ ಹೆಚ್ಚುವರಿ ಸೆಷನ್ಸ್‌ ನ್ಯಾಯಧೀಶರು ನೀಡಿದ ತೀರ್ಪಿನ ವಿರುದ್ಧ, ಭಾರತೀಯ ಜನತಾ ಪಕ್ಷದ ನೇತೃತ್ವದ ರಾಜ್ಯ ಸರಕಾರ ಗೋವಾ ಹೈಕೋರ್ಟ್ ನಲ್ಲಿ ಸರಿಯಾಗಿಯೇ ಮೇಲ್ಮನವಿ ಸಲ್ಲಿಸಿದೆ.  ನಿರ್ಭಯ ಪ್ರಕರಣದ ನಂತರ (ಅತ್ಯಾಚಾರ ಕಾನೂನುಗಳಲ್ಲಿ) ಸೇರಿಸಲಾದ ಕಲಮುಗಳಡಿಯಲ್ಲಿ ತರುಣ್ ತೇಜಪಾಲ್ ಅವರ ವಿಚಾರಣೆ ನಡೆದಿತ್ತು. ಆರೋಪಿಯು, ಸಂತ್ರಸ್ತೆ ಯುವತಿಯ ಮೇಲೆ ‘ಶಕ್ತಿ, ಅಧಿಕಾರ ಮತ್ತು ವಿಶ್ವಾಸದ ಸ್ಥಾನದಲ್ಲಿದ್ದ’ ಎಂಬ ಕಲಮು ಸಹ ಇವುಗಳಲ್ಲಿ ಸೇರಿದೆ.

ತೆಹೆಲ್ಕಾ ಸಂಪಾದಕರಾಗಿ ತೇಜಪಾಲ್ ಬಿಜೆಪಿ ಟೀಕಾಕಾರನಾಗಿದ್ದರಿಂದ, ಆತನ ಮೇಲೆ ಇದು ಬಿಜೆಪಿಯ ‘ರಾಜಕೀಯ ಸೇಡಿನ ಪ್ರಕರಣ ಎಂಬ ವಾದದಿಂದಲೋ ಅಥವಾ ಅತ್ಯಾಚಾರ ಪ್ರಕರಣಗಳಲ್ಲಿ (ಯಾರು ಆರೋಪಿ ಎಂಬುದರ ಮೇಲೆ ಭಿನ್ನ ಪ್ರತಿಕ್ರಿಯೆ ತೋರುವ) ಬಿಜೆಪಿಯ ಗೋಸುಂಬೆತನದಿಂದಲೋ, ಇಲ್ಲಿ ನಾವು ದಾರಿ ತಪ್ಪಬಾರದು.

ಸಂತ್ರಸ್ತೆಯ ಹೋರಾಟ

ಸಂತ್ರಸ್ತೆ ಯುವತಿಯು ರಾಜಕೀಯ ಉದ್ದೇಶಗಳನ್ನು ಹೊಂದಿದವರ ಕೈಗೊಂಬೆಯಲ್ಲ. ಇಷ್ಟು ವರ್ಷಗಳು ಆ ಯುವತಿಯು ಅತ್ಯಂತ ಕಠಿಣ ಹೋರಾಟವನ್ನು ಮಾಡಿದ್ದಾಳೆ.

ಇದನ್ನು ಮುಚ್ಚಿಡಲು ಎಷ್ಟೇ ಪ್ರಯತ್ನಪಟ್ಟರೂ, ತೀರ್ಪಿನ 527 ಪುಟಗಳಲ್ಲಿ ಉದ್ದಕ್ಕೂ ಅವಳ ಧ್ವನಿಯನ್ನು ನಾವು ಕೇಳುತ್ತೇವೆ –  ಪ್ರಾಮಾಣಿಕತೆ ಮತ್ತು ಧೈರ್ಯದಿಂದ ಮಾತಾಡುವ ಧ್ವನಿ; ತಂದೆಯ ಸ್ಥಾನದಲ್ಲಿ ನೋಡುತ್ತಿದ್ದ ತನ್ನ ಆತ್ಮೀಯ ಗೆಳತಿಯ ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವಳ, ಆಂತರಿಕ ತುಮುಲದಲ್ಲಿ ಒಡೆದವಳ ಧ್ವನಿ ಅದು;  ಅನೇಕ ಸಂಬಂಧಗಳು ನಾಜೂಕಿನ ಸ್ಥಿತಿಯಲ್ಲಿರುವುದರಿಂದ, ವಿಷಾದ, ಕೋಪವಿದ್ದರೂ ಸಹಜವಾಗಿ ವರ್ತಿಸುತ್ತಾ ಕೆಲಸದ ಸ್ಥಳದಲ್ಲಿ ತನ್ನ ಕರ್ತವ್ಯ ನಿರ್ವಹಿಸುವವಳ ಧ್ವನಿ ಅದು.  ಆರೋಪಿ ಪುರುಷ ಮೇಲಧಿಕಾರಿ ಅಷ್ಟೇ ಅಲ್ಲದೆ, ಅಧಿಕಾರದಲ್ಲಿರುವ ಮಹಿಳೆಯರು ಸಹ ಈ ರೀತಿಯ ಲೈಂಗಿಕ ದೌರ್ಜನ್ಯಗಳನ್ನು ಸಾಮಾನ್ಯವೆಂದು ಪರಿಗಣಿಸುವ, ಕೆಲಸದ ಸ್ಥಳಗಳಲ್ಲಿ ಮಹಿಳೆಯನ್ನು ಲೈಂಗಿಕಗೊಳಿಸಿರುವ ಭಯಾನಕ ಸ್ವರೂಪವನ್ನು ಅಪ್ರಜ್ಞಾಪೂರ್ವಕವಾಗಿ ಬಹಿರಂಗಗೊಳಿಸುತ್ತದೆ ಅವಳ ಧ್ವನಿ.

“ಒಬ್ಬ ಲೈಂಗಿಕ ದೌರ್ಜನ್ಯದ ಸಂತ್ರಸ್ತೆ ತೋರಿಸಬಹುದಾದ ಯಾವುದೇ ರೀತಿಯ ಸಾಮಾನ್ಯ ನಡವಳಿಕೆಯನ್ನು ಈಕೆ ತೋರಿಸುತ್ತಿಲ್ಲ”. ಎಂದು ಹೇಳುವ ಮೂಲಕ  ತೀರ್ಪು, ಆರೋಪಿಯನ್ನು ಬಲಿಪಶು ಎನ್ನುವಂತೆ ಮತ್ತು ದೌರ್ಜನ್ಯಕ್ಕೆ ಒಳಗಾದ ಯುವತಿಯನ್ನೇ ಆರೋಪಿಯನ್ನಾಗಿ ಪರಿವರ್ತಿಸುತ್ತವೆ.

ಇದು 1979ರ ಪ್ರಕರಣವೊಂದನ್ನು ನೆನಪಿಸುತ್ತದೆ. ಅತ್ಯಾಚಾರದ ಸಂತ್ರಸ್ತೆ ತನ್ನ ದೇಹದ ಮೇಲೆ ಆದ ಗಾಯದ ಗುರುತುಗಳ ಮೂಲಕ, ತನ್ನ ಮೇಲೆ ನಡೆದದ್ದು ಲೈಂಗಿಕ ದೌರ್ಜನ್ಯ, ಅದು ಅವಳ ಸಮ್ಮತಿಯಿಂದ ನಡೆದಿದ್ದಲ್ಲ ಎಂದು ಸಾಬೀತುಪಡಿಸಬೇಕಾಗಿತ್ತು.  2021ರ ತೀರ್ಪಿನಲ್ಲಿಯೂ ಇದೇ ರೀತಿಯಾಗಿದೆ.  ಅತ್ಯಾಚಾರದ ಸಂತ್ರಸ್ತೆಯ ನಡುವಳಿಕೆಯ ಕುರಿತು ನ್ಯಾಯಾಲಯಗಳಿಗೆ ಇರುವ ಪೂರ್ವಭಾವಿ ಕಲ್ಪನೆಗಳಿಗೆ ಇವಳ ವರ್ತನೆ ಹೊಂದಿಕೊಳ್ಳದ ಕಾರಣ, ದೌರ್ಜನ್ಯಕ್ಕೆ ಒಳಗಾದ ಯುವತಿಯನ್ನೇ ಸುಳ್ಳುಗಾರಳೆಂದು ಪರಿಗಣಿಸಲಾಯಿತು. ನಾಲ್ಕು ದಶಕಗಳಿಂದ ನಡೆದ ಮಹಿಳೆಯರ ಹೋರಾಟಗಳು – ಕಾನೂನಿನಲ್ಲಿ, ಇಂತಹ ಪ್ರಕರಣಗಳನ್ನು ನಿರ್ವಹಿಸುವಲ್ಲಿ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರನ್ನು ನೋಡುವ ವಿಧಾನಗಳಲ್ಲಿ – ತಂದ ಬದಲಾವಣೆಗಳು ಯಾವುವೂ ಈ ತೀರ್ಪಿಗೆ ಪ್ರಸ್ತುತವೆನಿಸಲಿಲ್ಲ ಎಂದು ಕಾಣುತ್ತದೆ.

ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಹೇಳಿಕೆಗೆ ಕಾನೂನು “ವಿಶ್ವಾಸಾರ್ಹ ಮತ್ತು ನಿಷ್ಕಪಟ” ಎಂದು ಗೌರವ ನೀಡುತ್ತದೆ.  ಆದರೆ ಈಗಿನ ತೀರ್ಪು ಇದಕ್ಕೆ ಹೊಸ ಮತ್ತು ಅಪಾಯಕಾರಿ ವ್ಯಾಖ್ಯಾನವನ್ನು ನೀಡಿದೆ. “ಯಾರ ಸಾಕ್ಷಿ ಇಲ್ಲಿ ನಿಷ್ಕಪಟ?”  ಎಂಬ ಪ್ರಶ್ನೆಯನ್ನು ಕೇಳುತ್ತದೆ.  ಆ ನಂತರ ಈ ತೀರ್ಪು, ಸಂತ್ರಸ್ತೆಯ ಹೇಳಿಕೆ  ‘ನಿಷ್ಕಪಟವಲ್ಲ’ ಎಂದು ಸಾಬೀತು ಪಡಿಸಲು ಆರೋಪಿ ಪರ ವಕೀಲರು ಮಂಡಿಸಿದ ಪ್ರತಿಯೊಂದು ಅತ್ಯಂತ ಆಕ್ಷೇಪಾರ್ಹ ಆರೋಪಗಳನ್ನು ಒಪ್ಪಿಕೊಳ್ಳುತ್ತದೆ.

ಗೌಪ್ಯತೆ ಕಾನೂನುಗಳ ಉಲ್ಲಂಘನೆ

ಸಂತ್ರಸ್ತೆಯ ಸಂಪೂರ್ಣ ವೈಯಕ್ತಿಕ ವಿವರಗಳು, ಅವಳ ವಾಟ್ಸಪ್ ಸಂದೇಶಗಳು, ವೈಯಕ್ತಿಕ ಇಮೈಲ್ ಗಳು, ಅವಳ ಮತ್ತು ಅವಳ ಕುಟುಂಬದವರ ಹೆಸರುಗಳು, ಛಾಯಾಚಿತ್ರಗಳು ಮತ್ತು  ವೈಯಕ್ತಿಕ, ಸಾಮಾಜಿಕ ಸಂಬಂಧಗಳನ್ನು  – ಲೈಂಗಿಕ ದೌರ್ಜನ ಆರೋಪಕ್ಕೆ ಯಾವುದೇ ಸಂಬಂಧ ಇಲ್ಲದಿದ್ದರೂ ಈ ತೀರ್ಪಿನಲ್ಲಿ ಉಲ್ಲೇಖಿಸಿ, ಹಲವು ಕಾನೂನುಗಳ ಉಲ್ಲಂಘನೆ ಮಾಡಿ, ಅವಳ ಖಾಸಗಿತನ ಮತ್ತು ಗೌಪ್ಯತೆಯ ಹಕ್ಕಿನ ಮೇಲೆ ಭೀಕರ ಆಕ್ರಮಣವನ್ನು ಮಾಡಲಾಗಿದೆ. ಇದಕ್ಕೆ ತದ್ವಿರುದ್ಧವಾಗಿ ನ್ಯಾಯಾಲಯವು ಆರೋಪಿಗೆ ಸಂಪೂರ್ಣ ರಕ್ಷಣೆಯನ್ನು ಕೊಡುತ್ತದೆ. ಆರೋಪಿಯ ಹಿಂದಿನ ಹಲವು ದುರ್ವರ್ತನೆಗಳನ್ನು ಪರಿಗಣಿಸುವುದಿಲ್ಲ.  ಆರೋಪಿಯು ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ಮಾನಸಿಕವಾಗಿ  ಹಿಂಸೆ ನೀಡಿ ಕಳುಹಿಸಿದ  (ಆರೋಪಿ ಸಂತ್ರಸ್ತೆಗೆ ನೀಡಿದ ದೈಹಿಕ ಕಿರುಕುಳದ ಕುರುಹು ತೋರುವ) ‘ಬೆರಳತುದಿ’ಯ ಕುರಿತ ವಾಟ್ಸಾಪ್ ಸಂದೇಶಗಳನ್ನು ಸಹ ಪಕ್ಕಕ್ಕೆ ತಳ್ಳುತ್ತದೆ ಮತ್ತು ಅವುಗಳನ್ನು ನಿರ್ಲಕ್ಷಿಸಲಾಗುತ್ತದೆ.

ಮತ್ತೊಂದೆಡೆ ಅವಳು ತನ್ನ ಬದುಕು ಮತ್ತು ವೈಯಕ್ತಿಕ ಸ್ನೇಹದ ಬಗ್ಗೆ ಎಳೆಎಳೆಯಾಗಿ ಹೇಳಬೇಕಾಗುತ್ತದೆ. ಇಂತಹದನ್ನು  ತೀರ್ಪಿನಲ್ಲಿ ದಾಖಲಿಸಲಾಗುತ್ತದೆ. ಈ ಕುರಿತ ಕ್ರೂರ ಮತ್ತು ಅನಾಗರಿಕ ಪಾಟೀಸವಾಲನ್ನು ಎದುರಿಸಬೇಕಾಗುತ್ತದೆ.  ಭಾರತದ ಪುರಾವೆಗಳ ಕಾಯ್ದೆಯ ಸೆಕ್ಷನ್ 53ಎ ಅಡಿಯಲ್ಲಿ, ಸಂತ್ರಸ್ತೆಯ ಹಿಂದಿನ ಲೈಂಗಿಕ ಇತಿಹಾಸದ ಕುರಿತು ಪ್ರಸ್ತಾಪ ಮಾಡಬಾರದು ಎಂಬ ಪ್ರೋಸೆಕ್ಯೂಷನ್ ಆಕ್ಷೇಪಣೆಯನ್ನು ಎತ್ತಿ ಹಿಡಿದರೂ, ತೀರ್ಪಿನಲ್ಲಿ “ತೋರಿಸಿರುವ ಸಂದೇಶಗಳು ಸಂತ್ರಸ್ತೆಯ ಅನೈತಿಕ ಗುಣ ಅಥವಾ ಒಪ್ಪಿಗೆಯನ್ನು ಸಾಬೀತುಪಡಿಸುವ ಉದ್ದೇಶದಿಂದಲ್ಲ, ಆದರೆ ಆಕೆ ಹಲವು ಸಂಗತಿಗಳನ್ನು ಮುಚ್ಚಿಟ್ಟಳು ಎಂಬುದನ್ನು ಸಾಬೀತುಪಡಿಸಲು ಮಾತ್ರ” ಎಂದು ಅದನ್ನು ಸಮರ್ಥಿಸಿಕೊಳ್ಳುತ್ತದೆ. ಇದು ಸಂತ್ರಸ್ತೆಯ ಚಾರಿತ್ರ್ಯ ವಧೆಗೆ  ಹಂತಕನ ಚೂರಿಗೆ ಕೊಡುವ  ಮುಕ್ತ ಪರವಾನಿಗೆಯಲ್ಲದೆ  ಮತ್ತೇನು ಅಲ್ಲ.

ಆರೋಪಿಯ ವಿರುದ್ಧ ಗಟ್ಟಿಯಾಗಿ ಎಲ್ಲವನ್ನೂ ಹೇಳುವ ಸಾಕ್ಷ್ಯವೆಂದರೆ  ಆತನ ಸ್ವಂತ “ವೈಯಕ್ತಿಕ ಕ್ಷಮೆಯಾಚನೆ”. ಆರೋಪಿಯ ಪರವಾಗಿ ಸಂತ್ರೆಸ್ತೆಯ ಜೊತೆ ಮಾತುಕತೆ ನಡೆಸಿದ ಹಿರಿಯ ಮಹಿಳಾ ಅಧಿಕಾರಿ ಪ್ರಸ್ತುತಪಡಿಸಿದ “ಅಧಿಕೃತ ಕ್ಷಮೆ ಯಾಚನೆ”ಯ ಈ ಕರಡು ಮತ್ತು ಆಕೆಯ ಜೊತೆಗಿನ ಸಂಭಾಷಣೆಗಳ ದಾಖಲೆಗಳು,  ದೂರುದಾರ ಸಂತ್ರಸ್ತೆಗೆ  ಯಾವುದೇ ಅನ್ಯ ದುರುದ್ದೇಶವಿರಲಿಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ.  ತೀರ್ಪಿನಲ್ಲಿ ುಲ್ಲೇಖಿಸಿರುವಂತೆ, ಆರೋಪಿ ಕ್ಷಮೆ ಯಾಚನೆಯಲ್ಲಿ ಹೇಳಿರುವ  “ಹೌದು, ನಾನು ನಿನ್ನ ಮೇಲಧಿಕಾರಿ’ ಎಂದು ಹೇಳಿದ್ದಕ್ಕೆ  ‘ಆದ್ದರಿಂದ ಎಲ್ಲವೂ ಇನ್ನೂ ಸುಲಭವಾಗುತ್ತದೆ’ ಎಂದು ಉತ್ತರಿಸಿದ್ದೆ’, ‘ನನ್ನದೇ ಮಗಳ ಆತ್ಮೀಯ ಗೆಳತಿಯೊಂದಿಗೆ ರಹಸ್ಯ ಸಂಬಂಧ’,  “ಈ ವರ್ತನೆಯ ಕುರಿತು ಅವಳಿಗೆ ಸಹಮತವಿಲ್ಲ ಎಂದು ನನಗೆ ಗೊತ್ತಿರಲಿಲ್ಲ”. – ಎನ್ನುವ ಮಾತುಗಳು,  ‘ಆ ಸಂದರ್ಭದಲ್ಲಿ ಅವಳು ಎಷ್ಟೇ  ವಿರೋಧಿಸಿದ್ದರು  ಅವನು  ತನ್ನ ದುರ್ವರ್ತನೆಯನ್ನು ಮುಂದುವರೆಸಿದ್ದ’ ಎಂಬ ಸಂತ್ರಸ್ತೆಯ ಆರೋಪಕ್ಕೆ ಸರಿಹೊಂದುವಂತೆ ಇದ್ದವು.

ಆರೋಪಿಯ ಬಗೆಗಿನ ಸಹಾನುಭೂತಿ

ಈ ತೀರ್ಪಿನಲ್ಲಿ ಒಂದು ಅಸಾಧಾರಣ, ಅಭೂತಪೂರ್ವ ವ್ಯಾಖ್ಯಾನದೊಂದಿಗೆ, ಆರೋಪಿಯ  ಕ್ಷಮೆ ಯಾಚನೆಯಲ್ಲಿ ನೀಡಿದ ಹೇಳಿಕೆಗಳು “ಸ್ವಯಂಪ್ರೇರಣೆಯಿಂದ ಕಳುಹಿಸಲಾಗಿಲ್ಲ ಆದರೆ ಕೇಸನ್ನು ಬೇಗನೇ ಮುಗಿಸಲು ಸಂತ್ರಸ್ತೆಯ ಒತ್ತಡ ಮತ್ತು ಬೆದರಿಕೆಗೆ ಮಣಿದು ಮತ್ತು ಮನವೊಲಿಕೆಗೆ ಮರುಳಾಗಿ ಈ ಕ್ಷಮೆಯಾಚನೆ ಕಳುಹಿಸಲಾಗಿದೆ” ಎಂದು ಹೇಳಿದೆ. ಆ ಮೂಲಕ, ಅತ್ಯಾಚಾರವೆಸಗಿದ ಮೇಲಧಿಕಾರಿಯಾದ ಆರೋಪಿಯನ್ನು, ಸಂತ್ರಸ್ತೆಯ “ಕೈಚಳಕ ಮತ್ತು ಹಂಚಿಕೆ”ಯ ಸ್ವಭಾವದ ಸಂತ್ರಸ್ತನಾಗಿ ಬದಲಾಯಿಸಲಾಗಿದೆ. ಹಾಗಾಗಿ, ಆತನ ಕ್ಷಮೆ ಯಾಚನೆಯ ಹೇಳಿಕೆಯು “ಸ್ವಯಂಸ್ಫೂರ್ತವಲ್ಲ ಮತ್ತು ಆತನ ಆಶಯಗಳಿಗೆ ವಿರುದ್ಧವಾದ್ದು” ಎಂಧಿದೆ. ಆರೋಪಿಯ ಬಗ್ಗೆ ಸಹಾನುಭೂತಿಯ ಮಾತುಗಳು ತೀರ್ಪಿನ ಉದ್ದಕ್ಕೂ ಪ್ಯಾರಾ ಪ್ಯಾರಾದಲ್ಲೂ ಕಾಣಸಿಗುತ್ತವೆ. ಕೆಲವು ಉದಾಹರಣೆಗಳು – ಸಂತ್ರಸ್ತೆ “ಮಾಡಿದ ಆರೋಪದಿಂದ ಆರೋಪಿ ಪೂರ್ಣವಾಗಿ ಘಾಸಿಗೊಂಡಿದ್ದ”, “ಇದು ಕೇವಲ ಕುಡಿದ ಅಮಲಿನಲ್ಲಿ ನಡೆದದ್ದು”, ಸಂತ್ರಸ್ತೆ ಹೇಳುತ್ತಿರುವುದು “ಸತತವಾಗಿ ಸರಣಿ ಸುಳ್ಳುಗಳು”, “ಅವಳು ಸತ್ಯವನ್ನು ತಿರುಚುತ್ತಿದ್ದಾಳೆ”.

ಆರೋಪಿ ಮತ್ತು ಸಂತ್ರಸ್ತೆಯ ನಡುವೆ ತೀರ್ಪಿನ ತಾರತಮ್ಯ ಅಷ್ಟಕ್ಕೆ ನಿಲ್ಲುವುದಿಲ್ಲ. ಘಟನೆಯ ಕೆಲವೇ ಗಂಟೆಗಳಲ್ಲಿ ಸಂತ್ರಸ್ತೆ ತನ್ನೊಂದಿಗೆ ನಡೆದ ದಾರುಣ ಅನುಭವವನ್ನು ತನ್ನ ಗೆಳೆಯರೊಂದಿಗೆ ಹಂಚಿಕೊಂಡಿದ್ದಾಳೆ.  ಅವರೆಲ್ಲರ ಹೇಳಿಕೆಗಳು ಅವಳು ಆಮೇಲೆ ಈ ಕಥೆಯನ್ನು ಕಟ್ಟಿದ್ದಲ್ಲ ಇದು ನಿಜವಾಗಿ ನಡೆದದ್ದು  ಎಂದು ಸಾಬೀತುಪಡಿಸುತ್ತವೆ. ಆದರೆ ಇವೆಲ್ಲವೂ ಅವಳ ಸ್ನೇಹಿತರು ಹೇಳಿದ್ದು, ಆದ್ದರಿಂದ ಇವನ್ನು ಪರಿಗಣಿಸಲು ಆಗುವುದಿಲ್ಲ ಎಂದು ಹೇಳಿ ಈ ತೀರ್ಪು ಆ ಹೇಳಿಕೆಗಳನ್ನು  ತಳ್ಳಿ ಹಾಕುತ್ತದೆ.. ಆದರೆ ಅದೇ ವೇಳೆ, ಆರೋಪಿಯ ಸಹೋದರಿ ಮತ್ತು ಅವನ ನಿಕಟ ಸಹೋದ್ಯೋಗಿಯ ಹೇಳಿಕೆಯನ್ನು ನಿಜವೆಂದು ಒಪ್ಪಿಕೊಳ್ಳಲಾಗುತ್ತದೆ.

ಅತ್ಯಾಚಾರಕ್ಕೊಳಗಾದವರು ಅನೇಕ ಸಾಮಾಜಿಕ ಕಾರ್ಯಕರ್ತರನ್ನು ಹಾಗೂ ವಕೀಲರನ್ನು ತಮ್ಮ ಸಹಾಯಕ್ಕಾಗಿ ಸಂಪರ್ಕಿಸುವುದು ಸಹಜ. ಇದನ್ನು ಈ ತೀರ್ಪಿನಲ್ಲಿ ಅಪರಾಧ ಎನ್ನುವಂತೆ ನೋಡಲಾಗಿದೆ. ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಅವರನ್ನು “ಮೋಸದಿಂದ ತಿದ್ದುವ” ಹಾಗೂ “ಘಟನೆಗಳನ್ನು ಸೇರಿಸುವ” ಸಲಹಾಗಾರರಾಗಿ ಅನುಮಾನದಿಂದ ನೋಡಲಾಗಿದೆ.

ಈ ಪ್ರಕರಣದಲ್ಲಿ ನ್ಯಾಯಾಧೀಶರು  ಮಹಿಳೆ ಆಗಿದ್ದು, ಈ ತೀರ್ಪಿನ ದೃಷ್ಟಿಕೋಣ, ಲಿಂಗದ ಮೇಲೆ ಆಧಾರಿತವಲ್ಲ. ಬದಲಿಗೆ ಸಾಮಾಜಿಕ ವಾಸ್ತವತೆಯ ಬಗ್ಗೆ ಇರುವ ದೃಷ್ಟಿಕೋನವನ್ನು ನಿರ್ಧರಿಸುವ ಸಿದ್ಧಾಂತದ ಮೇಲೆ ಆಧಾರಿತವಾಗಿದೆ ಎಂದು ಸ್ಪಷ್ಟವಾಗುತ್ತದೆ. ಮೇಲಧಿಕಾರಿಯಾಗಿದ್ದ ತಂದೆಯ ವಯಸ್ಸಿನ ಅತ್ಯಾಚಾರದ ಆರೋಪಿಗೆ ಅನುಕೂಲವಾಗುವಂತೆ, ಅತ್ಯಾಚಾರದ ಸಂತ್ರಸ್ತೆಯನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ದೂಷಿಸಿದ್ದಕ್ಕೆ ಮತ್ತು ಅವಮಾನ ಮಾಡಿದ್ದಕ್ಕೆ ಈ ತೀರ್ಪು ಇತಿಹಾಸದಲ್ಲಿ  ತನ್ನ ಸ್ಥಾನವನ್ನು ಪಡೆದುಕೊಳ್ಳುತ್ತದೆ.  ಈ ತೀರ್ಪನ್ನು ಎಷ್ಟು ಬೇಗ ರದ್ದು  ಮಾಡಲು ಸಾಧ್ಯವೋ ಅಷ್ಟು ಒಳ್ಳೆಯದು.. ಈ ಮುಂದಿನ ಅತ್ಯಾಚಾರ ಪ್ರಕರಣಗಳಿಗೆ ಇದು ಒಂದು ಪೂರ್ವ-ದೃಷ್ಟಾಂತವಾದರೆ, ಕೆಲಸ ಸ್ಥಳದಲ್ಲಿ ನಡೆಯುವ ಲೈಂಗಿಕ ದುರ್ಬಳಕೆ ಮತ್ತು ಹಿಂಸಾಚಾರದ ಬಗ್ಗೆ ಮಾತನಾಡಲು ಮುಂದೆ  ಬರುವ ಧೈರ್ಯವನ್ನು ಯಾವ ಮಹಿಳೆಯೂ ಮಾಡಲಿಕ್ಕಿಲ್ಲ.  ಸಮಾಜಕ್ಕೆ ಇದೊಂದು ದೊಡ್ಡ ದುರಂತವಾಗುತ್ತದೆ.

Leave a Reply

Your email address will not be published. Required fields are marked *